ಖಜಾನೆ
ಖಜಾನೆ (ಬೊಕ್ಕಸ) ಎಂದರೆ ಸಂಪತ್ತಿನ ಸಂಗ್ರಹಾಲಯ; ಸರ್ಕಾರಕ್ಕೆ ಹಣ ಪಾವತಿಯಾಗುವ, ಮತ್ತು ಅದು ಪಾವತಿ ಮಾಡುವ ಸ್ಥಳ; ಸರ್ಕಾರದ ಹಣಕಾಸಿನ ವ್ಯವಹಾರಗಳ ಕಾರ್ಯಭಾರ ಹೊತ್ತ ಇಲಾಖೆ (ಟ್ರೆಷರಿ). ಖಜಾನೆ ಇಲಾಖೆಯ ಕಾರ್ಯಕ್ರಮ ಬೇರೆಬೇರೆ ರಾಷ್ಟ್ರಗಳಲ್ಲಿ ಬೇರೆಬೇರೆಯಾಗಿದೆ. ಇಂಗ್ಲೆಂಡಿನ ಸಾರ್ವಜನಿಕ ಹಣಕಾಸಿನ ಆಡಳಿತ ಖಜಾನೆ ಇಲಾಖೆಯನ್ನು ಆಧರಿಸಿದೆ. ಇಂಗ್ಲೆಂಡಿನ ಪ್ರಧಾನಮಂತ್ರಿಯನ್ನು ಖಜಾನೆಯ ಪ್ರಥಮ ಲಾರ್ಡ್ ಎಂದು ಕರೆಯಲಾಗುತ್ತದೆಯಾದರೂ ವಿತ್ತ ಸಚಿವ (ಚಾನ್ಸೆಲರ್ ಆಫ್ ದಿ ಎಕ್ಸ್‌ಚೆಕರ್) ಇದರ ರಾಜಕೀಯ ಅಧಿಪತಿಯಾಗಿರುತ್ತಾನೆ.
ಇಂಗ್ಲೆಂಡಿನಲ್ಲಿ
[ಬದಲಾಯಿಸಿ]ಇಂಗ್ಲೆಂಡಿನ ಖಜಾನೆ ಆಡಳಿತ ಪದ್ಧತಿಯ ಮುಖ್ಯ ಲಕ್ಷಣವೆಂದರೆ, ಹಣಕಾಸಿನ ವಹಿವಾಟಿಗೆಲ್ಲ ಖಜಾನೆ ಕೇಂದ್ರಸ್ಥಾನವಾಗಿದೆ. ಖಜಾನೆಗೆ ತಿಳಿಯದೆ, ಇದರ ಅನುಮತಿಯನ್ನು ಪಡೆಯದೆ ಹಣಕಾಸಿಗೆ ಸಂಬಂಧಿಸಿದ ಯಾವ ಆಡಳಿತ ಕಾರ್ಯವೂ ನಡೆಯುವಂತಿಲ್ಲ. ಇದರಿಂದಾಗಿ ಖಜಾನೆಯ ಆಡಳಿತ ಇಡೀ ರಾಷ್ಟ್ರಕ್ಕೆ ವ್ಯಾಪಿಸಿರುತ್ತದೆ. ಸರ್ಕಾರ ಕೈಗೊಳ್ಳುವ ಯಾವುದೇ ಹಣಕಾಸು ಕಾರ್ಯಗಳ ಮೇಲೆ ಖಜಾನೆಯ ನಿಯಂತ್ರಣ ಇರುತ್ತದೆ. ಇಂಗ್ಲೆಂಡಿನ ವಾರ್ಷಿಕ ಆಯವ್ಯಯದ ತಯಾರಿಕೆ, ಸರಕಾರದ ಹಣವನ್ನು ನಿಯಮಕ್ಕನುಸಾರವಾಗಿ ಉಪಯೋಗಿಸುವುದು, ರಾಷ್ಟ್ರಕ್ಕೆ ವಿವಿಧ ಮೂಲಗಳಿಂದ ಬರುವ ಆದಾಯವನ್ನು ರಕ್ಷಿಸುವುದು ಇವು ಖಜಾನೆ ನಿರ್ವಹಿಸುವ ಮುಖ್ಯ ಕರ್ತವ್ಯಗಳು. ವಿತ್ತಸಚಿವ ಆಯವ್ಯಯ ತಯಾರಿಸುವಾಗ ಖಜಾನೆಯ ನೆರವನ್ನು ಪಡೆದುಕೊಳ್ಳಲೇಬೇಕಾಗುತ್ತದೆ. ಸರ್ಕಾರದ ವಿವಿಧ ಇಲಾಖೆಗಳು ಹಣಕಾಸಿನ ಮುಂಗಡ ಪತ್ರಗಳನ್ನು ತಯಾರಿಸುವಾಗ ಖಜಾನೆಯ ಪರಿಶೀಲನೆ, ಸಲಹೆಗಳಿಗೆ ಬದ್ಧರಾಗಬೇಕಾಗುತ್ತದೆ. ಸರ್ಕಾರದ ಆಡಳಿತ ನೀತಿಗೆ ಅನುಗುಣವಾಗಿ ಆಯವ್ಯಯವನ್ನು ಪರಿಷ್ಕರಿಸುತ್ತದೆ.
ಪ್ರತಿಯೊಂದು ಆಡಳಿತ ವಿಭಾಗಕ್ಕೂ ಅಧಿಕೃತವಾಗಿ ಎಷ್ಟು ಹಣ ಖರ್ಚುಮಾಡಬಹುದೆಂಬುದರ ಬಗ್ಗೆ ಮಂಜೂರಾತಿ ದೊರಕಿದ್ದರೂ ಇಂಗ್ಲೆಂಡಿನ ಹಣಕಾಸು ಆಡಳಿತ ವ್ಯವಸ್ಥೆಯಲ್ಲಿ ಶಾಖೆಗಳು ತಮಗೆ ಇಷ್ಟಬಂದ ರೀತಿಯಲ್ಲಿ ಹಣವನ್ನು ಖರ್ಚು ಮಾಡುವಂತಿಲ್ಲ. ತಮಗೆ ಹಣಕಾಸು ಕಾಯಿದೆಯ ಮೂಲಕ ನಿರ್ಧರಿಸಲಾದ ಹಣವನ್ನು ಇಲಾಖೆಗಳು ಖಜಾನೆಯಿಂದ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಬದಲಿಗೆ ತಮಗೆ ಹಣ ಬೇಕಾದಾಗ, ತಾವು ಮಾಡುತ್ತಿರುವ ಕಾರ್ಯಗಳ ಸರಿಯಾದ ವಿವರಣೆಯನ್ನು ಖಜಾನೆಗೆ ತಿಳಿಸಬೇಕು. ಖಜಾನೆಯ ಅಧಿಕಾರಿಗೆ ಈ ವಿವರಣೆ ಸೂಕ್ತವೆಂದು ಕಂಡುಬಂದರೆ ಮಾತ್ರ ನಿರ್ದಿಷ್ಟ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ. ಖಜಾನೆಯ ಈ ನಿಯಂತ್ರಣ ವ್ಯವಸ್ಥೆಯನ್ನು ಇಂಗ್ಲೆಂಡಿನ ಹಣಕಾಸು ಆಡಳಿತ ವೈಶಿಷ್ಟ್ಯವೆಂದು ಹೇಳಬಹುದು. ಈ ಕ್ರಮದಿಂದಾಗಿ ಇಂಗ್ಲೆಂಡಿನಲ್ಲಿ ತುರ್ತು ಮತ್ತು ಅನಧಿಕೃತ ವೆಚ್ಚಗಳಿಗೆ ಅವಕಾಶ ತೀರ ಕಡಿಮೆ. ಪ್ರತಿಯೊಂದು ಇಲಾಖೆಯ ವೆಚ್ಚದ ಮೇಲೂ ಖಜಾನೆಯ ಹದ್ದುಬಸ್ತಿದ್ದು ಇಲಾಖೆಯ ಪ್ರತಿಯೊಂದು ವೆಚ್ಚ ಬಾಬ್ತೂ ಖಜಾನೆಗೆ ತಿಳಿದಿರುತ್ತದೆ. ಇದರಿಂದಾಗಿ ಇಲಾಖೆಗಳ ಪುನರ್ರಚನೆ, ಹೊಸಹೊಸ ಇಲಾಖೆಗಳ ಸ್ಥಾಪನೆ, ಹೊಸ ಉದ್ಯೋಗ ಸೃಷ್ಟಿ, ವೇತನ, ಬಡ್ತಿ, ಇವೆಲ್ಲ ಆರ್ಥಿಕ ವಿಷಯಗಳ ಮೇಲೂ ಖಜಾನೆಯ ಪರೋಕ್ಷ ನಿಯಂತ್ರಣ ಇದ್ದೇ ಇರುತ್ತದೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ
[ಬದಲಾಯಿಸಿ]ಅಮೆರಿಕ ಸಂಯುಕ್ತ ಸಂಸ್ಥಾನದ ಖಜಾನೆ ವ್ಯವಸ್ಥೆ ಇಂಗ್ಲೆಂಡಿನದಕ್ಕಿಂತ ಭಿನ್ನವಾದ್ದು. ಇದು ವಿಕೇಂದ್ರೀಕೃತ ಪದ್ಧತಿಯನ್ನನುಸರಿಸುತ್ತದೆ. ರಾಜ್ಯ ಖಜಾನೆಗಳು ಮುಖ್ಯವಾಗಿ ಲೆಕ್ಕಪತ್ರವನ್ನಿಡುವ ಯಾಂತ್ರಿಕ ಕ್ರಿಯೆಗಳನ್ನು ಅನುಸರಿಸುತ್ತವೆ. ಆದರೆ ಫೆಡರಲ್ ಸರ್ಕಾರದ ಖಜಾನೆಯ ಕಾರ್ಯವ್ಯಾಪ್ತಿ ದೊಡ್ಡದು. ಇದು ಹಣಕಾಸು ನೀತಿಯನ್ನು ರೂಪಿಸುತ್ತದೆ. ಅದನ್ನು ನಿರ್ಧರಿಸುವುದು, ತೆರಿಗೆ ವಿಷಯಗಳಲ್ಲಿ ರಾಷ್ಟ್ರಾಧ್ಯಕ್ಷನಿಗೆ ಸಲಹೆ ನೀಡುವುದು ಮುಂತಾದ ಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಖಜಾನೆ ವ್ಯವಸ್ಥೆಯಲ್ಲಿ ಫೆಡರಲ್ ಸರ್ಕಾರದ ಖಜಾನೆಯೇ ಕೇಂದ್ರ. ರಾಜ್ಯ ಮಟ್ಟದ ಖಜಾನೆಗಳು ಮತ್ತು ಸರ್ಕಾರದಿಂದ ಅಧಿಕೃತವಾಗಿ ಘೋಷಿತವಾದ ಹಣಕಾಸು ಸಂಸ್ಥೆಗಳು ಖಜಾನೆಯ ಕಾರ್ಯವನ್ನು ನಿರ್ವಹಿಸುತ್ತವೆ.
ಅಮೆರಿಕ ಸಂಯುಕ್ತ ಸಂಸ್ಥಾನದ ಖಜಾನೆ ಇಲಾಖೆಯನ್ನು 1789ರ ಸೆಪ್ಟೆಂಬರ್ 2ರ ಕಾಯಿದೆಯೊಂದರ ಮೂಲಕ ಸ್ಥಾಪಿಸಲಾಯಿತು.[೧] ಫೆಡರಲ್ ಖಜಾನೆ ಇಲಾಖೆಗೆ ರಾಷ್ಟ್ರದ ಇಡೀ ಹಣಕಾಸು ವಿಭಾಗದ ಮೇಲೆ ಹತೋಟಿ ಇರುತ್ತದೆ. ಇದರ ಮುಖ್ಯಸ್ಥ ಖಜಾನೆ ಕಾರ್ಯದರ್ಶಿ. ಇವನ ಮುಖ್ಯ ಕರ್ತವ್ಯಗಳು ಸರ್ಕಾರಕ್ಕೆ ಬರುವ ಆದಾಯವನ್ನು ಉತ್ತಮಪಡಿಸುವ ಯೋಜನೆಗಳನ್ನು ತಯಾರಿಸುವುದು ಮತ್ತು ಸರ್ಕಾರದ ವರಮಾನದ ಮೇಲ್ವಿಚಾರಣೆ ನೋಡಿಕೊಳ್ಳುವುದು. ಇವನು ಸರ್ಕಾರದಿಂದ ಪಾವತಿಯಾಗಬೇಕಾದ ಹಣದ ವಿತರಣೆಗೆ ಅಗತ್ಯ ನಿರ್ದೇಶಗಳನ್ನು ನೀಡುವ ಕಾರ್ಯವನ್ನಲ್ಲದೆ, ಸರ್ಕಾರಕ್ಕೆ ಬರಬಹುದಾದ ಮುಂದಿನ ವರ್ಷದ ಆದಾಯ ಮತ್ತು ವೆಚ್ಚದ ಮುಂಗಡ ಯೋಜನೆಯನ್ನು ಕಾಂಗ್ರೆಸ್‍ಗೆ ತಯಾರಿಸಿಕೊಡುವ ಕಾರ್ಯವನ್ನು ನಿರ್ವಹಿಸುತ್ತಾನೆ. ಖಜಾನೆ ವಿಭಾಗದೊಳಗೆ ಅನೇಕ ಮುಖ್ಯ ಶಾಖೆಗಳು ಮತ್ತು ಬ್ಯೂರೋಗಳು ಹಣಕಾಸಿನ ನಿರ್ದಿಷ್ಟ ಕೆಲಸಕಾರ್ಯಗಳನ್ನು ನಿರ್ವಹಿಸುತ್ತವೆ.
ಅಮೆರಿಕದಲ್ಲಿ ತೆರಿಗೆಗಳು, ಅಂಚೆ ಕಛೇರಿ ಆದಾಯ, ಸಾರ್ವಜನಿಕ ಆಸ್ತಿ ಮಾರಾಟದಿಂದ ಬರುವ ಆದಾಯ, ಇವನ್ನು ಖಜಾನೆ ಅಥವಾ ಉಪಖಜಾನೆ ಅಥವಾ ಅಧಿಕೃತ ಮಾಧ್ಯಮಸಂಸ್ಥೆಗೆ ಸಂದಾಯ ಮಾಡಲೇಬೇಕು. ಖಜಾನೆಯಿಂದ ನ್ಯಾಯಬದ್ಧವಾದ ಸಂದಾಯ ಆಜ್ಞೆಯ ಆಧಾರದ ಮೇಲಲ್ಲದೆ ಯಾವ ಹಣವನ್ನೂ ಪಾವತಿ ಮಾಡುವಂತಿಲ್ಲ. ನ್ಯಾಯಬದ್ಧ ಅನುಮತಿ ದೊರೆತ ಅನಂತರ, ಖಜಾನೆಯ ಕಾರ್ಯದರ್ಶಿ ಪಾವತಿ ಮಾಡಬೇಕಾದ ಹಣವನ್ನು ಸಂಬಂಧಪಟ್ಟ ವಿಭಾಗದ ವಶಕ್ಕೆ ಸಲ್ಲಿಸುತ್ತಾನೆ.
ಭಾರತದಲ್ಲಿ
[ಬದಲಾಯಿಸಿ]ಭಾರತದ ಖಜಾನೆ ವ್ಯವಸ್ಥೆ ಇಂಗ್ಲೆಂಡ್, ಅಮೆರಿಕಗಳ ಖಜಾನೆ ವ್ಯವಸ್ಥೆಗಳಿಗಿಂತ ತೀವ್ರವಾಗಿ ಭಿನ್ನವಾದ್ದು. ಇಂಗ್ಲೆಂಡಿನಲ್ಲಿ ಒಂದೇ ಖಜಾನೆ ಇದ್ದು ಅದು ಹಣಸಂಚಿ ಎನ್ನಿಸಿಕೊಳ್ಳುತ್ತದೆ. ಆದರೆ ಭಾರತದಲ್ಲಿ ಹೀಗೆ ಕೇಂದ್ರೀಕೃತವಾದ ಒಂದೇ ಖಜಾನೆ ಹಣಕಾಸಿನ ಆಡಳಿತ ನಡೆಸುವುದಿಲ್ಲ. ಭಾರತದಲ್ಲಿ ಅಮೆರಿಕದಲ್ಲಿರುವಂತೆ ವಿಕೇಂದ್ರೀಕೃತ ಖಜಾನೆ ವ್ಯವಸ್ಥೆ ಇದೆ. ಭಾರತದ ಪ್ರತಿಯೊಂದು ರಾಜ್ಯದಲ್ಲೂ ಖಜಾನೆ ಕಾರ್ಯಕ್ರಮ ವ್ಯಾಪಕವಾಗಿ ನಡೆಯುತ್ತದೆ. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಜಿಲ್ಲಾ ಖಜಾನೆ ಇದ್ದು, ಇದಕ್ಕೆ ಅನೇಕ ಉಪ ಖಜಾನೆಗಳು ಅಧೀನವಾಗಿರುತ್ತವೆ. ಇಷ್ಟೇ ಅಲ್ಲದೆ ಸ್ಟೇಟ್ ಬ್ಯಾಂಕುಗಳು ಸಹ ಖಜಾನೆ ಕಾರ್ಯವನ್ನು ಭಾಗಶಃ ನಿರ್ವಹಿಸುತ್ತವೆ. ಖಜಾನೆಗಳು ಮತ್ತು ಸ್ಟೇಟ್ ಬ್ಯಾಂಕುಗಳು ಮತ್ತು ಅವುಗಳ ಶಾಖೆಗಳು ಸರ್ಕಾರದ ವಿತ್ತ ಅಧಿಕಾರಿಗಳ ಆಜ್ಞೆಗಳಿಗನುಗುಣವಾಗಿ ಹಣಕಾಸು ಆಡಳಿತ ನಿರ್ವಹಿಸುತ್ತವೆ. ಖಜಾನೆಗಳು, ಉಪಖಜಾನೆಗಳು, ಸ್ಟೇಟ್ ಬ್ಯಾಂಕುಗಳು ಮತ್ತು ಅವುಗಳ ಶಾಖೆಗಳು ಭಾರತದ ಹಣಕಾಸು ಆಡಳಿತದ ನರಮಂಡಲ.
ಪ್ರತಿಯೊಂದು ರಾಜ್ಯ ಖಜಾನೆ ವ್ಯವಸ್ಥೆಗೂ ನಿರ್ದಿಷ್ಟವಾದ ಖಜಾನೆ ನಿಯಮಗಳುಂಟು. ಹಣ ಪಾವತಿ, ಹಣ ಸಂದಾಯ, ಹಣ ಸಂರಕ್ಷಣೆ ಮತ್ತು ಲೆಕ್ಕ ಪತ್ರಗಳ ವಿಷಯದಲ್ಲಿ ಈ ನಿಯಮಗಳನ್ನು ಪ್ರತಿಯೊಂದು ಖಜಾನೆಯೂ ಅನುಸರಿಸಬೇಕು. ಖಜಾನೆಯ ಆಂತರಿಕ ಆಡಳಿತ ಮುಖ್ಯಾಧಿಕಾರಿ ಜಿಲ್ಲಾ ಖಜಾನಾಧಿಕಾರಿ. ಈತ ಖಜಾನೆಯ ಎಲ್ಲ ಆಡಳಿತಕ್ಕೂ ಬಾಧ್ಯ. ಖಜಾನೆಯ ಪ್ರತಿಯೊಂದು ಪಾವತಿಗೂ ಈತನೇ ಜವಾಬ್ದಾರ. ಆದರೆ ಇವನಿಗೆ ಸ್ವತಂತ್ರವಾಗಿ ಪಾವತಿಗಳಿಗೆ ಆಜ್ಞೆ ನೀಡುವ ಅಧಿಕಾರವಿರುವುದಿಲ್ಲ. ಖಜಾನೆಯ ನಿಯಮಗಳಿಗನುಗುಣವಾಗಿ ಮಾತ್ರ ಈತ ಪಾವತಿಗಳನ್ನು ಮಾಡಬಲ್ಲ. ಇವನು ಖಜಾನೆಯ ದೈನಂದಿನ ಲೆಕ್ಕಗಳನ್ನು ನೋಡುವುದು, ಪಾವತಿಗಳು ಮತ್ತು ನಗದು ಲೆಕ್ಕಗಳನ್ನು ಮಹಾಲೇಖಪಾಲನಿಗೆ (ಅಕೌಂಟೆಂಟ್ ಜನರಲ್) ಕಳುಹಿಸುವುದು-ಈ ಕಾರ್ಯವನ್ನು ನಿರ್ವಹಿಸುತ್ತಾನೆ. ತಪ್ಪು ಪಾವತಿಗಳಿಗೆ ಖಜಾನಾಧಿಕಾರಿಯೇ ಸಂಪೂರ್ಣವಾಗಿ ಜವಾಬ್ದಾರ. ಬ್ಯಾಂಕುಗಳು ಖಜಾನೆಯ ಕೆಲಸ ಮಾಡುವ ಕಡೆಗಳಲ್ಲಿ ಖಜಾನೆ ಹಣ ಸ್ವೀಕರಿಸುವುದಿಲ್ಲ, ಪಾವತಿ ಮಾಡುವುದಿಲ್ಲ. ಹೀಗಿರುವಾಗ ಹಣ ಸಂರಕ್ಷಣೆಯ ಜವಾಬ್ದಾರಿ ಜಿಲ್ಲಾ ಖಜಾನೆಗೆ ಇರುವುದಿಲ್ಲ.
ಖಜಾನೆಗೆ ಪಾವತಿಗಳನ್ನು ದ್ವಿಪ್ರತಿ ಚಲನ್‍ಗಳ ಮೂಲಕ ಮಾಡಲಾಗುತ್ತದೆ. ಬ್ಯಾಂಕುಗಳು ಖಜಾನೆಯ ಕೆಲಸ ಮಾಡುವೆಡೆಗಳಲ್ಲಿ, ಬ್ಯಾಂಕುಗಳಲ್ಲಿ ಚಲನ್ ಮೂಲಕ ಖಜಾನೆಗೆ ಹಣ ಸಂದಾಯ ಮಾಡಲಾಗುತ್ತದೆ. ಎಲ್ಲ ಲೆಕ್ಕಗಳಿಗೂ ಸರಿಯಾಗಿ ಹಣ ಪಾವತಿಯಾಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳುವುದು ಜಿಲ್ಲಾ ಖಜಾನಾಧಿಕಾರಿಯ ಕೆಲಸವಲ್ಲ. ಇದು ಆಯಾ ಇಲಾಖೆಯ ಕರ್ತವ್ಯವಾಗಿರುತ್ತದೆ. ಕ್ರಮಬದ್ಧವಾಗಿ ಪಾವತಿಯಾಗಿದೆಯೇ ಇಲ್ಲವೇ ಎಂಬುದನ್ನು ಖಜಾನಾಧಿಕಾರಿ ನೋಡಿಕೊಳ್ಳುತ್ತಾನೆ. ಖಜಾನೆಗೆ ಸಂದಾಯವಾಗುವ ಹಣ ಸರ್ಕಾರದ ಆದಾಯದ ಒಟ್ಟು ನಿಧಿಯೊಳಕ್ಕೆ ಸೇರಿಹೋಗುತ್ತದೆ; ಮತ್ತು ಸರ್ಕಾರದ ಅಗತ್ಯಗಳನ್ನು ಪೂರೈಸುವುದಕ್ಕೆ ಒದಗಿ ಬರುತ್ತದೆ. ಬೇರೆಬೇರೆ ಲೆಕ್ಕಗಳಿಗೆ ಹಣ ಜಮವಾದರೂ ಅದು ಸರ್ಕಾರದ ನಿಧಿಯೊಳಕ್ಕೆ ಸೇರಿಹೋಗುತ್ತದೆಯೇ ಹೊರತು ಇಂಥ ನಿರ್ದಿಷ್ಟ ಇಲಾಖೆಗೆ ಸೇರಿದ ಹಣ ಎಂದು ಖಜಾನೆಯಲ್ಲಿ ಬೇರ್ಪಡುವುದಿಲ್ಲ. ಪ್ರತಿ ಇಲಾಖೆಗೂ ಪ್ರತ್ಯೇಕ ಶಿಲ್ಕು ಲೆಕ್ಕವನ್ನಿಡಬೇಕಾಗಿಲ್ಲದ್ದು ಈ ವಿಧಾನದ ಅನುಕೂಲ.
ಖಜಾನೆಯಿಂದ ಆಗುವ ಹಣ ಪಾವತಿಗಳು ಅಂತಿಮ ಪಾವತಿಗಳ ಸ್ವರೂಪದಲ್ಲಿರುತ್ತದೆ ಅಥವಾ ಮುಂಗಡಗಳಾಗಿರುತ್ತವೆ. ಕೇಂದ್ರ ಸರ್ಕಾರದ ಪರವಾಗಿ ಅಥವಾ ರಾಜ್ಯ ಸರ್ಕಾರದ ಪರವಾಗಿ ಇಂಥ ಪಾವತಿಗಳನ್ನು ಮಾಡಲಾಗುತ್ತದೆ. ಖಜಾನೆ ಸರ್ಕಾರದ ಪರವಾಗಿ ಇಲಾಖೆಗಳಿಗೆ ಮಾಡುವ ಪಾವತಿಗಳು ಬಹಳ ಸರಳ ಸ್ವರೂಪದವಾಗಿರುತ್ತದೆ. ಮಹಾಲೇಖಪಾಲನ ಆದೇಶದ ಮೇರೆಗೆ ತಮಗೆ ಸಂದಾಯವಾಗಬೇಕಾಗಿರುವ ಮೊತ್ತದ ಬಿಲ್ಲನ್ನು ಇಲಾಖೆಗಳು ಖಜಾನೆಗೆ ಒಪ್ಪಿಸುತ್ತದೆ. ಅಕೌಂಟೆಂಟ್ ಜನರಲ್ ಈ ಇಲಾಖೆಗೆ ಎಷ್ಟು ಹಣ ಬಜೆಟ್‍ನಲ್ಲಿ ಸಂದಾಯವಾಗಬೇಕೆಂದಿದೆಯೋ ಅಷ್ಟು ಹಣದ ಪಾವತಿಗೆ ಆದೇಶ ನೀಡುತ್ತಾನೆ. ಖಜಾನೆಗಳು ಈ ಆದೇಶವನ್ನನುಸರಿಸಿ ಇಲಾಖೆಗಳ ಬಜೆಟ್ಟನ್ನು ಆದರಿಸುತ್ತವೆ.. ಈ ಬಜೆಟಿನ ಮಿತಿ ಮೀರದಂತೆ ಮಹಾಲೇಖಪಾಲ ಮತ್ತು ಲೆಕ್ಕಶೋಧನ (ಆಡಿಟ್) ನಿಯಂತ್ರಣಾಧಿಕಾರಿಗಳು ಎಚ್ಚರಿಕೆ ವಹಿಸುತ್ತಾರೆ. ಸೈನ್ಯ, ರೈಲ್ವೆ, ಅರಣ್ಯ, ಅಂಚೆ ಮತ್ತು ತಂತಿ ಇವು ತಮ್ಮ ಎಲ್ಲ ಹಣಕಾಸು ಪಾವತಿ ಮತ್ತು ಸಂದಾಯ ಕಾರ್ಯಗಳನ್ನೂ ಖಜಾನೆಗಳ ಮೂಲಕವೇ ನಿರ್ವಹಿಸಬೇಕು.
ರಾಜ್ಯದ ವಿವಿಧ ಭಾಗಗಳಲ್ಲಿರುವ ಉಪ ಖಜಾನೆಗಳು ಜಿಲ್ಲಾ ಖಜಾನೆಗೆ ಅಧೀನವಾಗಿರುತ್ತವೆ. ಅವುಗಳ ಕಾರ್ಯರೀತಿಯೂ ಜಿಲ್ಲಾ ಖಜಾನೆಯಂತೆಯೇ ಇರುತ್ತದೆ. ಅವು ದೈನಂದಿನ ಹಾಗೂ ಮಾಸಿಕ ಲೆಕ್ಕಗಳನ್ನು ತಪ್ಪದೆ ಕ್ರಮಬದ್ಧವಾಗಿ ಜಿಲ್ಲಾ ಖಜಾನಾಧಿಕಾರಿಗೆ ಒಪ್ಪಿಸಬೇಕು. ಎಲ್ಲ ಉಪಖಜಾನೆಗಳ ನಿಯಂತ್ರಣ ಜಿಲ್ಲಾ ಖಜಾನಾಧಿಕಾರಿಗೆ ಸೇರಿದ್ದು. ಜಿಲ್ಲಾ ಖಜಾನೆಯ ಲೆಕ್ಕಪತ್ರಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ರಾಜ್ಯದ ಮಹಾಲೇಖಪಾಲ ನೋಡಿಕೊಳ್ಳುತ್ತಾನೆ. ಭಾರತದ ಪ್ರತಿಯೊಂದು ರಾಜ್ಯದಲ್ಲೂ ಖಜಾನೆಯ ಸ್ವರೂಪ ಒಂದೇ ರೀತಿಯಾಗಿದ್ದರೂ ಆಂತರಿಕ ಲೆಕ್ಕ ನಿರ್ವಹಣೆಯಲ್ಲಿ ಹಲವು ಮಾರ್ಪಾಡುಗಳಿವೆ. ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇಂದ್ರೀಯ ಖಜಾನೆಗಳುಂಟು. ಅವು ಕೇಂದ್ರ ಸರ್ಕಾರದ ಹಣಕಾಸು ಇಲಾಖೆಗೆ ಅಧೀನವಾಗಿರುತ್ತವೆ. ಕೇಂದ್ರೀಕೃತ ಖಜಾನೆ ವ್ಯವಸ್ಥೆಗೆ ಇಂಗ್ಲೆಂಡ್ ಹೇಗೆ ಮಾದರಿಯಾಗಿದೆಯೋ ಹಾಗೆ ವಿಕೇಂದ್ರೀಕೃತ ಖಜಾನೆ ವ್ಯವಸ್ಥೆಗೆ ಭಾರತ ಮಾದರಿಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Image 1 of An act to establish the Treasury department .... [Dated] 1789, July 2. New-York. Printed by Thomas Greenleaf.]". The Library of Congress. 1970-01-01. Archived from the original on December 1, 2022. Retrieved 2022-12-01.