ವಿಷಯಕ್ಕೆ ಹೋಗು

ಸಿದ್ಧರಾಮಸ್ವಾಮಿ ಕೋರವಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿ, ಗದುಗಿನಲ್ಲಿ ಸಂಗೀತ ಶಿಕ್ಷಣ ಪಡೆದು ಮಧ್ಯಪ್ರದೇಶದಲ್ಲಿ ನೆಲೆಸಿ ಹಿಂದೂಸ್ಥಾನಿ ಸಂಗೀತವನ್ನು ಪ್ರಸಾರಗೈಯುತ್ತ ಕನ್ನಡ ಕಂಪನ್ನು ಉತ್ತರ ಭಾರತದಲ್ಲಿ ಹರಿಸುತ್ತಿರುವ ಶ್ರೀ ಸಿದ್ಧರಾಮಸ್ವಾಮಿ ಕೋರವಾರ ಅವರು ಹೊರನಾಡ ಸಂಗೀತ ದಿಗ್ಗಜರಲ್ಲಿ ಒಬ್ಬರು.

ಶ್ರೀ ಸಿದ್ಧರಾಮಸ್ವಾಮಿ ಅವರು ಜನಿಸಿದ್ದು ೧೯೩೫ರ ಅಕ್ಟೋಬರ್ ೧೬ ರಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೊರವಾರ ಎಂಬ ಗ್ರಾಮದಲ್ಲಿ. ಬಾಲ್ಯದಲ್ಲಿಯೇ ಸಂಗೀತದಲ್ಲಿ ಒಲವು ಪಡೆದುಕೊಂಡ ಅವರು ಗದುಗಿಗೆ ಬಂದು ಪಂ. ಪುಟ್ಟರಾಜ ಗವಾಯಿಗಳ ಶಿಷ್ಯತ್ವ ವಹಿಸಿ ೧೨ ವರ್ಷಗಳ ಕಾಲ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಶಿಕ್ಷಣ ಪಡೆದುಕೊಂಡರು. ನಂತರ ೬ ವರ್ಷಗಳ ಕಾಲ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಹಾಡುಗಾರಿಕೆಯ ಜೊತೆಗೆ ತಬಲಾ, ಹಾರ್ಮೋನಿಯಂ ಹಾಗೂ ಪಿಟೀಲು ವಾದನದಲ್ಲಿ ನಿಪುಣತೆ ಪಡೆದಿದ್ದಾರೆ. ೨೦ ನಾಟಕಗಳಲ್ಲಿ ನಟರಾಗಿ, ನಟ ಗಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ೧೯೫೮ ರಿಂದ ಧಾರವಾಡ ಆಕಾಶವಾಣಿ ಕೇಂದ್ರದಿಂದ ತಮ್ಮ ಸಂಗೀತ ಕಛೇರಿ ನೀಡುತ್ತಿದ್ದಾರೆ. ಮೈಸೂರು ಹಾಗೂ ಬೆಂಗಳೂರು ಆಕಾಶವಾಣಿ ಕೇಂದ್ರಗಳು ಇವರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಸಾರಗೊಳಿಸಿವೆ.

ಸಂಗೀತ

[ಬದಲಾಯಿಸಿ]

೧೯೬೦ರಲ್ಲಿ ಮಧ್ಯಪ್ರದೇಶ ರಾಜ್ಯದ ರಾಜಧಾನಿ ಭೂಪಾಲದ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ಕಲಾವಿದರಾಗಿ ವೃತ್ತಿಗೆ ಸೇರಿ ೩೩ ವರ್ಷ ಕಾರ್ಯ ನಿರ್ವಹಿಸಿ ೧೯೯೩ರಲ್ಲಿ ನಿವೃತ್ತಿ ಹೊಂದಿ ಭೂಪಾಲದಲ್ಲಿ ನೆಲೆಸಿದ್ದಾರೆ.

ಪ್ರಶಸ್ತಿ-ಪುರಸ್ಕಾರ

[ಬದಲಾಯಿಸಿ]

‘ಸಂಗೀತ ವಿಶಾರದ’ (ಅ.ಭಾ. ಗಂಧರ್ವ ಮಹಾ ವಿದ್ಯಾಲಯ. ಮುಂಬೈ), ‘ಸಂಗೀತ ಪ್ರವೀಣ’ (ತ್ರಯಾಗ ಸಂಗೀತ ಸಮಿತಿ, ಅಲಹಾಬಾದ), ‘ಎಂ. ಮ್ಯೂಜಿಕ್‌ (ಭೂಪಾಲ ವಿಶ್ವವಿದ್ಯಾಲಯ, ಭೂಪಾಲ) ಮುಂತಾದ ಸಂಗೀತ ಪದವಿ ಪಡೆದಿರುವ ಶ್ರೀಯುತರ ಸಂಗೀತ ಸಾಧನೆ ಪರಿಗಣಿಸಿ ಅನೇಕ ಪ್ರಶಸ್ತಿ-ಪುರಸ್ಕಾರ ಬಂದಿವೆ. ಅಂಥವುಗಳಲ್ಲಿ ಭೂಪಾಲದ ಅಭಿನವ ಕಲಾ ಪರಿಷತ್ತು ‘ಶ್ರೇಷ್ಠ ಕಲಾಚಾರ್ಯ’ ಪ್ರಶಸ್ತಿ. ‘ಸಂಸ್ಕೃತಿ ಭೂಷಣ’, ‘ರಚನಾ ಸಂಬಲ ಸಮ್ಮಾನ’ ಪ್ರಶಸ್ತಿ. ‘ಕಲಾ ಗುರು’ ಪ್ರಶಸ್ತಿ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಟಕ ಕಲಾಶ್ರೀ’ (೧೯೯೬-೯೭) ಮುಂತಾದವು.