ಸಿಂಗಪೂರಿನಲ್ಲಿ ರಾಜಾ ಕುಳ್ಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಷ್ಣುವರ್ಧನ್, ಮಂಜುಳಾ, ದ್ವಾರಕೀಶ್, ಲೋಕನಾಥ್ ಮತ್ತು ತೂಗುದೀಪ ಶ್ರೀನಿವಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಸಿ.ವಿ. ರಾಜೇಂದ್ರನ್ ನಿರ್ದೇಶಿಸಿದ "ಸಿಂಗಪೂರಿನಲ್ಲಿ ರಾಜಾ ಕುಳ್ಳ", 1978ರಲ್ಲಿ ಬಿಡುಗಡೆಗೊಂಡ ಕನ್ನಡ ಭಾಷೆಯ ಪೂರ್ಣ ಪ್ರಮಾಣದ ಆಕ್ಷನ್ ಸಸ್ಪೆನ್ಸ್ ಕಥೆಯುಳ್ಳ ಚಲನಚಿತ್ರ. ಈ ಚಲನಚಿತ್ರಕ್ಕೆ ರಾಜನ್‌-ನಾಗೇಂದ್ರ ಜೋಡಿಯು ಸಂಗೀತ ಸಂಯೋಜಿಸಿದೆ. ಇದು ಭಾರತದ ಹೊರಗೆ ಚಿತ್ರೀಕರಣಗೊಂಡ ಮೊಟ್ಟಮೊದಲ ಕನ್ನಡ ಚಿತ್ರ.


ಕಥಾವಸ್ತು[ಬದಲಾಯಿಸಿ]

ವಿದೇಶದಲ್ಲಿ ಯಶಸ್ವಿ ಜೀವನದ ಮಹತ್ವಾಕಾಂಕ್ಷೆಗಳನ್ನು ಹೊತ್ತಿರುವ ಒಡವೆ ಮಾರಾಟಗಾರ ಶಿವರಾಜ್‌ (ಲೋಕನಾಥ್‌) ಜೂನೀ (ತೂಗುದೀಪ) ಎಂಬಾತನೊಂದಿಗೆ ಪಾಲುದಾರಿಕೆಯಲ್ಲಿ ಪ್ರವೇಶಿಸಿಸುತ್ತಾನೆ. ಹೀಗಾಗಿ ಇವರಿಬ್ಬರೂ ಸಿಂಗಪುರ ತಲುಪುತ್ತಾರೆ. ಇಷ್ಟೊಂದು ಮಹತ್ವಾಕಾಂಕ್ಷೆ ಹೊತ್ತಿದ್ದ ಶಿವರಾಜ್‌ ಅಗ ಗರ್ಭಿಣಿಯಾಗಿರುವ ತನ್ನ ಪತ್ನಿಯನ್ನು (ಉಮಾ ಶಿವಕುಮಾರ್‌) ಕಡೆಗಾಣಿಸಿ, ಆಕೆಯೊಂದಿಗೆ ಉದಾಸೀನತಾ ಮನೋಭಾವದೊಂದಿಗೆ ವರ್ತಿಸಿ, ತ್ಯಜಿಸಿಬಿಡುತ್ತಾನೆ. ಜೂನೀ ಕಳ್ಳಸಾಗಾಣಿಕೆ ಹಾಗೂ ಇತರೆ ಕಾನೂನು-ಬಾಹಿರ ಧಂಧೆಯಲ್ಲಿದ್ದು, ಭಾರತೀಯ ಮತ್ತು ಸಿಂಗಪೂರ್‌ ಪೊಲೀಸರು ಈತನನ್ನು ಸೆರೆಹಿಡಿಯಲು ಹುಡುಕಾಟ ನಡೆಸುತ್ತಿರುವುದು ಶಿವರಾಜ್‌ನಿಗೆ ಗೊತ್ತಿರುವುದಿಲ್ಲ.

ಜೂನೀಯನ್ನು ಸೆರೆಹಿಡಿದು ಕರೆತಂದು ಭಾರತೀಯ ಕಾನೂನಿಗೆ ಒಪ್ಪಿಸುವ ಜವಾಬ್ದಾರಿಯನ್ನು ಸಿಐಡಿ ಪತ್ತೇದಾರಿ ಗೋಪಿನಾಥ್‌ಗೆ (ಕುಳ್ಳ) (ದ್ವಾರಕೀಶ್) ಒಪ್ಪಿಸಲಾಗಿದೆ. ಏತನ್ಮಧ್ಯೆ, ಶಿವರಾಜ್‌ನ ಮಗ ರಾಜಾ (ವಿಷ್ಣುವರ್ಧನ್‌) ಹೊಟೆಲೊಂದರಲ್ಲಿ ಹಾಡುಗಾರನಾಗಿದ್ದು, ಕುಳ್ಳನೊಂದಿಗೆ ಮಿತ್ರತ್ವ ಬೆಳೆಸಿಕೊಳ್ಳುತ್ತಾನೆ. ಆದರೆ ಕುಳ್ಳ ಒಬ್ಬ ಸಿಐಡಿ ಅಧಿಕಾರಿ ಎಂಬುದು ರಾಜಾನಿಗೆ ಗೊತ್ತಿರುವುದಿಲ್ಲ.

ರಾಜಾನಿಗೆ ಹತ್ತಿರವಾಗಿರುವ ಸ್ನೇಹಿತೆ ತಾರಾಳ (ಮಂಜುಳಾ) ತಂದೆಯೂ ಸಹ ಇಂತಹದ್ದೇ ಧಂಧೆಯಲ್ಲಿ ತೊಡಗಿರುವುದು ರಾಜಾನಿಗೆ ಗೊತ್ತಿರುವುದಿಲ್ಲ. ತಾನು ಹೇಳಿದಷ್ಟು ಸೂಚನೆಗಳನ್ನು ಪಾಲಿಸಿಕೊಂಡು ಬಂದಲ್ಲಿ ತನ್ನ ಜೀವನವನ್ನು ಉತ್ತಮಗೊಳಿಸಲು ಎಲ್ಲ ಸಹಾಹ ಮಾಡುತ್ತೇನೆಂದು ತಾರಾಳ ತಂದೆ ರಾಜಾನಿಗೆ ಹೇಳುತ್ತಾನೆ. ಇದರಂತೆ, ರಾಜಾ ಸಿಂಗಪೂರಿಗೆ ತೆರಳಿ, ಹಳೆಯ ದ್ವೇಷ ಕಟ್ಟಿಕೊಂಡಿರುವವನೊಬ್ಬನನ್ನು ಕೊಲ್ಲಲು ರಾಜಾನಿಗೆ ಸೂಚನೆ ನೀಡುತ್ತಾನೆ. ರಾಜಾನಿಗೆ ಇದು ಇಷ್ಟವಿರುವುದಿಲ್ಲ, ಆದರೂ ಸಹ ಆತ ಸಿಂಗಪೂರಿಗೆ ಹೋಗುತ್ತಾನೆ. ಈ ಕೊಲೆ ನಡೆಸಲು ರಾಜಾನಿಗೆ ಇಷ್ಟವಿಲ್ಲದಿರುವುದು ತಾರಾಳ ತಂದಗೆ ಸುಳಿವು ಸಿಗುತ್ತದೆ. ಹಾಗಾಗಿ, ರಾಜಾನನ್ನು ಕೊಲ್ಲಲು ತಾರಾಳ ತಂದೆ ಸಿಂಗಪೂರಿನಲ್ಲಿರುವ ತನ್ನ ಸಹಚರರಿಗೆ ನಿರ್ದೇಶಿಸುತ್ತಾನೆ. ತನ್ನ ತಂದೆ ರಾಜಾನನ್ನು ಕೊಲ್ಲಲು ದೂರವಾಣಿಯಲ್ಲಿ ಈ ಸೂಚನೆ ನೀಡುತ್ತಿರುವುದನ್ನು ತಾರಾಗೆ ಕೇಳಿಸಿಬಿಡುತ್ತದೆ. ಈಕೆ ಕೂಡಲೇ ಸಿಂಗಪೂರಿಗೆ ತೆರಳಿ, ಅಲ್ಲಿ ರಾಜಾನನ್ನು ಭೇಟಿಯಾಗಿ ಎಚ್ಚರಿಸುತ್ತಾಳೆ. ಘಟನೆಗಳ ಈ ಜಾಡುಗಳಿಂದ ತನಗೆ ನಿಜವಾಗಿಯೂ ಗೊಂದಲವುಂಟಾಗುತ್ತಿದೆ ಎಂದು ರಾಜಾ ತಾರಾಳಿಗೆ ಹೇಳುತ್ತಾನೆ.

ಏತನ್ಮಧ್ಯೆ, ಕುಳ್ಳನೂ ಸಹ ತನ್ನ ಕಾರ್ಯನಿಮಿತ್ತ ಸಿಂಗಪುರ ತಲುಪುತ್ತಾನೆ. ಆದರೆ, ಕುಳ್ಳನು ರಾಜಾನನ್ನು ಸಹ ಹಿಡಿಯಲು ಹೊರಟಿದ್ದಾನೆ. ರಾಜಾ ಸಿಂಗಪೂರಿಗೆ ಬಂದು ಉದ್ಯಮಿಯೊಬ್ಬರನ್ನು ಕೊಲ್ಲಲು ಹೊರಟಿದ್ದಾನೆ ಎಂದು ಬಲವಾಗಿ ನಂಬಿರುವ ಕುಳ್ಳ, ರಾಜಾನೊಂದಿಗೆ ಪದೇ-ಪದೇ ಘರ್ಷಣೆಯಲ್ಲಿ ತೊಡಗುತ್ತಾನೆ. ರಾಜಾ-ಕುಳ್ಳರ ನಡುವೆ ಬಹಳಷ್ಟು ಹೊಡತ-ಬಡಿತ-ಕದನ-ಕಾದಾಟದ ಪ್ರಸಂಗಗಳು ನಡೆಯುತ್ತವೆ. ಕುಳ್ಳನಿಗೆ ದೂರದರ್ಶನ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಿಂಗಪುರದ ಯುವತಿ ಫೆಲಿನಾಳೊಂದಿಗೆ ಪರಿಚಯವಾಗಿ ಪರಸ್ಪರ ಪ್ರೇಮಾಂಕುರವೂ ಆಗುತ್ತದೆ.

ರಾಜಾ ಒಂದು ಹೋಟೆಲ್ ಲೋಕನಾಥ್ ಭೇಟಿಯಾಗುತ್ತಾನೆ ಮತ್ತು ತಕ್ಷಣ ತನ್ನ ತಾಯಿ (ಉಮಾ ಶಿವಕುಮಾರ್) ತಮ್ಮ ಕಿರಿಯ ದಿನಗಳಲ್ಲಿ ತನ್ನ ಮತ್ತು ಲೋಕನಾಥ್ ಅವರಿಗೆ ನೀಡಿದ ಫೋಟೋ ನೋಡುತ್ತದೆ.

ರಾಜಾ ಸಿಂಗಪುರದ ಹೊಟೆಲೊಂದರಲ್ಲಿ ಶಿವರಾಜ್‌ನನ್ನು ಭೇಟಿಯಾಗುತ್ತಾನೆ. ಕೂಡಲೇ, ರಾಜಾ ತನ್ನ ತಾಯಿ ಯೌವನ ಕಾಲದಲ್ಲಿ ಪತಿಯೊಂದಿಗೆ ತೆಗೆಸಿಕೊಂಡ ಭಾವಚಿತ್ರವೊಂದನ್ನು ಹೊರತೆಗೆದು ಅದರಲ್ಲಿರುವ ಮನುಷ್ಯನನ್ನು ಗಮನಿಸಿ, ಶಿವರಾಜ್‌ನತ್ತ ತುಂಬ ಹೊತ್ತು ನೋಡುತ್ತಾನೆ. ಇದನ್ನು ಗಮನಿಸಿದ ಶಿವರಾಜ್‌, ರಾಜನನ್ನು ತಾನು ಯಾರು, ಎಲ್ಲಿಂದ ಬಂದಿರುವೆ ಎಂದು ವಿಚಾರಿಸುತ್ತಾನೆ. ರಾಜಾ ತನ್ನನ್ನು ಸ್ವತಃ ಪರಿಚಯಿಸಿಕೊಂಡು, ತಾನು ಬೆಂಗಳೂರಿನಿಂದ ಬಂದಿರುವೆನೆಂದು ತಿಳಿಸುತ್ತಾನೆ. ಇದನ್ನು ಕೇಳಿದೊಡನೆಯೇ ಶಿವರಾಜ್‌ ಅವಾಕ್ಕಾಗುತ್ತಾನೆ. ಇದನ್ನು ಗಮನಿಸಿದ ರಾಜಾ, ಏಕೆ, ಅಲ್ಲಿ ನಿಮಗೆ ಬಹಳ ಬೇಕಾದವರು ಯಾರಾದರೂ ಇದ್ದಾರಾ ಎಂದು ಪ್ರಶ್ನಿಸುತ್ತಾನೆ. ಈ ಪ್ರಶ್ನೆ ಕೇಳಿ ಶಿವರಾಜ್‌ ಸಿಡಿಮಿಡಿಗೊಳ್ಳುತ್ತಾನೆ. ಹಿಂದೆ ತಿರುಗೆ ಹೊರಹೋಗುತ್ತಿರುವಂತೆ, ರಾಜಾ ಆ ಭಾವಚಿತ್ರವನ್ನು ಬೇಕೆಂದಲೇ ನೆಲಕ್ಕೆ ಬೀಳಿಸಿ, ತಾವು ಏನನ್ನೋ ಬೀಳಿಸಿ ಹೋಗುತ್ತಿರುವಿರಿ ಎಂದು ರಾಜಾ ಶಿವರಾಜ್‌ನಿಗೆ ಕೂಗಿ ಗಮನ ಸೆಳೆಯುತ್ತಾನೆ. ಭಾವಚಿತ್ರವನ್ನು ಕೈಗೆತ್ತಿಕೊಂಡು, ಅದರಲ್ಲಿರುವುದು ತಾನು ಮತ್ತು ತನ್ನ ಹೆಂಡತಿ ಎಂಬುದನ್ನು ಗಮನಿಸಿ ಶಿವರಾಜ್‌ ಚಕಿತಗೊಳ್ಳುತ್ತಾನೆ.

ಮತ್ತೊಮ್ಮೆ ತೀವ್ರ ಸೆಣಸಾಟ ನಡೆಸಿದ ನಂತರ ರಾಜಾ-ಕುಳ್ಳರಿಬ್ಬರೂ ಶಿವರಾಜ್‌ನನ್ನು ಭೇಟಿಯಾಗುತ್ತಾರೆ. ಈತನು ಜೂನೀಯೊಂದಿಗಿನ ಧಂಧೆಯಲ್ಲಿ ಸಿಲುಕಿರುವ ಪರಿಸ್ಥಿತಿಯನ್ನು ರಾಜಾ-ಕುಳ್ಳರಿಗೆ ವಿವರವಾಗಿ ತಿಳಿಸುತ್ತಾನೆ. ಈ ಪರಿಸ್ಥಿತಿಯಿಂದ ಪಾರಾಗಲು ನೆರವಾಗುತ್ತೇನೆಂದು ಕುಳ್ಳ ಶಿವರಾಜ್‌ನಿಗೆ ಭರವಸೆ ನೀಡುತ್ತಾನೆ.

ಚಿತ್ರದಲ್ಲಿ ಅನೇಕ ತಿರುವುಗಳು, ತಂತ್ರ-ಪ್ರತಿತಂತ್ರಗಳು ನಡೆಯುತ್ತವೆ. ಫೆಲಿನಾ ತಮ್ಮ ಬಗ್ಗೆ ಮಾಹಿತಿಯನ್ನು ಕುಳ್ಳನಿಗೆ ರವಾನಿಸುತ್ತಿದ್ದಾಳೆಂದು ಶಂಕಿಸಿದ ಜೂನೀ ಸಹಚರರು ಆಕೆಯನ್ನು ಹತ್ಯೆ ಮಾಡುತ್ತಾರೆ. ಅಂತ್ಯದಲ್ಲಿ ರಾಜಾ ಮತ್ತು ಕುಳ್ಳ ಜೂನೀಯನ್ನು ಬೆನ್ನಟ್ಟಿ ಆತನೊಂದಿಗೆ ಕಾದಾಡುತ್ತಾರೆ. ಜೂನೀ ತಪ್ಪಿಸಿಕೊಂಡು ಓಡಿ ಹೆಲಿಕಾಪ್ಟರನ್ನು ಹತ್ತಲು ಯತ್ನಿಸುವಾಗ, ಅದರೊಳಗೆ ಅಡಗಿರುವ ಕುಳ್ಳ ಆತನನ್ನು ಕಾಲಲ್ಲಿ ತಳ್ಳಿ ಕೆಳಗೆ ನೂಕುತ್ತಾನೆ. ತಕ್ಷಣ, ಕುಳ್ಳನ ಸಹಯೋಗಿ - ಸಿಂಗಪುರದ ಒಬ್ಬ ಪೊಲೀಸ್‌ ಅಧಿಕಾರಿ, ಜೂನೀಯತ್ತ ಗುಂಡು ಹಾರಿಸಿ ಕೊಲ್ಲುತ್ತಾನೆ. ರಾಜಾ ಹಾಗೂ ಅವನ ತಂದೆ ಶಿವರಾಜ್‌ ಮತ್ತು ತಾಯಿಯೊಂದಿಗೆ ಮಿಲನವಾಗುತ್ತದೆ.


ಪಾತ್ರವರ್ಗ[ಬದಲಾಯಿಸಿ]

ಸಂಗೀತ[ಬದಲಾಯಿಸಿ]

ಈ ಚಲನಚಿತ್ರಕ್ಕೆ ರಾಜನ್‌-ನಾಗೇಂದ್ರ ಜೋಡಿಯು ಸಂಯೋಜಿಸಿದ ಎಲ್ಲಾ ಹಾಡುಗಳಲ್ಲಿಯೂ ಜ್ಯಾಝ್‌ ಮತ್ತು ಪಾಶ್ಚಾತ್ಯ ವಾದ್ಯಗಳನ್ನೇ ಹೆಚ್ಚಾಗಿ ಬಳಸಲಾಗಿದೆ.[೧]

ಪ್ರೇಮಾ ಪ್ರೀತಿ ನನ್ನುಸಿರು - ಎಸ್.ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್

ಬೆಳ್ಳಿಯ ರಾಜಾ ಬಾರೋ - ಎಸ್ ಜಾನಕಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ

ನಿನ್ನೆ ನಿನ್ನೆಗೇ - ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್ ಜಾನಕಿ

ನನ್ನಂಥಾ ಗಂಡಿಲ್ಲ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಎಸ್ ಜಾನಕಿ, ಪಿ ಸುಶೀಲಾ


ಉಲ್ಲೇಖಗಳು‌‌

  1. http://www.saregama.com/portal/pages/music.jsp?previousRequestUrl=film?mode=get_album_info%26albumId=2301 ಸಿಂಗಪೂರಿನಲ್ಲಿ ರಾಜಾ-ಕುಳ್ಳ ಹಾಡುಗಳ ಸಂಕಲನ


ಬಾಹ್ಯ ಕೊಂಡಿಗಳು‌‌ •[5] •ಸಿಂಗಪೂರಿನಲ್ಲಿ ರಾಜಾ ಕುಳ್ಳ - KannadaMovie ಮಾಹಿತಿ ಮೇಲೆ ಚಲನಚಿತ್ರ ಪುಟ



[[ವರ್ಗ: 1978 ಚಿತ್ರಗಳು ಭಾರತೀಯ ಚಲನಚಿತ್ರಗಳು ಕನ್ನಡ ಭಾಷೆಯ ಚಿತ್ರಗಳ ಸಿಂಗಪುರದಲ್ಲಿ ಚಿತ್ರೀಕರಣಗೊಂಡ ಚಲನಚಿತ್ರಗಳುಕನ್ನಡ ಸಿನೆಮಾ]]