ಸದಸ್ಯ:Yakshitha/ನನ್ನ ಪ್ರಯೋಗಪುಟ/8

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಲಸಸ್ಯಗಳು - ಸಸ್ಯಗಳನ್ನು ಅವು ಬೆಳೆಯುವ ನೆಲೆಗಳ ಆಧಾರದ ಮೇಲೆ ಶುಷ್ಕಸಸ್ಯಗಳು (ಕ್ಸೀರೋಫೈಟ್ಸ್), ಮೀಸೋಫೈಟ್ಸ್ ಮತ್ತು ಜಲಸಸ್ಯಗಳು (ಹೈಡ್ರೊಫೈಟ್ಸ್) ಎಂಬ ಮೂರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಸುತ್ತಲ ಸನ್ನಿವೇಶವನ್ನೂ ಬೆಳೆಯುವ ಮಣ್ಣನ್ನೂ ಸಸ್ಯಗಳಿಗೂ ನೀರಿಗೂ ಇರುವ ಸಂಬಂಧವನ್ನೂ ಈ ವರ್ಗೀಕರಣದಲ್ಲಿ ಪರಿಗಣಿಸಲಾಗುತ್ತದೆ. ಅವುಗಳ ಹೆಸರೇ ಸೂಚಿಸುವಂತೆ ಜಲಸಸ್ಯಗಳು ಸಾಮಾನ್ಯವಾಗಿ ನೀರಿನಲ್ಲಿ ಬೆಳೆಯುವ ಸಸ್ಯಗಳು. ಕೆಲವು ಜೌಗು ಪ್ರದೇಶಗಳಲ್ಲೂ ಬೆಳೆಯುವುದುಂಟು. ನೆಲದ ಮೇಲಿನ ಸಸ್ಯಗಳಂತೆ ಉಷ್ಣತೆಯ ವೈಪರೀತ್ಯಗಳನ್ನು ಇವು ಸಹಿಸಲಾರವು. ಇವುಗಳ ಪರಿಸರ ನೀರು ಆಗಿರುವುದರಿಂದ ಇವಕ್ಕೆ ಕೆಲವು ವಿಶಿಷ್ಟ ಸಮಸ್ಯೆಗಳುಂಟು.

ಜಲಸಸ್ಯಕ್ಕೆ ಬದುಕಲಿರುವ ಅವಶ್ಯಕತೆಗಳು[ಬದಲಾಯಿಸಿ]

ಗಾಳಿಯ ಪೂರೈಕೆ, ಅದರಲ್ಲೂ ಉಸಿರಾಟಕ್ಕೆ ಬೇಕಾಗುವ ಆಕ್ಸಿಜನ್ ಹಾಗೂ ದ್ಯುತಿಸಂಶ್ಲೇಷಣೆಗೆ ಬೇಕಾಗುವ ಕಾರ್ಬನ್ ಡೈ ಆಕ್ಸೈಡ್ ಅನಿಲಗಳ ಪೂರೈಕೆ, ಇವುಗಳ ಸಮಸ್ಯೆಗಳಲ್ಲೊಂದು. ವಿವಿಧ ರೀತಿಯ ಜಲಸಸ್ಯಗಳು ಈ ಸಮಸ್ಯೆಯನ್ನು ವಿವಿಧ ಬಗೆಯಲ್ಲಿ ಬಗೆಹರಿಸಿಕೊಂಡಿವೆ. ನೀರಿನಲ್ಲಿ ಆಕ್ಸಿಜನ್ ಅತ್ಯಲ್ಪ ಮೊತ್ತದಲ್ಲಿ ಕರಗಿದ್ದರೂ ಕೆಲವು ನಾಳಮಯ ಜಲಸಸ್ಯಗಳು ಇಷ್ಟನ್ನೇ ಬಳಸಿಕೊಳ್ಳಲು ಸಮರ್ಥವಾಗಿದ್ದು ಬೇರೆ ಗಿಡಗಳಂಥ ಬೇರು ಇತ್ಯಾದಿ ಅಂಗಗಳನ್ನು ಪಡೆದಿವೆ. ನಿಂತ ನೀರಿನಲ್ಲಿ ಇಲ್ಲವೆ ಜೌಗುಭೂಮಿಗಳಲ್ಲಿ ಬೆಳೆಯುವ ಹಲವು ಜಲಸಸ್ಯಗಳು ಆಕ್ಸಿಜನ್ ಇಲ್ಲದೆಯೆ ಉಸಿರಾಡಬಲ್ಲವು. ಇನ್ನು ಕೆಲವು ತಮ್ಮ ದೇಹದಲ್ಲಿ ಗಾಳಿ ಓಡಾಡಲು ಅನುಕೂಲಿಸುವಂತೆ ವಿಸ್ತಾರವಾದ ಸಂಪರ್ಕ ವ್ಯವಸ್ಥೆಯನ್ನೂ ವಾಯುಸಂಗ್ರಹಣಾ ವ್ಯವಸ್ಥೆಯನ್ನೂ ರೂಪಿಸಿಕೊಂಡಿವೆ. ಕೆಲವು ಅಂಗಾಂಶಗಳಲ್ಲಿ ಜೀವಕೋಶಗಳು ಶಿಥಿಲವಾಗುವುದರಿಂದ ಅಲ್ಲಲ್ಲಿ ವಾಯುಕುಳಿಗಳು ಕಂಡುಬರುತ್ತವೆ. ಆದರೆ ಪೋಡಾಸ್ಟಮೇಸೀ ಎಂಬ ಕುಟುಂಬಕ್ಕೆ ಸೇರಿದ ಜಲಸಸ್ಯಗಳಲ್ಲಿ ವಾಯುಕುಳಿಗಳಿಲ್ಲ. ಬಹುಶಃ ಇವು ವಿಕಾಸವಾಗುತ್ತಿರುವಾಗ ಕುಳಿಗಳನ್ನು ಕಳೆದುಕೊಂಡಿರಬಹುದು. ಹೀಗಿದ್ದರೂ ಈ ಗಿಡಗಳು ತ್ವರಿತಗತಿಯಲ್ಲಿ ಸಾಗುವ ಹಾಗೂ ಆಕ್ಸಿಜನ್ ತುಂಬಿರುವ ಪ್ರವಾಹಗಳಲ್ಲಿ ಬೆಳೆಯುವುದರಿಂದ ಅನಿಲ ವಿನಿಮಯ ಇವುಗಳಲ್ಲಿ ಸಮಸ್ಯೆ ಅಲ್ಲ. ಎಲ್ಲ ಜಲಸಸ್ಯಗಳಲ್ಲಿ ಏರೆಂಕಿಮ ಎಂಬ ಅಂಗಾಂಶ ಅಧಿಕ ಮೊತ್ತದಲ್ಲಿ ರೂಪುಗೊಂಡಿವೆ. ವಿಸ್ತಾರವಾಗಿ ಹರಡಿರುವ ಇದರ ಜೀವಕೋಶಗಳ ನಡುವೆ ಅವಕಾಶಗಳಿವೆ. ಈ ಅವಕಾಶಗಳಲ್ಲಿ ಗಾಳಿ ಶೇಖರವಾಗಿರುವುದರಿಂದ ಸಸ್ಯಗಳಿಗೆ ಪ್ಲವನಶಕ್ತಿ ದೊರೆಯುತ್ತದೆ. ಐಕಾರ್ನಿಯ ಎಂಬ ಗಿಡದ ಎಲೆಗಳ ತೊಟ್ಟುಗಳಲ್ಲಿ ಏರೆಂಕಿಮ ಅಧಿಕ ಪ್ರಮಾಣದಲ್ಲಿ ಇರುವುದರಿಂದ ತೊಟ್ಟುಗಳು ಉಬ್ಬಿಕೊಂಡಿರುತ್ತವೆ. ಇವೇ ಸಸ್ಯಗಳು ನೀರಿನಲ್ಲಿ ಬೆಳೆಯದೆ ಸ್ವಲ್ಪ ಒದ್ದೆಯಾದ ಮಣ್ಣಿನಲ್ಲಿ ಬೆಳೆದರೆ ಏರೆಂಕಿಮ ಅಂಗಾಂಶ ಇಷ್ಟು ಪ್ರಮಾಣದಲ್ಲಿರುವುದಿಲ್ಲ. ಆದ್ದರಿಂದ ಏರೆಂಕಿಮ ಅಂಗಾಂಶ ಸಸ್ಯ ನೀರಿನಲ್ಲಿ ತೇಲಾಡುವಂತೆ ಸಹಾಯ ಮಾಡುವ ರಚನೆಯೆಂದು ಖಚಿತವಾಗುತ್ತದೆ. ತಾವರೆಯ ಕಾಯಿಗಳಲ್ಲಿ ಕೂಡ ಏರೆಂಕಿಮ ಅಂಗಾಂಶ ಇದ್ದು ಫಲಪ್ರಸಾರಕ್ಕೆ ನೆರವಾಗುತ್ತದೆ.

ಜಲಸಸ್ಯದ ಉದಾಹರಣೆಗಳು[ಬದಲಾಯಿಸಿ]

ಸಮುದ್ರದಲ್ಲಿ ಬೆಳೆಯುವ ಫ್ಯೂಕಸ್ ಎಂಬ ಗಿಡದಲ್ಲಿ ಬ್ಲಾಡರ್‍ಗಳೆಂಬ ರಚನೆಗಳಿವೆ. ಸಸ್ಯ ನೀರಿನಲ್ಲಿ ನೇರವಾಗಿ ನಿಲ್ಲಲು ಇವು ಸಹಾಯಕವಾಗಿವೆ. ವಾಟರ್ ಲಿಲಿ ಗಿಡದಲ್ಲಿ ಸಸ್ಯದ ಸ್ವಲ್ಪ ಭಾಗ ನೀರಿನಲ್ಲಿ ಮುಳುಗಿ ಇನ್ನುಳಿದ ಭಾಗ ನೀರಿನಿಂದ ಹೊರಗಿದ್ದು ವಾಯುವಿನ ಸಂಪರ್ಕ ಪಡೆದಿರುವುದರಿಂದ ಸಸ್ಯದೇಹದಾದ್ಯಂತ ಆವಿಚ್ಛಿನ್ನವಾಗಿ ವಾಯುವನ್ನು ಒಯ್ಯುವ ವ್ಯವಸ್ಥೆ ಉಂಟು. ಇನ್ನು ಕೆಲವು ಜಲಸಸ್ಯಗಳಾದ ಟ್ರಾಪ, ಪಿಸ್ಟಿಯ, ಹೈಡ್ರೋಕ್ಯಾರಿಸ್ ಮೊದಲಾದವುಗಳಲ್ಲಿ ಏರೆಂಕಿಮ ಅಂಗಾಂಶ ಎಷ್ಟರಮಟ್ಟಿಗೆ ವೃದ್ಧಿಯಾಗಿದೆಯೆಂದರೆ ಇವು ಈಜುಬುರುಡೆಗಳಂತೆ ದಪ್ಪವಾಗಿ ಊದಿಕೊಂಡಿದ್ದು ಮುಟ್ಟಿದರೆ ಸ್ಪಂಜಿನಂತಿವೆ.

ಅಂಗಾಂಶ ರಚನೆ[ಬದಲಾಯಿಸಿ]

ಕೆಲವು ಜಲಸಸ್ಯಗಳಲ್ಲಿ ಏರೆಂಕಿಮ ಅಂಗಾಂಶ ಅಲ್ಪ ಮೊತ್ತದಲ್ಲಿರುವುದರಿಂದ ಇದನ್ನು ಸಮತೂಗಿಸಲು ತೆಳುವಾದ ಕೋಶಭಿತ್ತಿಗಳಿಂದ ರಚಿತವಾದ ವಪೆಗಳೆಂಬ ರಚನೆಗಳಿವೆ (ಉದಾ: ಪಾಂಟಿಡೇರಿಯ, ಪೊಟಮೊಜೆಟಾನ್, ಸ್ಯಾಜಿಟೇರಿಯ). ಇವು ವಾಯುಕುಳಿಗಳನ್ನು ಛೇದಿಸಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತವೆ. ವಪೆಗಳು ಸಾಮಾನ್ಯವಾಗಿ ನೀರಿನಲ್ಲಿ ಮುಳುಗಿರುವ ಸಸ್ಯಭಾಗದ ಗಿಣ್ಣುಗಳಲ್ಲಿ ಹಾಗೂ ಎಲೆಗಳ ತೊಟ್ಟುಗಳಲ್ಲೂ ಇತರ ಜಲವಾಸಿ ಏಕದಳ ಸಸ್ಯಗಳಲ್ಲೂ ನೋಡಬಹುದು.

ವಾಯುಕುಳಿ ಮತ್ತು ಬೇರಿನ ರಚನೆ[ಬದಲಾಯಿಸಿ]

ಜಲಸಸ್ಯಗಳು ನಿರಂತರವಾಗಿ ನೀರಿನ ಸಂಪರ್ಕದಲ್ಲಿರುವುದರಿಂದ ನೀರನ್ನು ಹೀರುವ ಅಂಗಗಳಾದ ಬೇರುಗಳು ಚೆನ್ನಾಗಿ ರೂಪುಗೊಂಡಿಲ್ಲ. ಬೇರು ಸಾಮಾನ್ಯವಾಗಿ ಚಿಕ್ಕವಾಗಿದ್ದು ಅಲ್ಪಪ್ರಮಾಣದಲ್ಲಿ ಕವಲೊಡೆದಿರುತ್ತವೆ. ಕೆಲವು ವೇಳೆ ಇರುವುದೇ ಇಲ್ಲ. ಸೆರಟೊಫಿಲಂ ಎಂಬ ಸಸ್ಯದಲ್ಲಿ ಬೇರು ರೋಮಗಳು ಸಂಪೂರ್ಣವಾಗಿ ನಶಿಸಿಹೋಗಿವೆ. ಜಸ್ಸಿಯದಲ್ಲಿ ಸಾಮಾನ್ಯವಾಗಿ ಬೆಳೆಯುವ ಬೇರುಗಳಲ್ಲದೆ ಗಿಣ್ಣುಗಳಿಂದ ಸ್ಪಂಜಿನಂಥ ಬೇರುಗಳು ಮೇಲ್ಮಖವಾಗಿ ಬೆಳೆಯುವುದನ್ನು ಕಾಣಬಹುದು. ಜಲಸಸ್ಯಗಳಲ್ಲಿ ದೇಹದ ಒಂದಿಲ್ಲೊಂದು ಭಾಗದಲ್ಲಿ ಕಾಣಬರುವ ವಾಯುಕುಳಿಗಳ ರೂಪುಗೊಳ್ಳುವಿಕೆ ಅನುವಂಶಿಕ ನಿಯಂತ್ರಣಕ್ಕೊಳಗಾಗಿದೆ ಎಂದು ಭಾವಿಸಲಾಗಿದೆ. ವಾಯುಕುಳಿಗಳು ನಿರ್ದಿಷ್ಟ ಸಂಖ್ಯೆಯಲ್ಲಿರುವುದರಿಂದ ಈ ಗುಣವನ್ನು ಒಂದೇ ಜಾತಿಯ ಸಸ್ಯಗಳ ಪ್ರಭೇದಗಳನ್ನು ಗುರುತಿಸಲು ಬಳಸಿಕೊಳ್ಳಲಾಗಿದೆ.ಸೈಪರಸ್, ಟೈಫ ಮೊದಲಾದ ಸಸ್ಯಗಳಲ್ಲಿ ನಿರ್ದಿಷ್ಟ ಋತುಗಳಲ್ಲಿ ಪ್ರಕಂದಗಳು ವಿಶಾಲವಾಗಿ ಹರಡಿಕೊಂಡು ಬೆಳೆಯುತ್ತವೆ. ವ್ಯಾಲಿಸ್ನೇರಿಯ, ಐಸೋಯಿಟೇಸ್ ಮತ್ತು ಅಪೊನೊಜೆಟಾನ್‍ಗಳಲ್ಲಿ ಬೇರಿನ ಬುಡ ದಪ್ಪವಾಗಿದೆ. ಐಕಾರ್ನಿಯ, ಪಿಸ್ಟಿಯ ಮೊದಲಾದ ತೇಲುವ ಜಲಸಸ್ಯಗಳಲ್ಲಿ ತಂತು ಬೇರುಗಳು ವಿಪುಲವಾಗಿ ಬೆಳೆದಿವೆ. ಗಿಡಗಳು ಭೂಮಿಯಲ್ಲಿ ಗಟ್ಟಿಯಾಗಿ ನಿಲ್ಲಲು ಇವು ಉಪಯೋಗವಾಗದಿದ್ದರೂ ಮೇಲ್ಭಾಗದಲ್ಲಿ ಗುಂಪಾಗಿ ಬೆಳೆದಿರುವ ಎಲೆಗಳಿಗೆ ಸ್ಥಿತಿ ಸ್ಥಾಪಕತೆಯನ್ನು ಕೊಡುತ್ತವೆ. ಈ ಬೇರುಗಳ ಎಪಿಡರ್ಮಿಸಿನಲ್ಲಿ ಕೆಲವೊಮ್ಮೆ ಕ್ಲೋರೋಫಿಲ್ ಇರುವುದರಿಂದ ಅಲ್ಪ ಮೊತ್ತದಲ್ಲಿ ಆಹಾರವೂ ತಯಾರಾಗುತ್ತದೆ. ಸೆರಟಾಪ್ಪರಿಸ್ ಗಿಡದಲ್ಲಿ ಬೇರುಗಳು ಬಹುವಾಗಿ ಕವಲೊಡೆದಿವೆ. ಮತ್ತೆ ಕೆಲವು ಜಲಸಸ್ಯಗಳಲ್ಲಿ ಬೇರುರೋಮಗಳು ಸಮೃದ್ಧವಾಗಿ ಬೆಳೆದಿರುವುದುಂಟು.

ಎಲೆಗಳ ರಚನೆ[ಬದಲಾಯಿಸಿ]

ಹೆಚ್ಚು ಆಳವಿಲ್ಲದ ನೀರಿನಲ್ಲಿ ಬೆಳೆಯುವ ಜಲಸಸ್ಯಗಳ ಎಲೆಗಳಲ್ಲಿ ದ್ವಿರೂಪತೆ ಕಂಡುಬರುತ್ತದೆ. ಅಂದರೆ ನೀರಿನಲ್ಲಿ ಮುಳುಗಿರುವ ಎಲೆಗಳು ನೀರಿನ ಮೇಲೆ ಬೆಳೆಯುವ ಎಲೆಗಳಿಂಗಿಂತ ಭಿನ್ನವಾಗಿರುತ್ತವೆ. ಲಿಮ್ನೊಫಿಲ ಹೆಟರೋಫಿಲ್ಲ, ಸ್ಯಾಜಿಟೇರಿಯ ಮೊದಲಾದ ಸಸ್ಯಗಳಲ್ಲಿ ಈ ರೀತಿಯ ಎಲೆಗಳನ್ನು ಕಾಣಬಹುದು. ನೀರಿನಲ್ಲಿ ಮುಳುಗಿರುವ ಎಲೆಗಳು ಅತಿ ಸೂಕ್ಷ್ಮವಾಗಿ ವಿಚ್ಛೇದಿಸಲ್ಪಟ್ಟಿದ್ದು ನೀರಿನ ಮೇಲ್ಭಾಗದ ಎಲೆಗಳು ಅಖಂಡವಾಗಿರುತ್ತವೆ. ಈ ಲಕ್ಷಣಕ್ಕೆ ಅಸಮಪತ್ರ ರೂಪತೆ (ಹೆಟರೊಫಿಲಿ) ಎಂದು ಹೆಸರು. ಇದು ಸುತ್ತಲ ಪರಿಸರ, ವಾತಾವರಣದ ಉಷ್ಣತೆ ಮತ್ತು ಆದ್ರ್ರತೆಗಳನ್ನು ಅವಲಂಬಿಸಿರುತ್ತದೆ.

ಕೆಲವು ಜಲಸಸ್ಯಗಳಲ್ಲಿ ಪ್ರಾರಂಭದಲ್ಲಿ ಮೂಡುವ ಎಲೆಗಳು ನಂತರ ಹುಟ್ಟುವ ಎಲೆಗಳಿಗಿಂತ ತೀರ ಭಿನ್ನವಾಗಿರುತ್ತವೆ. ಇದರಲ್ಲಿ ಸುತ್ತಲ ಪರಿಸರ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಈ ಗುಣಕ್ಕೆ ಹೆಟಿರೊಬ್ಲಾಸ್ಟಿಕ್ ಎಂದು ಹೆಸರು. ಉದಾಹರಣೆಗಾಗಿ ಸ್ಯಾಜಿಟೇರಿಯ ಸ್ಯಾಜಿಟಿಫೋಲಿಯ ಪ್ರಭೇದದಲ್ಲಿ ಆರಂಭದ ಎಳಸಾದ ಎಲೆಗಳು ಛಿದ್ರವಾಗಿ ಇಲ್ಲವೇ ನೀಳವಾಗಿದ್ದು ನೀರಿನಲ್ಲಿ ಮುಳುಗಿರುತ್ತವೆ. ಆದರೆ ಅನಂತರ ಹುಟ್ಟಿದ ಎಲೆಗಳು ನೀರಿನ ಮೇಲ್ಮೈ ಮೇಲೆ ತೇಲಾಡುವುವು ಇಲ್ಲವೆ ನೀರಿನಿಂದ ಮೇಲಕ್ಕೆ ಚಾಚಿ ಬೆಳೆಯುವುವು. ನೀರಿನಲ್ಲಿ ಮುಳುಗಿರುವ ಕಿರಿದಾದ ಛಿದ್ರವಾಗಿರುವ ಎಲೆಗಳು ನೀರಿನ ಪ್ರವಾಹವನ್ನು ಸಮರ್ಥವಾಗಿ ಎದುರಿಸಬಲ್ಲವು. ಅಖಂಡವಾದ ಹಾಗೂ ಅಗಲವಾದ ಎಲೆಗಳಿದ್ದರೆ ನೀರಿನ ಸೆಳೆತ ಮತ್ತು ಒತ್ತೆಗಳಿಗೆ ಗುರಿಯಾಗಿ ಇಡೀ ಸಸ್ಯವೇ ಅಪಾಯಕ್ಕೊಳಗಾಗುತ್ತಿತ್ತು. ಇದೇ ರೀತಿಯ ಕಾರಣಕ್ಕಾಗಿ ಐಕಾರ್ನಿಯದ ಎಲೆಗಳ ಅಂಚುಗಳಲ್ಲಿ ಆಧಾರ ಅಂಗಾಂಶಗಳುಂಟು. ತಾವರೆ ಗಿಡದಲ್ಲಿ ಎಲೆಗಳು ನೀರಿನ ಮೇಲೆ ತೇಲುವಂತೆ ಮಾಡಲು ಅವುಗಳ ತೊಟ್ಟುಗಳು ಬಹಳ ಉದ್ದ ಇವೆ.

ಪತ್ರ ಕಂದ(ಬಲ್ಬಿಲ್ಸ್)ಗಳ ರಚನೆ[ಬದಲಾಯಿಸಿ]

ಅಪೊನೊಜೆಟಾನ್ ಮತ್ತು ಅಲಿಸ್ಮೇಸೀ ಕುಟುಂಬದ ಸಸ್ಯಗಳಲ್ಲಿ ಮಿಥ್ಯಾ ವೈವಿಪರಿ ಕಂಡುಬರುತ್ತದೆ. ಇವುಗಳ ಹೂಗೊಂಚಲಿನಲ್ಲಿ ಹೂಗಳ ಬದಲಾಗಿ ಪತ್ರ ಕಂದಗಳು (ಬಲ್ಬಿಲ್ಸ್) ಎಂಬ ರಚನೆಗಳು ಉತ್ಪತ್ತಿಯಾಗುತ್ತವೆ. ಅಮೆರಿಕದ ಕೆಲವು ಐಕಾರ್ನಿಯ ಗಿಡಗಳ ಹೂಗೊಂಚಲಿನಲ್ಲಿ ಹೂಗಳ ಸ್ಥಾನದಲ್ಲಿ ಚಿಕ್ಕ ಚಿಕ್ಕ ಗಿಡಗಳು ರೂಪುಗೊಳ್ಳುತ್ತವೆ. ಕಾಲಾನಂತರದಲ್ಲಿ ಇವು ಗಿಡಗಳಿಂದ ಬೇರ್ಪಟ್ಟು ಸ್ವತಂತ್ರ ಗಿಡಗಳಾಗಿ ಬೆಳೆಯುತ್ತವೆ. ಹಲವು ಜಲಸಸ್ಯಗಳ ಎಲೆಗಳಲ್ಲಿ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ವರ್ಧನ ಅಂಗಾಂಶದ ಚಟುವಟಿಕೆಯಿಂದ ಜೆಮ ಎಂಬ ವಿಶೇಷ ರೀತಿಯ ಮೊಗ್ಗುಗಳು ರೂಪುಗೊಳ್ಳುತ್ತವೆ. ಇವು ಕೂಡ ಗಿಡಗಳಿಂದ ಬೇರೆಯಾಗಿ ಸ್ವತಂತ್ರ ಸಸ್ಯಗಳಾಗಿ ಬೆಳೆಯತೊಡಗುತ್ತವೆ.

ಉಲ್ಲೇಖಗಳು[ಬದಲಾಯಿಸಿ]