ಸಿಂಧುತಾಯಿ ಸಪ್ಕಾಲ್

ವಿಕಿಪೀಡಿಯ ಇಂದ
Jump to navigation Jump to search

ಸಿಂಧುತಾಯಿ ಸಪ್ಕಾಲ್ (ಇಂಗ್ಲೀಷ್: Sindhutai Sapkal) , "ಅನಾಥರ ತಾಯಿ"[೧] ಎಂದು ಪ್ರೀತಿಯಿಂದ ಕರೆಯಲ್ಪಡುವ ಸಿಂಧುತಾಯಿ ಸಪ್ಕಾಲ್ ರವರು ಭಾರತದ ಸಾಮಾಜಿಕ ಕ್ರಿಯಾವಾದಿ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ವಿಶೇಷವಾಗಿ ಭಾರತದಲ್ಲಿ ಅನಾಥ ಮಕ್ಕಳನ್ನು ಬೆಳೆಸುವಲ್ಲಿ ಅವರು ಕೆಲಸ ಮಾಡಿದ್ದಾರೆ. ಸಿಂಧುತಾಯಿ ಅವರಿಗೆ ೨೦೧೬ ರಲ್ಲಿ ಡಿವೈ ಪಾಟೀಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ರಿಸರ್ಚ್ ಇಂದ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ನೀಡಲಾಗಿದೆ.

ಡಾ. ಸಿಂಧುತಾಯಿ ಸಪ್ಕಾಲ್
Sindhutai Sapkal.jpg
ಜನನ (1948-11-14) 14 November 1948 (age 70)
ವಾರ್ಧಾ, ಕೇಂದ್ರ ಪ್ರಾಂತ್ಯಗಳು ಮತ್ತು ಬೇರಾರ್, ಭಾರತ
ವಾಸಿಸುವ ಸ್ಥಳಹಡಪ್ಸರ್, ಪುಣೆ
ರಾಷ್ಟ್ರೀಯತೆಭಾರತೀಯರು
Other namesಅನಾಥರ ತಾಯಿ ಮಾಯಿ(ತಾಯಿ)
Known forಅನಾಥ ಮಕ್ಕಳಿಗೆ ಆಶ್ರಯ
ಸಂಗಾತಿ(ಗಳು)ಶ್ರೀಹರಿ ಸಪ್ಕಾಲ್
ಮಕ್ಕಳುಒಬ್ಬ ಮಗಳು ಮತ್ತು ಮೂವರು ಪುತ್ರರು
೧೦೪೨ ದತ್ತು ಮಕ್ಕಳು
Parent(s)
 • ಅಭಿಮಂಜಿ ಸತೆ (father)

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

ಸಿಂಧುತಾಯಿ ಸಪ್ಕಾಲ್ ರವರು ದಿನಾಂಕ ೧೪ ನವೆಂಬರ್ ೧೯೪೮ ರಂದು ವಾರ್ಧಾ ಜಿಲ್ಲೆಯ ಮಹಾರಾಷ್ಟ್ರದ ಪಿಂಪ್ರಿ ಮೆಘೆ ಗ್ರಾಮದಲ್ಲಿ ಅಭಿನಾಂಜಿ ಸತೆ ಅವರಿಗೆ ಜನಿಸಿದರು. ಇವರ ತಂದೆ ವೃತ್ತಿಯಲ್ಲಿ ಆಕಳು ಪಾಲನೆ ಮಾಡುವ ಕುಟುಂಬದವರು. ಅನಗತ್ಯ ಮಗು ಎಂಬ ಕಾರಣ ಇಟ್ಟುಕೊಂಡು ಅವರನ್ನು ಚಿಂದಿ ಎಂದು ಹೆಸರಿನಿಂದ ಕರೆಯುತ್ತಿದ್ದರು (ಮರಾಠಿಯ "ಹರಿದ ತುಂಡು ಬಟ್ಟೆ"). ಆದಾಗ್ಯೂ, ಆಕೆಯ ತಂದೆ ಸಿಂಧುತಾಯಿಯನ್ನು ತನ್ನ ತಾಯಿಯ ಇಚ್ಛೆಗೆ ವಿರುದ್ಧವಾಗಿ ಶಿಕ್ಷಣವನ್ನು ಕೊಡಿಸುವುದರಲ್ಲಿ ಉತ್ಸುಕರಾಗಿದ್ದರು. ಆಕೆಯ ತಂದೆ ಅಭಿಮಂಜೀ ಜಾನುವಾರು ಮೇಯುವಿಕೆಯ ನೆಪದಲ್ಲಿ ಆಕೆಯನ್ನು ಶಾಲೆಗೆ ಕಳುಹಿಸಲು ಒಪ್ಪಿದ್ದರು, ತನ್ನ ಕುಟುಂಬದ ಸೀಮಿತ ಆರ್ಥಿಕ ಸಂಪನ್ಮೂಲಗಳ ಕಾರಣದಿಂದಾಗಿ ಅಲ್ಲಿ ಅವಳು 'ಬರಾಡಿ ಮರ'ದ ಎಲೆಗಳನ್ನು ಒಂದು ಸ್ಲೇಟ್ ಆಗಿ ಬಳಸುತ್ತಿದ್ದಳು. ದುರ್ಬಲ ಬಡತನ, ಕುಟುಂಬ ಜವಾಬ್ದಾರಿಗಳು ಹಾಗೂ ಬಾಲ್ಯವಿವಾಹದ ಕಾರಣಕ್ಕಾಗಿ ೪ನೇ ತರಗತಿ ಮುಗಿದ ನಂತರ ಔಪಚಾರಿಕ ಶಿಕ್ಷಣವನ್ನು ತೊರೆಯುವಂತೆ ಮಾಡಿತು.[೨]

ಮದುವೆ ಮತ್ತು ಆರಂಭಿಕ ಕೆಲಸ[ಬದಲಾಯಿಸಿ]

ಸಿಂಧುತಾಯಿ ಹತ್ತು ವರ್ಷದವರಾಗಿದ್ದಾಗ ವಾರ್ಧಾ ಜಿಲ್ಲೆಯ ನವಾರ್ಗಾಂವ್ ಗ್ರಾಮದ ೩೦-ವರ್ಷ ವಯಸ್ಸಿನ ಧನಕಾಯುವ ವೃತ್ತಿಯ ಶ್ರೀಹರಿ ಸಪ್ಕಾಲ್ ಅಲಿಯಾಸ್ ಹರ್ಬಾಜಿಯನ್ನು ಅವರು ಮದುವೆಯಾದರು. ಆಕೆ ಇಪ್ಪತ್ತರ ವಯಸ್ಸಿನಲ್ಲಿ ಮೂರು ಗಂಡುಮಕ್ಕಳ ತಾಯಿಯಾಗಿದ್ದಳು. ಹಳ್ಳಿಗರಿಗೆ ಏನನ್ನೂ ಪಾವತಿಸದೆ, ಭಾರತದಲ್ಲಿ ಇಂಧನವಾಗಿ ಬಳಸುತ್ತಿದ್ದ ಹಸುವಿನ ಒಣಗಿದ ಸಗಣಿಯನ್ನು ಗ್ರಾಮಸ್ಥರಿಂದ ಸಂಗ್ರಹಿಸಿ, ಅರಣ್ಯ ಇಲಾಖೆಯೊಡನೆ ಅದನ್ನು ಮಾರಾಟ ಮಾಡುವ ಸ್ಥಳೀಯ ಬಲಪಂಥೀಯರ ವಿರುದ್ಧ ಅವರು ಯಶಸ್ವಿ ಚಳವಳಿ ನಡೆಸಿದರು. ಆಕೆಯ ಆಂದೋಲನ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ತನ್ನ ಹಳ್ಳಿಗೆ ಕರೆ ತರುವಂತೆ ಮಾಡಿತು. ಅವಳ ನಿಲುವು ಸರಿ ಎಂದು ಅರಿವಾದಾಗ, ಜಿಲ್ಲಾಧಿಕಾರಿ ಸಿಂಧುತಾಯಿ ಪರವಾಗಿ ಆದೇಶವನ್ನು ಜಾರಿಗೊಳಿಸಿದರು, ಇದು ಸ್ಥಳೀಯ ಬಲಪಂಥೀಯನಿಗೆ ಬೇಸರವನ್ನುಂಟು ಮಾಡಿತು. ಕುಪಿತಗೊಂಡ ಬಲಪಂಥೀಯನು ಬಡ ಮಹಿಳೆಯ ಕೈಯಲ್ಲಿ ಆದ ಅವಮಾನವನ್ನು ತಾಳಲಾರದೆ, ೯ ತಿಂಗಳು ತುಂಬು ಗರ್ಭಿಣಿಯಾದ ಸಿಂಧುತಾಯಿಯನ್ನು ತ್ಯಜಿಸುವಂತೆ ಇಲ್ಲಸಲ್ಲದ ಆರೋಪವನ್ನು ಮಾಡಿ, ಆಕೆಯು ತನ್ನೋಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಹಾಗೂ ಆಕೆಯ ಹೊಟ್ಟೆಯಲ್ಲಿರುವ ಮಗುವೂ ಕೂಡ ಆತನದ್ದೆ ಎಂಬ ಸುಳ್ಳಾರೋಪ ಮಾಡಿ ಆಕೆಯ ಗಂಡನಿಗೆ ಮನವೊಲಿಸುತ್ತಾನೆ. ಕೋಪಗೊಂಡ ಗಂಡನು ಆಕೆಯನ್ನು ಹಸುಗಳ ದೊಡ್ಡಿಯಲ್ಲಿಗೆ ಎಳೆತಂದು ಬಲವಾಗಿ ಥಳಿಸುತ್ತಿರುವಾಗ ತನ್ನ ಪ್ರಸವದ ಬೇನೆಯಿಂದಾಗಿ ೧೪ ಅಕ್ಟೋಬರ್ ೧೯೭೩ ರಂದು ಆಕೆಯ ಮನೆಯ ಹೊರಗೆ ಒಂದು ಹಸುವಿನ ಆಶ್ರಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ, ಆಕೆಯು ತಾನೇ ಸ್ವತಃ ತನ್ನ ತಾಯಿಯ ಸ್ಥಳಕ್ಕೆ ಹಲವಾರು ಕಿಲೋಮೀಟರ್ ದೂರ ನಡೆದುಕೊಂಡು ಹೋಗಿದ್ದಳು.

ಆಕೆಯ ತಾಯಿ ಆಶ್ರಯಿಸಲು ನಿರಾಕರಿಸಿದರು. ನಂತರ ಆಕೆ ಆತ್ಮಹತ್ಯೆಯ ಆಲೋಚನೆಯನ್ನು ಪಕ್ಕಕ್ಕೆ ಹಾಕಿ ಆಹಾರಕ್ಕಾಗಿ ರೈಲ್ವೆ ಪ್ಲಾಟ್ ಫಾರಂಗಳಲ್ಲಿ ಬಿಕ್ಷೆ ಬೇಡತೊಡಗಿದಳು. ಈ ಸಮಯದಲ್ಲಿ ಹೆತ್ತವರು ಅನೇಕ ಮಕ್ಕಳನ್ನು ಅನಾಥರಾಗಿ ಕೈಬಿಟ್ಟಿದ್ದಾರೆ ಎಂದು ಅವರು ಅರಿತುಕೊಂಡರು ಮತ್ತು ಆ ಮಕ್ಕಳನ್ನು ರಕ್ಷಿಸಲು ಹಾಗೂ ಆ ಮಕ್ಕಳಿಗೆ ಆಹಾರ ಒದಗಿಸಲು ಇನ್ನು ಹೆಚ್ಚಾಗಿ ಬಿಕ್ಷಾಟಣೆ ಮಾಡಲು ಮುಂದಾದರು. ಅನಾಥರಾಗಿ ಯಾರಾದರೂ ಆಕೆಯ ಬಳಿಗೆ ಬಂದರೆ ಅವರಿಗೆ ತಾಯಿಯಾಗಿರಲು ನಿರ್ಧರಿಸಿದರು. ನಂತರ ಅವಳ ಪುತ್ರಿ ಮತ್ತು ದತ್ತು ಮಕ್ಕಳ ನಡುವಿನ ಭೇದ-ಭಾವವನ್ನು ತೊಡೆದುಹಾಕಲು ಆಕೆ ತನ್ನ ಸ್ವಂತ ಮಗುವನ್ನು ಪುಣೆ ಟ್ರಸ್ಟ್ ಶ್ರೀಮಂತ್ ದಗ್ಡು ಶೆತ್ ಹಾಲ್ವಾಯಿಗೆ ದಾನ ಮಾಡಿದರು.[೩]

ನಂತರದ ಕಾರ್ಯಗಳು[ಬದಲಾಯಿಸಿ]

ಸಿಂಧುತಾಯಿ ಸಪ್ಕಾಲ್ ರವರು ಇಡೀ ಜೀವನವನ್ನು ಅನಾಥರಿಗೆ ಅರ್ಪಿಸಿಕೊಂಡಿದ್ದಾರೆ. ಇದರ ಫಲವಾಗಿ, ಆಕೆಗೆ 'ಮಾಯಿ' (ತಾಯಿ) ಎಂಬ ಹೆಸರಿನಿಂದ ಗುರುತಿಸುತ್ತಾರೆ. ಇವರು ಸುಮಾರು ೧,೦೫೦ ಅನಾಥ ಮಕ್ಕಳನ್ನು ಪೋಷಿಸಿದ್ದಾರೆ. ಇಲ್ಲಿಯವರೆ ಅವರ ಬೃಹತ್ ಕುಟುಂಬದಲ್ಲಿ ೨೦೭ ಅಳಿಯಂದಿರು, ೩೬ ಸೊಸೆಯಂದಿರು ಹಾಗೂ ಸುಮಾರು ೧ ಸಾವಿರ ಮೊಮ್ಮಕ್ಕಳನ್ನು ಹೊಂದಿದ್ದಾರೆ. ಇವರು ಇಂದಿಗೂ ಕೂಡ ಆಹಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರು ದತ್ತು ಪಡೆದು ಪೋಷಿಸಿದ ಅನೇಕ ಮಕ್ಕಳು ಹಾಗೂ ತಮ್ಮ ಸ್ವಂತ ಮಕ್ಕಳೂ ಕೂಡ ವಿದ್ಯಾವಂತ ವಕೀಲರು, ವೈದ್ಯರು ಆಗಿದ್ದಾರೆ. ಅವರಲ್ಲಿ ಕೆಲವರು ತಮ್ಮ ಸ್ವತಂತ್ರ ಅನಾಥಾಶ್ರಮಗಳನ್ನು ನಡೆಸುತ್ತಿದ್ದಾರೆ. ತನ್ನ ಮಕ್ಕಳಲ್ಲಿ ಒಬ್ಬರು ಈಕೆಯ ಜೀವನದ ಬಗ್ಗೆ ಪಿ.ಹೆಚ್.ಡಿ ಮಾಡುತ್ತಿದ್ದಾರೆ. ತನ್ನ ಸಮರ್ಪಣೆ ಮತ್ತು ಸೇವಾ ಕಾರ್ಯಕ್ಕಾಗಿ ೨೭೩ ಕ್ಕೂ ಹೆಚ್ಚಿನ ಪ್ರಶಸ್ತಿಗಳನ್ನು ಅವರು ಸ್ವೀಕರಿಸಿದ್ದಾರೆ. ಆಕೆಯ ಮಕ್ಕಳಿಗಾಗಿ ಮನೆ ಮಾಡಲು ಭೂಮಿಯನ್ನು ಖರೀದಿಸಲು ಅವರು ಪ್ರಶಸ್ತಿ ಹಣವನ್ನು ಬಳಸಿದ್ದಾರೆ. ಮನೆ ನಿರ್ಮಾಣ ಆರಂಭವಾಗಿದ್ದು ಮತ್ತು ಅವರು ಇನ್ನೂ ಹೆಚ್ಚಿನ ಸಹಾಯಕ್ಕಾಗಿ ಸಮಾಜದ ಮೊರೆ ಹೋಗಿದ್ದಾರೆ. ಪುಣೆಯ ಹಾದಪ್ಸಾರ್ನಲ್ಲಿ ಮಂಜರಿ ಎಂಬ ಪ್ರದೇಶದಲ್ಲಿ 'ಸನ್ಮತಿ ಬಾಲ್ ನಿಕೆತನ್' ಅನ್ನು ನಿರ್ಮಿಸಲಾಗಿದ್ದು, ಅಲ್ಲಿ ೩೦೦ ಕ್ಕಿಂತ ಹೆಚ್ಚು ಮಕ್ಕಳು ವಾಸಿಸುತ್ತಾರೆ.

೮೦ ನೇ ವಯಸ್ಸಿನಲ್ಲಿ, ಅವಳ ಪತಿ ಕ್ಷಮೆಯಾಚಿಸುತ್ತಾ ಬಂದನು. ಈಗ ಆತನನ್ನು ಗಂಡನಾಗಿ ಸ್ವೀಕರಿಸದೆ, ಕೇವಲ ಒಬ್ಬ ತಾಯಿಯಾಗಿ ತನ್ನ ಗಂಡನನ್ನು ಪೋಷಿಸುತ್ತಿದ್ದಾಳೆ. ಯಾರಾದರೂ ಆಶ್ರಮವನ್ನು ಭೇಟಿ ಮಾಡಿದರೆ, ಆಕೆ ಹೆಮ್ಮೆಯಿಂದ ಮತ್ತು ತುಂಬಾ ಪ್ರೀತಿಯಿಂದ ಆತನನ್ನು ತನ್ನ ಹಿರಿಯ ಮಗು ಎಂದು ಪರಿಚಯಿಸುತ್ತಾಳೆ! ವೈಯಕ್ತಿಕವಾಗಿ, ಅವರು ಅನಿಯಮಿತ ಶಕ್ತಿಯಂತೆ ಮತ್ತು ಅತ್ಯಂತ ಶಕ್ತಿಯುತ ಪ್ರೇರಣೆಯಾಗಿ ಕಾಣುತ್ತಾರೆ, ಯಾವುದೇ ನಕಾರಾತ್ಮಕ ಭಾವನೆಗಳಿಲ್ಲದೆ, ಯಾರನ್ನೂ ದೂಷಿಸದೆ ಬದುಕುತ್ತಿದ್ದಾರೆ.

೨೦೧೦ ರಲ್ಲಿ ಬಿಡುಗಡೆಯಾದ ಮಿ ಸಿಂಧುತಾಯಿ ಸಪ್ಕಾಲ್ ಎಂಬ ಮರಾಠಿ ಭಾಷೆಯ ಚಿತ್ರ ಸಿಂಧುತಾಯಿ ಸಪ್ಕಾಲ್ ನ ಜೀವನದ ನಿಜವಾದ ಕಥೆಯಿಂದ ಪ್ರೇರಣೆ ಪಡೆದಿದೆ. ೫೪ನೇ ಲಂಡನ್ ಫಿಲ್ಮ್ ಫೆಸ್ಟಿವಲ್ಲ್ ನಲ್ಲಿ ಈ ಚಲನಚಿತ್ರವು ತನ್ನ ಪ್ರಥಮ ಪ್ರದರ್ಶನಕ್ಕಾಗಿ ಆಯ್ಕೆಯಾಯಿತು.

ಎಂಬತ್ನಾಲ್ಕು ಹಳ್ಳಿಗಳ ಪುನರ್ವಸತಿಗಾಗಿ ಸಿಂಧುತಾಯಿ ಹೋರಾಡಿದರು. ಈ ಆಂದೋಲನದ ಸಂದರ್ಭದಲ್ಲಿ ಅವರು ಆಗಿನ ಅರಣ್ಯ ಸಚಿವರಾದ ಚೇದಿಲಾಲ್ ಗುಪ್ತಾ ಅವರನ್ನು ಭೇಟಿಯಾದರು. ಸರ್ಕಾರವು ಪರ್ಯಾಯ ಸ್ಥಳ ಹಾಗೂ ಸೂಕ್ತ ವ್ಯವಸ್ಥೆಗಳನ್ನು ಒದಗಿಸುವ ತನಕ ಗ್ರಾಮಸ್ಥರನ್ನು ಸ್ಥಳಾಂತರಿಸಬಾರದು ಎಂದು ಅವರು ಒಪ್ಪಿದರು.

ಕಾರ್ಯಾ ನಿರ್ವಹಿಸಿತ್ತಿರುವ ಸಂಸ್ಥೆಗಳು[ಬದಲಾಯಿಸಿ]

 • ಸನ್ಮತಿ ಬಾಲ್ ನಿಕೇತನ್, ಬೆಲ್ಹೇಕರ್ ವಾಸ್ತಿ, ಪುಣೆಯ ಹಾಡಪ್ಸರ್
 • ಮಮತಾ ಬಾಲ್ ಸದಾನನ್, ಕುಂಬಾರ್ವಲಾನ್, ಸಾಸ್ವಾಡ್
 • ಮಾಯಿ ಆಶ್ರಮ ಚಿಕಲ್ದಾರಾ, ಅಮರಾವತಿ
 • ಅಭಿಮನ್ ಬಾಲ್ ಭವನ, ವಾರ್ಧಾ
 • ಗಂಗಾಧರ್ ಬಾಬ ಛತ್ರಾಲಯ, ಗುಹಾ
 • ಸಪ್ತಿಂದೂ ಮಹಿಳಾ ಆಧರ್, ಬಾಲ್ ಸಂಗೋಪನ್ ಆನಿ ಶಿಕ್ಷನ್ ಸಂಸ್ಥಾನ, ಪುಣೆ

ಪ್ರಶಸ್ತಿಗಳು[ಬದಲಾಯಿಸಿ]

ಸಿಂಧುತಾಯಿ ಸಪ್ಕಾಲ್ ರವರಿಗೆ ೭೫೦ ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಲಾಗಿದೆ.

 • ೨೦೧೭- ೨೦೧೮ ರ ಮಾರ್ಚ್ ೮ ರಂದು ಮಹಿಳಾ ದಿನದಂದು ಸಿಂಧುತಾಯಿ ಸಪ್ಕಾಲ್ ಅವರಿಗೆ ರಾಷ್ಟ್ರಪತಿಯವರು ನಾರಿ ಶಕ್ತಿ ಪ್ರಶಸ್ತಿ ೨೦೧೭ ಪ್ರಶಸ್ತಿ ನೀಡಿ ಗೌರವಿಸಿದರು.[೪] ಇದು ಮಹಿಳೆಯರಿಗೆ ಸಿಗುವ ಅತ್ಯುನ್ನತ ನಾಗರಿಕ ಪ್ರಶಸ್ತಿ.
 • ೨೦೧೬- ವೊಕ್ಹಾರ್ಡ್ ಫೌಂಡೇಶನ್ ರವರಿಂದ ೨೦೧೬ರ ವರ್ಷದ ಸಮಾಜ ಕಾರ್ಯಕರ್ತೆ ಎಂಬ ಪ್ರಶಸ್ತಿ ಸ್ವೀಕಾರ.
 • ೨೦೧೫ - ಅಹಮಡಿಯ ಮುಸ್ಲಿಂ ಶಾಂತಿ ಪ್ರಶಸ್ತಿ ೨೦೧೪[೫]
 • ೨೦೧೪ - ಬಸವ ಸೇವಾ ಸಂಘ ಪುಣೆನಿಂದ ನೀಡಲ್ಪಟ್ಟ ಬಸವ ಭೂಷಣ ಪುರಸ್ಕಾರ ೨೦೧೪.
 • ೨೦೧೩ - ಸಾಮಾಜಿಕ ನ್ಯಾಯಕ್ಕಾಗಿ ಮದರ್ ತೆರೇಸಾ ಪ್ರಶಸ್ತಿ.[೬][೭]
 • ೨೦೧೩ - ಐಕಾನಿಕ್ ತಾಯಿಯ ರಾಷ್ಟ್ರೀಯ ಪ್ರಶಸ್ತಿ (ಮೊದಲ ಸ್ವೀಕೃತದಾರರು)[೮]
 • ೨೦೧೨ - ಸಿಎನ್ಎನ್-ಐಬಿಎನ್ ಮತ್ತು ರಿಲಯನ್ಸ್ ಫೌಂಡೇಶನ್ ನೀಡಿದ ರಿಯಲ್ ಹೀರೋಸ್ ಪ್ರಶಸ್ತಿ.[೯]
 • ೨೦೧೨- ಪುಣೆ ಕಾಲೇಜ್ ಆಫ್ ಇಂಜಿನಿಯರಿಂಗ್ ನೀಡಿದ COEP ಗೌರವ್ ಪುರಸ್ಕಾರ್.
 • ೨೦೧೦ - ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ಮಹಾರಾಷ್ಟ್ರ ಸರ್ಕಾರ ನೀಡಿದ ಅಹಲ್ಯಾಬಾಯಿ ಹೋಳ್ಕರ್ ಪ್ರಶಸ್ತಿ.[೧೦]
 • ೨೦೦೮ - ವಾರ್ಷಿಕ ಮರಾಠಿ ದಿನಪತ್ರಿಕೆ ಲೋಕಸತ್ತಾ ನೀಡಿದ ವರ್ಷದ ಮಹಿಳಾ ಪ್ರಶಸ್ತಿ
 • ೧೯೯೬ - ಸುನ್ತಾ ಕಲಾನಿಕೇತನ ಟ್ರಸ್ಟ್ (ಲೇಟ್ ಸುನೀತಾ ಟ್ರೈಂಬಕ್ ಕುಲಕರ್ಣಿ ನೆನಪುಗಳಲ್ಲಿ), ಟಾಲ್ - ಶ್ರೀರಾಂಪುರ್ ಜಿಲ್ಲೆ ಅಹ್ಮದ್ನಗರದಿಂದ ಲಾಭರಹಿತ ಸಂಸ್ಥೆಯಿಂದ ನೀಡಲ್ಪಟ್ಟ ದತ್ತಕ್ ಮಾತಾ ಪರ್ಸ್ಕರ್. ಮಹಾರಾಷ್ಟ್ರ ಪುಣೆ.[೧೧]
 • ೧೯೯೨ - ಪ್ರಮುಖ ಸಾಮಾಜಿಕ ಕೊಡುಗೆ ಪ್ರಶಸ್ತಿ.
 • ಸಹ್ಯಾದ್ರಿ ಹಿರ್ಕನಿ ಪ್ರಶಸ್ತಿ (ಮರಾಠಿ: सह्याद्रीची हिरकणी पुरस्कार)
 • ರಾಜಾಯಿ ಪ್ರಶಸ್ತಿ (ಮರಾಠಿ:राजाई पुरस्कार)
 • ಶಿವಲಿಲಾ ಮಹಿಳಾ ಗೌರವ್ ಪ್ರಶಸ್ತಿ (ಮರಾಠಿ:शिवलीला महिला गौरव पुरस्कार)

ಚಲನಚಿತ್ರ[ಬದಲಾಯಿಸಿ]

೨೦೧೦ ರಲ್ಲಿ ಬಿಡುಗಡೆಯಾದ ಮಿ ಸಿಂಧುತಾಯಿ ಸಪ್ಕಾಲ್ ಎಂಬ ಮರಾಠಿ ಭಾಷೆಯ ಚಿತ್ರ ಸಿಂಧುತಾಯಿ ಸಪ್ಕಾಲ್ ನ ಜೀವನದ ನಿಜವಾದ ಕಥೆಯಿಂದ ಪ್ರೇರಣೆ ಪಡೆದಿದೆ. ೫೪ನೇ ಲಂಡನ್ ಫಿಲ್ಮ್ ಫೆಸ್ಟಿವಲ್ಲ್ ನಲ್ಲಿ ಈ ಚಲನಚಿತ್ರವು ತನ್ನ ಪ್ರಥಮ ಪ್ರದರ್ಶನಕ್ಕಾಗಿ ಆಯ್ಕೆಯಾಯಿತು.[೧೨]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಭಾರತದ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕಾರ ರಾಮ್ ನಾಥ್ ಕೋವಿಂದ್

ಉಲ್ಲೇಖಗಳು[ಬದಲಾಯಿಸಿ]