ವಿಷಯಕ್ಕೆ ಹೋಗು

ಸೈಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಸಾಧಾರಣ ಬೈಸಿಕಲ್

ಸೈಕಲ್ (ಬೈಸಿಕಲ್ ಎಂದೂ ಕರೆಯಲಾಗುತ್ತದೆ) ಪೆಡಲ್ಲುಗಳನ್ನು ತುಳಿಯುವ ಮೂಲಕ ಚಾಲನೆ ಮಾಡುವ ಮಾನವಚಾಲಿತ ದ್ವಿಚಕ್ರವಾಹನ.

ಸೈಕಲ್ಲುಗಳು ೧೯ ನೆಯ ಶತಮಾನದಲ್ಲಿ ಯೂರೋಪ್ ಖಂಡದಲ್ಲಿ ಮೊದಲು ಬಳಕೆಗೆ ಬಂದವು. ಈಗ ಪ್ರಪಂಚದಲ್ಲಿ ಒಟ್ಟು ೧೦೦ ಕೋಟಿ ಸೈಕಲ್ಲುಗಳಿವೆ ಎಂದು ಅಂದಾಜು ಮಾಡಲಾಗಿದೆ. ಅನೇಕ ಪ್ರದೇಶಗಳಲ್ಲಿ ಸೈಕಲ್ಲುಗಳು ಪ್ರಮುಖವಾದ ಸಂಚಾರ ವಾಹನಗಳು. ಸಂಚಾರವಲ್ಲದೆ ಸೈಕಲ್ಲುಗಳನ್ನು ಮನರಂಜನೆಗಾಗಿ, ವ್ಯಾಯಾಮಕ್ಕಾಗಿ ಸಹ ಉಪಯೋಗಿಸಲಾಗುತ್ತದೆ.

ಸೈಕಲ್ಲುಗಳ ಮೂಲಭೂತ ಆಕಾರ ಮತ್ತು ರಚನೆ ೧೮೮೫ ರಿಂದ ಮುಂದಕ್ಕೆ ಹೆಚ್ಚಾಗಿ ಬದಲಾಗಿಲ್ಲ. ಆದರೆ ಸೈಕಲ್ಲುಗಳನ್ನು ತಯಾರಿಸುವ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಹಾಗೆಯೇ ವಿವಿಧ ಉದ್ದೇಶಗಳಿಗಾಗಿ ವಿಶೇಷ ವಿನ್ಯಾಸದ ಸೈಕಲ್ಲುಗಳ ತಯಾರಿಕೆ ನಡೆಯುತ್ತದೆ.

ಚರಿತ್ರೆ[ಬದಲಾಯಿಸಿ]

ಸೈಕಲ್ಲುಗಳ ವಿಕಾಸ

ಸೈಕಲ್ಲುಗಳ ಆವಿಷ್ಕರಣಕ್ಕೆ ಮುಂಚೆಯೂ ಮಾನವಚಾಲಿತ ವಾಹನಗಳನ್ನು ನಿರ್ಮಿಸುವತ್ತ ಅನೇಕರು ಕೆಲಸ ಮಾಡಿದ್ದರು. ೧೮೧೮ ರಲ್ಲಿ ಬಳಕೆಗೆ ಬಂದ ಡ್ರೈಸೀನ್ ವಾಹನ ಸೈಕಲ್ಲುಗಳ ಪೂರ್ವಜ ಎನ್ನಬಹುದು. ಎರಡು ಚಕ್ರಗಳನ್ನು ಹೊಂದಿದ್ದ ಇದರಲ್ಲಿ ಪೆಡಲ್ ಅಥವಾ ಚೈನ್ ಇರಲಿಲ್ಲ. ಈ ವಾಹನದ ಮೇಲೆ ಕುಳಿತ ಸವಾರ ಕಾಲುಗಳಿಂದ ನೆಲವನ್ನು ತಳ್ಳುವುದರ ಮೂಲಕ ಚಲಿಸಬೇಕಾಗಿತ್ತು.

೧೮೬೦ ರಲ್ಲಿ ಪಿಯರಿ ಮಿಕಾ ಮತ್ತು ಪಿಯರಿ ಲಾಲೆಮೆಂಟ್ ಅಂಬ ಫ್ರೆಂಚ್ ಆವಿಷ್ಕರ್ತರು ಪೆಡಲ್ಲುಗಳನ್ನುಳ್ಳ ಸೈಕಲ್ ಒಂದನ್ನು ನಿರ್ಮಿಸಿದರು. ಇವುಗಳಲ್ಲಿ ಪೆಡಲ್ ಗಳು ನೇರವಾಗಿ ಚಕ್ರಕ್ಕೆ ಸಂಪರ್ಕ ಹೊಂದಿರುತ್ತಿದ್ದವು. ಈಗಿನ ಸೈಕಲ್ಲುಗಳಲ್ಲಿರುವಂತೆ ಪೆಡಲ್ ಮತ್ತು ಚಕ್ರವನ್ನು ಜೋಡಿಸುವ ಚೈನ್ ಬಳಕೆಗೆ ಬಂದಿರಲಿಲ್ಲ. ಚೈನ್ ಗಳನ್ನುಳ್ಳ ಸೈಕಲ್ ಬಳಕೆಗೆ ಬಂದ ನಂತರ ನಿರ್ಮಿಸಲಾದ ೧೮೮೫ ರ ರೋವರ್ ಸೈಕಲ್ ಅನ್ನು ಆಧುನಿಕ ಸೈಕಲ್ ಗಳ ಮೊದಲ ರೂಪ ಎಂದು ಗುರುತಿಸಬಹುದು.

೧೮೮೮ ರಲ್ಲಿ ಗಾಳಿ ತುಂಬಿಸುವ ರಬ್ಬರ್ ಟೈರುಗಳು ಉಪಯೋಗಕ್ಕೆ ಬಂದವು. ಗೇರುಗಳನ್ನುಳ್ಳ ಸೈಕಲ್ ಗಳ ಆವಿಷ್ಕರಣವೂ ಸುಮಾರು ಇದೇ ಸಮಯಕ್ಕೆ ನಡೆಯಿತು.

ಉಪಯೋಗಗಳು[ಬದಲಾಯಿಸಿ]

ಸೈಕಲ್ಲುಗಳ ಮೇಲೆ ಹಾಲನ್ನು ಒಯ್ಯುತ್ತಿರುವ ಸವಾರರು

ಸೈಕಲ್ ಗಳನ್ನು ಪ್ರಧಾನವಾಗಿ ಕೆಳಗಿನ ಉದ್ದೇಶಗಳಿಗಾಗಿ ಬಳಸಲಾಗುತ್ತದೆ:

  1. ಸಂಚಾರ
  2. ಸರಕು ಸಾಗಣೆ
  3. ವ್ಯಾಯಾಮ
  4. ಮನರಂಜನೆ (ಸೈಕಲ್ ಪ್ರವಾಸಗಳು, ಸೈಕಲ್ ಪರ್ವತಾರೋಹಣ, ಇತ್ಯಾದಿ)
  5. ಕೆಲವು ಪ್ರದೇಶಗಳಲ್ಲಿ ಅಂಚೆ ರವಾನೆ ಮತ್ತು ಪೊಲೀಸ್ ಕೆಲಸಕ್ಕಾಗಿ ಉಪಯೋಹಗಿಸಲಾಗುತ್ತದೆ.
  6. ಸ್ಪರ್ಧೆ - ಅನೇಕ ಸೈಕಲ್ ರೇಸ್ ಮತ್ತು ಇತರ ಸ್ಪರ್ಧೆಗಳು ನಡೆಯುತ್ತವೆ. ಇವುಗಳಲ್ಲಿ ಎಲ್ಲಕ್ಕಿಂತ ಪ್ರಸಿದ್ಧವಾದ ಸ್ಪರ್ಧೆ ಟೂರ್ ಡೆ ಫ್ರಾನ್ಸ್.
"https://kn.wikipedia.org/w/index.php?title=ಸೈಕಲ್&oldid=318361" ಇಂದ ಪಡೆಯಲ್ಪಟ್ಟಿದೆ