ಸಾಮಾಜಿಕ ತಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ನೇಹಿತರೊಂದಿಗೆ ಮತ್ತು ಬಂಧುವರ್ಗದವರೊಂದಿಗೆ ಸಂಪರ್ಕ ಸಾಧಿಸಲು ಅವರನ್ನು ಮುಖತಃ ಭೇಟಿಯಾಗುವುದು ಅಥವಾ ಅವರೊಂದಿಗೆ ಪತ್ರ ವ್ಯವಹಾರ ಇಟ್ಟುಕೊಳ್ಳುವುದು ಹಿಂದೊಮ್ಮೆ ಅನಿವಾರ್ಯವಾಗಿತ್ತು. ಎಲೆಕ್ಟ್ರಾನಿಕ್ ಸಂಪರ್ಕ ಸಾಧನಗಳು ಲಭ್ಯವಾದ ನಂತರ ಇ-ಮೇಲ್ ("ಮಿಂಚೆ", ಎಲೆಕ್ಟ್ರಾನಿಕ್ ಮೇಲ್) ಜನಪ್ರಿಯವಾಯಿತು. ತದನಂತರ ಸಾಮಾಜಿಕ ತಾಣಗಳು (ಸೋಷಿಯಲ್ ನೆಟ್‍ವರ್ಕಿಂಗ್) ಎಂಬ ಪರಿಕಲ್ಪನೆ ಹುಟ್ಟಿತು. ಫೇಸ್‍ಬುಕ್, ಗೂಗಲ್+, ವಾಟ್ಸಪ್ ಮೊದಲಾದ ತಾಣಗಳು ಜನಪ್ರಿಯವಾದವು [೧],[೨][೩]. ಈ ತಾಣಗಳನ್ನು ಬಳಸಲು ಖಾತೆ (ಅಕೌಂಟ್) ಅಗತ್ಯ; ಇಂಥ ಅಕೌಂಟ್ ಪಡೆಯಲು ಕೆಲವು ನಿಯಮಾವಳಿಗಳು ಇರುತ್ತವೆ, ಉದಾಹರಣೆಗೆ ಹದಿಮೂರು ವರ್ಷಕ್ಕೆ ಮೇಲ್ಪಟ್ಟವರಾಗಿರಬೇಕು, ಇತ್ಯಾದಿ. ಈ ತಾಣಗಳು ಅನೇಕ ಭಾಷೆಗಳಲ್ಲಿ ಲಭ್ಯವಾಗಿರುವುದರಿಂದ ಜಗತ್ತಿನಲ್ಲಿ ಅನೇಕ ದೇಶಗಳಲ್ಲಿ ಜನಪ್ರಿಯವಾಗಿವೆ. ಒಂದು ತಾಣದಲ್ಲಿ ನೀವು ಖಾತೆ ತೆರೆದರೆ ಅದೇ ತಾಣದಲ್ಲಿ ಖಾತೆಯನ್ನು ಹೊಂದಿದ ನಿಮ್ಮ ಮಿತ್ರರಿಗೆ ಅಥವಾ ಬಂಧುಗಳಿಗೆ ಸಂದೇಶ ಕಳಿಸಿ ಸಂಪರ್ಕ ಸಾಧಿಸಬಹುದು. ಸಾಮಾಜಿಕ ತಾಣಗಳನ್ನು ಬಳಸಲು ಯಾವುದೇ ಶುಲ್ಕ ಬೇಡ - ಏಕೆಂದರೆ ನೀವು ಕಲಿಸುವ ಸಂದೇಶಗಳನ್ನು ಗಮನಿಸಿ ನಿಮ್ಮ ಇಷ್ಟಗಳನ್ನು ಅರ್ಥ ಮಾಡಿಕೊಂಡು ಸೂಕ್ತವಾದ ಜಾಹೀರಾತುಗಳನ್ನು ನಿಮ್ಮ ತೆರೆಯ ಮೇಲೆ ಬಿಂಬಿಸುವ ತಂತ್ರಜ್ಞಾನ ಇಂದು ಲಭ್ಯ. ಜಾಹೀರಾತುಗಳ ಮೂಲಕ ಸಾಮಾಜಿಕ ತಾಣಗಳು ಗಳಿಸುತ್ತವೆ.

ಅನುಕೂಲಗಳು[ಬದಲಾಯಿಸಿ]

ಸಾಮಾಜಿಕ ತಾಣಗಳಲ್ಲಿ ಸಾಮಾನ್ಯವಾಗಿ ಲಭ್ಯವಾದ ಅನುಕೂಲಗಳು -

  • ನೀವು ಏನು ಮಾಡುತ್ತಿದ್ದೀರಿ ಎಂಬುದನ್ನು ನಿಮ್ಮ ಮಿತ್ರರಿಗೆ ತಿಳಿಸುವುದು - ಉದಾಹರಣೆಗೆ ನೀವು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಹೊರಟಿದ್ದರೆ ಅದನ್ನು ನಿಮ್ಮ ಸ್ಟೇಟಸ್‍ನಲ್ಲಿ ಹಾಕಬಹುದು (ಸ್ಥಿತಿ). ಇದನ್ನು ಗಮನಿಸಿದ ಮಿತ್ರರು ಪ್ರತಿಕ್ರಿಯೆ ನೀಡಬಹುದು. ಉದಾಹರಣೆಗೆ ದೇಹಲಿಯಲ್ಲಿರುವ ನಿಮ್ಮ ಮಿತ್ರರು "ನಮ್ಮ ಮನೆಗೆ ಬನ್ನಿ" ಎಂದು ನಿಮ್ಮನ್ನು ಸಂಪರ್ಕಿಸಬಹುದು. ಇದೇ ರೀತಿ ನೀವು ಮನೆ ಬದಲಾಯಿಸಿದರೆ, ಉದ್ಯೋಗ ಬದಲಾಯಿಸಿದರೆ, ಮದುವೆಯಾದರೆ, ಮಕ್ಕಳಾದರೆ ನಿಮ್ಮ ಮಿತ್ರರಿಗೆ/ಬಂಧುಗಳಿಗೆ ತಿಳಿಸಬಹುದು.
  • ನಿಮ್ಮ ಬಂಧುಗಳ ಜನ್ಮದಿನ ಮೊದಲಾದವನ್ನು ಕುರಿತು ಸಾಮಾಜಿಕ ತಾಣವು ನಿಮಗೆ ನೆನಪಿಸುವುದು.
  • ಕಾರ್ಯಕ್ರಮಗಳಿಗೆ ಬನ್ನಿ ಎಂದು ನಿಮ್ಮ ಮಿತ್ರರಿಗೆ ಸಂದೇಶ ಕಳಿಸಲು ಅನುಕೂಲ ಕಲ್ಪಿಸಲಾಗಿದೆ. "ಈವೆಂಟ್" (ಕಾರ್ಯಕ್ರಮ) ಸೃಷ್ಟಿಸಿ ಅದಕ್ಕೆ ಆಹ್ವಾನ ಕಳಿಸಿದರೆ ಅದನ್ನು ನಿಮ್ಮ ಮಿತ್ರರು ಸ್ವೀಕರಿಸಬಹುದು ಅಥವಾ "ಬರಲಾಗುವುದಿಲ್ಲ" ಎಂದು ತಿಳಿಸಬಹುದು.
  • ಸ್ಟೇಟಸ್ ಮೂಲಕ ಸಮಾಜದ ಆಗುಹೋಗುಗಳಿಗೆ ನಿಮ್ಮ ಪ್ರತಿಕ್ರಿಯೆ, ನಗೆಹನಿ, ಕವಿತೆ ಇತ್ಯಾದಿ ಹಂಚಿಕೊಳ್ಳಬಹುದು.
  • ಚಿತ್ರಗಳನ್ನು, ಆಡಿಯೋ-ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳಬಹುದು.

ಅನಾನುಕೂಲಗಳು[ಬದಲಾಯಿಸಿ]

  • ಸಾಮಾಜಿಕ ತಾಣದ ಬಳಕೆ ಒಂದು ಗೀಳಾಗಿ ಪರಿಣಮಿಸುವುದು, ಸಮಯ ಹಾಳಾಗುವುದು
  • ಸಾಮಾಜಿಕ ತಾಣದ ಕೃತಕ ವಿಶ್ವದಲ್ಲಿ ಬದುಕುತ್ತಾ ನಿಜಜೀವನವನ್ನು ನಿರ್ಲಕ್ಷಿಸುವುದು
  • ಸಂಬಂಧಗಳಲ್ಲಿ ಏರುಪೇರಾಗುವುದು ಉದಾ. ಗಂಡ-ಹೆಂಡಿರಲ್ಲಿ ಸಾಮಾಜಿಕ ತಾಣಗಳ ಬಳಕೆಯಿಂದ ಇರುಸು-ಮುರುಸು ಉಂಟಾಗುವುದು
  • ಅಪರಾಧ ಕಾರ್ಯಗಳಿಗೆ ಸಾಮಾಜಿಕ ತಾಣಗಳನ್ನು ಬಳಸುವುದು - ಉದಾ. ಅಸಭ್ಯ ಚಿತ್ರಗಳನ್ನು ಹಂಚುವುದು, ಹೆಣ್ಣುಮಕ್ಕಳನ್ನು ಪೀಡಿಸುವುದು, ಮಕ್ಕಳನ್ನು/ದುರ್ಬಲರನ್ನು ಪೀಡಿಸುವುದು, ಮಾದಕದ್ರವ್ಯಗಳ ಮಾರಾಟ, ಇತ್ಯಾದಿ
  • ರಾಜಕಾರಣ ಪ್ರಚಾರಕ್ಕಾಗಿ ಸಾಮಾಜಿಕ ತಾಣಗಳ ಬಳಕೆ
  • ಜನರ ಸ್ಥಿತಿಗತಿಗಳನ್ನು ಗಮನಿಸುತ್ತಾ ಸಮಾಜ ಯಾವ ಕಡೆ ಸಾಗುತ್ತಿದೆ (ಟ್ರೆಂಡ್ಸ್) ಎಂಬುದನ್ನು ತಂತ್ರಾಂಶದ ಮೂಲಕ ಅಳೆಯುವುದು ಮತ್ತು ಅದನ್ನು ನಿಯಂತ್ರಿಸಲು ಪ್ರಯತ್ನಿಸುವುದು

ಉಲ್ಲೇಖಗಳು[ಬದಲಾಯಿಸಿ]

  1. ಫೇಸ್ ಬುಕ್ ಸಾಮಾಜಿಕ ತಾಣ
  2. ಗೂಗಲ್ ಪ್ಲಸ್ ಸಾಮಾಜಿಕ ತಾಣ
  3. ವಾಟ್ಸಪ್ ಸಾಮಾಜಿಕ ತಾಣ