ಸರಕಾಯ್ಜೀವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಏಕಾಣುಜೀವಿ ಮಾನವರ, ಪ್ರಾಣಿಗಳ ಮಲದಲ್ಲಿ ಇರುವುದು ಸಾಮಾನ್ಯ. ರಕ್ತ, ಅಗಾರ್ ಕೂಡಿದ ತಳಿವರಸೆಗಳಲ್ಲಿ (ಕಲ್ಚರ್ಸ್) ರಕ್ತದ ರಕ್ತಬಣ್ಣಕದಲ್ಲಿನ ರಾಸಾಯನಿಕ ಬದಲಾವಣೆಗಳಿಂದಾಗುವ ಹಸಿರುಬಣ್ಣದ ವಲಯಗಳ ನಡುವೆ ಸೂಜಿ ಮೊನೆ ತೆರನ ಸಂತತಿಗಳಾಗಿ (ಕಾಲೊನೀಸ್) ಬೆಳೆಯುತ್ತವೆ. ಇದರ ಸಂಬಂಧದ ಉಳಿದ ಬಗೆಗಳ ಸರಕಾಯ್ಜೀವಿಗಳಿಂದಲೂ ಆಹಾರ ವಿಷವೇರಿಕೆ ಆಗುವುದು ಅನುಮಾನ.

ಈ ತೆರನ ಆಹಾರ ವಿಷವೇರಿಕೆ ಅಷ್ಟಾಗಿ ಜೋರಾಗಿರದು. ಓಕರಿಕೆ, ಕೆಲವೇಳೆ ವಾಂತಿ, ಹೊಟ್ಟೆನುಲಿವ ನೋವು, ಉಚ್ಚಾಟ ಇವೆಲ್ಲ ಸೋಂಕು ತಗುಲಿದ, ಆಹಾರ ಸೇವಿಸಿದ 5-18 ತಾಸುಗಳಲ್ಲೇ ಕಾಣಿಸಿಕೊಳ್ಳುತ್ತವೆ. ಈ ಬೇನೆಗೆ ಗೊತ್ತಾದ ಚಿಕಿತ್ಸೆ ಇಲ್ಲವಾದರೂ ಸಾಮಾನ್ಯವಾಗಿ 24 ತಾಸುಗಳಲ್ಲೇ ಗುಣವಾಗುವುದು. ಬೆಕ್ಕುಗಳನ್ನು ಬಿಟ್ಟರೆ, ಇನ್ನಾವ ಪ್ರಾಣಿಗಳಿಗೂ ಈ ಬೇನೆಯ ಸೋಂಕು ಹತ್ತಿದ ಆಹಾರ ತಿನ್ನಿಸಿ ಬೇನೆ ಬೀಳಿಸುವುದು ಆಗಲಾರದು. ಆದರೆ ಬದುಕಿರುವ ಈ ರೋಗಾಣುಗಳನ್ನು ಚೆನ್ನಾಗಿರುವವರಿಗೆ ತಿನ್ನಿಸಿದರೆ ಬೇನೆ ಬೀಳುವವರೇ ಹೊರತು ಬಿಸಿಯಿಂದ ಹಾಯಿಸಿದ ರೋಗಾಣುಗಳು ಇಲ್ಲವೇ ಅವುಗಳ ರಸ ಕುಡಿಸಿದರೆ ಹಾಗಾಗದು. ಸೋಂಕು ಹತ್ತುವ ಆಹಾರಗಳಿಗಂತೂ ಲೆಕ್ಕವಿಲ್ಲ. ಎಷ್ಟೋ ಬಾರಿ ಆಹಾರ ತಯಾರಿಸಿ ಕೋಣೆಯ ಕಾವಿನಲ್ಲಿ ಎಂದಿನ ಹಾಗೆ ಇರಿಸಿದರೆ ರೋಗಾಣುಗಳು ಬೆಳೆಯಲು ಅವಕಾಶವಾಗುತ್ತದೆ. ಸರಕಾಯ್ಜೀವಿಯ ಆಹಾರ ವಿಷವೇರಿಕೆ ತಡೆಯಲು ಆಹಾರಗಳನ್ನು ತಯಾರಕರು, ಬಡಿಸುವವರು, ಉಣ್ಣುವವರು ಶುಭ್ರತೆ ಕಾಪಾಡಿಕೊಳ್ಳುವುದಲ್ಲದೆ, ಬೇಗನೆ ಕೆಡುವ ಆಹಾರಗಳನ್ನು ಬಲು ತಣ್ಣಗೆ ಇಟ್ಟಿರಬೇಕು.