ಜೆನೋವ
ಜೆನೋವ - ಇಟಲಿಯ ಲಗುರೀಯ ಸ್ವಯಮಾಡಳಿತ ಪ್ರಾಂತ್ಯದ ರಾಜಧಾನಿ. ಉ.ಅ. 440 25' ಪೂ.ರೇ. 80 55' ಮೇಲಿದೆ. ಜನಸಂಖ್ಯೆ 8,21,851 (1971). ಇದು ಇಟಲಿಯ ಪ್ರಮುಖ ಬಂದರು. ಇಟಲಿಯ ದೊಡ್ಡಪಟ್ಟಣಗಳಲ್ಲಿ ಇದು ಐದನೆಯದು. ಇದು ಬಹುಮಟ್ಟಿಗೆ ಅರಮನೆಗಳ ನಗರ. ವಾಸ್ತುಶಿಲ್ಪ ದೃಷ್ಟಿಯಿಂದ ಬಹು ಪ್ರಸಿದ್ಧವಾದ ಅನೇಕ ಅರಮನೆಗಳು ಚರ್ಚುಗಳು ನಗರದ ತುಂಬ ಹರಡಿವೆ. ಎರಡನೆಯ ಮಹಾಯುದ್ಧದಲ್ಲಿ ನಗರ ವಿಪರೀತ ಬಾಂಬ್ ದಾಳಿಗೆ ತುತ್ತಾಗಿ ಇಲ್ಲಿಯ ಅನೇಕ ಪ್ರಸಿದ್ಧ ಕಟ್ಟಡಗಳು ನಷ್ಟಕ್ಕೆ ಗುರಿಯಾದುವು.
ಇತಿಹಾಸ
[ಬದಲಾಯಿಸಿ]ಕ್ರಿ.ಪೂ. 4ನೆಯ ಶತಮಾನದಲ್ಲೇ ಜೆನೋವ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಕ್ರಿ.ಪೂ. 3ನೆಯ ಶತಮಾನದಲ್ಲಿ ಇದು ರೋಮಿನ ಮಿತ್ರರಾಷ್ಟ್ರವಾಗಿತ್ತು. ಕ್ರಿ.ಪೂ. 209ರಲ್ಲಿ ಇದು ಕಾರ್ತೇಜಿಯನರ ದಾಳಿಗೆ ತುತ್ತಾಗಿ ನಾಶವಾಯಿತು. ಆದರೆ ಮಿತ್ರರಾದ ರೋಮನರು ನಗರವನ್ನು ಕಟ್ಟಿಕೊಟ್ಟರು. ರೋಮನ್ ಸಾಮ್ರಾಜ್ಯ ಅಳಿದಮೇಲೆ 7ನೆಯ ಶತಮಾನದಲ್ಲಿ ಲೊಂಬಾರ್ಡರು ಇದನ್ನು ಆಕ್ರಮಿಸಿಕೊಂಡರು. ಅನಂತರ ಇದು ಸ್ಯಾರಸನರ ಆಕ್ರಮಣಕ್ಕೆ ಒಳಗಾಯಿತು (936). ಅನಂತರದ ಎರಡು ಶತಮಾನಗಳಲ್ಲಿ ಜೆನೋವ ಕಡಲ ತೀರದ ಸ್ವತಂತ್ರ ರಾಜ್ಯವಾಗಿ ಅಭಿವೃದ್ಧಿಯಾಯಿತು. ಆಗ ಇದರ ಸಾಗರ ಚಕ್ರಾಧಿಪತ್ಯ ಉನ್ನತಿಗೇರಿತ್ತು. ಪೀಸದ ಸಹಾಯದಿಂದ ಸಾರ್ಡೀನಿಯದಿಂದ ಅರಬರು ಮತ್ತು ಕೋರ್ಸಿಕನರನ್ನು ಓಡಿಸಿತು. ಸಾರ್ಡೀನೀಯಕ್ಕಾಗಿ ಪೀಸ ಮತ್ತು ಜಿನೋವಗಳ ಮಧ್ಯೆ ದ್ವೇಷವುಂಟಾಯಿತು. ಪರಿಣಾಮವಾಗಿ ಇದು ಪೀಸದೊಡನೆ ಬಹು ದೀರ್ಘಕಾಲ ಯುದ್ಧ ಹೂಡಬೇಕಾಯಿತು. ಕೊನೆಗೆ ಪೀಸವನ್ನು 1284ರಲ್ಲಿ ಸೋಲಿಸಿತು. ಅನೇಕ ಆಂತರಿಕ ಕಲಹಗಳಿಗೆ ಗುರಿಯಾದ ಜೆನೋವ 1339ರಲ್ಲಿ ಮೊದಲ ದಂಡಾಧಿಕಾರಿಯ (ಡೋಜ್) ನೇಮಕವಾದ ಮೇಲೆ ಸ್ವಲ್ಪಮಟ್ಟಿಗೆ ನೆಮ್ಮದಿಯನ್ನು ಪಡೆಯಿತು. ಮಧ್ಯಕಾಲದಲ್ಲಿ ಜೆನೋವ ವ್ಯಾಪಾರ ಕ್ಷೇತ್ರದಲ್ಲಿ ತುಂಬ ಮುಂದುವರಿಯಿತು. ಅದೇ ಕ್ಷೇತ್ರದಲ್ಲಿ ಸ್ಪರ್ಧಿಗಳಾದ ವೆನಿಸಿನವರೊಡನೆ ವೈರ ಕಟ್ಟಿಕೊಂಡು ಅನೇಕ ವರ್ಷಗಳ ಯುದ್ಧಾನಂತರ 1381ರಲ್ಲಿ ಟ್ಯುರಿನ್ ಶಾಂತಿ ಒಪ್ಪಂದ ಮಾಡಿಕೊಂಡಿತು. ಇದರಿಂದ ವೆನಿಸ್‍ಗೆ ಅನುಕೂಲವಾಯಿತು.
ಅನಂತರ ಪ್ರಾಬಲ್ಯಕ್ಕೆ ಬಂದ ಜೆನೋವ ಸಾಮ್ರಾಜ್ಯ ಅನೇಕ ಸ್ಥಳಗಳನ್ನು ಗೆದ್ದು ಸ್ಪೇನಿನಿಂದ ಕ್ರಿಮಿಯದವರೆಗೊ ವ್ಯಾಪಾರಮಾಡುವ ಹಕ್ಕನ್ನು ದೊರಕಿಸಿಕೊಂಡಿತು. ಜೆನೋವದ ವಿಸ್ತರಣೆ ಮತ್ತು ರಕ್ಷಣೆಗಾಗಿ ಕೆಲವು ಜನ ಶ್ರೀಮಂತ ವ್ಯಾಪಾರಿಗಳು 1408ರಲ್ಲಿ ಶಕ್ತಿಯುತವಾದ ಬ್ಯಾಂಕೊಂದನ್ನು ಸ್ಥಾಪಿಸಿಕೊಂಡು ಹಣ ಒದಗಿಸುತ್ತಿದ್ದರು. ಈ ವೇಳೆಗೆ ಲಗುರೀಯದ ಅನೇಕ ಸ್ಥಳಗಳನ್ನು ಅದು ತನ್ನ ವಶಕ್ಕೆ ತೆಗೆದುಕೊಂಡರೂ ತನ್ನ ಸುತ್ತಮುತ್ತಲ ಸ್ಥಳಗಳನ್ನು ಕಳೆದುಕೊಳ್ಳಲಾರಂಭಿಸಿತು. ಒಳ ಜಗಳಗಳಿಗೆ ಗುರಿಯಾಗಿ 1396ರಲ್ಲಿ ಫ್ರಾನ್ಸಿನ ಅಧಿಕಾರಕ್ಕೆ ಒಳಪಟ್ಟು ಬಹುಕಾಲ ದಾಸ್ಯದಲ್ಲುಳಿಯಿತು. ಆಂಡ್ರೇರಿಯಾ ಡೋರೀಯಾ ಎಂಬ ಸೈನ್ಯಾಧಿಕಾರಿ 1528ರಲ್ಲಿ ಇದಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಪ್ರತಿ ಎರಡು ವರ್ಷಗಳಿಗೊಮ್ಮೆ ಹೊಸ ಡೋಜ್ ಬರಬೇಕೆಂದು ವಿಧಿಸಿದ. ಜೆನೋವ 1797ರಲ್ಲಿ ನೆಪೋಲಿಯನನ ವಶವಾಗುವವರೆಗೊ ಈ ಪದ್ಧತಿ ಜಾರಿಯಲ್ಲಿತ್ತು. 1ನೆಯ ನೆಪೋಲಿಯನ್ 1805ರಲ್ಲಿ ಇದನ್ನು ಫ್ರೆಂಚ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡ. 1815ರ ವಿಯನ್ನ ಕಾಂಗ್ರೆಸ್ ಜೆನೋವ ಮತ್ತು ಲಗುರೀಯಗಳನ್ನು ಸಾರ್ಡೀನಿಯದೊಡನೆ ಸೇರ್ಪಡೆಯಾಗಲು ಅನುವು ಮಾಡಿಕೊಟ್ಟಿತು. ಈಗಿನ ಜೆನೋವ ಉಪವಿಭಾಗ 1926ರಲ್ಲಿ ಅಸ್ತಿತ್ವಕ್ಕೆ ಬಂತು. ಜೊತೆಗೆ ಸುತ್ತಮುತ್ತಲ 19 ಕಮ್ಯೂನ್‍ಗಳೂ ಸೇರಿಕೊಂಡು ವಿಸ್ತಾರವಾಯಿತು. ಎರಡನೆಯ ಮಹಾಯುದ್ಧದಲ್ಲಿ, ಬಾಂಬ್ ದಾಳಿಗಳಿಗೆ ನಗರ ಒಳಗಾಯಿತು. ಈ ದಾಳಿಯಿಂದಾಗಿ ಬಂದರು ಹಾಳಾಗಿ ಕೈಗಾರಿಕೆ ಮತ್ತು ವ್ಯಾಪಾರಕ್ಕೆ ತುಂಬ ಹಾನಿಯಾಯಿತು.
ವಾಸ್ತುಶಿಲ್ಪ
[ಬದಲಾಯಿಸಿ]ವಾಸ್ತುಶಿಲ್ಪ ದೃಷ್ಟಿಯಿಂದ ಜೆನೋವ ವಿಶಿಷ್ಟ ಸ್ಥಾನ ಪಡೆದಿದೆ. ನಗರದ ತುಂಬ ಹಳೆಯ ಚರ್ಚುಗಳೂ ಅರಮನೆಗಳೂ ಹರಡಿವೆ. ಪುರಾತನ ಚರ್ಚುಗಳಲ್ಲಿ ಫ್ರೆಂಚ್, ರೋಮನೆಸ್ಕ್ ಮತ್ತು ಪೀಸ ಶೈಲಿಗಳ ಮಿಶ್ರಣ ಕಾಣುತ್ತದೆ. ಇವುಗಳ ಗೋಪುರ ಸಾಮಾನ್ಯವಾಗಿ ಸಣ್ಣದು, ಅಮೃತಶಿಲೆಯ ಕಂಬಗಳು ಬಹಳ ದೊಡ್ಡವು. ಮುಂಭಾಗ ತುಂಬ ಸರಳ, ಗ್ಯಾಲರಿರಹಿತ. ಗೋಡೆಗಂಬಗಳಿಗೆ ಪರ್ಯಾಯವಾಗಿ ಕಪ್ಪು ಮತ್ತು ಬಿಳಿಯ ಅಮೃತಶಿಲೆಯನ್ನು ಬಳಸಲಾಗಿದೆ. ಇದೇ ಶೈಲಿ ಅನಂತರದ ಗಾತಿಕ್ ಶೈಲಿಯ ಚುರ್ಚುಗಳಲ್ಲೂ ಮುಂದುವರಿದಿದೆ.
ಜೆನೋವದಲ್ಲಿ ಪ್ರಸಿದ್ಧವಾದ ಅನೇಕ ಚರ್ಚುಗಳಿವೆ. ಕತೀಡ್ರೆಲ್ ಆಪ್ ಸ್ಯಾನ್ ಲೊರೆಂಜೋ (1118), ಡೋರಿಯನರ ಪುರಾತನ ಚರ್ಚಾದ ಸ್ಯಾನ್‍ಮಾಟೇವೋ (1125), ಮೆಡೀವಲ್ ಚರ್ಚ್ ಆಫ್ ಸ್ಯಾನ್ ಡೋನಾಟೋ (12ನೆಯ ಶ.). 16ನೆಯ ಶತಮಾನದ ಅನನ್ಷಿಯೇಶನ್ ಮತ್ತು ಸೇಂಟ್ ಅಂಬ್ರೋಸ್-ಇವು ಕೆಲವು ಪ್ರಮುಖ ಚರ್ಚುಗಳು. ಜೆನೋವದಲ್ಲಿರುವ ಅರಮನೆಗಳಲ್ಲಿ ಬಹುಪಾಲು 11-17ನೆಯ ಶತಮಾನಗಳಲ್ಲಿ ಕಟ್ಟಿದವು. ಅನೇಕ ಅರಮನೆಗಳು ಅವುಗಳಲ್ಲಿರುವ ಸುಂದರ ಶಿಲ್ಪ, ಚಿತ್ರಗಳಿಗಾಗಿ ಪ್ರಸಿದ್ಧವಾಗಿವೆ. ಕೊಸ ಡಿ ಲಾಂಬ ಡೊರಿಯ ಅರಮನೆ, ವೆನಿಸನ್ನು ಗೆದ್ದ ದಳಪತಿಗೆ ಉಡುಗೊರೆಯಾಗಿ ಕೊಟ್ಟದ್ದು (1298), ಬಂದರಿನ ದಡದಲ್ಲಿರುವ ಪ್ಲಾಸೋ ಡಿ ಸಾನ್ ಜಿಯೋರ್‍ಜಿಯೋ ಎಂಬುದು ಕ್ಯಾಪ್ಟನ್ ಪೊಪೊಲೋನ ವಾಸಸ್ಥಾನವಾಗಿತ್ತು. 16ನೆಯ ಶತಮಾನದಲ್ಲಿ ಕಟ್ಟಿದ ಬಿಳಿಬಣ್ಣದ ಪ್ಲಾಸೊ ಬಿಯಾಂಕೋ ಕಲಾವಸ್ತುಗಳ, ವೈಜ್ಞಾನಿಕ ಮತ್ತು ಐತಿಹಾಸಿಕ ವಸ್ತುಗಳ ಕೇಂದ್ರ. 17ನೆಯ ಶತಮಾನದ ಪ್ಲಾಸೋ ರೋಸ್ಯೋ ಕೆಂಪು ಬಣ್ಣದ ಕಟ್ಟಡ. ಎರಡನೆಯ ಮಹಾಯುದ್ಧದಲ್ಲಿ ತುಂಬ ನಷ್ಟಕ್ಕೊಳಗಾದ ಇದನ್ನು ರಿಪೇರಿ ಮಾಡಿ 1961ರಲ್ಲಿ ಮತ್ತೆ ತೆರೆಯಲಾಯಿತು. ಇದರ ಗೋಡೆ ಮತ್ತು ಚಾವಣಿಗಳನ್ನು ಪ್ರಸಿದ್ಧ ಚಿತ್ರಕಾರ ಡಿ. ಪೆರಾರಿಯ ಮತ್ತು ಇತರರ ಜಲವರ್ಣ ಚಿತ್ರಗಳಿಂದ ಅಲಂಕರಿಸಲಾಗಿದೆ. ಇಲ್ಲಿ ಪೌರ ಅರಮನೆಯ (ಪಲಾಜೊ ಮುನಿಸಿಪೇಲ್) (1564) ಪ್ರಾಚ್ಯವಸ್ತು ಸಂಗ್ರಹಗಳಲ್ಲಿ ಪ್ರಸಿದ್ಧ ಸಂಗೀತಗಾರ ನೀಕೋಲೋ ಪಾಗಾನೀನೀಯ ವಯೊಲಿನ್ ಮತ್ತು ಕ್ರಿಸ್ಟೊಫರ್ ಕೊಲಂಬಸ್ ಹಸ್ತಾಕ್ಷರಗಳಿರುವ ಎರಡು ಕಾಗದಗಳು ಸೇರಿವೆ. ಬಿಯಾಂಕೊ (1565) ಮತ್ತು ರೋಸ್ಸೋ (1677) ಅರಮನೆಗಳು ಯುದ್ಧದಿಂದ ಹಾಳಾಗಿವೆ. ಡುಕಲ್ ಅರಮನೆ ಮೊದಲು ಪಟ್ಟಣದ ಪ್ರಧಾನ ದಂಡಾಧಿಕಾರಿಯ ವಾಸಸ್ಥಾನವಾಗಿತ್ತು.
ಜೆನೋವದಲ್ಲಿ 1751ರಲ್ಲಿ ಡೋರಿಯ ಮನೆತನದವರಿಂದ ಸ್ಥಾಪಿತವಾದ ಕುಶಲಕಲೆಗಳ ಅಕಾಡಮಿ, ಪ್ರಸಿದ್ಧ ಕಾರ್‍ಲೋಫೆಲಿಸ್ ಸಂಗೀತನಾಟಕ ಶಾಲೆ (1826-28), ಅನೇಕ ವಾಣಿಜ್ಯ ಮತ್ತು ನಾವಿಕ ತರಬೇತಿ ಶಾಲೆಗಳು, 1623ರಲ್ಲಿ ಪ್ರಾರಂಭವಾದ ಜೆಸೊಗಳ ಕಾಲೇಜು, 1812ರಲ್ಲಿ ಸ್ಥಾಪಿತವಾದ ವಿಶ್ವವಿದ್ಯಾಲಯ-ಇವು ಇಲ್ಲಿರುವ ಕೆಲವು ಶಿಕ್ಷಣಸಂಸ್ಥೆಗಳು. ಎರಡನೆಯ ಮಹಾಯುದ್ಧದಲ್ಲಿ ಇಲ್ಲಿ 55 ಚರ್ಚುಗಳು, 3 ಸಂನ್ಯಾಸಿಮಠಗಳು, 13 ನಾಟಕ-ಸಂಗೀತ ಮಂದಿರಗಳು, 129 ಅರಮನೆ ಹಾಗೊ ಶ್ರೀಮಂತರ ಕಟ್ಟಡಗಳು, 3 ರಂಗಮಂದಿರಗಳು ಹಾನಿಗೊಳಗಾದುವೆಂದು ಹೇಳಲಾಗಿದೆ.
ಕೈಗಾರಿಕೆಗಳು
[ಬದಲಾಯಿಸಿ]ಜೆನೋವ ಇಟಲಿಯ ಪ್ರಮುಖ ಕೈಗಾರಿಕಾ ಕೇಂದ್ರ. ಸ್ವಯಂಚಾಲಿತ ಯಂತ್ರ, ರಾಸಾಯನಿಕ, ಕಾಗದ ತಯಾರಿಸುವ ಅನೇಕ ಕಾರ್ಖಾನೆಗಳು ಇಲ್ಲಿವೆ. ಲೋಹ ಕೈಗಾರಿಕಾ ಕಾರ್ಖಾನೆ, ತೈಲಶುದ್ಧೀಕರಣ ಕೈಗಾರಿಕೆಗಳೂ ಇಲ್ಲಿವೆ. ಆಲಿವ್ ಎಣ್ಣೆ, ಮದ್ಯ, ರೇಷ್ಮೆ, ಮಖಮಲ್ಲು, ಹೂವು, ಸಾಮಾನು, ಮೋಟಾರ್ ಕಾರು, ಹಣ್ಣು, ಅಕ್ಕಿ, ನಾರಿಗಾಗಿ ಬೆಳೆಸುವ ಗಿಡ, ಗಾಂಜಾ, ಶೇವಿಗೆ, ಚೀಸ್, ಕಾಗದ, ಯಂತ್ರೋಪಕರಣ, ಸ್ವಯಂಚಾಲಿತ ಯಂತ್ರ, ಉಕ್ಕು, ಬಟ್ಟೆ ಮುಂತಾದುವುಗಳು ಇಲ್ಲಿಂದ ರಫ್ತಾಗುತ್ತವೆ. ಜೆನೋವದ ಇನ್ನೊಂದು ಮುಖ್ಯ ಕೈಗಾರಿಕೆ ಹಡಗು ನಿರ್ಮಾಣ. ಯುದ್ಧ ನೌಕೆ ಲಿಟ್ಟೋರಿಯೋ, ಭಾರವಾದ ಫಿರಂಗಿಗಳನ್ನು ಹೊರುವ ರೆಕ್ಸ್ ಹಡಗು ಇಲ್ಲಿ ತಯಾರಾದವು.
ಸಂಚಾರ, ಸಾರಿಗೆ
[ಬದಲಾಯಿಸಿ]ಜೆನೋವ ನಗರದ ಸುತ್ತಲೊ ಕೋಟೆಗೋಡೆಗಳಿವೆ. ಇದು ಸಮುದ್ರ ಮತ್ತು ಅಪೆನೈನ್ ಬೆಟ್ಟಗಳ ನಡುವೆ ಇದೆ. ಪಟ್ಟಣ ಹಳ್ಳ ತಿಟ್ಟುಗಳಿಂದ ಕೊಡಿದೆ. ನಗರದ ಅನೇಕ ಹಳೆಯ ರಸ್ತೆಗಳು, ಇಕ್ಕಟ್ಟಾಗಿರುವುದರಿಂದ ಸಂಚಾರಕ್ಕೆ ಯೋಗ್ಯವಾಗಿಲ್ಲ. ನಗರದ ಅನೇಕ ಭಾಗಗಳಿಂದ ಬಂದರಿಗೆ ಸಂಪರ್ಕ ಕಲ್ಪಿಸಲು ಅನೇಕ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ನಗರದ ಹಿಂದಿನ ಬೆಟ್ಟಗಳಲ್ಲಿ ಮೂರು ಸುರಂಗಗಳನ್ನು ಕೊರೆದು ಸಂಪರ್ಕ ವ್ಯವಸ್ಥೆಯನ್ನು ಉತ್ತಮಪಡಿಸಲಾಗಿದೆ. ಸ್ಥಳೀಯ ಸಂಚಾರ ಮುಖ್ಯವಾಗಿ ಬಸ್ ಮತ್ತು ಟ್ರಾಲಿಗಳಿಂದ ನಡೆಯುತ್ತದೆ. ಸಮುದ್ರ ತೀರದ ರೈಲು ಮತ್ತು ರಸ್ತೆಸಾರಿಗೆ ವ್ಯವಸ್ಥೆ ನಗರದ ಮೂಲಕ ಹಾದು ಪಶ್ಚಿಮಕ್ಕೆ ನೀಸ್ ಮತ್ತು ಫ್ರಾನ್ಸಿಗೊ ಪೂರ್ವಕ್ಕೆ ಲೆಗೋರ್ನ್ ಮತ್ತು ರೋಂ ನಗರಗಳಿಗೊ ಹೋಗುತ್ತದೆ. ಉತ್ತರದ ರೈಲು ಮತ್ತು ಮೋಟಾರ್ ರಸ್ತೆ ಪೋಲ್ಸೀವೆರ ಕಣಿವೆಯ ಮೂಲಕ ಹಾದು ಟ್ಯುರಿನ್ ಮತ್ತು ಮಿಲಾನ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಕ್ರಮಬದ್ಧವಾದ ನೌಕಾಸಂಚಾರ ವ್ಯವಸ್ಥೆಯಿಂದಾಗಿ ಅನೇಕ ಬಂದರು ಪಟ್ಟಣಗಳೊಂದಿಗೆ ಸಂಪರ್ಕ ವ್ಯವಸ್ಥೆ ಇದೆ.
ಜೆನೋವದ ಹಳೆಯ ಬಂದರು ಅರ್ಧವೃತ್ತಾಕಾರವಾದ್ದು. ಇದರ ಕೆಲವು ಭಾಗಗಳು 12ನೆಯ ಶತಮಾನದಲ್ಲಿ ಕಟ್ಟಿದವು. 17-18ನೆಯ ಶತಮಾನಗಳಲ್ಲಿ ಇದನ್ನು ವಿಸ್ತರಿಸಲಾಯಿತು. ಇಲ್ಲಿ ಹಡಗಿಗೆ ಸಾಮಾನುಗಳನ್ನು ತುಂಬಲು ಮತ್ತು ಅದರಿಂದ ಇಳಿಸಲು ಅನುಕೂಲವಾಗುವಂತೆಯೂ ಏಕಕಾಲದಲ್ಲಿ ಅನೇಕ ಹಡಗುಗಳನ್ನು ತಂದು ನಿಲ್ಲಿಸಲೂ ಬಂದರಿನ ಪಕ್ಕದಲ್ಲಿ ಉದ್ದಕ್ಕೂ ಅನೇಕ ಸ್ಥಿರ ಇಳಿದಾಣಗಳನ್ನು ನಿರ್ಮಿಸಲಾಗಿದೆ. ಹೊಸ ಬಂದರು ಪ್ರದೇಶ ಜೆನೋವದ ಪಶ್ಚಿಮಕ್ಕಿರುವ ಹೊರವಲಯ ನಗರವಾದ ಸ್ಯಾಂಪೀರ್ ದೆರೆನ ನಗರದಿಂದ ಪೋಲ್ಸೀವೆರ ನದಿಯವರೆಗೊ ಹಬ್ಬಿದೆ. ಇದರ ಒಟ್ಟು ವಿಸ್ತೀರ್ಣ ಸು. 1,300 ಎಕರೆ. ಸು. 75 ಎಕರೆ ಪ್ರದೇಶದ ಉಗ್ರಾಣಗಳು ಇರುವ ಈ ಬಂದರಿನ ಇಳಿದಾಣಗಳ ಉದ್ದ ಸು. 20 ಕಿ.ಮೀ. ಇಲ್ಲಿ ಏಕಕಾಲದಲ್ಲಿ 150ಕ್ಕೊ ಹೆಚ್ಚು ಹಡಗುಗಳು ನಿಲ್ಲುವುದಕ್ಕೆ ಅನುಕೂಲವಿದೆ.
ಹೊಸ ಬಂದರಿನಲ್ಲಿ ಕಚ್ಚಾತೈಲ ಮತ್ತು ಅದುರನ್ನು ಇಳಿಸುವ ಏರ್ಪಾಡಿರುವುದರಿಂದ ಇದರ ಸಮೀಪದಲ್ಲೇ ತೈಲಶುದ್ದೀಕರಣಕೇಂದ್ರ ಮತ್ತು ಲೋಹಕೈಗಾರಿಕೆಗಳನ್ನು ಹೆಚ್ಚಾಗಿ ಸ್ಥಾಪಿಸಲಾಗಿದೆ.