ಅಲೆಕ್ಸಾಂಡರ್ ಫ್ಲೆಮಿಂಗ್
ಅಲೆಕ್ಸಾಂಡರ್ ಫ್ಲೆಮಿಂಗ್ | |
---|---|
ಜನನ | ಲಾಕ್‌ಫೀಲ್ಡ್, ಸ್ಕಾಟ್ಲಾಂಡ್ | ೬ ಆಗಸ್ಟ್ ೧೮೮೧
ಮರಣ | 11 March 1955 ಲಂಡನ್, ಇಂಗ್ಲೆಂಡ್ | (aged 73)
ಪೌರತ್ವ | ಯುನೈಟೆಡ್ ಕಿಂಗ್‌ಡಂ |
ರಾಷ್ಟ್ರೀಯತೆ | ಸ್ಕಾಟಿಶ್ |
ಕಾರ್ಯಕ್ಷೇತ್ರ | ಬ್ಯಾಕ್ಟೀರಿಯಾಲಜಿ, ರೋಗನಿರೋಧ ಶಾಸ್ತ್ರ |
ಅಭ್ಯಸಿಸಿದ ವಿದ್ಯಾಪೀಠ | ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾನಿಲಯ; ಸೈಂಟ್ ಮೇರೀಸ್ ಆಸ್ಪತ್ರೆ, ಲಂಡನ್ |
ಪ್ರಸಿದ್ಧಿಗೆ ಕಾರಣ | ಪೆನ್ಸಿಲಿನ್ ಸಂಶೋಧನೆ |
ಗಮನಾರ್ಹ ಪ್ರಶಸ್ತಿಗಳು | ಶರೀರಶಾಸ್ತ್ರ ವಿಭಾಗದ ನೋಬೆಲ್ ಪುರಸ್ಕಾರ (೧೯೪೫) |
ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ [೧] ( ೬ ಆಗಸ್ಟ್ ೧೮೮೧ - ೧೧ ಮಾರ್ಚಿ ೧೯೫೫) - ಇವರು ಸ್ಕಾಟ್ಲೆಂಡ್‌ನ ಪ್ರಸಿದ್ಧ ಜೀವಶಾಸ್ತ್ರಜ್ಞ ಮತ್ತು ಔಷಧ ವಿಜ್ಞಾನಿ ಅಗಿದ್ದರು. ಫ್ಲೆಮಿಂಗ್ ಬ್ಯಾಕ್ಟ್ರೀಯಶಾಸ್ತ್ರ, ರೋಗ ರಕ್ಷಾಶಾಸ್ತ್ರ ಮತ್ತು ಕೀಮೊಥೆರಪಿಯ (ರಸಾಯನ ಚಿಕಿತ್ಸೆ) ಬಗ್ಗೆ ಅನೇಕ ಲೇಖನಗಳನ್ನು ಬರೆದು ಪ್ರಕಟಿಸಿದರು. ಇಸವಿ ೧೯೨೩ರಲ್ಲಿ ಲೈಸೊಜೈಮ್ ಎಂಬ ಕಿಣ್ವ (ಎಂಜೈಮ್)ದ ಪತ್ತೆ, ಹಾಗೂ, ೧೯೨೮ರಲ್ಲಿ ಪೆನಿಸಿಲ್ಲಿಯಮ್ ನೊಟಾಟಮ್ ಎನ್ನುವ ಫಂಗಸ್‌ನಿಂದ (ಶಿಲೀಂಧ್ರ) ಪೆನ್ಸಿಲಿನ್ ಎನ್ನುವ ಪ್ರತಿಜೀವಕ (ಆಂಟಿಬಯೋಟಿಕ್) ವಸ್ತುವಿನ ಸಂಶೋಧನೆಯು, ಇವರ ಅತ್ಯಂತ ಪ್ರಸಿದ್ಧ ಸಾಧನೆಗಳಾಗಿವೆ. ಈ ಸಂಶೋಧನೆಗಾಗಿ, ೧೯೪೫ರಲ್ಲಿ ಹಾವರ್ಡ್ ವಾಲ್ಟರ್ ಫ್ಲೋರೆ ಮತ್ತು ಎರ್ನಸ್ಟ್ ಬೋರಿಸ್ ಚೈನ್ ಜೊತೆಯಲ್ಲಿ ಫ್ಲೆಮಿಂಗ್‌ರಿಗೆ ಫಿಸಿಯೊಲಾಜಿ (ಶರೀರವಿಜ್ಞಾನ ಶಾಸ್ತ್ರ) ಅಥವಾ ಮೆಡಿಸಿನ್ (ವೈದ್ಯಕೀಯ ಶಾಸ್ತ್ರ)ಕ್ಕಾಗಿ ನೋಬಲ್ ಪ್ರಶಸ್ತಿ ಲಭಿಸಿತು.[೨] ಇತ್ತೀಚೆಗೆ ೧೯೯೯ರಲ್ಲಿ, ಪೆನಿಸಿಲಿನ್ ಸಂಶೋಧಕ ಫ್ಲೆಮಿಂಗ್‌ರನ್ನು 20ನೇ ಶತಮಾನದ ಅತಿ ಪ್ರಮುಖ 100 ಜನರ ಪಟ್ಟಿಯಲ್ಲಿ ಸೇರಿಸಿದ ಟೈಮ್ ಮ್ಯಾಗಜೀನ್ , ಈ ಹೇಳಿಕೆ ನೀಡಿ ಪ್ರಶಂಸಿಸಿತು: "ಈ ಶೋಧನೆಯು ಪ್ರಪಂಚದ ಇತಿಹಾಸವನ್ನು ಬದಲಾಯಿಸಿತು. ಫ್ಲೆಮಿಂಗ್‌ರು 'ಪೆನಿಸಿಲಿನ್' ಎಂದು ಕರೆದ ಆ ಮೌಲ್ಡ್‌ನಲ್ಲಿದ್ದ ಸಕ್ರಿಯ ಆಂಶವು, ಸೋಂಕುಕಾರಕಗಳನ್ನು ಅಪಾರ ಪ್ರಬಲವಾಗಿ ಪ್ರತಿರೋಧಿಸುತ್ತಿತ್ತು. ಇದರ ಸಾಮರ್ಥ್ಯವನ್ನು ಕೊನೆಗೆ ಗುರುತಿಸಲ್ಪಟ್ಟಾಗ, ಜೀವವನ್ನು ಕಾಪಾಡುವ, ವಿಶ್ವದಲ್ಲಿಯೇ ಅತ್ಯಂತ ಪರಿಣಾಮಕಾರಿ ಪೆನಿಸಿಲಿನ್ ಔಷಧವಾಗಿ ರೂಪಗೊಂಡಿತು.ಇದು ಬ್ಯಾಕ್ಟೀರಿಯಗಳ ಸೋಂಕುಗಳಿಗಾಗಿ ಅನುಸರಿಸಲಾದ ಚಿಕಿತ್ಸಾ ಪದ್ಧತಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಶತಮಾನದ ಮಧ್ಯಭಾಗದಲ್ಲಿ ಫ್ಲೆಮಿಂಗ್‌ರ ಸಂಶೋಧನೆಯು, ಬೃಹತ್ ಪ್ರಮಾಣದ ಔಷಧೀಯ ಕೈಗಾರಿಕೆಗಳ ಸ್ಥಾಪನೆಗೆ ಕಾರಣವಾಯಿತು. ಇವು ಕೃತಕ (ಸಂಶ್ಲೇಷಿತ) ಪೆನಿಸಿಲಿನ್‌ಗಳನ್ನು ತಯಾರಿಸಿದವು. ಮನುಷ್ಯಜಾತಿಯ ಅತಿ ಪ್ರಾಚೀನ ಉಪದ್ರವಗಳಲ್ಲಿ ಕೆಲವು ರೋಗಗಳಾದ ಸಿಫಿಲಿಸ್, ಗ್ಯಾಂಗ್ರೀನ್ (ಅಂಗಕ್ಷಯ), ಟ್ಯೂಬರ್ಕ್ಯುಲೋಸಿಸ್ (ಕ್ಷಯರೋಗ) ವನ್ನು ನಿಗ್ರಹಿಸಲು ನೆರವಾಯಿತು."[೩]
ಜೀವನ ಚರಿತ್ರೆ
[ಬದಲಾಯಿಸಿ]ಆರಂಭಿಕ ಜೀವನ
[ಬದಲಾಯಿಸಿ]ಫ್ಲೆಮಿಂಗ್ ೬ ಆಗಸ್ಟ್ ೧೮೮೧ರಂದು ಸ್ಕಾಟ್ಲೆಂಡ್‌ನ ಇಸ್ಟ್ ಆಯಿರ್‌ಶೈರ್‌ನಲ್ಲಿರುವ ಡಾರ್ವೆಲ್ ಹತ್ತಿರ ಲಾಕ್‌ಫೀಲ್ಡ್‌ನ ತೋಟದ ಮನೆಯಲ್ಲಿ ಹುಟ್ಟಿದರು. ಇವರ ತಂದೆ ಹಗ್ ಫ್ಲೆಮಿಂಗ್ (೧೮೧೬-೧೮೮೮), ತಮ್ಮ ನೆರೆ ಹೊಲದ ರೈತರ ಮಗಳಾದ ಗ್ರೀಸ್ ಸ್ಟಿರ್ಲಿಂಗ್ ಮಾರ್ಟನ್ (೧೮೪೮-೧೯೨೮)ರೊಂದಿಗೆ ಎರಡನೆಯ ಮದುವೆಯಾದರು. ಈ ದಂಪತಿಯ ನಾಲ್ಕು ಮಂದಿ ಮಕ್ಕಳ ಪೈಕಿ ಅಲೆಕ್ಸಾಂಡರ್ ಫ್ಲೆಮಿಂಗ್ ಮೂರನೆಯವರಾಗಿದ್ದರು. ಹಗ್ ಫ್ಲೆಮಿಂಗ್ ತಮ್ಮ ಮೊದಲ ಮದುವೆಯಿಂದ ನಾಲ್ಕು ಜನ ಮಕ್ಕಳನ್ನು ಪಡೆದಿದ್ದರು. ಎರಡನೆಯ ಮದುವೆಯಾದಾಗ ಹಗ್‌ರಿಗೆ ೫೯ ವರ್ಷವಾಗಿತ್ತು. ಅಲೆಕ್ ಎಂದು ಹೆಸರಾಗಿದ್ದ ಅಲೆಕ್ಸಾಂಡರ್ ಏಳು ವರ್ಷದವನಾಗಿದ್ದಾಗ ಹಗ್ ನಿಧನರಾದರು.
ಫ್ಲೆಮಿಂಗ್ ಲೌಡೆನ್ ಮೂರ್ ಶಾಲೆ ಮತ್ತು ಡಾರ್ವೆಲ್ ಶಾಲೆಗೆ ಹೋದರು. ಇವೆರಡೂ ಶಾಲೆಗಳು ಸಾಧಾರಣ ಶಾಲೆಗಳಾಗಿದ್ದರೂ, ಕಿಲ್ಮಾರನಾಕ್ ಅಕಾಡೆಮಿಯಲ್ಲಿ ಸೇರ್ಪಡೆಯಾಗಲು ಎರಡು ವರ್ಷಗಳ ವಿದ್ಯಾರ್ಥಿ ವೇತನ ಗಳಿಸಿದರು. ಆನಂತರ ಇವರು ಲಂಡನ್‌ಗೆ ಸ್ಥಳಾಂತರಗೊಂಡರು. ಇಲ್ಲಿ ಇವರು ರಾಯಲ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಷನ್‌ನಲ್ಲಿ ಪ್ರವೇಶಪಡೆದರು[೪]. ಸರಕು ಸಾಗಾಣಿಕೆಯ ಕಾರ್ಯಾಲಯ (ಹಡಗು ಕಛೇರಿ) ದಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್ ನಾಲ್ಕು ವರ್ಷ ಕೆಲಸ ಮಾಡಿದ ನಂತರ, ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ತಮ್ಮ ಚಿಕ್ಕಪ್ಪ ಜಾನ್ ಫ್ಲೆಮಿಂಗ್‌ರಿಂದ ಸ್ವಲ್ಪಮೊತ್ತದ ಹಣಕ್ಕೆ ವಾರಸುದಾರರಾದರು. ಇವರ ಅಣ್ಣ ಟಾಮ್ ಫ್ಲೆಮಿಂಗ್ ಆಗಲೇ ವೈದ್ಯ ವೃತ್ತಿಯಲ್ಲಿದ್ದರು. ತಾವೂ ವೈದ್ಯ ವೃತ್ತಿ ಆಯ್ದುಕೊಳ್ಳುವಂತೆ ಅಲೆಕ್ಸಾಂಡರ್ ಫ್ಲೆಮಿಂಗ್‌ರಿಗೆ ಸಲಹೆ ನೀಡಿದರು. ಇದರ ಫಲವಾಗಿ, ಅಲೆಕ್ಸಾಂಡರ್ ೧೯೦೧ರಲ್ಲಿ ವ್ಯಾಸಂಗ-ತರಬೇತಿಗಳಿಗಾಗಿ ಲಂಡನ್‌ನ ಪಾಡಿಂಗ್‌ಟನ್‌ನಲ್ಲಿರುವ ಸೇಂಟ್ ಮೇರಿಸ್ ಆಸ್ಪತ್ರೆ ಸೇರಿದರು. ಆತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಅಲೆಕ್ಸಾಂಡರ್, ೧೯೦೬ರಲ್ಲಿ ಶಾಲೆ ಸೇರಲು ಆರ್ಹತೆ ಗಳಿಸಿದರು. ಶಸ್ತ್ರಚಿಕಿತ್ಸಕರಾಗುವ ಆಯ್ಕೆ ಸಹ ಇವರ ಮುಂದಿತ್ತು.ಆದರೂ, ಅವರು ಬಂದೂಕು ಸಮುದಾಯವೊಂದರ ಸದಸ್ಯರಾಗಿದ್ದದ್ದು ಆಕಸ್ಮಿಕ (೧೯೦೦ರಿಂದಲೂ ಅವರು ವಾಲಂಟಿಯರ್ ಫೋರ್ಸ್ (ಸ್ವಯಂಸೇವಕ ತಂಡದ) ಸಕ್ರಿಯ ಸದಸ್ಯರಾಗಿದ್ದರು. ಅಲೆಕ್ಸಾಂಡರ್ ಫ್ಲೆಮಿಂಗ್‌ರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಲುವಾಗಿ, ಕ್ಲಬ್‌ನ ನಾಯಕರು ಸೇಂಟ್ ಮೇರಿಸ್‌ನ ಸಂಶೋಧನಾ ವಿಭಾಗಕ್ಕೆ ಸೇರುವಂತೆ ಫ್ಲೆಮಿಂಗ್‌ಗೆ ಸಲಹೆ ಕೊಟ್ಟರು. ಅದರಂತೆ, ಫ್ಲೆಮಿಂಗ್ ಪ್ರಸಿದ್ಧ ಲಸಿಕಾ ಚಿಕಿತ್ಸೆ (ವ್ಯಾಕ್ಸೀನ್ ತೆರಪಿ) ಮತ್ತು ಪ್ರತಿರಕ್ಷಾ ವಿಜ್ಞಾನದ (ಇಮ್ಯೂನಾಲಜಿಯ) ತಜ್ಞ ಸರ್ ಅಲ್ಮೊರ್ತ್ ವ್ರೈಟ್‌ರ ಸಹಾಯಕ ಬ್ಯಾಕ್ಟೀರಿಯ ವಿಜ್ಞಾನಿಯಾಗಿ ಸೇರಿಕೊಂಡರು ಇವರು M.B. ಪಡೆದು, ನಂತರ ೧೯೦೮ರಲ್ಲಿ ಚಿನ್ನದ ಪದಕದೊಂದಿಗೆ B.Sc.ಪದವಿ ಗಳಿಸಿದರು. ಇಸವಿ ೧೯೧೪ರ ತನಕ ಸೇಂಟ್ ಮೇರಿಸ್‌ನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ದಿನಾಂಕ ೨೩ ಡಿಸೆಂಬರ್ ೧೯೧೫ರಂದು ಫ್ಲೆಮಿಂಗ್ ಐರ್ಲೆಂಡ್‌ನ ಕಿಲ್ಲಾಲ ನಿವಾಸಿ ಸಾರಾ ಮ್ಯಾರಿಯಾನ್ ಮೆಕೆಲ್ರಾಯ್ ಎಂಬ ತರಬೇತಾದ ನರ್ಸ್‌ರನ್ನು ಮದುವೆಯಾದರು. ಮೊದಲನಯೆ ವಿಶ್ವಯುದ್ಧದ ಅವಧಿಯುದ್ದಕ್ಕೂ ಅಲೆಕ್ಸಾಂಡರ್ ಫ್ಲೆಮಿಂಗ್ ಅರ್ಮಿ ಮೆಡಿಕಲ್ ಕೋರ್ಸ್‌ನಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು. ಇದನ್ನು ಅಧಿಕೃತವಾಗಿ ದಾಖಲಿಸಲಾಗಿದೆ. ಇವರು ಹಾಗೂ ಇವರ ಹಲವು ಸಹೋದ್ಯೋಗಿಗಳು ಫ್ರಾನ್ಸ್‌ನ ಪಶ್ಚಿಮ ಗಡಿಯಲ್ಲಿನ ರಣರಂಗದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದರು. ಆನಂತರ, ೧೯೧೮ರಲ್ಲಿ ಫ್ಲೆಮಿಂಗ್, ವೈದ್ಯಕೀಯ ಶಿಕ್ಷಣದ ಆಸ್ಪತ್ರೆಯಾಗಿದ್ದ ಸೇಂಟ್ ಮೇರಿಸ್ ಹಾಸ್ಪಿಟಲ್‌ಗೆ ಮರಳಿದರು. ಇವರು ೧೯೨೮ರಲ್ಲಿ ಬ್ಯಾಕ್ಟೀರಿಯಾ-ವಿಜ್ಞಾನದ ಪ್ರಾಧ್ಯಾಪಕರಾಗಿ ಆಯ್ಕೆಯಾದರು.
ಸಂಶೋಧನೆ
[ಬದಲಾಯಿಸಿ]ಪೆನಿಸಿಲಿನ್‌ಗೂ ಮುಂಚೆ ಮಾಡಿದ ಕೆಲಸಗಳು/ಸಾಧನೆಗಳು
[ಬದಲಾಯಿಸಿ]ಯುದ್ಧದಲ್ಲಿ ಗಾಯಗಳು ಸೋಂಕಾಗಿ ಉಂಟಾದ ಸೆಪ್ಟಿಸೆಮಿಯದ ಕಾರಣ ಅನೇಕ ಸೈನಿಕರು ಮೃತರಾದದ್ದನ್ನು ನೋಡಿದ್ದ ಫ್ಲೆಮಿಂಗ್, ಯುದ್ಧದ ಬಳಿಕ ಬ್ಯಾಕ್ಟೀರಿಯಾವನ್ನು ವಿರೋಧಿಸುವ ಬ್ಯಾಕ್ಟೀರಿಯಾ-ವಿರೋಧಿ ಕಾರಕಗಳಿಗಾಗಿ ಅವಿರತ ಸಂಶೋಧನೆ ನಡೆಸಿದರು. ಪೂತಿನಾಶಕಗಳು (ಆಂಟಿಸೆಪ್ಟಿಕ್‌ಗಳು) ರೋಗಿಗಳಲ್ಲಿ ರೋಗವನ್ನುಂಟುಮಾಡುತ್ತಿದ್ದ ಬ್ಯಾಕ್ಟೀರಿಯಾವನ್ನು ನಾಶಮಾಡುವುದಕ್ಕಿಂತ ಹೆಚ್ಚಾಗಿ ರೋಗಿಗಳ ಪ್ರತಿರೋಧಕ ಶಕ್ತಿಯನ್ನು ಪರಿಣಾಮಕಾರಿಯಾಗಿ ನಾಶಮಾಡುತ್ತಿದ್ದವು. ದಿ ಲ್ಯಾಂಸೆಟ್ ಎಂಬ ವೈದ್ಯಕೀಯ ಪತ್ರಿಕೆಗಾಗಿ ಫ್ಲೆಮಿಂಗ್ ಲೇಖನವೊಂದನ್ನು ಸಲ್ಲಿಸಿದರು. ಅದರಲ್ಲಿ ಅವರು ಚಾತುರ್ಯದಿಂದ ನಡೆಸಿದ ಪ್ರಯೋಗ ಕುರಿತು ವಿವರಿಸಿದ್ದರು. ತಮ್ಮದೇ ಆದ ಗಾಜು ಊದುವ ಕುಶಲತೆಯ ಫಲವಾಗಿ ಅವರು ಈ ಪ್ರಯೋಗ ನಡೆಸಲು ಸಾಧ್ಯವಾಯಿತು. ಈ ಪ್ರಕಾರ, ಮೊದಲನೆಯ ವಿಶ್ವಸಮರದಲ್ಲಿ ಸೈನಿಕರು ಮೃತರಾಗಲು ಸೋಂಕಿಗಿಂತಲೂ ಹೆಚ್ಚಾಗಿ ಪೂತಿನಾಶಕಗಳೇಕೆ ಕಾರಣ ಎಂದು ವಿವರಿಸಿದರು. ಪೂತಿನಾಶಕಗಳು ಕೇವಲ ಗಾಯದ ಮೇಲ್ಮೈ ಮೇಲೆ ಪರಿಣಾಮಕಾರಿಯಾಗಿದ್ದವು. ಆದರೆ ಆಳವಾದ ಗಾಯಗಳು ಆಮ್ಲಜನಕವಿಲ್ಲದೆ ಜೀವಿಸಬಲ್ಲ ಬ್ಯಾಕ್ಟೀರಿಯಾಗಳನ್ನು ಪೂತಿನಾಶಕಗಳಿಂದ ರಕ್ಷಿಸುತ್ತಿದ್ದವು. ಈ ವಿಚಾರದಲ್ಲಿ ಈ ಪೂತಿನಾಶಕಗಳು ಬ್ಯಾಕ್ಟೀರಿಯಾಗಳೊಂದಿಗೆ ರೋಗಿಗಳನ್ನು ರಕ್ಷಿಸುವಂತಹ ಕಾರಕಗಳನ್ನು ಸಹ ನಾಶಪಡಿಸುತ್ತಿದ್ದವು. ಆಳ ಗಾಯಗಳಲ್ಲಿದ್ದ, ತಲುಪಲಾಗದ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ವಿಫಲವಾಗುತ್ತಿದ್ದವು. ಸರ್ ಅಲ್ಮೊರ್ತ್ ವ್ರೈಟ್ ಫ್ಲೆಮಿಂಗ್‌ರ ಸಂಶೋಧನೆಯನ್ನು ದೃಢವಾಗಿ ಸಮರ್ಥಿಸಿದರು. ಆದರೂ ಸಹ, ಮೊದಲನೆಯ ವಿಶ್ವಯುದ್ಧದ ಅವಧಿಯುದ್ದಕ್ಕೂ ಹಲವು ಸೇನಾ ವೈದ್ಯರು, ರೋಗಿಗಳ ಸ್ಥಿತಿಯನ್ನು ಬಿಗಡಾಯಿಸುವಂತಹ ವಿಚಾರಗಳಲ್ಲಿಯೂ ಪೂತಿನಾಶಕಗಳ ಬಳಕೆ ಮುಂದುವರೆಸಿದರು.
ಆಕಸ್ಮಿಕ ಪರಿಶೋಧನೆ
[ಬದಲಾಯಿಸಿ]ಅಲೆಕ್ಸಾಂಡರ್ ಫ್ಲೆಮಿಂಗ್ ಆನಂತರ ವಿವರಿಸಿದಂತೆ, '೨೮ ಸೆಪ್ಟೆಂಬರ್ ೧೯೨೮ರ ಮುಂಜಾನೆ ನಾನು ನಿದ್ರೆಯಿಂದ ಎದ್ದಾಗ, ವಿಶ್ವದ ಮೊದಲ ಪ್ರತಿಜೀವಕ ಅಥವಾ ಬ್ಯಾಕ್ಟೀರಿಯಾ ನಾಶಕವನ್ನು ಪರಿಶೋಧಿಸಿ, ಇಡೀ ವೈದ್ಯಕೀಯ ಕ್ಷೇತ್ರದಲ್ಲೇ ಕ್ರಾಂತಿಯೆಬ್ಬಿಸುವೆ ಎಂದು ಯೋಚಿಸಿಯೇ ಇರಲಿಲ್ಲ. ಆದರೆ ನಾನು ಅದನ್ನೇ ಮಾಡಿದ್ದೆ ಅನಿಸುತ್ತದೆ.'[೫] ಇಸವಿ ೧೯೨೮ರೊಳಗೆ ಫ್ಲೆಮಿಂಗ್ ಸ್ಟಫೈಲೊಕಾಕೈ ಬ್ಯಾಕ್ಟೀರಿಯಾದ ಗುಣಗಳ ಆಧ್ಯಯನ ನಡೆಸುತ್ತಿದ್ದರು. ಆಗಾಗಲೇ ಅವು ತಮ್ಮ ಹಿಂದಿನ ಸಂಶೋಧನಾ ಕಾರ್ಯಗಳಿಂದಾಗಿ ಅವರು ಒಬ್ಬ ಅತ್ಯುತ್ತಮ ಸಂಶೋಧಕರೆಂದು ಹೆಸರುವಾಸಿಯಾಗಿದ್ದರು. ಆದರೆ, ಅವರ ಪ್ರಯೋಗಾಲಯವು ಆಗಾಗ್ಗೆ ಒಪ್ಪಓರಣವಾಗಿರುತ್ತಿರಲಿಲ್ಲ. ಆಗಸ್ಟ್ ೧೯೨೮ರಲ್ಲಿ ತಮ್ಮ ಕುಟುಂಬದೊಂದಿಗೆ ರಜೆ ಕಳೆದ ನಂತರ, ೩ ಸೆಪ್ಟೆಂಬರ್ ೧೯೨೮ರಂದು ಫ್ಲೆಮಿಂಗ್ ಪ್ರಯೋಗಾಲಯಕ್ಕೆ ಮರಳಿದರು. ರಜೆಗೆ ತೆರಳುವ ಮುನ್ನ ಅವರು ಸ್ಟಫೈಲೊಕಾಕೈ ಸಂಗೋಪನಗಳನ್ನು ತಮ್ಮ ಪ್ರಯೋಗಾಲಯದ ಮೂಲೆಯಲ್ಲಿದ್ದ ಮೇಜಿನ ಮೇಲ್ಲಿಟ್ಟದ್ದರು. ಫ್ಲೆಮಿಂಗ್ ಹಿಂದಿರುಗಿದಾಗ, ಒಂದು ಸಂಗೋಪನವು ಶಿಲೀಂಧ್ರದಿಂದ ಕಲುಷಿತಗೊಂಡಿರುವುದನ್ನು ಅವರು ಗಮನಿಸಿದರು. ಶಿಲೀಂಧ್ರವನ್ನು ಸುತ್ತುವರಿದಿದ್ದ ಸ್ಟಫೈಲೊಕಾಕೈನ ಸಮುದಾಯ ನಾಶವಾಗಿದ್ದವು, ಆದರೆ ಇದೇ ವೇಳೆಯಲ್ಲಿ ಅದರಿಂದ ದೂರವಿದ್ದ ಸ್ಟಫೈಲೊಕಾಕೈನ ಇತರ ಸಮುದಾಯಗಳು ಸಹಜ ಸ್ಥಿತಿಯಲ್ಲಿದ್ದವು. ಕಲುಷಿತಗೊಂಡಿದ್ದ ಸಂಗೋಪನವನ್ನು ಫ್ಲೆಮಿಂಗ್ ತಮ್ಮ ಮಾಜಿ ಸಹಾಯಕ ಮೆರ್ಲಿನ್ ಪ್ರೈಸ್‌ಗೆ ತೋರಿಸಿದರು, ಆಗ ಪ್ರೈಸ್ 'ಲೈಸೊಸೋಮ್ ಅನ್ನು ನೀವು ಪತ್ತೆ ಮಾಡಿದ್ದು ಹೀಗೆಯೆ' ಎಂದರು.[೬] ಫ್ಲೆಮಿಂಗ್ ತಮ್ಮ ಸಂಗೋಪನವನ್ನು ಕಲುಷಿತಗೊಳಿಸಿದ ಬೂಜನ್ನು ಪೆನಿಸಿಲಿಯಮ್ ಎಂಬ ಕುಲಕ್ಕೆ (ಜೀನಸ್) ಸೇರಿದ್ದ ಜೀವಿಗಳೆಂದು ಪತ್ತೆ ಮಾಡಿದರು. ಅದು ವಿಸರ್ಜಿಸುತ್ತಿದ್ದ ದ್ರವ್ಯವನ್ನು ಮೊದಮೊದಲು ಮೌಲ್ಡ್ ಜ್ಯೂಸ್ ಎಂದು ಕರೆಯುತ್ತಿದ್ದರು. ಆದರೆ ೭ ಮಾರ್ಚಿ ೧೯೨೯ರಂದು ಅದಕ್ಕೆ ಪೆನಿಸಿಲಿನ್ ಎಂಬ ಹೆಸರಿನ್ನಿಟ್ಟರು.[೭] ಫ್ಲೆಮಿಂಗ್ ಹಲವು ಜೀವಿಗಳ ಮೇಲೆ ಈ ಶಿಲೀಂಧ್ರದ ಸಕಾರಾತ್ಮಕ ಬ್ಯಾಕ್ಟೀರಿಯಾ-ವಿರೋಧಿ ಪ್ರಭಾವಗಳ ತನಿಖೆ ನಡೆಸಿದರು. ಈ ಶಿಲೀಂಧ್ರಗಳು ಸ್ಟಫೈಲೊಕಾಕೈನಂತಹ ಬ್ಯಾಕ್ಟೀರಿಯಾ, ಹಾಗೂ ಕೆಂಪು ಜ್ಚರ, ನ್ಯುಮೊನಿಯಾ, ಮೆದುಳ್ಪೊರೆಯುರಿತ (ಮೆನಿಂಜಿಟಿಸ್) ಹಾಗೂ ಗಳಚರ್ಮರೋಗ (ಡಿಫ್ತೀರಿಯಾ)ಗಳಿಗೆ ಕಾರಣವಾದ ಗ್ರಾಮ್-ಧನಾತ್ಮಕ ವ್ಯಾಧಿಜನಕಗಳ ಮೇಲೆ ಪ್ರಭಾವ ಬೀರುತ್ತಿದ್ದವು. ಆದರೆ ಟೈಫಾಯ್ಡ್ ಅಥವಾ ಪ್ಯಾರಾಟೈಫಾಯ್ಡ್ ಜ್ವರಗಳಿಗೆ ಕಾರಣವಾದ ಗ್ರಾಮ್ ಋಣಾತ್ಮಕ ಬ್ಯಾಕ್ಟೀರಿಯಾ ವ್ಯಾಧಿಜನಕಗಳ ಮೇಲೆ ಪ್ರಭಾವ ಬೀರುತ್ತಿರಲಿಲ್ಲ ಎಂದು ಗಮನಿಸಿದರು. ಆ ಸಮಯ ಅವರು ಇದಕ್ಕೆ ಪರಿಹಾರ ಹುಡುಕುತ್ತಿದ್ದರು. ಇದು ಶುಕ್ಲಮೇಹ ರೋಗ (ಗನೋರಿಯಾ) ಉಂಟು ಮಾಡುವ ನೆಸ್ಸೆರಿಯ ಗನೋರಿಯಾ (Neisseria gonorrhoeae) ಎಂಬ ಬ್ಯಾಕ್ಟೀರಿಯಾ ಗ್ರಾಮ್-ಋಣಾತ್ಮಕವಾಗಿದ್ದರೂ ಸಹ ಅದರ ಮೇಲೆ ಪರಿಣಾಮ ಬೀರಿತ್ತು. ಇಸವಿ ೧೯೨೯ರಲ್ಲಿ ಫ್ಲೆಮಿಂಗ್ ತಮ್ಮ ಸಂಶೋಧನೆಯನ್ನು ಬ್ರಿಟಿಷ್ ಜರ್ನಲ್ ಆಫ್ ಎಕ್ಸ್‌ಪೆರಿಮೆಂಟಲ್ ಪತಾಲಜಿ[೮] ಎಂಬ ನಿಯತಕಾಲಿಕೆಯಲ್ಲಿ ಪ್ರಕಟಿಸಿದರು. ಆದರೆ ಈ ಲೇಖನಕ್ಕೆ ಯಾರೂ ಹೆಚ್ಚು ಗಮನ ಕೊಡಲಿಲ್ಲ. ಫ್ಲೆಮಿಂಗ್ ತಮ್ಮ ಸಂಶೋಧನೆಯನ್ನು ಮುಂದುವರೆಸಿದರು, ಆದರೆ, ಪೆನಿಸಿಲಿಯಮ್ ಬೂಷ್ಟನ್ನು ಬೆಳೆಸುವುದು ಬಹಳ ಕಷ್ಟಸಾಧ್ಯವೆಂಬುದನ್ನು ಮನಗಂಡರು; ಒಮ್ಮೆ ಈ ಬೂಷ್ಟನ್ನು ಬೆಳೆಸಿದ ನಂತರ, ಅದರಿಂದ ಪ್ರತಿಜೀವಕ ಕಾರಕವನ್ನು ಬೇರ್ಪಡಿಸುವುದು ಇನ್ನೂ ತ್ರಾಸದಾಯಕವಾಗಿತ್ತು. ಫ್ಲೆಮಿಂಗ್ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುವುದು ಕಷ್ಟವಾದುದರಿಂದ, ಹಾಗೂ ಬಹಳ ನಿಧಾನಗತಿಯಲ್ಲಿ ಇದರ ಪರಿಣಾಮವಾಗುತ್ತದೆ ಎಂದು ಗೋಚರಿಸಿದರ ಫಲವಾಗಿ, ಸೋಂಕುಗಳನ್ನು ವಾಸಿಮಾಡುವುದರಲ್ಲಿ ಪೆನಿಸಿಲಿನ್ ಅಷ್ಟೇನೂ ಪ್ರಮುಖ ಪಾತ್ರ ನಿರ್ವಹಿಸಲಾರದು ಎನ್ನುವುದು ಅವರ ಎಣಿಕೆಯಾಗಿತ್ತು. ಪೆನಿಸಿಲಿನ್ ಮನುಷ್ಯರ ದೇಹದಲ್ಲಿ (ಇನ್ ವೀವೋ (ದೇಹದ ಒಳಗೆ)) ಬ್ಯಾಕ್ಟೀರಿಯಗಳನ್ನು ಪರಿಣಾಮಕಾರಿಯಾಗಿ ಕೊಲ್ಲುವಷ್ಟು ದೀರ್ಘಕಾಲ ಉಳಿಯುವುದಿಲ್ಲ ಎಂದು ಫ್ಲೆಮಿಂಗ್ ಅಭಿಪ್ರಾಯಪಟ್ಟರು. ಬಹುಶಃ ಇದನ್ನು ಮೇಲ್ಮೈಯ ಮೇಲೆ ನೀಡಲಾಗುತ್ತಿದ್ದ (ಸರ್ಫೇಸ್ ಆಂಟಿಸೆಪ್ಟಿಕ್ ಆಗಿ ಬಳಸಲಾಗುತ್ತಿದ್ದ) ಕಾರಣ, ಆನೇಕ ವೈದ್ಯಕೀಯ ಪ್ರಯೋಗಗಳ ಫಲಿತಾಂಶಗಳು ಅಸ್ಟಷ್ಟವಾಗಿದ್ದವು. ಫ್ಲೆಮಿಂಗ್ ೧೯೩೦ರ ದಶಕದಲ್ಲಿ ನಡೆಸಿದ ಪರೀಕ್ಷೆಗಳು ಹೆಚ್ಚಿನ ಭರವಸೆಯನ್ನು ಕೊಟ್ಟವು.[೯] ಹೀಗಾಗಿ, ಪುನಃ ಬಳಸಬಹುದಾದ ಪೆನಿಸಿಲಿನ್‌ನ್ನು ಸಂಸ್ಕರಿಸುವಷ್ಟು ಪರಿಣತ ಔಷಧ ತಯಾರಕರ ಆಸಕ್ತಿಯನ್ನು ಸೆಳೆಯಲು, ಅವರು ತಮ್ಮ ಪ್ರಯೋಗಗಳನ್ನು ೧೯೪೦ರ ತನಕ ಮುಂದುವರೆಸಿದರು. ಫ್ಲೆಮಿಂಗ್ ಪೆನಿಸಿಲಿನ್ ಸಂಸ್ಕರಿಸುವ ತಮ್ಮ ಯೋಜನೆಯನ್ನು ಕೈಬಿಟ್ಟರು; ಅದರೆ ಶೀಘ್ರದಲ್ಲಿಯೇ ಫ್ಲೋರೆ ಮತ್ತು ಚೈನ್ U.S (ಯು.ಎಸ್) ಮತ್ತು ಬ್ರಿಟಿಷ್ ಸರಕಾರಗಳ ಧನಸಹಾಯದೊಂದಿಗೆ ಫ್ಲೆಮಿಂಗ್‌ರ ಸಂಶೋಧನೆಯನ್ನು ಆಧರಿಸಿ ಮುಂದುವರೆಸಿ, ಪೆನಿಸಿಲಿನ್‌ನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸತೊಡಗಿದರು. ಅಮೆರಿಕಾ ಖಂಡದ ಪೂರ್ವ ತೀರದಲ್ಲಿರುವ ಪರ್ಲ್ ಹಾರ್ಬರ್ ಮೇಲೆ ಬಾಂಬ್ ಧಾಳಿಯಾದ ನಂತರ ಅವರಿಬ್ಬರೂ ಪೆನಿಸಿಲಿನ್‌ನ್ನು ಭಾರಿ ಪ್ರಮಾಣದಲ್ಲಿ ಉತ್ಪಾದಿಸತೊಡಗಿದರು. ಡಿ-ಡೇ (ಯಾವುದೇ ಕಾರ್ಯಚರಣೆ ಪ್ರಾರಂಭವಾಗಲು ನಿಗದಿ ಪಡಿಸಿದ ದಿನ) ಬಂದಾಗ ಇವರು ಗಾಯಗೊಂಡಿದ್ದ ಮೈತ್ರಿಕೂಟದ ಎಲ್ಲಾ ಸೈನಿಕರಿಗೆ ಬೇಕಾಗುವಷ್ಟು ಪೆನಿಸಿಲಿನ್‌ನ್ನು ತಯಾರಿಸಿದ್ದರು.
ಶುದ್ಧೀಕರಣ ಮತ್ತು ಸ್ಥಿರೀಕರಣ
[ಬದಲಾಯಿಸಿ]ಅರ್ನಸ್ಟ್ ಚೈನ್ ಪೆನಿಸಿಲಿನ್‌ನ್ನು ಪ್ರತ್ಯೇಕಿಸಿ ಸಾರೀಕರಿಸಲು ಯತ್ನಿಸಿದರು. ಇವರು ಅದರ ರಚನಾವಿನ್ಯಾಸವನ್ನು ಸರಿಯಾಗಿ ತರ್ಕಿಸಿದರು. ಇವರ ತಂಡ ತಮ್ಮ ಮೊದಲ ಫಲಿತಾಂಶಗಳನ್ನು ೧೯೪೦ರಲ್ಲಿ ಪ್ರಕಟಿಸಿತು, ಇದಾದ ಸ್ವಲ್ಪ ದಿನಗಳಲ್ಲಿ ಫ್ಲೆಮಿಂಗ್ ಚೈನ್‌ರ ವಿಭಾಗದ ಮುಖ್ಯಸ್ಥ ಹಾವರ್ಡ್ ಫ್ಲೋರೆಗೆ ಪೋನ್ ಮಾಡಿ, ತಾವು ಅವರನ್ನು ಬಹಳ ಶೀಘ್ರದಲ್ಲಿ ಭೇಟಿಯಾಗುವುದಾಗಿ ತಿಳಿಸಿದರು. ಫ್ಲೆಮಿಂಗ್ ಬರುತ್ತಿದ್ದಾರೆ ಎನ್ನುವ ವಿಷಯತಿಳಿದ ಚೈನ್ 'ಓಹ್ ದೇವರೆ! ಅವರು ನಿಧನರಾಗಿದ್ದಾರೆ ಅಂತ ತಿಳಿದುಕೊಂಡಿದ್ದೆ' ಎಂದು ಉದ್ಗರಿಸಿದರು. ಪೆನಿಸಿಲಿನ್‌ನ ಆಮ್ಲೀಯತೆಯನ್ನು ಬದಲಿಸುವುದರ ಮೂಲಕ ಅದರ ಸಕ್ರಿಯ ಅಂಶವನ್ನು ನೀರಿಗೆ ವಾಪಸ್ ರವಾನಿಸಬಹುದೆಂದು ನಾರ್ಮನ್ ಹೀಟ್ಲೇ ಸಲಹೆ ನೀಡಿದ್ದರು. ಪ್ರಾಣಿಗಳ ಮೇಲೆ ಪ್ರಯೋಗವನ್ನು ಆರಂಭಿಸುವಷ್ಟು ಪ್ರಮಾಣದಲ್ಲಿ ಪೆನಿಸಿಲಿನ್ ತಯಾರಾಯಿತು. ಆಕ್ಸ್‌ಫರ್ಡ್ ತಂಡದಲ್ಲಿ ಹೆಚ್ಚು ಹೆಚ್ಚು ಜನರು ಒಳಗೊಂಡಿದ್ದರು, ಒಂದು ಹಂತದಲ್ಲಿ ಡನ್ ಸ್ಕೂಲ್ ಇಡಿಯಾಗಿ ಪೆನಿಸಿಲಿನ್ ಉತ್ಪಾದನೆಯಲ್ಲಿ ಒಳಗೊಂಡಿತ್ತು. ಇಸವಿ ೧೯೪೦ರಲ್ಲಿ ತಂಡವು ಪೆನಿಸಿಲಿನ್‌ನ್ನು ಪರಿಣಾಮಕಾರಿ, ಸ್ಥಿರ ರೂಪಕ್ಕೆ ಶುದ್ಧೀಕರಿಸುವ ವಿಧಾನವನ್ನು ಅಭಿವೃದ್ಧಿಗೊಳಿಸಿತ್ತು. ಆನಂತರ ಹಲವು ವೈದ್ಯಕೀಯ ಪ್ರಯೋಗಗಳು ನಡೆದವು. ತಂಡವು ೧೯೪೫ರಲ್ಲಿ ಭಾರೀ ಪ್ರಮಾಣದಲ್ಲಿ ಪೆನಿಸಿಲಿನ್ ಉತ್ಪಾದನೆ-ವಿತರಣೆ ನಡೆಸಲು ಈ ಪ್ರಯೋಗಗಳ ಅದ್ಭುತ ಯಶಸ್ಸು ಪ್ರೇರಣೆಯಾಯಿತು. ಫ್ಲೆಮಿಂಗ್ ಪೆನಿಸಲಿನ್ ಸಂಶೋಧನೆಗೆ ತಮ್ಮ ಕೊಡುಗೆಯ ಬಗ್ಗೆ ಬಹಳ ವಿನಮ್ರರಾಗಿದ್ದರು. ಅವರು ತಮ್ಮ ಪ್ರಸಿದ್ಧಿಯನ್ನು 'ಫ್ಲೆಮಿಂಗ್ ಮಿಥ್' ಎಂದು ಬಣ್ಣಿಸುತ್ತಿದ್ದರು. ಪ್ರಯೋಗಾಲಯದಲ್ಲಿ ಕುತೂಹಲವುಂಟು ಮಾಡಿದ್ದ ಒಂದು ವಸ್ತುವನ್ನು ಉಪಯುಕ್ತ ಔಷಧವಾಗಿ ರೂಪಾಂತರಿಸಿದ ಫ್ಲೋರೆ ಮತ್ತು ಚೈನ್‌ರ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಫ್ಲೆಮಿಂಗ್ ಸಕ್ರಿಯ ವಸ್ತುವಿನ ಗುಣಗಳನ್ನು ಮೊದಲ ಬಾರಿಗೆ ಕಂಡುಹಿಡಿದವರು ಫ್ಲೆಮಿಂಗ್. ಇದರಿಂದಾಗಿ ಅವರು ಪೆನಿಸಿಲಿನ್ ಎಂಬ ನಾಮಕರಣ ಮಾಡುವ ಗೌರವ ಅವರಿಗೆ ಸಂದಿತು. ಫ್ಲೆಮಿಂಗ್ ಮೂಲ ಬೂಷ್ಟನ್ನು ಹನ್ನೆರಡು ವರ್ಷಗಳ ಕಾಲ ಸಂರಕ್ಷಿಸಿ, ಬೆಳೆಸಿ, ಹಂಚಿದರು. ಪೆನಿಸಿಲಿನ್ ತಯಾರಿಸುವಷ್ಟು ನಿಪುಣತೆ ಗಳಿಸಿದ ಯಾವುದೇ ರಸಾಯನಶಾಸ್ತ್ರಜ್ಞರಿಂದ ಸಹಾಯ ಪಡೆಯಲು ಫ್ಲೆಮಿಂಗ್ ತಮ್ಮ ಸಂಗೋಪನಾ ಕಾರ್ಯವನ್ನು ೧೯೪೦ರ ತನಕ ಮುಂದುವರೆಸಿದರು. ಇಸವಿ ೧೯೯೮ರಲ್ಲಿ ಸರ್ ಹೆನ್ರಿ ಹ್ಯಾರಿಸ್ ಹೇಳಿದ್ದು ಹೀಗೆ 'ಫ್ಲೆಮಿಂಗ್ ಇಲ್ಲದೆ, ಚೈನ್ ಇಲ್ಲ; ಚೈನ್ ಇಲ್ಲದೆ, ಫ್ಲೋರೆ ಇಲ್ಲ; ಫ್ಲೋರೆ ಇಲ್ಲದೆ, ಹೀಟ್ಲೇ ಇಲ್ಲ; ಹೀಟ್ಲೇ ಇಲ್ಲದೆ, ಪೆನಿಸಿಲಿನ್ ಇಲ್ಲ.'[೧೦]
ಪ್ರತಿಜೀವಕಗಳು (ಆಂಟಿಬಯೊಟಿಕ್ಸ್)
[ಬದಲಾಯಿಸಿ]ಸೆಪ್ಟೆಂಬರ್ ೧೯೨೮ರಲ್ಲಿ ಫ್ಲೆಮಿಂಗ್ ಪೆನಿಸಿಲಿನ್‌ನ್ನು ಅಕಸ್ಮಾತಾಗಿ ಪರಿಶೋಧಿಸಿ, ಬೇರ್ಪಡಿಸಿದ ಕಾರ್ಯವು ಆಧುನಿಕ ಪ್ರತಿಜೀವಕಗಳಿಗೆ ಆರಂಭ ಹಂತವಾಯಿತು. ಪೆನಿಸಿಲಿನ್‌ನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಅಥವಾ ಬಹಳ ಅಲ್ಪಾವಧಿಯಲ್ಲಿ ಬಳಸಿದಲ್ಲಿ, ಬ್ಯಾಕ್ಟೀರಿಯಾ ಪ್ರತಿಜೀವಕ ಪ್ರತಿರೋಧ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುತ್ತವೆ ಎಂಬುದನ್ನು ಫ್ಲೆಮಿಂಗ್ ಬಹಳ ಬೇಗ ಪರಿಶೋಧಿಸಿದರು. ಪ್ರಯೋಗಗಳ ಸಮಯ ಗಮನಿಸುವ ಮುನ್ನವೇ ಬ್ಯಾಕ್ಟೀರಿಯಾಗಳ ಪ್ರತಿಜೀವಕ ಪ್ರತಿರೋಧ ಲಕ್ಷಣಗಳನ್ನು ಆಲ್ಮ್‌ರಾಥ್ ರೈಟ್ ಮುಂಗಂಡಿದ್ದರು. ವಿಶ್ವಾದ್ಯಂತ ನೀಡಿದ ತಮ್ಮ ಉಪನ್ಯಾಸಗಳಲ್ಲಿ ಫ್ಲೆಮಿಂಗ್, ಪೆನಿಸಿಲಿನ್ ಬಳಕೆಯ ಕುರಿತು ಎಚ್ಚರಿಕೆ ವಹಿಸುವ ಅಗತ್ಯವನ್ನು ತಿಳಿಸಿದರು. ಸರಿಯಾದ ರೋಗನಿರ್ಣಯವಾಗಿ ದೃಢ ಕಾರಣಗಳಿದ್ದಲ್ಲಿ ಮಾತ್ರ ಪೆನಿಸಿಲಿನ್ ಬಳಸಬೇಕು, ಇಲ್ಲದಿದ್ದಲ್ಲಿ ಬಳಸುವಂತಿಲ್ಲ; ಒಂದು ವೇಳೆ ಬಳಸಿದ್ದಲ್ಲಿ, ಅದನ್ನು ತೀರಾ ಕಡಿಮೆ ಪ್ರಮಾಣ, ತೀರಾ ಅಲ್ಪಾವಧಿಯ ಕಾಲ ಬಳಸಬಾರದು, ಏಕೆಂದರೆ ಬ್ಯಾಕ್ಟೀರಿಯಾ ಪ್ರತಿಜೀವಕಗಳಿಗೆ ಪ್ರತಿರೋಧ ಲಕ್ಷಣಗಳನ್ನು ಬೆಳಸಿಕೊಳ್ಳುತ್ತವೆ ಎಂದು ಫ್ಲೆಮಿಂಗ್ ಎಚ್ಚರಿಕೆ ನೀಡಿದರು.
ವೈಯಕ್ತಿಕ ಜೀವನ
[ಬದಲಾಯಿಸಿ]ಫ್ಲೆಮಿಂಗ್‌ರ ತಂದೆ ಬಾಲಕ ವಿನ್ಸ್ಟನ್‌ರನ್ನು ಸಾವಿನ ದವಡೆಯಿಂದ ರಕ್ಷಿಸಿದ ಪ್ರತಿಯಾಗಿ ವಿನ್ಸ್ಟನ್ ಚರ್ಚಿಲ್ (ಅಂದಿನ ಬ್ರಿಟಿಷ್ ಪ್ರಧಾನಿ) ರ ತಂದೆ ಫ್ಲೆಮಿಂಗ್‌ರ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡಿದ್ದರು ಎಂಬ ವ್ಯಾಪಕ ಊಹನವು ಸುಳ್ಳು. ಕೆವಿನ್ ಬ್ರೌನ್ ಬರೆದಿರುವ ಫ್ಲೆಮಿಂಗ್‌ರ ಆತ್ಮಚರಿತ್ರೆ ಪೆನಿಸಿಲಿನ್ ಮ್ಯಾನ್: ಅಲೆಕ್ಸಾಂಡರ್ ಫ್ಲೆಮಿಂಗ್ ಅಂಡ್ ದಿ ಆಂಟಿಬಯೋಟಿಕ್ ರೆವಲ್ಯೂಷನ್ ಪ್ರಕಾರ, ಫ್ಲೆಮಿಂಗ್ ತನ್ನ ಸ್ನೇಹಿತ ಮತ್ತು ಸಹೋದ್ಯೋಗಿ ಆಂಡ್ರೆ ಗ್ರಾಷಿಯಗೆ [೧೧] ಬರೆದಿರುವ ಪತ್ರದಲ್ಲಿ[೧೨] ಈ ಕಥೆಯನ್ನು 'ಅದ್ಬುತ ಕಲ್ಪನೆ'ಯೆಂದು ಬಣ್ಣಸಿದ್ದಾರೆ. ವಿನ್‌ಸ್ಟನ್ ಚರ್ಚಿಲ್‌ರನ್ನು ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕಾಪಾಡಿದ್ದು ಕೂಡ ಇವರಲ್ಲ. ಚರ್ಚಿಲ್‌ರನ್ನು ಕಾಪಾಡಿದ್ದು ಲಾರ್ಡ್ ಮೋರಾನ್. ಚರ್ಚಿಲ್ ೧೯೪೩ರಲ್ಲಿ ಟುನಿಷಿಯಾದ ಕಾರ್ಥೇಜ್‌ನಲ್ಲಿ ಅಸ್ವಸ್ಥರಾದಾಗ, ಲಾರ್ಡ್ ಮೋರಾನ್‌ಗೆ ಪೆನಿಸಿಲಿನ್ ಬಳಸಿ ಅಭ್ಯಾಸವಿಲ್ಲದ ಕಾರಣ ಸಲ್ಫೋನಾಮೈಡ್ ಬಳಸಿ ಚರ್ಚಿಲ್‌ರನ್ನು ಗುಣಮುಖರಾಗಿಸಿದರು. ದಿನಾಂಕ ೨೧ ಡಿಸೆಂಬರ್ ೧೯೪೩ರಂದು ಡೈಲಿ ಟೆಲಿಗ್ರಾಫ್ ಮತ್ತು ಮಾರ್ನಿಂಗ್ ಪೋಸ್ಟ್ ಪತ್ರಿಕೆಗಳಲ್ಲಿ ಚರ್ಚಿಲ್‌ರನ್ನು ಪೆನಿಸಿಲಿನ್ ಕೊಟ್ಟು ಗುಣಮುಖವಾಗಿಸಲಾಯಿತು ಎಂದು ವರದಿಯಾಯಿತು. ಆವರನ್ನು ಗುಣಮುಖವಾಗಿಸಿದ್ದು ಸಲ್ಫೋನಾಮೈಡ್‌ನ ಹೊಸ ಔಷಧ ಸಲ್ಫಾಪಿಯರಿಡೀನ್ ಆಗಿತ್ತು. ಆಗಿನ ದಿನಗಳಲ್ಲಿ ಅದನ್ನು ಸಂಶೋಧನಾ ಕೋಡ್‌ನಲ್ಲಿ M&B ೬೯೩ ಎಂದು ಕರೆಯಲಾಗುತ್ತಿತ್ತು. ಇದನ್ನು ಸಂಶೋಧಿಸಿ ತಯಾರಿಸಿದ್ದು ಎಸ್ಸೆಕ್ಸ್ ಕೌಂಟಿಯ ಡಾಗೆನಹ್ಯಾಮ್‌ನಲ್ಲಿರುವ ಮೇ ಅಂಡ್ ಬೇಕರ್ ಲಿಮಿಟೆಡ್. ಇದು ಫ್ರೆಂಚ್ ರೋನೆ-ಪೌಲೆಂಕ್ ನ ಅಧೀನ ಸಂಸ್ಥೆಯಾಗಿತ್ತು. ತರುವಾಯ ಬಿತ್ತರಗೊಂಡ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಚರ್ಚಿಲ್ ಈ ಹೊಸ ಔಷಧ ಕುರಿತು 'ಇದು ಶ್ಲಾಘನೀಯ M&B' ಎಂದರು.[೧೩] ಸಲ್ಫೋನಾಮೈಡ್ ಬಗ್ಗೆ ನಿಖರವಾದ ಮಾಹಿತಿಯು ದಿನಪತ್ರಿಕೆಗಳಿಗೆ ತಲುಪಿರದ ಸಂಭವಗಳಿವೆ, ಏಕೆಂದರೆ ಈ ಔಷಧವನ್ನು ಜರ್ಮನ್ ಪ್ರಯೋಗಾಲಯ ಬೇಯರ್ ಸಂಸ್ಥೆಯು ಸಂಶೋಧಿಸಿತ್ತು. ಇಷ್ಟೆ ಅಲ್ಲದೆ UK ಈ ಸಂದರ್ಭದಲ್ಲಿ ಜರ್ಮನಿಯ ವಿರುದ್ಧ ಯುದ್ಧ ಮಾಡುತ್ತಿತ್ತು. ಹೀಗಾಗಿ ಚರ್ಚಿಲ್‌ರ ಚಿಕಿತ್ಸೆ ಮತ್ತು ಗುಣಮುಖವಾಗುವ ವಿಚಾರವನ್ನು ಬ್ರಿಟಿಷ್ ಸಂಶೋಧನೆಯಾಗಿದ್ದ ಪೆನಿಸಿಲಿನ್‌ನೊಂದಿಗೆ ಸಂಬಂಧಪಡಿಸುವುದರಿಂದ ಬ್ರಿಟಿಷ್ ಸೈನಿಕರ ಸ್ಥೈರ್ಯ ಹೆಚ್ಚಾಗುತ್ತದೆ ಎಂದು ಭಾವಿಸಲಾಗಿತ್ತು.[೧೪] ಫ್ಲೆಮಿಂಗ್‌ರ ಮೊದಲ ಹೆಂಡತಿ ಸಾರಾ ೧೯೪೯ರಲ್ಲಿ ನಿಧನರಾದರು. ಇವರ ಏಕೈಕ ಪುತ್ರ ರಾಬರ್ಟ್ ಫ್ಲೆಮಿಂಗ್, ಜೆನೆರಲ್ ಮೆಡಿಕಲ್ ಪ್ರ್ಯಾಕ್ಟಿಷನರ್ (ವೈದ್ಯ)ರಾದರು. ಸಾರಾ ಸಾವಿನ ನಂತರ, ಸೇಂಟ್ ಮೇರಿಸ್‌ನಲ್ಲಿದ್ದ ಗ್ರೀಕ್ ಸಹದ್ಯೋಗಿನಿ ಡಾ. ಅಮೆಲಿಯಾ ಕೂಟ್ಸೂರಿ-ವೊರೆಕಾಸ್‌ರನ್ನು ಫ್ಲೆಮಿಂಗ್ ೯ ಏಪ್ರಿಲ್ ೧೯೫೩ರಂದು ಮದುವೆಯಾದರು. ಡಾ. ಅಮೆಲಿಯಾ ೧೯೮೬ರಲ್ಲಿ ನಿಧನರಾದರು.
ಮರಣ
[ಬದಲಾಯಿಸಿ]ಇಸವಿ ೧೯೫೫ರಲ್ಲಿ ಫ್ಲೆಮಿಂಗ್ ಹೃದಯಾಘಾತದಿಂದ ಲಂಡನ್ನಿನ ತಮ್ಮ ಮನೆಯಲ್ಲಿ ಮರಣಹೊಂದಿದರು. ಇವರ ಪಾರ್ಥಿವ ಶರೀರವನ್ನು ದಹಿಸಿ, ಒಂದು ವಾರದ ಬಳಿಕ ಅವರ ಬೂದಿಯನ್ನು ಸೇಂಟ್ ಪಾಲ್ಸ್ ಕತೀಡ್ರಲ್‌ನಲ್ಲಿ ಸಮಾಧಿ ಮಾಡಲಾಯಿತು.
ಕೀರ್ತಿ, ಪ್ರಶಸ್ತಿ ಮತ್ತು ಸಾಧನೆಗಳು
[ಬದಲಾಯಿಸಿ]ಫ್ಲೆಮಿಂಗ್‌ರ ಪೆನಿಸಿಲಿನ್ ಸಂಶೋಧನೆಯು, ಉಪಯುಕ್ತ ಪ್ರತಿಜೀವಕಗಳನ್ನು ಪರಿಚಯಿಸುವುದರ ಮೂಲಕ ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಪರಿವರ್ತನೆ ತಂದಿತು. ಪೆನಿಸಿಲಿನ್ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಕಾಪಾಡಿದೆ ಹಾಗೂ ಇಂದಿಗೂ ಕಾಪಾಡುತ್ತಲೇ ಇದೆ.[೧೫] ಫ್ಲೆಮಿಂಗ್ ಪೆನಿಸಿಲಿನ್ ಪರಿಶೋಧಿಸಿದ್ದ ಲಂಡನ್‌ನ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿನ ಪ್ರಯೋಗಾಲಯವು ಇಂದು ಫ್ಲೆಮಿಂಗ್ ಮ್ಯೂಸಿಯಂ(ಸಂಗ್ರಹಾಲಯಕ್ಕೆ) ಆಶ್ರಯವಾಗಿದೆ. ಲೊಮಿಟಾ ಪ್ರದೇಶದಲ್ಲಿರುವ ಶಾಲೆಗೆ ಕೂಡ ಅಲೆಕ್ಸಾಂಡರ್ ಫ್ಲೆಮಿಂಗ್ ಮಿಡ್ಲ್ ಸ್ಕೂಲ್ ಎಂದು ಮರುನಾಮಕರಣವಾಗಿದೆ. ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾನಿಲಯವು ಓಲ್ಡ್ ಸ್ಟ್ರೀಟ್ ಬಳಿಯಿರುವ ತನ್ನ ವಿದ್ಯಾರ್ಥಿ ಭವನಕ್ಕೆ ಫ್ಲೆಮಿಂಗ್‌ರ ಹೆಸರಿಟ್ಟಿದೆ. ಇಂಪೀರಿಯಲ್ ಕಾಲೇಜ್ ಕೂಡ ತನ್ನ ಒಂದು ಕಟ್ಟಡಕ್ಕೆ 'ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ ಬಿಲ್ಡಿಂಗ್' ಎಂಬ ಹೆಸರಿಟ್ಟಿದೆ. ಈ ಕಟ್ಟಡವು ಸೌತ್ ಕೆನ್ಸಿಂಗ್‌ಟನ್ ಕಾಂಪಸ್‌ನಲ್ಲಿದೆ. ಇದರಲ್ಲಿ ವೈದ್ಯಕೀಯ ತರಬೇತಿಯ ಪದವಿಗೂ ಮುನ್ನ ನೀಡುವ ಬಹಳಷ್ಟು ವೈದ್ಯಕೀಯ-ಪೂರ್ವ ತರಬೇತಿಯನ್ನು ನೀಡಲಾಗುತ್ತದೆ.
- ಫ್ಲೆಮಿಂಗ್, ಫ್ಲೋರೆ ಮತ್ತು ಚೈನ್ ಜೊತೆಯಾಗಿ ವೈದ್ಯಕೀಯಕ್ಕಾಗಿ ನೋಬಲ್ ಪ್ರಶಸ್ತಿಯನ್ನು ೧೯೪೫ರಲ್ಲಿ ಗಳಿಸಿದರು. ನೋಬಲ್ ಪ್ರಶಸ್ತಿ ಪ್ರದಾನ ಸಮಿತಿಯ ನಿಯಮಗಳ ಪ್ರಕಾರ ಪ್ರಶಸ್ತಿಯನ್ನು ಮೂರು ಜನರಿಗೆ ಹಂಚಬಹುದಾಗಿದೆ. ಇಸವಿ ೧೯೮೯ರಲ್ಲಿ ಫ್ಲೆಮಿಂಗ್‌ರ ನೋಬಲ್ ಪ್ರಶಸ್ತಿ ಪದಕವನ್ನು ನ್ಯಾಷನಲ್ ಮ್ಯೂಸಿಯಂಸ್ ಆಫ್ ಸ್ಕಾಟ್ಲೆಂಡ್ ತನ್ನ ಸ್ವಾಮ್ಯಕ್ಕೆ ಪಡೆದುಕೊಂಡಿತ್ತು. ರಾಯಲ್ ಮ್ಯೂಸಿಯಂ ೨೦೧೧ರಲ್ಲಿ ಪುನರಾರಂಭವಾಗುವಾಗ ಇದನ್ನು ಪ್ರದರ್ಶಿಸಲಾಗುವುದು.
- ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ (ಶಸ್ತ್ರಚಿಕಿತ್ಸಕರ ರಾಯಲ್ ಕಾಲೇಜ್) ಫ್ಲೆಮಿಂಗ್‌ಗೆ 'ಹಂಟೇರಿಯನ್ ಪ್ರೋಪೆಸ್ಸರ್‌ಶಿಪ್' ನೀಡಿ ಗೌರವಿಸಿತು.
- ಫ್ಲೆಮಿಂಗ್ ಮತ್ತು ಫ್ಲೋರೆಗೆ ನೈಟ್ ಬಿರುದನ್ನು ೧೯೪೪ರಲ್ಲಿ ನೀಡಲಾಯಿತು.
- ಫ್ಲೋರೆ, ರಾಯಲ್ ಸೊಸೈಟಿಯ ಅಧ್ಯಕ್ಷರಾಗಿ ೧೯೪೩ರಲ್ಲಿ ಚುನಾಯಿತರಾದರು. ಇವರು ಪೆನಿಸಿಲನ್‌ನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿದಕ್ಕಾಗಿ ಹಾಗೂ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಲಕ್ಷಾಂತರ ಜನರ ರೋಗ ಗುಣಮುಖವಾಗಿಸಿದಕ್ಕಾಗಿ, ೧೯೬೫ರಲ್ಲಿ ಉನ್ನತ ವರ್ಗಗಳ ಕೀರ್ತಿಯನ್ನು (ಪೀರೇಜ್) ಪಡೆದು ಬ್ಯಾರನ್ ಆದರು.
- ೨೦೦೦ದ ಇಸವಿ ಸಮೀಪಿಸುತ್ತಿದ್ದಂತೆ ನಡೆಸಲಾದ ಸಮೀಕ್ಷೆಗಳ ಪ್ರಕಾರ ಪೆನಿಸಿಲಿನ್ ಸಂಶೋಧನೆಯನ್ನು 'ಶತಮಾನದ ಪ್ರಮುಖ ಸಂಶೋಧನೆ'ಯೆಂದು ಸ್ವೀಡನ್ನಿನ ಕನಿಷ್ಟ ಮೂರು ನಿಯತಕಾಲಿಕೆಗಳು ತಿಳಿಸಿವೆ. ಈ ಸಂಶೋಧನೆಯಿಂದಾಗಿ ಎಷ್ಟು ಪ್ರಾಣಗಳು ಉಳಿದವು ಎಂದು ಕಂಡು ಹಿಡಿಯುವುದು ಅಸಾಧ್ಯವಾದರೂ ಕೂಡ, ಕೆಲವು ನಿಯತಕಾಲಿಕೆಗಳು ಸುಮಾರು ೨೦೦ ದಶಲಕ್ಷ ಜನರನ್ನು ಕಾಪಾಡಿದೆ ಎಂದು ಅಂದಾಜು ಮಾಡಿದೆ.
- ಮಾಡ್ರಿಡ್‌ನ ಪ್ಲಾಸ ಡೆ ಟಾರಸ್ ಡೆ ಲಾಸ್ ವೆಂಟಾಸ್‌ನ ಮುಖ್ಯ ಗೂಳಿಕಾಳಗದ ಆಖಾಡದ (ಬುಲ್‌ರಿಂಗ್) ಹೊರಗಡೆ ಅಲೆಕ್ಸಾಂಡರ್ ಫ್ಲೆಮಿಂಗ್‌ರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಪೆನಿಸಿಲಿನ್ ಗೂಳಿಕಾಳಗದ ಅಖಾಡದಲ್ಲಿ ಸಂಭವಿಸುತ್ತಿದ್ದ ಸಾವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆಮಾಡಿತು. ಇದರಿಂದ ಕೃತಜ್ಞರಾದ ಗೂಳಿ ಮಲ್ಲರು (ಮ್ಯಾಟಡಾರ್) ವಂತಿಕೆಗಳನ್ನು ನೀಡಿ ಈ ಪ್ರತಿಮೆಯನ್ನು ನಿರ್ಮಿಸಿದ್ದಾರೆ.
- ಇಸವಿ ೨೦೦೯ರ ಮಧ್ಯದಲ್ಲಿ, ಫ್ಲೆಮಿಂಗ್ ಸ್ಮಾರಕವಾಗಿ ಬ್ಯಾಂಕ್‌ನೋಟ್‌ಗಳ ಹೊಸ ಸರಣಿಯನ್ನು ಕ್ಲೈಡೆಸ್‌ಡೇಲ್ ಬ್ಯಾಂಕ್ ಬಿಡುಗಡೆ ಮಾಡಿತು. ಹೊಸದಾಗಿ ಹೊರಡಿಸಲಾಗಿರುವ £೫ ನೋಟ್‌ಗಳ ಮೇಲೆ ಇವರ ಚಿತ್ರವಿದೆ.[೧೬]
ಇವನ್ನೂ ನೋಡಿ
[ಬದಲಾಯಿಸಿ]Media related to Alexander Fleming at Wikimedia Commons
ಗ್ರಂಥಸೂಚಿ
[ಬದಲಾಯಿಸಿ]- ದಿ ಲೈಪ್ ಆಫ್ ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ , ಜೊನಾತನ್ ಕೇಪ್, ೧೯೫೯. ಮೌರೊಯಿಸ್, ಅಂಡ್ರೆ.
- ನೋಬಲ್ ಲೆಕ್ಚರ್ಸ್, ಫಿಸಿಯಾಲಜಿ ಆರ್ ಮೆಡಿಸಿನ್ ೧೯೪೨–೧೯೬೨ , ಎಲ್ಸಿವಿಯರ್ ಪಬ್ಲಿಷಿಂಗ್ ಕಂಪನಿ, ಆಮ್ಸ್ಟರ್ಡ್ಯಾಮ್, ೧೯೬೪
- ಆನ್ ಔಟ್‌ಲೈನ್ ಆಫ್ ಮೆಡಿಸಿನ್ . ಲಂಡನ್: ಬಟರ್‌ವರ್ತ್ಸ್, ೧೯೮೫. ರೋಡ್ಸ್, ಫಿಲ್ಲಿಫ್.
- ದ ಕೇಂಬ್ರಿಡ್ಜ್ ಇಲ್ಲಸ್ಟ್ರೇಟೆಡ್ ಹಿಸ್ಟರಿ ಆಫ್ ಮೆಡಿಸಿನ್ . ಕೇಂಬ್ರಿಡ್ಜ್, ಇಂಗ್ಲೆಂಡ್: ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, ೧೯೯೬. ಪೋರ್ಟರ್, ರಾಯ್, ed.
- ಪೆನಿಸಿಲಿನ್ ಮ್ಯಾನ್: ಅಲೆಕ್ಸಾಂಡರ್ ಫ್ಲೆಮಿಂಗ್ ಅಂಡ್ ದಿ ಆಂಟಿಬಯೋಟಿಕ್ ರೆವಲ್ಯೂಷನ್ , ಸ್ಟ್ರೌಡ್, ಸುಟ್ಟನ್, ೨೦೦೪. ಬ್ರೌನ್, ಕೆವಿನ್.
- ಅಲೆಕ್ಸಾಂಡರ್ ಫ್ಲೆಮಿಂಗ್: ಮ್ಯಾನ್ ಅಂಡ್ ದಿ ಮಿತ್ , ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ಆಕ್ಸ್‌ಫರ್ಡ್, ೧೯೮೪. ಮಾಕ್‌ಫಾರ್ಲೇನ್, ಗ್ವಿನ್
- ದ ಲೈಪ್ ಆಫ್ ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ , ಜೊನಾತನ್ ಕೇಪ್, ೧೯೫೯. ಮೌರೊಯಿಸ್, ಅಂಡ್ರೆ.
- ನೋಬಲ್ ಲೆಕ್ಚರ್ಸ್, ಫಿಸಿಯಲಾಜಿ ಆರ್ ಮೆಡಿಸಿನ್ ೧೯೪೨–೧೯೬೨ , ಎಲ್ಸಿವಿಯರ್ ಪಬ್ಲಿಷಿಂಗ್ ಕಂಪನಿ, ಆಮ್ಸ್ಟರ್ಡ್ಯಾಮ್, ೧೯೬೪
ಅಕರಗಳು
[ಬದಲಾಯಿಸಿ]- ↑ "'ಕಣಜ',". Archived from the original on 2015-10-16. Retrieved 2014-12-26.
- ↑ Karl Grandin, ed. (1945). "Alexander Fleming Biography". Les Prix Nobel. The Nobel Foundation. Retrieved 2008-07-24.
{{cite web}}
:|author=
has generic name (help)[permanent dead link] - ↑ "Alexander Fleming – Time 100 People of the Century". Time Magazine. Archived from the original on 2011-04-16.
It was a discovery that would change the course of history. The active ingredient in that mold, which Fleming named penicillin, turned out to be an infection-fighting agent of enormous potency. When it was finally recognized for what it was—the most efficacious life-saving drug in the world—penicillin would alter forever the treatment of bacterial infections. By the middle of the century, Fleming's discovery had spawned a huge pharmaceutical industry, churning out synthetic penicillins that would conquer some of mankind's most ancient scourges, including syphilis, gangrene and tuberculosis.
- ↑ "Alexander Fleming". www.nndb.com. NNDB. Retrieved 3 May 2021.
- ↑ ಕೆಂಡಾಲ್ ಎಫ್. ಹಾವೆನ್, ಮಾರ್ವೆಲ್ಸ್ ಆಫ್ ಸೈನ್ಸ್ (ಲೈಬ್ರರಿಸ್ ಅನ್‌ಲಿಮಿಟೆಡ್, ೧೯೯೪) p೧೮೨
- ↑ ಹೇರ್, ಆರ್. ದಿ ಬರ್ತ್ ಆಫ್ ಪೆನಿಸಿಲಿನ್ , ಅಲೆನ್ & ಅನ್‌ವಿನ್, ಲಂಡನ್, ೧೯೭೦
- ↑ ಡಿಗ್ಗಿನ್ಸ್, ಎಫ್. ದಿ ಟ್ರೂ ಸ್ಟೋರಿ ಆಫ್ ದಿ ಡಿಸ್ಕವರಿ ಆಫ್ ಪೆನಿಸಿಲಿನ್ ಬೈ ಅಲೆಕ್ಸಾಂಡರ್ ಫ್ಲೆಮಿಂಗ್ ಬಯೊಮೆಡಿಕಲ್ ಸೈಯಂಟಿಸ್ಟ್, ಮಾರ್ಚಿ ೨೦೦೩, ಇನ್ಸ್‌ಟಿಟ್ಯೂಟ್ ಆಫ್ ಬೈಯೊಮೆಡಿಕಲ್ ಸೈಯನ್ಸ್‌ಸ್, ಲಂಡನ್. (ಮೂಲವಾಗಿ ಇಂಪಿರಿಯಲ್ ಕಾಲೇಜ್ ಸ್ಕೂಲ್ ಆಫ್ ಮೆಡಿಸನ್ ನ ಗೆಜೆಟ್‌ನಲ್ಲಿ ಪ್ರಕಟವಾಗಿತ್ತು)
- ↑ Fleming A (1980). "Classics in infectious diseases: on the antibacterial action of cultures of a penicillium, with special reference to their use in the isolation of B. influenzae by Alexander Fleming, Reprinted from the British Journal of Experimental Pathology 10:226-236, 1929". Rev. Infect. Dis. 2 (1): 129–39. PMID 6994200.
{{cite journal}}
:|access-date=
requires|url=
(help) - ↑ ಕೀತ್ ಬರ್ನಾರ್ಡ್ ರಾಸ್, ಇವರು ಫ್ಲೆಮಿಂಗ್ ಜೊತೆಯಲ್ಲಿ ಕೆಲಸ ನಿರ್ವಹಿಸಿದರು, ಫ್ಲೆಮಿಂಗ್‌ರ ಸಂಶೋಧನೆಯ ಸಮಯದಲ್ಲಿ ಇವರನ್ನು ಪೆನಿಸಿಲಿನ್ ಬಳಸಿ ಚಿಕಿತ್ಸೆ ನೀಡಲಾಯಿತು.
- ↑ ಹೆನ್ರಿ ಹ್ಯಾರಿಸ್, ಹಾವರ್ಡ್ ಫ್ಲೋರೆ ಅಂಡ್ ದ ಡೆವೆಲಂಪ್‌ಮೆಂಟ್ ಆಫ್ ಪೆನಿಸಿಲಿನ್ , ೨೯ ಸೆಪ್ಟೆಂಬರ್ ೧೯೯೮ರಂದು ಆಕ್ಸ್‌ಫರ್ಡ್ ಯುನಿವರ್ಸಿಟಿಯ ಸರ್ ವಿಲಿಯಂ ಡನ್ ಸ್ಕೂಲ್ ಆಫ್ ಪಾತಲಜಿಯಲ್ಲಿ ನಡೆದ ಫ್ಲೋರೆ ಸೆಂಟಿನರಿ, ೧೮೯೮-೧೯೯೮ ಕಾರ್ಯಕ್ರಮದಲ್ಲಿ ಕೊಟ್ಟ ಉಪನ್ಯಾಸ (ಧ್ವನಿ ಮುದ್ರಣ)[೧]
- ↑ ವಿಕಿಪೀಡಿಯಾದ ಡಿಸ್ಕವರಿ ಆಫ್ ಪೆನಿಸಿಲಿನ್ ಆರ್ಟಿಕಲ್ ಎಂಟ್ರಿ ಫಾರ್ ೧೯೨೦ ಲೇಖನವನ್ನು ನೋಡಿ
- ↑ ೧೪ ನವೆಂಬರ್ ೧೯೪೫; ಬ್ರಿಟಿಷ್ ಲೈಬ್ರರಿ ಅಡಿಷನಲ್ ಮ್ಯಾನುಸ್ಕ್ರಿಪ್ಟ್ಸ್ ೫೬೧೧೫: ಬ್ರೌನ್, ಪೆನಿಸಿಲಿನ್ ಮ್ಯಾನ್ , ಚಾಪ್ಟರ್ ೨ ಕ್ಕೆ ಕೊಡಲಾಗಿರುವ ನೋಟ್ ೪೩
- ↑ ಎ ಹಿಸ್ಟರಿ ಆಫ್ ಮೇ & ಬೇಕರ್ ೧೮೩೪–೧೯೮೪, ಅಲ್ಡೆನ್ ಪ್ರೆಸ್ ೧೯೮೪.
- ↑ ಸಲ್ಫೋನಾಮೈಡ್ ಕುರಿತಂತೆ ಲೇಖನವನ್ನು ನೋಡಿ
- ↑ Michael, Roberts, Neil, Ingram (2001). Biology. Edition: 2, illustrated. Springer-Verlag. ISBN 0748762388.
{{cite book}}
: CS1 maint: multiple names: authors list (link) - ↑ "Banknote designs mark Homecoming". BBC News. 2008-01-14. Retrieved 2009-01-20.
ಬಾಹ್ಯಕೊಂಡಿಗಳು
[ಬದಲಾಯಿಸಿ]- ಅಲೆಕ್ಸಾಂಡರ್ ಫ್ಲೆಮಿಂಗ್ at Find a Grave
- ಅಲೆಕ್ಸಾಂಡರ್ ಫ್ಲೆಮಿಂಗ್ ಜೀವನಚರಿತ್ರೆ
- ಟೈಮ್ 100: ಅಲೆಕ್ಸಾಂಡರ್ ಫ್ಲೆಮಿಂಗ್ Archived 2009-05-26 ವೇಬ್ಯಾಕ್ ಮೆಷಿನ್ ನಲ್ಲಿ.
- ಅಲೆಕ್ಸಾಂಡರ್ ಫ್ಲೆಮಿಂಗ್‌ರಿಗೆ ಸಂಬಂಧಿತ ಕೆಲವು ಸ್ಥಳಗಳು ಹಾಗೂ ನೆನಪುಗಳು
- ಅಲೆಕ್ಸಾಂಡರ್ ಫ್ಲೆಮಿಂಗ್ Archived 2009-06-29 ವೇಬ್ಯಾಕ್ ಮೆಷಿನ್ ನಲ್ಲಿ.
ಟೆಂಪ್ಲೇಟು:Nobel Prize in Physiology or Medicine Laureates 1926-1950
- Pages using the JsonConfig extension
- CS1 errors: generic name
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- CS1 errors: access-date without URL
- CS1 maint: multiple names: authors list
- Articles with hatnote templates targeting a nonexistent page
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- 1881ರಲ್ಲಿ ಜನಿಸಿದವರು
- 1955ರಲ್ಲಿ ನಿಧನರಾದವರು
- 19ನೇ ಶತಮಾನದಲ್ಲಿದ್ದ ಸ್ಕಾಟಿಷ್ ವ್ಯಕ್ತಿಗಳು
- ಸ್ಕಾಟ್ಲೆಂಡಿನ್ ಸೂಕ್ಷ್ಮ ಜೀವಶಾಸ್ತ್ರದ ವಿಜ್ಞಾನಿಗಳು (ಮೈಕ್ರೊಬೈಯಲಜಿಸ್ಟ್)
- ಸ್ಕಾಟ್ಲೆಂಡಿನ ಔಷಧ ಶಾಸ್ತ್ರದ ವಿಜ್ಞಾನಿಗಳು (ಫಾರ್ಮಕಾಲಜಿಸ್ಟ್)
- ಸ್ಕಾಟ್ಲೆಂಡಿನ ಜೀವಶಾಸ್ತ್ರದ ವಿಜ್ಞಾನಿಗಳು (ಬೈಯಲಜಿಸ್ಟ್)
- ಶರೀರವಿಜ್ಞಾನ ಅಥವಾ ಔಷಧವಿಜ್ಞಾನದಲ್ಲಿ ನೋಬಲ್ ಪ್ರಶಸ್ತಿ ವಿಜೇತರು (ನೋಬಲ್ ಲಾರಿಯೇಟ್)
- ಸ್ಕಾಟ್ಲೆಂಡಿನ ನೋಬಲ್ ಪ್ರಶಸ್ತಿ ವಿಜೇತರು
- ಬ್ರಿಟಿಷ್ನ ನೋಬಲ್ ಪ್ರಶಸ್ತಿ ವಿಜೇತರು
- ಫೆಲ್ಲೊಸ್ ಆಫ್ ದಿ ರಾಯಲ್ ಸೊಸೈಟಿ (ರಾಯಲ್ ಸೊಸೈಟಿಯ ಸದಸ್ಯರು)
- ರಾಯಲ್ ಆರ್ಮಿ ಮೆಡಿಕಲ್ ಕೋರ್ಸ್ ಆಫಿಸರ್ಸ್
- ರೆಕ್ಟರ್ ಆಫ್ ದಿ ಯುನಿವರ್ಸಿಟಿ ಆಫ್ ಎಡಿನ್ಬರ್ಗ್
- ನೈಟ್ಸ್ ಬ್ಯಾಚೆಲರ್
- ಸೂಕ್ಷ್ಮ ಜೀವವಿಜ್ಞಾನಶಾಸ್ತ್ರ
- ಇಸ್ಟ್ ಆಯಿರ್ಶೈರ್ ಪ್ರದೇಶದ ಜನರು
- ಮಯೋಕಾರ್ಡಿಯಲ್ ಭಂಗದಿಂದ ಉಂಟಾದ ಸಾವುಗಳು
- ಸೇಂಟ್ ಪಾಲ್ಸ್ ಕತೀಡ್ರಲ್ನಲ್ಲಿನ ಅಂತ್ಯಕ್ರಿಯೆಗಳು
- ಸ್ಟರ್ಲಿಂಗ್ ಬ್ಯಾಂಕ್ನೋಟುಗಳ ಮೇಲೆ ಚಿತ್ರಿಸಲಾಗಿರುವ ವ್ಯಕ್ತಿಗಳು
- ಸ್ಕಾಟಿಷ್ ಸೈನ್ಸ್ ಹಾಲ್ ಆಫ್ ಫೇಮ್
- ಜೀವಶಾಸ್ತ್ರ ವಿಜ್ಞಾನಿಗಳು