ಸಾಮಾನ್ಯ ಉಪನಿಷತ್ತುಗಳು

ವಿಕಿಪೀಡಿಯ ಇಂದ
Jump to navigation Jump to search

ಸಾಮಾನ್ಯ ಉಪನಿಷತ್ತುಗಳು ಅಥವಾ ಸಾಮಾನ್ಯ ವೇದಾಂತ ಉಪನಿಷತ್ತುಗಳು ಸಾಮಾನ್ಯ ಸ್ವರೂಪದ್ದಾಗಿರುವ ಹಿಂದೂ ಧರ್ಮದ ಅಪ್ರಧಾನ ಉಪನಿಷತ್ತುಗಳು. ಅವನ್ನು ನಂತರದ ಕಾಲದಲ್ಲಿ ರಚಿಸಲಾಯಿತು ಮತ್ತು ಹೆಚ್ಚು ಪ್ರಾಚೀನ ಹಾಗೂ ವೈದಿಕ ಸಂಪ್ರದಾಯಕ್ಕೆ ಸಂಪರ್ಕವಿರುವವು ಎಂದು ಪರಿಗಣಿಸಲಾದ ಹದಿಮೂರು ಪ್ರಧಾನ ಮುಖ್ಯ ಉಪನಿಷತ್ತುಗಳಿಂದ ಪ್ರತ್ಯೇಕವಾಗಿ ವರ್ಗೀಕರಿಸಲಾಗುತ್ತದೆ.[೧]

ಒಂದು ಗುಂಪಾಗಿ ಸಾಮಾನ್ಯ ಉಪನಿಷತ್ತುಗಳು ಇತರ ಅಪ್ರಧಾನ ಉಪನಿಷತ್ತುಗಳಿಂದ ಭಿನ್ನವಾಗಿವೆ. ಇತರ ಅಪ್ರಧಾನ ಉಪನಿಷತ್ತುಗಳೆಂದರೆ ಯೋಗಕ್ಕೆ ಸಂಬಂಧಿಸಿದ ಯೋಗ ಉಪನಿಷತ್ತುಗಳು, ಹಿಂದೂ ಸಂನ್ಯಾಸಾಚರಣೆಗೆ ಸಂಬಂಧಿಸಿದ ಸಂನ್ಯಾಸ ಉಪನಿಷತ್ತುಗಳು, ಶೈವ ಪಂಥಕ್ಕೆ ಸಂಬಂಧಿಸಿದ ಶೈವ ಉಪನಿಷತ್ತುಗಳು, ವೈಷ್ಣವ ಪಂಥಕ್ಕೆ ಸಂಬಂಧಿಸಿದ ವೈಷ್ಣವ ಉಪನಿಷತ್ತುಗಳು, ಮತ್ತು ಶಾಕ್ತ ಪಂಥಕ್ಕೆ ಸಂಬಂಧಿಸಿದ ಶಾಕ್ತ ಉಪನಿಷತ್ತುಗಳು.

ಸಾಮಾನ್ಯ ವೇದಾಂತ ಉಪನಿಷತ್ತುಗಳನ್ನು ನಾನಾ ರೀತಿಯಲ್ಲಿ ವರ್ಗೀಕರಿಸಲಾಗುತ್ತದೆ, ೨೧ ರ ಪಟ್ಟಿಯಿಂದ ೨೪ ರ ಪಟ್ಟಿಯವರೆಗೆ. ಎಣಿಕೆಯಲ್ಲಿ ವ್ಯತ್ಯಾಸವು ಕೆಲವು ಹಳೆಯ ಮುಖ್ಯ ಉಪನಿಷತ್ತುಗಳು ಸಾಮಾನ್ಯ ಉಪನಿಷತ್ತುಗಳೇ ಅಥವಾ ಅಲ್ಲವೇ ಎಂಬುದನ್ನು ಆಧರಿಸಿದೆ. ಕೆಲವರು ಮೂರು ಪ್ರಾಚೀನ ಉಪನಿಷತ್ತುಗಳನ್ನು ಸಾಮಾನ್ಯ ಉಪನಿಷತ್ತುಗಳಾಗಿ ಸೇರಿಸುತ್ತಾರೆ, ಇದರಿಂದ ಪಟ್ಟಿ ೨೪ ರದಾಗುತ್ತದೆ. ಆ ಮೂರು ಯಾವುವೆಂದರೆ ಶ್ವೇತಾಶ್ವತರ ಉಪನಿಷತ್ತು, ಮೈತ್ರಾಯಣೀಯ ಉಪನಿಷತ್ತು ಮತ್ತು ಕೌಶೀತಕಿ ಉಪನಿಷತ್ತು. ಇವನ್ನು ಸಾಮಾನ್ಯ ಉಪನಿಷತ್ತುಗಳಾಗಿ ಸೇರಿಸಿದರೆ, ಮುಖ್ಯ ಉಪನಿಷತ್ತುಗಳ ಪಟ್ಟಿ ಹತ್ತಕ್ಕೆ ಇಳಿಯುತ್ತದೆ. ಆದರೆ ಅನೇಕ ವಿದ್ವಾಂಸರು ಮುಖ್ಯ ಉಪನಿಷತ್ತುಗಳ ಸಂಖ್ಯೆ ಹದಿಮೂರು ಎಂದು ಪರಿಗಣಿಸುತ್ತಾರೆ.

ಮುಖ್ಯ ಉಪನಿಷತ್ತುಗಳ ಕಾಲಮಾನ ಕ್ರಿ.ಪೂ. ಎಂಟರಿಂದ ಒಂದನೇ ಶತಮಾನವಾದರೆ, ಸಾಮಾನ್ಯ ಉಪನಿಷತ್ತುಗಳ ಅಂದಾಜುಗಳು ಬದಲಾಗುತ್ತವೆ. ಮಹೋನಿಯವರ ಪ್ರಕಾರ, ಸಾಮಾನ್ಯ ಉಪನಿಷತ್ತುಗಳ ಕಾಲಮಾನ ಸುಮಾರು ಕ್ರಿ.ಪೂ. ೧೦೦ ರಿಂದ ಕ್ರಿ.ಶ. ೧೧೦೦ ವರೆಗೆ.

೨೧ ಸಾಮಾನ್ಯ ಉಪನಿಷತ್ತುಗಳೆಂದರೆ: ಗರ್ಭ ಉಪನಿಷತ್ತು, ಸುಬಾಲ ಉಪನಿಷತ್ತು, ಮಾಂತ್ರಿಕ ಉಪನಿಷತ್ತು, ಸರ್ವಸಾರ ಉಪನಿಷತ್ತು, ನಿರಾಲಂಬ ಉಪನಿಷತ್ತು, ಶುಕರಹಸ್ಯ ಉಪನಿಷತ್ತು, ವಜ್ರಸೂಚಿ ಉಪನಿಷತ್ತು, ಆತ್ಮಬೋಧ ಉಪನಿಷತ್ತು, ಸ್ಕಂದೋಪನಿಷತ್ತು, ಮುದ್ಗಲ ಉಪನಿಷತ್ತು, ಪೈಂಗಲ ಉಪನಿಷತ್ತು, ಮಹಾ ಉಪನಿಷತ್ತು, ಶಾರೀರಕ ಉಪನಿಷತ್ತು, ಏಕಾಕ್ಷರ ಉಪನಿಷತ್ತು, ಸೂರ್ಯೋಪನಿಷತ್ತು, ಅಕ್ಷಿ ಉಪನಿಷತ್ತು, ಅಧ್ಯಾತ್ಮ ಉಪನಿಷತ್ತು, ಸಾವಿತ್ರಿ ಉಪನಿಷತ್ತು, ಆತ್ಮೋಪನಿಷತ್ತು, ಪ್ರಾಣಾಗ್ನಿಹೋತ್ರ ಉಪನಿಷತ್ತು, ಮತ್ತು ಮುಕ್ತಿಕಾ ಉಪನಿಷತ್ತು.

ಉಲ್ಲೇಖಗಳು[ಬದಲಾಯಿಸಿ]

  1. William K. Mahony (1998). The Artful Universe: An Introduction to the Vedic Religious Imagination. State University of New York Press. p. 271. ISBN 978-0-7914-3579-3.