ವಿಷಯಕ್ಕೆ ಹೋಗು

ಒಳತಳಿಸಂತಾನೋತ್ಪಾದನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಳತಳಿಸಂತಾನೋತ್ಪಾದನೆ: ಬಹಳ ಹತ್ತಿರದ ಬಂಧುಗಳ ನಡುವೆ ಸಂಭೋಗ ನಡೆಸಿ ಸಂತಾನೋತ್ಪಾದನೆ ಮಾಡುವ ಒಂದು ಕ್ರಮ. ಸೋದರಿಕೆಯ ಸಂಬಂಧಗಳೂ, ಅಕ್ಕನ ಮಗಳನ್ನು ವಿವಾಹವಾಗುವಿಕೆ ಮುಂತಾದವು ಈ ಗುಂಪಿಗೆ ಸೇರುತ್ತವೆ.

ಸಸ್ಯ ಮತ್ತು ಪ್ರಾಣಿಗಳಲ್ಲಿ

[ಬದಲಾಯಿಸಿ]

ಅನೇಕ ಸಸ್ಯಗಳಲ್ಲಿ ಸ್ವಕೀಯ ಪರಾಗಸ್ಪರ್ಶ ನಡೆಯುತ್ತದೆ. (ಉದಾ: ಗೋದಿ, ಬಾರ್ಲಿ, ಓಟ್ಸ್‌, ಜೋಳ,ಹತ್ತಿ ಮುಂತಾದವು). ಇಂಥ ಸಸ್ಯಗಳಲ್ಲಿ ಒಳತಳಿ ಸಂತಾನೋತ್ಪಾದನೆ ಸ್ವಾಭಾವಿಕವಾಗಿಯೇ ನಡೆಯುತ್ತದೆ. ಆದರೆ ಇನ್ನು ಕೆಲವು ಸಸ್ಯಗಳಲ್ಲಿ ಇದನ್ನು ತಡೆಯಲೆಂದೇ ಕೆಲವು ವಿಶಿಷ್ಟ ಮಾರ್ಪಾಟುಗಳು ಪುಷ್ಪಗಳಲ್ಲಿರುತ್ತವೆ. ಕೆಲವು ಕೆಳವರ್ಗದ ಪ್ರಾಣಿಗಳನ್ನು ಬಿಟ್ಟರೆ ಮೇಲ್ಮಟ್ಟದ ಪ್ರಾಣಿಗಳೆಲ್ಲ ಏಕಲಿಂಗಿಗಳಾದ್ದರಿಂದ ಅವುಗಳಲ್ಲಿ ಸ್ವಕೀಯ ಗರ್ಭಾಂಕುರತೆ ಅಸಾಧ್ಯ. ಅಂತೆಯೇ ಒಳತಳಿಸಂತಾನೋತ್ಪಾದನೆ ತೀರ ವಿರಳ. ಕೆಳವರ್ಗದ ಪ್ರಾಣಿಗಳಾದ ಲಾಡಿ ಹುಳುಗಳಂಥ ಕೆಲವು ಪ್ರಾಣಿಗಳಲ್ಲಿ ಸ್ವಕೀಯ ಗರ್ಭಾಂಕುರವೇ ನಿಯಮವಾಗಿರುತ್ತವೆ. ತೀರ ಹತ್ತಿರದ ಸಂಬಂಧಿಗಳ ನಡುವೆ ಅನೇಕ ಪೀಳಿಗೆಗಳವರೆಗೆ ಒಳತಳಿ ಸಂತಾನೋತ್ಪಾದನೆಯೇ ನಡೆಯುತ್ತಿದ್ದರೆ ಅದರ ಪರಿಣಾಮ ಅಪಾರ.

ಉಪಯೋಗಗಳು

[ಬದಲಾಯಿಸಿ]

ಒಳತಳಿಸಂತಾನೋತ್ಪಾದನೆಯಿಂದ ಹಲವಾರು ಉಪಯೋಗಗಳುಂಟು. ಮುಖ್ಯವಾಗಿ, ಸಾಕುಪ್ರಾಣಿಗಳಲ್ಲಿ ನಮಗೆ ಬೇಕಾಗುವ ಗುಣಲಕ್ಷಣಗಳು ಸಹಜ ಸ್ಥಿತಿಯಲ್ಲಿ ಉಳಿಯುವಂತಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದು ಬರುವುದು. ಈ ಮೂಲಕ ಮಾನವ ತನಗೆ ಬೇಕಾದ ಗುಣಗಳುಳ್ಳ ಪ್ರಾಣಿಗಳನ್ನು ಪಡೆಯಬಹುದಾಗಿದೆ. ಹೊರಗಡೆಯಿಂದ ಬರಬಹುದಾದ ಬೇಡವೆನಿಸುವ ಜೀನ್ಗಳ ಸಂಕರವನ್ನು ತಡೆಯಬಹುದು. ಈ ರೀತಿ ಹಲವಾರು ವರ್ಷಗಳ ಒಳತಳಿಸಂತಾನೋತ್ಪಾದನೆ ಕ್ರಮದಿಂದ ಪಡೆದ ಪ್ರಾಣಿಗಳ ಉತ್ತಮ ಉದಾಹರಣೆಯೆಂದರೆ ಆಸ್ಟ್ರೀಲಿಯದ ಮೆರಿನೊ ಕುರಿ, ಪಾಶ್ಚಿಮಾತ್ಯ ದೇಶಗಳ ಹರ್ಫೋರ್ಡ್ ಜಾತಿಯ ದನಗಳು ಹಾಗೂ ಪಂದ್ಯದ ಕುದುರೆಗಳು.

ಒಳತಳಿಸಂತಾನೋತ್ಪಾದನೆ ಅನೇಕ ರೀತಿಗಳಲ್ಲಿ ಅನುವಂಶೀಯತೆಯ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಇದರ ಪ್ರಪ್ರಥಮ ಪರಿಣಾಮ ಅನುವಂಶೀಯ ಶುದ್ಧತೆಯ ಹೆಚ್ಚಿಗೆ. ಪ್ರತಿ ಒಳತಳೀಕರಣದಿಂದಲೂ ಸಮಜಂಪತಿಗಳ ಮಿಳಿತದಿಂದಾಗಿ ಒಂದೇ ತೆರನ ಗುಣಗಳಿರುವ ಹೆಚ್ಚು ಹೆಚ್ಚು ಜೀನ್ ಜೋಡಿಗಳು ಉತ್ಪತ್ತಿಯಾಗುತ್ತವೆ. ಆದರೆ ಈ ವಿಷಯದಲ್ಲಿ ಒಂದನ್ನು ಮಾತ್ರ ನಾವು ಅಲ್ಲಗಳೆಯಲಾಗುವುದಿಲ್ಲ. ಅನುವಂಶೀಯ ಶುದ್ಧತೆ ಹೆಚ್ಚಿದಂತೆಲ್ಲ ಅನೇಕ ದುರ್ಬಲ ಜೀನ್ಗಳು ತಮ್ಮ ಪ್ರಭಾವವನ್ನು ತೋರಿಸಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಇವುಗಳ ಪೈಕಿ ಅನೇಕವು ಪ್ರಬಲ ಜೀನ್ಗಳ ಪ್ರಭಾವಗಳಂತೆ ಜೀವಿಗೆ ಅವಶ್ಯಕವಾಗಿರುವುದಿಲ್ಲ. ಆದ್ದರಿಂದ ಒಳತಳಿಸಂತಾನೋತ್ಪಾದನೆಯಿಂದ ನಿಧಾನವಾಗಿ ಬೆಳೆಯುವ, ದುರ್ಬಲತೆಗಳುಳ್ಳ, ನಿರಾಶಾದಾಯಕ ಮತ್ತು ನ್ಯೂನ ಸಂತಾನ ವರ್ಧಿಸುವ ಸಂಭವನೀಯತೆಯೇ ಹೆಚ್ಚು, ಈ ಕಾರಣಕ್ಕಾಗಿ ತಳಿಶಾಸ್ತ್ರಜ್ಞರು ಈ ಕ್ರಮವನ್ನು ತಳೀಕರಣದ ಒಂದು ಅಪಾಯಕರ ಪ್ರಯೋಗವೆನ್ನುವುದೂ ಉಂಟು. ಆದರೆ ಈ ವಿಧಾನದ ಪ್ರಯೋಗಗಳಿಂದ ತಮ್ಮವೇ ಆದ ಕೆಲವು ವಿಶಿಷ್ಟ ಗುಣಗಳಿರುವ ಪ್ರಾಣಿಗಳನ್ನು ಆಯ್ಕೆ ಮಾಡಿಕೊಂಡು ಅವನ್ನು ಪದೇ ಪದೇ ಒಳತಳಿಸಂತಾನೋತ್ಪಾದನೆಗೆ ಒಳಪಡಿಸಿ ಆ ಗುಣಗಳು ಅವಕ್ಕೇ ಮೀಸಲಾಗಿರುವಂತೆಯೂ ಮಾಡಬಹುದಾಗಿದೆ.

ಒಳತಳಿಸಂತಾನೋತ್ಪಾದನೆಯಿಂದ ಜೀನ್ಗಳು ಬದಲಾವಣೆ ಹೊಂದುತ್ತವೆ ಎಂಬುದಾಗಲೀ ಅವುಗಳ ಆವರ್ತನ ವ್ಯತ್ಯಾಸವಾಗುವುದು ಎಂಬುದಾಗಲೀ ಸುಳ್ಳು. ಅಡ್ಡತಳಿಯೆಬ್ಬಿಕೆಯಲ್ಲಿ ಬರಲಾಗದ ಅವು ಸಾಮೀಪ್ಯ ಸಾಧಿಸಿ ಜೊತೆಗೂಡಲು ಇಲ್ಲಿ ಅನುಕೂಲವಿರುತ್ತದೆ ಅಷ್ಟೆ. ಆದ್ದರಿಂದಲೇ ಒಳತಳೀಕರಣ ಮುಂದುವರೆದಂತೆಲ್ಲ ಕುಟುಂಬಗಳು ಹೆಚ್ಚು ಹೆಚ್ಚು ವಿಶಿಷ್ಟಗೊಳ್ಳುತ್ತ, ಪ್ರತ್ಯೇಕಗೊಳ್ಳುತ್ತ ಹೋಗುತ್ತವೆ. ಅನುವಂಶೀಯ ಮತ್ತು ಬಾಹ್ಯ ಗುಣಲಕ್ಷಣಗಳಲ್ಲಿ ಪರಸ್ಪರ ಸಾಮ್ಯ ಈ ರೀತಿಯ ಸಂತಾನೋತ್ಪಾದನೆಯಿಂದ ಉದ್ಭವವಾದ ಕುಟುಂಬದ ಸಂತಾನಕ್ಕೆ ಒಂದು ಸಾಮಾನ್ಯ ಕುಟುಂಬದ ಸಂತಾನಕ್ಕಿಂತ ಹೆಚ್ಚು ಇರುತ್ತದೆ.

ಒಳತಳಿಸಂತಾನೋತ್ಪಾದನೆಯಿಂದ ಇನ್ನೂ ಕೆಲವು ಮುಖ್ಯ ಉಪಯೋಗಗಳುಂಟು. ಒಂದು ಗುಂಪಿನ ಇಲ್ಲವೆ ಒಂದು ಸಂತತಿಯ ಅಪ್ರಧಾನ ನ್ಯೂನತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ತರುವ ಮೂಲಕ ಇದು ಸಂತತಿಯನ್ನು ಅನುವಂಶೀಯವಾಗಿ ಶುದ್ಧಗೊಳಿಸುತ್ತದೆ. ಅನುವಂಶೀಯ ಶುದ್ಧತೆಯ ಸಾಧನೆಗೆ ಇದೊಂದೇ ಮಾರ್ಗ. ನ್ಯೂನತೆಗಳಿರುವ ಜೀನ್ಗಳನ್ನು ಬೇರ್ಪಡಿಸಿದರೆ ಇಡೀ ಗುಂಪೇ ಈ ಅನಾವಶ್ಯಕ ದುರ್ಬಲತೆಗಳಿಂದ ವಿಮುಕ್ತವಾಗುತ್ತದೆ. ಅಲ್ಲದೆ ಕುಟುಂಬದ ಎಲ್ಲ ಸದಸ್ಯರುಗಳೂ ಪರಸ್ಪರ ಅನುವಂಶೀಯ ಗುಣಗಳಲ್ಲಿ ಸಾಮ್ಯ ಸಾಧಿಸಿಕೊಳ್ಳಬೇಕಾದಲ್ಲಿ ಒಳತಳಿಸಂತಾನೋತ್ಪಾದನೆಯಲ್ಲದೆ ಬೇರೆ ದಾರಿ ಇಲ್ಲ. ಈ ಮಾರ್ಗದಿಂದ ಒಂದು ಕುಟುಂಬ ತನ್ನದೇ ಆದ ಕೆಲವು ವಿಶಿಷ್ಟ, ಉತ್ಕೃಷ್ಟ ಅರ್ಹತೆಗಳನ್ನು ಅನುವಂಶೀಯವಾಗಿ ಮುಂದುವರಿಸಿಕೊಂಡು ಹೋಗಬಹುದು. ಮಿಶ್ರತಳಿಯ ಮುಸುಕಿನ ಜೋಳ ಮತ್ತಿತರ ಹೆಚ್ಚು ಫಸಲು ಕೊಡುವ ತಳಿಗಳನ್ನು ಬೆಳಕಿಗೆ ತರಬೇಕಾದರೆ ಒಳತಳಿಸಂತಾನೋತ್ಪಾದನೆಯ ಮೂಲಕ ವಿಕಾಸಗೊಳಿಸಿದ ಶುದ್ಧ ತಳಿಗಳಿಂದ ಆಗಿರುವ ಸೇವೆ ಅತ್ಯಪೂರ್ವ.

ಪ್ರಕೃತಿಯಲ್ಲೂ ಸ್ವಲ್ಪಮಟ್ಟಿಗೆ ಒಳತಳಿಸಂತಾನೋತ್ಪಾದನೆಯಾಗುವ ಅವಕಾಶಗಳಿವೆ. ಒಂದೇ ಪ್ರಭೇದದ ಅನೇಕ ವನ್ಯಜೀವಿಗಳು ಸಣ್ಣ ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ಈ ಗುಂಪುಗಳ ನಡುವೆ ತಳೀಕರಣ ನಡೆಯುವುದು ಬಹು ಅಪೂರ್ವ. ಗುಂಪಿನೊಳಗೇ ಒಳತಳಿ ಸಂತಾನೋತ್ಪಾದನೆ ಮುಂದುವರಿದಂತೆಲ್ಲ ಗುಂಪಿನ ಎಲ್ಲ ಪ್ರಾಣಿಗಳಿಗೂ ಪರಸ್ಪರ ಸಂಬಂಧವೇರ್ಪಡುತ್ತದೆ. ಬೇರೊಂದು ಗುಂಪಿನ ಪ್ರಾಣಿಗಳು ಈ ಗುಂಪಿಗೆ ಬಂದು ಸೇರದಿದ್ದಲ್ಲಿ ಈ ಸಂಬಂಧ ನಿರಂತರವಾಗಿ ಮುಂದುವರಿಯುತ್ತಲೇ ಇರುತ್ತದೆ ಮತ್ತು ತಳಿ ಶುದ್ಧೀಕರಣ ನಡೆಯುತ್ತಿರುತ್ತದೆ. ಗುಂಪುಗಳು ಭೌಗೋಳಿಕವಾಗಿ ಬೇರ್ಪಟ್ಟಿದ್ದರಂತೂ ಒಳತಳಿ ಸಂತಾನೋತ್ಪಾದನಕ್ರಮವೇ ಇವುಗಳ ಸಂತಾನ ನಿಯಮವಾಗಿರುತ್ತದೆ. ಈ ತರಹ ಅನೇಕ ಘಟನೆಗಳು ಪ್ರಕೃತಿಯಲ್ಲಿ ನಡೆದಿವೆ; ನಡೆಯುತ್ತಿವೆ. ಆದರೆ ಅವಕ್ಕೆ ವಿಕಾಸದಲ್ಲಿ ಎಷ್ಟು ಪ್ರಾಮುಖ್ಯ ಕೊಡಬೇಕು? ಪ್ರಕೃತಿಯ ಆಯ್ಕೆಯ ಕೈವಾಡ ಈ ಗುಂಪುಗಳ ಮೇಲೆ ಯಾವ ರೀತಿಯಲ್ಲಿರುತ್ತದೆ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯಗಳು ಮೂಡಲು ಇನ್ನೂ ಸಂಶೋಧನೆಗಳು ನಡೆಯಬೇಕಾಗಿವೆ.

ಒಳತಳಿಸಂತಾನೋತ್ಪಾದನೆಯ ಬಗ್ಗೆ ವಾದಗಳು ಪ್ರತಿವಾದಗಳು ಪ್ರಾಣಿಗಳ ವಿಷಯಕ್ಕಿಂತಲೂ ಮಾನವನಲ್ಲಿ ಹೆಚ್ಚು ಪ್ರಾಮುಖ್ಯ ಪಡೆದಿವೆ. ಪುರಾತನ ಈಜಿಪ್ಟಿನ ರಾಜಕುಟುಂಬಗಳನ್ನು ಬಿಟ್ಟರೆ ಇತರ ಎಲ್ಲ ನಾಗರಿಕ ಜನಾಂಗಗಳೂ ಈ ಕ್ರಮವನ್ನು ನಿಷೇಧಿಸಿವೆ. ಸೋದರ ಸಂಬಂಧಿ ವಿವಾಹಗಳನ್ನು ಕೆಲವರು ಸಂಪುರ್ಣವಾಗಿ ಕೈಬಿಟ್ಟಿದ್ದರೆ ಇನ್ನು ಕೆಲವು ವಿಶೇಷ ಮತ ವ್ಯವಸ್ಥೆಗಳು ಇವಕ್ಕೆ ವಿನಾಯಿತಿ ಕೊಟ್ಟಿವೆ. ಪುರ್ವಜರು ಎಲ್ಲ ರೀತಿಯಲ್ಲೂ ಉತ್ಕೃಷ್ಟ ಅನುವಂಶೀಯ ಗುಣಗಳನ್ನು ಪಡೆದಿದ್ದಲ್ಲಿ ಈ ವ್ಯವಸ್ಥೆ ಜೀವಶಾಸ್ತ್ರದ ಪ್ರಕಾರ ಬಹು ಒಳ್ಳೆಯದು.

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: