ಸ್ಪಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಮೇಲ್ ಇನ್‌ಬಾಕ್ಸ್‌ನಲ್ಲಿ ತುಂಬಿಕೊಂಡಿರುವ ಸ್ಪಾಮ್ ಸಂದೇಶಗಳು

ಇಮೇಲ್ ಮಾಧ್ಯಮದ ಮೂಲಕ ಅನಗತ್ಯ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಸಂದೇಶಗಳನ್ನು ಸ್ಪಾಮ್ ಎಂದು ಗುರುತಿಸುತ್ತಾರೆ. ವಿವಿಧ ಬಗೆಯ ಜಾಹೀರಾತುಗಳಿಂದ (ವಿಶೇಷವಾಗಿ ಹಲವು ಕಾನೂನುಬಾಹಿರ ದಂಧೆಗಳಿಗೆ ಸಂಬಂಧಿಸಿದ್ದು) ಪ್ರಾರಂಭಿಸಿ ಜನರನ್ನು ವಂಚಿಸುವ ಉದ್ದೇಶದವರೆಗೆ ಸ್ಪಾಮ್ ಸಂದೇಶಗಳಲ್ಲಿ ಹಲವಾರು ಬಗೆ.

ನಕಲಿ ಇಮೇಲ್ ಹಾಗೂ ಜಾಲತಾಣಗಳ ಸಹಾಯದಿಂದ ಬಳಕೆದಾರರ ಖಾಸಗಿ ಮಾಹಿತಿಯನ್ನು ಕದಿಯುವ ಫಿಶಿಂಗ್ ಹಗರಣದಲ್ಲೂ ಸ್ಪಾಮ್ ಸಂದೇಶಗಳು ಬಳಕೆಯಾಗುತ್ತವೆ. ಸಾಕಷ್ಟು ನೈಜವಾಗಿಯೇ ತೋರುವ ಈ ಸಂದೇಶಗಳು ಸಾಮಾನ್ಯವಾಗಿ ಬೇರೆಬೇರೆ ಬ್ಯಾಂಕುಗಳ ಹೆಸರಿನಲ್ಲಿ ಆಗಿಂದಾಗ್ಗೆ ಬರುತ್ತಿರುತ್ತವೆ. ಬ್ಯಾಂಕಿನ ಹೆಸರು ಹೇಳಿ ನಂಬಿಸಿ ಬ್ಯಾಂಕ್ ಖಾತೆಯ ಅಥವಾ ಕ್ರೆಡಿಟ್ ಕಾರ್ಡಿನ ವಿವರಗಳನ್ನು ಕದಿಯುವುದು ಇಂತಹ ನಕಲಿ ಸಂದೇಶಗಳ ಉದ್ದೇಶವಾಗಿರುತ್ತದೆ. ಇದೇ ರೀತಿಯಲ್ಲಿ ಇಮೇಲ್ ಖಾತೆಯ ಪಾಸ್‌ವರ್ಡ್ ಕದ್ದು ಅದನ್ನು ದುರ್ಬಳಕೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಬಾಟ್ ಹಾಗೂ ಬಾಟ್‌ನೆಟ್[ಬದಲಾಯಿಸಿ]

ವಿಶ್ವದಾದ್ಯಂತ ಹರಿದಾಡುವ ಸ್ಪಾಮ್ ಸಂದೇಶಗಳಲ್ಲಿ ದೊಡ್ಡ ಪಾಲು ಸಾಮಾನ್ಯ ಬಳಕೆದಾರರ ಕಂಪ್ಯೂಟರುಗಳಿಂದಲೇ ಬರುತ್ತಿದೆ ಎಂದು ಅಂದಾಜಿಸಲಾಗಿದೆ. ಗೂಢಚಾರಿ ತಂತ್ರಾಂಶಗಳ ಮೂಲಕ ಈ ಕಂಪ್ಯೂಟರುಗಳನ್ನು 'ಹೈಜಾಕ್' ಮಾಡುವ ಸಮಾಜಘಾತುಕ ಶಕ್ತಿಗಳು ಅವನ್ನು ಸ್ಪಾಮ್ ಸಂದೇಶಗಳ ರವಾನೆಗಾಗಿ ಬಳಸುತ್ತಾರೆ.

ಯಾವುದೋ ಉಪಯುಕ್ತ ತಂತ್ರಾಂಶದ ಸೋಗಿನಲ್ಲಿ ಬರುವ ಇಂತಹ ತಂತ್ರಾಂಶ ಪ್ರತಿ ಬಾರಿ ಕಂಪ್ಯೂಟರನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುತ್ತದೆ; ಅಂತರಜಾಲ ಸಂಪರ್ಕದ ಮೂಲಕ ತನಗೆ ದೊರಕುವ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುವ ಅದು ಸ್ಪಾಮ್ ಸಂದೇಶಗಳನ್ನು ರವಾನಿಸುತ್ತಲೇ ಹೋಗುತ್ತದೆ. ಇಂತಹ ಕಂಪ್ಯೂಟರುಗಳು ಬೇರೊಬ್ಬರ ಆದೇಶ ಪಾಲಿಸುವ ಯಂತ್ರಮಾನವನಂತೆ (ರೋಬಾಟ್) ಕೆಲಸಮಾಡುವುದರಿಂದ ಅವುಗಳನ್ನು ಬಾಟ್‌ಗಳೆಂದು ಕರೆಯುತ್ತಾರೆ. ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ. ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿ ರಚನೆಯಾಗುವ ಜಾಲಗಳಿಗೆ 'ಬಾಟ್‌ನೆಟ್'ಗಳೆಂದು ಹೆಸರು. ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವ ಈ ಜಾಲಗಳು ಸ್ಪಾಮ್ ಸಮಸ್ಯೆಯ ಕೇಂದ್ರಬಿಂದುಗಳೆಂದರೆ ತಪ್ಪಲ್ಲ.

ಸ್ಪಾಮ್ ತಡೆ ಹೇಗೆ?[ಬದಲಾಯಿಸಿ]

ಸ್ಪಾಮ್ ಕಾಟದಿಂದ ಪಾರಾಗಲು ಬಳಕೆದಾರರ ವಿವೇಚನೆಯೇ ಸೂಕ್ತ ಮಾರ್ಗ ಎನ್ನುವುದು ತಜ್ಞರ ಅಭಿಪ್ರಾಯ. ಸಂದೇಹಾಸ್ಪದ ಜಾಲತಾಣಗಳಲ್ಲಿ ಸಂಪರ್ಕ ವಿವರಗಳನ್ನು, ಬ್ಯಾಂಕ್, ಕ್ರೆಡಿಟ್ ಕಾರ್ಡ್ ಅಥವಾ ಇಮೇಲ್ ಖಾತೆಗೆ ಸಂಬಂಧಪಟ್ಟ ಖಾಸಗಿ ವಿವರಗಳನ್ನು ದಾಖಲಿಸದಿರುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ. ಅಂತೆಯೇ ನಂಬಲಸಾಧ್ಯವೆಂದು ತೋರುವ ಸಂದೇಶಗಳನ್ನು ಕಡ್ಡಾಯವಾಗಿ ನಂಬದಿರುವುದು ಇನ್ನೊಂದು ಅತ್ಯಗತ್ಯ ಕ್ರಮ.

"https://kn.wikipedia.org/w/index.php?title=ಸ್ಪಾಮ್&oldid=634898" ಇಂದ ಪಡೆಯಲ್ಪಟ್ಟಿದೆ