ವಿಷಯಕ್ಕೆ ಹೋಗು

ಸ್ವತಂತ್ರ ತಂತ್ರಾಂಶ ಚಳುವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾವಿಂದು ಕಂಪ್ಯೂಟರ್ ಯುಗದಲ್ಲಿ ದಾಪುಗಾಲು ಹಾಕುತ್ತಿದ್ದೇವೆ. ಸಾಮಾನ್ಯ ಬದುಕಿನ ಎಲ್ಲ ವಲಯವನ್ನೂ ಕಂಪ್ಯೂಟರ್ ಬಳಕೆ ವ್ಯಾಪಕವಾಗಿ ಆವರಿಸುತ್ತಿದೆ. ಸಹಜವಾಗಿ ಕಂಪ್ಯೂಟರ್ ನ್ನು ನಡೆಸುವ ಕಾರ್ಯವನ್ನು ಅದರಲ್ಲಿರುವ ಸಾಫ್ಟ್ ವೇರ್ ಅಥವಾ ಪ್ರೋಗ್ರಾಮುಗಳು ಮಾಡುತ್ತವೆ. ಒಂದು ಕಂಪ್ಯೂಟರ್ ಉಪಕರಣ ಹೇಗೆ ಕಾರ್ಯ ನಿರ್ವಹಿಸಬೇಕೆಂದು, ತಂತ್ರಜ್ಞರು ಬರೆಯುವ ಕೆಲವು ನಿರ್ದಿಷ್ಟ ಸೂಚನೆಗಳೇ ಸಾಫ್ಟ್ ವೇರ್ ಅಥವಾ ಪ್ರೋಗ್ರಾಮುಗಳು. ಇವು ಎತ್ತಿನ ಗಾಡಿ ಚಲಾಯಿಸುವ ಸವಾರ ತನ್ನ ಭಾಷೆ ಮತ್ತು ಧ್ವನಿಯಿಂದ ಅದ್ಹೇಗೆ ಎತ್ತುಗಳನ್ನು ಒಂದು ನಿರ್ದಿಷ್ಟ ಕೆಲಸ ಮಾಡುವಂತೆ ಉಪಯೋಗಿಸುತ್ತಾನೋ ಹಾಗೆ ತಂತ್ರಜ್ಞರು ಈ ಸಾಫ್ಟ್ ವೇರುಗಳ ಸೂಚನೆಗಳ ಮೂಲಕ ಕಂಪ್ಯೂಟರ್ ನಿಂದ ಕೆಲಸ ಮಾಡಿಸಿಕೊಳ್ಳುತ್ತಾರೆ. ಇವುಗಳ ಬಳಕೆ ಅಂಗೈಯಲ್ಲಿರುವ ಮೊಬೈಲ್ ಫೋನ್ ನಿಂದ ಆರಂಭಿಸಿ ಟಿ.ವಿ ಮತ್ತು ಅದರ ರಿಮೋಟ್ ಕಂಟ್ರೋಲ್, ವಾಶಿಂಗ್ ಮೆಷಿನ್, ಕ್ಯಾಲ್ ಕ್ಯುಲೇಟರ್, ಮನೆಯಲ್ಲಿ ಬಳಸುವ ಕಂಪ್ಯೂಟರ್, ಪರಮಾಣು ಶಕ್ತಿಯಿಂದ ವಿದ್ಯುತ್ ತಯಾರಿಕೆ, ಮಿಲಿಟರಿ ಕ್ಷಿಪಣಿ ಪರೀಕ್ಷೆ, ಅಂತರಿಕ್ಷಕ್ಕೆ ಉಪಗ್ರಹ ಉಡಾವಣೆವರೆಗೆ ವಿಸ್ತರಿಸಿದೆ. ಕಂಪ್ಯೂಟರ್ ಬಳಕೆ ವ್ಯಾಪಕಗೊಳ್ಳುತ್ತಿರುವಂತೆಯೇ ಅದು ಹಲವು ಜ್ವಲಂತ ಪ್ರಶ್ನೆಗಳನ್ನು ನಮ್ಮ ಮುಂದೆ ಎತ್ತಿದೆ.

ಒಂದೆಡೆ, ಇತ್ತೀಚಿನ ವರ್ಷಗಳಲ್ಲಿ ಸಾಫ್ಟ್ ವೇರ್ ಉತ್ಪಾದಿಸುವ ಕೆಲವೇ ಬಹು ರಾಷ್ಟ್ರೀಯ ಕಂಪನಿಗಳು ಕಂಪ್ಯೂಟರ್ ಬಳಕೆದಾರರನ್ನು ಮತ್ತು ತಂತ್ರಜ್ಞರನ್ನು ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟುಕೊಂಡು ಗುಲಾಮರನ್ನಾಗಿಸಲು ಹವಣಿಸುತ್ತಿವೆ. ತಾವು ತಯಾರಿಸಿ ಮಾರಾಟ ಮಾಡುವ ಸಾಫ್ಟ್ ವೇರ್ ತಂತ್ರಜ್ಞಾನಕ್ಕೆ ಅಗಾಧ ಪ್ರಮಾಣದ ಲೈಸೆನ್ಸ್ ಶುಲ್ಕ ಸುಲಿಗೆ ಮಾಡುವುದು. ಕಾಲ ಕಾಲಕ್ಕೆ ಹೊಸ ಸಾಫ್ಟ್ ವೇರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾ ತಮ್ಮವೇ ಹಿಂದಿನ ಸಾಫ್ಟ್ ವೇರ್ ಉತ್ಪನ್ನಕ್ಕೆ ಸೇವಾ ಸೌಲಭ್ಯವನ್ನು ಹಿಂಪಡೆಯುವ ಮೂಲಕ ಬಳಕೆದಾರರು ಅನಿವಾರ್ಯವಾಗಿ ಹೊಸ ಸಾಫ್ಟ್ ವೇರ್ ಗಳನ್ನು ಕೊಂಡುಕೊಳ್ಳಲೇ ಬೇಕಾದ ಪರಿಸ್ಥಿತಿ ಸೃಷ್ಟಿಸುವುದು. ಸಮುದಾಯ ಸೃಷ್ಟಿಸುವ ಹೊಸ ಆವಿಷ್ಕಾರಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವುದು ಈ ಕಂಪನಿಗಳ ತಂತ್ರಗಾರಿಕೆಯಾದರೆ, ಪೇಟೆಂಟ್, ಟ್ರೇಡ್ ಮಾರ್ಕ್ ಇತ್ಯಾದಿಯಂಥಹ ಹೊಸ ಪರಿಭಾಷೆಗಳ ಕಾನೂನು ಕಟ್ಟುಪಾಡುಗಳಿಂದ ಸಮಾಜವೊಂದರಲ್ಲಿ ಜ್ಞಾನ ಹರಡದಂತೆ, ಹೊಸ ತಂತ್ರಜ್ಞಾನ ಪಸರಿಸದಂತೆ ತಡೆಗಟ್ಟಲಾಗುತ್ತದೆ.

ಈ ಕಂಪನಿಗಳ ಬಹು ಮುಖ್ಯವಾದ ನಿಯಂತ್ರಣದ ಮೂಲವೆಂದರೆ, ತಾವು ಮಾರಾಟ ಮಾಡುವ ಸಾಫ್ಟ್ ವೇರ್ ಜೊತೆ ಅವುಗಳ ಮೂಲ ಸಂಕೇತಗಳನ್ನು ನೀಡುವುದಿಲ್ಲ. ಇದರಿಂದಾಗಿ ಸಾಫ್ಟ್ ವೇರ್ ಕೊಂಡವನು ತಾನು ಖರೀದಿಸಿದ ಸಾಫ್ಟ್ ವೇರ್ ನ್ನು ಮಾರ್ಪಡಿಸಲು ಅಥವಾ ಕೆಟ್ಟು ಹೋದಲ್ಲಿ ರಿಪೇರಿ ಮಾಡಿಸಲು ಸಾಧ್ಯವೇ ಇಲ್ಲ. ಇದಕ್ಕಾಗಿ ಮತ್ತೆ ಕಂಪನಿ ಬಳಿಯೇ ಹೋಗಿ ದುಬಾರಿ ಹಣ ತೆತ್ತು ಅಂಥಹ ಮಾರ್ಪಾಟು ಅಥವಾ ರಿಪೇರಿ ಮಾಡಿಸಿಕೊಳ್ಳಬೇಕು. ಇದನ್ನು ಸರಳವಾಗಿ ಹೇಳಬೇಕೆಂದರೆ, ಮೋಟಾರ್ ಬೈಕು ಖರೀದಿಸಿದವನಿಗೆ ಅದನ್ನು ಬೇರೆ ಯಾರಿಗೂ ಓಡಿಸಲು ಕೊಡಲು ಸ್ವಾತಂತ್ರ್ಯವಿಲ್ಲ, ಅದನ್ನು ಮಾರ್ಪಡಿಸಲು ಅಥವಾ ರಿಪೇರಿ ಮಾಡಿಕೊಳ್ಳಲು ಯಾವುದೇ ಸ್ವಾತಂತ್ರ್ಯವಿಲ್ಲ. ಹೀಗೆ ಬಹು ರಾಷ್ಟ್ರೀಯ ಕಂಪನಿಗಳು ಹರಡುತ್ತಿರುವ ಬಂಧನದ ಸರಪಳಿ ಮತ್ತು ಕಬಂಧಬಾಹು ವ್ಯಾಪಕವಾಗಿ ಚಾಚಿವೆ.

ಬೇರೆ ಸರಕುಗಳಿಗೆ ಹೋಲಿಸಿದಲ್ಲಿ, ಸಾಫ್ಟ್ ವೇರ್ ಎಂಬುದು ಬೆಲೆಯಲ್ಲಿ ಬೇರೆಯೇ ಮೌಲ್ಯ ಹೊಂದಿದೆ ಎಂದೇ ಹೇಳಬಹುದು. ಏಕೆಂದರೆ, ಸಾಫ್ಟ್ ವೇರ್ ನ್ನು ತಯಾರಿಸಲು ಮೊದಲ ಪ್ರಥಮ ಉತ್ಪನ್ನವನ್ನು ತಯಾರಿಸಲು ಮಾತ್ರವೇ ಶ್ರಮ, ಸಂಪನ್ಮೂಲ ಮತ್ತು ವೆಚ್ಚ ತಗಲುತ್ತದೆ. ಆದರೆ, ತದನಂತರ ಅವುಗಳನ್ನು ನಕಲು ಮಾಡಿ ಹೆಚ್ಚಿನ ಪ್ರತಿಗಳನ್ನು ತಯಾರಿಸಲು ಅತಿ ಕಡಿಮೆ ವೆಚ್ಚ ತಗಲುತ್ತದೆ, ಅಂದರೆ ಬಹುತೇಕ ಶೂನ್ಯ ವೆಚ್ಚದಲ್ಲಿ ಅಪರಿಮಿತ ಪ್ರಮಾಣದ ಪ್ರತಿಗಳನ್ನು ನಕಲು ಮಾಡಬಹುದು. ಉದಾಹರಣೆಗೆ, ಮೈಕ್ರೋ ಸಾಫ್ಟ್ ನಂಥಹ ಕಂಪನಿಗಳು ಮಾರಾಟ ಮಾಡುವ ವಿಂಡೋಸ್ ಎಂಬ ಒಂದು ಸಾಫ್ಟ್ ವೇರ್ ಪ್ರತಿಯ ಅಧಿಕೃತ ಬೆಲೆ ರೂ. 5000/-. ಅಂಥಹ 100 ಸಿ.ಡಿ ಗಳನ್ನು ಆ ಕಂಪನಿ ತಯಾರಿಸಲು ಏನೇನೂ ವೆಚ್ಚ ತಗಲುವುದಿಲ್ಲ. ಆದರೆ ಅದೇ 100 ಸಿ.ಡಿ ಗಳನ್ನು ಮಾರಿ 5 ಲಕ್ಷ ರೂಪಾಯಿಯ ಒಂದು ಕಾರನ್ನು ಖರೀದಿಸಲು ಅದಕ್ಕೆ ಸಾಧ್ಯ. ಹೇಗಿದೆ ನೋಡಿ ಕಂಪನಿಗಳ ಹಗಲು ದರೋಡೆ!

ಅಲ್ಲದೆ, ಭಾರತದಂಥಹ ದೇಶದಲ್ಲಿ ಕೇವಲ ಶೇ. 5 ಕ್ಕಿಂತಲೂ ಕಡಿಮೆ ಜನ ಮಾತ್ರ ಇಂಗ್ಲಿಷ್ ಬಲ್ಲವರು. ಈ ಕಂಪನಿಗಳು ತಯಾರಿಸುವ ಸಾಫ್ಟ್ ವೇರ್ ಉತ್ಪನ್ನಗಳು ಕೇವಲ ಇಂಗ್ಲಿಷ್ ಬಲ್ಲವರು ಮಾತ್ರವೇ ಉಪಯೋಗಿಸಬಲ್ಲಂತವು. ಹೀಗಾಗಿ ಕನ್ನಡದಂಥಹ ಪ್ರಾದೇಶಿಕ ಭಾಷೆಯಲ್ಲಿ ಕನ್ನಡದ ಜನತೆಗೆ ಅವಶ್ಯವಿರುವ ಸಾಫ್ಟ್ ವೇರ್ ನ್ನು ಸಮುದಾಯವೇ ಉತ್ಪಾದಿಸಬೇಕೆ ಹೊರತು, ಲಾಭಕೋರ ಕಂಪನಿಗಳನ್ನು ಅವಲಂಬಿಸಲಾಗದು. ಮಾರುಕಟ್ಟೆಯಲ್ಲಿ ಲಾಭ ಮಾಡಲು ಅವಕಾಶವಿರುವ ಉತ್ಪನ್ನಗಳನ್ನು ಮಾತ್ರವೇ ಅವು ತಯಾರಿಸುವುದು. ಅಲ್ಲದೆ, ಈ ಕಂಪನಿಗಳು ಸಾಫ್ಟ್ ವೇರ್ ಜೊತೆ ಅವುಗಳ ಮೂಲ ಸಂಕೇತಗಳನ್ನು ನೀಡುವುದಿಲ್ಲವಾದ್ದರಿಂದ ಕನ್ನಡದ ಜನತೆಗೆ ಅವಶ್ಯವಿರುವ ಕನ್ನಡೀಕರಣದ ಸಾಫ್ಟ್ ವೇರ್ ತಯಾರಿಸಲು ಅಥವಾ ಮಾರ್ಪಡಿಸಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಿಸಿವೆ.

ಇನ್ನೊಂದು ಪ್ರಮುಖ ಪ್ರಶ್ನೆಯೆಂದರೆ, ಭಾರತದಲ್ಲಿ ಸಾಕ್ಷರತೆಯು ಕೇವಲ ಶೇ. ೬೫ ರ ಮಟ್ಟದಲ್ಲಿಯೇ ಇದೆ. ಇದರಲ್ಲಿ ಕಂಪ್ಯೂಟರ್ ಕಲಿತವರ ಸಂಖ್ಯೆ ಕೇವಲ. ಶೇ. ೫ ರೊಳಗೆ ಇದೆ. ಈ ಅಗಾಧ ಪ್ರಮಾಣದ ಡಿಜಿಟಲ್ ಕಂದರ ಭಾರತದಲ್ಲಿ ಸಮಾನತೆಗೆ ಮತ್ತು ಜ್ಞಾನದ ವಿಸ್ತರಣೆಗೆ ದೊಡ್ಡ ತೊಡಕುಂಟಾಗಿದೆ. ಆದರೆ ಸಾಫ್ಟ್ ವೇರ್ ಕುರಿತ ಯಾವೊಂದು ಪ್ರಮುಖ ವಾಹಿನಿಯ ಚರ್ಚೆಗಳಲ್ಲಿ ಕಂಪ್ಯೂಟರ್ ಸಾಕ್ಷರರು ಮತ್ತು ಅನಕ್ಷರರ ನಡುವಿನ ಡಿಜಿಟಲ್ ಕಂದರದ ಕುರಿತು ಪ್ರಸ್ತಾಪವೇ ಇರುವುದಿಲ್ಲ.

ಹೀಗೆ ಸಮಾಜದ ಕಲಿಕೆಯ ಮೇಲೆ ನಿಯಂತ್ರಣ ಹೇರುವ ಸಾಫ್ಟ್ ವೇರ್ ಗಳಿಗೆ ಪರ್ಯಾಯವಾಗಿ ಕಂಪ್ಯೂಟರ್ ಬಳಕೆದಾರರು ಮತ್ತು ತಂತ್ರಜ್ಞರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಸ್ವತಂತ್ರ ತಂತ್ರಾಂಶದ ತಂತ್ರಜ್ಞಾನಗಳು ಮತ್ತು ಸ್ವತಂತ್ರ ತಂತ್ರಾಂಶ ಚಳುವಳಿಯು ವಿಶ್ವದೆಲ್ಲೆಡೆ ಬೆಳೆದು ಬರುತ್ತಿದೆ.

ಸ್ವತಂತ್ರ ತಂತ್ರಾಂಶ (Free Software) ಎಂದರೆ, ನಕಲು ಮಾಡುವ, ಮೂಲ ತಂತ್ರಾಂಶದೊಂದಿಗೆ ವಿತರಿಸುವ, ಅಧ್ಯಯನ ಮಾಡುವ, ಮಾರ್ಪಡಿಸುವ ಮತ್ತು ಹೊಸ ಕ್ಷೇತ್ರಕ್ಕೆ ಅನ್ವಯಿಸುವ ಎಲ್ಲ ಸ್ವಾತಂತ್ರ್ಯಗಳನ್ನು ಅದು ಬಳಕೆದಾರರಿಗೆ ನೀಡುತ್ತದೆ. ಆದರೆ, ಮಾಲೀಕತ್ವದ ಸಾಫ್ಟ್ ವೇರ್ (Proprietary software) ಮೂಲ ಸಂಕೇತವನ್ನು (Source code) ಬಳಕೆದಾರರಿಗೆ ನಿರಾಕರಿಸುವ ಮೂಲಕ ಎಲ್ಲ ಸ್ವಾತಂತ್ರ್ಯಗಳನ್ನು ಹತ್ತಿಕ್ಕುತ್ತವೆ.

ವಿಶ್ವದಾದ್ಯಂತ ಲಕ್ಷಾಂತರ ಸಾಫ್ಟ್ ವೇರ್ ತಂತ್ರಜ್ಞರು ಸಮುದಾಯವೇ ಮಾಲಿಕತ್ವ ಹೊಂದುವ ಸಾಫ್ಟ್ ವೇರ್ ಗಳನ್ನು ದೈತ್ಯ ಕಂಪನಿಗಳು ತಯಾರಿಸುವ ಗುಣಮಟ್ಟಕ್ಕೆ ಸರಿಸಾಟಿಯಾಗಿ ಉತ್ಪಾದಿಸಿ ಪುಕ್ಕಟೆಹಂಚುತ್ತಿದ್ದಾರೆ. ಸ್ವತಂತ್ರ ತಂತ್ರಾಂಶ ಚಳುವಳಿಯನ್ನು ಹುಟ್ಟು ಹಾಕಿ ಜಾಗತಿಕ ಮಟ್ಟದಲ್ಲಿ ಹರಡಿದ್ದು ಸ್ಫೋಟಕ ಪ್ರತಿಭೆಯ ರಿಚರ್ಡ್ ಸ್ಟಾಲ್ಮನ್ ಅವರು. ಅದಕ್ಕೆ ಅಗತ್ಯವಿರುವ ಕಾನೂನು ಸಂರಕ್ಷಣೆಯನ್ನು ರೂಪಿಸಿ ಸ್ವಾತಂತ್ರ್ಯದ ಮೌಲ್ಯವನ್ನು ಅಳವಡಿಸಿದ್ದು ಎಬೆನ್ ಮೊಗ್ಲೆನ್ ಅವರು. ಈ ದಿಗ್ಗಜರಿಬ್ಬರು ವಿಶ್ವಾದ್ಯಂತ ಚಳುವಳಿ ಹರಡಲು ಲಕ್ಷಾಂತರ ಸ್ವತಂತ್ರ ತಂತ್ರಾಂಶ ಪ್ರೇಮಿಗಳೊಂದಿಗೆ ಶ್ರಮಿಸುತ್ತಿದ್ದಾರೆ.

ಇಂಥಹ ಸ್ವತಂತ್ರ ತಂತ್ರಾಂಶ ಚಳುವಳಿಯು ಸಮಾಜದಲ್ಲಿ ಕಲಿಕೆ, ಜ್ಞಾನ, ಸ್ವಾವಲಂಬನೆ ಮತ್ತು ಸ್ವಾತಂತ್ರ್ಯವನ್ನು ಜನತೆಗೆ ಒದಗಿಸುವ ದಾರಿಯನ್ನು ತೆರೆಯುತ್ತದೆ.