ಸವಿತಾ ನಾಗಭೂಷಣ
ಸವಿತಾ ನಾಗಭೂಷಣ ನಮ್ಮ ನಡುವೆ ಸೂಕ್ಷ್ಮ ಮನಸ್ಸಿನ ಕಾವ್ಯ ಸಂವೇದನೆಯ ಮೂಲಕ ಗುರುತಿಸಲ್ಪಟ್ಟವರು. ಹೆಚ್ಚು ವಿಮರ್ಶೆಯ ಗೊಂದಲಗಳಿಗೆ ಗೂಡಾಗದೆ ತಾನಾಯಿತು ತನ್ನ ಕವಿತೆಯಾಯಿತು ಎಂಬ ನಿರ್ಲಿಪ್ತತೆಯಲ್ಲಿ ತನ್ನ ಅನುಭವ,ನೆನಹುಗಳಿಗೆ ಕವಿ ಭಾಷೆಯ ಉಡುಗೆ ತೊಡಿಸಿ ಕಳೆದ ನಾಲ್ಕು ದಶಕಗಳಿಂದ ಬರೆಯುತ್ತಿರುವವರು. ಬರವಣಿಗೆ ಎನ್ನುವುದು ಅವರಿಗೆ ತಾನಿರುವಷ್ಟು ಸಹಜ. ಅವರ ಕಲ್ಪನೆಯ ತೆಕ್ಕೆಗೆ ಸುತ್ತಲಿನ ಪರಿಸರ ಹೂವು,ಹಣ್ಣು, ಚಂದ್ರ, ತಾರೆ, ಭೂಮಿ, ಆಕಾಶ, ಗಿಡ, ಮರ, ಬಳ್ಳಿ ಎಲ್ಲವೂ ಕಾವ್ಯ ವಸ್ತುವಾಗಿ ಬಿಚ್ಚಿಕೊಳ್ಳುತ್ತವೆ. ತಾನು ಬದುಕುತ್ತಿರುವ ಸಮಾಜದ ನೋವು ನಲಿವುಗಳಿಗೆ ದನಿಯಾಗುತ್ತಲೇ ಅಲ್ಲಿನ ಸಮಸ್ಯೆ, ಕಾವುಗಳಿಗೆ ಸರಳ ಸಾಂತ್ವನಗಳು ಅವರ ಕವಿತೆಯಲ್ಲಿ ದೊರೆಯುತ್ತವೆ. ಒಮ್ಮೊಮ್ಮೆ ತುಂಟ ಹುಡುಗಿಯ ಕಂಠಪಾಠದಂತೆ ಅವರ ಕವಿತೆಗಳು ಹೊಸಲೋಕವೊಂದನ್ನು ನಮ್ಮ ಮುಂದೆ ತೆರೆದಿಡುತ್ತವೆ. ಶಬ್ದಗಳ ಆಡಂಬರದಲ್ಲಿ ಅವರ ಕವಿತೆಗಳು ಎಲ್ಲಿಯೂ ಮುಚ್ಚಿ ಹೋಗುವುದಿಲ್ಲ. ಸಹೃದಯ ಮನಸ್ಸು ಕವಿತೆಯ ಜಾಡು ಹಿಡಿದು ಹಿಂಬಾಲಿಸಲು ಕೊಂಚವೂ ಕಷ್ಟವಾಗದ ಹಾಗೆ ಅವರ ಬರವಣಿಗೆಯ ಶೈಲಿ ನವಿರಾಗಿದೆ; ಅಷ್ಟೇ ಪ್ರಬುದ್ಧವಾಗಿದೆ.
ಜನನ/ಜೀವನ
[ಬದಲಾಯಿಸಿ]- ೧೯೬೧ ಮೇ ೧೧ರಂದು ಚಿಕ್ಕಮಗಳೂರಿನಲ್ಲಿ ಜನಿಸಿದರು. ಸವಿತಾ ಬಿ.ಕಾಂ. ಪದವೀಧರೆ. ಇತಿಹಾಸದಲ್ಲಿ ಸ್ನಾತಕೋತ್ತರವನ್ನು ಪಡೆದಿದ್ದು ನಂತರ ೨೦ ವರ್ಷಗಳ ಕಾಲ ಅಂಚೆ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಈಗ ಸ್ವಯಂ ನಿವೃತ್ತಿ ಪಡೆದು ಪತಿ ಶ್ರೀ ಡಿ.ಎಸ್. ನಾಗಭೂಷಣರೊಂದಿಗೆ ಶಿವಮೊಗ್ಗದಲ್ಲಿ ವಾಸವಾಗಿದ್ದಾರೆ. ಇದುವರೆಗೆ ಒಟ್ಟು ಆರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
- ಇಂದು ಕಾವ್ಯದ ಅಧ್ಯಯನವೆನ್ನುವುದು ತೀರಾ ಅಕಾಡೆಮಿಕ್ ಎನ್ನುವಷ್ಟು ಗಂಭೀರವಾಗಿರುವುದರಿಂದಲೇ ಕವಿತೆ ಜನಸಾಮಾನ್ಯರಿಂದ ದೂರವಾಗುತ್ತಿರುವುದು. ಅದು ಸ್ವಚ್ಚ ಮನಸ್ಸಿನ ಭಾವಾಭಿವ್ಯಕ್ತಿ ಎನ್ನುವುದನ್ನು ಮರೆತು ಏಕ ಕಾಲದಲ್ಲಿ ನಾವು ಕವಿಯನ್ನೂ ಅವನ ಕಾಲವನ್ನು ಒಟ್ಟಾಗಿ ಗ್ರಹಿಸಲು ಹೊರಡುತ್ತೇವೆ.
- ವಿಮರ್ಶಕರಿಗಾಗಿಯೇ ನಾನು ಕವಿತೆ ಬರೆಯುತ್ತದ್ದೇನೆ ಎಂಬ ಆತಂಕಿತ ಕಾವ್ಯ ಸಂವಿಧಾನ ಕವಿಯ ದಾರಿಯನ್ನೆ ತಪ್ಪಿಸಿಬಿಡಬಹುದು. ಆಗ ಬೌದ್ಧಿಕ ಕಸರತ್ತೆ ಕವಿತೆ ಎನ್ನುವ ಸರಳ ತೀರ್ಮಾನಕ್ಕೆ ಬರುವ ಅಪಾಯವೂ ಇದೆ.
- ಆದರೆ ಸವಿತಾ ಅವರ ಕಾವ್ಯಗಳನ್ನು ಓದುತ್ತಾ ಹೋದಂತೆಲ್ಲಾ ಕಸರತ್ತು ಹಿಂದುಳಿದು ಬುದ್ಧಿ, ಭಾವ, ಲಯ ಸಾಂಗತ್ಯ ನಮ್ಮನ್ನು ಅವರ ಕಾವ್ಯಯಾನದ ಜೊತೆಗಾರರನ್ನಾಗಿಸುತ್ತವೆ. ವಿಚಾರಗಳ ಭಾರವಿಲ್ಲದೆ ಅಂತಃಕರಣಪೂರ್ವಕ ಬರೆಯಬಲ್ಲ ಅವರ ಕೌಶಲ ಬೆರಗು ಮೂಡಿಸುತ್ತದೆ. ಸಾವಧಾನ, ಸಂಯಮವೇ ಅವರ ಕಾವ್ಯದ ವೈಶಿಷ್ಟ್ಯವಾಗಿ ಕಾಣಿಸುತ್ತದೆ.
- ಇವರ ಕಾವ್ಯವು ತಾಯ್ತನ,ಮಮತೆ ಮತ್ತು ಅಂತಃಕರಣವನ್ನು ಎತ್ತಿಹಿಡಿಯುತ್ತದೆ.
- ಕೆಲ ಕಾಲ ಸಾಹಿತ್ಯ ಸಂವಾದ ಸಾಂಸ್ಕೃತಿಕ ದ್ವೈ ಮಾಸಿಕದ ಸಂಪಾದಕರಾಗಿದ್ದ ಅವರು ಅಕಾಡೆಮಿ ಪ್ರಕಟಿಸಿದ ಸುವರ್ಣ ಕಾವ್ಯ ಸಂಪಾದಕರಲ್ಲಿ ಒಬ್ಬರಾಗಿದ್ದರು.
ಕವನ ಸಂಕಲನ
[ಬದಲಾಯಿಸಿ]- ನಾ ಬರುತ್ತೇನೆ ಕೇಳು(೧೯೮೭),
- ಚಂದ್ರನ್ರನ ಕರೆಯಿರಿ ಭೂಮಿಗೆ (೧೯೯೧),
- ಹೊಳೆಮಗಳು (೧೯೯೬),
- ಆಕಾಶ ಮಲ್ಲಿಗೆ (೨೦೦೦),
- ಜಾತ್ರೆಯಲ್ಲಿ ಶಿವ (೨೦೦೨) ,
- ದರುಶನ (೨೦೦೯).ಅವರ ಆಯ್ದ ಕವಿತೆಗಳ ಸಂಕಲನ
- ಕೆಂಡ ಸಂಪಿಗೆ
ಕಾದಂಬರಿ
[ಬದಲಾಯಿಸಿ]- ಕಾಡುಲಿಲ್ಲಿ ಹೂವುಗಳು(೨೦೦೬) ಮತ್ತು
- ಹಳ್ಳಿಯ ದಾರಿ (೨೦೧೧).
- ಸ್ತ್ರೀಲೋಕ (೧೯೯೬) ಅವರ ಕಾದಂಬರಿ.
- ಹೂ ಮನಸ್ಸಿನ ಹೋರಾಟಗಾರ ಮತ್ತು ಇತರ ಲೇಖನಗಳು (೨೦೧೧) ಲೇಖನಗಳ ಸಂಕಲನ.
- ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ಕವಿತೆ ೧೯೯೭,
- ಮಹಿಳಾ ಸಾಹಿತ್ಯ ಸ್ಪಂದನಕ್ಕಾಗಿ ಮುಡಿ ಮಲ್ಲಿಗೆ ಎಂಬ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.
- ಜಿ.ಎಸ್.ಎಸ್. ಅಭಿನಂದನ ಗ್ರಂಥ ಹಣತೆ, ಸುವರ್ಣ ಕಾವ್ಯ ಸಂಪುಟದ ಸಹ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.
ಕಾವ್ಯ ತುಡಿತ
[ಬದಲಾಯಿಸಿ]ಜೀವ ಸಂವೇದನೆಯನ್ನು ಸರಕು ಪ್ರಪಂಚ ಆಕ್ರಮಿಸಿಕೊಂಡಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುವ ಅವರು ಜೀವ ಕಾರುಣ್ಯದ ನೆಲೆಯೊಂದನ್ನು ಶೋಧಿಸಲುಯತ್ನಿಸುತ್ತಾರೆ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಚಿಂತನೆಯ ಎಳೆಗಳು ಈ ಹುಡುಕಾಟದ ಬಿರು ಬಿಸಿಲಿನ ಹಾದಿಯ ನೆರಳುಗಳು. ಬಂದೂಕಿನ ನಳಿಕೆಯಲ್ಲೂ ಗೂಡು ಕಟ್ಟುವ ಗುಬ್ಬಚ್ಚಿಗಳ ಚಿತ್ರ ಕಲ್ಪಿಸುವ ಅವರು ಕೌರ್ಯವನ್ನು ಧಿಕ್ಕರಿಸುವ ಮಾತಾಡುತ್ತಾರೆ.
ನಿನ್ನ ಸಾವಿರ ಸಾವಿರ
ನದಿಗಳಲ್ಲಿ ಬಂದೂಕಿನ
ಅಲೆಗಳು ತೇಲುವುದನ್ನೂ
ಪುಟಿಯುವ ಮೀನುಗಳ ಬದಲು
ಗುಂಡುಗಳು ಹಾರಾಡುವುದನ್ನೂ
ಓಕುಳಿಯ ಬದಲು
ನೆತ್ತರು ಹರಿಯುವುದನ್ನೂ
ಧಿಕ್ಕರಿಸುತ್ತೇನೆ. (ಧಿಕ್ಕರಿಸುತ್ತೇನೆ)
ಈ ಧಿಕ್ಕಾರದ ಒಳಗೆ ಮಾನವತ್ವವನ್ನು ಅರಳಿಸುವ ಹಂಬಲ ಮೊನಚು ಬಾಣವಾಗಿ ಮರಳಿ ಬರುತ್ತದೆ.
ಗೆಳೆಯಾ.....
ಕೋವಿ, ಗುಂಡು, ರಕ್ತ, ಚೀತ್ಕಾರ
ಈ ಭುವಿಗೆ ತುಂಬಾ ಹಳತು.
ಬದುಕ ಬೆಳಗಿಸಲು ಹೊಸ ಅಸ್ತ್ರಗಲೇನಾದರೂ
ನಿನ್ನ ಬಳಿ ಇವೆಯಾ, ಹೇಳು.... (ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು)
- ಸವಿತಾ ನಾಗಭೂಷಣ ಅವರ ಪ್ರಸಿದ್ಧವಾದ ಕವನಗಳಲ್ಲಿ ಜಾತ್ರೆಯಲ್ಲಿ ಶಿವ, ತಂಗಿ ಹುಟ್ಟಿದಳು, ಕೊಂಡ ಹಾಯುವಳು, ಬಜಾರಿನಲ್ಲಿ ಬುದ್ಧ, ಕಿಟಕಿಯಲ್ಲಿ ಚಂದಿರ ಮುಂತಾದವು. ಅವರ ಬಹುತೇಕ ಕವನಗಳ ಕೇಂದ್ರ ಪ್ರಕೃತಿಯೆ. ಚಂದ್ರ ಮತ್ತು ಹೂವಿನ ಸುತ್ತಲೇ ಗಿರಕಿ ಹೊಡೆಯುವ ಅನೇಕ ಪದ್ಯಗಳಲ್ಲಿ ನಿರ್ಜೀವ ವಸ್ತುವನ್ನು ವ್ಯಕ್ತಿ ರೂಪಕವಾಗಿ ಬಳಸುವ ಬಗೆಯನ್ನು ಕಾಣುತ್ತೇವೆ. ಚಂದ್ರನಂತೂ ಅವರ ಭಾವದ ಸ್ಥಾಯಿ. ಪದ್ಯದಿಂದ ಪದ್ಯಕ್ಕೆ ಅವರ ಚಂದಿರ ಸುಂದರ. ಸ್ತ್ರೀ ಬದುಕಿನ ಒಲುಮೆ ನಲುಮೆಗಳಿಗೆ, ಬಾಲ್ಯದ ನೆನಪುಗಳಿಗೆ ಅವನು ಕನ್ನಡಿ.
- ’ಚಂದ್ರ ನಿಮಗೇಕೆ ಇಷ್ಟ?’ ಎಂದು ಕೇಳಿದರೆ ’ಅವನು ಬಾಲ್ಯದಿಂದಲೂ ನನ್ನ ಜೊತೆಗಿದ್ದ’ ಎಂಬ ಸರಸದ ಉತ್ತರ ನೀಡುತ್ತಾರೆ. ಹೂವು ಕೂಡ ಅಷ್ಟೇ. ಗಡಸುತನಕ್ಕೆ ಪ್ರತಿಯಾಗಿ ಬಳಕೆಯಾಗುತ್ತದೆ. ಗಟ್ಟಿ ಮುಟ್ಟಾದ ತೋಳು ತೊಡೆತಟ್ಟುವವರೂ, ರಣರಂಗದಲ್ಲಿ ವೈರಿಗಳ ತಲೆಕಡಿಯುವವರೂ ಹೂವನ್ನು ಕಂಡೊಡನೆ ತಲೆ ಬಾಗುತ್ತಾರೆ.
- ಪ್ರಕೃತಿ-ಪುರುಷ ತತ್ವದ ಎರಡು ಸುಂದರ ಕಾಣ್ಕೆಗಳಾಗಿ ಕವಯಿತ್ರಿ ಹೂವು ಮತ್ತು ಚಂದ್ರನನ್ನು ತರುತ್ತಾರೆ. ಹೆಣ್ಣು ಎದುರಿಸುವ ಅನೇಕ ಸಮಸ್ಯೆಗಳೊಂದಿಗೆ ಅವರು ಮುಖಾಮುಖಿಯಾಗುವ ರೀತಿ ಇತರ ಎಲ್ಲಾ ಕವಿಗಳಿಗಿಂತ ವಿಶಿಷ್ಟ ಮತ್ತು ವಿಭಿನ್ನ. ತಂಗಿ ಹುಟ್ಟಿದಳು, ದುಃಖ, ಲೋಕದಲಿ ಪುಟ್ಟಿದ ಬಳಿಕ ಎಲ್ಲ ಹುಡುಗಿಯರ ಕನಸು ಮೊದಲಾದ ಕವಿತೆಗಳು ಈ ಮಾತಿಗೆ ಸಾಕ್ಷಿ.
- ಹೆಣ್ಣು ಹೆಣ್ಣಿಗೆ ಶತ್ರುವೆಂಬ ಪರಂಪರಾಗತ ತಿಳುವಳಿಕೆಯನ್ನು ತಂಗಿ ಹುಟ್ಟಿದಳು ಕವಿತೆ ಸುಳ್ಳಾಗಿಸುತ್ತದೆ. ಯಾರಿಗೂ ಬೇಡವಾದ ಹೆಣ್ಣು ಜೀವವನ್ನು ಅಕ್ಕ ಅಪ್ಪಿ ಕೊಳ್ಳುವುದರ ಮೂಲಕ ಆಭಯ ನೀಡುತ್ತಾಳೆ. ಯಾವ ಸಂದರ್ಭದಲ್ಲೂ ಹೆಣ್ಣು ಧೈರ್ಯಗುಂದ ಬಾರದೆಂಬ ನಿರಂತರ ಎಚ್ಚರವನ್ನು ತಮ್ಮೊಳಗೆ ಕಾಪಿಟ್ಟುಕೊಳ್ಳುತ್ತಾರೆ. ದುಃಖಕ್ಕಾಗಿ ಮರುಗುವ ಮನ ಹೆಣ್ಣಿನ ಬದುಕಿನ ಒಳನೋಟ ನೀಡಿದರೆ ಅದನ್ನು ಸಹಿಸುವ ಶಕ್ತಿಗಾಗಿಯೂ ತಡಕಾಡುತ್ತದೆ.
ಬಲೆಯೊಳಗಿದ್ದರೂ ದುಃಖ ಬಯಲೊಳಗಿದ್ದರೂ ದುಃಖ
ಬೀಸೋ ಕಲ್ಲಿನ ನಡುವೆ ಬದುಕು ಕಾಣಕ್ಕ....(ದುಃಖ)
ಹೆಣ್ಣಿನ ಶಕ್ತಿಯ ಕುರಿತು ಮತಾಡುವ ಸವಿತಾ ಅವರ ಕವನಗಳಲ್ಲಿ ತಾಯ್ತನ, ಧಾರಣಶಕ್ತಿ, ವಾತ್ಸಲ್ಯ, ಪ್ರಶ್ನೆ ಎಲ್ಲವೂ ಇವೆ. ವ್ಯವಸ್ಥೆಯನ್ನು ಇವುಗಳ ಮೂಲಕವೇ ನೋಡುವ ಹಂಬಲವೂ ಇದೆ. ’ಕೊಂಡ ಹಾಯುವಳು’ ಅವರ ಇನ್ನೊಂದು ಮಹತ್ವದ ಕವನ. ಹೆಣ್ಣು ಸುಕೋಮಲೆ, ಚಂಚಲೆ ಮೊದಲಾದ ಪೂರ್ವಕಲ್ಪಿತ ಚಿತ್ರಣಗಳಿಗೆ ಬದಲಾಗಿ ಅ ಗಂಡ, ಮನೆ, ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಸಾಗುವ ಹೆಣ್ಣಿನ ಚಿತ್ರ ಅವಳ ಅದಮ್ಯ ಚೇತನದ ಶಕ್ತಿ ಕೇಂದ್ರವೂ ಆಗುವುದು ಕವಿತೆಯ ಸಾರ್ಥಕ್ಯ.
ಗಂಡ ಕುಡಿಯುವನು
ನಿತ್ಯ ಹೊಡೆಯುವನು
ಮೈ ತುಂಬ ಸಾಲ
ಮನೆ ತುಂಬಾ ಮಕ್ಕಳು
ಹಸಿವು ನೋವು
ಮಿಗಿಲಾಗಿ ಸವತಿಯ ಕಾಟ
ಹರಕೆ ಹೊತ್ತಿಹಳು
ಒಮ್ಮೆ, ಮತ್ತೊಮ್ಮೆ
ಮಗದೊಮ್ಮೆ
ಹಾಯುವಳು ಕೊಂಡ
ನೋಡುವನವಳ ಗಂಡ
ದೂರದಿಂದಲೇ ಮಂಕಾಗಿ.
ಜಾಗತೀಕರಣ, ಷೇರುಪೇಟೆ, ರೈತರ ಸಮಸ್ಯೆ, ಭಯೋತ್ಪಾದನೆ, ಪೌರ ಕಾರ್ಮಿಕ ಹೀಗೆ ಅನೇಕ ಸಂಗತಿಗಳು ಅವರನ್ನು ಕಾಡಿವೆ. ಅದಕ್ಕೊಂದು ಸಾಂತ್ವನದ ದಾರಿ ಹುಡುಕುವ ಕುತೂಹಲವನ್ನು ಕವಿತೆಗಳು ಉಳಿಸಿಕೊಂಡಿವೆ. ಯುದ್ಧ, ಸಾವು ತನ್ನನ್ನು ಕಂಗೆಡಿಸಿದಾಗ ’ಬುದ್ಧ ನನ್ನನ್ನು ಸಂತೈಸುತ್ತಾನೆ’ ಎಂಬ ಭರವಸೆಯಲ್ಲಿ ಕವಯಿತ್ರಿ ಆಶಾಭಾವ ತಾಳುತ್ತಾರೆ. ಸುತ್ತಲಿನ ನಿಸರ್ಗದೊಂದಿಗೆ ಮಾನವ ಅಸ್ಥಿತ್ವವನ್ನು ಗುರುತಿಸುತ್ತಾ ಅತಿ ನಿರೀಕ್ಷೆಗಳಿಲ್ಲದೆ ತನ್ನಷ್ಟಕ್ಕೆ ತಾನು ಕಂಡುಕೊಂಡ ಕಾವ್ಯ ರಿಂಗಣದಲ್ಲಿ ಜೀವ ಮಿಡಿತದ ಸದ್ದನ್ನು ಕೇಳುವ ಮಗುವಿನ ಮುಗ್ಧ ಮನಸ್ಸನ್ನು ಅವರು ಇಂದಿಗೂ ಆತುಕೊಂಡಿದ್ದಾರೆ. ನನ್ನೆಲ್ಲಾ ಪದ್ಯಗಳಲ್ಲಿರುವಂತೆಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ ಇಷ್ಟವಾಗದಿದ್ದರೆ ಬೇಡ. ಕಿಂಚಿತ್ತೂ ಕೋಪವಿಲ್ಲ.[೧] ಸಾಹಿತಿ ಡಿ.ಎಸ್.ನಾಗಭೂಷಣ ಇವರ ಪತಿ.
ಪ್ರಶಸ್ತಿಗಳು
[ಬದಲಾಯಿಸಿ]- ನಾ ಬರತೇನ ಕೇಳ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
- ೨೦೦೨ರ ಸಾಲಿನ ಹುಬ್ಬಳ್ಳಿಯ ಡಾ.ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ
- ಎಂ. ಕೆ ಇಂದಿರಾ ಪ್ರಶಸ್ತಿ
- ಬಿ.ಎಚ್. ಶ್ರೀಧರ ಪ್ರಶಸ್ತಿ
- ೨೦೧೪ - ಅತ್ತಿಮಬ್ಬೆ ಪ್ರತಿಷ್ಠಾನ ಮನುಶ್ರೀ ರಾಷ್ಟ್ರೀಯ ದತ್ತಿ ಪ್ರಶಸ್ತಿ [೨]
- ಇವರು ಶಿವಮೊಗ್ಗ ತಾಲ್ಲೂಕಿನ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಶರಾಗಿದ್ದರು.
ಉಲ್ಲೇಖಗಳು
[ಬದಲಾಯಿಸಿ]- ↑ The Hindu, November 24, 2007 Women writers’ meet in Mandya from today
- ↑ http://www.bangalorewaves.com/photogallery/bangalorewaves-photo-gallery.php?album_id=NzExNw==
ಹೊರಗಿನ ಸಂಪರ್ಕಗಳು
[ಬದಲಾಯಿಸಿ]
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |