ಸುಕನ್ಯಾ ರಾಮಗೋಪಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಕನ್ಯಾ ರಾಮಗೋಪಾಲ್
Bornಸೆಪ್ಟೆಂಬರ್ ೧೩, ೧೯೫೭
ಚೆನ್ನೈ
Known forಘಟಂ ವಾದನ, ಘಟಂ ತರಂಗ್ ಮತ್ತು ಸ್ತ್ರೀ ತಾಳ ತರಂಗ್ ಸಂಘಟನೆ

ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಘಟಂ ವಾದನದಲ್ಲಿ ಪುರುಷ ಕಲಾವಿದರೇ ಕಾಣುವುದು ಹೆಚ್ಚು. ಈ ಕಲೆಯಲ್ಲಿ ಪ್ರಥಮ ಮಹಿಳಾ ಕಲಾವಿದರೆಂದು ಪ್ರಖ್ಯಾತಿ ಪಡೆದಿರುವವರು ಸುಕನ್ಯಾ ರಾಮಗೋಪಾಲ್ ಅವರು.

ಜೀವನ[ಬದಲಾಯಿಸಿ]

ಸುಕನ್ಯಾ ಅವರು ಸೆಪ್ಟೆಂಬರ್ 13, 1957ರ ವರ್ಷದಲ್ಲಿ ಚೆನ್ನೈನಲ್ಲಿ ಜನಿಸಿದರು. ತಂದೆ ಸುಬ್ರಹ್ಮಣ್ಯಂ ಅವರು ಮತ್ತು ತಾಯಿ ರಂಗನಾಯಕಿ ಅವರು. ಅವರದ್ದು ಸಂಗೀತ ಮನೆತನ.

ಸಂಗೀತ ಲೋಕದಲ್ಲಿ[ಬದಲಾಯಿಸಿ]

ತಮ್ಮ ಹನ್ನೆರಡನೇ ವಯಸ್ಸಿನಿಂದಲೇ ಸುಕನ್ಯಾ ಅವರು ಮೃದಂಗವಾದನ ಕಲಿಕೆಯನ್ನಾರಂಭಿಸಿದರು. ಪ್ರಸಿದ್ಧ ವಿಕ್ಕು ವಿನಾಯಕಂ ಅವರಿಂದ ಮೃದಂಗ ಮತ್ತು ಘಟಂ ಶಿಕ್ಷಣವನ್ನು ಪಡೆದ ಸುಕಾನ್ಯಾ ಅವರು ವಿದ್ವಾನ್ ಗುರುಮೂರ್ತಿ ಅವರಿಂದ ಪಿಟೀಲು ವಾದನವನ್ನೂ ಕಲಿತರು.

ಕರ್ನಾಟಕ ಸಂಗೀತದಲ್ಲಿ ದಿಗ್ಗಜರೆನಿಸಿರುವ ಬಹುತೇಕ ಕಲಾವಿದರಿಗೆ ಘಟಂ ಸಹಯೋಗ ನೀಡಿರುವ ಸುಕನ್ಯಾ ರಾಮಗೋಪಾಲ್ ಅವರು ಆಕಾಶವಾಣಿಯ ‘ಎ’ ದರ್ಜೆ ಮಾನ್ಯತೆ ಗಳಿಸಿದವರು. ಅವರ ಹಲವಾರು ಏಕವ್ಯಕ್ತಿ ಕಾರ್ಯಕ್ರಮಗಳು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಪ್ರಸಾರಗೊಂಡು ಜನಪ್ರಿಯತೆ ಗಳಿಸಿವೆ.

ನಿರಂತರ ಪ್ರಯೋಗಶೀಲರಾದ ಸುಕನ್ಯಾ ರಾಮಗೋಪಾಲ್ ಅವರು ಆರು ಘಟಂ ವಾದ್ಯಗಳನ್ನು ವಿವಿಧ ಶ್ರುತಿ – ಲಯಗಳಿಗೆ ಹೊಂದಿಸಿ ಜಲತರಂಗ್‌ ರೀತಿ ನುಡಿಸಿ ‘ಘಟಂ ತರಂಗ್‌’ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವುದರ ಮೂಲಕ ವಿಶ್ವದೆಲ್ಲೆಡೆ ಕೀರ್ತಿಗಳಿಸಿದ್ದಾರೆ. ತಮ್ಮ ಹತ್ತು ಬೆರಳುಗಳನ್ನೂ ಉಪಯೋಗಿಸಿ ಮೃದು – ಮಧುರ ಸ್ವರ ಹೊರಹೊಮ್ಮಿಸಬಲ್ಲ ಅಮೂಲ್ಯ ಪ್ರತಿಭೆ ಅವರದ್ದು.

ಹಾಡುಗಾರರು ಪಕ್ಕವಾದ್ಯವನ್ನು ಆಯ್ಕೆಮಾಡಿಕೊಳ್ಳುವಂತೆ ತಮ್ಮ ಪ್ರಮುಖ ಘಟಂ ವಾದನಕ್ಕೆ ಪಿಟೀಲು, ಮೃದಂಗ, ಕೊಳಲು, ತಬಲ, ಮೋರ್ಚಿಂಗ್ ನುಡಿಸಬಲ್ಲ ಸಮರ್ಥ ಮಹಿಳಾ ಕಲಾವಿದರನ್ನೇ ಆಯ್ಕೆಮಾಡಿ ಸುಕನ್ಯಾ ರಾಮಗೋಪಾಲ್ ಅವರು ನೀಡುತ್ತಿರುವ ‘ಸ್ತ್ರೀ ತಾಳ ತರಂಗ್‌’ ಅವರ ಮತ್ತೊಂದು ಮಹತ್ವದ ಸಾಧನೆಯಾಗಿದೆ. ಅವರ ಏಕವ್ಯಕ್ತಿ ಘಟಂ ವಾದನ, ಸ್ತ್ರೀ ತಾಳತರಂಗ್‌ ಕಾರ್ಯಕ್ರಮಗಳು ಭಾರತದೆಲ್ಲೆಡೆಯ ಪ್ರಸಿದ್ಧ ವೇದಿಕಗಳಲ್ಲಷ್ಟೇ ಅಲ್ಲದೆ, ಯುನೈಟೆಡ್ ಕಿಂಗ್ಡಂ, ಅಮೆರಿಕಾ, ಫ್ರಾನ್ಸ್, ಜರ್ಮನಿ, ಸ್ವಿಜರ್‌ಲ್ಯಾಂಡ್‌, ಕೆನಡಾ, ಆಸ್ಟ್ರೇಲಿಯಾ ಹೀಗೆ ವಿಶ್ವದಾದ್ಯಂತ ಕೀರ್ತಿಗಳಿಸಿವೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಈ ಮಹಾನ್ ಕಲಾವಿದರಿಗೆ ಕರ್ನಾಟಕ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಚೆನೈನ ನಾರದಗಾನ ಸಭಾ ಪ್ರಶಸ್ತಿ, ಮುಂಬಯಿಯ ಬಂದುಪ್‌ ಆರ್ಟ್ ಸೊಸೈಟಿಯ ಲಯ ಕಲಾನಿಧಿ ಪ್ರಶಸ್ತಿ, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್‌ ರಾಗತರಂಗಿಣಿ ಪ್ರಶಸ್ತಿ, ಎಚ್‌.ವಿ. ಪುಟ್ಟಾಚಾರ್‌ ಸ್ಮಾರಕ ಪ್ರಶಸ್ತಿ, ಲಯಕಲಾ ಪ್ರತಿಭಾಮಣಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.

ಮಾಹಿತಿ ಕೃಪೆ[ಬದಲಾಯಿಸಿ]

  1. ಕಣಜ Archived 2014-04-03 ವೇಬ್ಯಾಕ್ ಮೆಷಿನ್ ನಲ್ಲಿ.
  2. ಸುಕನ್ಯಾ ರಾಮಗೋಪಾಲ್ ಅವರ ವೆಬ್ ಸೈಟ್ Archived 2016-01-10 ವೇಬ್ಯಾಕ್ ಮೆಷಿನ್ ನಲ್ಲಿ.
  3. Ghatam becomes cynosure of all eyes - ದಿ ಹಿಂದೂ ಪತ್ರಿಕೆಯಲ್ಲಿನ ಲೇಖನ[ಶಾಶ್ವತವಾಗಿ ಮಡಿದ ಕೊಂಡಿ]