ಹುಟ್ಟಿದ್ದು ಓಡೆನ್ಸ್‍ನಲ್ಲಿ. ಗತಿಸಿದ್ದು ಕೋಪೆನ್‍ಹೇಗನ್ನಲ್ಲಿ. ತಂದೆ ಕಡುಬಡವನಾದ ಮೋಚಿ. ಹನ್ನೊಂದನೆಯ ವರ್ಷದಲ್ಲಿ ತಂದೆಯನ್ನು ಕಳೆದುಕೊಂಡನು. ವಿದ್ಯೆಯ ಅಭಾವದಿಂದ ಬೇರೆ ಯಾವ ವೃತ್ತಿಯನ್ನು ಕೈಗೊಳ್ಳಲಾರದೆ ೧೮೧೯ ರಲ್ಲಿ ಕೋಪೆನ್‍ಹೇಗನ್ ನಗರಕ್ಕೆ ಹೋದ. ನಟನೂ ಹಾಡುಗಾರನೂ ಆಗಬೇಕೆಂಬ ಉದ್ದೇಶ. ಕೆಲಕಾಲ ಕಷ್ಟಕಾರ್ಪಣ್ಯ ಮತ್ತು ಹಸಿವಿನ ಮಧ್ಯೆ ಕಾಲ ಕಳೆದ ಮೇಲೆ ಒಬ್ಬಿಬ್ಬರು ಪ್ರಭಾವಶಾಲಿಗಳಾದ ಸ್ನೇಹಿತರ ಸಹಾಯ ಲಭಿಸಿತು. ಆದರೆ ಅಷ್ಟೇನೂ ಆಕರ್ಷಕವಲ್ಲದ ಆತನ ಅಂಗಭಂಗಿ ಅವನು ರಂಗಭೂಮಿಯ ಮೇಲೆ ಯಶಸ್ವಿಯಾಗಲು ಅಡ್ಡಿಯಾಯಿತು. ಕಂಠವೂ ಒಡೆದದ್ದರಿಂದ ಸುಶ್ರಾವ್ಯವಾಗಿ ಹಾಡುವುದೂ ಅಸಾಧ್ಯವಾಯಿತು. ಆಗ ರಾಜಾಶ್ರಯದಲ್ಲಿದ್ದ ರಾಯಲ್ ಥಿಯೇಟರ್ ಎಂಬ ಸಂಸ್ಥೆಯ ನಿರ್ದೇಶಕ ಜಾನ್ ಕಾಲಿನ್ ಅವನ ಲೇಖನ ಸಾಮರ್ಥ್ಯವನ್ನು ಗಮನಿಸಿ, ಅರಸನ ಅನುಮತಿ ಪಡೆದು ಅಸ್ನೇಗಲ್ ಗ್ರಾಮರ್ ಸ್ಕೂಲ್ ಎಂಬ ಸಂಸ್ಥೆಗೆ ಸೇರಿಸಿದ.
೧೮೨೯ ರಲ್ಲಿ ವಿದ್ಯಾಭ್ಯಾಸ ಪೂರೈಸಿ ಪ್ರವಾಸ ಸಾಹಿತ್ಯದ ಜಾತಿಗೆ ತನ್ನ ಮೊಟ್ಟಮೊದಲ ಪುಸ್ತಕ ಬರೆದ. ಮೊದಲ ಕವನ ಸಂಗ್ರಹ ಹೊರಬಿದ್ದುದೂ ಅದೇ ಕಾಲದಲ್ಲೇ. ಅನಂತರ ಯೂರೋಪಿನ ಹಲವು ದೇಶಗಳಲ್ಲಿ ಪ್ರವಾಸ ಮಾಡಿದ.ಇಂಗ್ಲೆಂಡಿಗೂ ಹೋಗಿ ಕಾದಂಬರಿಕಾರ ಡಿಕನ್ಸಿನ ಗೆಳೆತನ ಗಳಿಸಿದ[೧]
. ಒಂದು ನಾಟಕವನ್ನೂ ಕೆಲವು ಕಾದಂಬರಿಗಳನ್ನೂ ರಚಿಸಿದ. ನಾಟಕ ಜನಪ್ರಿಯವಾಗಲಿಲ್ಲ. ಕಾದಂಬರಿಗಳು ಸುಮಾರಾಗಿ ಜನಪ್ರಿಯವಾದವು. ಕೆಲವು ಉತ್ತಮ ಕವಿತೆಗಳನ್ನೂ ರಚಿಸಿದ. ಅವನ ಅತ್ಯಂತ ಪ್ರಸಿದ್ಧ ಕೃತಿಗಳೆಂದರೆ ಅವನು ಬರೆದ ಮಕ್ಕಳ ಕಥೆಗಳು. ಹೊರಬಿದ್ದ ಹೊಸತರಲ್ಲಿ ಅಷ್ಟೇನೂ ಮನ್ನಣೆ ಪಡೆಯದ ಈ ಬರೆಹಗಳು ಕಾಲ ಕ್ರಮೇಣ ಅವನ ಶಾಶ್ವತ ಕೀರ್ತಿಗೆ ಆಧಾರಗಳಾದವು. ೧೮೩೫-೩೭ ರಲ್ಲಿ ಸಣ್ಣ ಹೊತ್ತಗೆಗಳ ರೂಪದಲ್ಲಿ ಬರತೊಡಗಿದ ಈ ಕಥೆಗಳು ೧೮೪೮ ರ ಅನಂತರ ಅವನ ಗಮನವನ್ನು ಸಂಪೂರ್ಣವಾಗಿ ಸೆರೆಹಿಡಿದವು. ಜಗತ್ತಿನ ಅನೇಕ ಭಾಷೆಗಳಲ್ಲಿ ಅನುವಾದವಾಗಿರುವ ಅವು ಮಕ್ಕಳ ಮನಸ್ಸನ್ನು ಸೂರೆಗೊಳ್ಳುತ್ತಿವೆ. ಆದರೆ ದೊಡ್ಡವರಿಗೂ ಹಿಡಿಸುವ ನೀತಿಭೋಧನೆ ಮೊದಲಾದ ಗುಣಗಳು ಅವುಗಳಲ್ಲಿ ಅಡಕವಾಗಿವೆ.ದಿ ಅಗ್ಲಿ ಡಕ್‍ಲಿಂಗ್, ದ ಬ್ರೇವ್ ಟಿನ್ ಸೋಲ್ಜರ್, ದ ಲಿಟ್ಲ್ ಮರ್‍ಮೆಯ್ಕ್ ಮತ್ತು ದ ರೆಡ್ ಷೂಸ್‍ನಂಥ ಕಥೆಗಳು ಜಗತ್ತಿನ ಎಲ್ಲ ದೇಶಗಳ ಮಕ್ಕಳ ಮನಸ್ಸನ್ನು ಸೂರೆಮಾಡಿವೆ.
ಇವುಗಳಿಂದ ವಿಶ್ವವಿಖ್ಯಾತನಾದ ಕವಿಯ ಸ್ಮಾರಕವಾಗಿ ಡೆನ್ಮಾರ್ಕಿನ ಜನ ಕೋಪೆನ್ ನಗರದಲ್ಲಿ ಅವನ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ.[೨]
. ಅವನ ಜೀವನದ ಪ್ರಮುಖ ಸಂಗತಿಗಳು ಅವನ ಆತ್ಮಕಥೆಯಲ್ಲಿ ದೊರೆಯುತ್ತವೆ.ಇವನ ಕೃತಿಗಳು ಪ್ರಪಂಚದ ೧೨೫ ಕ್ಕಿಂತಲೂ ಅಧಿಕ ಭಾಷೆಗಳಿಗೆ ಭಾಷಾಂತರವಾಗಿವೆ[೩].ಇವನ ಹಲವಾರು ಕೃತಿಗಳು ಬ್ಯಾಲೆಗಳಿಗೆ, ಸಿನಿಮಾಗಳಿಗೆ ವಸ್ತುಗಳಾಗಿವೆ.
↑"Official Tourism Site of Copenhagen". Visitcopenhagen.com. Archived from the original on 25 ಜುಲೈ 2008. Retrieved 2 April 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)