ವಿಷಯಕ್ಕೆ ಹೋಗು

ದೋಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೋಸೆ, ಚಟ್ನಿ ಮತ್ತು ಸಾಂಬಾರ್

ದೋಸೆ ಒಂದು ದಕ್ಷಿಣ ಭಾರತೀಯ ತಿನಿಸು. ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಗಳನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವ ಇದು ದಕ್ಷಿಣ ಭಾರತದಲ್ಲಿ ಬೆಳಗಿನ ತಿಂಡಿಯಾಗಿ ಸರ್ವೇಸಾಮಾನ್ಯ.

ಸಿದ್ಧತೆ

[ಬದಲಾಯಿಸಿ]

ಮೊದಲಿಗೆ ಸಾಧಾರಣವಾಗಿ ದೋಸೆಯ ಹಿಟ್ಟನ್ನು ಅಕ್ಕಿ ಮತ್ತು ಉದ್ದಿನ ಬೇಳೆಗಳನ್ನು ಸ್ವಲ್ಪ ಕಾಲ ನೆನೆಸಿ, ತಿರುವಿ ಒಂದು ರಾತ್ರಿಯ ವರೆಗೆ "ಹುದುಗಲು" ಬಿಡುವುದರ ಮೂಲಕ ಸಿದ್ಧಪಡಿಸಲಾಗುತ್ತದೆ. ಯಾವ ರೀತಿಯ ದೋಸೆ ತಯಾರಿಸಲಾಗುತ್ತಿದೆ ಎಂಬುದನ್ನು ಆಧರಿಸಿ ಈ ಪ್ರಕ್ರಿಯೆಯಲ್ಲಿ ಮೆಂತ್ಯ, ಅವಲಕ್ಕಿ, ಕಡಲೇಬೇಳೆ ಇತ್ಯಾದಿಗಳನ್ನು ಸೇರಿಸಿಕೊಳ್ಳುವುದೂ ಉಂಟು. ಸಿದ್ಧವಾದ ಹಿಟ್ಟನ್ನು ಕಾದ ಕಾವಲಿಯ ಮೇಲೆ ಹುಯ್ಯುವುದರ ಮೂಲಕ ದೋಸೆಯನ್ನು ಸಿದ್ಧಪಡಿಸಲಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಣ್ಣೆ, ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸುವುದು ವಾಡಿಕೆ.

ಅಕ್ಕಿ ಮತ್ತು ಉದ್ದಿನ ಬೇಳೆಯ ಬದಲು ರವೆಯನ್ನು ಉಪಯೋಗಿಸಿ ರವೆ ದೋಸೆ, ಅಕ್ಕಿ ಹಿಟ್ಟು, ಗೋಧಿ ಹಿಟ್ಟು ಮೊದಲಾದವನ್ನು ಉಪಯೋಗಿಸಿ "ದಿಢೀರ್ ದೋಸೆ" ಮೊದಲಾದವನ್ನೂ ಮಾಡಬಹುದು.

ದೋಸೆಯ ಜೊತೆ ತಿನಿಸುಗಳು

[ಬದಲಾಯಿಸಿ]

ದೋಸೆಯ ಜೊತೆಗೆ ನೆಂಚಿಕೊಳ್ಳಲು ಯಾವುದಾದರೂ ತಿನಿಸುಗಳನ್ನು ಸಿದ್ಧಪಡಿಸುವುದೂ ಸಹ ಸಾಮಾನ್ಯ. ದೋಸೆಯ ಜೊತೆಗೆ ಮಾಡುವ ತಿನಿಸುಗಳಲ್ಲಿ ಸಾಮಾನ್ಯವಾದವು:

  • ಚಟ್ನಿ
  • ಸಾಂಬಾರ್ ಅಥವಾ ಹುಳಿ
  • ಚಟ್ನಿಪುಡಿ
  • ಉಪ್ಪಿನಕಾಯಿ
  • ಮೊಸರು
  • ಮುಖ್ಯವಾಗಿ ಕೇರಳ ಮತ್ತು ತಮಿಳುನಾಡುಗಳ ಮಾಂಸಾಹಾರಿ ಕುಟುಂಬಗಳಲ್ಲಿ ಕೋಳಿ ಅಥವಾ ಕುರಿ ಮಾಂಸದ ಪಲ್ಯ

ವಿವಿಧ ರೀತಿಯ ದೋಸೆಗಳು

[ಬದಲಾಯಿಸಿ]
ಈರುಳ್ಳಿ ದೋಸೆ, ಚಟ್ನಿ ಮತ್ತು ಆಲೂಗೆಡ್ಡೆ ಪಲ್ಯ
ಸೆಟ್ ದೋಸೆ

ದೋಸೆಯನ್ನು ಸಿದ್ಧಪಡಿಸುವ ವಿಧಾನ ಮತ್ತು ಉಪಯೋಗಿಸುವ ಸಾಮಗ್ರಿಗಳನ್ನು ಆಧರಿಸಿ ಅನೇಕ ರೀತಿಯ ದೋಸೆಗಳನ್ನು ಗುರುತಿಸಬಹುದು:

  • ಮಸಾಲೆ ದೋಸೆ: ದೋಸೆಯ ಅವತಾರಗಳಲ್ಲಿ ಇದು ಅತ್ಯಂತ ಪ್ರಸಿದ್ಧವಾದದ್ದು. ಆಲೂಗೆಡ್ಡೆ ಮತ್ತು ಈರುಳ್ಳಿಯ ಪಲ್ಯವನ್ನು ದೋಸೆಯ ಒಳಗೆ ಇಟ್ಟು ದೋಸೆಯನ್ನು ಅದರ ಸುತ್ತ ಮಡಿಸಲಾಗುತ್ತದೆ. ಉಪಾಹಾರ ಗೃಹಗಳಲ್ಲಿ ದೊರೆಯುವ ಮಸಾಲೆ ದೋಸೆಯ ಒಳಭಾಗದಲ್ಲಿ ಸಾಮಾನ್ಯವಾಗಿ ಬೆಳ್ಳುಳ್ಳಿ ಸೇರಿಸಿದ ಕೆಂಪು ಚಟ್ನಿಯನ್ನು ಸವರಿರುತ್ತಾರೆ.
  • ಈರುಳ್ಳಿ ದೋಸೆ: ದೋಸೆಯ ಹಿಟ್ಟಿನೊಂದಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿಕೊಂಡು ಮಾಡುವ ದೋಸೆ.
  • ಬೆಣ್ಣೆ ದೋಸೆ: ದೋಸೆಯನ್ನು ಮಾಡುವಾಗ ಎಣ್ಣೆಯ ಬದಲು ಬೆಣ್ಣೆಯನ್ನು ಉಪಯೋಗಿಸಿ ಮಾಡುತ್ತಾರೆ.
  • ಪೇಪರ್ ದೋಸೆ: ಅತ್ಯಂತ ತೆಳ್ಳಗೆ ಮತ್ತು ಎರಡು ಅಡಿಗಳಿಗಿಂತಲೂ ಉದ್ದವಿರುವ ದೋಸೆ.
  • ಸೆಟ್ ದೋಸೆ: ಸ್ವಲ್ಪ ಸೋಡ ಬೆರೆಸಿ ಹೆಚ್ಚಾಗಿ ಉಬ್ಬುವಂತೆ ಮಾಡುವ ಸಣ್ಣದಾದ ದೋಸೆ, ಸಾಮಾನ್ಯವಾಗಿ ಒಟ್ಟಿಗೆ ೨-೩ ದೋಸೆಗಳ "ಸೆಟ್".
  • ರವೆ ದೋಸೆ
  • ನೀರು ದೋಸೆ
  • ರಾಗಿ ದೋಸೆ
  • ಗೋಧಿ ದೋಸೆ
  • ಪಾಲಾಕ್ ದೋಸೆ
  • ಓಪನ್ ದೋಸೆ
  • ಅಡೆ ದೋಸೆ
  • ಮೈದಾ ಮಸಾಲ ದೋಸೆ
  • ಪನ್ನೀರ್ ದೋಸೆ
  • ತುಪ್ಪ ದೋಸೆ

ಪ್ರಖ್ಯಾತ ದೋಸೆ ಹೋಟೆಲ್ ಗಳು

[ಬದಲಾಯಿಸಿ]
  • ವಿದ್ಯಾರ್ಥಿ ಭವನ್: []

"ಮಸಾಲೆ ದೋಸೆ ಅಂದರೆ ಭವನ..."

ಇದೊಂದು ಬೆಂಗಳೂರಿನ ಗಾಂಧೀ ಬಜಾರ್ ಬಡಾವಣೆಯಲ್ಲಿರುವ, ೩೦ ವರ್ಷಕ್ಕಿಂತ ಹಳೆಯದಾದ ,ಆದರೆ ಅಂದಿನಿಂದಲೂ ತನ್ನ ಜನಪ್ರಿಯತೆ ಮತ್ತು ಗುಣಮಟ್ಟವನ್ನು ಹಾಗೇ ಉಳಿಸಿಕೊಂಡು ಬಂದಿರುವ ಜನಪ್ರಿಯ ಉಡುಪಿ ಖಾದ್ಯಮಂದಿರ. ಎಲ್ಲಾ ಉಡುಪಿ ಹೋಟೆಲ್ ಗಳಂತೆ, ಇಲ್ಲಿಯೂ ಶುಚಿ, ರುಚಿಯಾದ ತಿಂಡಿ-ತಿನಸುಗಳು ದೊರೆಯುತ್ತವೆ. ಮಸಾಲೆದೋಸೆ, ಇಲ್ಲಿನ ಪ್ರಮುಖ ಆಕರ್ಷಣೆ. ಜನಗಳು ಈ ಚಿಕ್ಕಹೋಟೆಲ್ ನ ಹೊರಗಡೆಯೇ ಕ್ಯೂ, ನಲ್ಲಿ ನಿಂತು ಕಾದು, ಒಳಗೆ ಬಂದು ದೋಸೆಯನ್ನು ಆಸ್ವಾದಿಸುವುದು, ಸರ್ವೇಸಾಮಾನ್ಯವಾದ ಸಂಗತಿ. ವಿದ್ಯಾರ್ಥಿಭವನದ ಖ್ಯಾತಿಯನ್ನು ಹೆಚ್ಚಿಸಲು ಕನ್ನಡದ ಕೆಲವು ಪತ್ರಿಕೆಗಳ, ನಿಯತಕಾಲಿಕೆಗಳ, ಮಹತ್ವ ಹೆಚ್ಚು. ಜಾಗದ ಅಭಾವ ; ತಕ್ಷಣ ಪರಿವಾರದವರೆಲ್ಲಾ ಒಟ್ಟಿಗೆ ಕೂತು, ದೋಸೆಸವಿಯುವುದು ಕಷ್ಟವೆನ್ನಿಸಿದರೂ ಜನರು ಎಲ್ಲಕ್ಕೂ ಅಡ್ಜಸ್ಟ್, ಮಾಡಿಕೊಳ್ಳುತ್ತಾರೆ.

ದೋಸೆ ರೇಟು ರೂ. ೨೭/- ಮಾತ್ರ.

ಪರಂಪಲ್ಲಿ ಯಜ್ಞನಾರಾಯಣಮಯ್ಯ, ಮತ್ತು ಸೋದರರು ಸೇರಿ, ೧೯೨೪ ರಲ್ಲಿ, 'ಮಾವಳ್ಳಿ ಟಿಫಿನ್ ರೂಮ್', ಸ್ಥಾಪನೆಮಾಡಿದರು. ಅತ್ಯಂತ ಹೆಸರು ಮಾಡಿದ ಹೋಟೆಲ್ ಗಳಲ್ಲಿ ಇದು ಒಂದು. ಇಲ್ಲಿ ನಿಮಗೆ ಪ್ರತಿನಿತ್ಯ ದೋಸೆಯು ಸಿಗುವುದು ಕೇವಲ ಬೆಳಗ್ಗೆ ೮.೩೦ ರಿಂದ ಬೆಳಗ್ಗೆ ೯.೩೦ ವರಗೆ ಮಾತ್ರ.!

ಇಲ್ಲಿ ಊಟ ೧೩೦/- ರೂ. ಗಳು (ಪ್ರಸಕ್ತ ದರ ರೂ ೩೫೦/-), ಅದೂ ಸೀಟ್ ಸಿಗುವುದು ಭಾರಿ ಪ್ರಯಾಸ!

  • ಶಿವಮೊಗ್ಗಾದ ಗೋಪಿ ಹೋಟೆಲ್, ಸತ್ಕಾರ್ ಹೋಟೆಲ್ ಮತ್ತು ಮೀನಾಕ್ಷಿ ಭವನ್ ಒಂದು ಕಾಲದಲ್ಲಿ ದೋಸೆಗಾಗಿ ಬಹಳ ಪ್ರಸಿದ್ದಿ ಪಡೆದ ಹೋಟೆಲ್ ಆಗಿದ್ದವು.
  • ಚಿತ್ರದುರ್ಗದ ಲಕ್ಷ್ಮಿ ಭವನ ದೋಸೆಗಾಗಿ ಪ್ರಸಿದ್ದಿ ಪಡೆದಿದೆ. ಚಿತ್ರದುರ್ಗಕ್ಕೆ ಬರುವ ಪ್ರವಾಸಿಗರು ತಪ್ಪದೆ ಲಕ್ಷ್ಮಿ ಭವನಕ್ಕೆ ದೋಸೆ ತಿನ್ನಲು ಹೊಗುತ್ತಾರೆ.
  • ದಾವಣಗೆರೆಯ ಬೆಣ್ಣೆ ದೋಸೆ ಕೂಡ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿದೆ.
  • ಆಗುಂಬೆ ಪೇಪರ್ ದೋಸೆಗೆ ಮತ್ತು ನೀರುದೊಸೆಗೆ ಹೆಸರುವಾಸಿ []

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ದೋಸೆ&oldid=1250999" ಇಂದ ಪಡೆಯಲ್ಪಟ್ಟಿದೆ