ಸಾಂಬ್ರಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಂಬ್ರಾಣಿಯು (ಲೋಬಾನ) ಸ್ಟೈರ‍್ಯಾಕ್ಸ್ ಕುಲದಲ್ಲಿನ ಹಲವು ಪ್ರಜಾತಿಗಳ ಮರಗಳ ತೊಗಟೆಯಿಂದ ಪಡೆಯಲಾದ ಸುವಾಸನೆಯುಳ್ಳ ರಾಳ. ಇದನ್ನು ಸುಗಂಧದ್ರವ್ಯಗಳು, ಕೆಲವು ಬಗೆಯ ಧೂಪದ್ರವ್ಯಗಳು, ಮತ್ತು ಔಷಧಿಯಲ್ಲಿ ಬಳಸಲಾಗುತ್ತದೆ. ಇಂಗ್ಲಿಷ್‍ನಲ್ಲಿ ಬೆನ್ಝೋಯಿನ್ ಎಂದು ಕರೆಯಲಾಗುತ್ತದೆ. ಇದು ಒಂದು ರಾಸಾಯನಿಕ ಸಂಯುಕ್ತವಾದ ಬೆಂಝೋಯಿನ್‍ನಿಂದ ಭಿನ್ನವಾಗಿದೆ. ಈ ಸಂಯುಕ್ತವನ್ನು ಅಂತಿಮವಾಗಿ ಈ ರಾಳದಿಂದ ಉತ್ಪಾದಿಸಲಾಗುತ್ತದಾದರೂ, ರಾಳವು ಈ ಸಂಯುಕ್ತವನ್ನು ಹೊಂದಿರುವುದಿಲ್ಲ.

ಇದರ ಸಿಹಿ ವನಿಲಾದಂತಹ ಸುಗಂಧ ಮತ್ತು ಬಂಧಕ ಗುಣಗಳ ಕಾರಣ ಇದು ಧೂಪದ್ರವ್ಯ ತಯಾರಿಕೆ ಮತ್ತು ಸುಗಂಧ ದ್ರವ್ಯಗಳಲ್ಲಿ ಸಾಮಾನ್ಯ ಪದಾರ್ಥವಾಗಿದೆ. ಸಾಂಬ್ರಾಣಿಯು ರಷ್ಯಾ ಹಾಗೂ ಕೆಲವು ಇತರ ಆರ್ಥೊಡಾಕ್ಸ್ ಕ್ರಿಶ್ಚಿಯನ್ ಸಂಘಗಳು, ಜೊತೆಗೆ ಪಾಶ್ಚಾತ್ಯ ಕ್ಯಾಥೊಲಿಕ್ ಚರ್ಚ್‌ಗಳಲ್ಲಿ ಬಳಸಲಾದ ಚರ್ಚ್ ಧೂಪದ್ರವ್ಯದ ಪ್ರಕಾರದ ಪ್ರಧಾನ ಘಟಕವಾಗಿದೆ. ಬಹುತೇಕ ಸಾಂಬ್ರಾಣಿಯನ್ನು ಪರ್ಷಿಯನ್ ಕೊಲ್ಲಿಯ ಅರಬ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಬಳಸಲಾಗುತ್ತದೆ. ಇಲ್ಲಿ ಇದನ್ನು ಧೂಪದ್ರವ್ಯವಾಗಿ ಇದ್ದಿಲಿನ ಮೇಲೆ ಸುಡಲಾಗುತ್ತದೆ.