ಕ್ಯೂ ಸಸ್ಯೋದ್ಯಾನ
ಕ್ಯೂ ಸಸ್ಯೋದ್ಯಾನ | |
---|---|
ಚಿತ್ರ:ಪಗೋಡದ ಮಾದರಿಯಲ್ಲಿರುವ ಸಸ್ಯೋದ್ಯಾನ - geograph.org.uk - 227173.jpg | |
ಬಗೆ | Botanical |
ಸ್ಥಳ | London Borough of Richmond upon Thames, England |
ನಿರ್ದೇಶಾಂಕಗಳು | 51°28.480′N 0°17.728′W / 51.474667°N 0.295467°W |
ವಿಸ್ತರಣೆ | 121 hectares (300 acres) |
ಸ್ಥಾಪನೆ | 1759 |
Visitors | more than 1.35 million per year |
ವರ್ಗ | > 30,000 |
ಜಾಲತಾಣ | www |
ಯುನೆಸ್ಕೊ ವಿಶ್ವ ಪರಂಪರೆಯ ತಾಣ ಕ್ಯೂ ಸಸ್ಯೋದ್ಯಾನ | |
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | Cultural |
ಮಾನದಂಡಗಳು | ii, iii, iv |
ಉಲ್ಲೇಖ | 1084 |
ಯುನೆಸ್ಕೊ ಪ್ರದೇಶ | Europe and North America |
ದಾಖಲೆಯ ಇತಿಹಾಸ | |
Inscription | 2003 (27th ಸಮಾವೇಶ) |
ಕ್ಯೂ ಸಸ್ಯೋದ್ಯಾನ ಲಂಡನ್ ನಗರದ ರಾಯಲ್ ಬೊಟಾನಿಕಲ್ ಗಾರ್ಡನ್ನಿನ ಜನಪ್ರಿಯ ಹೆಸರು. ನಗರದ ನೈಋತ್ಯ ದಿಕ್ಕಿನಲ್ಲಿ ಥೇಮ್ಸ್ ನದಿಯ ದಡದ ಮೇಲಿದೆ. ಮೊದಲಿಗೆ ಒಂದು ರಾಜಮನೆತನದ ಜಹಗೀರಾಗಿ ಪ್ರಸಿದ್ಧವಾಗಿತ್ತು. ಅಲ್ಲಿದ್ದ ಕ್ಯೂ ಅರಮನೆಯಿಂದ ಇದಕ್ಕೆ ಈ ಹೆಸರು ಬಂದಿದೆ.
ಆರಂಭ
[ಬದಲಾಯಿಸಿ]16ನೆಯ ಶತಮಾನದ ಕೊನೆಯಲ್ಲಿ ಲಾರ್ಡ್ ಕೇಪೆಲ್ ಎಂಬಾತನ ಆಸಕ್ತಿಯಿಂದ ವಿವಿಧ ಜಾತಿಯ ಸಸ್ಯಗಳ ಸಂಗ್ರಹದೊಡನೆ ಇದು ಆರಂಭವಾಯಿತು. 1759ರ ವೇಳೆಗೆ ಅರ್ಲ್ ಆಫ್ ಬೂತ್ ಎಂಬಾತನ ವೈಜ್ಞಾನಿಕ ಸಾಧನ ಸಹಾಯಗಳಿಂದ ಪ್ರಿನ್ಸೆಸ್ ಅಗಸ್ಟಾ ಎಂಬಾಕೆ ಸುಮಾರು 9 ಎಕರೆ ಪ್ರದೇಶಕ್ಕೆ ವ್ಯಾಪಿಸಿದಂತೆ ಸಸ್ಯೋದ್ಯಾನವನ್ನು ನೆಲೆಯಾರಿಸಿದಳು[೧]. ಕ್ರಮೇಣ ಅದರ ಸುತ್ತಮುತ್ತ ಇದ್ದ ಇನ್ನಷ್ಟು ಜಾಗವನ್ನು ವಶಪಡಿಸಿಕೊಳ್ಳಲಾಯಿತು. 19ನೆಯ ಶತಮಾನದ ಅಂತ್ಯದ ವೇಳೆಗೆ ಅದು 288 ಎಕರೆಗಳಷ್ಟು ಪ್ರದೇಶಕ್ಕೆ ವ್ಯಾಪಿಸಿತು. ಅನಂತರ ಸರ್ ವಿಲಿಯಂ ಚೇಂಬರ್ಸ್ ಎಂಬಾತ ಅಲ್ಲಿ ಒಂದು ಅತ್ಯುತ್ತಮ ಜಾರ್ಜಿಯ ಮಾದರಿಯ ಕಿತ್ತಳೆಹಣ್ಣಿನ ತೋಟವೊಂದನ್ನು ಬೆಳೆಸಿದ. ಅಷ್ಟೇ ಅಲ್ಲದೆ 163' ಎತ್ತರವಿರುವ ಚೀನೀ ಮಾದರಿಯ ಪಗೋಡದಂಥ ಕಟ್ಟಡವೊಂದನ್ನು ಅಲ್ಲಿ ಕಟ್ಟಿಸಿದ[೨]. ಅದು ಈಗ ಉದ್ಯಾನದ ಒಂದು ಪ್ರಮುಖ ಹಾಗೂ ವಿಶಿಷ್ಟ ಹೆಗ್ಗುರುತಾಗಿ ನಿಂತಿದೆ. ಮುಂದೆ ಮೂರನೆಯ ಜಾರ್ಜ್ ದೊರೆ ಸರ್ ಜೋಸೆಫ್ ಬ್ಯಾಂಕ್ಸ್ ಎಂಬಾತನ ಸಹಾಯ ಮತ್ತು ಮಾರ್ಗದರ್ಶನದಲ್ಲಿ ಉದ್ಯಾನವನ್ನು ಮತ್ತಷ್ಟು ವ್ಯವಸ್ಥಿತವಾಗಿ ಬೆಳೆಸಿ, ಊರ್ಜಿತಗೊಳಿಸಿದ. ಸರ್ ಜೋಸೆಫ್ ಬ್ಯಾಂಕ್ಸ್ ಸುಮಾರು 47 ವರ್ಷಗಳ ವರೆಗೆ ಒಂದು ರೀತಿಯಲ್ಲಿ ಇದರ ಮೇಲ್ವಿಚಾರಕನೂ ನಿರ್ದೇಶಕ ನಿಯಂತ್ರಕನೂ ಆಗಿದ್ದ.
ಬೆಳವಣಿಗೆ
[ಬದಲಾಯಿಸಿ]ಇದುವರೆಗೆ ಖಾಸಗಿ ಒಡೆತನದಲ್ಲಿದ್ದ ಈ ಉದ್ಯಾನ 1841ರಲ್ಲಿ ರಾಷ್ಟ್ರದ ಸ್ವತ್ತಾಯಿತು. ಆಗ ಸರ್ ವಿಲಿಯಂ ಹುಕರ್ ಎಂಬಾತ ಅದರ ಮೊದಲ ಸರ್ಕಾರಿ ಅಧಿಕಾರಿ ಮತ್ತು ನಿರ್ದೇಶಕ ಆಗಿ ನೇಮಕವಾದ. ಬರಬರುತ್ತ ಇದು ಜಗತ್ತಿನಲ್ಲೆ ಒಂದು ಮಹತ್ತ್ವದ ಹಾಗೂ ಪ್ರಾಮುಖ್ಯವಾದ ಸಸ್ಯೋದ್ಯಾನ ಸಂಸ್ಥೆಯಾಗಿ ಪರಿಣಮಿಸಿತು. ಹೀಗಾಗಿ 1960ರ ವೇಳೆಗೆ ಜಗತ್ತಿನ ನಾನಾ ಭಾಗಗಳಿಂದ ಸಂಗ್ರಹಿಸಿದ 60,00,000ಕ್ಕೂ ಹೆಚ್ಚು ಅಪೂರ್ವವಾದ ಹಾಗೂ ವಿವಿಧ ಜಾತಿಯ ಸಸ್ಯಗಳನ್ನು ಹರ್ಬೇರಿಯಮ್ ಹಾಳೆಗಳ ಮೇಲೆ ಅಂಟಿಸಿ ಅವುಗಳ ಪ್ರಮುಖ ಮಾಹಿತಿಗಳನ್ನೆಲ್ಲ ಕಲೆಹಾಕಲಾಯಿತು. ಹೊಸ ಹಾಗೂ ಅಪರಿಚಿತ ಸಸ್ಯಗಳೊಂದಿಗೆ ಹೋಲಿಸಿ ನೋಡಲು ಅನುಕೂಲವಾಗುವಂತೆ ಇವನ್ನು ವ್ಯವಸ್ಥಿತ ಹಾಗೂ ವೈಜ್ಞಾನಿಕ ರೀತಿಯಲ್ಲಿ ಸುರಕ್ಷಿತವಾಗಿರಿಸಿದ್ದಾರೆ. ಮೇಲಾಗಿ, ಇಲ್ಲಿ 55 ಸಾವಿರಕ್ಕೂ ಹೆಚ್ಚು ವಿಶೇಷ ಮಾಹಿತಿಗಳುಳ್ಳ ಮತ್ತು ಸಸ್ಯಶಾಸ್ತ್ರದ ವಿವಿಧ ಶಾಖೆಗಳಿಗೆ ಸಂಬಂಧಿಸಿದ ಒಂದು ದೊಡ್ಡ ಪುಸ್ತಕಾಲಯವನ್ನು ನಿರ್ಮಿಸಿದ್ದಾರೆ. ಅಲ್ಲಿ ಮೂರು ದೊಡ್ಡ ವಸ್ತುಪ್ರದರ್ಶನಾಲಯಗಳೂ ಇದ್ದು ಇವನ್ನು ವಿಶೇಷವಾಗಿ ಆರ್ಥಿಕ ಮಹತ್ತ್ವದ ಸಸ್ಯ ಮತ್ತು ಸಸ್ಯೋತ್ಪನ್ನಗಳಿಗೆ ಮೀಸಲಿರಿಸಿದ್ದಾರೆ. ಪ್ರದರ್ಶನಾಲಯಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಪ್ರಯೋಗಾಲಯವೂ ಇದೆ. ಈ ಪ್ರಯೋಗಾಲಯದಲ್ಲಿ ಸಸ್ಯಕೋಶ ಮತ್ತು ತಳಿಸಂಬಂಧದ ಪರಿಶೋಧನೆಗಳ ಜೊತೆಗೆ, ಸಸ್ಯಗಳ ಪ್ರಮುಖ ರಚನಾ ವೈವಿಧ್ಯಗಳನ್ನೂ ಅದಕ್ಕಿಂತಲೂ ಹೆಚ್ಚಾಗಿ ಸಸ್ಯಗಳ ವರ್ಗೀಕರಣದ ಬಗೆಗೂ ವಿಶೇಷ ಅಧ್ಯಯನ ಮತ್ತು ಸಂಶೋಧನೆಗಳನ್ನೂ ವಿಖ್ಯಾತ ಪರಿಣತರ ಸಹಾಯದಿಂದ ನಡೆಸುತ್ತಾರೆ. ವಿವಿಧ ವರ್ಗಗಳ ಸಜೀವ ಮಾದರಿ ಸಸ್ಯಗಳ ಸಂಗ್ರಹ ಸುಮಾರು 40ಸಾವಿರಕ್ಕೂ ಮಿಕ್ಕಿದೆ.
ವ್ಯವಸ್ಥೆಗಳು
[ಬದಲಾಯಿಸಿ]ಅಲ್ಲಿರುವ ಹಲವಾರು ವಿಶಿಷ್ಟ ತಂಪುಮನೆಗಳು, ಅಂದರೆ ಕೋಮಲ ಸಸ್ಯಗಳನ್ನು ಬೆಳೆಸುವ ಗಾಜಿನ ಮನೆಗಳು, ಹೆಚ್ಚು ದಾಢ್ರ್ಯವಿಲ್ಲದ ಮತ್ತು ತಂಪು ಪ್ರದೇಶದಲ್ಲಿಯೇ ಬೆಳೆಯುವ ಸಸ್ಯಗಳಿಗೆ ಆಶ್ರಯ ನೀಡಿವೆ. ಇವುಗಳ ಪೈಕಿ ಅತ್ಯಂತ ದೊಡ್ಡದಾದ ಒಂದು ಗಾಜಿನ ಮನೆಗೆ ಸಮಶೀತೋಷ್ಣ ಗೃಹ ಎಂದು ಹೆಸರು. ಇದು ಸುಮಾರು 1/8 ಮೈಲಿ ಉದ್ದ ಇದೆ. ಮತ್ತೊಂದು ಗಾಜಿನ ಮನೆಗೆ ಪಾಮ್ ಹೌಸ್ ಎಂದು ಹೆಸರಿಡಲಾಗಿದೆ. ಇದನ್ನು 1848ರಲ್ಲಿಯೇ ನಿರ್ಮಿಸಲಾಯಿತು. ಇವೆರಡೂ ಗಾಜಿನ ಮನೆಗಳು ಡೆಸಿಮಸ್ ಬರ್ಟನ್ ಎಂಬಾತನಿಂದ ನಿಯೋಜಿಸಲ್ಪಟ್ಟವು. ಪಾಮ್ ಹೌಸ್ನಲ್ಲಿ ಜಗತ್ತಿನ ನಾನಾ ಭಾಗಗಳಲ್ಲಿ ಬೆಳೆಯುವ ತೆಂಗಿನ ಜಾತಿಯ ಗಿಡಗಳನ್ನೂ ವೃಕ್ಷರೂಪದ ಫರ್ನ್ ಗಿಡಗಳನ್ನು ಮತ್ತು ಸೈಕಾಸ್ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ. ಇನ್ನು ಕೆಲವು ತಂಪುಗೃಹಗಳಲ್ಲಿ ಉಷ್ಣವಲಯದ ಆರ್ಕಿಡ್ ಸಸ್ಯಗಳು, ಮೃದು ಹಾಗೂ ರಸಭರಿತ ಗಿಡಗಳು ಮತ್ತು ಫರ್ನ್ ಗಿಡಗಳನ್ನು ಬೆಳೆಸಲಾಗಿದೆ. ಅತ್ಯುತ್ತಮ ಹಾಗೂ ಬೃಹತ್ ಸಂಗ್ರಹಕ್ಕೆ ಇದು ಮಾದರಿ ನಿದರ್ಶನವಾಗಿದೆ. ಮತ್ತೊಂದು ಗೃಹವನ್ನು (ಆಸ್ಟ್ರೇಲಿಯನ್ ಹೌಸ್) ಅಲ್ಯುಮಿನಿಯಮ್ ಅಲಾಯ್ ಲೋಹದಿಂದ 1952ರಲ್ಲಿ ರಚಿಸಲಾಯಿತು. ಅಲ್ಲಿ, ಆಸ್ಟ್ರೇಲಿಯ ದೇಶದ ಸಸ್ಯಗಳನ್ನೆಲ್ಲ ಬೆಳೆಸಲಾಗುತ್ತಿದೆ. ಕ್ಯೂ ಉದ್ಯಾನದಲ್ಲಿ ರಬ್ಬರ್ ಪ್ಲಾಂಟೇಷನ್ ಉದ್ದಿಮೆಯನ್ನೂ ಸ್ಥಾಪಿಸಲಾಗಿದೆ. ಅಲ್ಲದೆ ಅನೇಕ ಹೊಸ ಹೊಸ ಜಾತಿಯ ಸಸ್ಯಗಳನ್ನು ಜಗತ್ತಿನ ನಾನಾ ಭಾಗಗಳಿಂದ ತರಿಸಿ, ಬೆಳೆಸಿ, ವಿತರಣೆ ಮಾಡುವ ಮಹತ್ತ್ವದ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಅಂತೆಯೇ ಪರದೇಶಗಳಿಂದ ಇಂಗ್ಲೆಂಡಿಗೆ ಬರುವ ಫಲ, ಬೀಜ, ಸಸ್ಯಗಳಿಗೆಲ್ಲ ಔಷಧ ಸಂಪಡಿಸಿ ಇವು ರೋಗವಿಮುಕ್ತವಾಗಿರುವಂತೆ ಹಾಗೂ ಇವು ರೋಗಪ್ರಸಾರ ಸಾಧನವಾಗದಂತೆ ಎಲ್ಲ ಎಚ್ಚರಿಕೆಗಳನ್ನು ವಹಿಸಲಾಗುತ್ತಿದೆ. ಅಲ್ಲಿಂದ ಪ್ರಕಟವಾಗುವ ಬರೆಹಗಳು ಮತ್ತು ಪುಸ್ತಕಗಳೆಲ್ಲ ಮಾಹಿತಿಗಳನ್ನು ಒಳಗೊಳ್ಳುತ್ತವೆ. ಅದಕ್ಕಾಗಿ ಕ್ಯೂ ಬುಲೆಟಿನ್ಸ್ ಎಂಬ ನಿಯತಕಾಲಿಕಗಳೂ ಇಂಡೆಕ್ಸ್ ಕ್ಯೂವೆನ್ಸಿಸ್ ಎಂಬ ಹೆಸರಿನ ಆಧಾರ ಗ್ರಂಥಗಳೂ ಅನುಕ್ರಮಣಿಕೆಗಳೂ ಕಾಲಕಾಲಕ್ಕೆ ಸಿದ್ಧವಾಗಿ ಪ್ರಕಟಗೊಳ್ಳುತ್ತವೆ. ಇವುಗಳಲ್ಲಿ ಹೊಸ ವಿಷಯಗಳನ್ನು ಕೂಡಿಸಬೇಕಾದಾಗ ಮತ್ತು ಇದ್ದ ಮಾಹಿತಿಗಳನ್ನು ಮಾರ್ಪಡಿಸಿ ಪುನಾರಚಿಸುವ ಆವಸ್ಯಕತೆ ಒದಗಿದಾಗ ಹೊಸ ಹೊಸ ಪರಿಶಿಷ್ಟ-ಪುರವಣಿಗಳನ್ನು ಹೊರಡಿಸಲಾಗುತ್ತದೆ. ಒಟ್ಟಿನಲ್ಲಿ ಕ್ಯೂ ಸಸ್ಯೋದ್ಯಾನ ಜಗತ್ತಿನಲ್ಲೇ ಒಂದು ದೀರ್ಘ ಐತಿಹಾಸಿಕ ಹಿನ್ನೆಲೆಯುಳ್ಳ ಹಾಗೂ ಅದ್ವಿತೀಯವಾದ ಬೃಹತ್ ಸಸ್ಯೋದ್ಯಾನ ಸಂಸ್ಥೆಯೆನ್ನಬಹುದು.
ವಿಶ್ವ ಪಾರಂಪರಿಕ ತಾಣ
[ಬದಲಾಯಿಸಿ]ಇದನ್ನು ೨೦೦೩ರಲ್ಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿ ಘೋಷಿಸಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Royal Botanic Gardens, Kew". World Heritage. UNESCO. Retrieved 24 March 2009.
- ↑ Morley, James (1 August 2002). "''Kew, History & Heritage''". Kew. Archived from the original on 15 ಜೂನ್ 2012. Retrieved 24 April 2012.