ವಿಷಯಕ್ಕೆ ಹೋಗು

ಕಂನಡ ಸಮಾಚಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡಸಮಾಚಾರ : ಒಂದು ದೃಷ್ಟಿಯಿಂದ ಕನ್ನಡದಲ್ಲಿ ಪ್ರಕಟವಾದ ಮೊದಲ ವಾರ್ತಾಪತ್ರಿಕೆಯಾಗಿರುವುದರಿಂದಲೂ ಇತರ ಹಲವಾರು ದೃಷ್ಟಿಗಳಿಂದ, ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಗಣ್ಯಸ್ಥಾನವನ್ನು ಪಡೆಯಲು ಅರ್ಹವಾಗಿರುವುದರಿಂದಲೂ ಮುಖ್ಯವೆನಿಸಿರುವ ಒಂದು ಪತ್ರಿಕೆ.

"ಮಂಗಳೂರು ಸಮಾಚಾರ"ವಾಗಿ

[ಬದಲಾಯಿಸಿ]

ಮೊದಲು ಇದು ಮಂಗಳೂರು ಸಮಾಚಾರ ಎಂಬ ಹೆಸರಿನಿಂದ ಆರಂಭವಾದದ್ದು 1843ನೆಯ ಜುಲೈ 1ನೆಯ ತಾರೀಖು. ಈ ಪತ್ರಿಕೆ ಹುಟ್ಟಿದ್ದು ಬಾಸೆಲ್ ಮಿಷನ್ನಿನ ಪಾದ್ರಿಗಳ ಪ್ರಯತ್ನದ ಫಲವಾಗಿ. ಈ ಸಂಸ್ಥೆಯ ಪಾದ್ರಿಗಳು ಭಾರತದ ನೆಲದ ಮೇಲೆ ಹೆಜ್ಜೆಯಿಟ್ಟಿದ್ದು 1834ರಲ್ಲಿ-ಮಲೆಯಾಳದ ಕರಾವಳಿಯ ಕಲ್ಲಿಕೋಟೆಯಲ್ಲಿ. ಅಲ್ಲಿಂದ ಅವರು ಮಂಗಳೂರಿಗೆ ಹೊರಟು, ಅದೇ ವರ್ಷ ಅಕ್ಟೋಬರ್ ೩೦ನೆಯ ತಾರೀಖಿನಂದು ಮಂಗಳೂರನ್ನು ಮುಟ್ಟಿದ್ದರು. ಈ ಐತಿಹಾಸಿಕ ಘಟನಾನಂತರ, ಸು. ೪ ವರ್ಷಗಳ ಮೇಲೆ, ೧೮೩೬ರ ಕೊನೆಯಲ್ಲಿ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಮಂಗಳೂರಿಗೆ ಬಂದ. ಕನ್ನಡ ಭಾಷೆಯನ್ನು ಕಲಿತ. ಎರಡು ವರ್ಷಗಳ ಅನಂತರ ಕೊಡಗಿಗೆ ಹೋಗಿ ಅಲ್ಲಿ ಉಪದೇಶಕನಾಗಿ ಕೆಲಸ ಮಾಡಿದ. ೧೮೪೩ರಲ್ಲಿ ಮಂಗಳೂರು ಸಮಾಚಾರವನ್ನು ತನ್ನ ಸಂಪಾದಕತ್ವದಲ್ಲಿ ಪಕ್ಷಪ್ರತಿಕೆಯಾಗಿ ಆರಂಭಿಸಿದ.

ಪತ್ರಿಕೆಯ ಉದ್ದೇಶ ಕುರಿತು ಮೊಗ್ಲಿಂಗ್ ನೀಡಿರುವ ವಿವರಣೆ:

ಈ ದೇಶವೆಂಬ ಮನೆಯಲ್ಲಿ ವಾಸಿಸುವ ಜನರು ಇಂದಿನ ಪರಿಯಂತರ ಹೊರಗಿನ ದೇಶಸ್ಥರ ಸಮಾಚಾರ ಮಾರ್ಗ ಮರ್ಯಾದೆಗಳನ್ನು ತಿಳಿಯದೇ ಕಿಟಕಿಯಿಲ್ಲದ ಬಿಡಾರದಲ್ಲಿ ಉಳಕೊಳ್ಳುವವರ ಹಾಗೆಯಿರುತ್ತಾ ಬಂದರು. ಅದು ಕಾರಣ ಹೊರಗಿನ ಕಾರ್ಯಗಳನ್ನು ಕಾಣುವ ಹಾಗೆಯೂ ವೊಳಗೆ ಸ್ವಲ್ಪ ಬೆಳಕು ಬೀರುವ ಹಾಗೆಯೂ ನಾಲ್ಕೂ ದಿಕ್ಕಿಗೆ ಕಿಟಕಿಗಳನ್ನು ಮಾಡುವ ಈ ಸಮಾಚಾರ ಕಾಗದವನ್ನು ಪಕ್ಷಕ್ಕೆವೊಂದು ಸಾರಿ ಶಿದ್ಧ ಮಾಡಿ ಅದನ್ನು ಓದಬೇಕೆಂದಿರುವೆಲ್ಲರಿಗೆ ಕೊಟ್ಟರೆ ಕಿಟಕಿಗಳನ್ನು ಮೋಡಿದ ಹಾಗಾಗಿರುವದು.

ಪ್ರಕಟವಾಗಲಿರುವ ಸಮಾಚಾರ ಸ್ವರೂಪ: 1. ವೂರ ವರ್ತಮಾನಗಳು 2. ಸರಕಾರಿ ನಿರೂಪಗಳು/ಕಾನೂನು 3. ಸುಬುದ್ಧಿಯನ್ನು ಹೇಳುವ ಸಮತಿಗಳು, ಹಾಡುಗಳು 4. ಕಥೆಗಳು 5. ಸರ್ವರಾಜ್ಯ ವರ್ತಮಾನಗಳು.

ವಾಚಕರವಾಣಿ ಆದ್ಯತೆ ಇತ್ತು. ಸುದ್ದಿಯ ಹರಹು ವ್ಯಾಪಕವಾಗಿತ್ತು. ಅದನ್ನು ಕೊಡುವಲ್ಲಿ ಇಂದಿನ ವೃತ್ತ ಪತ್ರಿಕೆಗಳ ಕ್ರಮ ಇತ್ತು. ಆಧುನಿಕ ಪತ್ರಿಕೋದ್ಯಮದ ಅನೇಕ ಲಕ್ಷಣಗಳನ್ನು ಕಾಣಬಹುದಾಗಿತ್ತು.

"ಕಂನಡ ಸಮಾಚಾರ" ವಾಗಿ

[ಬದಲಾಯಿಸಿ]

ಎಂಟು ತಿಂಗಳ ಕಾಲ ಈ ಪತ್ರಿಕೆಯನ್ನು ಮಂಗಳೂರಿನಿಂದ ನಡೆಸಿದ್ದ ಮೇಲೆ ಅದರ ಹೆಸರನ್ನು ‘ಕಂನಡ ಸಮಾಚಾರ’ ಎಂದು ಬದಲಿಸಿ ಬಳ್ಳಾರಿಯಿಂದ ಅದನ್ನು ಪ್ರಕಟಿಸಲಾರಂಭಿಸಿದ. ಈ ಪರಿವರ್ತನೆಗೆ ಕಾರಣವೇನೆಂಬುದನ್ನು ಆತ ಮಂಗಳೂರು ಸಮಾಚಾರದ ಹದಿನಾರನೆಯ ಸಂಚಿಕೆಯಲ್ಲಿ ವಿವರಿಸಿದ್ದಾನೆ.

ಮಂಗಳೂರು, ಮೈಸೂರು, ತುಮಕೂರು, ಬಳ್ಳಾರಿ, ಶಿವಮೊಗ್ಗ, ಹುಬ್ಬಳ್ಳಿ ಸಿರ್ಸಿ ಹೊಂನಾವರ ಮೊದಲಾದ ಸ್ಥಳಗಳಲ್ಲಿ ಕೆಲವು ನೂರು ಮಂದಿ ಈ ಕಾಗದವನ್ನು ಈವರೆಗೆ ತೆಗೆದುಕೊಳ್ಳುತ್ತಾ ಬಂದರು. ಮೊದಲಿನ ನಂಬ್ರದ ಕಾಗದಗಳನ್ನು ಛಾಪಿಸಿ ಪ್ರಕಟನ ಮಾಡುವಾಗ್ಯೆ ನಾವು ಮಾಡಿದ ಆಲೋಚನೆ ಈ ಕಾಲದಲ್ಲಿ ಈ ದೇಸಸ್ಥರೊಳಗೆ ನಡಿಯುವದೊ ಏನೊ ಎಂದು ಸ್ವಲ್ಪ ಸಂದೇಹ ಪಡುತ್ತಿದ್ದೆವು. ಈಗ ಈ ದೇಸಸ್ಥರಲ್ಲಿ ಅನೇಕರಿಗೆ ಕನಡು ಭಾಷೆಯಲ್ಲಿ ಬರೆದ ಒಂದು ಸಮಾಚಾರ ಕಾಗದವನ್ನು ಓದುವುದರಲ್ಲಿ ಮತಿ ಆಗುವುದೆಂದು ನೋಡಿ ಸಂತೋಷದಿಂದ ಅದನ್ನು ವೃದ್ಧಿಮಾಡುವ ಪ್ರಯತ್ನದಿಂದ ಇನ್ನು ಮುಂದೆ ಅದನ್ನು ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿ ಇರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚೈಸಿದ್ದೇವೆ. ಆಮೇಲೆ ಕಂನಡ ಶೀಮೆಯ ನಾಲ್ಕು ದಿಕ್ಕುಗಳಲ್ಲಿಯಿರುವವರು ಶುದ್ಧವಾದ ಮೊಳೆ ಅಚ್ಚುಗಳಿಂದ ಆಗುವ ಬರಹವನ್ನು ಸುಲಭವಾಗಿ ಓದಬಹುದು, ಇದಲ್ಲದೆ.......ಹೆಚ್ಚು ವರ್ತಮಾನವನ್ನೂ ಚರಿತ್ರೆಗಳನ್ನೂ ವಿದ್ಯಾ ಪಾಠಗಳನ್ನೂ ಬುದ್ಧಿ ಮಾತುಗಳನ್ನೂ ಬರಿಯುವುದಕ್ಕೆ ಸ್ಥಳ ಸಿಕ್ಕುವುದು.


ಈ ವಿವರಣೆಯಲ್ಲಿ ಕೆಲವು ಸ್ವಾರಸ್ಯವಾದ ಅಂಶಗಳಿವೆ; ಪತ್ರಿಕೆಗೆ ಸಂಪಾದಕ ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಪ್ರೋತ್ಸಾಹ ದೊರೆಯಿತು; ಕನ್ನಡ ವಾರ್ತಾಪತ್ರವನ್ನು ಓದುವುದರಲ್ಲಿ ಕನ್ನಡಿಗರು ಆಸಕ್ತಿಯನ್ನು ತೋರುತ್ತಿದ್ದರಾಗಿ ಅವರ ಈ ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ಪತ್ರಿಕೆಯ ಮುದ್ರಣಾದಿಗಳನ್ನು ಉತ್ತಮಗೊಳಿಸಲು ಬಯಸಿ ಕಲ್ಲಚ್ಚಿನ ಮುದ್ರಣದ ಬದಲು ಅಚ್ಚುಮೊಳೆಗಳನ್ನುಪಯೋಗಿಸಿ ಪತ್ರಿಕೆಯನ್ನು ಮುದ್ರಿಸಲು ನಿರ್ಧರಿಸಲಾಯಿತು. ಬಳ್ಳಾರಿಯಲ್ಲಿ ಆ ಸೌಕರ್ಯವಿರುವುದರಿಂದ ಪತ್ರಿಕಾ ಮುದ್ರಣವನ್ನು ಅಲ್ಲಿಗೆ ಬದಲಾಯಿಸಲಾಯಿತು.

ಪತ್ರಿಕೆಯ ಹೆಸರಿನಲ್ಲಿ ಬದಲಾವಣೆ ಮಾಡಿದ್ದೇಕೆ ಎಂಬುದನ್ನು ವಿವರಿಸುತ್ತ ಸಂಪಾದಕ ಮೋಗ್ಲಿಂಗ್, ಕನ್ನಡ ಮಾತನಾಡುವ ಎಲ್ಲ ಜನರಲ್ಲೂ ಇದು ಪ್ರಸಾರಕ್ಕೆ ಬರಲಿ ಎಂಬ ಆಶಯದಿಂದ ಹಾಗೆ ಮಾಡಲಾಯಿತೆಂದು ಹೇಳಿದ್ದಾನೆ. ಇದರ ಹಿಂದಿರುವ ಕನ್ನಡ ಪ್ರಜ್ಞೆ ಮೆಚ್ಚುವಂತಹುದು.

ಕಂನಡ ಸಮಾಚಾರದ ಮೊದಲ ಸಂಚಿಕೆ 1844ನೆಯ ಮಾರ್ಚಿ ಒಂದನೆಯ ತಾರೀಖು ಬಳ್ಳಾರಿಯಿಂದ ಪ್ರಕಟವಾಯಿತು. ಈ ಸಂಚಿಕೆಯಿಂದ ಪತ್ರಿಕೆಯ ಪುಟಸಂಖ್ಯೆ ನಾಲ್ಕರಿಂದ ಎಂಟಕ್ಕೆ ಹೆಚ್ಚಿತು. ಬೆಲೆಯೂ ಅಷ್ಟೇ-ಹಿಂದೆ ಒಂದು ದುಡ್ಡು (ಹಿಂದಿನ ಎರಡು ಕಾಸು) ಇದ್ದದ್ದು ಎರಡು ದುಡ್ಡಿಗೆ ಏರಿತು.

ಹತ್ತು ತಿಂಗಳ ಕಾಲ ನಡೆದು ಈ ಪತ್ರಿಕೆ ನಿಂತುಹೋಯಿತು. ಬಳ್ಳಾರಿಯ ಪತ್ರಿಕೆಯ ಮೇಲ್ವಿಚಾರಣೆ ಮಿಷಿನರಿ ರೀಡ್ ನೋಡಿಕೊಳ್ಳುತ್ತಿದ್ದ, ಆತ ತೀರಿಕೊಂಡ ಮೇಲೆ (1842) ಕರ್ತೃತ್ವ ಶಾಲಿಯಾದ ಮಿಷನರಿ ಇರಲಿಲ್ಲ. ದೂರದ ಮಂಗಳೂರಿನಲ್ಲಿ ಕುಳಿತು ಮೊಗ್ಲಿಂಗ್ ವ್ಯವಸ್ಥಾಪಕನಾಗಿ ಲೇಖನ ಸಂಪಾದನಾ ಹೊಣೆಯನ್ನು ನಿರ್ವಹಿಸಲಾಗಲಿಲ್ಲ. ಆ ವರ್ಷಾಂತ್ಯಕ್ಕೆ ಪತ್ರಿಕೆಯ ಪ್ರಕಟಣೆ ನಿಂತಿತು.

ಮೋಗ್ಲಿಂಗ್ ಹಿರಿಮೆ ಮತ್ತು ಪತ್ರಿಕಾ ದಿನ

[ಬದಲಾಯಿಸಿ]

ಕಂನಡ ಸಮಾಚಾರದ ಸಂಪಾದಕ ಮೊಗ್ಲಿಂಗ್ ಹುಟ್ಟು ಸಾಹಸಿ: ಹುಟ್ಟು ಪತ್ರಿಕೋದ್ಯಮಿ. ತಾನು ಆರಂಭಿಸಿದ ಪತ್ರಿಕೆಗಳು ನಿಂತುಹೋದ ಮೇಲೂ ಅವನು ಪತ್ರಿಕೋದ್ಯಮದಲ್ಲಿ ಆಸಕ್ತನಾಗಿದ್ದನೆಂದೂ ಮೈಸೂರು ಸರ್ಕಾರದ ಆಶ್ರಯದಲ್ಲಿ ಪ್ರಕಟವಾದ ವಾಗ್ವಿಧಾಯಿನಿ, ಉಡುಪಿಯಲ್ಲಿ ಆರಂಭವಾದ ಕ್ರೈಸ್ತ ಸಭಾ ಪತ್ರಿಕೆಗಳ ಸ್ಥಾಪನೆಗೆ ಸಹಾಯ ಮಾಡಿದನೆಂದೂ ಉಲ್ಲೇಖಗಳಿವೆ.

ಆ ಕಾಲದಲ್ಲಿ ಅಂದರೆ-ಸು. ನೂರ ಐವತ್ತು ವರ್ಷಗಳಿಗೂ ಹಿಂದೆ-ಸಂಪರ್ಕ ಸಾಧನಗಳು ಏನೇನೂ ಇಲ್ಲದಿದ್ದಾಗ ಮೊಗ್ಲಿಂಗ್ ತನ್ನ ಪತ್ರಿಕೆಗಳಲ್ಲಿ ಸ್ಥಳೀಯ ವಾರ್ತೆಗಳ ಜೊತೆಗೆ ದೇಶವಿದೇಶಗಳ ವಾರ್ತೆಯನ್ನೂ ಪ್ರಕಟಿಸುತ್ತಿದ್ದನೆಂಬುದು ಅವನ ವಾರ್ತಾಪ್ರಜ್ಞೆಗೆ ಸಾಕ್ಷಿಯಾಗಿದೆ. ಕಂನಡ ಸಮಾಚಾರವನ್ನು ಅವನು ಕ್ಯಾನರೀಸ್ ನ್ಯೂಸ್ಪೇಪರ್ ಎಂದು ಭಾಷಾಂತರಿಸಿದ್ದನೆಂಬುದನ್ನೂ ಗಮನಿಸಬೇಕು.

ಆಧುನಿಕ ಕನ್ನಡದಲ್ಲಿ ಗದ್ಯರಚನೆ ಮಾಡುವ ಕೃಷಿ ಆಗತಾನೆ ಆರಂಭವಾಗಿತ್ತಾದರೂ ಮೊಗ್ಲಿಂಗ್ ಅದನ್ನು ಪತ್ರಿಕೋದ್ಯಮಕ್ಕೆ ಪಳಗಿಸಿಕೊಳ್ಳಲು ಪ್ರಯತ್ನಿಸಿ, ಬಹುಮಟ್ಟಿಗೆ ಜಯಶಾಲಿಯಾದನೆಂಬುದು ಮೆಚ್ಚತಕ್ಕ ಅಂಶ.

ಕನ್ನಡನಾಡು ಹಲವಾರು ಆಡಳಿತಗಳಿಗೆ ಹಂಚಿ ಹೋಗಿದ್ದು, ಆಡುಮಾತಿನಲ್ಲಿ ಪ್ರಾದೇಶಿಕ ಪ್ರಭೇದಗಳು ಬಲವಾಗಿದ್ದ ಆ ಕಾಲದಲ್ಲಿ ಮೊಗ್ಲಿಂಗ್ ಆ ಅಡಚಣೆಗಳನ್ನು ದಾಟಿ, ಕನ್ನಡ ಜನತೆಯ ಮತ್ತು ಭಾಷೆಯ ಐಕ್ಯವನ್ನು ಗುರುತಿಸಿದನೆಂಬುದು ಕೂಡ ಮನನೀಯವಾದದ್ದು. ಕರ್ನಾಟಕದಲ್ಲಿ ಜುಲೈ 1 ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: