6-ಸಿಗ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೬-ಸಿಗ್ಮ‍ದ ಸಂಕೇತ

೬-ಸಿಗ್ಮ ಎಂಬುದು ಯಾವುದೇ ಕಾರ್ಯನೀತಿಯಲ್ಲಿನ ಕುಂದುಗಳನ್ನು ನಿರ್ಮೂಲನೆ ಮಾಡುವ ಒಂದು ಶಿಸ್ತುಬದ್ಧವಾದ, ಮಾಹಿತಿ ಆಧಾರಿತ ಕ್ರಮ. ಇದನ್ನು ಕಾರ್ಯನೀತಿಯನ್ನು ಸುಧಾರಿಸುವ ತಂತ್ರಗಳ ಮತ್ತು ಸಲಕರಣೆಗಳ ಒಂದು ಗುಂಪು ಎಂದೂ ಹೇಳಬಹುದು. ಇದನ್ನು ಮೊಟೊರೊಲ ಸಂಸ್ಥೆಯಲ್ಲಿ ಕೆಲಸಮಾಡುವಾಗ ಬಿಲ್‍ಸ್ಮಿತ್ ಎಂಬುವನು ೧೯೮೬ರಲ್ಲಿ ಪ್ರಾರಂಭಿಸಿದನು.[೧][೨] ೧೯೯೫ರಲ್ಲಿ ಜ್ಯಾಕ್‍ವೆಲ್ಶ್‌ನು ಜನರಲ್ ಎಲೆಕ್ಟ್ರಿಕ್ ಸಂಸ್ಥೆಯಲ್ಲಿ ೬-ಸಿಗ್ಮವನ್ನು ಅವರ ಉದ್ಯಮದ ಪ್ರಧಾನ ಅಂಶವನ್ನಾಗಿಸಿದನು.[೩] ಇಂದು ಇದನ್ನು ಸಾವಿರಾರು ಉದ್ಯಮಗಳಲ್ಲಿ ಬಳಸುತ್ತಾರೆ.[೪]

ಸಿದ್ಧಾಂತ[ಬದಲಾಯಿಸಿ]

ಈ ಕೆಳಗಿನ ಗುಣಲಕ್ಷಣಗಳು ೬-ಸಿಗ್ಮದ ಬೆನ್ನೆಲುಬಾಗಿವೆ:[೫]

 • ಗಮನ (‍Focus) - ವ್ಯಾಪಾರ ಕಾರ್ಯನೀತಿಯ ಸುಧಾರಣೆಯನ್ನು ಹಾದಿ ತಪ್ಪದೆ, ನಿರಂತರವಾಗಿ ಬೆಂಬತ್ತುವುದು
 • ಯಶಸ್ಸಿನ ಅಳತೆಗೋಲು (Measure of Success) - ದಶಲಕ್ಷ ಅವಕಾಶಗಳಲ್ಲಿ ಕೇವಲ ೩.೪ ಕುಂದುಗಳು (Defects per Million Opportunities)
 • ಕ್ರಮ (Approach) -
 • ಡಿಎಮ್ಎಐಸಿ (DMAIC),
 • ಡಿಎಮ್ಎಡಿವಿ (DMADV/DFSS)
 • ಇಂಧನ (Fuel) - ಈ ಕ್ರಮಶಾಸ್ತ್ರವು ನಿರಂತರ ಸುಧಾರಣೆ ಬಯಸುವ ಜನಗಳಿಂದ ನಡೆಸಲ್ಪಡುತ್ತದೆ

ಇತಿಹಾಸ[ಬದಲಾಯಿಸಿ]

೬-ಸಿಗ್ಮ ಪದವನ್ನು ಸಂಖ್ಯಾಕಲನ ವಿಜ್ಞಾನದಿಂದ ಪಡೆಯಲಾಗಿದ್ದು ಸಂಖ್ಯಾಕಲನಾತ್ಮಕ ಗುಣನಿಯಂತ್ರಣದಲ್ಲಿ ಉಪಯೋಗಿಸುತ್ತಾರೆ. ಅಲ್ಪಾವಧಿಯಲ್ಲಿ ೬-ಸಿಗ್ಮ ಗುಣಮಟ್ಟ ಹೊಂದಿರುವ ಕಾರ್ಯನೀತಿಗಳು ದೀರ್ಘಾವಧಿಯಲ್ಲಿ ೩.೪ ಡಿಪಿಎಮ್‍ಒ (DPMO) ಗಿಂತ ಕಡಿಮೆ ಇರುವಂತೆ ಉತ್ಪಾದನೆ ಮಾಡುತ್ತವೆ ಎಂಬ ಭರವಸೆಯಿರುತ್ತದೆ.[೬][೭] ಎಲ್ಲ ಕಾರ್ಯನೀತಿಗಳಲ್ಲಿ ಸುಧಾರಣೆ ತರುವುದು ೬-ಸಿಗ್ಮದಲ್ಲಿ ಅಂತರ್ಗತವಾದ ಗುರಿ. ಸಂಸ್ಥೆಗಳು ತಮಗೆ ಮುಖ್ಯವಾದ ಕಾರ್ಯನೀತಿಗಳನ್ನು ಆರಿಸಿ, ಪ್ರತಿಯೊಂದಕ್ಕೂ ಒಂದು ೬-ಸಿಗ್ಮ ಮಟ್ಟವನ್ನು ನಿರ್ಣಯಿಸಬೇಕು ಮತ್ತು ಅದನ್ನು ಸಾಧಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಸಂಸ್ಥೆಯ ಅಧಿಕಾರಿಗಳು ಕಾರ್ಯನೀತಿಗಳ ಆದ್ಯತೆಯನ್ನು ಮೊದಲು ನಿರ್ಧರಿಸಬೇಕು. ೧೯೯೧ರಲ್ಲಿ ಮೋಟೊರೊಲ ಸಂಸ್ಥೆಯು ಯು.ಎಸ್.ಎ.ನಲ್ಲಿ "Six Sigma" ಪದವನ್ನು ನೋಂದಾಯಿಸಿಕೊಂಡಿತು. ಇದನ್ನು ಆರಂಭದಲ್ಲಿ ಅಳವಡಿಸಿಕೊಂಡವರಲ್ಲಿ ಹನಿವೆಲ್ (Honeywell) ಮತ್ತು ಜನರಲ್ ಎಲೆಕ್ಟ್ರಿಕ್ (General Electric) ಸಂಸ್ಥೆಗಳು ಒಳಗೊಂಡಿವೆ.[೮] ೧೯೯೦ರ ದಶಕದ ಕೊನೆಯಲ್ಲಿ ಫ಼ಾರ್ಚೂನ್ ೫೦೦ (Fortune 500) ಸಂಸ್ಥೆಗಳಲ್ಲಿ ಮೂರನೇ ಎರಡರಷ್ಟು ಸಂಸ್ಥೆಗಳು ೬-ಸಿಗ್ಮವನ್ನು ಅಳವಡಿಸಿಕೊಳ್ಳಲು ಮೊದಲುಮಾಡಿದವು. ಇತ್ತೀಚಿನ ವರ್ಷಗಳಲ್ಲಿ ೬-ಸಿಗ್ಮವು ಬಹಳವಾಗಿ ವಿಕಾಸಗೊಂಡಿದೆ. ಇದು ಐಎಸ್ಒ ಅಥವಾ ಸಂಪೂರ್ಣ ಗುಣಮಟ್ಟ ನಿರ್ವಹಣೆ(ಟೋಟಲ್ ಕ್ವಾಲಿಟಿ ಮ್ಯಾನೇಜ್ಮೆಂಟ್)(ಟಿಕ್ಯುಎಮ್) ಗಳಂತೆ ಕೇವಲ ಗುಣಮಟ್ಟ ವ್ಯವಸ್ಥೆಯಲ್ಲ. ಜೆಫ್ ಟೆನ್ನೆಂಟ್‍ನು ತನ್ನ "Six Sigma: SPC and TQM in Manufacturing and Services" ಎಂಬ ಪುಸ್ತಕದಲ್ಲಿ ಹೀಗೆ ಹೇಳಿದ್ದಾನೆ - "೬-ಸಿಗ್ಮದ ವ್ಯಾಪ್ತಿ ಬಹಳವಾಗಿದೆ. ಇದರಲ್ಲಿ ಏನೆನು ಇದೆ ಎನ್ನುವುದಕ್ಕಿಂತ ಏನಿಲ್ಲ ಎಂದು ಪಟ್ಟಿಮಾಡುವುದು ಸುಲಭ. ೬-ಸಿಗ್ಮವನ್ನು ಒಂದು ದೂರದೃಷ್ಟಿ, ತತ್ವ, ಸಂಕೇತ, ಮಾನದಂಡ, ಗುರಿ, ಕ್ರಮಶಾಸ್ತ್ರ ಎಂದೆಲ್ಲ ಪರಿಗಣಿಸಬಹುದು".[೯]

ಕ್ರಮಶಾಸ್ತ್ರಗಳು[ಬದಲಾಯಿಸಿ]

೬-ಸಿಗ್ಮ ಯೋಜನೆಗಳು ಎರಡು ಕ್ರಮಶಾಸ್ತ್ರಗಳನ್ನು ಅನುಸರಿಸುತ್ತವೆ. ಇವುಗಳು ಪ್ರತಿಯೊಂದೂ ಐದು ಹಂತಗಳನ್ನು ಹೊಂದಿವೆ.

 1. ಡಿಎಮ್ಎಐಸಿ (DMAIC) - ಅಸ್ತಿತ್ವದಲ್ಲಿರುವ ವ್ಯಾಪಾರ ಕಾರ್ಯನೀತಿಗಳನ್ನು ಸುಧಾರಿಸಲು ಬಳಸುತ್ತಾರೆ
 2. ಡಿಎಮ್ಎಡಿವಿ (DMADV) - ಹೊಸ ಉತ್ಪನ್ನಗಳನ್ನು ಅಥವಾ ಕಾರ್ಯನೀತಿಯ ವಿನ್ಯಾಸಗಳನ್ನು ಸೃಷ್ಟಿಸಲು ಬಳಸುತ್ತಾರೆ

ಡಿಎಮ್ಎಐಸಿ (DMAIC)[ಬದಲಾಯಿಸಿ]

ಡಿಎಮ್ಎಐಸಿಯ ಹಂತಗಳು

ಈ ಕ್ರಮಶಾಸ್ತ್ರವು ಐದು ಹಂತಗಳನ್ನು ಒಳಗೊಂಡಿದೆ - Define, Measure, Analyze, Improve ಮತ್ತು Control. ಈ ಹಂತಗಳನ್ನು ಸಂಕ್ಷೇಪಿಸಿದ ಪದವೇ ಡಿಎಮ್ಎಐಸಿ.

 1. Define - ಗ್ರಾಹಕರ ಬೇಡಿಕೆಯನ್ನು, ಯೋಜನೆಯ ಗುರಿಗಳನ್ನು, ಪರೀಕ್ಷಿಸಬೇಕಾದ ಕಾರ್ಯನೀತಿಗಳನ್ನು ಖಚಿತವಾಗಿ ಗುರುತಿಸುವುದು
 2. Measure - ಮಾಹಿತಿಯನ್ನು ಕ್ರೋಢೀಕರಿಸಿ ಅದರ ಆಧಾರದ ಮೇಲೆ ಪರಿಣಾಮಕಾರಿತ್ವವನ್ನು ಅನುಸರಿಸುವುದು ಹಾಗೂ ದಕ್ಷತೆಯನ್ನು ನಿರ್ಣಯಿಸುವುದು
 3. Analyze - ಕ್ರೋಢೀಕರಿಸಿದ ಮಾಹಿತಿಯನ್ನು ಪರೀಕ್ಷಿಸಿ, ಕಾರ್ಯಕಾರಣ ಸಂಬಂಧವನ್ನು ಪರಿಶೀಲಿಸುವುದು, ಪರೀಕ್ಷಿಸುತ್ತಿರುವ ಕುಂದಿನ ಕಾರಣವನ್ನು ಹುಡುಕುವುದು
 4. Improve - ಮಾಹಿತಿಯ ಪರೀಕ್ಷಣೆಯಿಂದ ಈಗಿನ ಕಾರ್ಯನೀತಿಯನ್ನು ಸುಧಾರಿಸುವುದು. ಇದನ್ನು ಪೋಕಾಯೋಕೆ, ಪ್ರಯೋಗಗಳ ವಿನ್ಯಾಸ (Design of Experiments) ಮುಂತಾದ ತಂತ್ರಗಳನ್ನು ಬಳಸಿ ಮಾಡಬಹುದು
 5. Control - ಭವಿಷ್ಯದಲ್ಲಿ ಕಾರ್ಯನೀತಿಗಳಿಂದ ಯಾವುದೇ ಕುಂದುಬಾರದಂತೆ ಅವುಗಳನ್ನು ನಿಯಂತ್ರಿಸುವುದು

ಡಿಎಮ್ಎಡಿವಿ (DMADV)[ಬದಲಾಯಿಸಿ]

ಡಿಎಮ್ಎಡಿವಿಯ ಹಂತಗಳು

ಇದು ಇಂಗ್ಲಿಷ್‍ನ - Define, Measure, Analyze, Design, Verify - ಎಂಬ ಪದಗಳ ಸಂಕ್ಷೇಪ ರೂಪ. ಇದು ಈ ಕೆಳಗಿನ ಐದು ಹಂತಗಳನ್ನು ಒಳಗೊಂಡಿದೆ:

 1. Define - ಗ್ರಾಹಕನ ಬೇಡಿಕೆಗಳು ಹಾಗು ಸಂಸ್ಥೆಯ ತಂತ್ರಗಾರಿಕೆಗೆ ಹೊಂದುವಂತಹ ರಚನಾ ಗುರಿಗಳನ್ನು ನಿಗದಿಪಡಿಸುವುದು
 2. Measure - ಗ್ರಾಹಕನ ಅಗತ್ಯಗಳು, ಉತ್ಪನ್ನದ ಸಾಮರ್ಥ್ಯ, ಉತ್ಪಾದನೆಯ ಕಾರ್ಯನೀತಿಯ ಸಾಮರ್ಥ್ಯಗಳನ್ನು ಅಳೆಯುವುದು
 3. Analyze - ಪರ್ಯಾಯಗಳನ್ನು ರಚಿಸಲು ಪರಿಶೀಲಿಸುವುದು
 4. Design - ಹಿಂದಿನ ಹಂತದಲ್ಲಿ ಗೊತ್ತುಪಡಿಸಿದ ಸುಧಾರಿತ ಪರ್ಯಾಯವನ್ನು ರಚಿಸುವುದು
 5. Verify - ರಚನೆಯನ್ನು ದೃಢಪಡಿಸುವುದು ಮತ್ತು ಉತ್ಪಾದನಾ ಕಾರ್ಯನೀತಿಯನ್ನು ಆಯಾ ಕಾರ್ಯನೀತಿಯ ಮಾಲೀಕರಿಗೆ ಹಸ್ತಾಂತರಿಸುವುದು

೬-ಸಿಗ್ಮ ಪಾಂಡಿತ್ಯದ ಮಟ್ಟಗಳು ಅಥವಾ ಕಾರ್ಯಗತಗೊಳಿಸುವ ಪಾತ್ರಗಳು[ಬದಲಾಯಿಸಿ]

೬-ಸಿಗ್ಮದ ಪ್ರಕಾರ ಈ ಕೆಳಗಿನ ಪಾತ್ರಗಳಿವೆ:[೧೦]

 • ಕಾರ್ಯನಿರ್ವಾಹಕ ನಾಯಕತ್ವ (Executive Leadership): ಸಂಸ್ಥೆಯ ಸಿಇಒ ಮತ್ತು ಆಡಳಿತ ಮಂಡಳಿಯ ಇತರ ಸದಸ್ಯರನ್ನು ಒಳಗೊಂಡಿರುತ್ತದೆ. ೬-ಸಿಗ್ಮ ಕಾರ್ಯಗತಗೊಳಿಸುವುದಕ್ಕೆ ಸರಿಯಾದ ದೃಷ್ಟಿಕೋನವನ್ನು ಅಣಿಮಾಡುವ ಜವಾಬ್ದಾರಿಯನ್ನು ಇವರು ಹೊಂದಿರುತ್ತಾರೆ.
 • ಛಾಂಪಿಯನ್ಸ್ (Champions): ಸಂಸ್ಥೆಯುದ್ದಕ್ಕೂ ಸಮಗ್ರವಾಗಿ ೬-ಸಿಗ್ಮವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯಿರುತ್ತದೆ. ಕಾರ್ಯನಿರ್ವಾಹಕ ನಾಯಕತ್ವವು ಆಡಳಿತ ಮಂಡಳಿಯಿಂದ ಇವರನ್ನು ಆಯ್ಕೆಮಾಡುತ್ತಾರೆ. "ಮಾಸ್ಟರ್ ಬ್ಲ್ಯಾಕ್‍ಬೆಲ್ಟ್‌ಗಳಿಗೆ" ಇವರು ಮಾರ್ಗದರ್ಶಿಗಳೂ ಆಗಿರುತ್ತಾರೆ.
 • ಮಾಸ್ಟರ್ ಬ್ಲ್ಯಾಕ್‍ಬೆಲ್ಟ್‌ (Master Black Belts): ಇವರು ಸಂಸ್ಥೆಯೊಳಗಿನ ೬-ಸಿಗ್ಮ ತರಬೇತುದಾರರಾಗಿರುತ್ತಾರೆ. ಇವರನ್ನು ಛಾಂಪಿಯನ್ನರು ಆರಿಸುತ್ತಾರೆ. ಇವರು ಛಾಂಪಿಯನ್ನಿರಿಗೆ ಸಹಕಾರ ನೀಡುತ್ತಾರೆ ಹಾಗು ಬ್ಲ್ಯಾಕ್‍ಬೆಲ್ಟ್‌ ಮತ್ತು ಗ್ರೀನ್‍ಬೆಲ್ಟ್‌ಗಳಿಗೆ ಮಾರ್ಗದರ್ಶಕರಾಗಿರುತ್ತಾರೆ.
 • ಬ್ಲ್ಯಾಕ್‍ಬೆಲ್ಟ್‌ (Black Belts): ಇವರು ಮಾಸ್ಟರ್ ಬ್ಲ್ಯಾಕ್‍ಬೆಲ್ಟ್‌‌ಗಳ ಕೆಳಗೆ ಕಾರ್ಯನಿರ್ವಹಿಸುತ್ತಾರೆ. ನಿಗದಿತ ಯೋಜನೆಗಳಲ್ಲಿ ೬-ಸಿಗ್ಮವನ್ನು ಅನ್ವಯಿಸಲು ಶ್ರಮಿಸುತ್ತಾರೆ.
 • ಗ್ರೀನ್‍ಬೆಲ್ಟ್‌ (Green Belts): ಇವರು ತಮ್ಮ ಇತರೆ ಜವಾಬ್ದಾರಿಗಳ ಜೊತೆ ೬-ಸಿಗ್ಮವನ್ನು ಕಾರ್ಯಗತಗೊಳಿಸುತ್ತಾರೆ. ಇವರು ಬ್ಲ್ಯಾಕ್‍ಬೆಲ್ಟ್‌‌ಗಳ ಮಾರ್ಗದರ್ಶನವನ್ನು ಪಡೆಯುತ್ತಾರೆ.

೬-ಸಿಗ್ಮ ಮಟ್ಟಗಳು[ಬದಲಾಯಿಸಿ]

ಈ ಕೆಳಗಿನ ಕೋಷ್ಟಕದಲ್ಲಿ ದೀರ್ಘಾವಧಿಯ ಡಿಪಿಎಮ್ಒ (DPMO) ಅಂಕೆಗಳನ್ನು ಕೊಡಲಾಗಿದೆ.

೬-ಸಿಗ್ಮ ಮಟ್ಟ ಸಿಗ್ಮ (1.5σ ಅಂತರದೊಂದಿಗೆ) ಡಿಪಿಎಮ್ಒ ಕುಂದಿನ ಪ್ರತಿಶತ ಉತ್ಪನ್ನದ ಪ್ರತಿಶತ
1 −0.5 691,462 69% 31%
2 0.5 308,538 31% 69%
3 1.5 66,807 6.7% 93.3%
4 2.5 6,210 0.62% 99.38%
5 3.5 233 0.023% 99.977%
6 4.5 3.4 0.00034% 99.99966%
7 5.5 0.019 0.0000019% 99.9999981%

ಉಲ್ಲೇಖಗಳು[ಬದಲಾಯಿಸಿ]

 1. "೬-ಸಿಗ್ಮದ ಆವಿಷ್ಕಾರಕರು". Archived from the original on 2005-11-06. Retrieved 2006-01-29.
 2. Tennant, Geoff (2001). ೬-ಸಿಗ್ಮ: ಉತ್ಪಾದನೆ ಮತ್ತು ಸೇವೆಗಳಲ್ಲಿ SPC ಮತ್ತು TQM. Gower Publishing, Ltd. p. 6. ISBN 0-566-08374-4.
 3. "೬-ಸಿಗ್ಮದ ವಿಕಾಸ". Archived from the original on 2019-12-22. Retrieved 2012-03-19.
 4. "೬-ಸಿಗ್ಮ". Archived from the original on 2013-10-23. Retrieved 2016-01-26.
 5. "೬-ಸಿಗ್ಮ ಹೇಗೆ ಕೆಲಸ ಮಾಡುತ್ತದೆ".
 6. Tennant, Geoff (2001). ೬-ಸಿಗ್ಮ: ಉತ್ಪಾದನೆ ಮತ್ತು ಸೇವೆಗಳಲ್ಲಿ SPC ಮತ್ತು TQM. Gower Publishing, Ltd. p. 25. ISBN 0-566-08374-4.
 7. "Motorola University Six Sigma Dictionary". Archived from the original on 2006-01-28. Retrieved 2006-01-29.
 8. "೬-ಸಿಗ್ಮ: ಈಗಿನ ಸ್ಥಿತಿ". Archived from the original on 2009-08-19. Retrieved 2008-05-22.
 9. "೬-ಸಿಗ್ಮದ ಇತಿಹಾಸ".
 10. "೬-ಸಿಗ್ಮದ ಪಾಂಡಿತ್ಯದ ಮಟ್ಟಗಳು".
"https://kn.wikipedia.org/w/index.php?title=6-ಸಿಗ್ಮ&oldid=1201269" ಇಂದ ಪಡೆಯಲ್ಪಟ್ಟಿದೆ