ಗರಿಷ್ಟ ಮಾರಾಟ ಬೆಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗರಿಷ್ಟ ಮಾರಾಟ ಬೆಲೆ ವಸ್ತುಗಳನ್ನು ತಯಾರಿಸುವ ತಯಾರಕರು ತಮ್ಮ ತಮ್ಮ ವಸ್ತುಗಳಿಗೆ ಒಂದು ಬೆಲೆಯನ್ನು ನಿಗದಿಸುತ್ತಾರೆ. ಆ ಬೆಲೆಯಲ್ಲಿ ತಮಗೆ ಆ ವಸ್ತುವನ್ನು ತಯಾರಿಸಲಾಗುವ ಎಲ್ಲಾ ವೆಚ್ಚಗಳನ್ನು, ಸುಂಕಗಳನ್ನು ಹಾಗೂ ಲಾಭಗಳನ್ನು ಒಳಗೂಡಿಸಿರುತ್ತಾರೆ. ಇಂತಹ ಬೆಲೆಯನ್ನು ಗರಿಷ್ಟ ಮಾರಾಟ ಬೆಲೆ ಎನ್ನುತ್ತಾರೆ. ವೆಚ್ಚಗಳಲ್ಲಿ ಸಾಮಾಗ್ರಿಗಳಿಗೆ ಬಳಸಿರುವ ಪದಾರ್ಥ, ಬಣ್ಣ, ರುಚಿ ಹಾಗೂ ಪೊಟ್ಟಣ ಮಾಡಿ ಮಾರಾಟಕ್ಕೆ ಸಜ್ಜುಗೊಳಿಸಲಾಗುವ ಖರ್ಚು, ದೇಶದಾದ್ಯಂತದ ಮಾರಾಟ ಮಳಿಗೆಗಳಿಗೆ ತಲುಪಿಸಲಾಗುವ ಖರ್ಚು, ಸರಕು ವಿತರಕರಿಗೆ ನೀಡಬೇಕಾದ ಕಮಿಷನ್, ಚಿಲ್ಲರೆ ಮಾರಾಟಗಾರರ ಲಾಭಾಂಶ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಸುಂಕಗಳಲ್ಲಿ ಮೌಲ್ಯವರ್ಧಿತ ತೆರಿಗೆ ಹಾಗೂ ಮಾರಾಟ ತೆರಿಗೆಗಳು ಒಳಗೊಂಡಿರುತ್ತದೆ. ಈ ಪದ್ದತಿಯನ್ನು ಕೇವಲ ಭಾರತ ದೇಶದಲ್ಲಿ ಮಾತ್ರ ಅಳವಡಿಸಲಾಗಿದೆ.

ಗರಿಷ್ಟ ಮಾರಾಟ ಬೆಲೆ

ಆಡಳಿತ ಕಾನೂನು[ಬದಲಾಯಿಸಿ]

ದಿ ಕನ್ಸ್ಯೂಮರ್ ಪ್ರೊಟೆಕ್ಷನ್ ಆಕ್ಟ್ 1991
  • ಗರಿಷ್ಟ ಚಿಲ್ಲರೆ ಬೆಲೆ ಆಕ್ಟ್, ೨೦೦೬, ಬೇರ್ ಆಕ್ಟ್[೧]

ಬಳಕೆ[ಬದಲಾಯಿಸಿ]

ಗರಿಷ್ಟ ಮಾರಾಟ ಬೆಲೆಯನ್ನು ಎಲ್ಲಾ ಗೃಹ ಬಳಕೆ ವಸ್ತುಗಳ ಮೇಲೆ ಹೊರೆಸುತ್ತಾರೆ. ಕೆಲವು ಗೃಹ ಬಳಕೆ ವಸ್ತುಗಳ ಉದಾಹರಣೆಗಳು:

ಎಲೆಕ್ಟ್ರಿಕಲ್ ಸಾಮಾಗ್ರಿಗಳು ಅಡುಗೆ ಸಾಮಾಗ್ರಿಗಳು ಇತರೇ ಸಾಮಾಗ್ರಿಗಳು
ಫ್ರಿಡ್ಜ್ ಎಣ್ಣೆ ಮೇಜು
ವಾಷಿಂಗ್ ಮೆಷಿನ್ ತುಪ್ಪ ಕುರ್ಚಿ
ಮೈಕ್ರೊವೇವ್ ಓವನ್ ಹಾಲು ಕನ್ನಡಿ
ಮೊಬೈಲ್ ಅಕ್ಕಿ ಹಾಸಿಗೆ
ದೂರದರ್ಶನ ಗೋಧಿ ಪುಸ್ತಕ
ಐರನ್ ಬಾಕ್ಸ್ ಚಾಕಾಲೇಟು ಬಟ್ಟೆ
ಪಂಖ ಹಣ್ಣು ಚೀಲ
ಒಲೆ ತರಕಾರಿ ಸೀಸದಕಡ್ಡಿ

ಬೆಲೆ ನಿರ್ಧಾರ[ಬದಲಾಯಿಸಿ]

ಒಂದು ಸಾಮಾಗ್ರಿ ಅಥವಾ ಪದಾರ್ಥವನ್ನು ತಯಾರು ಮಾಡಲು ನಿಜವಾಗಿ ಆಗುವ ವೆಚ್ಚ, ಅವುಗಳಿಗೆ ಬಳಸಿದ ಸಾಮಾನುಗಳ ವೆಚ್ಚ, ಜೊತೆಗೆ ಮಾರಾಟ ತೆರಿಗೆ, ಇತ್ಯಾದಿಗಳ ಲೆಕ್ಕಾಚಾರ ಹಾಕಿ ಅದಕ್ಕಿಂತಲೂ ಸಾಮಾಗ್ರಿಗಳಿಗೆ ಅನುಗುಣವಾಗಿ ಶೇಕಡ ೬ ರಿಂದ್ ೧೭ರಷ್ಟು ಹೆಚ್ಚಿನ ಬೆಲೆಯನ್ನು ಗರಿಷ್ಟ ಮಾರಾಟ ಮಿತಿಯ ರೂಪದಲ್ಲಿ ನಿಗದಿ ಮಾಡಿ "ಎಂ ಆರ್ ಪಿ"ಯನ್ನು ನಿರ್ಧರಿಸುತ್ತಾರೆ.
ಉದಾಹರಣೆ: ಒಂದು ಕೆ.ಜಿ ಅಕ್ಕಿ ತಯಾರಿಸಲು ನಿಜವಾಗಿ ತಗಲಿರುವ ವೆಚ್ಚ ೧೦೦ ರೂಪಾಯಿಗಳಾದರೂ ಅದಕ್ಕೆ ೧೦೬ ರೂಪಾಯಿಗಳಿಂದ ೧೧೭ ರೂಪಾಯಿಗಳವರೆಗೂ ನಿಗದಿ ಮಾಡಲಾಗುತ್ತದೆ.
ಹೀಗೆ ನಿರ್ಧರಿಸಿರುವ ಬೆಲೆಗಿಂತಲೂ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಬಾರದು; ಮಾಡಿದರೆ ಅಂತಹ ವ್ಯಾಪಾರಿ ಶಿಕ್ಷೆಗೆ ಅರ್ಹರಾಗುತ್ತಾನೆ.

ರಿಯಾಯಿತಿ[ಬದಲಾಯಿಸಿ]

ಗರಿಷ್ಟ ಮಾರಾಟ ಬೆಲೆಗಿಂತಲೂ ಕಡಿಮೆ ಬೆಲೆಯಲ್ಲಿ ಸಾಮಾಗ್ರಿಗಳನ್ನು ಮಾಡಿದರೆ ಅಂತಹ ಬೆಲೆಯನ್ನು ರಿಯಾಯಿತಿ ಬೆಲೆ ಎಂದು ಕರೆಯಲಾಗುತ್ತದೆ. ಎಂ ಆರ್ ಪಿ ಹಾಗೂ ರಿಯಾಯಿತಿ ಬೆಲೆಯ ನಡುವಿನ ಅಂತರವೇ ರಿಯಾಯಿತಿ (ಡಿಸ್ಕೌಂಟ್). ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಿಗಳು ತಮ್ಮ ಸರುಕುಗಳನ್ನು ಇಂತಹ ರಿಯಾಯಿತಿ ಬೆಲೆಯಲ್ಲಿ ಮಾರುತ್ತಾರೆ. ಇಂದಿನ ಯುಗ ಸ್ಪರ್ಧಾತ್ಮಕ ಮಾರುಕಟ್ಟೆ ಯುಗ. ಗ್ರಾಹಕರು ಕೂಡ ಬಹಳ ಚುರುಕಾಗಿದ್ದಾರೆ. ತಮಗೆ ಕಡಿಮೆ ಬೆಲೆಯಲ್ಲಿ ಸಾಮಾಗ್ರಿಗಳನ್ನು ಮಾರುವವರ ಬಳಿಯೇ ಗ್ರಾಹಕರು ಖರೀದಿಸುತ್ತಾರೆ. ಆದ್ದರಿಂದ ಮಾರಾಟಗಾರ "ಗರಿಷ್ಟ ಮಾರಾಟ ಬೆಲೆ"ಗೆ ಮಾರುವುದರ ಬದಲು ಬೇರೆ ಪ್ರತಿಸ್ಪರ್ಧಿ ಮಳಿಗೆಗಳಿಗಿಂತ ಸ್ವಲ್ಪ ಕಡಿಮೆ ಬೆಲೆಗೇ ಮಾರಾಟ ಮಾಡುತ್ತಾರೆ.

ಎಂ ಆರ್ ಪಿ ಕಾನೂನು[ಬದಲಾಯಿಸಿ]

  • ಪೊಟ್ಟಣಗಳಲ್ಲಿ ಮಾರಾಟ ಮಾಡುವ ಪ್ರತಿಯೊಂದು ವಸ್ತುವಿನ ಮೇಲೆ ಕಡ್ಡಾಯವಾಗಿ ಗರಿಷ್ಟ ಮಾರಾಟ ಬೆಲೆಯನ್ನು ನಿಗದಿ ಮಾಡಿರಬೇಕು.
  • ಪೊಟ್ಟಣ ವಸ್ತುಗಳನ್ನು ಪೊಟ್ಟಣದ ಮೇಲೆ ನಮೂದಿಸಿರುವ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರುವಂತಿಲ್ಲ.
  • ಪೊಟ್ಟಣ ವಸ್ತುಗಳ ಮೇಲಿನ ಗರಿಷ್ಟ ಮಾರಾಟ ಬೆಲೆಯನ್ನು ಬಿಲ್ಲೆ ಅಂಟಿಸಿಯೋ ಅಥವಾ ತಿದ್ದಿಯೋ ಬದಲಾಯಿಸುವಂತಿಲ್ಲ.
  • ಗರಿಷ್ಟ ಮಾರಾಟ ಬೆಲೆಯನ್ನು ನೀಡುವಾಗ ಅದರ ಜೊತೆಗೇ ಪೊಟ್ಟಣದಲ್ಲಿರುವ ವಸ್ತುವಿನ ನಿವ್ವಳ ಅಳತೆ ಅಥವಾ ತೂಕವನ್ನು ಕಡ್ಡಾಯವಾಗಿ ಪ್ರಕಟಿಸಲೇಬೇಕು.
  • ಪೊಟ್ಟಣ ಮಾಡಿದ ವಸ್ತುಗಳ ಇನ್ನಿತರ ವಿವರಗಳನ್ನು ಪ್ರಮಾಣ ಬದ್ಧ ಮಾನಕಗಳಲ್ಲಿ ನೀಡಬೇಕು.

ಉದಾಹರಣೆ: ಹಾಲಿನ ಪೊಟ್ಟಣದ ಮೇಲೆ ಆ ಪೊಟ್ಟಣದ ತೂಕವನ್ನು ನಮೂದಿಸಲೇಬೇಕು.

  • ಪೊಟ್ಟಣಗಳಲ್ಲಿನ ವಸ್ತುಗಳ ತಯಾರಕ, ಪ್ಯಾಕರ್ ಅಥವಾ ಆಮದುದಾರರ ಹೆಸರು ಮತ್ತು ವಿಳಾಸ ಕಡ್ಡಾಯವಾಗಿ ನಮೂದಿಸಿರಬೇಕು.
  • ತಯಾರಾದ, ಕಂತೆ ಮಾಡಿದ ಅಥವಾ ಆಮದಾದ ತಿಂಗಳು ಮತ್ತು ವರ್ಷವನ್ನು ಸ್ಪಷ್ಟವಾಗಿ ಮುದ್ರಿಸಿರಬೇಕು.
  • ಪೊಟ್ಟಣದ ಗರಿಷ್ಟ ಚಿಲ್ಲರೆ ಮಾರಾಟ ಬೆಲೆ ರೂಪಾಯಿಗಳಲ್ಲಿ ನಮೂದಿಸಿರಬೇಕು. (ಎಲ್ಲ ತೆರಿಗೆಗಳು ಸೇರಿ)
  • ಗ್ರಾಹಕ ಕುಂದುಕೊರತೆ ವಿಚಾರಣಾ ವ್ಯಕ್ತಿ, ಕೇಂದ್ರದ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು.
  • ಗ್ರಾಹಕರು ಕಡ್ಡಾಯವಾಗಿ ರಸೀದಿ ಪಡೆಯಬೇಕು. ಮಾರಾಟದಲ್ಲಿ ಮೋಸ ನಡೆದಿದೆ ಎಂದಾದರೆ ಸಂಬಂಧಿತ ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲು ಮಾಡಬೇಕು.

ಪ್ರಕರಣ ಅಧ್ಯಯನ[ಬದಲಾಯಿಸಿ]

M/s ಕಾರ್ಗೋ ಟಾರ್ಪಾಲಿನ್ ಇಂಡಸ್ಟ್ರೀಸ್ ಮತ್ತು ಶ್ರೀ ಮಲ್ಲಿಕಾರ್ಜುನ್ ಬಿ.ಕೋರಿ [೨][ಬದಲಾಯಿಸಿ]

ಈ ಪ್ರಕರಣೆಯಲ್ಲಿ ಮಲ್ಲಿಕಾರ್ಜುನ್ ಎನ್ನುವವನು ಕಾರ್ಗೋ ಟಾರ್ಪಾಲಿನ್ ಕಂಪನಿಯಿಂದ ರಬ್ಬರ್ ಶೀಟನ್ನು ಖರೀಧಿಸಿದ. ಅದರ ಮೇಲೆ ಗರಿಷ್ಟ ಮಾರಾಟ ಬೆಲೆ ೯೨ ರೂಪಾಯಿಗಳೆಂದು ನಿಗದಿಸಿದ್ದರು. ಆದರೆ ಮಾರಾಟಗಾರ ವಸ್ತುವಿನ ಬೆಲೆ ೧೨೪ ರೂಪಾಯಿಗಳು ಎಂದು ಹೇಳಿ, ಆ ಬೆಲೆಯ ಮೇಲೆ ರಿಯಾಯಿತಿ ನೀಡಿರುವೆ ಎಂದು ಹೇಳಿ ರಬ್ಬರ್ ಶೀಟನ್ನು ೧೧೨ ರೂಪಾಯಿಗಳಿಗೆ ಮಾರಾಟ ಮಾಡಿದ. ೯೨ ರೂಪಾಯಿಗಳ ಚೀಟಿ ಹಳೇ ಚೀಟಿಯಾಗಿದ್ದು ೧೨೪ ರೂಪಾಯಿಗಳು ಇಂದಿನ ಬೆಲೆ ಎಂದು ಕಾರಣ ನೀಡಿದ. ಈ ಸಂದರ್ಭದಲ್ಲಿ ಗ್ರಾಹಕ ಸಂರಕ್ಷಣಾ ವೇದಿಕೆಯು, ಮಲ್ಲಿಕಾರ್ಜುನನ ವಾದವನ್ನು ಸ್ವೀಕರಿಸಿ ಮಾರಾಟಗಾರ ಗ್ರಾಹಕನನ್ನು ಮೋಸ ಮಾಡುವ ಇರಾದೆಯಿಂದಲೇ ಈ ಕಾರ್ಯವನ್ನು ಕೈಗೊಂಡನೆಂದು ನಿರ್ಧರಿಸಿ ಅವನಿಗೆ ೧೦೦೦೦ ರೂಪಾಯಿಗಳನ್ನು ದಂಡನೆ ನೀಡಿದರು.ಗರಿಷ್ಟ ಮಾರಾಟ ಬೆಲೆಯೂ ಉತ್ಪಾದನೆಯ ಬೆಲೆ ಹೆಚ್ಚಿರುವುದರಿಂದಲು ಹಾಗೂ ವಸ್ತುಗಳನ್ನು ರವಾನಿಸುವ ಖರ್ಚು ಹೆಚ್ಚಿರುವುದರಿಂದಲು ೯೨ ರಿಂದ ೧೨೪ ರೂಪಾಯಿಗಳಿಗೆ ಏರಿರಬಹುದು. ಆದರೆ, ಈ ಏರಿಕೆ ಕೇವಲ ಹೊಸ ಸ್ಟಾಕಿನ ಮೇಲೆ ಕಾರ್ಯಗತಗೊಳ್ಳುತ್ತದೆ. ಹಳೆಯ ಸ್ಟಾಕಿನ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯೂ ಇರುವುದಿಲ್ಲವೆಂದು ಗ್ರಾಹಕ ಸಂರಕ್ಷಣಾ ವೇದಿಕೆಯು ಸಮರ್ಥಿಸಿತು.

ಬಿಗ್ ಬಜ಼ಾರ್ ಮತ್ತು ನರೇನ್ [೩][ಬದಲಾಯಿಸಿ]

೧೩ ಜೂನ್ ೨೦೧೨, ನರೇನ್ ಎನ್ನುವವರು ೩೦೦೦ ರೂಪಾಯಿಗಳಿಗಿಂತ ಹೆಚ್ಚಿನ ಬೆಲೆಗೆ ಸಾಮಾಗ್ರಿಗಳನ್ನು ಬಿಗ್ ಬಜ಼ಾರ್ ಮಾಲ್‍ನಿಂದ ಖರೀದಿಸಿದರು. ಆ ದಿನದಂದು ಅರಿಶಿನ ಪೊಟ್ಟಣ ಮೇಲೆ ೯೦ ರೂಪಾಯಿಗಳಿದ್ದರೆ ೧೬೦ ರೂಪಾಯಿಗಳೆಂದು ಹಾಗೂ ಸಾಬೂನಿನ ಮೇಲೆ ೩೦ ರೂಪಾಯಿಗಳೆಂದು ನಿಗದಿಸಿದ್ದರೆ ೪೦ ರೂಪಾಯಿಗಳೆಂದು ರಸೀದಿ ನೀಡಿದ್ದರು. ಈ ಸಂದರ್ಭದಲ್ಲಿ ನರೇನ್ ಮೊಕದ್ದಮೆ ಮಾಡಿದಳು. ಗ್ರಾಹಕ ಸಂರಕ್ಷಣಾ ವೇದಿಕೆ ಬಿಗ್ ಬಜ಼ಾರ್‍ನನ್ನು ದೂಷಿಸಿ ೨೦೦೦೦ ರೂಪಾಯಿಗಳನ್ನು ನರೇನ್‍ಗೆ ಹಾಗೂ ೮೦೦೦೦ ರೂಪಾಯಿಗಳನ್ನು ಗ್ರಾಹಕ ಕಾನೂನು ನೆರವಿಗೆ ನೀಡಬೇಕೆಂದು ಜುಲ್ಮಾನೆ ವಿಧಿಸಿತು.

ಅನುಕೂಲಗಳು[ಬದಲಾಯಿಸಿ]

  • ಹೆಚ್ಚಿನ ಬೆಲೆ ಹೊಣೆಸಲಾಗುವುದಿಲ್ಲ:

ಇಂದಿನ ಮಾರುಕಟ್ಟೆಯ ಪದ್ಧತಿಯಲ್ಲಿ, ಪ್ರತಿಯೊಂದು ಗೃಹ ಬಳಕೆ ವಸ್ತುವಿನ ಮೇಲೂ ಗರಿಷ್ಟ ಮಾರಾಟ ಬೆಲೆಯನ್ನು ನಮೂದಿಸಬೇಕು. ಅದರಿಂದ ವ್ಯಾಪಾರಿಗಳು ಹೆಚ್ಚು ಹಣವನ್ನು ಗ್ರಾಹಕರಿಂದ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.

  • ಒಂದೇ ಬೆಲೆ:

ಉತ್ಪಾದಕರು ತಮ್ಮ ಉತ್ಪಾದನೆಯ ಮೇಲೆ ಗರಿಷ್ಟ ಮಾರಾಟ ಬೆಲೆಯನ್ನು ನಮೂದಿಸಿದ ಕಾರಣದಿಂದ ದೇಶದಾದ್ಯಂತ ಒಂದೇ ಬೆಲೆಗೆ ವಸ್ತುಗಳು ಮಾರಾಟವಾಗುತ್ತವೆ. ಉತ್ಪಾದಕರು ತಮ್ಮ ಬೆಲೆಯನ್ನು ನಿರ್ಧರಿಸುವ ಮೊದಲು ಎಲ್ಲಾ ನಾಡಿನ ತೆರಿಗೆಗಳನ್ನು ಲೆಕ್ಕಕ್ಕೆ ಸೇರಿಸಿಕೊಳ್ಳುತ್ತಾರೆ. ಆದ್ದರಿಂದ ದೇಶದಾದ್ಯಂತ ಒಂದೇ ಬೆಲೆಯನ್ನು ನೀಡಲು ಸಾಧ್ಯವಾಗುತ್ತದೆ. ಇಂತಹ ಬೆಲೆಯನ್ನು ನೀಡುವುದು ಗರಿಷ್ಟ ಮಾರಾಟ ಬೆಲೆಯ ಒಂದು ಮುಖ್ಯ ಗುರಿ.

  • ಗ್ರಾಹಕರ ಹಕ್ಕುಗಳನ್ನು ರಕ್ಷಿಸುತ್ತದೆ:

ಗ್ರಾಹಕರ ಹಕ್ಕುಗಳನ್ನು ರಕ್ಷಿಸಿ, ಅವರನ್ನು ಶೋಷಣೆಯಿಂದ ಕಾಪಾಡುವುದು ಗರಿಷ್ಟ ಮಾರಾಟ ಬೆಲೆಯ ಒಂದು ಮುಖ್ಯ ಉದ್ದೇಶ. ಹಳ್ಳಿ ಹಾಗೂ ಚಿಕ್ಕ ಚಿಕ್ಕ ನಗರಗಳಲ್ಲಿರುವ ಗ್ರಾಹಕರಿಗೆ ವಿವಿಧ ಆಯ್ಕೆಗಳು ಇರುವುದಿಲ್ಲ. ಅಂತಹ ಗ್ರಾಹಕರನ್ನು ವ್ಯಾಪಾರಿಗಳು ಸುಲಭವಾಗಿ ಮೊಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ಒಂದು ಬೆಲೆಯನ್ನು ವಸ್ತುವಿನ ಮೇಲೆ ನಿಗದಿಸಿದ್ದಾಗ ಅದನ್ನು ಮೀರಿ ಅವರು ಮಾರುವಂತಿಲ್ಲ ಹಾಗೂ ಗ್ರಾಹಕರಿಗೆ ಬೆಲೆಯ ಬಗ್ಗೆ ಜಾಗೃತಿ ಮೂಡುತ್ತದೆ.

ಅನಾನುಕೂಲಗಳು[ಬದಲಾಯಿಸಿ]

  • ರವಾನಿಸುವ ಖರ್ಚು:

ಹಳ್ಳಿ ಕಡೆಯ ವ್ಯಾಪಾರಿಗಳು ವಸ್ತುಗಳನ್ನು ತಮ್ಮ ಅಂಗಡಿಗೆ ಸಾಗಿಸಲು ಅತಿಯಾಗಿ ಹಣ ಖರ್ಚು ಮಾಡಬೇಕು. ಆದ್ದರಿಂದ ಅವರಿಗೆ ಬರುವ ಲಾಭ ಕಡಿಮೆಯಾಗುತ್ತದೆ. ಅವರು ಅಂತಹ ಸಮಯದಲ್ಲಿ ಗರಿಷ್ಟ ಮಾರಾಟ ಬೆಲೆಗಿಂತಲೂ ಹೆಚ್ಚಾಗಿ ಹೊಣೆಸಲು ಸಾಧ್ಯವಾಗುವುದಿಲ್ಲ, ಹಾಗೂ ವಸ್ತುಗಳನ್ನು ಸಾಗಿಸದೇ ಇರಲು ಸಾಧ್ಯವಿಲ್ಲ. ಆದ್ದರಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತದೆ.

  • ಕಂದಾಯ ಬೆಲೆ:

ಉತ್ಪಾದಕರು ತಮ್ಮ ಗರಿಷ್ಟ ಮಾರಾಟ ಬೆಲೆಯಲ್ಲಿ ಕಂದಾಯವನ್ನು ಸೇರಿಸಿ ಒಂದು ಬೆಲೆಯನ್ನು ನಿಗದಿಸುತ್ತಾರೆ. ಒಮ್ಮೊಮ್ಮೆ ಆ ನಾಡಿನಲ್ಲಿ ಕಂದಾಯ ಕಡಿಮೆ ತೆಗೆದುಕೊಂಡರೂ ಗ್ರಾಹಕರು ಗರಿಷ್ಟ ಮಾರಾಟ ಬೆಲೆಯನ್ನೇ ನೀಡಬೇಕು.ಆಗ ಅವರು ಹೆಚ್ಚಿನ ಬೆಲೆಯನ್ನು ನೀಡಿದಂತಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2017-12-27. Retrieved 2017-11-06.
  2. https://indiankanoon.org/doc/269225/
  3. http://www.dnaindia.com/money/report-big-bazaar-directed-to-pay-rs-1-lakh-for-overcharging-customer-2159914