ವಿಷಯಕ್ಕೆ ಹೋಗು

ಹಲಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇಸ್ಲಾಮೀ ಕರ್ಮಶಾಸ್ತ್ರದ ಪ್ರಕಾರ, ಒಪ್ಪಬಹುದಾದ ಅಥವಾ ಮಾನ್ಯವಾದ ವಿಷಯಗಳನ್ನು ಹಲಾಲ್ ಎನ್ನಲಾಗುತ್ತದೆ. ಹಲಾಲ್ ಎಂಬುದು ಒಂದು ಅರಬ್ಬಿ ಪದವಾಗಿದೆ. ಇದಕ್ಕೆ ವಿರುದ್ಧವಾದ ಅಥವಾ ಒಪ್ಪಲಾಗದ ಅಥವಾ ಅನುಸರಿಸಬಾರದ ವಿಷಯಗಳನ್ನು ಹರಾಂ ಎನ್ನಲಾಗುತ್ತದೆ. ಮುಸಲ್ಮಾನರ ಪವಿತ್ರ ಗ್ರಂಥವಾದ ಕುರಾನಿನ ಹುಕ್ಮ್(ಹುಕುಮ್) ಭಾಗದಲ್ಲಿ ಬರುವ, ಐದು ನಿರ್ಧಾರಗಳು(ಕಡ್ಡಾಯವಾದುದು, ಶಿಫಾರಸು ಮಾಡಲಾದುದು, ತಟಸ್ಥವಾದುದು, ಖಂಡನೀಯವಾದುದು ಮತ್ತು ನಿಷೇಧಿಸಲ್ಪಟ್ಟಿದುದು) ಎಂದು ಕರೆಯಲಾಗುವ ವರ್ಗೀಕರಣದಲ್ಲಿ ಹಲಾಲ್ ಮತ್ತು ಹರಾಮಿನ ಕುರಿತಾಗಿ ವಿವರಿಸಲಾಗಿದೆ.

ಹೆಚ್ಚಿನವರು ತಿಳಿದಿರುವಂತೆ ಹಲಾಲ್ ಕೇವಲ ಆಹಾರ ಪದ್ಧತಿಗೆ ಅಥವಾ ಮಾಂಸಕ್ಕಾಗಿ ಪ್ರಾಣಿಗಳನ್ನು ಕೊಲ್ಲುವ ವಿಷಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇದು ಒಬ್ಬ ನಿಷ್ಠಾವಂತ ಮುಸಲ್ಮಾನ ತನ್ನ ದೈನಂದಿನ ಜೀವನದುದ್ದಕ್ಕೂ ಪಾಲಿಸಬೇಕಾದ ನಿಯಮಗಳಾಗಿವೆ.

ಅರೇಬಿಕ್ ಭಾಷೆಯಲ್ಲಿ ಹಲಾಲ್ ಶಬ್ಧ.


ಹಲಾಲ್ ಮತ್ತು ಹರಾಂ ಎನ್ನುವುದು ಇಸ್ಲಾಮೀ ಕರ್ಮಶಾಸ್ತ್ರದಲ್ಲಿ ಬಹಳ ಮಾನ್ಯತೆಯಿರುವ ಪದಗಳು.ಆದರೆ ಇಂದು ನಮ್ಮ ದೇಶದಲ್ಲಿ ಕೇವಲ ಬಾಡಿಗಾಗಿ ಪ್ರಾಣಿಯನ್ನು ಕೊಯ್ಯುವ ಒಂದು ವಿಧಾನ ಅಷ್ಟೇ ಹಲಾಲ್ ಎಂದು ಹೆಚ್ಚಿನವರು ತಿಳಿದಿದ್ದಾರೆ. ವಾಸ್ತವದಲ್ಲಿ ಪ್ರಾಣಿಯನ್ನು ಕೊಯ್ಯುವ ಇಸ್ಲಾಮೀ ವಿಧಾನದ ಹೆಸರು ದ್ಸಬಹ್ ಎಂದಾಗಿದೆ.ಇಸ್ಲಾಮಿನಲ್ಲಿ ಮಾಂಸದ ಪ್ರಾಣಿಗಳನ್ನು ಕೊಯ್ಯುವ ವಿಧಾನಕ್ಕೆ ಹಲಾಲ್ ಎಂಬ ಪದ ಬಳಕೆಯೇ ಇಲ್ಲ. ದ್ಸಬಹ್ ಮಾಡುವ ವಿಧಾನ ಮಾಂಸದ ಪ್ರಾಣಿಯ ಕತ್ತಿನ ಮುಂಭಾಗಕ್ಕೆ ಹರಿತವಾದ ಚೂರಿ ಹಾಕಿ ಅತೀ ಮುಖ್ಯವಾದ ಮೂರು ನಾಳಗಳನ್ನು ಕತ್ತರಿಸುವುದು. ಮುಸ್ಲಿಮರಿಗೆ ಹಲಾಲ್ ಮತ್ತು ಹರಾಂ ಆದ ನೂರಾರು ವಿಚಾರಗಳನ್ನು ಖುರ್‌ಆನ್ ಮತ್ತು ಪ್ರವಾದಿ ವಚನಗಳಲ್ಲಿ ಕಲಿಸಲಾಗಿದೆ.

ಇಸ್ಲಾಮಿನ ಹರಾಂ ಪದ್ಧತಿ ಬಹಳ ಸರಳ. ಇಸ್ಲಾಮಿನಲ್ಲಿ ಕದಿಯುವುದು, ಕೊಲ್ಲುವುದು, ಸುಳ್ಳು ಹೇಳುವುದು, ತನ್ನ ತಾನು ದೊಡ್ಡವನೆಂದು ಮೆರೆಯುವುದು, ಬೇರೆಯವರನ್ನು ನಿಂದಿಸುವುದು ಇವಿಷ್ಟು ಮಾತ್ರವಲ್ಲದೇ ಇನ್ನಷ್ಟು ಹರಾಂಗಳಿವೆ. ಮೈಮಾರಿಕೊಳ್ಳುವುದು, ಕುಡಿತ, ವಂಚನೆ, ಬೇರೆಯವರ ಆಸ್ತಿಯನ್ನು ಲಪಟಾಯಿಸುವುದು, ಪರದೂಷಣೆಗೈಯುವುದು, ಬಡ್ಡಿ, ಸರಕುಗಳನ್ನು ಕೂಡಿಟ್ಟು ಕೃತಕ ಅಭಾವ ಸೃಷ್ಟಿಸಿ ಹೆಚ್ಚುವರಿ ಲಾಭ ಪಡೆಯುವುದು, ತೂಕದಲ್ಲಿ ಮೋಸ ಮಾಡುವುದು, ದುಡಿದವನ ಸಂಬಳ ಕೊಡದೆ ಸತಾಯಿಸುವುದು, ಮಂದಿಯ ಹಕ್ಕುಗಳನ್ನು ಕಸಿಯುವುದು, ಮನುಷ್ಯರಲ್ಲಿ ಮೇಲು ಕೀಳೆಂದು ತಾರತಮ್ಯ ಮಾಡುವುದು, ಸತ್ಯವನ್ನು ಅಡಗಿಸಿಡುವುದು ಇವೆಲ್ಲವೂ ಹರಾಂ ಅಂದರೆ ಬಿಡಬೇಕಾದ ಕೆಲಸಗಳು ಮಾತ್ರವಲ್ಲದೇ ಶಿಕ್ಷಾರ್ಹ ಅಪರಾಧವೂ ಹೌದು.

ಒಂದು ಪ್ರವಾದಿ ವಚನ ಇಂತಿದೆ. “ಓರ್ವ ಮನುಷ್ಯ ಸೇವಿಸುವ ಆಹಾರದಲ್ಲಿ ಅತ್ಯಂತ ಶ್ರೇಷ್ಠ ಆಹಾರ ಸ್ವಯಂ ದುಡಿದ ಆಹಾರ..” ಎಂದು. ಇಷ್ಟಕ್ಕೇ ಮುಗಿಯುವುದಿಲ್ಲ. ಮನುಷ್ಯನೊಬ್ಬ ತಾನು ತಿನ್ನುವ ಆಹಾರ ನ್ಯಾಯಯುತವಾದ ಮಾರ್ಗದಲ್ಲಿ ಸಂಪಾದಿಸಿದ್ದರೆ ಅದು ಮಾತ್ರ ಆತನಿಗೆ ಹಲಾಲ್. ಇಸ್ಲಾಮ್ ಈ ವಿಚಾರದಲ್ಲಿ ಎಷ್ಟು ಕಠಿಣವಾಗಿದೆಯೆಂದರೆ ನೀವು ನಿಮ್ಮ ಮನೆಯ ಸಾಕುಪ್ರಾಣಿಗೆ ತಿನ್ನಿಸುವ ಆಹಾರವೂ ಕೂಡಾ ನ್ಯಾಯಯುತ ಸಂಪಾದನೆಯಿಂದ ಪಡೆದಿರಬೇಕು. (ಅವಾಗಿಯೇ ಸ್ವಯಂ ಮೇಯುವಾಗ ಇದು ಅನ್ವಯವಾಗುವುದಿಲ್ಲ).

ಇನ್ನು ಮುಸ್ಲಿಮರಿಗೆ ಹಲಾಲ್ ಮತ್ತು ಹರಾಂಗಳು ಕೆಲವು ಪ್ರತಿಕೂಲ ಸಂದರ್ಭಗಳಲ್ಲಿ ಬದಲಾಗುತ್ತವೆ. ಮುಸ್ಲಿಮರಿಗೆ ಹಂದಿ ಮಾಂಸ ಮತ್ತು ಮದ್ಯ ಹರಾಂ. ಆದರೆ ತಿನ್ನಲು ಹಂದಿ ಮಾಂಸ ಮತ್ತು ಕುಡಿಯಲು ಮದ್ಯದ ಹೊರತಾಗಿ ಏನೂ ಇಲ್ಲದೇ ಹಸಿವಿನಿಂದ ಪ್ರಾಣ ಹೋಗುವ ಸಂದರ್ಭವಿದ್ದರೆ ಹಂದಿ ಮಾಂಸ ಮತ್ತು ಮದ್ಯ ಕೂಡಾ ಹಲಾಲ್ ಆಗುತ್ತದೆ.

ಹಲವು ಆಹಾರ ಕಂಪನಿಗಳು ಹಲಾಲ್ ಸಂಸ್ಕರಿಸಿದ ಆಹಾರಗಳು ಮತ್ತು ಉತ್ಪನ್ನಗಳನ್ನು ನೀಡುತ್ತವೆ. ಇವುಗಳಲ್ಲಿ ಹಲಾಲ್ ಫ಼ೋಯಿ ಗ್ರಾ, ಸ್ಪ್ರಿಂಗ್ ರೋಲ್‌ಗಳು, ಕೋಳಿಮಾಂಸದ ತುಂಡುಗಳು, ರಾವಿಯೋಲಿ, ಲಸಾನ್ಯಾ, ಪೀಟ್ಸಾ ಮತ್ತು ಶಿಶು ಆಹಾರ ಸೇರಿವೆ.[೧] ಹಲಾಲ್ ಸಿದ್ಧ ಆಹಾರಗಳು ಬ್ರಿಟನ್ ಮತ್ತು ಅಮೇರಿಕದಲ್ಲಿನ ಮುಸ್ಲಿಮರಿಗೆ ಬೆಳೆಯುತ್ತಿರುವ ಗ್ರಾಹಕ ಮಾರುಕಟ್ಟೆಯಾಗಿವೆ ಮತ್ತು ಇವನ್ನು ಹೆಚ್ಚೆಚ್ಚು ಸಂಖ್ಯೆಯ ಚಿಲ್ಲರೆ ವ್ಯಾಪಾರಿಗಳು ನೀಡುತ್ತಿದ್ದಾರೆ.[೨] ಸಸ್ಯಾಹಾರಿ ಆಹಾರದಲ್ಲಿ ಮದ್ಯಸಾರವಿರದಿದ್ದರೆ ಅದು ಹಲಾಲ್ ಎಂದೆನಿಸಿಕೊಳ್ಳುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "USDA Foreign Agricultural Service – Halal Food Market" (PDF). Retrieved Aug 30, 2016.
  2. "Halal la carte". The Economist. ISSN 0013-0613. Retrieved 2016-08-31.
"https://kn.wikipedia.org/w/index.php?title=ಹಲಾಲ್&oldid=1097728" ಇಂದ ಪಡೆಯಲ್ಪಟ್ಟಿದೆ