ಸ್ವಾಮೀ ರಾಮತೀರ್ಥ
ಸ್ವಾಮೀ ರಾಮತೀರ್ಥ | |
---|---|
ಜನನ | gujranvala district, panjab state ಭಾರತ | ೧೦ ಅಕ್ಟೋಬರ್ ೧೮೭೩ invalid year
ಮರಣ | ಮಾರ್ಚ್ 10, 1906 |
ತತ್ವಶಾಸ್ತ್ರ | वेदान्तः |
ಸ್ವಾಮೀ ರಾಮತೀರ್ಥರ ಮೂಲ ಹೆಸರು ತೀರ್ಥರಾಮ ಎಂದಾಗಿತ್ತು. ಅವರು ವಿವೇಕಾನಂದರಂತೆ ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿಯನ್ನು ವಿದೇಶಗಳಲ್ಲಿ ಪ್ರಚಾರಪಡಿಸಿದ ಭಾರತ ಮಾತೆಯ ಸುಪುತ್ರರು. ಅವರು ಭಾರತದ ವೇದಾಂತವೇ ಮೊದಲಾದ ಶಾಸ್ತ್ರಗಳನ್ನು ಜಪಾನ್, ಅಮೆರಿಕಾ ಮೊದಲಾದ ದೇಶಗಳಲ್ಲಿ ಪ್ರಚಾರ ಮಾಡಿ ಅಲ್ಲಿಯ ಜನರು ಆತ್ಮಜ್ಞಾನವನ್ನು ತಿಳಿದುಕೊಳ್ಳುವಂತೆ ಮಾಡಿದರು.
ಜನನ ಮತ್ತು ಕುಟುಂಬ
[ಬದಲಾಯಿಸಿ]ರಾಮತೀರ್ಥರು ೧೮೭೩ನೇ ವರ್ಷದಲ್ಲಿ ಅಕ್ಟೋಬರ್ ತಿಂಗಳಿನ ೨೨ನೇ ದಿನಾಂಕದಂದು. ಪಂಜಾಬಿನ ಗುಜರಾವಾಲಾ ಜಿಲ್ಲೆಯ ಮುರಾರೀವಾಲಾ ಗ್ರಾಮದಲ್ಲಿ ಪಂಡಿತ ಹೀರಾನಂದ ಗೋಸ್ವಾಮೀ ಎಂಬುವವರ ಮನೆಯಲ್ಲಿ ಜನಿಸಿದರು. ಅವರ ಹುಟ್ಟು ಹೆಸರು ತೀರ್ಥರಾಮ ಎಂದಾಗಿತ್ತು. ರಾಮತೀರ್ಥರಿಗೆ ಒಂಭತ್ತು ತಿಂಗಳುಗಳಾಗಿರುವಾಗಲೇ ಅವರ ತಾಯಿ ತೀರಿಹೋದರು. ಆದ್ದರಿಂದ ಅವರ ತಾಯಿಯ ಹೆಸರೇ ಎಲ್ಲಿಯೂ ಸಿಕ್ಕುವುದಿಲ್ಲ. ಅವರ ಸಹೋದರಿಯ ಹೆಸರು ತೀರ್ಥದೇವೀ ಎಂದಾಗಿತ್ತು.
ಬಾಲ್ಯ
[ಬದಲಾಯಿಸಿ]ತಾಯಿಯ ಮರಣದ ನಂತರ ತೀರ್ಥರಾಮರನ್ನು ತಂದೆಯ ಸಹೋದರಿ ಮತ್ತು ಅವರ ಸಹೋದರಿ ಸಾಕಿದರು. ಅವರಿಬ್ಬರೂ ಧಾರ್ಮಿಕರಾಗಿದ್ದರು. ಆದ್ದರಿಂದ ಅವರಿಬ್ಬರಿಗೂ ನಿತ್ಯವೂ ಕಥೆಗಳನ್ನು ಶ್ರವಣ ಮಾಡುವುದು ಮತ್ತು ಶ್ರೀಹರಿಯ ದರ್ಶನ ತುಂಬ ಪ್ರಿಯವಾದ ಕೆಲಸವಾಗಿದ್ದವು. ಅವರು ರಾಮತೀರ್ಥರಿಗೂ ಕೂಡ ಅನೇಕ ಕಥೆಗಳನ್ನು ಕೇಳಿಸುತ್ತಿದ್ದರು. ಅದರಿಂದಾಗಿ ಅವರೂ ಕೂಡ ಕಥೆಗಳನ್ನು ಕೇಳುವುದರಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡರು. ಬಾಲ್ಯದಿಂದಲೂ ಅವರಿಗೆ ಓದುವುದರಲ್ಲಿ ಆಸಕ್ತಿಯಿತ್ತು. ಆದ್ದರಿಂದ ಓದಿನ ಹೊರತಾದ ಆಟೋಟಗಳಲ್ಲಿ ಆಸಕ್ತಿಯಿರಲಿಲ್ಲ. ಹೀಗಾಗಿ ಆಟಗಳಿಂದ ಬಾಲಕರ ಶರೀರ ಎಷ್ಟು ಬಲಶಾಲಿಯಾಗುತ್ತಿತ್ತೋ ಅಷ್ಟು ಅವರ ಶರೀರ ಬಲಶಾಲಿಯಾಗಿರಲಿಲ್ಲ. ಆದರೂ ಕೂಡ ಶಾರೀರಿಕ ದುರ್ಬಲತೆ ಅವರ ಅಭ್ಯಾಸದ ಮೇಲೆ ಪ್ರಭಾವ ಬೀರಲಿಲ್ಲ.
ಶಿಕ್ಷಣ
[ಬದಲಾಯಿಸಿ]ಐದುವರೆ ವರ್ಷವಾಗುತ್ತಿದ್ದಂತೆಯೇ ತೀರ್ಥರಾಮರನ್ನು ಅವರ ತಂದೆ ಮುರಾರೀವಾಲಾ ಗ್ರಾಮದ ಉರ್ದೂ ಶಾಲೆಗೆ ಕಳುಹಿಸಿದರು. ಶಾಲೆಯಲ್ಲಿ ತೀರ್ಥರಾಮರು ಗುಲಿಸ್ತಾಂ, ಬೋಸ್ತಾಂ ಎಂಬ ಹೆಸರಿನ ಎರಡು ಫಾರಸೀ ಭಾಷೆಯ ಪುಸ್ತಕಗಳನ್ನು ಓದಿದರು.ಅನಂತರ ಕೆಲವು ಅರ್ಥಪೂರ್ಣವಾದ ಗದ್ಯಗಳನ್ನು ಕಂಠಸ್ಥಗೊಳಿಸಿಕೊಂಡರು. ಬೇರೆ ಕೆಲವು ಕಾವ್ಯಗಳನ್ನು ಕೂಡ ಕಂಠಗತಗೊಳಿಸಕೊಂಡರು. ಆದ್ದರಿಂದ ಅವರು ಶಾಲೆಯಲ್ಲಿ ಮೊದಲಿಗನೇ ಆಗಿದ್ದರು. ಹೀಗಾಗಿ ತೀರ್ಥರಾಮರ ಕುಶಲತೆಯನ್ನು ಕಂಡು ಶಾಲೆಯ ಮೌಲ್ವೀ ಅವರ ಬಗ್ಗೆ ತುಂಬ ಪ್ರಸನ್ನನಾಗಿದ್ದನು. ಅದೇ ರೀತಿ ಆ ಮೌಲ್ವಿಯ ಬಗ್ಗೆ ಕೂಡ ತೀರ್ಥರಾಮರಿಗೆ ವಿಶ್ವಾಸವಿತ್ತು. ಶಾಲೆಯಲ್ಲಿ ಮೊದಲಿಗನಾಗಿ ಉತ್ತೀರ್ಣನಾಗುತ್ತಿರುವುದರಿಂದ ತೀರ್ಥರಾಮರಿಗೆ ಓದಿನಲ್ಲಿ ಆಸಕ್ತಿ ಬೆಳೆಯ ಹತ್ತಿತು. ಆದರೆ ಮುರಾರೀ ಗ್ರಾಮದಲ್ಲಿ ಆಗ ಆಂಗ್ಲಶಾಲೆ ಇರಲಿಲ್ಲ. ಜಿಲ್ಲಾಕೇಂದ್ರವಾದ ಗುಜರಾವಾಲದಲ್ಲಿ ಓದಿಸಲು ತಂದೆಗೆ ಆರ್ಥಿಕ ಶಕ್ತಿಯಿರಲಿಲ್ಲ. ಆದರೂ ಅವರ ತಂದೆ ತೀರ್ಥರಾಮರನ್ನು ಗುಜರಾವಾಲದಲ್ಲಿ ತನ್ನ ಸ್ನೇಹಿತನಾದ ಭಗತ್ ಧನ್ನಾರಾಮ ಎಂಬುವವರ ಬಳಿಗೆ ಕಳುಹಿಸಿದರು. ತೀರ್ಥರಾಮರು ಅಲ್ಲಿ ಏಕಾಂತದಲ್ಲಿದ್ದು ಒದಿನಲ್ಲಿ ಗಮನವನ್ನು ಕೇಂದ್ರೀಕರಿಸಿದರು. ಶಾಲೆಯಿಂದ ಹಿಂದಿರುಗಿದ ಬಳಿಕ ಅವರು ರಾಮಾಯಣ, ಮಹಾಭಾರತ ಮೊದಲಾದವುಗಳನ್ನು ಓದುತ್ತಿದ್ದರು. ರಾತ್ರಿ ದೀಪದ ಬೆಳಕಿನಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸುತ್ತಿದ್ದರು. ಹೀಗೆ ಕಠಿಣವಾದ ಪರಿಶ್ರಮದಿಂದ ಗುಜರಾನವಾಲದಲ್ಲಿಯೂ ಕೂಡ ಅವರು ಮೊದಲ ಸ್ಥಾನವನ್ನೇ ಪಡೆದರು. ಪಂಜಾಬ್ ರಾಜ್ಯದಲ್ಲಿ ಸಾಮಾನ್ಯ ವ್ಯವಹಾರದಲ್ಲಿ ಉರ್ದೂ ಭಾಷೆಯೇ ಬಳಕೆಯಲ್ಲಿತ್ತು. ಆದ್ದರಿಂದ ಮೇಲ್ವರ್ಗದವರೂ ಕೂಡ ಉರ್ದೂ ಭಾಷೆಯನ್ನೇ ಅಭ್ಯಾಸ ಮಾಡುತ್ತಿದ್ದರು. ಆದ್ದರಿಂದ ತೀರ್ಥರಾಮ ಸಂಸ್ಕೃತ ಭಾಷೆಯನ್ನಾಗಲೀ, ಹಿಂದೀ ಭಾಷೆಯನ್ನಾಗಲೀ ತಿಳಿದಿರಲಿಲ್ಲ. ಹದಿನೈದು ವರ್ಷಗಳ ತೀರ್ಥರಾಮ ೧೮೮೮ನೇ ವರ್ಷದಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅನಂತರ ಇನ್ನಷ್ಟು ಓದಲು ಅವರು ಬಯಸಿದ್ದರು. ಅದೃಷ್ಟವಶಾತ್ ಗುಜರಾನವಾಲಾ ಜಿಲ್ಲೆಯ ನಗರಪಾಲಿಕೆಯಿಂದ ಹಾಗೂ ಭಗತ್ ಧನ್ನಾರಾಮ ಎಂಬುವವರಿಂದ ಅವರು ಹಣಕಾಸಿನ ನೆರವನ್ನು ಪಡೆದರು. ಆದ್ದರಿಂದ ತಂದರಯವರು ಕೂಡ ಅವರಿಗೆ ಲಾಹೋರ್ ನಗರಕ್ಕೆ ಹೋಗಿ ಕಲಿಯಲು ಅನುಮತಿ ನೀಡಿದರು.
ಉನ್ನತವಿದ್ಯಾಭ್ಯಾಸ
[ಬದಲಾಯಿಸಿ]ಲಾಹೋರ್ ನಗರದಲ್ಲಿ ತೀರ್ಥರಾಮರು ಫಾರ್ಮನ್ ಕ್ರಿಷ್ಚಿಯನ್ ಕಾಲೇಜಿಗೆ ಪ್ರವೇಶ ಪಡೆದರು. ತೀರ್ಥರಾಮರ ಅಭ್ಯಾಸದ ಉತ್ಸಾಹವನ್ನು ತಿಳಿದ ಪಂಡಿತ ರಘುನಾಥ ಎನ್ನುವವರು ಇವರಿಗೆ ಪಠ್ಯಕ್ರಮದ ಪುಸ್ತಕಗಳನ್ನು ಕೊಟ್ಟು ಸಹಾಯ ಮಾಡಿದರು. ತೀರ್ಥರಾಮರು ಕಾಲೇಜಿಗೆ ಸೇರಿದ್ದರೂ ಕೂಡ ಸರಳವಾಗಿಯೇ ಬದುಕುತ್ತಿದ್ದರು. ಓದಿನಲ್ಲಿಯೇ ತನ್ನ ಆಸಕ್ತಿಯನ್ನು ಕೇಂದ್ರೀಕರಿಸಿದ್ದರು. ಅಲ್ಲಿನ ಶಿಕ್ಷಕರು 'ಈತ ಬುದ್ದಿವಂತನಾದ ವಿದ್ಯಾರ್ಥಿಯಾಗಿದ್ದರೂ ಕೂಡ ದೇಹವನ್ನು ನಿರ್ಲಕ್ಷಿಸಿದರೆ ಪ್ರಗತಿಯನ್ನು ಗಳಿಸಲು ಸಾಧ್ಯವಾಗುವುದಿಲ್ಲ' ಎಂದು ವಿಚಾರ ಮಾಡಿದರು. ಅದಕ್ಕಾಗಿ ಅವರು ಪ್ರತಿದಿನ ತೀರ್ಥರಾಮರಿಗೆ ಸಂಜೆ ವ್ಯಾಯಾಮವನ್ನು ಮಾಡಿಯೇ ಮನೆಗೆ ಹೋಗಲು ಆದೇಶಿಸಿದರು. ಲಾಹೋರ್ ನಗರಕ್ಕೆ ಹೋಗಿ ತೀರ್ಥರಾಮರು ಹಿಂದೀ ಭಾಷೆಯ ಮಹತ್ವವನ್ನು ತಿಳಿದುಕೊಂಡರು. ಆದ್ದರಿಂದ ಅವರು ಹಿಂದೀ ಭಾಷೆಯನ್ನು ಅಭ್ಯಾಸ ಮಾಡಿದರು. ಅವರು ತುಳಸೀದಾಸರ ಕುಟುಂಬದ ಬ್ರಾಹ್ಮಣನಾದುದರಿಂದ ಅವರ ಸ್ನೇಹಿತರು ಸಂಸ್ಕೃತವನ್ನು ಕಲಿಯಲು ಪ್ರೇರಿಸಿದರು. ಹೀಗೆ ತನ್ನ ಸರಳ ಸ್ವಭಾವದಿಂದಾಗಿ ವಿದ್ಯಾಭ್ಯಾಸದ ಸಮಯದಲ್ಲಿ ಶಿಕ್ಷಕರು ಮತ್ತು ಸ್ನೇಹಿತರ ಪ್ರೀತಿಗೆ ಪಾತ್ರರಾಗಿದ್ದರು.
ಕಾಲೇಜಿನ ಒಬ್ಬ ಅಧ್ಯಾಪಕರು ತನ್ನ ವ್ಯಾಖ್ಯಾನಗಳನ್ನು ಸಂಗ್ರಹಿಸುವ ಕಾರ್ಯವನ್ನು ತೀರ್ಥರಾಮರಿಗೆ ವಹಿಸಿದರು. ಆ ಕಾರ್ಯವನ್ನು ತೀರ್ಥರಾಮರು ಉತ್ಸಾಹದಿಂದಲೇ ಮಾಡಿದರು. ತೀರ್ಥರಾಮರ ಕೆಲಸದಿಂದ ಆ ಅಧ್ಯಾಪಕರು ಸಂತಸಪಟ್ಟರು. ಅವರ ಶಿಕ್ಷಣದ ಅರ್ಧ ಖರ್ಚನ್ನು ಆ ಶಿಕ್ಷಕರೇ ವಹಿಸಿಕೊಂಡರು. ಹೀಗೆ ಕಷ್ಟದಿಂದ ೧೮೯೧ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದ ಬಿ.ಎ. ಪರೀಕ್ಷೆಯಲ್ಲಿ ಆ ಪ್ರಾಂತಕ್ಕೇ ತೀರ್ಥರಾಮ ಪ್ರಥಮ ಸ್ಥಾನವನ್ನು ಪಡೆದರು. ಅದಕ್ಕಾಗಿ ಶಿಷ್ಯವೇತನವಾಗಿ ಪ್ರತಿತಿಂಗಳೂ ೧೦ ರೂಪಾಯಿಗಳನ್ನು ಕೊಡಲಾಗುತ್ತಿತ್ತು. ಅನಂತರ ಅವರು ಲಾಹೋರ್ ನಗರದ ಸರ್ಕಾರದ ಮಾನ್ಯತೆಯನ್ನು ಪಡೆದ ಕಾಲೇಜಿನಲ್ಲಿ ಎಂ.ಎ. ಅಭ್ಯಾಸ ಮಾಡಲು ಹೋದರು. ಅಲ್ಲಿ ಗಣಿತ ವಿಷಯವನ್ನು ಆರಿಸಿಕೊಂಡು ಅವರು ಅತಿ ಹೆಚ್ಚಿನ ಅಂಕಗಳಿಂದ ಎಂ.ಎ. ಪದವಿಯನ್ನು ಮುಗಿಸಿದರು.
ಶಿಕ್ಷಕರಾಗಿ ತೀರ್ಥರಾಮ
[ಬದಲಾಯಿಸಿ]೧೯೦೫ನೇ ವರ್ಷದ ಮಾರ್ಚ್ ತಿಂಗಳಿನಲ್ಲಿ ತೀರ್ಥರಾಮರು ಎಂ.ಎ. ಪರೀಕ್ಷೆಯನ್ನು ಮುಗಿಸಿ ಗಣಿತ ವಿಷಯದ ತರಗತಿಯನ್ನು ಪ್ರಾರಂಭಿಸಿದರು. ಕೆಲವೇ ತಿಂಗಳುಗಳಲ್ಲಿ ಸಿಯಾಲ್ ಕೋಟ್ ಗ್ರಾಮದ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಪ್ರಾರಂಭಿಸಿದರು. ಅನಂತರ ಏಳು ತಿಂಗಳ ಕಾಲ ಅಲ್ಲಿ ಪಾಠಮಾಡಿದರು. ಏಳು ತಿಂಗಳುಗಳ ನಂತರ ಲಾಹೋರ್ ಪಟ್ಟಣದ ಮಿಷನ್ ಕಾಲೇಜಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಯನ್ನು ಅಲಂಕರಿಸಿದರು. ಅವರು ಬಿ.ಎ. ಅಭ್ಯಾಸವನ್ನು ಅಲ್ಲಿಯೇ ಮುಗಿಸಿದ್ದರು. ಆದ್ದರಿಂದ ಅಲ್ಲಿರುವ ಎಲ್ಲರೊಂದಿಗೆ ಅವರಿಗೆ ಪರಿಚಯವಿತ್ತು. ಅವರ ಆಗಮನದಿಂದ ಬಿ.ಎ. ಪದವಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಗಣಿತವನ್ನೇ ವಿಚಾರಮಾಡತೊಡಗಿದರು. ತೀರ್ಥರಾಮರು ಕಾಲೇಜಿನಿಂದ ಪಡೆಯುವ ಹಣದಲ್ಲಿ ಅವಶ್ಯಕವಾದ ಪುಸ್ತಕಗಳನ್ನು ಖರೀದಿಸಿ, ಉಳಿದ ಹಣವನ್ನು ಭಗತ್ ಧನ್ನಾರಾಮರಿಗೂ,ತನ್ನ ತಂದೆಗೂ ಕೊಡುತ್ತಿದ್ದರು.
ಮದುವೆ
[ಬದಲಾಯಿಸಿ]ತೀರ್ಥರಾಮರ ಬಾಲ್ಯದ ಕಾಲದಲ್ಲಿ ನಮ್ಮ ದೇಶದಲ್ಲಿ ಬಾಲ್ಯವಿವಾಹ ಪ್ರಚುರವಾಗಿ ನಡೆಯುತ್ತಿತ್ತು. ತೀರ್ಥರಾಮರಿಗೆ ಹನ್ನೆರಡನೇ ವಯಸ್ಸಿನಲ್ಲಿ ಅವರ ವಿವಾಹವಾಯಿತು. ಅದರ ಪರಿಣಾಮವಾಗಿ ಅವರು ವಿದ್ಯಾರ್ಥಿದೆಸೆಯಲ್ಲಿಯೇ ಕುಟುಂಬದ ಭಾರವನ್ನು ನಿರ್ವಹಿಸಿದರು.
ವೇದಾಂತದ ಅಭ್ಯಾಸ
[ಬದಲಾಯಿಸಿ]ಸಿಯಾಲ್ ಕೋಟ್ ಗ್ರಾಮದ ಶಾಲೆಯಲ್ಲಿ ಅವರು ಶಿಕ್ಷಕರಾಗಿದ್ದಾಗ ಅವರು ವೇದಾಂತವನ್ನು ಪ್ರಖರವಾಗಿ ಅಭ್ಯಾಸ ಮಾಡುವವರೆಂದು ಪ್ರಸಿದ್ಧರಾದರು. ಆಗ ಧಾರ್ಮಿಕ ವಿಷಯಗಳಿಗೆ ವ್ಯಾಖ್ಯಾನವನ್ನು ಕೊಡಲು ಅವರನ್ನು ಆಮಂತ್ರಿಸುತ್ತಿದ್ದರು. ಅವರ ಭಾಷಣಗಳನ್ನು ಕೇಳಲು ಜನರು ಗುಂಪುಗುಂಪಾಗಿ ಬರುತ್ತಿದ್ದರು. ಜನರು ಮೂರು-ನಾಲ್ಕು ಗಂಟೆಗಳ ಕಾಲ ಶಾಂತಿಯಿಂದ ಭಾಷಣವನ್ನು ಕೇಳುತ್ತಿದ್ದರು. ಅವರು ದೀವಾನೇ ಹಾಫೇಜ್, ಮನಸ್ವೀ ಏ ಮೌಲಾನಾ, ತುಳಸಿದಾಸರ ವಿನಯಪತ್ರಿಕಾ, ಸೂರದಾಸರ ಭಜನೆಗಳು, ಜಯದೇವನ ಗೀತಗೋವಿಂದ, ಯೋಗವಾಶಿಷ್ಠ, ರಾಮಾಯಣ, ಭಗವದ್ಗೀತೆ, ಶ್ರೀ ಶಂಕರಾಚಾರ್ಯರ ಭಾಷ್ಯವೇ ಮೊದಲಾದ ತಮ್ಮ ಪ್ರೀತಿಯ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಅನಂತರ ಲಾಹೋರ್ ನಗರದಲ್ಲಿಯೂ ಕೂಡ ವ್ಯಾಖ್ಯಾನಕಾರರಾಗಿ ಅವರು ಪ್ರಸಿದ್ಧರಾದರು. ಅಲ್ಲಿಯೂ ವ್ಯಾಖ್ಯಾನ ಮಾಡಲು ಸಾಕಷ್ಟು ಆಮಂತ್ರಣಗಳು ಬರುತ್ತಿದ್ದವು. ಅಲ್ಲಿ ದೀನದಯಾಳ್ ಉಪಾಧ್ಯಾಯ, ಗೋವಿಂದ ರಾಮ ಶಾಸ್ತ್ರೀ, ಪಂಡಿತ ಜ್ವಾಲಾಪ್ರಸಾದ ಮೊದಲಾದ ಪ್ರಸಿದ್ಧ ಭಾಷಣಕಾರರ ಪರಿಚಯವಾಯಿತು. ಅವರಲ್ಲಿ ದೀನದಯಾಳರ ಶ್ರದ್ಧಾಭಕ್ತಿ ಮೊದಲಾದ ವಿಷಯಗಳ ಭಾಷಣಗಳು ತೀರ್ಥರಾಮರ ಮೇಲೆ ಹೆಚ್ಚು ಪ್ರಭಾವ ಬೀರಿದವು. ಹೀಗೆ ಧರ್ಮ, ಭಕ್ತಿ ಮೊದಲಾದ ಭಾವಗಳನ್ನು ಹೊಂದಿದ್ದ ತೀರ್ಥರಾಮರಿಗೆ ಉಪನಿಷತ್ತುಗಳ, ವೇದಾಂತಶಾಸ್ತ್ರದ ಅಧ್ಯಯನದಿಂದ ಈಶ್ವರಪ್ರಾಪ್ತಿಯನ್ನು ಪಡೆಯಲು ಇಚ್ಛೆ ಹೆಚ್ಚುತ್ತಿತ್ತು. ಆಗ ದ್ವಾರಕಾಪೀಠದ ಶಂಕರಾಚಾರ್ಯರಾದ ಶ್ರೀ ರಾಜರಾಜೇಶ್ವರರು ಕಾಶ್ಮೀರಕ್ಕೆ ಹೊರಟಿದ್ದರು. ಅವರು ಕೆಲವು ದಿನಗಳ ಕಾಲ ಲಾಹೋರ್ ನಗರದಲ್ಲಿ ಉಳಿದರು. ತೀರ್ಥರಾಮರು ಲಾಹೋರ್ ನಗರದ ಸನಾತನ ಧರ್ಮ ಸಭೆಯ ಕಾರ್ಯದರ್ಶಿಯಾಗಿದ್ದರು. ಆದ್ದರಿಂದ ಅವರಿಗೆ ಶಂಕರಾಚಾರ್ಯರ ಸೇವೆಯ ಅವಕಾಶ ದೊರೆಯಿತು.
ಒಮ್ಮೆ ಸ್ವಾಮೀ ವಿವೇಕಾನಂದರು ಲಾಹೋರ್ ನಗರಕ್ಕೆ ಬಂದಿದ್ದರು. ಆಗ ಸನಾತನಸಭೆಯ ವತಿಯಿಂದ ವಿವೇಕಾನಂದರ ಭಾಷಣದ ಎಲ್ಲ ವ್ಯವಸ್ಥೆಗಳನ್ನೂ ತೀರ್ಥರಾಮರು ಮಾಡಿದ್ದರು. ವಿವೇಕಾನಂದರು ಸುಶೀಲರೂ, ಧಾರ್ಮಿಕರೂ ಆಗಿದ್ದ ತೀರ್ಥರಾಮರನ್ನು ಕಂಡು ಸಂತಸಪಟ್ಟಿದ್ದರು. ಹೀಗೆ ಸಜ್ಜನರ ಸಹವಾಸದಿಂದ, ವೇದಾಂತದ ಅಭ್ಯಾಸದಿಂದ ಅವರ ತ್ಯಾಗಬುದ್ಧಿ ಬೆಳೆಯತೊಡಗಿತು.
ಸಂನ್ಯಾಸ
[ಬದಲಾಯಿಸಿ]೧೯೦೧ರಲ್ಲಿ ಪ್ರೊ.ತೀರ್ಥರಾಮರು ಲಾಹೋರ್ ನಗರದಿಂದ ಹಿಮಾಲಯಕ್ಕೆ ಹೋದರು. ಅವರು ಅಲಕನಂದಾ-ಭಾಗೀರಥೀ ನದಿಗಳ ಸಂಗಮಕ್ಕೆ ಹೋಗಿ ನಡೆದು ಹೋಗಲು ಸಾಧ್ಯವಾಗುವ ದಾರಿಯ ಮೂಲಕ ಗಂಗೋತ್ರಿಗೆ ಹೋಗಬೇಕೆಂದು ವಿಚಾರಮಾಡಿದರು. ಅದಕ್ಕಾಗಿ ಅವರು ಟಿಹರೀ ಸಮೀಪದ ಕೋಟಿ ಗ್ರಾಮದಲ್ಲಿ ಒಂದು ಶಾಲ್ಮಲೀ ವೃಕ್ಷದ ಅಡಿಯಲ್ಲಿ ನಿಂತಿದ್ದಾಗ ಬೇಸಿಗೆ ಕಾಲವಾಗಿತ್ತು. ಅಲ್ಲಿ ಬೇಸಿಗೆಯಲ್ಲಿಯೂ ಕೂಡ ಚಳಿಯಿರುತ್ತದೆ. ಆದ್ದರಿಂದ ಆ ಸ್ಥಳ ಅವರಿಗೆ ಇಷ್ಟವಾಯಿತು. ಅಲ್ಲಿ ಮಧ್ಯರಾತ್ರಿಯಲ್ಲಿ ಪ್ರೊ.ತೀರ್ಥರಾಮರಿಗೆ ಆತ್ಮಸಾಕ್ಷಾತ್ಕಾರವಾಯಿತು. ಆದ್ದರಿಂದ ಅವರ ಮನಸ್ಸಿನಲ್ಲಿದ್ದ ಸಂಶಯಗಳು ತೀರಿಹೋದವು. ಅನಂತರ ತನ್ನನ್ನು ಭಗವಂತನ ಕಾರ್ಯಗಳಲ್ಲಿ ಸಮರ್ಪಿಸಿಕೊಂಡು ಅವರು ಪ್ರೊ.ತೀರ್ಥರಾಮರಿಂದ ಸಂನ್ಯಾಸೀ ರಾಮತೀರ್ಥರಾದರು. ಶಂಕರಾಚಾರ್ಯರ ಮಾತಿನಂತೆ ಸಂನ್ಯಾಸಿಯಾಗಿ ಅವರು ಕೇಶತ್ಯಾಗ ಮಾಡಿದರು. ಅನಂತರ ತನ್ನ ಪತ್ನಿ ಮತ್ತು ಸ್ನೆಹಿತರಿಗೆ ಮನೆಗೆ ಹಿಂದಿರುಗಲು ಅಪ್ಪಣೆ ಮಾಡಿದರು. ಇವರ ಸಂನ್ಯಾಸದ ವಿಷಯವಾಗಿ ರಾಮಪ್ರಸಾದ ಬಿಸ್ಮಿಲ್ ಎನ್ನುವವರು "ಮನ್ ಕೀ ಲಹರ್" ಎಂಬ ಪುಸ್ತಕದಲ್ಲಿ 'ಯುವಾ ಸಂನ್ಯಾಸೀ' ಎಂಬ ಶೀರ್ಷಿಕೆಯಲ್ಲಿ ಒಂದು ಕಾವ್ಯವನ್ನು ರಚಿಸಿದ್ದಾರೆ. ಅದರ ಕೆಲವು ಅಂಶಗಳನ್ನು ಇಲ್ಲಿ
वृद्धपिता माता की ममता, बनब्याही कन्या का भार । शिक्षाहीन सुतोकी ममता, पतिव्रता पत्नी का प्यार ।।
सन्मित्रो की प्रीती और, कॉलेजवालो का निर्मल प्रेम । त्याग सभी अनुराग कीया, उसने विराग मे योगक्षेम ।।
प्राणनाथ बालक सुत दुहिता, यूँ कहती प्यारी छोड़ी; । हाय! वत्स वृद्धा के धन, यूँ रोती महतारी छोडी ।।
चिर सहचरी रियाजी छोडी ,रम्यतटी रावी छोडी । शिखा-सूत्र के साथ हाय! उन बोली पञ्जाबी छोडी ।।
ವಿದೇಶಪ್ರಯಾಣ
[ಬದಲಾಯಿಸಿ]ಸ್ವಾಮೀ ರಾಮತೀರ್ಥರು ಎಲ್ಲ ಬಂಧನಗಳಿಂದ ಮುಕ್ತರಾದರು. ಆದ್ದರಿಂದ ಸಂನ್ಯಾಸಿಯಾಗಿ ಕಠೋರವಾದ ತಪಸ್ಸನ್ನು ಆಚರಿಸಿದರು. ಒಮ್ಮೆ ಅವರು ಪ್ರವಾಸ ಮಾಡುತ್ತಿರುವಾಗ ಟಿಹರೀ ಜಿಲ್ಲೆಯ ಕೀರ್ತಿಶಾಹ ಎಂಬ ಹೆಸರಿನ ರಾಜನ ಪರಿಚಯವಾಯಿತು. ಅವನು ಮೊದಲು ನಾಸ್ತಿಕನಾಗಿದ್ದನು. ಆದರೆ ಸ್ವಾಮೀ ರಾಮತೀರ್ಥರ ಸಂಪರ್ಕದಿಂದಾಗಿ ಅವನು ಆಸ್ತಿಕನಾದನು. ಆ ಕೀರ್ತಿಶಾಹ ಎಂಬ ರಾಜನು ಜಪಾನ ದೇಶದಲ್ಲಿ ನಡೆಯುವ ವಿಶ್ವಧರ್ಮ ಸಮ್ಮೇಳನಕ್ಕೆ ಸ್ವಾಮೀ ರಾಮತೀರ್ಥರು ಹೋಗಲು ಎಲ್ಲ ವ್ಯವಸ್ಥೆಗಳನ್ನು ಮಾಡಿದನು. ರಾಮತೀರ್ಥರು ಜಪಾನ್ ದೇಶದಿಂದ ಅಮೇರಿಕ, ಮಿಸ್ರ ದೇಶಗಳಿಗೂ ಹೋದರು. ಈ ವಿದೇಶ ಯಾತ್ರೆಯಲ್ಲಿ ಅವರು ಭಾರತೀಯ ಸಂಸ್ಕೃತಿಯ ಪ್ರಚಾರವನ್ನು ಮಾಡಿದರು. ಅವರು ಮಾಡಿದ ಪ್ರವಚನಗಳಲ್ಲಿ 'ವ್ಯಾವಹಾರಿಕ ವೇದಾಂತ' ಎಂಬ ವಿಷಯದ ಮೇಲೆ ಎಲ್ಲ ಕಡೆಯೂ ಚರ್ಚೆ ನಡೆಯುತ್ತಿತ್ತು. ಸ್ವಾಮೀ ರಾಮತೀರ್ಥರು ವಿದೇಶದಲ್ಲಿ ಎಲ್ಲಿಯೇ ಇದ್ದರೂ ಜನರು ಅವರನ್ನು ಯತಿಗಳಿಗೆ ಯೋಗ್ಯವಾದ ರೀತಿಯಿಂದಲೇ ಸ್ವಾಗತಿಸುತ್ತಿದ್ದರು. ಅವರ ಆಕರ್ಷಕವಾದ ವ್ಯಕ್ತಿತ್ವದಿಂದಾಗಿ ಜನರು ಅವರನ್ನು ಭೇಟಿಯಾಗಿ ಆತ್ಮಚೈತನ್ಯದ ಹಾಗೂ ಶಾಂತಿಯ ಅನುಭವವನ್ನು ಪಡೆಯುತ್ತಿದ್ದರು. ಎರಡೂ ದೇಶಗಳಲ್ಲಿಯೂ "ನೀವೆಲ್ಲರೂ ಸ್ವದೇಶಕ್ಕಾಗಿಯೂ, ಜ್ಞಾನಕ್ಕಾಗಿಯೂ ಪ್ರಾಣಗಳನ್ನೂ ತ್ಯಾಗ ಮಾಡಲು ಸಮರ್ಥರಾಗಿದ್ದೀರಿ. ಆದರೆ ನೀವು ಯಾವೆಲ್ಲ ಸಾಧನೋಪಕರಣಗಳಲ್ಲಿ ವಿಶ್ವಾಸವಿಟ್ಟಿದ್ದೀರೋ ಅವುಗಳಿಂದ ಆಸೆಗಳು ಹೆಚ್ಚುತ್ತವೆಯೇ ಹೊರತು ಆಸೆಗಳು ತೀರುವುದಿಲ್ಲ. ಒಂದು ವೇಳೆ ನೀವು ಶಾಶ್ವತವಾದ ಶಾಂತಿಯನ್ನು ಬಯಸಿದರೆ ಆತ್ಮಜ್ಞಾನವು ಅವಶ್ಯವಾಗಿದೆ" ಎಂದು ತೀರ್ಥರಾಮರು ಹೇಳುತ್ತಿದ್ದರು. ಹಾಗೆಯೇ ಅವರು "ನೀವು ಆತ್ಮವನ್ನು ತಿಳಿದುಕೊಳ್ಳಿರಿ, ನೀವೇ ಸ್ವತಃ ಪರಮಾತ್ಮರಾಗಿದ್ದೀರಿ" ಎಂಬ ಸಂದೇಶವನ್ನೂ ಕೂಡ ನೀಡಿದರು.
ಭಾರತದಲ್ಲಿ ಸಂದೇಶ
[ಬದಲಾಯಿಸಿ]೧೯೦೪ರಲ್ಲಿ ಭಾರತಕ್ಕೆ ಹಿಂದಿರುಗಿದ ರಾಮತೀರ್ಥರು ಬೇರೆಯದೇ ಆದ ಸಮಾಜವನ್ನು ಸ್ಥಾಪಿಸಲು ವಿಚಾರಮಾಡಿದರು. ಮುಂಬಯೀ ನಗರದ ಒಂದು ಸಭೆಯಲ್ಲಿ ಅವರು "ಭಾರತದಲ್ಲಿರುವ ಎಲ್ಲ ಸಮಾಜಗಳೂ ನನ್ನದೇ ಆಗಿವೆ" ಎಂದು ಹೇಳಿದರು. "ನಾನು ಮತಗಳಲ್ಲಿ ಏಕತೆಯನ್ನು ತರಲೋಸುಗವೇ ಹೊರತು ಮತಗಳಲ್ಲಿ ಬೇದವನ್ನು ಸೃಷ್ಟಿಸುವವನಲ್ಲ" ಎಂದು ಹೇಳಿದರು. ಅವರು "ಈಗ ದೇಶಕ್ಕೆ ಏಕತೆಯ, ಸಂಘಟನೆಯ, ರಾಷ್ಟ್ರಧರ್ಮದ, ವಿಜ್ಞಾನದ ಸಾಧನೆಗಳ, ಸಂಯಮದ, ಬ್ರಹ್ಮಚರ್ಯದ ಅವಶ್ಯಕತೆಯಿದೆ" ಎಂದು ಹೇಳುತ್ತಿದ್ದರು. ಅನಂತರ ಅವರು ಮುಂಬಯೀ ನಗರದಿಂದ ಮಥುರಾ ನಗರಕ್ಕೆ ಹೋದರು.
ಕ್ರೈಸ್ತರಿಗೆ ಉಪದೇಶ
[ಬದಲಾಯಿಸಿ]ಒಮ್ಮೆ ರಾಮತೀರ್ಥರು ಮಥುರಾ ನಗರದಲ್ಲಿ ತಮ್ಮ ಅನುಯಾಯಿಗಳಿಗೆ ವ್ಯಾಯಾಮವನ್ನು ಮಾಡಿಸುತ್ತಿದ್ದರು. ಆಗ ಕೆಲವರು ಹಿಂದೂ ಧರ್ಮವನ್ನು ಬಿಟ್ಟು ಕ್ರೈಸ್ತಮತವನ್ನು ಸೇರಿದ ಜನರು ಅಲ್ಲಿಂದ ಹೊರಟುಹೋದರು. ರಾಮತೀರ್ಥರು ಅವರನ್ನು ಕರೆದು "ಹಿಂದುಗಳು ಮಾಡದಿರುವುದನ್ನು ಕ್ರೈಸ್ತರು ನಿಮಗಾಗಿ ಮಾಡಿದ್ದಾರೆ. ಅದರಂದಾಗಿ ನಾನು ಸಂತುಷ್ಟನಾಗಿದ್ದೇನೆ. ಆದರೆ ಈ ಭಾರತ ದೇಶ ನಿಮ್ಮ ಮಾತೃಭೂಮಿಯಾಗಿದೆ. ಅದಕ್ಕೆ ಗೌರವವನ್ನು ನೀಡಬೇಕು" ಎಂದು ಹೇಳಿದರು.
ರಾಮತೀರ್ಥರ ಭಾಷಣ
[ಬದಲಾಯಿಸಿ]ರಾಮತೀರ್ಥರು ಏಕಾಂತಪ್ರಿಯರು. ಆದ್ದರಿಮದ ಅವರು ಅಜಮೇರ್-ಮಥುರಾ ನಗರಗಳ ಸಮೀಪದಲ್ಲಿರುವ ಪುಷ್ಕರಕ್ಷೇತ್ರವೆಂಬ ಸ್ಥಳದಲ್ಲಿ ಎರಡು ತಿಂಗಳ ಕಾಲ ಇದ್ದರು. ಬೇಸಿಗೆ ಆರಂಭವಾಯಿತು. ಆದ್ದರಿಂದ ರಾಮತೀರ್ಥರು ಪುಷ್ಕರಕ್ಷೇತ್ರದಿಂದ ಹೊರಡುತ್ತಾ ಅಲ್ವರ್, ಜಯಪುರ ಮೊದಲಾದ ನಗರಗಳಲ್ಲಿ ವ್ಯಾಖ್ಯಾನಗಳನ್ನು ಕೊಡುತ್ತಾ ದಾರ್ಜಿಲಿಂಗ್ ಗೆ ಹೋದರು. ಅಲ್ಲಿ ಬೇಸಿಗೆ ಕಳೆಯುವವರೆಗೂ ಉಳಿದರು. ಬೇಸಿಗೆ ಕಳೆದ ನಂತರ ಅವರು ಮತ್ತೆ ಸಂಚಾರಕ್ಕೆ ತೊಡಗಿದರು. ಸಂಚಾರದಲ್ಲಿ ಅವರು ಗಾಜೀಪುರ, ಫೈಜಾಬಾದ್, ಪ್ರಯಾಗ, ಮುರಾದಾಬಾದ್ ಮೊದಲಾದ ನಗರಗಳಲ್ಲಿ ಪ್ರವಚನಗಳನ್ನು ನೀಡಿ ೧೯೦೫ನೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹರಿದ್ವಾರಕ್ಕೆ ಹೋದರು.
ಉಳಿದ ಜೀವನ
[ಬದಲಾಯಿಸಿ]ಹರಿದ್ವಾರಕ್ಕೆ ಹೋದ ರಾಮತೀರ್ಥರು ಅನಾರೋಗ್ಯಕ್ಕೆ ತುತ್ತಾದರು. ಅಲ್ಲಿ ಅವರ ಸೇವೆಯಲ್ಲಿ ನಾರಾಯಣ, ಯೋಗಾನಂದ, ಪೂರಣಸಿಂಹ ಮೊದಲಾದ ಭಕ್ತರು ಇದ್ದರು. ರಾಮತೀರ್ಥರು ತಿಂಗಳು ಕಳೆಯುವಷ್ಟರಲ್ಲಿ ಆರೋಗ್ಯವಂತರಾದರು. ಆದರೆ ನಿಶ್ಶಕ್ತಿಯಿತ್ತು. ಒಮ್ಮೆ ಅವರ ಪೂರ್ವಾಶ್ರಮದ ಹೆಂಡತಿ, ತಾಯಿ ಮತ್ತು ಮಗ ಅವರನ್ನು ಭೇಟಿಯಾಗಲು ಬಂದರು. ಪೂರಣಸಿಂಹ ಎಂಬ ಭಕ್ತ ಈ ವಿಷಯವನ್ನು ತಿಳಿಸಿದರು. ರಾಮತೀರ್ಥರು ಶಾಂತರಾಗಿ ವಿಚಾರಮಾಡಿ "ಒಂದು ವೇಳೆ ನಿನ್ನ ಬಳಿ ಹಣವಿದ್ದರೆ ಅವರನ್ನು ಪಂಜಾಬಿಗೆ ಹೋಗುವ ರೈಲಿನಲ್ಲಿ ಕುಳ್ಳಿರಿಸಿ ಬಾ" ಎಂದು ಹೇಳಿದರು. ಆದರೆ ಪೂರಣಸಿಂಹರು "ಅವರು ಹಣವಿಲ್ಲದ ಪರಿಸ್ಥಿತಿಯಲ್ಲಿಯೂ ಕೂಡ ನಿಮ್ಮನ್ನು ಭೇಟಿಯಾಗಲು ಬಂದಿದ್ದಾರೆ. ಅವರಿಗೆ ದರ್ಶನ ನೀಡಿ" ಎಂದು ಪ್ರಾರ್ಥಿಸಿದರು. ಆದ್ದರಿಂದ ರಾಮತೀರ್ಥರು ಅವರನ್ನು ಭೇಟಿಯಾದರು. ಅದು ಅವರ ಕುಟುಂಬದ ಜನರೊಂದಿಗೆ ಕೊನೆಯ ಭೇಟಿಯಾಗಿತ್ತು.
ರಾಮತೀರ್ಥರು ಆರೋಗ್ಯಪೂರ್ಣರಾದರು. ಆದ್ದರಿಂದ ಅವರು ಗಾಜೀಪುರ, ಮುಜಫ್ಫರ್ ನಗರಗಳಿಗೆ ಹೋದರು. ಕೊನೆಯಲ್ಲಿ ನವೆಂಬರ್ ತಿಂಗಳಿನಲ್ಲಿ ಹರಿದ್ವಾರಕ್ಕೆ ಹೋಗಿ ಅಲ್ಲಿಂದ ಅವರು ಋಷಿಕೇಶದ ದಾರಿಯಾಗಿ ಹಿಮಾಲಯಕ್ಕೆ ಹೋದರು. ಅಲ್ಲಿ ಅವರು ವೇದಗಳ, ಉಪನಿಷತ್ತುಗಳ, ವೇದಾಂಗಗಳ ಅಂದರೆ ನಿರುಕ್ತ, ಪಾಣಿನೀಯ ವ್ಯಾಕರಣ, ಪಾತಂಜಲ ಮಹಾಭಾಷ್ಯ ಇವುಗಳ ಅಧ್ಯಯನ ಮಾಡಲು ವಿಚಾರಮಾಡಿ ಲಾಲಾ ಬೈಜನಾಥ ಎಂಬ ಭಕ್ತನಿಗೆ ಪುಸ್ತಕಗಳನ್ನು ಕಳುಹಿಸಲು ಸೂಚಿಸಿದ್ದರು. ಅನಂತರ ರಾಮತೀರ್ಥರು ಹಿಮಾಲಯದ ಪೂರ್ವಭಾಗದ ಅರಣ್ಯದಲ್ಲಿ ತಪಸ್ಸನ್ನು ಮಾಡಲು ಬಯಸಿದರು. ತಪಸ್ಸನ್ನು ಮಾಡಲು ಋಷಿಕೇಶದಿಂದ ೩೦ಕಿ.ಮೀ. ದೂರದಲ್ಲಿರುವ ವ್ಯಾಸಚಟ್ಟೀ ಎಂಬ ಸ್ಥಳ, ಅಲ್ಲಿಂದ ೭ ಕಿ.ಮೀ. ದೂರದಲ್ಲಿರುವ ವ್ಯಾಸಾಶ್ರಮವೆಂಬ ಸಥಳವನ್ನು ಆರಿಸಿಕೊಂಡರು. ಅಲ್ಲಿ ರಾಮತೀರ್ಥರು ಲಾಲಾ ಬೈಜನಾಥರು ಕಳುಹಿಸಿದ ಪುಸ್ತಕಗಳನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಅಲ್ಲಿ ಅವರು ಒಂದು ವರ್ಷ ಅಧ್ಯಯನದಲ್ಲಿ ನಿರತರಾದರು. ೧೯೦೬ನೇ ವರ್ಷದ ಬೇಸಿಗೆಯ ಹೊತ್ತಿಗೆ ಟಿಹರೀ ಜಿಲ್ಲೆಗೆ ಹೋದರು. ಅಲ್ಲಿಂದ ೪೦ ಕಿ.ಮೀ. ದೂರದ ಕಾಡಿನಲ್ಲಿ ವಶಿಷ್ಠಾಶ್ರಮದಲ್ಲಿ ಅವರು ಬೇಸಿಗೆಯನ್ನು ಕಳೆಯಲು ಆಲೋಚಿಸಿದ್ದರು. ಅಲ್ಲಿ ಟಿಹರೀ ಪ್ರಾಂತದ ರಾಜ ಅವರಿಗೆ ಸಹಾಯ ಮಾಡಿದನು. ಅಲ್ಲಿ ಅವರು ಮತ್ತೆ ವೇದಾಭ್ಯಾಸವನ್ನು ಪ್ರಾರಂಭಿಸಿದರು. ವಸಿಷ್ಠಾಶ್ರಮದ ವಾತಾವರಣ ಅವರಿಗೆ ಅನುಕೂಲವಾಗಿರಲಿಲ್ಲ. ಅವರ ಶರೀರ ದುರ್ಬಲವಾಯಿತು. ಅವರು ಮತ್ತೆ ಅನಾರೋಗ್ಯಕ್ಕೆ ಒಳಗಾದರು. ರೋಗದಿಂದ ಬಳಲುತ್ತಿರುವಾಗ ಅವರು ಅಹಾರವನ್ನು ಸ್ವೀಕರಿಸದೇ ಕೇವಲ ಹಾಲನ್ನು ಮಾತ್ರ ಕುಡಿಯುತ್ತಿದ್ದರು. ಹೀಗೆ ಅವರ ಅನಾರೋಗ್ಯ ದೂರವಾದರೂ ಅಶಕ್ತತೆ ಹಾಗೇ ಇತ್ತು. ವಸಿಷ್ಠಾಶ್ರಮದಲ್ಲಿ ನಾರಾಯಣ ಎಂಬ ಭಕ್ತನು ರಾಮತೀರ್ಥರ ಸೇವೆಯನ್ನು ಮಾಡುತ್ತಿದ್ದನು. ಕೆಲವು ಸಮಯದ ನಂತರ ಪೂರಣಸಿಂಹನೇ ಮೊದಲಾದ ಭಕ್ತರು ಅವರ ದರ್ಶನಕ್ಕೆ ವಸಿಷ್ಠಾಶ್ರಮಕ್ಕೆ ಬಂದರು. ಅಲ್ಲಿನ ವಾತಾವರಣ ಅವರಿಗೂ ಕೂಡ ಅನುಕೂಲಕರವಾಗಿರಲಿಲ್ಲ. ಆದ್ದರಿಂದ ಅವರು ರಾಮತೀರ್ಥರನ್ನು ಬೇರೆಡೆಗೆ ಹೋಗಲು ಪ್ರಾರ್ಥಿಸಿದರು. ರಾಮತೀರ್ಥರು ಟಿಹರೀ ಜಿಲ್ಲೆಯ ಸಮೀಪದ ಸ್ಥಳಕ್ಕೆ ಹೋಗಲು ಹೇಳಿದರು.
ಜಲಸಮಾಧಿ
[ಬದಲಾಯಿಸಿ]ಟಿಹರೀ ಪ್ರಾಂತದ ಸಮೀಪದ ಸ್ಥಳದಲ್ಲಿ ಉಳಿಯುವ ಅಪೇಕ್ಷೆಯಿತ್ತು. ಆದ್ದರಿಂದ ರಾಮತೀರ್ಥರು ನಾರಾಯಣನೆಂಬ ಭಕ್ತನೊಂದಿಗೆ ಟಿಹರೀ ಪ್ರಾಂತಕ್ಕೆ ಬಂದರು. ಅಲ್ಲಿಂದ ಗಂಗೋತ್ರಿಗೆ ಕಿ.ಮೀ. ದೂರದಲ್ಲಿ ಮಾಲಿದೇವಲ ಎಂಬ ಹಳ್ಳಿ ಇದೆ. ರಾಮತೀರ್ಥರು ಅಲ್ಲಿ ವಾಸಿಸಲು ನಿಶ್ಚಯಿಸಿದರು. ಅಲ್ಲಿ ಕುಟೀರವನ್ನು ಕೂಡ ನಿರ್ಮಿಸಿದರು. ಕೆಲವು ದಿನ ಅಲ್ಲಿ ಕಳೆದು ರಾಮತೀರ್ಥರು ನಾರಾಯಣನಿಗೆ ಇನ್ನು ಮುಂದೆ ನಾವು ದೂರದೂರ ವಾಸಿಸಿದರೆ ಉತ್ತಮ ಎಂದು ಹೇಳಿದರು. ಅನಂತರ ನಾರಾಯಣನಿಗೆ ಗಂಗಾ ನದಿಯ ದಡದಲ್ಲಿದ್ದ ಬಮರೋಗೀ ಎಂಬ ಗುಹೆಯಲ್ಲಿ ವಾಸಿಸಲು ಸೂಚಿಸಿದರು. ನಾರಾಯಣ ಬಮರೋಗೀ ಗುಹೆಯಲ್ಲಿ ವಾಸಿಸಲು ಹೋದ ಐದೇ ದಿನಗಳಲ್ಲಿ ರಾಮತೀರ್ಥರು 'ಭಾನುವಾರ ಅವರನ್ನು ಭೇಟಿಯಾಗಲು ಬಯಸಿದ್ದಾರೆಂ'ದು ಪತ್ರವನ್ನು ಬರೆದು ಕಳುಹಿಸಿದರು. ಆದರೆ ಅದಕ್ಕೂ ಮೊದಲೇ ಶನಿವಾರವೇ ರಾಮತೀರ್ಥರು ಗಂಗೆಯಲ್ಲಿ ಸ್ನಾನಕ್ಕೆ ಹೋದರು. ಅಲ್ಲಿ ಅವರಿಗೆ ಕಾಲು ಜಾರಿತು. ಶರೀರದ ದುರ್ಬಲತೆಯಿಂದಾಗಿ ಅವರಿಗೆ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಯಲ್ಲಿ ಓಂ, ಓಂ, ಓಂ, ಎಂದು ಹೇಳಿದರು. ಕೆಲವೇ ಸಮಯದಲ್ಲಿ ಅವರ ಶರೀರ ಗಂಗೆಯಲ್ಲಿ ಮುಳುಗಿಹೋಯಿತು. ನಾರಾಯಣನು ಇನ್ನುಳಿದ ಜನರೊಂದಿಗೆ ಸೇರಿ ಏಳು ದಿನಗಳ ಕಠಿಣ ಪರಿಶ್ರಮ ಹಾಕಿ ಹುಡುಕಿದ ಬಳಿಕರಾಮತೀರ್ಥರ ಶರೀರ ಪದ್ಮಾಸನದಲ್ಲಿ ಸಮಾಧಿ ಅವಸ್ಥೆಯಲ್ಲಿ ದೊರಕಿತು. ಅದನ್ನು ಹೊರಕ್ಕೆ ತೆಗೆದು ಒಂದು ಪೆಟ್ಟಿಗೆಯಲ್ಲಿ ಇಟ್ಟು ಗಂಗೆಗೆ ಅರ್ಪಿಸಿದರು. ಹೀಗೆ ೧೯೦೬ನೇ ವರ್ಷದ ಅಕ್ಟೋಬರ್ ತಿಂಗಳ ೧೭ನೇ ದಿನಾಂಕದಂದು ರಾಮತೀರ್ಥರು ಜಲಸಮಾಧಿಯನ್ನು ಸೇರಿದರು.
ಆಧಾರಗಳು
[ಬದಲಾಯಿಸಿ]- Bromley, David G (1989). Krishna Consciousness in the West. Bucknell University Press. ISBN 083875144X.
{{cite book}}
: Unknown parameter|coauthors=
ignored (|author=
suggested) (help) - Brooks, Douglas Renfrew (2000). Meditation Revolution: A History and Theology of the Siddha Yoga Lineage. India: Motilal Banarsidass Publishing. ISBN 812081648X.
- Frawley, David (2000). Vedantic Meditation: Lighting the Flame of Awareness. North Atlantic Books. ISBN 1556433344.
- Khular, K. K. (1999). "Swami Ram Tirath:The Unfettered Thinker". India Government Ministry of External Affairs. Archived from the original on 2008-03-13. Retrieved 2008-03-05.
- Rinehart, Robin (1999). One Lifetime, Many Lives: The Experience of Modern Hindu Hagiography. United States: Oxford University Press. ISBN 0788505556.
- Satyananda, Swami (2006). "Yogananda Sanga", from A Collection of Biographies of 4 Kriya Yoga Gurus. iUniverse, Inc. ISBN 978-0595386758.
- Singh, Puran (1924). The Story of Swami Rama: The Poet Monk of the Punjab. Madras: Ganesh & Co.
- Sivananda, Swami (2005). "Swami Rama Tirtha (1873-1906)". Life of Saints. Divine Life Society. Retrieved 2008-07-29.
- Yogananda, Paramahansa (1974). Cosmic Chants. Self-Realization Fellowship Publishers. ISBN 978-0876121313.