ಹುಸ್ಕೂರ ಮದ್ದೂರಮ್ಮದೇವಿಯ ರಥೋತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಜಾತ್ರೆ ನಡೆಸಲು ಪ್ರಮುಖ ಕಾರಣ ; ಗ್ರಾಮದ ರಕ್ಷಣೆ[ಬದಲಾಯಿಸಿ]

'ಹುಸ್ಕೂರ ಹಸುಗಳ ಸಹಭಾಗಿತ್ವದ 'ಮದ್ದೂರಮ್ಮ ದೇವಿಯ ರಥೋತ್ಸವ,' ಹಲವಾರು ಕಾರಣಗಳಿಗಾಗಿ ವಿಭಿನ್ನವಾಗಿರುವ ರಥೋತ್ಸವವೆಂದು ಹೆಸರು ಮಾಡಿದೆ. ಬೆಂಗಳೂರು ಹೊರವಲಯದಲ್ಲಿರುವ, ಹುಸ್ಕೂರಿನಲ್ಲಿ ಜರುಗುವ, 'ಹುಸ್ಕೂರು ಮದ್ದೂರಮ್ಮ ದೇವಿಯ ಜಾತ್ರೆ,' ತನ್ನದೇ ಆದ ವೈಶಿಷ್ಟ್ಯವನ್ನು ಇಂದಿಗೂ ಉಳಿಸಿಕೊಂಡುಬಂದಿದೆ. ಪ್ರತಿವರ್ಷವೂ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಹುಸ್ಕೂರು ಗ್ರಾಮಸ್ಥರು ಸೂಕ್ತದಿನವನ್ನು ಗೊತ್ತುಪಡಿಸಿ, ಈ ರಥೋತ್ಸವವನ್ನು ಸಂಘಟಿಸುತ್ತಾರೆ. ಜನರಿಗೆ, ಜಾನುವಾರುಗಳಿಗೆ ಕಾಯಿಲೆಗಳು ಬರದಿರುವಂತೆ ಗ್ರಾಮದೇವತೆಯ ರಕ್ಷಣೆಯನ್ನು ಕೋರಿ, ಹಿಂದಿನಿಂದಲೂ ಆಚರಣೆಯಲ್ಲಿರುವ ಈ ಜಾತ್ರೆ, ಇಂದಿಗೂ ನಡೆದುಕೊಂಡುಬರುತ್ತಿದೆ. ಹಿರಿಯರು ಹೇಳುವಂತೆ ಈ ಜಾತ್ರೆ ಕನ್ನಡನಾಡಿನ ಜಾತ್ರೆಗಳಲ್ಲಿಯೇ ವಿಶೇಷವಾಗಿದೆ. ನಂಬಿಕೆ, ದೈವಭಕ್ತಿ, ಸಂಸ್ಕೃತಿಗಳೆಲ್ಲಾ ಮಿಳಿತಗೊಂಡ ನಮ್ಮ ರಾಜ್ಯದ ಜಾತ್ರೆಗಳನ್ನು ಶ್ರದ್ಧಾಳುಗಳು, ವಿಚಿತ್ರ ಹುರುಪು ಸಂಭ್ರಮಗಳಿಂದ ನಡೆಸುತ್ತಾರೆ. ಇವು ಪ್ರತಿ ಊರಿನಲ್ಲೂ ತಮ್ಮದೇ ಆದ ವಿಶಿಷ್ಠ ಸಂಪ್ರದಾಯ ಹಾಗೂ ಆಚಾರಗಳನ್ನು ಹೊಂದಿರುತ್ತವೆ.

'ಮದ್ದೂರಮ್ಮ ರಥೋತ್ಸವ,'ದ ವಿಶೇಷತೆ[ಬದಲಾಯಿಸಿ]

" ಹುಸ್ಕೂರಿನ ಗ್ರಾಮದೇವತೆ, ಮದ್ದೂರಮ್ಮ" ನವರ ತೇರನ್ನು ಎಳೆಯುವ ಪರಿಪಾಠ, ಇಲ್ಲಿನ ಭಕ್ತ-ಜನರಿಗಿಲ್ಲ. ಅದರಬದಲು, ನೂರಾರು ಎತ್ತುಗಳಿಂದ ತೇರನ್ನು ಎಳೆಸಲಾಗುತ್ತದೆ. ಮತ್ತೊಂದು ವಿಶೇಷವೆಂದರೆ, ಒಂದೇ ರಥವನ್ನು ಎಳೆಯುವುದಿಲ್ಲ. ಬದಲಾಗಿ, ೧೦-೧೫ ರಥಗಳನ್ನು ಎತ್ತುಗಳಿಂದ ಎಳೆಯಲಾಗುತ್ತದೆ. ರಥಗಳು ಸುಮಾರು ೧೦-೧೨ ಅಂಕಣದಷ್ಟು ಎತ್ತರವಾಗಿರುತ್ತದೆ. ಅವು ಒಂದೇ ಊರಿನ ರಥಗಳಲ್ಲ. ಬೇರೆಬೇರೆ ಹತ್ತಿರದ ಊರಿನಿಂದ ಬಂದ ರಥಗಳು. ಪ್ರತಿವರ್ಷವೂ ಹುಸ್ಕೂರಿನ ರೈತಬಾಂಧವರು ಜಾತ್ರೆಯನ್ನು ನಡೆಸುತ್ತಾರೆ. ತಮ್ಮ ಹೊಲಗಳ ಕಾರ್ಯಗಳು ಮುಗಿದಬಳಿಕ, ಸುಗ್ಗಿಕಾಲದಲ್ಲಿ, ಹಿಗ್ಗಿನ ಹಬ್ಬವನ್ನಾಗಿ ಮದ್ದೂರಮ್ಮ ದೇವಿಯ ರಥೋತ್ಸವವನ್ನು ಸಂಭ್ರಮದಿಂದ ಆಚರಿಸಿ ತೃಪ್ತಿಪಡೆಯುತ್ತಾರೆ.

ಮದ್ದೂರಮ್ಮ ರಥೋತ್ಸವದ, ಹಲವು ವಿಶೇಷಗಳು[ಬದಲಾಯಿಸಿ]

ಮೊದಲದಿನ ರಥೋತ್ಸವದ ವಿಧಿ, ದೀಪಾರತಿಗಳ ಮೆರವಣಿಗೆಯಿಂದ ಆರಂಭವಾಗುತ್ತದೆ. ಮರುದಿನ, ರಥೋತ್ಸವದಿಂದ ವಿಧಿಗಳೆಲ್ಲಾ ಕೊನೆಗೊಳ್ಳುತ್ತವೆ. ಹುಸ್ಕೂರಿನ ಸುತ್ತಮುತ್ತಲ ಗ್ರಾಮಗಳಾದ, ಕೊಡತಿ, ಹಾರೋಹಳ್ಳಿ, ಸಿಂಗೇನ ಅಗ್ರಹಾರ, ದೊಡ್ಡ ನಾಗಮಂಗಲ, ಹಾಗೂ ಮುತ್ತನಲ್ಲೂರ್ ಸೇರಿದಂತೆ, ಸುಮಾರು ೧೦-೧೫ ಗ್ರಾಮಗಳಿಂದ ಭಕ್ತಾದಿಗಳು ತಾವೇ ರಥಗಳನ್ನು ನಿರ್ಮಿಸುತ್ತಾರೆ. ಅವನ್ನು ಅವರು 'ಕುರ್ಜುಗಳು' ಎನ್ನುತ್ತಾರೆ. ಎತ್ತುಗಳಿಂದ ೧೦-೨೦ ಕಿ. ಮಿ. ದೂರದ ದಾರಿಯುದ್ದಕ್ಕೂ ಅವು ಎಳೆಯಲ್ಪಡುತ್ತವೆ. ಹಳ್ಳಿಗರ ನಂಬಿಕೆಯಂತೆ ಎತ್ತುಗಳು ಅಷ್ಟುದೂರ ಕುರ್ಜುಗಳನ್ನು ಎಳೆದು, ದೇವಿಯ ಸಾನ್ನಿಧ್ಯಕ್ಕೆ ಬಂದಾಗ ಮಾತ್ರ ದೇವಿ ಸಂತುಷ್ಟಳಾಗುತ್ತಾಳೆ. ಕೆಲವರು, ವರ್ಷವಿಡೀ ಭೂಮಿಯನ್ನು ಉಳುವ ಎತ್ತುಗಳು ೨ ದಿನಗಳಕಾಲ ಉಲ್ಲಾಸದಿಂದಿರಲೆಂದು ರಥವನ್ನು ಎಳೆಯಲಾಗುತ್ತಿದೆ ಎಂದು ಭಾವಿಸುತ್ತಾರೆ. ಆದರೆ ಎತ್ತರದ ಭಾರವಾದ ರಥಗಳನ್ನು ಎಳೆದು ತರುವುದು ಸಾಮಾನ್ಯಮಾತಲ್ಲ. ಸಾಯಂಕಾಲದ ವೇಳೆಗೆ ಒಂದೊಂದಾಗಿ ರಥಗಳು ಹುಸ್ಕೂರನ್ನು ಬಂದು ಸೇರುತ್ತವೆ. ಇದನ್ನು ನೋಡಲು ಸಾವಿರಾರು ಭಕ್ತರು ನೆರೆದಿರುತ್ತಾರೆ. ಸ್ವಲ್ಪ ವಿಶ್ರಮಿಸಿದ ಬಳಿಕ, ರಥಗಳನ್ನು 'ಮದ್ದೂರಮ್ಮ ದೇವಿಯ ಮಂದಿರ' ದ ಬಳಿ ಒಯ್ದು ಬೀಡುಬಿಡುತ್ತಾರೆ.