ಸ್ವಚ್ಛ ಇಂಧನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಸರಕ್ಕೆ ಹಾನಿಯಾಗದಂತೆ ಸಿದ್ಧವಾಗುವ, ಹಾಗೂ ಬಳಕೆಯಲ್ಲೂ ಹೆಚ್ಚು ಮಾಲಿನ್ಯ ಉಂಟುಮಾಡದ ಇಂಧನ ಮೂಲಗಳನ್ನು 'ಸ್ವಚ್ಛ' ಇಂಧನಗಳೆಂದು ಕರೆಯಬಹುದು. ಇಂತಹ ಬಹುಪಾಲು ಇಂಧನಗಳನ್ನು ನವೀಕರಿಸಬಲ್ಲ ಸಂಪನ್ಮೂಲಗಳಿಂದ ಪಡೆಯಲಾಗುತ್ತದೆ. ಉದಾಹರಣೆಗೆ ನೀರು, ಗಾಳಿ ಅಥವಾ ಸೂರ್ಯನ ಬೆಳಕಿನಿಂದ ನಾವು ವಿದ್ಯುತ್ ಉತ್ಪಾದಿಸಿದರೆ ಅದು ಸ್ವಚ್ಛ ಇಂಧನವೆಂದು ಹೇಳಬಹುದು. ಅವೆಲ್ಲವೂ ನವೀಕರಿಸಬಲ್ಲ ಇಂಧನ ಮೂಲಗಳು, ಹಾಗೂ ಅದರಿಂದ ಉಂಟಾಗುವ ಮಾಲಿನ್ಯ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ಜಲವಿದ್ಯುತ್[ಬದಲಾಯಿಸಿ]

ಒಂದು ಶತಮಾನಕ್ಕೂ ಹೆಚ್ಚಿನ ಸಮಯದಿಂದ ಸ್ವಚ್ಛ ಇಂಧನ ಪೂರೈಸುತ್ತ ಬಂದಿರುವ ಹಿರಿಮೆ ಜಲವಿದ್ಯುತ್ ಯೋಜನೆಗಳದು. ನವೀಕರಿಸಬಲ್ಲ ಇಂಧನಮೂಲಗಳ ಪೈಕಿ ಅತ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವುದೆಂದರೆ ಇದೇ. ಪ್ರಪಂಚದೆಲ್ಲೆಡೆ ಬಳಕೆಯಾಗುವ ಒಟ್ಟು ವಿದ್ಯುತ್ತಿನ ಶೇ.೧೬ರಷ್ಟು ಭಾಗ ಇದೊಂದೇ ಮೂಲದಿಂದ ಉತ್ಪಾದನೆಯಾಗುತ್ತದೆ (ನೀರಿನ ಶಕ್ತಿಯಿಂದ ವಿದ್ಯುತ್ ಪಡೆಯುವ ಪ್ರಕ್ರಿಯೆ ಮಾಲಿನ್ಯಕಾರಿಯಲ್ಲ ಎಂಬುದು ನಿಜವಾದರೂ ಜಲವಿದ್ಯುತ್ ಯೋಜನೆಗಳ ನಿರ್ಮಾಣಕ್ಕಾಗಿ ಈವರೆಗೆ ಅಪಾರ ಪ್ರಮಾಣದ ಅರಣ್ಯಸಂಪತ್ತನ್ನು 'ಮುಳುಗಿಸಲಾಗಿದೆ' ಎಂಬ ಕಟುಸತ್ಯವನ್ನು ಮರೆಮಾಚುವಂತಿಲ್ಲ).

ಜಿಯೋಥರ್ಮಲ್ ಎನರ್ಜಿ[ಬದಲಾಯಿಸಿ]

ಭೂಮಿಯ ಶಾಖ (ಜಿಯೋಥರ್ಮಲ್ ಎನರ್ಜಿ), ಸ್ವಚ್ಛ ಇಂಧನದ ಇನ್ನೊಂದು ಮೂಲ. ಈ ಶಾಖವನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವುದು ಜಿಯೋಥರ್ಮಲ್ ವಿದ್ಯುತ್ ಘಟಕಗಳ ವೈಶಿಷ್ಟ್ಯ. ಚಳಿಯ ರಾಷ್ಟ್ರಗಳಲ್ಲಿ ಕಟ್ಟಡಗಳನ್ನು ಬಿಸಿಯಾಗಿಡಲು ಶಾಖವನ್ನೇ ನೇರವಾಗಿಯೂ ಬಳಸಬಹುದು. ಆದರೆ ಜಿಯೋಥರ್ಮಲ್ ಘಟಕಗಳನ್ನು ಎಲ್ಲೆಡೆಯೂ ಸ್ಥಾಪಿಸುವುದು ಸಾಧ್ಯವಿಲ್ಲ. ಅಗತ್ಯ ಪ್ರಮಾಣದ ಶಾಖವನ್ನು ಪಡೆಯಲು ಭೂಮಿಯ ಮೇಲ್ಮೈಯಿಂದ ಕಿಲೋಮೀಟರುಗಳ ಆಳದವರೆಗೂ ಕೊಳವೆಬಾವಿ ತೋಡಬೇಕಾಗುತ್ತದೆ; ಇದು ತಾಂತ್ರಿಕವಾಗಿ ಹಾಗೂ ಆರ್ಥಿಕವಾಗಿ ಕಷ್ಟದ ಕೆಲಸವಾಗಿರುವುದರಿಂದ ಜಿಯೋಥರ್ಮಲ್ ಎನರ್ಜಿಯ ಬಳಕೆ ಇನ್ನೂ ವ್ಯಾಪಕವಾಗಿ ಬೆಳೆದಿಲ್ಲ.

ವೇವ್ ಹಾಗೂ ಟೈಡಲ್ ಪವರ್[ಬದಲಾಯಿಸಿ]

ಸಮುದ್ರ ಕೂಡ ಸ್ವಚ್ಛ ಇಂಧನದ ಬಹುದೊಡ್ಡ ಆಕರ. ಸಮುದ್ರದ ಅಲೆಗಳಿಂದ ಪಡೆಯಲಾಗುವ ವೇವ್ ಪವರ್ ಹಾಗೂ ಉಬ್ಬರ ಇಳಿತಗಳಿಂದ ಪಡೆಯಲಾಗುವ ಟೈಡಲ್ ಪವರ್ ಘಟಕಗಳು ಪ್ರಪಂಚದ ಹಲವೆಡೆಗಳಲ್ಲಿ ಈಗಾಗಲೇ ಕೆಲಸಮಾಡುತ್ತಿವೆ. ಆದರೆ ಇವುಗಳ ವ್ಯಾಪ್ತಿಯೂ ಸೀಮಿತ.

ಗಾಳಿಶಕ್ತಿ[ಬದಲಾಯಿಸಿ]

ಗಾಳಿಯಂತ್ರಗಳನ್ನು (ವಿಂಡ್‌ಮಿಲ್) ಬಳಸಿ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನ ಈಗಾಗಲೇ ಸಾಕಷ್ಟು ಬೆಳೆದಿರುವುದರಿಂದ ಸ್ವಚ್ಛ ಇಂಧನ ಪೂರೈಕೆಯಲ್ಲಿ ಗಾಳಿಶಕ್ತಿ ಕೂಡ ಮಹತ್ವದ ಪಾತ್ರ ವಹಿಸುತ್ತಿದೆ. ಡೆನ್ಮಾರ್ಕ್ ದೇಶದ ಉದಾಹರಣೆ ತೆಗೆದುಕೊಳ್ಳುವುದಾದರೆ ಒಟ್ಟು ವಿದ್ಯುತ್ ಬಳಕೆಯ ಶೇ.೨೦ರಷ್ಟನ್ನು ಗಾಳಿಶಕ್ತಿಯಿಂದಲೇ ಪೂರೈಸಲಾಗುತ್ತಿದೆ.

ಸೌರಶಕ್ತಿ[ಬದಲಾಯಿಸಿ]

ಸ್ವಚ್ಛ ಇಂಧನದ ಇನ್ನೊಂದು ಪ್ರಮುಖ ಮೂಲ ಸೌರಶಕ್ತಿ. ಸೌರಶಕ್ತಿಯಿಂದ ಬೆಳಕು ಪಡೆಯುವ, ನೀರು ಕಾಯಿಸುವ, ಅಡುಗೆ ಮಾಡುವ ತಂತ್ರಜ್ಞಾನಗಳು ನಮಗೆಲ್ಲ ಈಗಾಗಲೇ ಪರಿಚಿತ. ಇದರ ಮುಂದಿನ ಹಂತವಾಗಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವ ದೊಡ್ಡಪ್ರಮಾಣದ ಘಟಕಗಳ ಸ್ಥಾಪನೆ ಈಗಾಗಲೇ ಪ್ರಪಂಚದೆಲ್ಲೆಡೆ ನಡೆಯುತ್ತಿದೆ.

ಹೆಚ್ಚಿನ ಓದು[ಬದಲಾಯಿಸಿ]