ನ್ಯೂಕ್ಲಿಯೊಟೈಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ನ್ಯೂಕ್ಲಿಯೊಟೈಡ್‌ನಲ್ಲಿ ಐದು ಕಾರ್ಬನ್ ಸಕ್ಕರೆ ಡಿಆಕ್ಸಿರೈಬೋಸ್, ಒಂದು ಸಾರಜನಕ ಬೇಸ್ ಅಡೆನಿನ್ ಮತ್ತು ಒಂದು ಫಾಸ್ಪೇಟ್‌ ಗುಂಪು ಇವೆ. ಡಿಆಕ್ಸಿರೈಬೋಸ್ ಮತ್ತು ಅಡೆನಿನ್ ಸೇರಿ ಡಿಆಕ್ಸಿಅಡೆನೊಸಿನ್‌ (ಡಿಆಕ್ಸಿರೈಬೋಸ್‌ ನ್ಯೂಕ್ಲಿಯೊಸೈಡ್) ಎಂದು ಕರೆಯಲಾದ ನ್ಯೂಕ್ಲಿಯೊಸೈಡ್ ಆಗುತ್ತದೆ. ಇದಕ್ಕೆ ಒಂದು ಫಾಸ್ಪೇಟ್‌ ಗುಂಪು ಸೇರಿಸಿದರೆ ಡಿಆಕ್ಸಿರೈಬೊ-ನ್ಯೂಕ್ಲಿಯೊಟೈಡ್ ಆಗುತ್ತದೆ (ಡಿಎನ್ಎ ಭಾಗವಾಗದ ನ್ಯೂಕ್ಲಿಯೊಟೈಡ್) ಮತ್ತು ಇದನ್ನು ಡಿಆಕ್ಸಿಅಡೆನೊಸಿನ್ ಮೋನೊಫಾಸ್ಪೇಟ್ ಎಂದು ಕರೆಯಲಾಗುತ್ತದೆ.


ನ್ಯೂಕ್ಲಿಯೊಟೈಡ್‌ಗಳು[ಟಿಪ್ಪಣಿ ೧] ಮಾನೊಮರ್‌ಗಳಾಗುವ[ಟಿಪ್ಪಣಿ ೨] ಅಥವಾ ಡಿಎನ್ಎ (ಡಿಆಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ) ಮತ್ತು ಆರ್‌ಎನ್ಎ (ರೈಬೊನ್ಯೂಕ್ಲಿಯಿಕ್ ಆಮ್ಲ)ಗಳಂತಹ ನ್ಯೂಕ್ಲಿಯಿಕ್ ಆಮ್ಲಗಳ ಉಪಘಟಕಗಳು. ನ್ಯೂಕ್ಲಿಯಿಕ್ ಆಮ್ಲದ ಕಟ್ಟದ ಇಟ್ಟಿಗೆಗಳಾದ ನ್ಯೂಕ್ಲಿಯೊಟೈಡ್ ಸಾರಜನಕ ಪ್ರತ್ಯಾಮ್ಲ, ಐದು ಕಾರ್ಬನ್ ಸಕ್ಕರೆ (ರೈಬೊಸ್ ಅಥವಾ ಡಿಆಕ್ಸಿರೈಬೊಸ್) ಮತ್ತು ಕನಿಷ್ಠ ಒಂದು ಫಾಸ್ಪೇಟ್‌ ಗುಂಪನ್ನು ಹೊಂದಿದೆ. ಹೀಗಾಗಿ, ನ್ಯೂಕ್ಲಿಯೊಸೈಡ್ ಮತ್ತು ಫಾಸ್ಪೇಟ್‌ ಗುಂಪು ಸೇರಿದರೆ ನ್ಯೂಕ್ಲಿಯೊಟೈಡ್ ಆಗುತ್ತದೆ.
ನ್ಯೂಕ್ಲಿಯೊಟೈಡ್‌ಗಳು ಜೀವಕೋಶದೊಳಗೆ ನ್ಯೂಕ್ಲಿಯೊಸೈಡ್‌ ಟ್ರೈಫಾಸ್ಪೇಟ್‌ (ಎಟಿಪಿ, ಜಿಟಿಪಿ, ಸಿಟಿಪಿ ಮತ್ತು ಯುಟಿಪಿ) ರೂಪದಲ್ಲಿ ಶಕ್ತಿಯ ಪೊಟ್ಟಣಗಳ ಸಾಗಾಣಿಕೆಯ ಕೆಲಸವನ್ನು ಸಹ ಮಾಡುತ್ತವೆ ಮತ್ತು ಈ ಮೂಲಕ ಚಯಾಪಚಯದಲ್ಲಿ (ಮೆಟಬಾಲಿಸಂ) ಪ್ರಮುಖ ಪಾತ್ರವಹಿಸುತ್ತವೆ.[೧] ಇದರ ಜೊತೆಗೆ ನ್ಯೂಕ್ಲಿಯೊಟೈಡ್‌ಗಳು ಜೀವಕೋಶದ ಸಂಕೇತಿಸುವಿಕೆಯಲ್ಲಿ (ಸಿಜಿಎಂಪಿ ಅಥವಾ ಸೈಕ್ಲಿಕ್ ಗ್ವಾನೊಸಿನ್‌ ಮೋನೊಫಾಸ್ಫೇಟ್, ಸಿಎಎಂಪಿ ಅಥವಾ ಸೈಕ್ಲಿಕ್ ಅಡೆನೊಸಿನ್ ಮೋನೊಫಾಸ್ಪೇಟ್) ಭಾಗವಹಿಸುತ್ತವೆ ಮತ್ತು ಪ್ರಮುಖ ಕಿಣ್ವಗಳ ಕ್ರಿಯೆಯಲ್ಲಿ ಸಹಏಜೆಂಟುಗಳಾಗಿ (ಸಹಕಿಣ್ವ ಎ, ಎಫ್‌ಎಡಿ, ಎಫ್‌ಎಮ್ಎನ್, ಎನ್ಎಡಿ ಮತ್ತು ಎನ್ಎಡಿಪಿ+) ಸೇರಿವೆ.
ಪ್ರಾಯೋಗಿಕ ಜೈವರಸಾಯನ ಶಾಸ್ತ್ರದಲ್ಲಿ ನ್ಯೂಕ್ಲಿಯೊಟೈಡ್‌ಗಳನ್ನು ವಿಕಿರಣಪಟ್ಟಿಯ[ಟಿಪ್ಪಣಿ ೩] ವಿಕಿರಣ ನ್ಯೂಕ್ಲಿಯೊಸೈಡ್‌ಗಳು ಇರುವ ವಿಕಿರಣ ನ್ಯೂಕ್ಲಿಯೊಟೈಡ್‌ಗಳನ್ನು ಪಡೆಯಬಹುದು.

ರಚನೆ[ಬದಲಾಯಿಸಿ]

ನ್ಯೂಕ್ಲಿಯೊಟೈಡ್ ಮಾನೊಮರ್‌ಗಳ ರಚನೆ


ನ್ಯೂಕ್ಲಿಯೊಟೈಡ್ ಒಂದು ನ್ಯೂಕ್ಲಿಯೊಪ್ರತ್ಯಾಮ್ಲ (ನ್ಯೂಕ್ಲಿಯೊಪ್ರತ್ಯಾಮ್ಲ. ಇದನ್ನ ಸಾರಜನಕ ಪ್ರತ್ಯಾಮ್ಲ ಎಂದು ಸಹ ಕರೆಯಲಾಗುತ್ತದೆ), ಒಂದು ಐದು-ಇಂಗಾಲ ಸಕ್ಕರೆ (ಡಿಎನ್ಎನಲ್ಲಾದರೆ ಡಿಆಕ್ಸಿರೈಬೋಸ್, ಆರ್‌ಎನ್ಎನಲ್ಲಾದರೆ ರೈಬೋಸ್) ಮತ್ತು ವ್ಯಾಖ್ಯಾನದ ಮೇಲೆ ಅವಲಂಬಿತವಾಗಿ ಒಂದು ಅಥವಾ ಹೆಚ್ಚು ಫಾಸ್ಪೇಟ್‌ ಗುಂಪುಗಳನ್ನು ಹೊಂದಿದೆ. ಸೈಲ್‌ಗೈಡ್[೨] ಮತ್ತು ಐಯುಪಿಎಸಿ ಗೋಲ್ಡ್ ಬುಕ್‌ಗಳಂತಹ[೩] ಅಧಿಕಾರಯುತ ರಸಾಯನಿಕ ಆಕರಗಳು ನ್ಯೂಕ್ಲಿಯೊಟೈಡ್ ಪದ ಒಂದು ಫಾಸ್ಪೇಟ್‌ ಇರುವ ಅಣುವಿಗೆ ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ಹೇಳಿವೆ. ಆದಾಗ್ಯೂ ಅಣ್ವಿಕ ಜೀವಶಾಸ್ತ್ರದ ಪಠ್ಯಪುಸ್ತಕಗಳಲ್ಲಿ ಸಾಮಾನ್ಯವಾಗಿ ಈ ವ್ಯಾಖ್ಯಾನವನ್ನು ಎರಡು ಅಥವಾ ಮೂರು ಫಾಸ್ಪೇಟ್‌ ಗುಂಪುಗಳನ್ನು ಹೊಂದಿರುವ ಅಣುಗಳಿಗೂ ಹಿಗ್ಗಿಸಿವೆ.[೧][೪][೫][೬] ಹೀಗಾಗಿ “ನ್ಯೂಕ್ಲಿಯೊಟೈಡ್” ಪದದಲ್ಲಿ ಸಾಮಾನ್ಯವಾಗಿ ನ್ಯೂಕ್ಲಿಯೊಸೈಡ್ ಮೊನೋಫಾಸ್ಪೇಟ್ ಅಲ್ಲದೆ ನ್ಯೂಕ್ಲಿಯೊಸೈಡ್ ಡೈಫಾಸ್ಪೇಟ್ ಅಥವಾ ನ್ಯೂಕ್ಲಿಯೊಸೈಡ್ ಟ್ರೈಫಾಸ್ಫೇಟುಗಳೂ ಸಹ ಸೇರಿವೆ.
ನ್ಯೂಕ್ಲಿಯೊಪ್ರತ್ಯಾಮ್ಲ ಮತ್ತು ಸಕ್ಕರೆ ಸೇರಿ ಫಾಸ್ಪೇಟ್ ಗುಂಪು ಇಲ್ಲದೆ ನ್ಯೂಕ್ಲಿಯೊಸೈಡ್ ಎಂದು ಕರೆಯಿಸಿಕೊಳ್ಳುತ್ತದೆ. ಫಾಸ್ಪೇಟ್ ಗುಂಪು ಸಕ್ಕರೆಯ ೨, ೩, ೫-ಇಂಗಾಲದೊಂದಿಗೆ ಬಂಧಿತವಾಗುತ್ತದೆ. ಸಾಮಾನ್ಯವಾಗಿ ೫-ಇಂಗಾಲದಿಂದ ಬಂಧಿತವಾಗುತ್ತದೆ. ಚಕ್ರೀಯ ನ್ಯೂಕ್ಲಿಯೊಟೈಡ್‌ಗಳು ಫಾಸ್ಪೇಟ್ ಸಕ್ಕರೆಯ ಎರಡು ಹೈಡ್ರಾಕ್ಸಿಲ್[ಟಿಪ್ಪಣಿ ೪] ಗುಂಪಿನಿಂದ ಬಂಧಿತವಾದಾಗ ಆಗುತ್ತವೆ.[೧] ನ್ಯೂಕ್ಲಿಯೊಟೈಡ್‌ನಲ್ಲಿ ಪುರಿನ್ (ಅಡೆನಿನ್ ಮತ್ತು ಗ್ವಾನಿನ್‌ಗಳು ಪುರಿನ್‌ಗಳು) ಅಥವಾ ಪಿರಿಮಿಡಿನ್ (ಸಿಸ್ಟೋಸಿನ್, ತೈಮಿನ್ ಮತ್ತು ಯುರಾಸಿಲ್‌ಗಳು ಪಿರಿಮಿಡಿನ್‌ಗಳು.) ಪ್ರತ್ಯಾಮ್ಲ ಇರಬಹುದು. ಸಕ್ಕರೆ ರೈಬೋಸ್ ಇದ್ದರೆ ರೈಬೋನ್ಯೂಕ್ಲಿಯೊಟೈಡ್ ಆಗುತ್ತದೆ ಮತ್ತು ಸಕ್ಕರ ಡಿಆಕ್ಸಿರೈಬೋಸ್ ಇದ್ದರೆ ನ್ಯೂಕ್ಲಿಯೊಟೈಡ್ ಡಿಆಕ್ಸಿರೈಬೊನ್ಯೂಕ್ಲಿಯೊಟೈಡ್ ಆಗುತ್ತದೆ.
ನ್ಯೂಕ್ಲಿಯಿಕ್ ಆಮ್ಲಗಳು ನ್ಯೂಕ್ಲಿಯೊಟೈಡ್‌ನಿಂದ ಆದ ದೈತ್ಯಅಣುಗಳು. ಡಿಎನ್‌ಎಯಲ್ಲಿ ಪುರಿನ್‌ ಪ್ರತ್ಯಾಮ್ಲ ಅಡೆನಿನ್ (A) ಮತ್ತು ಗ್ವಾನಿನ್ (G) ಹಾಗೂ ಪಿರಿಮಿಡಿನ್‌ಗಳಾದ ತೈಮಿನ್ (T) ಮತ್ತು ಸಿಸ್ಟೊಸಿನ್‌ಗಳು (C) ಇರುತ್ತವೆ. ಆರ್‌ಎನ್ಎಯಲ್ಲಿ ತೈಮಿನ್ ಬದಲಿಗೆ ಯುರಾಸಿಲ್ (U) ಇರುತ್ತದೆ. ಪ್ರತ್ಯಾಮ್ಲಗಳ ವಿಶಿಷ್ಟ ರಚನೆಗಳ ಕಾರಣಕ್ಕೆ ಅಡೆನಿನ್ ಯಾವಾಗಲೂ ಎರಡು ಜಲಜನಕ ಬಂಧದ ಮೂಲಕ ತೈಮಿನ್‌ಗೆ ಜೋಡಿಯಾಗುತ್ತದೆ ಮತ್ತು ಗ್ವಾನಿನ್ ಮೂರು ಜಲಜನಕ ಬಂಧದ ಮೂಲಕ ಸಿಸ್ಟೊಸಿನ್‌ಗೆ ಜೋಡಿಯಾಗುತ್ತದೆ.

ನ್ಯೂಕ್ಲಿಯಿಕ್ ಆಮ್ಲಕ್ಕೆ ಸಾಮಾನ್ಯವಾದ ಘಟಕಗಳ ರಚನೆಗಳು. ಅವುಗಳಲ್ಲಿ ಕನಿಷ್ಠ ಒಂದು ಫಾಸ್ಪೇಟ್ ಗುಂಪು ಇರುವ ಕಾರಣಕ್ಕೆ ನ್ಯೂಕ್ಲಿಯೊಸೈಡ್ ಮೊನೋಫಾಸ್ಪೇಟ್, ನ್ಯೂಕ್ಲಿಯೊಸೈಡ್ ಡೈಫಾಸ್ಪೇಟ್ ಮತ್ತು ನ್ಯೂಕ್ಲಿಯೊಸೈಡ್ ಟ್ರೈಫಾಸ್ಪೇಟ್ ಈ ಎಲ್ಲಾ ಸಂಯುಕ್ತಗಳೂ ನ್ಯೂಕ್ಲಿಯೊಟೈಡ್‌ಗಳೇ.

ಸಂಯೋಜನೆ[ಬದಲಾಯಿಸಿ]


ನ್ಯೂಕ್ಲಿಯೊಟೈಡ್‌ಗಳು ಜೀವಿಯ ಒಳಗೆ ಮತ್ತು ಹೊರಗೆ ಸಂಯೋಜಿಸಲ್ಪಡ ಬಹುದು.
ಜೀವಿಯ ಒಳಗೆ ನ್ಯೂಕ್ಲಿಯೊಟೈಡ್‌ಗಳು ಹೊಸದಾಗಿ ಸಂಯೋಜಿತಗೊಳ್ಳ ಬಹುದು ಅಥವಾ ಪಾಲಕ ಪ್ರತಿಕ್ರಿಯಾ ಸರಣಿಗಳ[ಟಿಪ್ಪಣಿ ೫] ಮೂಲಕ ಮರುಬಳಕೆಯಾಗ ಬಹುದು.[೭] ಹೊಸತಾಗಿ ನ್ಯೂಕ್ಲಿಯೊಟೈಡ್‌ ಸಂಯೋಜನಯಲ್ಲಿ ಬಳಕೆಯಾಗುವ ಘಟಕಗಳನ್ನು ಕಾರ್ಬೊಹೈಡ್ರೇಟ್ ಮತ್ತು ಅಮಿನೊ ಆಮ್ಲ ಚಯಾಪಚಯದ ಜೈವಸಂಯೋಜಿತ (ಅಥವಾ ಜೀವಿಗಳೊಳಗೆ ಸಂಯೋಜಿತವಾದ) ಪೂರ್ವವರ್ತಿಗಳಿಂದಲೂ (ಪ್ರಿಕರ್ಸರ್) ಮತ್ತು ಅಮೋನಿಯಾ ಮತ್ತು ಇಂಗಾಲ ಡೈಆಕ್ಸ್‌ಡ್‌ಗಳಿಂದಲೂ ಪಡೆಯಲಾಗುತ್ತದೆ. ಎಲ್ಲಾ ನ್ಯೂಕ್ಲಿಯೊಟೈಡ್‌ಗಳು ಹೊಸತಾಗಿ ಸಂಯೋಜಿತವಾಗಲು ಲಿವರ್ ಪ್ರಮುಖ ಅಂಗ. ಪಿರಮಿಡಿನ್‌ಗಳು ಮತ್ತು ಪುರಿನ್‌ಗಳು ಎರಡು ಭಿನ್ನ ಪ್ರತ್ರಿಕ್ರಿಯಾ ಸರಣಿಯಲ್ಲಿ ಸಂಯೋಜನೆಗಳ್ಳುತ್ತವೆ. ಪಿರಿಮಿಡಿನ್‌ಗಳು ತಯಾರಿಕೆಯಲ್ಲಿ ಮೊದಲು ಜೀವರಸದಲ್ಲಿ ಆಸ್ಪರ್ಟೇಟ್ ಮತ್ತು ಕಾರ್ಬಮೊಯಿಲ್-ಫಾಸ್ಪೇಟ್‌ಗಳಿಂದ ಸಾಮಾನ್ಯ ಪೂರ್ವವರ್ತಿಯಾದ ಉಂಗುರ ರಚನೆಯ ಒರೊಟಿಕ್ ಆಮ್ಲ ತಯಾರಾಗುತ್ತದೆ ಮತ್ತು ಇದರ ಮೇಲೆ ಫಾಸ್ಪೊರಿಲೇಟಡ್ ರೈಬೊಸಿಲ್ ಘಟಕವು ಸಹವೇಲಿನ್ಸಿ ಮೂಲಕ ಬಂಧಿತವಾಗುತ್ತದೆ. ಪುರಿನ್‌ಗಳ ತಯಾರಿಕೆಯಲ್ಲಿ ಮೊದಲು ಸಕ್ಕರೆಯ ಪಡಿಯಚ್ಚಿನ ಮೇಲೆ ಉಂಗುರ ಸಂಯೋಜನೆಯಾಗುತ್ತದೆ. ಜೀವಕೋಶದ ಜೀವರಸದಲ್ಲಿನ ಹಲವು ಕಿಣ್ವಗಳು ಪುರಿನ್‌ಗಳು ಮತ್ತು ಪಿರಿಮಿಡಿನ್‌ಗಳ ಸಂಯೋಜಿಯಿಸುತ್ತವೆ. ಇವು ಯಾವುದೇ ನಿರ್ದಿಷ್ಟ ಜೀವಕೋಶದ ಅಂಗಕದಲ್ಲಿ ತಯಾರಾಗುವುದಿಲ್ಲ. ನ್ಯೂಕ್ಲಿಯೊಟೈಡ್‌ಗಳು ಅವುಗಳ ಭಾಗಗಳನ್ನು ಮರುಬಳಸಿ ಸಂಯೋಜನೆ ಕ್ರಿಯೆಯ ಮೂಲಕ ಹೊಸ ನ್ಯೂಕ್ಲಿಯೊಟೈಡ್ ಆಗುವಂತೆ ವಿಘಟಿತಗೊಳ್ಳುತ್ತವೆ.
ಜೀವಿಯ ಹೊರಗಡೆ ಪ್ರಯೋಗಶಾಲೆಯಲ್ಲಿ ನ್ಯೂಕ್ಲಿಯೊಟೈಡ್‌ಗಳನ್ನು ಕಾಪಿಡುವ ಗುಂಪುಗಳನ್ನು[ಟಿಪ್ಪಣಿ ೬] ಬಳಸಿ ತಯಾರಿಸ ಬಹುದು. ಶುದ್ಧೀಕರಿಸಿದ ನ್ಯೂಕ್ಲಿಯೊಸೈಡ್‌ನ್ನು ಕಾಪಾಡಿ ಫಾಸ್ಪೊರಮಿಡೈಟ್[ಟಿಪ್ಪಣಿ ೭] ತಯಾರು ಮಾಡಲಾಗುತ್ತದೆ. ಇದನ್ನು ಬಳಸಿ ನಿಸರ್ಗದಲ್ಲಿದ ಹೋಲಿಕೆಗಳು ತಯಾರಿಸ ಬಹುದು ಮತ್ತು/ಅಥವಾ ಒಂದು ಒಲಿಗೊನ್ಯೂಕ್ಲಿಯೊಟೈಡ್ (ಸಣ್ಣ ಡಿಎನ್ಎ ಅಥವಾ ಆರ್‌ಎನ್ಎ ಅಣುಗಳು) ಸಂಯೋಜಿಸಲು ಬಳಸಬಹುದು.

ಪಿರಿಮಿಡಿನ್ ಮತ್ತು ಪುರಿನ್‌ಗಳ ವಿಘಟನೆ[ಬದಲಾಯಿಸಿ]


ಮಾನವರಲ್ಲಿ ಪಿರಿಮಿಡಿನ್ ಉಂಗುರಗಳು (C. T, U) ಇಂಗಾಲ ಡೈಆಕ್ಸೈಡ್ ಮತ್ತು ಅಮೊನಿಯ (ಯುರಿಯಾ ವಿಸರ್ಜನೆ) ಆಗಿ ಪೂರ್ಣವಾಗಿ ವಿಘಟನೆ ಹೊಂದುತ್ತವೆ. ಪುರಿನ್ (G, A) ಉಂಗುರಗಳಲ್ಲಿ ವಿಘಟನೆಗಳಲ್ಲಿ ಹೀಗಾಗುವುದಿಲ್ಲ. ಅವು ಚಯಾಪಚಯಿಯಾಗಿ ತಟಸ್ಥವಾದ ಯುರಿಕ್ ಆಮ್ಲವಾಗಿ ದೇಹದಿಂದ ವಿಸರ್ಜಿತವಾಗುತ್ತವೆ. ಗ್ವಾನೊಸಿನ್ ಮೊನೊಫಾಸ್ಪೇಟ್ (ಜಿಎಮ್‌ಪಿ) ಗ್ವಾನಿನ್ ಮತ್ತು ರೈಬೋಸ್ ಆಗಿ ಬೇರೆ ಬೇರೆಯಾದಾಗ ಯುರಿಕ್ ಆಮ್ಲ ಉತ್ಪನ್ನವಾಗುತ್ತದೆ. ಗ್ವಾನಿನ್ ಅಮಿನೊ-ನಿವಾರಕ[ಟಿಪ್ಪಣಿ ೮] ಕ್ರಿಯೆಯ ಮೂಲಕ ಕ್ಸಾಂಥಿನ್ ಆಗುತ್ತದೆ ಮತ್ತು ಅದು ಆಕ್ಸಿಡೇಶನ್ (ಆಮ್ಲಜನಕ ಸೇರಿವಿಕೆ) ಮೂಲಕ ಯುರಿಕ್ ಆಮ್ಲವಾಗುತ್ತದೆ. ಹಾಗೆಯೇ ಅಡೆನೊಸಿನ್ ಮೊನೋಫಾಸ್ಪೇಟ್ (ಎಎಮ್‌ಪಿ) ಅಮಿನೊ-ನಿವಾರಕ ಕ್ರಿಯೆಯಿಂದ ಇನೊಸಿನ್ ಮೊನೋಫಾಸ್ಪೇಟ್ (ಐಎಮ್‌ಪಿ) ಆಗುತ್ತದೆ. ಇದರ ರೈಬೋಸ್‌ ಘಟಕ ತೆಗೆಯಲ್ಪಟ್ಟು ಹೈಪೊಕ್ಸಾಂಥಿನ್ ಆಗುತ್ತದೆ ಮತ್ತು ಇದು ಆಕ್ಸಿಡೇಶನ್ ಮೂಲಕ ಕ್ಸಾಂಥಿನ್ ಮತ್ತು ಕೊನೆಯಲ್ಲಿ ಯುರಿಕ್‌ ಆಮ್ಲವಾಗುತ್ತದೆ. ಗ್ವಾನಿನ್ ಮತ್ತು ಐಎಮ್‌ಪಿಗಳು ಯುರಿಕ್ ಆಮ್ಲ ದ್ರವಿಸುವ ಬದಲು ಪಿಆರ್‌ಪಿಪಿ ಮತ್ತು ಅಸ್ಪರ್ಟೇಟ್ (ಅಮೊನಿಯ ಕೊಡುತ್ತದೆ) ಇರುವಿಕೆಯಲ್ಲಿ ನ್ಯೂಕ್ಲಿಯಿಕ್ ಆಮ್ಲ ಸಂಯೋಜನೆಯಲ್ಲಿ ಮರುಬಳಕೆಯಾಗ ಬಹುದು.

ಅಸಹಜ ಪ್ರತ್ಯಾಮ್ಲ ಜೋಡಿ[ಬದಲಾಯಿಸಿ]


ಅಸಹಜ ಪ್ರತ್ಯಾಮ್ಲ ಜೋಡಿಯು ನಿಸರ್ಗದಲ್ಲಿ ಇರದ ಮತ್ತು ಪ್ರಯೋಗಾಲಯದಲ್ಲಿ ಸೃಷ್ಟಿಸಿದ ಡಿಎನ್ಎ ಉಪಘಟಕ (ನ್ಯೂಕ್ಲಿಯೊಪ್ರತ್ಯಾಮ್ಲ). ೨೦೧೨ರಲ್ಲಿ ಸ್ಕ್ರಿಪ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ (ಕ್ಯಾಲಿಫೋರ್ನಿಯ, ಸ್ಯಾನ್‌ಡಿಯೊಗೋನಲ್ಲಿನ) ರಸಾಯನಿಕ ಜೀವಶಾಸ್ತ್ರಜ್ಞ ಫ್ಲೋಯ್ಡ್ ರೋಮ್ಸ್‌ಬರ್ಗ ನೇತೃತ್ವದ ಯುನೈಟಿಡ್ ಸ್ಟೇಟ್ಸ್ ಆಫ್ ಅಮೆರಿಕದ ವಿಜ್ಞಾನಿಗಳ ಗುಂಪು ತಾವು ಅಸಹಜ ಪ್ರತ್ಯಾಮ್ಲ ಜೋಡಿಯನ್ನು ರೂಪಿಸುದಾಗಿ ಹೇಳಿತು.[೮] ಈ ಎರಡು ಹೊಸ ಕೃತಕ ನ್ಯೂಕ್ಲಿಯೊಟೈಡ್‌ ಅಥವಾ ಅಸಹಜ ಪ್ರತ್ಯಾಮ್ಲ ಜೋಡಿಗಳಿಗೆ d5SICS ಮತ್ತು dNaM ಎಂದು ಹೆಸರಿಸಲಾಯಿತು. ಹೆಚ್ಚು ತಾಂತ್ರಿಕವಾಗಿ ಹೇಳುವುದಾದರೆ ನೀರನ್ನು ವಿಕರ್ಷಿಸುವ ಕೃತಕವಾದ ಈ ನ್ಯೂಕ್ಲಿಯೊಪ್ರತ್ಯಾಮ್ಲಗಳಿಗೆ ಎರಡು ಜೊತೆಗೂಡಿದ ಉಂಗುರಗಳಿರುತ್ತವೆ ಮತ್ತು ಅವು ಡಿಎನ್ಎಯ ಸಂಕೀರ್ಣ ಪ್ರತ್ಯಾಮ್ಲ ಜೋಡಿಯಾಗುತ್ತವೆ (d5SICS- dNaM ಜೋಡಿ)[೯][೧೦]. ಸ್ಕ್ರಿಪ್ಸ್ ಸಂಶೋಧನೆ ಕೇಂದ್ರದ ಇದೇ ತಂಡ ೨೦೧೪ರಲ್ಲಿ ಸಹಜವಾದ T-A ಮತ್ತು C-Gಗಳೊಂದಿಗೆ ರೋಮ್ಸ್‌ಬರ್ಗನ ಪ್ರಯೋಗಾಲಯ ರೂಪಿಸಿದ ಚೆನ್ನಾಗಿ ಕೆಲಸ ಮಾಡುವ ಅಸಹಜ ಪ್ರತ್ಯಾಮ್ಲ ಜೋಡಿಯನ್ನು ಪ್ಲಾಸ್ಮಿಡ್ ಎಂದು ಕರೆಯಲಾದ ಚಕ್ರಾಕಾರದ ಡಿಎನ್ಎ ತುಣಕಿನಲ್ಲಿ ಸೇರಿಸಿ ರಚಿಸಿದಲ್ಲದೆ ಸಾಮಾನ್ಯ ಬ್ಯಾಕ್ಟೀರಿಯ ಇಸ್ಕೆರೆಕಿಯ ಕೊಲಿಯ ಜೀವಕೋಶದಲ್ಲಿ ಸೇರಿಸುದುದಾಗಿಯೂ ಮತ್ತು ಈ ಬ್ಯಾಕ್ಟೀರಿಯ ಅಸಹಜ ಪ್ರತ್ಯಾಮ್ಲ ಜೋಡಿಯನ್ನು ಹಲವು ಸಂತತಿಗಳಲ್ಲಿ ಯಶಸ್ವಿಯಾಗಿ ನಕಲಿಸಿತು ಎಂದು ಹೇಳಿತು.[೧೧] ಜೀವಿಯೊಂದು ಹಿಗ್ಗಿಸಿದ ಜೆನೆಟಿಕ್ ಕೋಡನ್ನು ಮುಂದಿನ ಪೀಳಿಗೆಗೆ ಕೊಟ್ಟ ಮೊದಲ ತಿಳಿದ ಉದಾಹರಣೆ ಇದು.[೯][೧೨] ಭಾಗಶಹ ಇದನ್ನು ನ್ಯೂಕ್ಲಿಯೊಟೈಡ್ ಟ್ರೈಫಾಸ್ಪೇಟ ವಾಹಕವನ್ನು ದಕ್ಷವಾಗಿ ಸಾಗಣೆ ಮಾಡುವಿಕೆಯನ್ನು ಅಭಿವ್ಯಕ್ತಿಸುವ ಪಾಚಿವಂಶವಾಹಿಯನ್ನು ಇ.ಕೊಲಿದೊಳಗೆ ಸೇರಿಸುವ ಮೂಲಕ ಸಾಧಿಸಲಾಯಿತು. ಇದು d5SICS ಮತ್ತು dNaMನ ಟ್ರೈಫಾಸ್ಟೇಟ್‌ಗಳನ್ನು ಇ. ಕೊಲಿಯದೊಳಗೆ ಅಮದು ಮಾಡಿಕೊಳ್ಳಲು ಸಹಾಯ ಮಾಡುತ್ತದೆ.[೯] ನಂತರ ಸಹಜ ಬ್ಯಾಕ್ಟೀರಿಯ ಪ್ರತಿಯಾಗುವ ಪ್ರತಿಕ್ರಿಯಾಸರಣಿಯಲ್ಲಿ ಅವನ್ನು ಬಳಸಿ d5SICS- dNaM ಇರುವ ಪ್ಲಾಸ್ಮಿಡ್‌ಗಳೂ ನಿಖರವಾಗಿ ನಕಲಾದವು.
ಮೂರನೆಯ ಪ್ರತ್ಯಾಮ್ಲ ಜೋಡಿಯ ಯಶಸ್ವೀ ಸೇರಿಸುವಿಕೆ ಡಿಎನ್ಎ ಸಂಕೇತಿಸದ ಅಮಿನೊ ಆಮ್ಲಗಳನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪ್ರಗತಿ. ವಾಸ್ತವದಲ್ಲಿ ಈಗ ಇರುವ ಅಮಿನೊ ಆಮ್ಲಗಳು ೨೦ ಮತ್ತು ಸೈದ್ಧಾಂತಿಕವಾಗಿ ಸಾಧ್ಯವಾದ ಅಮಿನೊ ಆಮ್ಲದ ಸಂಖ್ಯೆ ೧೭೨. ಇದು ಬದುಕಿರುವ ಜೀವಿಯು ಹೊಸ ರೀತಿಯ ಪ್ರೋಟೀನ್‌ಗಳನ್ನು ಉತ್ಪತ್ತಿ ಮಾಡುವ ಸಾಧ್ಯತೆಯನ್ನು ಹೆಚ್ಚಿಸಿದೆ.[೧೧] ಕೃತಕ ಡಿಎನ್ಎ ಸರಣಿಗಳು ಇನ್ನೂ ಏನನ್ನೂ ಸಂಕೇತಿಸುತ್ತಿಲ್ಲ. ಆದರೆ ವಿಜ್ಞಾನಿಗಳು ಈ ಸರಣಿಗಳನ್ನು ಕೈಗಾರಿಕಾ ಅಥವಾ ಔಷದೀಯ ಬಳಕೆಯ ಅಗತ್ಯಗಳಿಗೆ ಹೊಸ ಪ್ರೋಟೀನ್ ತಯಾರಿಸಲು ರೂಪಿಸ ಬಹುದು ಎಂದು ಊಹಿಸುತ್ತಿದ್ದಾರೆ.[೧೩]

ಟಿಪ್ಪಣಿಗಳು[ಬದಲಾಯಿಸಿ]

  1. ಇಂಗ್ಲೀಶ್ ವಿಕಿಪೀಡಿಯದ Nucleotideನ ಭಾಗಶಹ ಅನುವಾದ. ಈ ಪುಟಕ್ಕೆ ಲಿಂಕ್ https://en.wikipedia.org/wiki/Nucleotide
  2. ಇತರ ಅಣುಗಳೊಂದಿಗೆ ಸೇರಿ ರಾಸಾಯನಿಕ ಅಥವಾ ಸಹವೇಲೆನ್ಸಿ ಅಲ್ಲದ ಬಾಂಡ್ ಮೂಲಕ ಬಂಧಿತವಾಗಿ ಪಾಲಿಮಾರ್ ಆಗಬಲ್ಲ ಜೈವಿಕ ಅಣುಗಳು
  3. ವಿಕಿರಣಪಟ್ಟಿ-ರಾಸಾಯನಿಕ ಸಂಯುಕ್ತದಲ್ಲಿ ಒಂದು ಅಥವಾ ಹೆಚ್ಚು ರೇಡಿಯೊಸಮಸ್ಥಾನಿ ಅಥವಾ ಹೆಚ್ಚು ಶಕ್ತಿಯಿರುವ ಅಸ್ಥಿರ ಪರಮಾಣುವನ್ನು ಸಾಮಾನ್ಯ ಪರಮಾಣುವಿನ ಬದಲಿಗೆ ಬಳಸುವದು
  4. ಒಂದು ಆಮ್ಲಜನಸಕ ಪರಮಾಣು ಒಂದು ಜಲಜನಕ ಪರಮಾಣುವಿಗೆ ಸಹವೇಲೆನ್ಸಿಯಲ್ಲಿ ಬಂಧಿತವಾದ ಗುಂಪು –OH ಗುಂಪು
  5. ನ್ಯೂಕ್ಲಿಯೊಟೈಡ್ ಪಾಲಕ ರಾಸಾಯನಿಕ ಪ್ರತಿಕ್ರಿಯಾ ಸರಣಿಯಲ್ಲಿ ನ್ಯೂಕ್ಲಿಯೊಟೈಡ್‌ನ ಅವನತಿಯ ಉಳಿಕೆಗಳನ್ನು ಬಳಸಿ ನ್ಯೂಕ್ಲಿಯೊಟೈಡ್‌ಗಳನ್ನು ಸಂಯೋಜಿಸುವುದು
  6. ಕಾಪಿಡುವ ಗುಂಪು- ಇವನ್ನು ಮುಂದೆ ನಿರ್ದಿಷ್ಟವಾದ ರಾಸಾಯನಿಕ ಕ್ರಿಯೆ ಪಡೆಯಲು ಈಗ ಸೇರಿಸಲಾಗುತ್ತದೆ.
  7. ಡಿಎನ್ಎ, ಆರ್‌ಎನ್ಎ ಮತ್ತು ಇತರ ನ್ಯೂಕ್ಲಿಯಿಕ್ ಆಮ್ಲಗಳನ್ನು ರಾಸಾಯನಿಕವಾಗಿ ಸಂಯೋಜಿಸಲು ಇವನ್ನು ವಿಸೃತವಾಗ ಬಳಸಲಾಗುತ್ತದೆ.
  8. ಅಮಿನೊ ಅಥವಾ ಅಮೊನಿಯದಿಂದ ಪಡೆದ ರಾಸಾಯನಿಕಗಳನ್ನು ತೆಗೆಯುವ ಪ್ರಕ್ರಿಯೆ

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ Alberts B, Johnson A, Lewis J, Raff M, Roberts K & Wlater P (2002). Molecular Biology of the Cell (4th ed.). Garland Science. ISBN 0-8153-3218-1. pp. 120–121.
  2. Coghill, Anne M.; Garson, Lorrin R., eds. (2006). The ACS style guide: effective communication of scientific information (3rd ed.). Washington, D.C.: American Chemical Society. p. 244. ISBN 978-0-8412-3999-9.
  3. "Nucleotides". IUPAC Gold Book. International Union of Pure and Applied Chemists. doi:10.1351/goldbook.N04255. Retrieved 30 June 2014.
  4. Lehninger, Albert L. (1975). Biochemistry: the molecular basis of cell structure and function. New York: Worth Publishers Inc. doi:10.1002/jobm.19770170116.
  5. Stryer, Lubert (1988). Biochemistry (3rd ed.). New York: W. H. Freeman. ISBN 9780716719205.
  6. Garrett, Reginald H.; Grisham, Charles M. (2007). Biochemistry (4th ed.). Belmont, California: Brooks/Cole, Cengage Learning.
  7. Zaharevitz, DW; Anerson, LW; Manlinowski, NM; Hyman, R; Strong, JM; Cysyk, RL. "Contribution of de-novo and salvage synthesis to the uracil nucleotide pool in mouse tissues and tumors in vivo".
  8. Malyshev, Denis A.; Dhami, Kirandeep; Quach, Henry T.; Lavergne, Thomas; Ordoukhanian, Phillip (24 July 2012). "Efficient and sequence-independent replication of DNA containing a third base pair establishes a functional six-letter genetic alphabet". Proceedings of the National Academy of Sciences of the United States of America 109 (30): 12005–12010. Bibcode:2012PNAS..10912005M. doi:10.1073/pnas.1205176109. Retrieved 2014-05-11.
  9. ೯.೦ ೯.೧ ೯.೨ Malyshev, Denis A.; Dhami, Kirandeep; Lavergne, Thomas; Chen, Tingjian; Dai, Nan; Foster, Jeremy M.; Corrêa, Ivan R.; Romesberg, Floyd E. (May 7, 2014). "A semi-synthetic organism with an expanded genetic alphabet". Nature 509: 385–8. doi:10.1038/nature13314. PMC 4058825. PMID 24805238. Retrieved May 7, 2014.
  10. Callaway, Ewan (May 7, 2014). "Scientists Create First Living Organism With 'Artificial' DNA". Nature News (Huffington Post). Retrieved 8 May 2014.
  11. ೧೧.೦ ೧೧.೧ Fikes, Bradley J. (May 8, 2014). "Life engineered with expanded genetic code". San Diego Union Tribune. Retrieved 8 May 2014.
  12. Sample, Ian (May 7, 2014). "First life forms to pass on artificial DNA engineered by US scientists". The Guardian. Retrieved 8 May 2014.
  13. Pollack, Andrew (May 7, 2014). "Scientists Add Letters to DNA’s Alphabet, Raising Hope and Fear". New York Times. Retrieved 8 May 2014.