ಕನ್ನಡದಲ್ಲಿ ಗಾದೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾದೆಯ ಲಕ್ಷಣಗಳು[ಬದಲಾಯಿಸಿ]

ಗಾದೆಯ ಲಕ್ಷಣಗಳನ್ನು ಒಂದೇ ಮಾತಿನಲ್ಲಿ ಸೂತ್ರೀಕರಿಸಿ ಹೇಳುವುದು ಕಷ್ಟಸಾಧ್ಯವಾದ ಕೆಲಸ. ಏಕೆಂದರೆ ಗಾದೆಯ ವಸ್ತುವ್ಯಾಪ್ತಿ ಅನಂತವಾದುದು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಗಾದೆ ತನ್ನೊಳಗುಮಾಡಿಕೊಳ್ಳದ ವಿಷಯಗಳಿಲ್ಲ. ಅದು ಒಂದು ರೀತಿಯಲ್ಲಿ ಜನಸಾಮಾನ್ಯರ ವಿಶ್ವಕೋಶ. ಪರಂಪರಾನುಗತವಾಗಿ ಬರುವ ಜ್ಞಾನದಿಂದ ಯಾರೋ ಒಬ್ಬ ಅನುಭವಿ ವಿವೇಕಿ ನುಡಿದ ಸಾಮಯಿಕ ಸೂಳ್ನುಡಿ ಜನತೆಯ ಅಂಗೀಕಾರ ಮುದ್ರೆಯನ್ನು ಪಡೆದು, ಪರಿಮಿತ ವಲಯದಲ್ಲಿ ಮೊದಲು ಸಲುವಳಿ ಪಡೆಯುತ್ತದೆ. ಅನಂತರ ಅದರ ಸತ್ತ್ವಕ್ಕೂ ಸ್ವಾರಸ್ಯಕ್ಕೂ ಸತ್ಯತೆಗೂ ಮಾರುಹೋಗುವಂಥ ಇತರ ಜನರೂ ಅದನ್ನು ಬಳಸತೊಡಗುತ್ತಾರೆ. ಹೀಗಾಗಿ ಅದು ಒಂದು ಸಮಾಜದ ಸಾರ್ವಜನಿಕ ಸ್ವತ್ತಾಗಿ ಚಲಾವಣೆಯಾಗುತ್ತದೆ. ಸಂಕ್ಷಿಪ್ತತೆ ಅಥವಾ ಸಂಕೀರ್ಣತೆ, ವಿವೇಚನೆ, ತೀಕ್ಷ್ಣತೆ ಅಥವಾ ಒಗಚುತನ ಹಾಗೂ ಜನಪ್ರಿಯತೆ ಗಾದೆಯ ನಾಲ್ಕು ಪ್ರಮುಖ ಲಕ್ಷಣಗಳು. ಪ್ರತಿಯೊಂದು ಗಾದೆಯೂ ಒಂದು ರೀತಿಯಲ್ಲಿ ಬಿಡಿ ಕವಿತೆ. ಅದರಲ್ಲಿ ಛಂದೋಬದ್ಧತೆ, ಪ್ರಾಸಾನುಪ್ರಾಸ ಆಲಂಕಾರಿಕ ಅಬಿsವ್ಯಕ್ತಿ, ಕಾವ್ಯದ ಬಿಗುಪು, ಬಂಧುರತೆ, ಸೂಚ್ಯಭಾವ ವ್ಯಂಗ್ಯವೈಚಾರಿಕತೆಗಳು ಸಹಜವಾಗಿ ರೂಪುಗೊಂಡಿರುತ್ತವೆ. ಸಾಹಿತ್ಯದ ಸಮಸ್ತ ಚಟುವಟಿಕೆಗಳನ್ನೂ ಸೃಜನಾತ್ಮಕ ಶಕ್ತಿಯನ್ನೂ ಒಳಗೊಂಡಿರುವ ಗಾದೆಯ ಭಾಷೆ ಸಾಂಕೇತಿಕ. ಭಾವ ಬಹುಮಟ್ಟಿಗೆ ರೂಪಕ. ಇವುಗಳಲ್ಲದೆ ನಾಟಕೀಯತೆ ಹಾಗೂ ಸಮತೋಲ ಗುಣಗಳೂ ಗಾದೆಯಲ್ಲಿ ಗೋಚರಿಸುತ್ತವೆ. ಗಾದೆಗಳು ಮಾನವಸ್ವಭಾವಕ್ಕೆ ಒಡ್ಡಿದ ಪ್ರತೀಕಗಳಾಗಿವೆ; ಸಮಾಜದ ಪ್ರತಿಬಿಂಬಗಳಾಗಿವೆ; ಸಂಸ್ಕೃತಿಯ ಪ್ರತಿನಿದಿಗಳಾಗಿವೆ. ಏಕೆಂದರೆ ಅವುಗಳಲ್ಲಿ ಬದುಕಿನ ಎಲ್ಲ ಕ್ಷೇತ್ರಗಳ ಅನುಭವಗಳಿಗೂ ಅಬಿವ್ಯಕ್ತಿ ದೊರೆತಿದೆ. ರೀತಿನೀತಿ, ನಂಬಿಕೆ, ನಡಾವಳಿ, ಆಚಾರವಿಚಾರ ಗಳೆಲ್ಲವನ್ನೂ ಅವು ಒಳಗೊಂಡಿವೆ. 'ವೇದ ಸುಳ್ಳಾದರೂ ಗಾದೆ ಸುಳ್ಳಾಗದು’ ಎಂಬ ಗಾದೆಯೇ ಅವುಗಳ ಅಗ್ಗಳಿಕೆಯನ್ನು ಎತ್ತಿ ಹೇಳುತ್ತದೆ. ‘ಊಟಕ್ಕೆ ಮೊದಲು ಉಪ್ಪಿನಕಾಯಿ; ಮಾತಿಗೆ ಮೊದಲು ಗಾದೆ’ ಎಂಬ ಗಾದೆಯೇ ಗಾದೆಗಳ ತೀವ್ರಾವಶ್ಯಕತೆಯನ್ನು ಒತ್ತಿ ಹೇಳುತ್ತದೆ. ಗಾದೆಯಿಲ್ಲದ ಭಾಷೆಯಿಲ್ಲ; ಭಾಷೆಯಿಲ್ಲದ ಜನಾಂಗವಿಲ್ಲ. ಗಾದೆಗಳ ಮಹತ್ತ್ವವನ್ನು ಅರಿತುಕೊಂಡ; ಯಾವ ವ್ಯಕ್ತಿಯೂ ಅವುಗಳ ಸೌಂದರ್ಯ, ಸಾರ್ಥಕತೆ, ಜೀವಂತಿಕೆಗಳನ್ನು ಮೆಚ್ಚದಿರಲಾರ. ಗಾದೆ ಜೀವನಕ್ಕೆ ಕೇವಲ ವ್ಯಂಜಕ ಮನರಂಜಕ ಸೂಕ್ತಿ ಮಾತ್ರವಲ್ಲ; ಅದು ಸಾರ್ಥಕ ಜೀವನಸೂತ್ರ ಹಾಗೂ ವಿವೇಕದ ದಾರಿದೀಪ. ಗಾದೆ ಬೋದಿಸುವ ಸನ್ಮಾರ್ಗವಿಡಿದು ನಡೆದರೆ ಒಬ್ಬನ ಬಾಳು ಭವ್ಯವೂ ಬೆಲೆಯುಳ್ಳದ್ದೂ ಆಗುವುದರಲ್ಲಿ ಸಂದೇಹವಿಲ್ಲ. ಸಮಾಜದಲ್ಲಿ ಗಾದೆಗಳಿಗೆ ಎಂದಿನಿಂದಲೂ ಮಹತ್ತ್ವ ಸಲ್ಲುತ್ತ ಬಂದಿದೆ. ಗಾದೆಗಳು ವಿದ್ಯಾವಂತರಲ್ಲದ ಆದರೆ ಆಳವಾದ ಜೀವನಾನುಭವವನ್ನುಳ್ಳ ಜನಪದರಿಗೆ ತಮ್ಮ ಅಬಿಪ್ರಾಯಗಳನ್ನು ಮನಮುಟ್ಟುವಂತೆ ಹೇಳಲು ತುಂಬ ಸಹಕಾರಿಯಾಗಿವೆ. ನಿರಂತರ ಚಲಾವಣೆಯೇ ಗಾದೆಯ ಜೀವಂತಿಕೆ ಹಾಗೂ ಶಾಶ್ವತ ಮೌಲ್ಯದ ಮುಖ್ಯ ಕುರುಹು. ಗಾದೆಗಳ ಭಂಡಾರ ನಿಂತ ನೀರಿನ ಮಡುವಿನಂತಲ್ಲ; ಅಪಾರ ಸಾಗರದಂತೆ. ಅದರಲ್ಲಿ ಹಳೆಯ ಹೊಸ ಗಾದೆಗಳ ಸಮ್ಮಿಳನ, ಹುಟ್ಟು, ಸಾವು ನಿತ್ಯವಾಗಿರುತ್ತದೆ. ತಿಳಿಹಾಸ್ಯ, ಕಟುವ್ಯಂಗ್ಯ, ವಿಡಂಬನೆ, ಅನ್ಯೋಕ್ತಿ ಹಾಗೂ ಪಕ್ಷಿಪ್ರಾಣಿ ಪದಾರ್ಥಗಳ ಹೋಲಿಕೆ ಇತ್ಯಾದಿಗಳ ಮುಖಾಂತರ ಗಾದೆಗಳು ವಿವೇಕ ಜಾಗೃತಿಗೊಳಿಸುತ್ತವೆ. ಅವು ಸದಾ ಒಳ್ಳೆಯ ಬುದ್ಧಿಯನ್ನು ಹೇಳುತ್ತಿರಬೇಕೆಂಬ ನಿಯಮವಿದ್ದರೂ ಅಪವಾದಗಳುಂಟು. ಒಟ್ಟಾರೆ ಗಾದೆಗಳು ಮೂರ್ತಿಶಿಲ್ಪದಂತೆ ಸೂಕ್ಷ್ಮ ಹಾಗೂ ಸಂಕೀರ್ಣ ಸ್ವಭಾವವುಳ್ಳ ಸುಭಾಷಿತಗಳು ಎನ್ನಬಹುದು.

ವಿದ್ವಾಂಸರು[ಬದಲಾಯಿಸಿ]

ಗಾದೆಗಳ ಬಗ್ಗೆ ಕನ್ನಡದ ಪ್ರಸಿದ್ಧ ವಿದ್ವಾಂಸರು ವ್ಯಕ್ತಪಡಿಸಿದ ಅಬಿsಪ್ರಾಯಗಳನ್ನು ಸ್ಥೂಲವಾಗಿ ಹೀಗೆ ಕ್ರೋಡೀಕರಿಸಬಹುದು: ‘ತಲೆತಲಾಂತರದಿಂದ ಶೇಖರವಾಗಿರುವ ಅನುಭವವು ಯಾವನಾದರೊಬ್ಬನ ಬಾಯಲ್ಲಿ ಮಾತಾಗಿ ಹೊರಬೀಳುವುದು. ಜನ ಆ ಮಾತಿನ ಸೊಬಗಿಗೂ ಅದರ ಹಿಂದಿರುವ ಅನುಭವಕ್ಕೂ ಮೆಚ್ಚಿ ಅದನ್ನು ನಾಣ್ಯವಾಗಿ ಸಂಗ್ರಹಿಸುವರು. ಅಜ್ಞಾತವಾಗಿ ಅದನ್ನು ಸಾಧ್ಯವಾದಂತೆಲ್ಲ ಅವರಿವರೆನ್ನದೆ ತಿದ್ದುವರು; ಉಜ್ಜಿ ಹೊಳಪಿಕ್ಕುವರು. ಹೀಗೆ ಸಿದ್ಧವಾದ ಮೊಹರೆವಾಕ್ಯವು ಗಾದೆ’ ಎಂದು ದೇವುಡು ನರಸಿಂಹಶಾಸ್ತ್ರಿ ಬರೆದಿದ್ದಾರೆ. ಗಾದೆ ಸಾವಿರ ಮಾತಿನ ಸರದಾರ. ಗಾದೆಮಾತುಗಳೆಂದರೆ ಅಚ್ಚುಕಟ್ಟಾದ ನಿರ್ಣಯಗಳಲ್ಲ; ವಿವೇಕಜಾಗೃತಿ ಉಂಟು ಮಾಡುವ ಸುಭಾಷಿತಗಳು. ಅವು ಒಂದು ಬಗೆಯ ವಕ್ರೋಕ್ತಿಗಳು. ಅವುಗಳ ಧ್ವನಿತಾರ್ಥ ಹಿಡಿಯಲು ವ್ಯಾವಹಾರಿಕ ಜ್ಞಾನದಷ್ಟೇ ಪಾರಮಾರ್ಥಿಕ ತಿಳಿವಳಿಕೆಯೂ ಬೇಕು. ಗಾದೆಗಳು ಧರ್ಮ ಅರ್ಥ ಕಾಮಗಳ ವಿವೇಕಕ್ಕಾಗಿ ನೀಡಿದ ಸೂಕ್ತಿಗಳು. ಗಾದೆಗಳು ಹೊಸ ಸುಭಾಷಿತಗಳ ಮಸೆಗಲ್ಲು; ವಿವೇಕದ ಒರೆಗಲ್ಲು ಎಂದಿದ್ದಾರೆ ದ.ರಾ.ಬೇಂದ್ರೆ.

ಗಾದೆಗಳು ಜೀವನದ ಅನುಭವಗಳಿಂದ ಜನಿತವಾದ ಜಾಣ್ಮೆಯನ್ನು ಸ್ವಾರಸ್ಯವಾಗಿ ಬಹಳ ಕಡಿಮೆ ಪದಗಳಲ್ಲಿ ಅಡಕಮಾಡಿ ಹೇಳುತ್ತವೆ. ಗಾದೆಯ ಮಾತು ಎಂದರೆ ಸಾವಿರಕ್ಕೊಂದು ಮಾತು. ಕಿರಿದರಲ್ಲಿ ಹಿರಿದಾದ ಅರ್ಥವನ್ನು ಅದು ತುಂಬಿಕೊಂಡಿದೆ. ಬಿಂದಿಗೆಯಲ್ಲಿ ಕಡಲನ್ನು ತುಂಬಿದಂತೆ ಲೋಕಾನುಭವ,ಸಂಸ್ಕೃತಿ, ನೀತಿ-ಇವುಗಳ ತ್ರಿವೇಣಿಸಂಗಮವನ್ನು ಅಲ್ಲಿ ಕಾಣಬಹುದು ಎಂಬುದು ಎಂ.ಮರಿಯಪ್ಪಭಟ್ಟರ ಮಾತು. ಒಂದು ಗುಂಪಿನ ಜಾಣ್ಮೆ, ಜೀವನಾನುಭವ, ಅಬಿವ್ಯಕ್ತಿಯ ನವುರು ಗಾದೆಗಳಲ್ಲಿಯ ಹಾಗೆ ಸ್ಪಷ್ಟವಾಗಿ ಜನಪದ ಸಾಹಿತ್ಯದ ಮಿಕ್ಕೆಲ್ಲೂ ಗೋಚರಿಸುವುದಿಲ್ಲ. ಏಕೆಂದರೆ ಗಾದೆ ವಿಶಾಲವಾದ ಜೀವನಾನುಭವದ ಆಧಾರದಿಂದ ರೂಪಗೊಂಡ ಸಂಕ್ಷಿಪ್ತ ಅಬಿವ್ಯಕ್ತಿಯಾಗಿದೆ ಎನ್ನುತ್ತಾರೆ ಹಾ.ಮಾ.ನಾಯಕ.

ಗಾದೆಗಳು ಜನತೆಯ ಸಂಸ್ಕೃತಿಯ ಶಿಲಾಶಾಸನಗಳು. ಅವುಗಳಲ್ಲಿ ಐತಿಹಾಸಿಕ, ಸಾಮಾಜಿಕ, ಪೌರಾಣಿಕ ಅಂಶಗಳು ಕೆತ್ತಲ್ಪಟ್ಟಿವೆ. ಗಾದೆಗಳ ಭಂಡಾರ ಒಂದು ಜನಾಂಗದ ವಿಶ್ವಕೋಶ ಎಂಬುದು ಟಿ.ವೆಂಕಟರಮಣಯ್ಯನವರ ನುಡಿ.

ಅತ್ಯುತ್ತಮವಾದ ಸಹಜ ಗಾದೆಯೊಂದು ಅದು ಹುಟ್ಟಿದ ಸಮಾಜದ ಸಾಂಸ್ಕೃತಿಕ ಐತಿಹಾಸಿಕ ಹಾಗೂ ಧಾರ್ಮಿಕ ಅಂಶಗಳನ್ನು ಗಬಿರ್ಕರಿಸಿಕೊಂಡು ರೂಪುಗೊಂಡಿರುತ್ತದೆ. ಕನ್ನಡದ ಉದ್ದಾಮ ಕವಿಗಳೆಲ್ಲರೂ ತಮ್ಮ ಕೃತಿಗಳಲ್ಲಿ ಇಂಥ ಗಾದೆಗಳನ್ನು ಬಳಸಿಕೊಂಡಿದ್ದಾರೆ. ನಯಸೇನ, ಬಸವಣ್ಣ, ಹರಿದಾಸರು, ಸರ್ವಜ್ಞ ಮುಂತಾದ ಜನತಾಕವಿಗಳು ಜನಪದ ಗಾದೆಗಳನ್ನು ಸೂರೆಮಾಡಿ ತಮ್ಮ ಕೃತಿಗಳಲ್ಲಿ ಅತ್ಯಂತ ಸಾರ್ಥಕವಾಗಿ ಬಳಸಿಕೊಂಡು, ಗಾದೆಗಳಿಗೂ ತಮ್ಮ ಕೃತಿಗಳಿಗೂ ಅಮರತ್ವ ಒದಗಿಸಿದ್ದಾರೆ. ಜ್ಞಾನದ ಆಗರವೂ ಅನುಭವದ ಸಾಗರವೂ ಆದ ಗಾದೆಗಳಲ್ಲಿ ಅನೇಕ ಪ್ರಕಾರಗಳುಂಟು. ಸ್ಥೂಲವಾಗಿ ಅವನ್ನು ಗ್ರಂಥಸ್ಥ ಗಾದೆಗಳು, ಜನಬಳಕೆಯ ಕಂಠಸ್ಥ ಗಾದೆಗಳು ಎಂದು ವಿಂಗಡಿಸಿಕೊಳ್ಳಬಹುದು. ಗ್ರಂಥಸ್ಥ ಗಾದೆಗಳು ಲೇಖಕರ ಗಮನವನ್ನು ಸೆಳೆದುಕೊಂಡು ಅವರ ಗ್ರಂಥಗಳಲ್ಲಿ ಅನೇಕ ಮಾರ್ಪಾಟುಗಳನ್ನು ಹೊಂದಿ ಅಥವಾ ತಮ್ಮ ಮೂಲಸ್ವರೂಪದಲ್ಲೇ ಸೇರ್ಪಡೆಗೊಂಡಂಥವು. ಮತ್ತು ಹೆಚ್ಚಾಗಿ ವಿದ್ಯಾವಂತರ ವರ್ಗದಲ್ಲಿ ಪ್ರಚಾರದಲ್ಲಿರುವಂಥವು. ಇವುಗಳಲ್ಲಿ ಒಂದು ತೆರನಾದ ಏಕರೂಪತೆ, ನಾವೀನ್ಯ ಹಾಗೂ ಬೆಡಗು ಕಾಣಬರುತ್ತದೆ. ಇಂಥ ಅನೇಕ ಗಾದೆಗಳನ್ನು ಪ್ರತಿಭಾವಂತರಾದ ಕವಿಗಳು ತಾವೇ ಸೃಷ್ಟಿಸಿಕೊಂಡು ಬಳಸಿರಬಹುದು ಅಥವಾ ಪ್ರಚಲಿತವಿರುವ ಗಾದೆಗಳನ್ನು ಆರಿಸಿಕೊಂಡು ಅವುಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿಕೊಂಡು ತಮ್ಮ ಕೃತಿಗಳಲ್ಲಿ ಅಳವಡಿಸಿಕೊಂಡಿರಬಹುದು. ಹೇಗೆ ಮಾಡಿದ್ದರೂ ಗ್ರಂಥಸ್ಥ ಗಾದೆಗಳು ಸಂಸ್ಕಾರಗೊಂಡ ಮುತ್ತುರತ್ನಗಳಿದ್ದಂತೆ.

ಗ್ರಂಥಸ್ಥವಾಗದ, ಆದರೆ ಜನಸಾಮಾನ್ಯರ ಆಡುನುಡಿಯಲ್ಲಿ ಧಾರಾಳವಾಗಿ ಬಳಕೆಯಲ್ಲಿರುವ ಗಾದೆಗಳಲ್ಲಿ ಬಹುಪಾಲಿನವು ಹುಟ್ಟುಗಾದೆಗಳು. ಇವು ಪ್ರಾಚೀನತೆ ಹಾಗೂ ಪ್ರಭಾವದ ದೃಷ್ಟಿಯಿಂದ ಅತ್ಯಂತ ಮಹತ್ವವುಳ್ಳವು. ಇವನ್ನು ಯಾರು ಯಾವಾಗ ಸೃಷ್ಟಿಸಿದರೆಂಬುದನ್ನು ಕಂಡುಹಿಡಿಯಲಾಗುವುದಿಲ್ಲ. ಹೀಗೆ ಜನಸಾಮಾನ್ಯರ ಆಡುನುಡಿಯಲ್ಲಿ ಪರಂಪಾರನುಗತವಾಗಿ ಬಳಕೆಯಲ್ಲಿರುವ ಗಾದೆಗಳನ್ನು ಜನಪದ ಗಾದೆಗಳೆನ್ನಬಹುದು. ಅವು ಹುಟ್ಟಿದ ಹಿನ್ನೆಲೆಯಲ್ಲಿರುವ ಒಂದು ಬಗೆಯ ಒರಟುತನ ಅವುಗಳಲ್ಲಿ ಎದ್ದುಕಾಣುತ್ತದೆ. ಆದರೆ ಜನಪದ ಗಾದೆಗಳೆಲ್ಲ ಅಸಂಸ್ಕೃತವಾದ ಅನಾಗರಿಕರ ಅಶ್ಲೀಲ ನುಡಿಗಳೆನ್ನುವಂತಿಲ್ಲ. ವಾಸ್ತವವಾಗಿ ಒಂದು ಭಾಷೆಯಲ್ಲಿ ರೂಡಿsಯಲ್ಲಿರುವ ಗಾದೆಗಳಲ್ಲಿ ಬಹುಪಾಲಿನವು ಜನಪದರಿಂದ ಸೃಷ್ಟಿಸಲ್ಪಟ್ಟವೆಂಬುದು ಅವುಗಳ ಸಮರ್ಥ ವಿಶ್ಲೇಷಣೆಯಿಂದ ಮಾತ್ರ ತಿಳಿದುಬರುತ್ತದೆ. ಮೇಲಿನ ವಿಭಜನೆಯಲ್ಲಿ ಮತ್ತೆ ಗಾದೆಗಳನ್ನು ವ್ಯಾವಸಾಯಿಕ ಗಾದೆಗಳು, ವೈದ್ಯ ಕುರಿತ ಗಾದೆಗಳು, ವೃತ್ತಿಸೂಚಕ ಗಾದೆಗಳು, ನೀತಿಬೋಧಕ ಗಾದೆಗಳು, ನಗೆ ಗಾದೆಗಳು ಇತ್ಯಾದಿಯಾಗಿ ವಿಂಗಡಿಸುತ್ತ ಹೋಗಲು ಸಾಧ್ಯವಿದೆ. ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಂಗಗಳನ್ನು ಸೂಚಿಸುವ ಗಾದೆಗಳೂ ಇಲ್ಲಿ ಕಾಣಸಿಗುತ್ತವೆ. ಆದರೆ ಸಾಮಾಜಿಕ, ಧಾರ್ಮಿಕ ಪರಿಸರವನ್ನು ಸೂಚಿಸುವ ಗಾದೆಗಳ ಸಂಖ್ಯೆ ಹೆಚ್ಚು. (ಪಿ.ಕೆ.ಆರ್.;ಎನ್.ಟಿ.)

ಈ ಹಿನ್ನೆಲೆಯಲ್ಲಿ ಕನ್ನಡ ಗಾದೆಗಳ ವಸ್ತು, ವ್ಯಾಪ್ತಿ, ವೈಶಿಷ್ಟ್ಯಗಳನ್ನು ಸ್ಥೂಲವಾಗಿ ಪರಿಶೀಲಿಸಬಹುದು. ಒಂದು ಗಾದೆ ತಲೆಮಾರಿನಿಂದ ತಲೆಮಾರಿಗೆ, ವ್ಯಕ್ತಿಯಿಂದ ವ್ಯಕ್ತಿಗೆ ಇಳಿದು ಉಳಿದುಬರುವಲ್ಲಿ ಪ್ರಾಸ ಅಥವಾ ಲಯಬದ್ಧತೆ ಬಹು ಮುಖ್ಯ ಕಾರಣವಾಗುತ್ತದೆ. ಎಳೀಲಾರದ ಎತ್ತು ಮೆಳೇ ಮೇಲೆ ಬಿತ್ತು

ಎಂಬ ಈ ಗಾದೆಯಲ್ಲಿ ಆದಿಪ್ರಾಸ ಹಾಗೂ ಅಂತ್ಯಪ್ರಾಸ ಎರಡೂ ಇದ್ದು ಕೇಳುಗನ ಸ್ಮರಣೆಯಲ್ಲುಳಿಯಲು ಸಹಾಯಕವಾಗಿದೆ. ಕೋಗಿಲೆಯಂತದೂ ಕಾಲಬಂದಂಗೆ ಕಾಗೆ ಗೂಡಲ್ಲಿ ಕತೆ ಹಾಕ್ತದೆ, ಮುದ್ದಾದ ಮುದಿಗಂಡ ಮೂರನೆಯೋಳಿಗೆ ಎಂಬ ಗಾದೆಗಳಲ್ಲಿ ಕಂಡುಬರುವ ಕಕಾರ ಮಕಾರಗಳ ಅನುಪ್ರಾಸ ನೆನಪಿನಲ್ಲುಳಿಯಲು ಅನುವಾಗಿದೆ. ಉಪಮೆ, ರೂಪಕ, ಅತ್ಯುಕ್ತಿ, ವಿರೋಧಾಭಾಸ ಮುಂತಾದ ಅಲಂಕಾರವಿಶೇಷಗಳ ಮೂಲಕ ಒಂದು ಅನುಭವವನ್ನು ಮನದಲ್ಲಿ ಅಚ್ಚೊತ್ತಿದಂತೆ ಮೂಡಿಸುವುದು ಗಾದೆಯ ಇನ್ನೊಂದು ಗುಣ. ಅಂಥ ಒಂದು ಗಾದೆಯನ್ನು ಇಲ್ಲಿ ಗಮನಿಸಬಹುದು: ಅತ್ತೆ ಮನೇಲಿ ಹೆಂಗಿದ್ದಿ ಮಗಳೆ ಅಂದ್ರೆ ಮುಳ್ಳಾಗೆ ಹಾದಿ ನಡೆದಂಗೆ ಮೊಳಕೈಗೆ ಚಿಲಕ ಹೊಡೆದಂಗೆ

ಅಂಶಗಳು[ಬದಲಾಯಿಸಿ]

ಪ್ರೀತಿಯಿಂದ ಸಾಕಿದ ಮಗಳು ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಕೆಲವು ದಿನ ಇದ್ದು ತೌರಿಗೆ ಬಂದಿರುತ್ತಾಳೆ. ಬಹುದಿನಗಳಿಂದ ಅಗಲಿದ್ದ ತಾಯಿಗೆ ಮಗಳು ಅತ್ತೆಯ ಮನೆಯಲ್ಲಿ ಹೇಗಿದ್ದಳು ಎಂಬುದನ್ನು ತಿಳಿದುಕೊಳ್ಳುವ ಕಾತರ, ಕುತೂಹಲ; ಮಗಳನ್ನು ಕೇಳುತ್ತಾಳೆ. ಆದರೆ ಮಗಳಿಂದ ಬಂದ ಉತ್ತರ ಮಾತ್ರ ಮಾರ್ಮಿಕವಾಗಿದೆ. ಇಲ್ಲಿ ಬಳಸಿರುವ ಎರಡು ಉಪಮೆಗಳು ಆಕೆ ಅನುಭವಿಸಿದ ಕಷ್ಟಪರಂಪರೆಯನ್ನು ಧ್ವನಿಪುರ್ಣವಾಗಿ ಸಮರ್ಥವಾಗಿ ಚಿತ್ರಿಸುತ್ತವೆ. ಕೆಲವು ಗಾದೆಗಳು ಸಂಸ್ಕೃತಿಯ ಹಿನ್ನೆಲೆಯಲ್ಲಿ ಹುಟ್ಟಿದ್ದು ಆಯಾ ಸಂಸ್ಕೃತಿಯ ಗುಣಾವಗುಣಗಳನ್ನು ಪ್ರತಿಬಿಂಬಿಸುತ್ತವೆ. ತಿರ್ಕೊಂಡು ತಿಂದ್ರು ಕರ್ಕೊಂಡು ಉಣ್ಣು; ಹೂವ ಹಂಚಿ ಮುಡಿ, ಹಣ್ಣ ಹಂಚಿ ತಿನ್ನು ಎಂಬ ಗಾದೆಗಳು ಒಳ್ಳೆಯದು ಎಲ್ಲರಿಗೂ ದೊರಕಬೇಕು, ಯಾವಾಗಲೂ ಒಬ್ಬರಿಗೊಬ್ಬರು ನೆರವಾಗಬೇಕು ಎನ್ನುವ ಅಂಶವನ್ನೂ ಜನಸಾಮಾನ್ಯರ ತ್ಯಾಗಗುಣವನ್ನೂ ನಮ್ಮ ನೆಲದ ಸಂಸ್ಕೃತಿಯನ್ನೂ ಪ್ರತಿನಿದಿsಸುತ್ತವೆ. ತಲೆ ಬಿಟ್ಟು ಸಾಸೇವು ಇಕ್ತಾರ ಎಂಬ ಗಾದೆ ಹಿರಿಯನನ್ನು ಬಿಟ್ಟು ಕಿರಿಯನಿಗೆ ಮದುವೆ ಮಾಡಬಹುದೆ? ಎನ್ನುವ ಅರ್ಥವನ್ನೊಳ ಗೊಂಡಿರುವುದರ ಜೊತೆಗೆ ಕ್ರಮಬದ್ಧವಾದ ಹಂತಗಳನ್ನು ಅನುಸರಿಸಬೇಕು, ಮೊದಲು ಹಿರಿಯದಕ್ಕೆ ಹೆಚ್ಚು ಬೆಲೆಯುಳ್ಳದ್ದಕ್ಕೆ ಮಹತ್ತ್ವ ನೀಡಬೇಕು ಎಂಬ ಅಂಶವನ್ನು ಪರ್ಯಾಯ ವಾಗಿ ಸೂಚಿಸುತ್ತದೆ. ಅಕ್ಕೀ ಮೇಲಾಸೆ ನೆಂಟರ ಮೇಲೆ ಪ್ರೀತಿ ಎಂಬ ಗಾದೆ ಮನಸ್ಸಿಲ್ಲದ ಮನಸ್ಸಿನಿಂದ ಉಪಚರಿಸುವ ಜನರನ್ನು ಕುರಿತು ಹಂಗಿಸಿ ಹೇಳಿದ್ದಾಗಿದೆ. ಜೊತೆಗೆ ಮನೆಗೆ ಬಂದ ಅತಿಥಿಗಳನ್ನು ಪ್ರೀತಿಯಿಂದ ಉಪಚರಿಸಬೇಕು ಎಂಬ ಗೃಹಸ್ಥಧರ್ಮದ ಮರ್ಮವನ್ನು ಈ ಗಾದೆ ಧ್ವನಿಸುತ್ತದೆ. ಅಲ್ಪನಿಗೆ ಐಶ್ವರ್ಯ ಬರೋವತ್ಗೆ ಅರ್ಧ ರಾತ್ರೀಲಿ ಕೊಡೇ ಹಿಡಿಸಿಕಂಡನಂತೆ ಎನ್ನುವ ಗಾದೆ ದಿಡೀರನೆ ಸಾಹುಕಾರನಾದ ವ್ಯಕ್ತಿಯೊಬ್ಬನ ಡಾಂಬಿಕತನವನ್ನೂ ಅವನ ಕುಸಂಸ್ಕೃತಿಯನ್ನೂ ಪ್ರತಿಬಿಂಬಿಸಿದೆ. ಕೀತ ಬೆಳ್ಳಿಗೆ ಉಚ್ಚೆ ಉಯ್ಯೋ ಅಂದ್ರೆ ಜಲ್ಮಾಲ್ ಕಟ್ಟಿ ಆರ್ತಿಂಗ್ಳಾಯ್ತು ಅಂದ್ನಂತೆ. ಈ ಗಾದೆ ವ್ಯಕ್ತಿಯೊಬ್ಬನ ಜಿಪುಣತನದ ಪರಾಕಾಷ್ಠೆಯನ್ನೂ ಅವನ ಸ್ವಾರ್ಥಮನೋಭಾವವನ್ನೂ ಎತ್ತಿಹಿಡಿಯುತ್ತದೆ. ಮನುಷ್ಯ ಸ್ವಾರ್ಥಿ ನಿಜ. ಆದರೆ ಆತನಲ್ಲಿ ಪರೋಪಕಾರ ಗುಣ ಸ್ವಲ್ಪವಾದರೂ ಇರಬೇಕು ಎಂಬ ಅಂಶವನ್ನು ಉಪಮೆಯ ಮೂಲಕ ಗಾದೆ ಸೂಚಿಸುತ್ತದೆ. ಮೇಲುನೋಟಕ್ಕೆ ಗಾದೆ ಅಶ್ಲೀಲವೆನಿಸಬಹುದು. ಆದರೆ ಒಳನೋಟ ಅರ್ಥಗಬಿರ್ತವಾಗಿದೆ. ಬಂಜೆಮನೆ ಚಂದ ಬಸ್ತೀಗುಡಿ ಚಂದ ಎನ್ನುವ ಗಾದೆಯಲ್ಲಿ ಹೊರನೋಟಕ್ಕೆ ಎರಡು ಮನೆಗಳ ಸ್ವಚ್ಫತೆಯನ್ನೂ ಸುಂದರತೆ ಯನ್ನೂ ಕುರಿತು ಆಡುವಂತೆ ತೋರಿದರೂ ಆಂತರಿಕವಾಗಿ ನೆಮ್ಮದಿಯಿಲ್ಲದ ಬದುಕನ್ನೂ ಸಂತೋಷವನ್ನೂ ಕುರಿತು ಹೇಳಿದುದಾಗಿದೆ. ಬಂಜೆಯ ಮನೆ ಸುಂದರವಾಗಿದ್ದ್ರೂ ಅಲ್ಲಿ ನಲಿವಿಲ್ಲ. ಸಂತೋಷವಿಲ್ಲ. ಕಾರಣ ಅವಳಿಗೆ ಮಕ್ಕಳಿಲ್ಲ. ಬಸದಿ ಅಥವಾ ಗುಡಿಯಲ್ಲಿರುವ ದೇವರ ಸಾನ್ನಿಧ್ಯ ಸುಂದರವಾಗಿರುವುದರ ಜೊತೆಗೆ ಶುಭದಾಯಕವ ಆಗಿರುತ್ತದೆ. ಮನಸ್ಸಿಗೆ ನೆಮ್ಮದಿಯನ್ನೂ ಆನಂದವನ್ನೂ ಅದು ನೀಡುತ್ತದೆ. ಒಂದು ವಸ್ತು ಸುಂದರವಾಗಿದ್ದರೆ ಸ್ವಚ್ಫವಾಗಿದ್ದರೆ ಸಾಲದು, ಅದು ಒಳಿತನ್ನುಂಟು ಮಾಡುವುದಾಗಿರಬೇಕು, ಸಂತೋಷವನ್ನು ಕೊಡುವಂಥದ್ದಾಗಬೇಕು ಎಂಬ ಅಂಶವೂ ಈ ಗಾದೆಯಿಂದ ಧ್ವನಿತವಾಗುತ್ತದೆ. ಬದುಕಿದರೆ ಬಾಯ್ ಬಡ್ಕತರೆ; ಕೆಟ್ಟರೆ ತಿಗಾ ಬಡ್ಕತರೆ ಎಂಬ ಗಾದೆ ಹೊಟ್ಟೆಕಿಚ್ಚಿನ ಜನರ, ಅಸೂಯಾಪರರ ಬದುಕಿನ ರೀತಿಯನ್ನು ಹೇಳುತ್ತದೆ. ಅಂಥವರು ಇನ್ನೊಬ್ಬರಿಗೆ ಒಳಿತಾದರೆ ಸಹಿಸಲಾರರು, ಕೆಡುಕಾದರೆ ಅದನ್ನು ಕಂಡು ಸಂತೋಷಪಡುವರು. ಇವರಿಂದ ಸಮಾಜಕ್ಕಾಗಲಿ ನೆರೆಹೊರೆಯವರಿಗಾಗಲಿ ಎಂದೂ ಒಳಿತಾಗುವುದಿಲ್ಲ. ಪ್ರಪಂಚದಲ್ಲಿ ಈ ಮನೋಭಾವದ ಜನರೇ ಸುತ್ತಮುತ್ತ ಹೆಚ್ಚು. ಅವರಿಂದ ದೂರ ಇರಬೇಕು ಎಂದು ಈ ಗಾದೆ ಎಚ್ಚರಿಕೆ ನಿಡುತ್ತದೆ.

ಸಾಹಿತ್ಯಕ ದೃಷ್ಟಿಯಿಂದಲೂ ಗಾದೆಗಳು ಗಮನಾರ್ಹವಾಗಿವೆ. ಅರೀದುಡುಗ ಆರಂಭಮಾಡಿ ವಡೇ ವಲ ಕೂದು ಮೆದೇ ಆಕ್ದ ಎಂಬ ಗಾದೆಯನ್ನು ಗಮನಿಸಬಹುದು. ಬೇಸಾಯದ ತಿಳಿವಳಿಕೆಯಿಲ್ಲದ, ವಿವೇಕವಿಲ್ಲದ ಎಳೆಯ ಪ್ರಾಯದ ಹುಡುಗನ ಆತುರ, ಅಚಾತುರ್ಯ, ಅದರಿಂದಾದ ನಷ್ಟ ಮೊದಲಾದವನ್ನು ಗಾದೆ ಧ್ವನಿಪುರ್ಣವಾಗಿ ಚಿತ್ರಿಸಿದೆ. ವಿವೇಕವಿಲ್ಲದ ಹುಡುಗ ಸಲ್ಲದ ಕೆಲಸ ಮಾಡಿದನೆಂದು ವಾಚ್ಯವಾಗಿ ಹೇಳದೆ ‘ವಡೇ ವಲ ಕೂದು ಮೆದೇ ಆಕ್ದ’ ಎಂದು ಸೂಚ್ಯವಾಗಿ ಹೇಳುವಲ್ಲಿ ಗಾದೆಯಲ್ಲಿ ಸಾಹಿತ್ಯಕ ಸೊಗಸು ಕಂಡುಬರುತ್ತದೆ. ಬಡವನೆಂಡ್ಥಿ ಬೇಲೀ ಉವ್ವ (ಹೂವು). ಈ ಗಾದೆ ಬಡವನ ಹೆಂಡತಿಯ ಸೌಂದರ್ಯವನ್ನೂ ಅವಳ ಅಸಹಾಯಕತೆಯನ್ನೂ ಬಡತನ ಬಡವರಿಗೆ ಎಂಥ ಶಾಪ ಎಂಬುದನ್ನೂ ಸುಂದರವಾಗಿ ಹೇಳುತ್ತದೆ. ಬೇಲಿಯಲ್ಲಿ ಬಿಟ್ಟಿರುವ ಹೂ ದಾರಿಹೋಕರಿಗೆ ಹೇಗೆ ಸುಲಭವಾಗಿ ದೊರೆಯುತ್ತದೆಯೋ ಅದನ್ನು ಹೇಗೆ ಯಾರು ಬೇಕಾದರೂ ಕೊಯ್ದು ಮುಡಿಯುವಲ್ಲಿ ಯಾವ ನಿರ್ಬಂಧವೂ ಇಲ್ಲವೋ ಹಾಗೆಯೇ ಬಡವನ ಹೆಂಡತಿಯ ಪಾಡು ಎಂಬುದನ್ನು ಬೇಲಿ ಉವ್ವ ಎಂಬ ಉಪಮಾನದೊಂದಿಗೆ ಹೇಳಿರುವ ರೀತಿ ಅನನ್ಯವಾಗಿದೆ. ಇಂಥ ಗಾದೆಗಳಲ್ಲಿ ಸಾಹಿತ್ಯಕಾಂಶ ಮಡುಗಟ್ಟಿದೆ.

ವೃತ್ತಿಗೆ ಸಂಬಂದಿsಸಿದ ಗಾದೆಗಳಲ್ಲಿ ಬೇಸಾಯ ಕುರಿತ ಗಾದೆಗಳು ಕನ್ನಡದಲ್ಲಿ ಅಪಾರವಾಗಿ ದೊರೆಯುತ್ತವೆ. ಈ ಗಾದೆಗಳಲ್ಲಿ ರೈತರ ಬೇಸಾಯ ಕ್ರಮ, ಮಳೆಯ ಗುಣಸ್ವಭಾವ, ಮಳೆಗಳ ಬಗೆ, ಪರಿಣಾಮ, ಉಪಯೋಗ ಮೊದಲಾದ ಸಂಗತಿಗಳು ಅನುಭವದ ಹರಳಾಗಿ ಮೂಡಿಬಂದಿವೆ. ಆದದ್ದು ಆದ್ರಿ ಮಳೇಲಿ ಚೆಲ್ಲು; ಮಿಕ್ಕಿದ್ದು ಮಿಕ್ಸಿರಿ (ಮೃಗಶಿರ) ಮಳೇಲಿ ಚೆಲ್ಲು ಎಂಬ ಗಾದೆಯಲ್ಲಿ ಯಾವ ಮಳೆಯಲ್ಲಿ ಹೆಚ್ಚು ಬಿತ್ತಬೇಕು ಎನ್ನುವ ಅಂಶ ಸೂಚಿತವಾಗಿದೆ. ಉತ್ತರೆ ಮಳೆ ಉಯ್ದರೆ ಉತ್ತೆತ್ತು ಉಕ್ಕೆ ದೋಣೀಲಿ ನೀರ್ ಕುಡಿತದೆ; ಉತ್ತರೆ ಮಳೆ ಉಯ್ದರೆ ಉತ್ತೆತ್ತು ನೀರಿಗೆ ಬೀಳ್ತದೆ ಎಂಬ ಈ ಎರಡು ಗಾದೆಗಳು, ಉತ್ತರೆ ಮಳೆಯ ಬಿರುಸು, ಸಮೃದ್ಧಿ ಹಾಗೂ ಆ ಕಾಲದ ಬಿಸಿಲ ಝಳವನ್ನು ಸೂಚಿಸುತ್ತವೆ. ಎತ್ತು ಮಾರು ಮಿಂಚಿದರೆ ಕುರ್ತೇಟು ಮಳೆ ಎನ್ನುವ ಗಾದೆ ಮಳೆಯ ಬಗ್ಗೆ ಜನಪದರಿಗಿರುವ ನಂಬಿಕೆಯೊಂದನ್ನು ಸೂಚಿಸುತ್ತದೆ. ಜೊತೆಗೆ ಜನಪದರು ಹೇಗೆ ಸೂಕ್ಷ್ಮವಾಗಿ ವಾತಾವರಣದ ಬದಲಾವಣೆಯನ್ನು ಗಮನಿಸಿ ಅರಿಯಬಲ್ಲರು ಎಂಬುದಕ್ಕೆ ನಿದರ್ಶನವಾಗಿದೆ. ಅಸಲೇ ಮಳೆ ಕೈತುಂಬ ಬೆಳೆ; ಆರಿದ್ರೆ ಇಲ್ದಿದ್ರೆ ದರಿದ್ರ ಕಂಡಿತ ಎಂಬ ಗಾದೆ ಆಯಾ ಮಳೆಯಿಂದ ರೈತರಿಗೆ ಆಗುವ ಲಾಭನಷ್ಟಗಳನ್ನು ತಿಳಿಸುತ್ತದೆ. ಕೆಬ್ಬೆ ಹೊಲಮಾಡಿದರೆ ಕಿಬ್ಬೊಟ್ಟೆಗೂ ಹಿಟ್ಟು ಸಿಗಲ್ಲ ಎಂಬ ಗಾದೆ ಬೇಸಾಯದ ಮರ್ಮವನ್ನು ಹೇಳುತ್ತದೆ. ಕೆಂಪುಮಣ್ಣಿನಿಂದ ಕೂಡಿದ ಹೊಲಕ್ಕೆ ಹೆಚ್ಚು ನೀರು ಬೇಕು, ಸಾಲದ್ದಕ್ಕೆ ಭೂಮಿಯೂ ಗಟ್ಟಿ. ಉಳುವುದಾಗಲಿ ಬೆಳೆಯುವುದಾಗಲಿ ತೀರ ಕಷ್ಟದ ಕೆಲಸ. ಅಂಥ ಭೂಮಿಯನ್ನು ಸಾಗುವಳಿ ಮಾಡಬಾರದು ಎಂದು ಎಚ್ಚರಿಕೆಯನ್ನು ಈ ಗಾದೆ ನೀಡುತ್ತದೆ. ಬೇಸಾಯ ವಿಷಯ ಕುರಿತಂತೆ ಹುಟ್ಟಿಕೊಂಡ ಗಾದೆ ಕೆಲಮೊಮ್ಮೆ ಪ್ರಾದೇಶಿಕವೂ ಆಗಿರಬಹುದು. ಅನುರಾಧೆ ಮಳೆ ಬಂದರೆ ನಮ್ಮ ರಾಗಿ ನಮ್ಮದು ಎಂಬ ಒಂದು ಗಾದೆ ರಾಗಿ ಹೆಚ್ಚು ಬೆಳೆಯುವ ಪ್ರದೇಶದಲ್ಲಿ ಹುಟ್ಟಿಕೊಂಡದ್ದು ಎಂದು ಹೇಳಬಹುದು. ಹಾಗೆಯೇ ಸ್ವಾತಿಮಳೆ ಬಿದ್ರೆ ಮುತ್ತಿನಂಥ ಜೋಳ ಎಂಬ ಗಾದೆ ಜೋಳವನ್ನು ಹೆಚ್ಚಾಗಿ ಬೆಳೆವ ಪ್ರದೇಶದಲ್ಲಿ ಹುಟ್ಟಿಕೊಂಡದ್ದಿರಬಹುದು.

ಹಾಸ್ಯವನ್ನು ವಸ್ತುವಾಗುಳ್ಳ ಗಾದೆಗಳಲ್ಲಿ ಹಾಸ್ಯ ಕೆಲಮೊಮ್ಮೆ ನವುರಾಗಿ ಮೊನಚಾಗಿ ವಿಡಂಬನಾತ್ಮಕವಾಗಿ ನಿರೂಪಿತವಾಗಿರುವುದುಂಟು. ಕೆಲಮೊಮ್ಮೆ ನಗಿಸುವುದೇ ಗಾದೆಯ ಉದ್ದೇಶವಾಗಿಬಿಡಬಹುದು. ಸಾಯ್ತಿನಿ ಸಾಯ್ತೀನಿ ಅಂತಾ ಸಾವ್ರ ಕೋಳಿ ತಿಂದ, ಮುತ್ತಿನಂಗೆ ಅವನೇ ನನ್ನ ಮುದಿಗಂಡ; ಮುತ್ತಿನಂಥ ಗಂಡ ಮೂರನೆಯವಳಿಗೆ; ಗಂಜೀಗೇ ಗತಿ ಇಲ್ಲ ನಂಜಿಕೋ ಬುಲಾವ್; ಸೆಟ್ಟರೆ ನಿಮ್ಮ ಮಗ ಬಿದ್ದ ಅಂದರೆ ಫಾಯಿದೆ ಕಾಣದೆ ಬಿದ್ದಿರಲಾರ ಎಂದಂತೆ; ಕೈಲಿ ಕಿಸೀದ ಗಂಡ ಮಲಗೋ ಹೊತ್ತಿಗೆ ಸರಿಯಾಗಿ ಮುನಿಸಿಕೊಂಡ; ಹೆಡ್ಡಾ ನಿನಗೆ ಹೆಣ್ಣು ಯಾರು ಕೊಟ್ಟಾರು ಅಂದ್ರೆ ನಮ್ಮನೇಲೇ ನಾಲ್ಕೈದವೆ; ಮದುವೆ ಆಗೋ ಗಂಡಿಗೆ ಅದೇ ಇಲ್ಲ ಅಂದಂಗೆ; ಯಾಲಕ್ಕಿ ಅಂತ ನನ್ನಳಿಯ ಏಳು ಮುದ್ದೆ ಉಂಡ ಮೊದಲಾದ ಗಾದೆಗಳು ಈ ಮಾದರಿಯವು. ನೀತಿಬೋಧೆ ಗಾದೆಯ ಮುಖ್ಯ ಉದ್ದೇಶಗಳಲ್ಲೊಂದು. ಜಲ ನೋಡಿ ಬಾವಿ ತೆಗಿ, ಕುಲ ನೋಡಿ ಹೆಣ್ಣು ತತ್ತ, ಕುಲ ಬಿಟ್ಟರೂ ಸ್ಥಳ ಬಿಡಬಾರದು. ಆಳಾಗಿ ದುಡಿ ಅರಸಾಗಿ ಉಣ್ಣು ಎಂಬ ಗಾದೆಗಳಲ್ಲಿ ಈ ಅಂಶ ಪ್ರಖರವಾಗಿದೆ. ಕೆಲವೊಮ್ಮೆ ಗಾದೆಗಳು ಇತಿಹಾಸವನ್ನು ವಸ್ತುವಾಗಿಸಿಕೊಂಡಿರಬಹುದು. ಹಳ್ಳೀದೇವರ ತಲೆ ಹೊಡೆದು ದಿಳ್ಳೀ ದೇವರ ಡೊಳ್ಳು ಬೆಳೆಸಿದ ಎಂಬ ಗಾದೆ ಮುಸ್ಲಿಂ ರಾಜರು ದಂಡಯಾತ್ರೆ ನಡೆಸಿ ಕೊಳ್ಳೆಹೊಡೆದು ಲೂಟಿ ಮಾಡಿ ಸಂಪತ್ತು ದೋಚಿಕೊಂಡು ಹೋಗಿ ದೆಹಲಿಗೆ ತುಂಬಿಕೊಂಡದ್ದನ್ನು ತಿಳಿಸುವಂತಿದೆ.

ಕುಂತು ಕುಣಿಗಲು ಗೆದ್ದ
ನಿಂತು ಮಾಗಡಿ ಗೆದ್ದ
ಮಾತಿಲ್ಲದೆ ಗೆದ್ದ ಮದುರೇನ

ಎಂಬ ಗಾದೆ ಮಾಗಡಿ ಕೆಂಪೇಗೌಡನಿಗೆ ಸಂಬಂಧಪಟ್ಟದ್ದು. ಇಲ್ಲಿ ಮದುರೆ ಯಾವುದು ಎಂಬ ಸಮಸ್ಯೆ ಉಂಟಾಗುತ್ತದೆ. ಗಾದೆಗಳು ಚಾರಿತ್ರಿಕ ಸಂಶೋಧನೆಗಳಿಗೂ ಸಹಾಯಕವಾಗಬಲ್ಲವು. ಸಂಶೋಧನೆ ನಡೆದರೆ ಗಾದೆಗಳು ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲುವ ಸಾಮಥರ್ಯ್‌ ಹೊಂದಿವೆ.

ಪುರಾಣ ಪುಣ್ಯಕಥೆಗಳ ಪರಿಚಯದಿಂದ ಅವು ತಮ್ಮ ಮೇಲೆ ಬೀರಿದ ಪ್ರಭಾವದಿಂದ ಕನ್ನಡದಲ್ಲಿ ಹಲವಾರು ಪೌರಾಣಿಕ ಗಾದೆಗಳು ಸೃಷ್ಟಿಯಾಗಿವೆ. ಅಳಿಲಸೇವೆ ಮಳಲಭಕ್ತಿ, ಅಂಕೆಯಿಲ್ಲದ ಕಪಿ ಲಂಕೆ ಸುಟ್ಟಿತು. ಹೆಣ್ಣಿನಿಂದ ರಾವಣ ಕೆಟ್ಟ ಮಣ್ಣಿನಿಂದ ಕೌರವ ಕೆಟ್ಟ, ಗಾಂಧಾರಿ ಗರ್ಭ ಗುದ್ದಿಕಂಡಂಗೆ, ಸಾರಂಗಧರನ ಕೈಕಾಲ್ ಕಡಿಸ್ದೋಳು, ಎಂಟನೇ ಶನಿ ಹೆಗಲೇರಿಕಂಡಂಗೆ ಈ ಗಾದೆಗಳು ರಾಮಾಯಣ, ಮಹಾಭಾರತ, ಸಾರಂಗಧರನ ಕಥೆ, ಶನಿ ಮಹಾತ್ಮೆ ಮೊದಲಾದ ಕಥೆಗಳ ಅರಿವಿದ ಹುಟ್ಟಿಕೊಂಡವಾಗಿವೆ. ಗಾದೆಗಳು ಪ್ರಾಣಿವಿಜ್ಞಾನಿಗಳಿಗೆ, ಸಮಾಜಶಾಸ್ತ್ರಜ್ಞರಿಗೆ, ಮಾನವ ಶಾಸ್ತ್ರಜ್ಞರಿಗೆ ಭಾಷಾವಿಜ್ಞಾನಿಗಳಿಗೆ ಸಂಶೋಧನೆಗೆ ಸಾಮಗ್ರಿಯನ್ನೊದಗಿಸಬಲ್ಲವು.

ಅಮ್ಮ ಪಟ್ಟಕ್ಕೆ ಬರುವಾಗ್ಗೆ ಅಪ್ಪ ಚಟ್ಟಕ್ಕೆ
ಆಡೋ ಹುಡುಗಿಗೊಂದು ಕಾಡೋ ಕೂಸು

ಈ ಎರಡು ಗಾದೆಗಳು ಹಿಂದೆ ನಮ್ಮ ಸಮಾಜದಲ್ಲಿ ಅನುಷಾವಿನದಲ್ಲಿದ್ದ ಬಾಲ್ಯವಿಹಾಹಪದ್ಧತಿಯ ಮೇಲೆ ಬೆಳಕು ಚೆಲ್ಲುತ್ತವೆ. ಅಂಬಲಿ ಕುಡಿದೋನು ಮಡಕೆ ಹೊತ್ತಾನೆ ಎಂಬ ಗಾದೆಯಲ್ಲಿ ಮಡಕೆ ಪದ ಭಾಷಾ ವಿಜ್ಞಾನದ ದೃಷ್ಟಿಯಿಂದ ಗಮರ್ನಾಹವಾಗಿದೆ. ಈ ಪದ ಮೂಲತಃ ತೆಲುಗು ಭಾಷೆಯದು. ಅಲ್ಲಿ ಮಡಕಾ ಅಂದರೆ ನೇಗಿಲು ಎಂದರ್ಥ. ತೆಲುಗಿನ ಸಂಪರ್ಕವಿರುವ ಹಿಂದೂಪುರ, ಮಧುಗಿರಿಯ ಕಡೆ ನೇಗಿಲಿಗೆ ಮಡಕೆ ಎಂಬ ಪದವನ್ನು ಬಳಸುತ್ತಾರೆ. ಆ ಪ್ರದೇಶಗಳಲ್ಲಿ ಕನ್ನಡ ಭಾಷೆಯ ಮೇಲೆ ತೆಲುಗಿನ ಪ್ರಭಾವ ಎಷ್ಟರಮಟ್ಟಿಗೆ ಆಗಿದೆ ಎಂಬುದಕ್ಕೆ ನಿದರ್ಶನವಾಗಿದೆ. ಕೊತ್ತಿ ಕೊಂದ ಪಾಪ ತಿತ್ತಿ ಹೊಕ್ಕರೂ ಬಿಡದು ಎಂಬ ಗಾದೆಯಲ್ಲೂ ಅಷ್ಟೆ. ತಿತ್ತಿ ಎಂಬ ಪದ ತಿರುಪತಿ-ತಿರುಪ್ತಿ > ತಿರಿಪ್ತಿ > ತಿಪ್ತಿ > ತಿರ್ತಿ > ತಿತ್ತಿ ಆಗಿರುವಂತೆ ತೋರುತ್ತದೆ. ಬಾಳೆಗೆ ಗೊನೆ ಚೇಳಿಗೆ ಬಸಿರು ಎಂಬ ಗಾದೆ ಪ್ರಾಣಿವಿಜ್ಞಾನದ ದೃಷ್ಟಿಯಿಂದ ಗಮನಾರ್ಹವಾಗಿದೆ. ಚೇಳು ಬಸಿರಾದರೆ ಮರಿ ಹಾಕಿದ ಮೇಲೆ ಸಾಯುತ್ತದೆ ಎಂಬುದು ಜನಪದರ ನಂಬಿಕೆ. ವಾಸ್ತವವಾಗಿ ವೈಜ್ಞಾನಿಕವಾಗಿ ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಇಲ್ಲ ತಿಳಿಯಬೇಕಾಗಿದೆ. ಹಾವು ತನ್ನ ಮೊಟ್ಟೆ ತಾನೆ ತಿಂದ್ಹಂಗೆ ಎಂಬುದು ಇಂಥದೇ ಸಮಸ್ಯೆಯುಳ್ಳ ಇನ್ನೊಂದು ಗಾದೆ. ಈ ತೆರನ ಗಾದೆಗಳು ಕನ್ನಡದಲ್ಲಿ ಹಲವಾರಿವೆ. ಈ ಎಲ್ಲ ದೃಷ್ಟಿಯಿಂದಲೂ ಗಾದೆಗಳ ಅಧ್ಯಯನ ಕಾರ್ಯ ವ್ಯಾಪಕವಾಗಿ ನಡೆಯಬೇಕಾಗಿದೆ.

ಕನ್ನಡದಲ್ಲಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಗಾದೆಗಳಿವೆಯೆಂದು ಅಂದಾಜು ಮಾಡಬಹುದಾಗಿದೆ. ಕನ್ನಡ ಗಾದೆಗಳ ಸಂಗ್ರಹಕಾರ್ಯಕ್ಕೆ ಸುಮಾರು ಒಂದೂಕಾಲು ಶತಮಾನಗಳ ಇತಿಹಾಸವಿದ್ದು ಇದುವರೆಗೆ ಹಲವು ಗಾದೆಗಳ ಸಂಕಲನಗಳು ಪ್ರಕಟವಾಗಿವೆ. 1852ರಲ್ಲಿ ಮಂಗಳೂರಿನಿಂದ ಪ್ರಕಟವಾದ ಕನ್ನಡ ಗಾದೆಗಳು ಕನ್ನಡದ ಪ್ರಪ್ರಥಮ ಗಾದೆಗಳ ಸಂಕಲನ. ಗುಣ ಸಂಖ್ಯೆಗಳೆರಡರಲ್ಲೂ ಮಹತ್ತ್ವದ್ದೆನಿಸಿದ ಈ ಗ್ರಂಥದಲ್ಲಿ 3,457 ಗಾದೆಗಳಿವೆ. ಈ ಕೃತಿ ಗಾದೆಗಳನ್ನು ಸಂಗ್ರಹಿಸುವ ಕಡೆ ಕನ್ನಡಿಗರ ಗಮನ ಸೆಳೆಯಿತು. ಗಾದೆಗಳನ್ನು ಅಕಾರಾದಿಯಾಗಿ ಸಂಕಲಿಸಿ ಪ್ರಕಟಿಸುವ ಕ್ರಮಕ್ಕೂ ಈ ಕೃತಿಯೇ ಮಾರ್ಗದರ್ಶಕವೆನ್ನಬಹುದು. ಅನಂತರ 1874ರಲ್ಲಿ ಮಂಗಳೂರಿನ ಬಾಸೆಲ್ ಮಿಶನ್ ಬುಕ್ ಎಂಡ್ ಟ್ರಾಕ್ಟ್‌ ಡಿಪಾಜಿಟರಿಯವರಿಂದ ಪ್ರಕಟವಾದ ಸಹಸ್ರಗಾಥಾಮೃತ ಕಲಶವು ಒಂದು ಸಾವಿರ ಸುಂದರ ಗಾದೆಗಳ ಸಂಕಲನ. ಇದೇ ಪ್ರಕಾಶಕರ ಆಶ್ರಯದಲ್ಲಿ ಶದ್ರಾಚ್ ಐಮನ್ ಮತ್ತು ಉಭಯದ ನರಸಿಂಹರಾವ್ ಅವರು ಸಂಪಾದಿಸಿದ ಪಾಪ್ಯುಲರ್ ಕೆನರೀಸ್ ಪ್ರಾವಬ್ರ್ಸ್‌ ಅಂಡ್ ದೆರ್ ಇಂಗ್ಲಿಷ್ ಈಕ್ವಿವಲೆಂಟ್ಸ್‌ ಎಂಬ ಕೃತಿ 1894ರಲ್ಲಿ ಪ್ರಕಟವಾಯಿತು. ಈ ಸಮಯದಲ್ಲೇ ಹಣಮಂತ ಗೋವಿಂದ ಜೋಶಿ ಅವರ ಸಾಮತಿ ಸಂಗ್ರಹ-ಕನ್ನಡ ಗಾದೆಗಳೂ ಅವುಗಳ ಸಮಾನಾರ್ಥಕ ಇಂಗ್ಲಿಷ್ ನುಡಿಗಳೂ ಎಂಬ ಕೃತಿ ಬೆಳಗಾಂ ಸಮಾಚಾರ್ ಪ್ರೆಸ್ನಿಂದ ಪ್ರಕಟವಾಯಿತು. ಇದು 1906ರಲ್ಲಿ ಮರುಮುದ್ರಣವನ್ನು ಕಂಡಿತು. ಇದೇ ಅವದಿಯಲ್ಲಿ ಕನ್ನಡ ನಿಘಂಟೊಂದನ್ನು ಪ್ರಕಟಿಸಿದ ಕಿಟ್ಟೆಲ್ ಅವರು ಗಾದೆಗಳ ಸಂಗ್ರಹಕಾರರಾಗಿಯೂ ದುಡಿದಿರುವುದು ಮಹತ್ತ್ವದ ವಿಷಯವಾಗಿದೆ. ಅನಂತರ ಬಾಸೆಲ್ ಬುಕ್ ಅಂಡ್ ಟ್ರಾಕ್ಟ್‌ ಡಿಪಾಜಿಟರಿಯ ‘ತ್ರೀ ಹಂಡ್ರೆಡ್ ಕೆನರೀಸ್ ಪ್ರಾವಬ್ರ್ಸ್‌’ ಎಂಬ ಸಂಕಲನ 1903ರಲ್ಲಿ ಪ್ರಕಟವಾಯಿತು. 1911ರಲ್ಲಿ ಮೈಸೂರಿನ ಕ್ರೌನ್ ಪ್ರೆಸ್ನಿಂದ ಪ್ರಕಟವಾದ ‘ನೂತನ ಸಹಸ್ರಗಾಥಾ ಕುಸುಮ ಮಂಜರಿ’ ಒಂದು ಸಾವಿರ ಗಾದೆಗಳನ್ನುಳ್ಳ ಸಂಗ್ರಹ. ಈ ಕೃತಿಯ ಸಂಗ್ರಹಕಾರರು ಸಿ.ಸಿಂಗಪ್ಪ. ಸುಮಾರು 300 ಕನ್ನಡ ಗಾದೆಗಳನ್ನು ಇಂಗ್ಲಿಷಿನ ಸಮಾನಾರ್ಥಕ ಗಾದೆಗಳೊಡನೆ ಬಾಸೆಲ್ ಮಿಶನ್ ಬುಕ್ ಅಂಡ್ ಟ್ರಾಕ್ಟ್‌ ಡಿಪಾಜಿಟರಿ ಪ್ರಕಾಶನದಿಂದ ಎ ಹ್ಯಾಂಡ್ ಬುಕ್ ಆಫ್ ಕೆನರೀಸ್ ಪ್ರಾವಬ್ರ್ಸ್‌ ವಿತ್ ಇಂಗ್ಲಿಷ್ ಈಕ್ವಿವಲೆಂಟ್ಸ್‌ ಎಂಬ ಹೆಸರಿನಿಂದ ಯು.ಬಿ.ನರಸಿಂಗರಾವ್ ಅವರು ಸಂಗ್ರಹಿಸಿ ಪ್ರಕಟಿಸಿದರು. 1500 ಕನ್ನಡ ಗಾದೆಗಳನ್ನು ಅವುಗಳ ಉದ್ದೇಶ ವಿವರಣೆಯೊಂದಿಗೆ ಕರ್ನಾಟಕ ಲೋಕೋಕ್ತಿ ನಿಧಾನ ಎಂಬ ಹೆಸರಿನಿಂದ 1919ರಲ್ಲಿ ಕೆನರೀಸ್ ಮಿಶನ್ ಬುಕ್ ಅಂಡ್ ಟ್ರಾಕ್ಟ್‌ ಡಿಪಾಜಿಟರಿಯವರು ಪ್ರಕಟಿಸಿದರು. ಈ ಕೃತಿ 1912ರಲ್ಲಿ ಪ್ರಕಟವಾಗಿದ್ದ ಕೃತಿಯ ಪುನರ್ಮುದ್ರಣ. ಇವಿಷ್ಟು ಕ್ರೈಸ್ತ ಮಿಷನರಿಗಳಿಂದ ಹೊರಬಂದ ಗಾದೆಯ ಸಂಕಲನಗಳು. ಈ ಸಂದರ್ಭದಲ್ಲಿ ಕನ್ನಡ ಗಾದೆಗಳನ್ನು ಸಂಗ್ರಹಿಸಿ ಪ್ರಕಟಿಸಿದಂತೆಯೇ ಬಾಸೆಲ್ ಮಿಶನರಿಯವರೇ ಕೊಡಗು ಭಾಷೆಯ ಗಾದೆಗಳನ್ನು ಮೊಟ್ಟಮೊದಲಿಗೆ ಸಂಗ್ರಹಿಸಿ ಕನ್ನಡ ಲಿಪಿಯಲ್ಲಿ ‘ಕೊಡವ ಪಡಿಮ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದು (1886) ಗಮನಾರ್ಹ ಸಂಗತಿಯಾಗಿದೆ.

ಅನಂತರ 1944ರಲ್ಲಿ ಪ್ರಕಟವಾದ ಎಚ್.ಎಸ್. ಅಚ್ಚಪ್ಪನವರ ‘ಕನ್ನಡ ಗಾದೆಗಳು’ ಒಂದು ಅಪೂರ್ವ ಸಂಗ್ರಹ. ಹಾಗೆಯೇ ಬೆಂಗಳೂರಿನ ಸತ್ಯಶೋಧನ ಪ್ರಕಟನ ಮಂದಿರದಿಂದ 1956ರಲ್ಲಿ ಪ್ರಕಟವಾದ ಜಂಗಮಕೋಟೆ ಕೃಷ್ಣಶಾಸ್ತ್ರಿಗಳ ಗಾದೆಗಳ ಭಂಡಾರ ಎಂಬ ಕೃತಿ ಇನ್ನೊಂದು ಮಹತ್ತ್ವದ ಸಂಗ್ರಹವಾಗಿದೆ. ಇದರಲ್ಲಿ 3,872 ಗಾದೆಗಳನ್ನು ವಿಷಯಾನುಸಾರ ವರ್ಗೀಕರಿಸಿ ಕೆಲವು ಗಾದೆಗಳಿಗೆ ವಿವರಣೆ ವ್ಯಾಖ್ಯಾನಗಳನ್ನು ಕೊಡಲಾಗಿದೆ. ಇದರಲ್ಲಿ ಕೆಲವು ಸಂಸ್ಕೃತ ಸೂಕ್ತಿಗಳೂ ಸೇರಿವೆ. ಸಂಸ್ಕೃತ ಸೂಕ್ತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿರುವುದಾಗಿ ಹೇಳಿರುವುದರಿಂದ ಕೆಲಮೊಮ್ಮೆ ಕನ್ನಡದ ನಿಜವಾದ ಗಾದೆಗಳು ಯಾವುವು, ಕೃತಕ ಗಾದೆಗಳು ಯಾವುವು ಎಂಬ ಸಮಸ್ಯೆ ಎದುರಾಗುತ್ತದೆ. ಇದೇ ವರ್ಷದಲ್ಲಿ ಪಡುವಾರಿ ಸುಬ್ಬಣ್ಣಶೆಟ್ಟಿಯವರ ಗಾದೆಗಳ ಗುಚ್ಫ, ಕೆ.ವೆಂಕಟರಾಯಾಚಾರ್ಯರ ಸೂಕ್ತಿಗಳು ಮತ್ತು ಬೇಬಿ ಸರೋಜಿನಿಯವರ ಗಾದೆಗಳು ಮತ್ತು ಜ್ಞಾನೋಕ್ತಿಗಳು ಎಂಬ ಸಂಕಲನಗಳು ಪ್ರಕಟವಾಗಿವೆ. ಅನಂತರ ಕುರಾಡಿ ಸೀತಾರಾಮ ಅಡಿಗರ ‘ಕನ್ನಡ ಗಾದೆಗಳು’ 1957ರಲ್ಲಿ ಪ್ರಕಟವಾಯಿತು. ಇದರಲ್ಲಿ 387 ಗಾದೆಗಳಿವೆ. ಎಂ.ಸಂಜೀವಶೆಟ್ಟಿಯವರ ‘ನಾಡುನುಡಿಗಳು’ ಎರಡು ಭಾಗಗಳಾಗಿ ಪ್ರಕಟವಾಗಿದ್ದು (1954) ಭಾಗ ಒಂದರಲ್ಲಿ 225 ಗಾದೆಗಳೂ ಭಾಗ ಎರಡರಲ್ಲಿ 234 ಗಾದೆಗಳೂ ಇವೆ.[೧]

ಬೆಂಗಳೂರಿನ ಸುದರ್ಶನಂ ಅಂಡ್ ಕಂಪನಿ ಪ್ರಕಟಿಸಿದ (1960) ಎಚ್.ಎಂ.ರಾಮಾರಾಧ್ಯರ ಗಾದೆಗಳ ಗೀತಗಳು ಗಾದೆಗಳನ್ನು ಪೋಣಿಸಿ ಕಟ್ಟಿದ ಸುಂದರ ಹಾಡುಗಳ ಸಂಕಲನ. ಇವರು ಗಾದೆಗಳನ್ನು ಬಳಸಿಕೊಂಡು ಗೀತಗಳು ಹಾಗೂ ನಾಟಕಗಳನ್ನು ರಚಿಸುವ ವಿಶಿಷ್ಟ ಪ್ರಯೋಗಗಳನ್ನು ನಡೆಸಿದ್ದಾರೆ. ಗಾದೆಗಳನ್ನು ಜೋಡಿಸಿ ರಚಿಸಿದ ದೀಪ ನುಂಗೊ ಅತ್ತೆಗೆ ದೀವಟಿಗೆ ನುಂಗೊ ಸೊಸೆ ಎಂಬ ಇವರ ನಾಟಕ ಹೊನ್ನ ಬಿತ್ತೇವು ಹೊಲಕೆಲ್ಲ ಎಂಬ ಗ್ರಂಥದಲ್ಲಿ ಪ್ರಕಟವಾಗಿದೆ. ಈ ನಾಟಕದ ಪ್ರಯೋಗ ತಂತ್ರ ಅತ್ಯಂತ ಕುತೂಹಲಕಾರಿಯಾಗಿದೆ. ಗಮನಿಸಬಹುದಾದ ಮತ್ತೊಂದು ಕೃತಿಯೆಂದರೆ ದಕ್ಷಿಣ ಭಾರತ ಭಾಷಾ ಸಂಸ್ಥೆ ಪ್ರಕಟಿಸಿದ ನಾಲ್ ನುಡಿ-ನಾಣ್ನುಡಿ (1962). ಇದರಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿನ 467 ಸಮಾನ ಗಾದೆಗಳನ್ನು ಎಂ.ಮರಿಯಪ್ಪಭಟ್ಟ, ಎನ್.ವೆಂಕಟರಾವ್, ಆರ್ಪಿ.ಸೇತುಪಿಳ್ಳೆ, ಎಸ್.ಕೆ.ನಾಯರ್ ಅವರು ಕ್ರಮವಾಗಿ ಸಂಕಲಿಸಿದ್ದಾರೆ. ಟಿ.ವಿ.ವೆಂಕಟರಮಣಯ್ಯನವರ ಕನ್ನಡ ಗಾದೆಗಳ ಕೋಶ 1963ರಲ್ಲಿ ಪ್ರಕಟವಾಯಿತು. ಇದು 4,234 ಗಾದೆಗಳನ್ನೊಳ ಗೊಂಡಿದ್ದು, ವಿಷಯಾನುಸಾರ ವಾಗಿ ಗಾದೆಗಳನ್ನು ವಿಭಜಿಸಿರುವ ಈ ಕೃತಿ ಉಲ್ಲೇಖನೀಯ ಸಂಗ್ರಹವಾಗಿದೆ. (1964, ಮರುಮುದ್ರಣ), ಪುತ್ತಿಗೆ ಶ್ರೀನಿವಾಸರಾಯರ ಕನ್ನಡ ತುಳು ಗಾದೆಗಳು ಎಂಬಸಂಕಲನ 1967ರಲ್ಲಿ ಪ್ರಕಟವಾಯಿತು.

ಜಾನಪದ ಸ್ನಾತಕೋತ್ತರ ಮಟ್ಟದ ಒಂದು ಅಧ್ಯಯನ ವಿಷಯವಾಗಿ ವಿಶ್ವವಿದ್ಯಾನಿಲಯದ ಮೆಟ್ಟಿಲೇರಿದ ತರುವಾಯ ಗಾದೆಗಳ ಸಂಗ್ರಹಣೆ, ಸಂಪಾದನೆ, ವಿಶ್ಲೇಷಣೆ, ಪ್ರಕಟಣೆಗಳಲ್ಲಿ ಹೊಸ ಚೇತನವುಂಟಾಯಿತೆನ್ನಬಹುದು. ಸಂಗ್ರಹಕಾರರು ಗ್ರಾಮಾಂತರ ಪ್ರದೇಶಗಳನ್ನು ಪ್ರವೇಶಿಸಿ ಕೃಷಿಗೆ ತೊಡಗಿದುದರ ಫಲವಾಗಿ ಅಜ್ಞಾತ ವಲಯದಲ್ಲಿ ಹುದುಗಿದ್ದ ಅಪೂರ್ವ ಗಾದೆಗಳು ಬೆಳಕಿಗೆ ಬಂದವು. ಈ ಬಗೆಯ ಜಾನಪದ ದೃಷ್ಟಿಯಿಂದ ಗಾದೆಗಳ ಸಂಗ್ರಹಕಾರ್ಯ ನಡೆಸಿದ ಕೀರ್ತಿ ರಾಗೌ ಅವರಿಗೆ ಸಲ್ಲುತ್ತದೆ. 1968ರಲ್ಲಿ ಪ್ರಕಟವಾದ ಇವರ ನಮ್ಮ ಗಾದೆಗಳು ಸಂಕಲನ ಹಲವಾರು ದೃಷ್ಟಿಗಳಿಂದ ಮಹತ್ತ್ವದ ಕೃತಿಯಾಗಿದೆ. ರಾಗೌ ಅವರು ಈವರೆಗೆ, 2,200 ಗಾದೆಗಳನ್ನು ಬೆಳಕಿಗೆ ತಂದಿದ್ದಾರೆ. ಈ ಸಂಕಲನ ಗಾದೆಗಳ ಸ್ವರೂಪಲಕ್ಷಣಾದಿಗಳನ್ನು ಕುರಿತ ವಿದ್ವತ್ಪುರ್ಣ ಪ್ರಸ್ತಾವನೆ, ಇದು ಅತ್ಯುಪಯುಕ್ತ ಮಾಹಿತಿಗಳಿಂದ ಕೂಡಿದ್ದು ಈ ಕ್ಷೇತ್ರದಲ್ಲಿ ಕೆಲಸಮಾಡುವವರಿಗೆದಾರಿದೀಪವಾಗಿದೆ. ಇದೇ ಲೇಖಕರ ಮತ್ತೊಂದು ಶ್ರೇಷವಿ ಸಂಕಲನ ಕಿಟ್ಟೆಲ್ ಕೋಶದ ಗಾದೆಗಳು (1969). ಇದರಲ್ಲಿ ಕಿಟ್ಟೆಲ್ ಕೋಶದಲ್ಲಿ ಉದಾಹರಿಸಿರುವ 4,260 ಗಾದೆಗಳನ್ನು ಅಕಾರಾದಿಯಾಗಿ ಜೋಡಿಸಿದೆ.

1969ರಲ್ಲಿ ಪ್ರಕಟವಾದ ಅಚ್ಚಪ್ಪನವರ ‘ಗ್ರಂಥಸ್ಥ ಗಾದೆಗಳು’ ಕವಿರಾಜ ಮಾರ್ಗದಿಂದ ಮುದ್ದಣನವರೆಗಿನ ಕೆಲವು ಕಾವ್ಯಗಳಿಂದ ಆಯ್ದ ಗಾದೆಗಳು, ಉದ್ಧರಣೆಗಳು, ಸಾಮತಿಗಳು, ಜಾಣ್ಣುಡಿಗಳು, ಸೂಕ್ತಿಗಳು, ರೂಪಕಗಳು ಇತ್ಯಾದಿಗಳನ್ನೊಳಗೊಂಡ ಸಂಕಲನ. 1971ರಲ್ಲಿ ಮಂಗಳೂರಿನ ಪಲಚಂವಿ ಪ್ರಕಾಶನದಿಂದ ಪ್ರಕಟವಾಗಿರುವ ಬಿ.ಎ.ವಿವೇಕರೈ ಅವರ ತುಳು ಗಾದೆಗಳು ಉಲ್ಲೇಖನೀಯ ಕೃತಿ. ಇದರಲ್ಲಿ 704 ತುಳು ಗಾದೆಗಳಿಗೆ ಸಂವಾದಿಯಾದ ಕನ್ನಡ ಗಾದೆ ಇಲ್ಲವೇ ಅರ್ಥವಿವರಣೆಯನ್ನು ಕೊಡಲಾಗಿದೆ. ವಿಸ್ತಾರವಾದ ಪ್ರಸ್ತಾವನೆ, ತುಳು ಕನ್ನಡ ಅರ್ಥಕೋಶಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ. ಬಸಯ್ಯ ವಿರೂಪಾಕ್ಷಯ್ಯ ಮಠದ ಅವರ ಸಾವಿರ ಮಾತಿನ ಸರದಾರ ಎಂಬ ಸಂಕಲನ ಶ್ರೀ ಗುರುಲಿಂಗ ಜಂಗಮ ಗ್ರಂಥ ಪ್ರಸಾರಕ ಸಂಘ, ಹಳ್ಳೀಗುಡಿ, ಗದಗ ತಾಲ್ಲೂಕಿನಿಂದ ಪ್ರಕಟವಾಗಿದೆ (1972). ಇದರಲ್ಲಿ ಒಂದು ಸಾವಿರ ಗಾದೆಗಳಿವೆ. ಇದೇ ವರ್ಷ ಪ್ರಕಟವಾದ ಎಸ್.ವಿ.ಪರಮೇಶ್ವರಭಟ್ಟರ ‘ನೆನಪಿಗೆ ಬಂದ ಗಾದೆಗಳು’ 200ಗಾದೆಗಳ ಸಂಕಲನ. ತುಳು ಗಾದೆಗಳ ಸಂಗ್ರಹಕಾರ್ಯದಲ್ಲಿ ತೊಡಗಿದ ಮತ್ತೊಬ್ಬರು ಬಿ.ದೂಮಪ್ಪ ಮಾಸ್ಟರ್. 1973ರಲ್ಲಿ ಪ್ರಕಟವಾದ ಇವರ ಮಾದಿರನ ಗಾದೆ ಎಂಬ ಸಂಕಲನದಲ್ಲಿ ಸಾವಿರ ಗಾದೆಗಳಿವೆ. ಇವುಗಳನ್ನು ಕನ್ನಡ ಲಿಪಿಯಲಿ ಗೀತರೂಪದಲ್ಲಿ ಪೋಣಿಸಿದೆ. ಚೌಡೇಗೌಡ ಬೀಡನಹಳ್ಳಿ ಅವರ ಪ್ರಾದೇಶಿಕ ಗಾದೆಗಳು 1973ರಲ್ಲಿ ಪ್ರಕಟವಾಯಿತು. ಗಾದೆಗಳ ಸಂಕಲನ ಗ್ರಂಥಗಳಲ್ಲಿ ಇನ್ನೊಂದು ಮಹತ್ತ್ವದ ಕೃತಿ ಎಂದರೆ ಸುಧಾಕರ ಅವರ ನಮ್ಮ ಸುತ್ತಿನ ಗಾದೆಗಳು ವಿಸ್ತಾರವಾದ ಪ್ರಸ್ತಾವನೆಯೊಂದಿಗೆ ಕನ್ನಡ ಅಧ್ಯಯನ ಸಂಸ್ಥೆಯಿಂದ ಪ್ರಕಟವಾಗಿದೆ (1973). ಕಾಳೇಗೌಡ ನಾಗವಾರ ಅವರ ಬೀದಿಮಕ್ಕಳು ಬೆಳೆದೊ ಒಂದು ಉತ್ತಮ ಸಂಕಲನ. ಮೈಲಹಳ್ಳಿ ರೇವಣ್ಣ ಅವರ ದೀಪದ ಕೆಳಗೆ ಕತ್ತಲೆ ಎಂಬ 1412 ಗಾದೆಗಳ ಸಂಕಲನ ಇತ್ತೀಚಿನ ಕೃತಿ (2003).

ಸ್ವತಂತ್ರ ಗಾದೆಗಳು[ಬದಲಾಯಿಸಿ]

ಜನಪದ ಗಾದೆಗಳಂತೆ ಅನೇಕ ಸ್ವತಂತ್ರ ಗಾದೆಗಳೂ ರಚಿತವಾಗಿವೆ. ಅವುಗಳಲ್ಲಿ ಹೆಚ್ಚು ಗಾದೆಗಳು ಅನುಕರಣೆಯಿಂದ ಮೂಡಿದವಾಗಿವೆ. ಉದಾ: ಊರಿಗೆ ಬಂದವಳು ನೀರಿಗೆ ಬರೋದಿಲ್ಲವೆ ಎಂಬ ಗಾದೆಗೆ ಸಂವಾದಿಯಾಗಿ ಸಿಟಿಗೆ ಬಂದವಳು ಸಿನಿಮಾಕ್ಕೆ ಬರೋದಿಲ್ಲವೆ ಇತ್ಯಾದಿ. ಇಂಥ ಗಾದೆಗಳನ್ನು ನಾ.ಕಸ್ತೂರಿ, ಎಸ್.ವಿ.ಪರಮೇಶ್ವರಭಟ್ಟ, ಎಚ್.ಜೆ.ಲಕ್ಕಪ್ಪಗೌಡ ಮೊದಲಾದವರು ರಚಿಸಿದ್ದಾರೆ. ಗಾದೆಗಳ ಸಂಗ್ರಹಕಾರ್ಯದ ಜೊತೆಗೆ ವಿಮರ್ಶೆ ವಿಶ್ಲೇಷಣೆಗಳ ಕಾರ್ಯವೂ ನಡೆದಿದೆ. ಈ ಸಾಲಿನ ಮೊದಲ ಸ್ತುತ್ಯ ಪ್ರಯತ್ನವೆಂದರೆ ಪ್ರಹ್ಲಾದ ಕುಲಕರ್ಣಿಯವರ ನಾಣ್ಣುಡಿ ಎಂಬ ಕೃತಿ (1936). ಗಾದೆಗಳ ಉಗಮ, ವಿಕಾಸ, ಸ್ವರೂಪಗಳ ಅಧ್ಯಯನದ ಆವಶ್ಯಕತೆಯನ್ನು ಇಷ್ಟು ಹಿಂದೆಯೇ ಅರಿತುಕೊಂಡದ್ದು ಶ್ರೀಯುತರ ವೈಶಿಷ್ಟ್ಯವಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾದ ಎ.ಕೆ.ರಾಮನುಜನ್ ಅವರ ಗಾದೆಗಳು (1955) ಎಂಬ ಚಿಕ್ಕ ಪುಸ್ತಕ ಗಾದೆಗಳ ವೈಚಾರಿಕ ಅಧ್ಯಯನದ ಆವಶ್ಯಕತೆಯನ್ನು ಎತ್ತಿ ತೋರಿಸುತ್ತದೆ. ಅನಂತರ ಮೈಸೂರು ವಿಶ್ವವಿದ್ಯಾ ನಿಲಯದ ಪ್ರಸಾರಾಂಗದಿಂದ ಪ್ರಕಟವಾದ ನಂ.ತಪಸ್ವೀಕುಮಾರ್ ಅವರ ‘ಕನ್ನಡ ಗಾದೆಗಳ ಸಮೀಕ್ಷೆ’ ಒಂದು ವಿದ್ವತ್ಪೂರ್ಣ ಕೃತಿ (1972). ಈ ಕೃತಿಯಲ್ಲಿ ಗಾದೆಗಳ ಹುಟ್ಟು, ಬೆಳೆವಣಿಗೆ, ಸ್ವರೂಪ, ಸಾಹಿತ್ಯಕ, ಸಾಮಾಜಿಕ ಮೌಲ್ಯಗಳನ್ನು ಸಮರ್ಪಕ ರೀತಿಯಲ್ಲಿ ವಿವೇಚಿಸಲಾಗಿದೆ. ಇಷ್ಟಲ್ಲದೆ ಗಾದೆಗಳನ್ನು ಕುರಿತ ಹಲವಾರು ಲೇಖನಗಳು ವಿವಿಧ ಲೇಖಕರ ಕೃತಿಗಳಲ್ಲಿ, ಪತ್ರಿಕೆಗಳಲ್ಲಿ ಚೆದುರಿಹೋಗಿವೆ. ಗಾದೆಗಳನ್ನು ಕುರಿತಂತೆ ನಾನಾದೃಷ್ಟಿಕೋನದ ಅಧ್ಯಯನ ಅಗತ್ಯ ಎಂಬುದನ್ನು ಈ ಲೇಖನಗಳು ತೋರಿಸಿಕೊಟ್ಟಿವೆ.

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-06-09. Retrieved 2016-10-27.