ವಿಷಯಕ್ಕೆ ಹೋಗು

ಹೊರನಾಡಿನ ಕನ್ನಡ ಅರಸು ಮನೆತನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಅರಸು ಮನೆತನಗಳು-ಹೊರನಾಡಿನಲ್ಲಿ ಭವ್ಯವೂ ಸ್ಛೂರ್ತಿಪ್ರದವೂ ಆದ ಚರಿತ್ರೆಯನ್ನೂ ಪರಂಪರೆಗಳನ್ನೂ ಸೃಷ್ಟಿಸಿರುವ ಕನ್ನಡ ನಾಡಿನ ಅರಸುಮನೆತನಗಳ ಕೆಲವರು ಕರ್ಣಾಟಕದ ಹೊರಗಣ ಪ್ರಾಂತ್ಯಗಳಲ್ಲೂ ನೆಲೆಸಿ ರಾಜ್ಯಗಳನ್ನು ಕಟ್ಟಿ ಸಾಹಸಗಳನ್ನು ಮೆರೆದದ್ದೂ ಉಂಟು. ಇಂಥ ಅನೇಕ ನಾಯಕರ, ರಾಜವಂಶಗಳ ವೃತ್ತಾಂತಗಳಲ್ಲಿ ಮುಖ್ಯವಾದ ಕೆಲವನ್ನು ಮುಂದೆ ಕೊಡಲಾಗಿದೆ:

ಕಳಿಂಗ ನಾಡಿನ ಗಂಗರು

[ಬದಲಾಯಿಸಿ]

ಗಂಗ ವಂಶದ ಅರಸರು ಮೈಸೂರು ಭಾಗದಲ್ಲಿ ಆಳಿದರು. ಇವರನ್ನು ಇತಿಹಾಸಕಾರರು ಪಶ್ಚಿಮ ಗಂಗರು ಎಂದು ಕರೆದಿದ್ದಾರೆ. ಈ ರಾಜವಂಶಕ್ಕೆ ಸಂಬಂಧಿಸಿದವರಾದ ಗಂಗ ಅರಸರು ಕಳಿಂಗ ನಾಡಿನಲ್ಲಿ ಎಂದರೆ ಒರಿಸ್ಸದಲ್ಲಿಯೂ ರಾಜ್ಯಭಾರ ಮಾಡಿದರು. ಇವರನ್ನು ಪೂರ್ವದ ಗಂಗರು ಎಂದು ಕರೆಯಲಾಗಿದೆ. ಇವರಲ್ಲಿ ಮೂರು ಮನೆತನಗಳನ್ನು ಗುರುತಿಸಲಾಗಿದೆ. ಒಂದನೆಯದು ಕಳಿಂಗದ ಗಂಗರದು, ಎರಡನೆಯದು ಶ್ವೇತಕ ಗಂಗರದು, ಮೂರನೆಯದು ಉತ್ತರಕಾಲೀನ ಸಾಮ್ರಾಟ ಗಂಗರ ಮನೆತನ.[]

ಒಂದನೆಯ ಗಂಗರು ಪ್ರಾಚೀನರು. ಪ್ರ.ಶ.ಸು. ಐದನೆಯ ಶತಮಾನದ ಅಂತ್ಯಭಾಗದಿಂದ ಆಳಿದರು. ಇವರ ಕುಲ ಇಕ್ಷ್ವಾಕು. ಇವರ ರಾಜಧಾನಿ ಕಳಿಂಗನಗರ-ಗಂಜಾಂ ಜಿಲ್ಲೆಯಲ್ಲಿರುವ ಇಂದಿನ ಮುಖಲಿಂಗಂಪಟ್ಟಣ. ಮಹೇಂದ್ರಗಿರಿಯ ಶಿಖರದ ಮೇಲೆ ಪ್ರತಿಷ್ಠಿತನಾದ ಗೋಕಣ್ಙೇಶ್ವರ ಶಿವ ಇವರ ಕುಲದೈವ. ಈ ವಂಶದ ಸಂಸ್ಥಾಪಕ ಮಹಾರಾಜ ಇಂದ್ರವರ್ಮ. ಈತ ತ್ರಿಕಲಿಂಗಾಧಿಪತಿ ಎಂಬ ಪ್ರಶಸ್ತಿ ಪಡೆದಿದ್ದ. ಈ ಅರಸರ ಮೂಲಕ ಒಂದು ಕಾಲಗಣನೆ ಪ್ರಚುರವಾಯಿತು. ಅದೇ ಗಂಗಶಕ. ಇದರ ಆರಂಭಕಾಲ ಪ್ರ.ಶ. ಸು. ೪೯೬. ಹೊರನಾಡುಗಳಲ್ಲಿ ಆಳಿದ ಕನ್ನಡ ಅರಸು ಮನೆತನಗಳಲ್ಲಿ ಈ ಗಂಗ ರಾಜವಂಶ ಅತಿ ಪ್ರಾಚೀನವಾದುದು. ಈ ರಾಜರಿಗೆ ಸಾಮಂತರಾಗಿದ್ದ, ಅದೇ ಗಂಗಕುಲದಶಾಖಾವಂಶದ ಅರಸರು ಆ ಭಾಗದಲ್ಲಿ ಆಳಿದರು. ಅವರಲ್ಲಿ ಪುರ್ವಿಕನಾದಾತ ಮಹಾರಾಜ ಜಯವರ್ಮ. ಈತನ ಕಾಲ 6ನೆಯ ಶತಮಾನ. ಇವನ ರಾಜಧಾನಿ ಶ್ವೇತಕಪುರ. ಈತನ ಮುಂದಿನ ಕೆಲವು ಅರಸರು ಪ್ರಾಮುಖ್ಯಗಳಿಸಿದ್ದಾರೆ.

ಸಾಮ್ರಾಟ ಗಂಗರು ಕಳಿಂಗ ಗಂಗರ ವಂಶಿಕರು. ಇವರು ತಮ್ಮ ಮೂಲಸ್ಥಳ ಕೋಲಾಹಲಪುರ (ಮೈಸೂರು ರಾಜ್ಯದಲ್ಲಿನ ಕೋಲಾರ) ಎಂದು ಹೇಳಿರುವುದರಿಂದ ಇವರು ಕರ್ನಾಟಕ ಮೂಲದವರೆಂಬುದರಲ್ಲಿ ಸಂಶಯವಿಲ್ಲ. ೧೧ ನೆಯ ಶತಮಾನದಲ್ಲಿ ವಜ್ರಹಸ್ತ ಅನಂತವರ್ಮ ಈ ವಂಶವನ್ನು ಊರ್ಜಿತಗೊಳಿಸಿದ (೧೦೩೮). ತ್ರಿಕಲಿಂಗಾಧಿಪತಿ ಎಂಬ ಪ್ರಶಸ್ತಿಪಡೆದಿದ್ದ ಈತನ ರಾಜಧಾನಿ ಕಳಿಂಗ ನಗರ. ವಜ್ರಹಸ್ತನ ಮೊಮ್ಮಗ ಅನಂತವರ್ಮ ಚೋಡ ಗಂಗನೇ ಈ ಪರಾಕ್ರಮಶಾಲಿ ನರೇಂದ್ರ. ಈಗಿನ ಆಳ್ವಿಕೆಯಲ್ಲಿ (೧೦೭೮-೧೧೫೦) ಗಂಗ ಸಾಮ್ರಾಜ್ಯ ಪುರ್ವಭಾಗದಲ್ಲಿ ಗಂಗೆಯಿಂದ ಗೋದಾವರಿಯವರೆಗೆ ವಿಸ್ತಾರ ಹೊಂದಿತು. ಈ ಅರಸರ ಆಳ್ವಿಕೆ ಮುಂದೆ ಒಂದೂವರೆ ಶತಮಾನದವರೆಗೆ ಮುಂದುವರಿಯಿತು. ಹದಿಮೂರನೆಯ ಶತಮಾನದ ಉತ್ತರಾರ್ಧದಲ್ಲಿ ಮಧ್ವಾಚಾರ್ಯರ ವೈಷ್ಣವಮತ ಈ ರಾಜರ ಮೇಲೂ ಈ ನಾಡಿನಲ್ಲೂ ತನ್ನ ಪ್ರಭಾವ ಬೀರಿತು.

ಪುರ್ವದ ಕದಂಬರು

[ಬದಲಾಯಿಸಿ]

ಕದಂಬ ಕುಲದ ಹಲವು ರಾಜವಂಶಗಳ ಅರಸರು ಕನ್ನಡ ನಾಡಿನ ಅನೇಕ ಪ್ರದೇಶಗಳಲ್ಲಿ ಆಳಿದರು. ಕದಂಬರ ಒಂದು ಶಾಖೆಯವರು ಒರಿಸ್ಸ ಪ್ರಾಂತ್ಯದಲ್ಲಿಯೂ ಆಳಿದ ವಿಷಯ ಶಾಸನಗಳಿಂದ ತಿಳಿದುಬಂದಿದೆ. ಇವರು ಆಳಿದ ನೆಲ ಗಂಜಾಂ ಜಿಲ್ಲೆಯ ಭಾಗ; ಕಾಲ ೧೦-೧೧ನೆಯ ಶತಮಾನ. ಇವರ ರಾಜಧಾನಿ ಜಯಂತ್ಯಾಪುರ. ಕರ್ಣಾಟಕದಲ್ಲಿ ಆಳಿದ ಮೂಲ ಕದಂಬರ ರಾಜಧಾನಿ ಬನವಾಸಿಯಾಗಿದ್ದು, ಅದಕ್ಕೆ ಜಯಂತೀಪುರ ಎಂಬ ನಾಮಾಂತರವಿತ್ತೆಂಬುದು ಗಮನಾರ್ಹ.

ಚಾಳುಕ್ಯ ವಂಶದ ಶಾಖೆಗಳು

[ಬದಲಾಯಿಸಿ]

ಚಾಳುಕ್ಯ ವಂಶದ ಅರಸರು ಕರ್ಣಾಟಕದಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಬಾದಾಮಿಯಿಂದ ಆಳಿದ ವಿಷಯ ಸುವಿದಿತವಾದುದು. ಚಾಳುಕ್ಯ ಕುಲದ ಹಲವು ಶಾಖೆಗಳ ಅರಸರು ಕರ್ಣಾಟಕದ ಹೊರಗೂ ಆಳಿದರು. ಅವರಲ್ಲಿ ಪುರ್ವದ ಅಥವಾ ವೇಂಗಿಯ ಚಾಳುಕ್ಯರು ಪ್ರಖ್ಯಾತರು. ಇವರು ಗೋದಾವರಿ, ಕೃಷ್ಣಾ, ನದಿಗಳ ಆಂಧ್ರ ಪ್ರದೇಶಗಳಲ್ಲಿ ರಾಜ್ಯಭಾರ ಮಾಡಿದರು. ಈ ರಾಜವಂಶವನ್ನು ಇಮ್ಮಡಿ ಪುಲಕೇಶಿಯ ತಮ್ಮನಾದ ವಿಷ್ಣುವರ್ಧನ ಪ್ರ.ಶ.ಸು ೬೩೦ರಲ್ಲಿ ಸ್ಥಾಪಿಸಿದ. ಈತನನ್ನು ಬಿಟ್ಟರಸನೆಂದೂ ಕರೆಯಲಾಗಿದೆ. ಈ ವಂಶದ ಆಳ್ವಿಕೆ ನಾಲ್ಕು ಶತಮಾನಕ್ಕೂ ಮಿಕ್ಕಿ ಮುಂದುವರೆಯಿತು. ಅನಂತರ ೧೧ನೆಯ ಶತಮಾನದಲ್ಲಿ ಈ ರಾಜ್ಯ ಚೋಳರ ಸಾಮ್ರಾಜ್ಯದಲ್ಲಿ ವಿಲೀನವಾಯಿತು.

ನಾಸಿಕದ ಪ್ರದೇಶದಲ್ಲಿ ಇಮ್ಮಡಿ ಪುಲಕೇಶಿಯ ಇನ್ನೊಬ್ಬ ತಮ್ಮ ಧರಾಶ್ರಯ ಜಯಸಿಂಹವರ್ಮ ಮತ್ತು ಆತನ ಮಗ ಪ್ರಾಂತ್ಯಾಧಿಕಾರಿಗಳಾಗಿ ರಾಜ್ಯವಾಳಿದರು. ಇಮ್ಮಡಿ ಪುಲಕೇಶಿಗೆ ಧರಾಶ್ರಯ ಜಯಸಿಂಹವರ್ಮನೆಂಬ ಮಗನೂ ಇದ್ದ. ಈತ ಗುಜರಾತಿನಲ್ಲಿ ಸುರತದ ನೆರೆಯ ನವಸಾರೀ ಪ್ರದೇಶದಲ್ಲಿ ರಾಜಪ್ರತಿನಿಧಿಯಾಗಿ ಪ್ರಾಂತ್ಯಾಧಿಕಾರ ನಡೆಯಿಸಿದ. ಪಲ್ಲವರೊಡನೆ ನಡೆದ ಸಮರಗಳಲ್ಲಿ ಈತ ಚಾಳುಕ್ಯರಿಗೆ ಸಹಾಯ ಸಲ್ಲಿಸಿದ. ವಲ್ಲಭಿಯ ಮೈತ್ರಕ ವಂಶದ ವಜ್ಜಡನನ್ನು (ಮುಮ್ಮಡಿ ಶೀಲಾದಿತ್ಯ) ಸೋಲಿಸಿದ. ಈತನ ವಂಶಿಕನಾದ ಅವನಿಜನಾಶ್ರಯ ಪುಲಕೇಶಿ ಗುಜರಾತಿನಲ್ಲಿ ನುಗ್ಗಿದ ಅರಬರ ದಾಳಿಯನ್ನು ಹಿಂದೂಡಿ (ಪ್ರ.ಶ.ಸು. ೭೪೦) ಇಮ್ಮಡಿ ವಿಕ್ರಮಾದಿತ್ಯನ ಗೌರವ ಪ್ರಶಸ್ತಿಗೆ ಪಾತ್ರನಾದ. ಅನಂತರ ಈ ಚಾಳುಕ್ಯ ಮಂಡಲ ರಾಜ್ಯ ರಾಷ್ಟ್ರಕೂಟ ಸಾಮ್ರಾಜ್ಯದಲ್ಲಿ ಸಮಾವೇಶಗೊಂಡಿತು.

ಚಾಳುಕ್ಯ ಶಾಖೆಯ ಇನ್ನೊಂದು ಸಾಮಂತ ವಂಶದ ಅರಸರು ಆಂಧ್ರಪ್ರಾಂತ್ಯದ ಕರೀಮನಗರ ಜಿಲ್ಲೆಯ ವೇಮುಲವಾಡ ಪ್ರದೇಶದಲ್ಲಿ ಎಂಟರಿಂದ 10ನೆಯ ಶತಮಾನ ಕಾಲದಲ್ಲಿ ಆಳಿದರು. ಇವರು ರಾಷ್ಟ್ರಕೂಟರಿಗೆ ಮಾಂಡಲಿಕರಾಗಿದ್ದರು. ವಿನಯಾದಿತ್ಯ ಯುದ್ಧಮಲ್ಲ ಈ ವಂಶದ ಸಂಸ್ಥಾಪಕ. ಮುಂದೆ ಈತನ ವಂಶಿಕನಾದ ಇಮ್ಮಡಿ ಅರಿಕೇಸರಿ ಖ್ಯಾತಿವೆತ್ತ ನರೇಂದ್ರ. ಕನ್ನಡಕವಿ ಆದಿಪಂಪ (ಪ್ರ.ಶ. ೯೪೧) ಈತನ ಆಸ್ಥಾನದಲ್ಲಿದ್ದ. ಮೂರನೆಯ ಅಮೋಘವರ್ಷ ರಾಜ ರಾಷ್ಟ್ರಕೂಟ ಸಿಂಹಾಸನವನ್ನು ಪಡೆಯಲು ಅರಿಕೇಸರಿ ಸಹಾಯ ಮಾಡಿದ.

ರಾಷ್ಟ್ರಕೂಟ ರಾಜವಂಶಗಳು

[ಬದಲಾಯಿಸಿ]

ರಾಷ್ಟ್ರ ಎಂಬುದು ಪ್ರಾಂತ್ಯವಾಚಕ ಪದ. ಈ ಅರ್ಥದಲ್ಲಿ ಇದು ಅಶೋಕನ ಕಾಲದಿಂದ ರಾಜಕೀಯ ವ್ಯವಹಾರದಲ್ಲಿ ಬಳಕೆಯಾಯಿತು. ಅನಂತರ ಪ್ರಾಂತ್ಯಾಧಿಕಾರಿ ಎಂಬ ಅಭಿಪ್ರಾಯದಲ್ಲಿ ರಾಷ್ಟ್ರಕೂಟ ಎಂಬ ಪದವಿಸೂಚಕ ವಿಶಿಷ್ಟ ಪದ ಪ್ರಯೋಗವಾಗತೊಡಗಿತು. ಇಂಥ ಪ್ರಾಂತ್ಯಾಧಿಕಾರಿಗಳ ವಂಶದವರು ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಊರ್ಜಿತರಾದರು.

ಸಮಸ್ತ ಭಾರತದಲ್ಲಿ ಖ್ಯಾತಿವೆತ್ತು ಭವ್ಯ ಪರಂಪರೆಯಿಂದ ಆಳಿದವರು ಮಳಖೇಡದ ರಾಷ್ಟ್ರಕೂಟರು. ಇವರ ಮೂಲಸ್ಥಳ ಹಿಂದೆ ಪ್ರಾಚೀನ ಕರ್ನಾಟಕದಲ್ಲಿ ಸಮಾವೇಶಗೊಂಡಿದ್ದು, ಅನಂತರ ಮಹಾರಾಷ್ಟ್ರದಲ್ಲಿ ಸೇರ್ಪಡೆಯಾದ ಲತ್ತನೂರು ಎಂದರೆ ಲಾತೂರು ಎಂಬ ಪಟ್ಟಣ. ರಾಷ್ಟ್ರಕೂಟ ಎಂಬ ಹೆಸರುವೆತ್ತ ಹಲವು ಅರಸು ಮನೆತನಗಳು ಭಾರತದ ನಾನಾ ಪ್ರದೇಶಗಳಲ್ಲಿ ಆಳಿದುವು. ಅವೆಲ್ಲ ಕರ್ನಾಟಕ ಮೂಲದವೇ ಆಗಿದ್ದುವು ಎಂಬುದು ಕೆಲವು ಇತಿಹಾಸ ಲೇಖಕರ ಅಭಿಪ್ರಾಯ.

ಮಳಖೇಡದ ರಾಷ್ಟ್ರಕೂಟ ರಾಜನಾದ ಧ್ರುವನ (ಪ್ರ.ಶ. ಸು. ೩೮೦-೯೩) ಮಗ ಇಂದ್ರ. ಈತ ಗುಜರಾತ್ ಮತ್ತು ಮಾಳವ ಪ್ರದೇಶಗಳ ಮೇಲೆ ಪ್ರಾಂತ್ಯಾಧಿಪತ್ಯ ವಹಿಸಿದ. ಈತನ ವಂಶಿಕರು ಗುಜರಾತ್ ಪ್ರಾಂತ್ಯದ ಅಧಿಕಾರ ಪಡೆದು ಸು. ೭೯0 ರಿಂದ ೮೯೦ ವರೆಗೆ ಸು. ಒಂದು ಶತಮಾನ ಕಾಲ ರಾಜ್ಯಭಾರ ಮಾಡಿದರು. ಧ್ರುವನ ಮಗ ಸುವರ್ಣವರ್ಷ ಕರ್ಕ ಒಂದನೆಯ ಅಮೋಘವರ್ಷ ನೃಪತುಂಗರಾಜ ಮಳಖೇಡದ ಸಿಂಹಾಸನವೇರಿದಾಗ (೮೧೪) ಅಲ್ಪವಯಸ್ಸಿನವನಿದ್ದುದರಿಂದ ಆತ ಪ್ರಬುದ್ಧನಾಗುವವರೆಗೆ ರಾಜಪ್ರತಿನಿಧಿಯಾಗಿ ಸಾಮ್ರಾಜ್ಯದ ಕಾರ್ಯನಿರ್ವಹಣೆ ಮಾಡಿದ.

ಮಾನಪುರದ ರಾಷ್ಟ್ರಕೂಟರು ಪ್ರಾಂತೀಯ ಅರಸರಾಗಿ 5ನೆಯ ಶತಮಾನದಿಂದ ೭ನೆಯ ಶತಮಾನದವರೆಗೆ ಬಾಳಿದರು. ಮಾನಾಂಕ ಈ ವಂಶದ ಸ್ಥಾಪಕ. ಇವರ ಮೂಲಸ್ಥಳ ಮಾನ. ಇದು ಜಿಲ್ಲೆಯಲ್ಲಿರುವ ಗ್ರಾಮ. ಇವರ ರಾಜ್ಯ ಇಂದಿನ ಕೊಲ್ಹಾಪುರ ಪರಿಸರದ ಪ್ರದೇಶಕ್ಕೆ ಸೀಮಿತವಾಗಿತ್ತು.

ರಾಷ್ಟ್ರಕೂಟರ ಒಂದು ಶಾಖೆಯ ಮಾಂಡಲಿಕ ಅರಸರು ಒರಿಸ್ಸ ರಾಜ್ಯದ ಸಂಬಲಪುರ ಪ್ರದೇಶದಲ್ಲಿ ಹನ್ನೆರಡನೆಯ ಶತಮಾನದಲ್ಲಿ ಬಾಳಿದ್ದರು. ತಮ್ಮ ಮೂಲಸ್ಥಳ ಲತಲೋರ (ಲಾತೂರು) ನಗರವೆಂದು ಇವರು ಹೇಳಿಕೊಂಡಿದ್ದಾರೆ. ಚಮರ ವಿಗ್ರಹ. ಆತನ ಮಗ ಧಂಸಕ. ಅವನ ಮಗ ಪರಚಕ್ರಶಲ್ಯ (ಪ್ರ.ಶ. ೧೧೩೨)-ಇವು ಈ ವಂಶದ ಮೂವರು ರಾಜರ ಹೆಸರುಗಳು.

ಮಧ್ಯಭಾರತದ ಭಿಲ್ಸದ ಪಕ್ಕದಲ್ಲಿ ರಾಷ್ಟ್ರಕೂಟರ ಒಂದು ವಂಶ ಬಾಳಿತು (ಸು. ೮-೯ನೆಯ ಶತಮಾನ). ರಾಷ್ಟ್ರಕೂಟ ವಂಶದ ಅರಸರು ಕನೌಜ್ ಪ್ರಾಂತ್ಯದಲ್ಲಿ ೧೧,೧೨ನೆಯ ಶತಮಾನಗಳಲ್ಲಿ ಊರ್ಜಿತರಾದರು. ರಾಜಸ್ಥಾನದ ಜೋಧಪುರ, ಉದೇಪುರ ಪ್ರದೇಶಗಳಲ್ಲಿ ೧೧-೧೩ನೆಯ ಶತಮಾನಗಳಲ್ಲಿ ರಾಷ್ಟ್ರಕೂಟರು ಉದಯ ಹೊಂದಿದರು.

೮-೯ನೆಯ ಶತಮಾನಗಳಲ್ಲಿ ರಾಷ್ಟ್ರಕೂಟ ಕುಲದ ಕೆಲವು ನಾಯಕರು ದಂಡಯಾತ್ರೆಯ ನಿಮಿತ್ತದಿಂದ ಭಾರತದ ಉತ್ತರ-ಪುರ್ವ ಪ್ರಾಂತ್ಯಗಳಿಗೆ ಪ್ರಯಾಣ ಮಾಡಿ ಅಲ್ಲಿ ನೆಲಸಿ ರಾಜಕೀಯ ಪ್ರತಿಷ್ಠೆ ಗಳಿಸಿಕೊಂಡರು. ಇಂಥವರಲ್ಲಿ ಕೆಲವರ ವಿಷಯ ತಿಳಿದುಬಂದಿದೆ. ಬಂಗಾಳದ ಧರ್ಮಪಾಲ ರಾಜನ (ಸು. ೨೨0-೮೧0) ರಾಣಿ ರನ್ನದೇವಿ ರಾಷ್ಟ್ರಕೂಟ ಪರಬಲನೆಂಬ ನಾಯಕನ ಪುತ್ರಿ. ಅದೇ ವಂಶದ ರಾಜ್ಯಪಾಲ (ಸು. ೯೧೧-೩೫) ರಾಷ್ಟ್ರಕೂಟ ತುಂಗನ ಪುತ್ರಿ ಭಾಗ್ಯ ದೇವಿಯನ್ನು ವಿವಾಹವಾಗಿದ್ದ. ಬಳಿಕ ೩ ನೆಯ ವಿಗ್ರಹಪಾಲ (ಸು. ೧೦೫೫-೮೧) ಪುರ್ವ ಬಿಹಾರದ ರಾಷ್ಟ್ರಕೂಟ ಮಥನನ ಸೋದರಿಯನ್ನು ಮದುವೆಯಾಗಿದ್ದ. ಇಂಥ ಸಂಬಂಧಗಳ ಫಲವಾಗಿ ಕನ್ನಡ ನಾಡಿನ ಶೂರ ಸೈನಿಕರು ಬಂಗಾಳದ ಸೈನ್ಯದಲ್ಲಿ ಪ್ರವೇಶ ಹೊಂದಿದರು. ಈ ಸೈನಿಕರನ್ನು ಕುರಿತು ಬಂಗಾಳದ ಶಾಸನಗಳಲ್ಲಿ ವಿಪುಲ ನಿರ್ದೇಶನಗಳು ದೊರಕುತ್ತವೆ.

ಚಿತ್ರಕೂಟದ ಸಿಂದರು

[ಬದಲಾಯಿಸಿ]

ರಾಷ್ಟ್ರಕೂಟರ ಅನಂತರ ಕರ್ನಾಟಕದಲ್ಲಿ ಕಲ್ಯಾಣದ ಚಾಳುಕ್ಯರು ಪ್ರಬಲರಾದರು. ಇವರಲ್ಲಿ ಒಂದನೆಯ ಸೋಮೇಶ್ವರ ಮತ್ತು ಆರನೆಯ ವಿಕ್ರಮಾದಿತ್ಯ ಇವರ ಮಹದಾಕಾಂಕ್ಷೆಯ ಆಳ್ವಿಕೆಯಲ್ಲಿ (11-12ನೆಯ ಶತಮಾನಗಳು) ಉತ್ತರ ಮತ್ತು ಪುರ್ವ ಭಾರತದಲ್ಲಿ ಹಲವು ದಂಡಯಾತ್ರೆಗಳು ನಡೆದವು. ಅವುಗಳ ಸಂಚಾಲನೆಯಲ್ಲಿ ಭಾಗವಹಿಸಿದ ವೀರಯೋಧರೂ ಸಾಹಸಶೀಲ ಸೇನಾನಾಯಕರೂ ಮಧ್ಯ-ಉತ್ತರ-ಪುರ್ವಭಾರತ ಪ್ರದೇಶಗಳಲ್ಲಿ ಕಾಲೂರಿ ತಮ್ಮ ಮನೆತನಗಳನ್ನು ಸ್ಥಾಪಿಸಿ ರಾಜ್ಯವಾಳಿದರು.

ಇಂಥವರಲ್ಲಿ ಒಂದು ಮನೆತನ ಚಕ್ರಕೂಟದ ಸಿಂದರದು. ಈ ವಂಶದಲ್ಲಿ 1060ರ ಆಚೆಯಿಂದ 1111ರ ಈಚೆಗೆ ಧಾರಾವರ್ಷ, ಸೋಮೇಶ್ವರ, ಕನ್ಹರ-ಈ ಮೂವರು ರಾಜ್ಯಪಾಲರಾದರು. ಚಕ್ರಕೂಟದ ಎಂದರೆ ಬಸ್ತರದ ಪ್ರದೇಶದಲ್ಲಿ ಮೊದಲು ನೆಲೆಸಿದ್ದ ಇವರ ರಾಜ್ಯ ಕ್ರಮೇಣ ದಕ್ಷಿಣ ಕೋಸಲದವರೆಗೂ ವಿಸ್ತಾರ ಹೊಂದಿತು. ಫಿಂದಕ ನಾಗರೆಂದು ಖ್ಯಾತರಾದ ಈ ಮಹೀಶರು ಕನ್ನಡ ನಾಡಿನ ಸಿಂದರ ವಂಶಿಕರು. ತಮ್ಮ ನಾಗವಂಶೀಯರೆಂದು, ಭೋಗಾವತೀಪುರದ ಒಡೆಯರೆಂದು ಹೇಳಿಕೊಂಡಿದ್ದಾರೆ.

ತೈಲಪ ವಂಶಿ

[ಬದಲಾಯಿಸಿ]

ಒರಿಸ್ಸದ ಗಂಜಾಂ ಭಾಗದಲ್ಲಿ ರಾಣಕರಾಮದೇವನೆಂಬ ಸಾಮಂತರಾಜ ಸು. 11-12ನೆಯ ಶತಮಾನದಲ್ಲಿ ಆಳುತ್ತಿದ್ದ. ಈತನನ್ನು ತೈಲಪವಂಶಿಯೆಂದು ವರ್ಣಿಸಿದೆ. ಕಲ್ಯಾಣದ ಆರನೆಯ ವಿಕ್ರಮಾದಿತ್ಯನಿಗೆ ತೈಲಪನೆಂಬ ಮಗನಿದ್ದು, ಆತ ಆಂಧ್ರರಾಜ್ಯದ ಕರೀಮನಗರ ಪ್ರದೇಶದಲ್ಲಿ ಕೊಳ್ಳೀಪಾಕೆಯ ಪ್ರಾಂತ್ಯಾಧಿಕಾರಿ ಆಗಿದ್ದ. ರಾಣಕರಾಮದೇವ ಈ ತೈಲಪನ ವಂಶಿಕನಾಗಿರಬಹುದು.

ಬಂಗಾಳದ ಸೇನರು

[ಬದಲಾಯಿಸಿ]

ಸೇನ ಎಂಬ ವಂಶನಾಮ ಹೊಂದಿದ್ದ ಅರಸರು ಬಂಗಾಳದಲ್ಲಿ ಪ್ರಬಲರಾಗಿ ರಾಜ್ಯವಾಳಿದರು. ಈ ವಂಶದ ಪುರ್ವಿಕ ವೀರಸೇನ, ಈತನ ವಂಶಿಕನಾದ ಸಾಮಂತಸೇನ ಗಂಗಾತೀರ ಪ್ರದೇಶದಲ್ಲಿ ನೆಲಸಿ, ಬಂಗಾಳದ ರಾಢಾ ಎಂಬ ನೈಋತ್ಯ ಭಾಗದಲ್ಲಿ ತನ್ನ ರಾಜ್ಯ ಸ್ಥಾಪಿಸಿದ. ಈ ವಂಶದ ರಾಜರು ತಾವು ದಾಕ್ಷಿಣಾತ್ಯರೆಂದು, ಕರ್ಣಾಟ ಕ್ಷತ್ರಿಯ ಕುಲದವರೆಂದು ಹೇಳಿಕೊಂಡಿದ್ದಾರೆ. ಸಾಮಂತಸೇನನ ಮಗ ಹೇಮಂತಸೇನ. ಈತನ ಮಗ ವಿಜಯಸೇನ (ಸು. 1095-1158). ಪರಾಕ್ರಮಶಾಲಿಯಾದ ಈತ ಆ ಹಿಂದಿನಿಂದ ಆಳಿದ್ದ ಪಾಲರೆಂಬ ರಾಜರನ್ನು ನಿರ್ಮೂಲ ಮಾಡಿ ಬಂಗಾಲ ಪ್ರಾಂತ್ಯದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದ. ಈತನ ಪ್ರಭಾವ ನೆರೆಯ ಪ್ರದೇಶಗಳಿಗೂ ವ್ಯಾಪಿಸಿತು. ಈತನ ಮಗ ಬಲ್ಲಾಳಸೇನ (1158-1178), ತಂದೆ ಕಟ್ಟಿದ ಸಾಮ್ರಾಜ್ಯವನ್ನು ಸಂರಕ್ಷಿಸಿ ಅದರ ಮೇರೆಯನ್ನು ಬಿಹಾರ ಪ್ರಾಂತ್ಯದಲ್ಲೂ ಬೆಳೆಸಿದ. ಅನಂತರ ಪಟ್ಟವೇರಿದ ಲಕ್ಷ್ಮಣಸೇನನ ಆಳ್ವಿಕೆಯಲ್ಲಿ (ಪ್ರ.ಶ. ಸು. 1178-1205) ಮುಸಲ್ಮಾನರ ಆಕ್ರಮಣದಿಂದಾಗಿ ಸೇನರ ರಾಜ್ಯಬಲ ಕುಗ್ಗಿತು.

ಸೇನರು ಪಾಲ ಅರಸರ ಪುರಸ್ಕಾರದಿಂದ ಅಭಿವೃದ್ಧಿ ಹೊಂದಿದ್ದ ಬೌದ್ಧಮತವನ್ನು ಹಿಂದೂಡಿ ಹಿಂದೂಧರ್ಮದ ಪುನರುಜ್ಜೀವನ ಮಾಡಿದರು. ಇವರ ಸಮರ್ಥ ಶಾಸನದ ಫಲವಾಗಿ ಬಂಗಾಳದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಗೊಂಡುವು. ಇವರು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದರು. ಬಲ್ಲಾಳಸೇನ ಮತ್ತು ಲಕ್ಷ್ಮಣಸೇನರು ವಿದ್ವಾಂಸರೂ ಗ್ರಂಥಕರ್ತರೂ ಆಗಿದ್ದರು. ಗೀತಗೋವಿಂದದ ಕವಿ ಜಯದೇವ ಮತ್ತು ಹಲಾಯುಧರು ಲಕ್ಷ್ಮಣಸೇನನ ಆಸ್ಥಾನವನ್ನು ಅಲಂಕರಿಸಿದ್ದರು. ಸೇನರಲ್ಲಿ ಬಲ್ಲಾಳ ಎಂಬ ಹೆಸರು ಕರ್ನಾಟಕದ ಹೊಯ್ಸಳರ ಮೂಲದಿಂದ ಬಂದುದು. ಕರ್ನಾಟಕದಲ್ಲಿ ಪ್ರಚುರವಾಗಿದ್ದ ಶಕಕಾಲ ಗಣನೆಯನ್ನು ಸೇನರು ಬಂಗಾಳದಲ್ಲಿ ರೂಢಿಗೆ ತಂದರು.

ಮಿಥಿಲೆಯ ಕರ್ಣಾಟಕ ಅರಸರು

[ಬದಲಾಯಿಸಿ]

ಪುರಾಣಪ್ರಸಿದ್ಧ ಮಿಥಿಲೆಯಲ್ಲೂ-ಎಂದರೆ ಉತ್ತರ ಬಿಹಾರದಲ್ಲಿ-ಕನ್ನಡ ಅರಸರು ರಾಜ್ಯವಾಳಿದ್ದಾರೆ. ಮಿಥಿಲೆ ಈಚೆಯ ಕಾಲದಲ್ಲಿ ತೀರಭುಕ್ತಿ, ತಿರಹತ್ ಎಂದು ನಾಮಕರಣ ಪಡೆದಿದೆ. ಬಂಗಾಳದ ಪಾಲರಾಜರ ದಂಡಿನಲ್ಲಿ ಪ್ರವೇಶ ಪಡೆದಿದ್ದ ಅನೇಕ ಕನ್ನಡ ಯೋಧರ, ನಾಯಕರ ಪೈಕಿ ನಾನ್ಯದೆವನೆಂಬ ಸಾಹಸಿ ವೀರನಾಯಕ ಮುಂದುವರಿದು ಸು. 1097ರಲ್ಲಿ ಮಿಥಿಲೆಯಲ್ಲಿ ರಾಜ್ಯ ಸ್ಥಾಪಿಸಿದ. ಈತನ ಮನೆತನ ಮಿಥಿಲೆಯ ಕರ್ಣಾಟ ರಾಜವಂಶವೆಂದು ಖ್ಯಾತಿಪಡೆದಿದೆ. ನನ್ನಿಯದೇವ, ನನ್ನಿಗದೇವ ಎಂಬ ರೀತಿಯಲ್ಲಿ ನಾನ್ಯದೇವ ಎಂಬ ಹೆಸರು ಕನ್ನಡ ಮೂಲದಿಂದ ಬಂದಿರಬಹುದು. ಈ ರಾಜ್ಯದ ರಾಜಧಾನಿ ಸೀಮರರಾಮಪುರ, ಇಂದಿನ ಸಿಮಾರಾಂ. ಇದು ಚಂಪಾರನ್ ಜಿಲ್ಲೆಯ ಉತ್ತರಕ್ಕೆ ನೇಪಾಳ ರಾಜ್ಯದಲ್ಲಿದೆ.

ಗೌಡ ಮತ್ತು ವಂಗದೇಶಗಳ ರಾಜರೊಡನೆ ನಾನ್ಯದೇವ ಹೋರಾಡಿದ. ನೇಪಾಲದೇಶವನ್ನೂ ಗೆದ್ದನೆಂದು ಹೇಳಲಾಗಿದೆ. ಈತ ಸು. 50 ವರ್ಷ ರಾಜನಾಗಿದ್ದ. ಇವನ ತರುವಾಯ ಈ ವಂಶದಲ್ಲಿ ಗಂಗದೇವ ಮೊದಲಾದ ಐದು ಜನ ಅರಸರು ರಾಜ್ಯಭಾರ ಮಾಡಿದರು. ಈ ವಂಶದ ಕೊನೆಯ ರಾಜನಾದ ಹರಿಸಿಂಹ ಅಥವಾ ಹರಸಿಂಹ (ಸು. 1285-1324) ಮುಸಲ್ಮಾನರ ಆಕ್ರಮಣದಿಂದ ಮಿಥಿಲೆಯ ರಾಜ್ಯವನ್ನು ಕಳೆದುಕೊಂಡ. ಮುಂದೆ ನೇಪಾಳದಲ್ಲಿ ರಾಜ್ಯ ಸಂಪಾದಿಸಿ ಅಲ್ಲಿ ತನ್ನ ಆಳ್ವಿಕೆಯನ್ನು ಮುಂದುವರಿಸಿದ. ಖ್ಯಾತ ಸ್ಮೃತಿಕಾರನಾದ ಚಂಡೇಶ್ವರ ಹರಿಸಿಂಹನ ಮಂತ್ರಿಯೂ ಸೇನಾಪತಿಯೂ ಆಗಿದ್ದ. ಈತ ನೇಪಾಳದ ರಾಜ್ಯಸಂಪಾದನೆಯಲ್ಲಿ ತನ್ನ ದೊರೆಗೆ ಸಹಾಯ ನೀಡಿದ. ಹರಿಸಿಂಹ ನೇಪಾಳದಲ್ಲಿ ಸ್ವಲ್ಪಕಾಲ ಆಳಿದ ಅನಂತರ ಆತನ ವಂಶಿಕರು ಅಲ್ಲಿ ಕೆಲಕಾಲ ಅರಸರಾದರು.


ಉಲ್ಲೇಖಗಳು

[ಬದಲಾಯಿಸಿ]