ಸದಸ್ಯ:Varsha R Achar/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧][೨]

ಶಿವಮೊಗ್ಗದ ಶಿವಪ್ಪನಾಯಕನ ಅರಮನೆ[ಬದಲಾಯಿಸಿ]

ಅರಮನೆ

ಶಿವಪ್ಪನಾಯಕನ ಅರಮನೆ ಶಿವಮೊಗ್ಗ ನಗರದ ಏಕಮಾತ್ರ ಪ್ರವಾಸಿ ಕೇಂದ್ರವಾಗಿದೆ. ಕೆಳದಿ ಸೋಮಶೇಖರ ನಾಯಕನ ಕಾಲದ ತಾಮ್ರಪತ್ರದಲ್ಲಿ ಈ ಅರಮನೆಯ ಉಲ್ಲೇಖವಿದೆ. ಈ ಅರಮನೆ ಕೆಳದಿ ಅರಸರ ಬೇಸಿಗೆ ಅರಮನೆಯಾಗಿತ್ತು. ಸಂಪೂರ್ಣ ಮರದಲ್ಲಿ ನಿರ್ಮಾಣವಾಗಿರುವ ಅರಮನೆಯು ಕಲೆಗಾರಿಕೆಗೆ, ವಿಶಾಲತೆಗೆ, ಕುಸುರಿ ಕೆತ್ತನೆಗೆ ಗಾಂಭೀರ್ಯತೆಗೆ ಪ್ರತೀಕವಾಗಿದ್ದು, ಮಲೆನಾಡಿನ ವಿಶಿಷ್ಟ ವಾಸ್ತುಶಿಲ್ಪವನ್ನು ಮೈಗೂಡಿಸಿಕೊಂಡು ಕಂಗೊಳಿಸುತ್ತಿದೆ. ನಾಗರೀಕತೆಯ ಅಮಲಿನಲ್ಲಿ ಯಾಂತ್ರಿಕರಣ ದಾಪುಗಾಲಿಡುತ್ತಿರುವ ಈ ಶಿವಮೊಗ್ಗ ನಗರದಲ್ಲಿ ಅಂದಿನ ರಾಜವೈಭವವನ್ನು ನೆನಪಿಸುವ ಕೆಳದಿ ಅರಸರ ಅರಮನೆ ಇದೆ. ಇದು ಜಿಲ್ಲೆಯ ಪ್ರೆಕ್ಷಣೀಯ ಸ್ಥಳಗಳಲ್ಲಿ ಒಂದಾಗಿದ್ದರೂ ಅತ್ಯಂತ ಕಡೆಗಣಿಸಲ್ಪಟ್ಟಿರುವ ಸ್ಥಳವಾಗಿದೆ. ಈ ಅರಮನೆಗೆ ಆನಿಸಿಕೊಂಡಂತೆಯೇ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯ ಇದೆ.

ಮಾಹಿತಿ[ಬದಲಾಯಿಸಿ]

ಶಿವಮೊಗ್ಗದ ಈ ಅರಮನೆಯಲ್ಲಿ ದೇಶೀಯ ಕಾಲವೈಭವ ಎದ್ದು ಕಾಣುತ್ತದೆ. ಶಿವಮೊಗ್ಗ ಸಂಸ್ಕ್ರತಿಯ ಭವ್ಯ ಐತಿಹಾಸಿಕ ಪರಂಪರೆಯನ್ನು ಒಳಗೊಂಡ ಜಿಲ್ಲೆಗಳಲ್ಲಿ ಪ್ರಮುಖವಾಗಿದೆ. ತುಂಗಾ ನದಿಯ ತಡದಲ್ಲಿರುವ ಶಿವಮೊಗ್ಗ ಐತಿಹಾಸಿಕವಾಗಿಯೂ ಗಮನ ಸೆಳೆಯುತ್ತದೆ. ಶಿವಮೊಗ್ಗ ಪ್ರಾಚೀನ ನಗರಗಳಲ್ಲಿ ಒಂದು. ಈ ನಗರದ ಆಸುಪಾಸಿನಲ್ಲಿ ಪ್ರಾಗೈತಿಹಾಸಿಕದಿಂದ ಪ್ರಾರಂಭವಾಗಿ ನವಶಿಲಾಯುಗದ ಕಾಲದವರೆಗೆ ಅವ್ಯಾಹತವಾಗಿ ಸಂಸ್ಕ್ರತಿ ಬೆಳೆದು ಬಂದಿದೆ. ಪೂರ್ವಾಭಿಮುಖವಾಗಿರುವ ಈ ಅರಮನೆಯನ್ನು ಮರ, ಮಣ್ಣು ಮತ್ತು ಅಚ್ಛುಗಾರೆಯಿಂದ ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಅರಮನೆಯ ಮುಂಭಾಗದ ಪ್ರಾಂಗಣವು ಸುಮಾರು ೫೦-೬೦ ಅಡಿ ಎತ್ತರವಿದ್ದು ವಿಶಾಲವಾಗಿದೆ. ಇದರಲ್ಲಿ ೨೪ ಅಂಕಣಗಳಿವೆ. ಇಲ್ಲಿನ ಮರದ ಕಂಬಗಳು ಅಲಂಕೃತವಾಗಿದ್ದು ಮೇಲೇರುತ್ತಾ ಕಿರಿದಾಗಿದೆ. ಇದರ ಎರಡೂ ಬದಿಗಳಲ್ಲಿ ಕೊಠಡಿಗಳಿದ್ದು, ಅರಮನೆಯ ಮಹಡಿಗೆ ಕಂಬಗಳನ್ನು ಹೊಂದಿದೆ. ಇದಕ್ಕೆ ಬಾಲ್ಕನಿ ಇದ್ದು ಅಲ್ಲಿ ಅರಸರು ಕುಳಿತು ದರ್ಬಾರು ನಡೆಸುತ್ತಿದರು.ಈ ಅರಮನೆಯಲ್ಲಿ ಕೋಟೆಯನ್ನು ಇದಕ್ಕೆ ಬುರುಜುಗಳ ನಿರ್ಮಾಣ ಮಾಡಲಾಗಿದೆ. ಒಂದು ಕಾಲದಲ್ಲಿ ಈ ಅರಮನೆ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದ ಸಂದರ್ಭದಲ್ಲಿ ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯವು ಸಂರಕ್ಷಿಸಿ ಇಲ್ಲಿ ಒಂದು ವಸ್ತುಸಂಗ್ರಹಾಲಯವನ್ನು ಪ್ರಾರಂಭ ಮಾಡಿ ಹೊಸ ರೂಪವನ್ನು ಕೊಡಲಾಗಿದೆ.ಈ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಕಾಲದ ಆಯುಧಗಳು, ಮಡಕೆಗಳು, ಸಿಂಧೂ ನಾಗರೀಕತೆಯ ಮುದ್ರಿಕೆಗಳು, ತಾಳೆಗರಿ ಗ್ರಂಥಗಳು, ಅಪೂರ್ವ ಕಲೆಯ ಮೂರ್ತಿ ಶಿಲ್ಪಗಳು, ಕೆಳದಿ ಅರಸರು ಬಳಸಿದ ವೇಶಭೂಷಣಗಳು,ಫಿರಂಗಿಗಳು ಮೊದಲಾದ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಸುಂದರವಾದ ಉದ್ಯಾನವನದೊಂದಿಗೆ ಈಗ ಈ ಅರಮನೆ ಪ್ರವಾಸಿಗರ ಅತ್ಯಾಕರ್ಷಣೀಯ ತಾಣವಾಗಿದೆ.

ವಸ್ತುಸಂಗ್ರಹಾಲಯ


ಇತಿಹಾಸ[ಬದಲಾಯಿಸಿ]

ಶಿವಪ್ಪನಾಯಕನ ಅರಮನೆ, ಅರಸರ ನಂತರದ ಕಾಲದಲ್ಲಿ ದೋಂಡಿಯಾವಾಫ್, ಬ್ರಿಟೀಷರು ಹಾಗು ಹತ್ತೊಂಬತ್ತನೆ ಶತಮಾನದ ಪ್ರಾರಂಭದ ದಿನಗಳಲ್ಲಿ ರಾಜ್ಯ ಸರಕಾರವು ಅರಣ್ಯ ಉಗ್ರಾಣವಾಗಿ ಬಳಸಿಕೊಂಡರು.ಅರಮನೆ ಅಧಿಕಾರಿಗಳು, ಸಾರ್ವಜನಿಕರು ಹೊಳೆಯಿಂದ ದಾಟಿಸಲು ಇದ್ದ ಅಂಬಿಗರಿಗೆ ಈ ನಗರದ ಗಾಜನೂರಿನ ಗ್ರಾಮದ ಕೊರ್ಲಹಳ್ಳಿ ಭಾಗದಲ್ಲಿ ದಾನ ಕೊಟ್ಟು ಉಲ್ಲೆಖ ಬರುತದೆ. ಶಿವಪ್ಪನಾಯಕನ ಕಾಲದಲ್ಲಿ ಬಿಜಾಪುರದ ಆದಿಲ್ ಶಾಹಿ ಈ ಮನೆ, ಕೋಟೆ ಮೇಲೆ ದಾಳಿ ಮಾಡಿದಾಗ ಇದನ್ನು ರಕ್ಷಿಸಿದರು. ಈ ಹಿನ್ನಲೆಯಲ್ಲಿ ಈ ಅರಮನೆ ಕೆಳದಿ ಸದಾಶಿವನಾಯಕ ಅಥವಾ ಕೆಳದಿ ಹಿರಿಯ ವೆಂಕಟಪ್ಪನಾಯಕನ ಕಾಲದಲ್ಲಿ ಕಟ್ಟಿಸಿರಬೇಕೆಂದು ಡಾ. ಅ. ಸುಂದರ ಅಭಿಪ್ರಾಯ ಪಡುತ್ತಾರೆ. ಸಂಗಮೇಶ್ವರದಲ್ಲಿ ಅರಮನೆ,ಆನಂದಪುರದಲ್ಲಿ ಒಂದು ಅರಮನೆ ಕಟ್ಟಿಸಿದ ಬಗ್ಗೆ ಉಲ್ಲೆಖವಿದೆ.ಈ ಅರಮನೆ ಹಾಗು ಬೆಂಗಳೂರಿನಲ್ಲಿರುವ ಟಿಪ್ಪು ಸುಲ್ತಾನ್ ಅರಮನೆಯ ಲಕ್ಷಣಗಳನ್ನು ಗಮನಿಸಿದಾಗ, ಶಿವಪ್ಪನಾಯಕನ ಅರಮನೆಯ ಮಾದರಿಯಲ್ಲೆ ನಿರ್ಮಾಣವಾಗಿದೆ ಎಂದು ತಿಳಿಯಬಹುದಾಗಿದೆ. ಸುಮಾರು ೧೮ನೇ ಶತಮಾನದಲ್ಲಿ ಪ್ರಾರಂಭದಲ್ಲಿ ನಿರ್ಮಾಣವಾಗಿರುವ ಈ ಅರಮನೆಯನ್ನು ಕೆಳದಿ ಅರಸರು ಈ ಭಾಗಕ್ಕೆ ಬಂದಾಗ ಬೇಸಿಗೆ ಅರಮನೆಯಾಗಿ ಬಳಸಿಕೊಳ್ಳುತ್ತಿದ್ದರೆಂದು ಇತಿಹಾಸ ಇದೆ. ಕೆಳದಿ ರಾಣಿ ಚೆನ್ನಮ್ಮಾಜಿಯು ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಆಡಾಳಿತದ ಸಂದರ್ಭದಲ್ಲಿ ಔರಂಗಜೇಬನ ಉಪಟಳವನ್ನು ಸಹಿಸಲಾರದೆ ಅವನಿಂದ ತಪ್ಪಿಸಿಕೊಂಡು ಬಂದ ಮರಾಠ ದೊರೆ ಶಿವಾಜಿಯ ಮಗ ರಾಜಾರಾಮನನ್ನು ರಕ್ಷಣೆ ಪಡೆದಿದ್ದು ಈ ಅರಮನೆಯಲ್ಲಿ. ಶಿವಮೊಗ್ಗದ ಅರಮನೆಯನ್ನು ಕೆಳದಿ ಶಿವಪ್ಪನಾಯಕನ ಅರಮನೆ ಎಂದು ಕರೆಯುವುದು ರೂಢಿಯಲ್ಲಿದೆ.

ವಿಶೇಷಗಳು[ಬದಲಾಯಿಸಿ]

ಅರಮನೆಯ ಪೂರ್ಣ ಮರ, ಮಣ್ಣು ಮತ್ತು ಗಚ್ಚುಗಾರೆಯಿಂದ ನಿರ್ಮಾಣವಾಗಿದೆ. ಇದರ ತಳಪಾಯ ಮಾತ್ರ ಜಂಬಿಟ್ಟಿಗೆ ಕಲ್ಲಿನಿಂದ ನಿರ್ಮಾಣವಾಗಿದೆ. ಅರಮನೆಯ ಎದುರು ಭಾಗವು ತೆರೆದ ಪ್ರಾಂಗಣವಾಗಿದೆ. ಇದರ ನೆಲದ ತುದಿಯಲ್ಲಿ ಸಾಲಾಗಿ ಕಲ್ಲುಚಪ್ಪಡಿಯನ್ನು ಜೋಡಿಸಲಾಗಿದೆ. ಇದು ೨೪ ಅಂಕಣಗಳ ಪ್ರಾಂಗಣವಾಗಿದ್ದು ಎರಡು ಭಾಗಗಳಲ್ಲಿ ವಿಂಗಡಿಸಲ್ಪಟ್ಟಿದೆ. ಇಲ್ಲಿನ ಮರದ ಕಂಬಗಳ ತಳಪಾಯವು ಅಷ್ಟಕೋನಾಕೃತಿಯಲ್ಲಿ ಹೂವಿನ ಪಕಳೆಗಳಂತೆ ಭಾಸವಾಗುವ ಮಾದರಿಯಲ್ಲಿ ಕೆತ್ತಲಾಗಿದ್ದು ಅದು ಮೇಲೇರುತ್ತಿದ್ದಂತೆ ಸ್ವಲ್ಪ ಸ್ವಲ್ಪವೇ ಕಿರಿದಾಗಿದೆ. ಇದರ ಮೇಲುಭಾಗದಲ್ಲಿ ಹದಿನಾರು ಪಟ್ಟಿಕೆಗಳಿವೆ. ಮೇಲೇರುತ್ತಿದಂತೆ ಕಿರಿದಾಗದ ಇದರ ಮೇಲೆ ಕಮಲದ ಎಸಳುಗಳನ್ನು ಕೆತ್ತಲಾಗಿದೆ. ಮೊದಲ ಭಾಗದಲ್ಲಿ ೧೨ ಅಂಕಣಗಳಿವೆ. ಇದರಲ್ಲಿ ಎತ್ತರವಾದ ಐದು ಕಂಭಗಳು ನೇರವಾಗಿ ಕಟ್ಟಡದ ಮಹಡಿಗೆ ಆಧಾರ ಸ್ತಂಭಗಳಾಗಿವೆ. ಬೋದಿಗೆಗಳು ತೊಲೆಯ ಜೋತೆಗೇ ಸೇರಿಕೊಂಡಿವೆ. ಕಮಲದ ಎಸಳಿನ ಕೆತ್ತನೆಯ ಭಾಗ, ಇದರ ಮೇಲಿದ್ದ ಸಾದಾ ಮರದ ಭಾಗ ಹಾಗೂ ಬೋದಿಗೆಗಳನ್ನು ಪ್ರತ್ಯೇಕವಾಗಿ ಕೆತ್ತನೆ ಮಾಡಿ ಜೋಡಿಸಿರುವಂತೆ ಕಾಣಿಸುತ್ತದೆ. ಪ್ರಾಂಗಣದ ಎಡ ಮತ್ತು ಬಲ ಭಾಗದಲ್ಲಿ ಕೊಠಡಿಗಳಿವೆ. ಮುಂಭಾಗದಲ್ಲಿ ಮಹಡಿಗೆ ಹೋಗಲು ವಿಶಾಲವಾದ ಮೆಟ್ಟಿಲುಗಲು ಮತ್ತು ಕಟಾಂಜನ ಇದೆ.ಎರಡನೆಯ ಭಾಗವನ್ನು ಮೊದಲ ಭಾಗಕ್ಕೆ ಹೋಲಿಸಿದರೆ ಸುಮಾರು ಒಂದು ಅಡಿ ಎತ್ತರದಲ್ಲಿದೆ. ಇಲ್ಲಿ ಒಂದು ಸಾಲಿನಲ್ಲಿ ಹತ್ತರಂತೆ ಎರಡು ಸಾಲು ಸ್ತಂಭಗಳಿವೆ. ಇವುಗಳಲ್ಲಿ ೪ ಕಂಬಗಳು ಗೋಡೆಯ ಜೊತೆಗೇ ಸೇರಿಕೊಂಡಿದೆ. ಹಿಂಭಾಗದಲ್ಲಿ ೧೦ ಕಂಬಗಳು ಗೋಡೆಗಳಲ್ಲಿ ಮುಚ್ಚಿದೆ. ಕಂಬಗಳನ್ನು ಕಲ್ಲಿನ ತಳಪಾಯದ ಮೇಲೆ ನಿಲ್ಲಿಸಲಾಗಿದೆ. ಈ ಕಂಬಗಳು ತಳವು ಆಯತಾಕಾರವಾಗಿದೆ. ಇವು ಹೂವಿನ ದಳದ ಆಕೃತಿಯಲ್ಲಿ ೮ ಮುಖವನ್ನು ಮೇಲೆ ಮಹಡಿಯನ್ನು ಕಟ್ಟಿದೆ. ಪ್ರಾಂಗಣದ ಎಡಬಲಗಳಲ್ಲಿ ೪ ಅಂಕಣದ ಕೆತ್ತನೆ ಇಲ್ಲದಿರುವ ಕಂಬವಿರುವ ಒಂದು ಕೊಠಡಿಯಿದೆ. ಕಮಾನಿನ ಆಕೃತಿಯಲ್ಲಿ ಈ ಕೊಠಡಿಯ ಬಾಗಿಲಿನ ಅಂಚಿದೆ. ಪ್ರಾಂಗಣದ ಹಿಂಭಾಗದ ಗೋಡೆಯಲ್ಲಿ ಕಿಟಕಿಗಳಿವೆ ಮತ್ತು ನಡುವೆ ಹಿಂಭಾಗಕ್ಕೆ ಪ್ರವೇಶಿಸುವ ದ್ವಾರವಿದೆ.ಮೇಲಿನ ಮಹಡಿಯಲ್ಲಿ ೧೮ ಅಂಕಣಗಳಿವೆ ಪ್ರತಿಸಾಲಿನಲ್ಲಿಯೂ ೮ ಕಂಬಗಳಿವೆ. ಎರಡು ಸಾಲುಗಳಿಂದ ಒಟ್ಟು ೧೬ ಕಂಬಗಳಿವೆ. ಇದರಲ್ಲಿ ೪ ಕಂಬಗಳು ಮತ್ತು ಹಿಂಭಾಗದ ೯ ಕಂಬಗಳು ಗೋಡೆಯೊಳಗೆ ಸೇರಿದೆ. ಈ ಕಂಬಗಳು ಪ್ರತಿಯೊಂದರ ನಡುವೆ ಕಮಾನಿನ ಆಕೃತಿಯಿದೆ. ಮಹಡಿಯ ಕಂಬದ ತಳಭಾಗವು ಹೂವಿನ ಎಸಳಿನಾಕೃತಿಯಲ್ಲಿ ಕೆತ್ತಲಾಗಿದೆ. ಕಂಬದ ಪುಷ್ಪಬೋದಿಗೆಗಳು ಸಹ ತೊಲೆಯ ಜೊತೆ ಸೇರಿವೆ. ಮಹಡಿಯ ಎದುರು ಭಾಗದಲ್ಲಿ ಮಧ್ಯದಲ್ಲಿ ಉಪ್ಪರಿಗೆ ಅಥವಾ ಚಿಕ್ಕ ಮುಂಚಾಚು ಇದ್ದು ಅದರ ೩ ಭಾಗಗಳಲ್ಲಿ ಸುಂದರವಾದ ಕೆತ್ತಲ್ಪಟ್ಟ ಕಂಬಗಳಿದ್ದು ಇದರಲ್ಲಿ ಮೇಲ್ಬಾಗದಲ್ಲಿ ಮರದ ಪಟ್ಟಿಕೆಯಿದೆ. ಮಹಡಿಯ ತುದಿಯ ಭಾಗದಲ್ಲಿ ಉದ್ದಕ್ಕೂ ಕಟಕಟೆಯಿದೆ. ಕೆಳದಿಯ ಅರಸರು ಈ ಚಿಕ್ಕ ಮುಂಚಾಚು ಅಲ್ಲಿ ಕುಳಿತು ಮುಂದೆ ಅಂಗಳದಲ್ಲಿ ಕಾಣುವ ದೃಶ್ಯಗಳ ವೀಕ್ಷಣೆ ಹಾಗೂ ಕೋಟೆಯ ಪರಿವೀಕ್ಷಣೆ ಮಾಡುತ್ತಿದರು.

ಉಲ್ಲೇಖನಗಳು[ಬದಲಾಯಿಸಿ]

  1. http://www.karnatakaholidays.com/shivamogga.php
  2. Dr. D. N. Panduranga. ಕರ್ನಾಟಕ ದೇವಾಲಯಗಳು ಮತ್ತು ಪ್ರೇಕ್ಷಣೀಯ ಸ್ಥಳಗಳು (೨೦೧೩ ed.). ಐ ಬಿ ಎಚ್ ಪ್ರಕಾಶಣ. pp. ೧೩೯-೧೪೨.