ಸದಸ್ಯ:Rameeza fathima/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕ್ರಿಕೆಟ್‌ನ ಇಂದ್ರ ಚಂದ್ರರನ್ನೆಲ್ಲ ನಮಗೆ ತಂದುಕೊಟ್ಟ ಈ ಮಹೇಂದ್ರ![ಬದಲಾಯಿಸಿ]

ನಾಯಕನಾಗಿ ಅತಿಹೆಚ್ಚು ಏಕದಿನ ಪಂದ್ಯದಲ್ಲಿ ಗೆಲವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ಧೋನಿಗೆ ಎರಡನೇ ಸ್ಥಾನ. ಅತಿಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದು ವಿಶ್ವದ ಅತ್ಯುತ್ತಮ ನಾಯಕರ ಸ್ಥಾನದಲ್ಲಿ ರಿಕಿ ಪಾಂಟಿಂಗ್ ನಂ.1 ಸ್ಥಾನದಲ್ಲಿದ್ದಾರೆ. ಅದು ಅಂಕಿ ಸಂಖ್ಯೆಯ ಲೆಕ್ಕ. ಆದರೆ ನನ್ನ ಪ್ರಕಾರ ಧೋನಿಗೆ ಮೊದಲ ಸ್ಥಾನ ಸಿಗಬೇಕು. ಯಾಕೆಂದರೆ ಧೋನಿ ಕೀಪರ್ ಕೂಡ ಹೌದು. ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುವಾಗ ಪ್ರತಿ ಬಾಲ್ ಮೇಲೂ ಗಮನ ಕೇಂದ್ರೀಕರಿಸಬೇಕು. ಜತೆಗೆ ನಾಯಕ ಸ್ಥಾನದ ಒತ್ತಡ. ರಿಕಿ ಪಾಂಟಿಂಗ್ ಒನ್‌ಡೌನ್ ಆಟಗಾರ. ಆದರೆ ಧೋನಿ ಐದು- ಆರನೇ ಆಟಗಾರನಾಗಿ ಬ್ಯಾಟಿಂಗ್ ಇಳಿಯುತ್ತಿದ್ದರು. ಒಳ್ಳೆಯ ಬ್ಯಾಟಿಂಗ್ ಪಿಚ್‌ನಲ್ಲಿ ಮೇಲಿನ ಕ್ರಮಾಂಕದ ಆಟಗಾರರು ಭರ್ಜರಿ ಆಟ ಪ್ರದರ್ಶಿಸುವುದರಿಂದ ಕೆಳ ಕ್ರಮಾಂಕದಲ್ಲಿ ಆಡುವವರಿಗೆ ಅವಕಾಶವೇ ಸಿಗುವುದಿಲ್ಲ. ಸಿಕ್ಕರೂ ಕೊನೆಯ ಐದಾರು ಓವರ್‌ಗಳು ಮಾತ್ರ. ಹೆಚ್ಚು ಬ್ಯಾಟಿಂಗ್ ಮಾಡುವ ಅವಕಾಶ ಸಿಗುವುದೇ ಅತ್ಯಂತ ಕಡಿಮೆ ರನ್‌ಗಳಿಗೆ ಹೆಚ್ಚು ವಿಕೆಟ್ ಕಳೆದುಕೊಂಡ ಒತ್ತಡದ ಸಮಯದಲ್ಲಿ. ಹೀಗಿರುವಾಗಲೂ ಹೆಚ್ಚು ರನ್ ಗಳಿಸುವುದರ ಜತೆಗೆ ಉತ್ತಮ ನಾಯಕತ್ವವನ್ನೂ ತೋರಿರುವುದು ಧೋನಿಯ ಹೆಗ್ಗಳಿಕೆ.

ಸಾಕಷ್ಟು ಜನ ದಿಗ್ಗಜರು ಕ್ರಿಕೆಟ್ ಆಡಿದ್ದಾರೆ. ಆದರೆ ಮಹೇಂದ್ರ ಸಿಂಗ್ ಧೋನಿ ಎಂಬ ಜಾರ್ಖಂಡ್ ರಾಜ್ಯದ ರಾಂಚಿ ಎಂಬ ಸಣ್ಣ ಊರಿನಿಂದ ಕ್ರಿಕೆಟ್ ವಿಶ್ವಕ್ಕೆ ಕಾಲಿಡುವವರೆಗೂ ಹೆಲಿಕಾಫ್ಟರ್ ಶಾಟ್ ಎಂಬ ಹೆಸರೇ ಇರಲಿಲ್ಲ. ಅಲ್ಲಿಯವರೆಗೂ ಯಾರ್ಕರ್ ಎಂದರೆ ಬೌಲರ್‌ಗಳ ಬ್ರಹ್ಮಾಸ್ತ್ರ ಎಂದೇ ಭಾವಿಸಲಾಗಿತ್ತು. ಯಾರ್ಕರ್ ಹಾಕಿದರೆ ಅದರಿಂದ ಬೋಲ್ಡ್ ಆಗದೇ ಬಚಾವ್ ಆಗುವುದೊಂದೇ ಮಾರ್ಗ ವಾಗಿತ್ತು. ಆದರೆ ಯಾರ್ಕರ್ ಬಾಲನ್ನೂ ಸಿಕ್ಸರ್ ಬಾರಿಸುವುದು ಹೇಗೆ ಎಂಬ ಅನೂಹ್ಯ ಕಲೆಯನ್ನು ಧೋನಿಯೇ ತೋರಿಸಿದ್ದು. ಬೌಲರ್‌ಗಳು ಬ್ರಹ್ಮಾಸ್ತ್ರ ಪ್ರಯೋಗ ಮಾಡಲೇ ಹೆದರುವಂತೆ ಮಾಡಿದ್ದು ಧೋನಿಯ ಹೆಗ್ಗಳಿಕೆ. ಇದೇ ಹೆಲಿಕಾಫ್ಟರ್ ಶಾಟ್ ಮೂಲಕ ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. 2011ರ ವಿಶ್ವಕಪ್ ಫೈನಲ್‌ನಲ್ಲಿ ಸಿಕ್ಸರ್ ಹೊಡೆದ ರೀತಿ ಎಂದಿಗೂ ಮರೆಯಲು ಸಾಧ್ಯವಿಲ್ಲ.

ಧೋನಿಗೂ ಉಳಿದ ಕ್ರಿಕೆಟ್ ಆಟಗಾರರಿಗೂ ಇದ್ದ ವ್ಯತ್ಯಾಸವೆಂದರೆ ಲೆಕ್ಕಾಚಾರ. ಕೊನೇ ಕ್ಷಣದಲ್ಲಿ ಯಾವ ಯಾವ ಬೌಲರ್‌ಗಳಿದ್ದಾಾರೆ? ಎಷ್ಟು ಬಾಲ್‌ಗಳಿವೆ? ಎಷ್ಟು ರನ್ ಬೇಕು? ಯಾವ ಬೌಲರ್‌ಗೆ ಕೊನೆಯ ಓವರ್ ನೀಡಬಹುದು? ಯಾವ ಬೌಲರ್‌ನನ್ನು ಟಾರ್ಗೆಟ್ ಮಾಡಬೇಕು? ಎಂಬಿತ್ಯಾದಿ ಲೆಕ್ಕವೆಲ್ಲ ಅವರ ತಲೆಯಲ್ಲಿ ಸರಾಗವಾಗಿ ಸುತ್ತುತ್ತಿತ್ತು. ಎಷ್ಟೇ ಒತ್ತಡವಿದ್ದರೂ ಅದನ್ನು ಎಂದು ಧೋನಿ ತೋರಿಸಿಕೊಂಡಿದ್ದೇ ಇಲ್ಲ. ಕೊನೆಯ ಓವರ್‌ನಲ್ಲಿ 20 ರನ್ ಬೇಕಿದ್ದರೂ ಅತ್ಯಂತ ನಿರಾಳವಾಗಿ ಬ್ಯಾಟಿಂಗ್ ನಿಲ್ಲುತ್ತಿದ್ದ. ಬಹುಶಃ ಈ ನಿರಾಳ ಅಥವಾ ಸ್ಥೈರ್ಯವೇ ಬೌಲರ್‌ನನ್ನು ಕುಗ್ಗಿಸುತ್ತಿತ್ತು. ಅದೇ ಅವರ ಯಶಸ್ಸಿನ ಗುಟ್ಟು.

ಅವರು ಎಷ್ಟು ನಿರಾಳವಾಗಿರುತ್ತಿದ್ದರು ಎಂಬುದನ್ನು ಮೊನ್ನೆ ಮೊನ್ನೆ ಸಂಜಯ್ ಮಾಂಜ್ರೇಕರ್ ಹೇಳಿದ ಮಾತುಗಳಿಂದ ಅರ್ಥಮಾಡಿಕೊಳ್ಳಬಹುದು. ಮಾಂಜ್ರೇಕರ್ ಆಗ ಆಯ್ಕೆ ಸಮಿತಿಯಲ್ಲಿದ್ದರು. ಅವರು ಧೋನಿಯನ್ನು ನಾಯಕನ್ನಾಗಿ ಮಾಡುವ ಬಗ್ಗೆ ಯೋಚಿಸುತ್ತಿದ್ದರು. ಅದಕ್ಕೂ ಮೊದಲು ಅವರ ಜತೆ ಒಂದಷ್ಟು ಸಂಗತಿಗಳನ್ನು ಚರ್ಚಿಸಲು ಬಯಸಿದ್ದರು. ಇಬ್ಬರೂ ಒಂದೇ ದಿನ ಕೋಲ್ಕತಾಗೆ ಹೋಗುತ್ತಿರುವ ವಿಷಯ ತಿಳಿಯಿತು. ಆಗ ಮಾಂಜ್ರೇಕರ್ ಅವರೇ ತಮ್ಮ ವಿಮಾನ ಬದಲಿಸಿ ಧೋನಿ ಜತೆಗೆ ಪ್ರಯಾಣ ಬೆಳೆಸಿದರು. ಎರಡು ತಾಸು ವಿಮಾನದಲ್ಲಿ ಮಾತಾಡಬಹುದು ಎಂಬದು ಮಾಂಜ್ರೇಕರ್ ಅವರ ಇರಾದೆಯಾಗಿತ್ತು. ಆದರೆ ವಿಮಾನ ನೆಲ ಬಿಟ್ಟು ಹಾರುತ್ತಿದ್ದಂತೆ ನಿದ್ರೆಗೆ ಜಾರಿದ ಧೋನಿ ಕೋಲ್ಕತಾದಲ್ಲಿ ವಿಮಾನ ಲ್ಯಾಂಡ್ ಆದಾಗಲೇ ಎಚ್ಚರಗೊಂಡಿದ್ದು!

ಚಿಂತೆ ಇಲ್ಲದವನಿಗೆ ನಿದ್ರಿಸಲು ಸಂತೆಯಾದರೇನು ವಿಮಾನವಾದರೇನು! ಎಲ್ಲರೂ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುತ್ತಾರೆ. ಆದರೆ ಧೋನಿ ಆ ಮಾತಿಗೆ ಅಪವಾದ. ಯಾಕೆಂದರೆ ಅವರು ಮೊದಲು ಆಡುತ್ತಿದ್ದುದು ಹಾಕಿ. ಅವರು ಶಾಲೆಯಲ್ಲಿ ಹಾಕಿ ತಂಡದ ಗೋಲ್‌ಕೀಪರ್ ಆಗಿದ್ದರು! ಗೋಲ್‌ಕೀಪರ್ ಆಗಿದ್ದ ಅನುಭವದ ಆಧಾರದಲ್ಲಿ ಕ್ರಿಕೆಟ್ ಆಡುವಾಗ ವಿಕೆಟ್ ಕೀಪಿಂಗ್ ಸಿಗುತ್ತಿತ್ತು. ವಿಕೆಟ್ ಕೀಪಿಂಗ್‌ಗಾಗಿಯೇ ಧೋನಿ ಭಾರತ ತಂಡಕ್ಕೂ ಆಯ್ಕೆಯಾಗಿದ್ದು. 1997-9816 ವರ್ಷದೊಳಗಿನವರ ವಿನು ಮಂಕಡ್ ಪಂದ್ಯಾವಳಿಯಲ್ಲಿ ಧೋನಿಯ ಆಟ ಆಯ್ಕೆೆದಾರರ ಗಮನ ಸೆಳೆಯಿತು. ಅಲ್ಲಿಂದ 19 ವರ್ಷದೊಳಗಿನವರ ತಂಡ, ನಂತರ ಬಿಹಾರ ರಣಜಿ ತಂಡಕ್ಕೆ ಆಯ್ಕೆಯಾದರು. ರಣಜಿಯಲ್ಲಿ ಅಸ್ಸಾಂ ವಿರುದ್ಧದ ಮೊದಲ ಪಂದ್ಯದಲ್ಲಿ ಗಳಿಸಿದ್ದು 68 ರನ್. ಆದರೂ ರಣಜಿಯಲ್ಲಿ 2003ರವರೆಗೂ ಧೋನಿಯ ಸರಾಸರಿ 40 ರನ್ ಮಾತ್ರ. ಧೋನಿ ಕ್ರಿಕೆಟ್ ಜೀವನದಲ್ಲಿ ತಿರುವು ನೀಡಿದ್ದು ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದು. 2003ರಲ್ಲಿ ಕೀನ್ಯಾದಲ್ಲಿ ನಡೆದ ಪಾಕಿಸ್ತಾನ, ಭಾರತ ಮತ್ತು ಕಿನ್ಯಾದ ಎ ತಂಡಗಳ ತ್ರಿಕೋನ ಸರಣಿಯಲ್ಲಿ ಧೋನಿ 70 ರನ್‌ಗಳ ಸರಾಸರಿಯಲ್ಲಿ ಒಟ್ಟು 362 ರನ್‌ಗಳಿಸಿದರು. ಅದರಲ್ಲಿ ಪಾಕಿಸ್ತಾನದ ವಿರುದ್ಧದ ಎರಡು ಶತಕ ಸೇರಿತ್ತು. ಇದು ಭಾರತ ಕ್ರಿಕೆಟ್ ತಂಡದ ಆಯ್ಕೆದಾರರ ಗಮನ ಸೆಳೆಯಿತು.

ಬಾಂಗ್ಲಾದೇಶದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಧೋನಿ ಮೊದಲ ಪಂದ್ಯದಲ್ಲಿ ಸೊನ್ನೆಗೆ ರನ್‌ಔಟ್! ಧೋನಿಯ ನಿಜವಾದ ಪರಿಚಯವಾಗಿದ್ದು ಅವರ ಐದನೇ ಏಕದಿನ ಪಂದ್ಯದಲ್ಲಿ ಅವರು ಪಾಕಿಸ್ತಾನ ವಿರುದ್ಧ 123 ಎಸೆತಗಳಲ್ಲಿ 148 ರನ್ ಗಳಿಸಿದಾಗ. ಆಗ ಭಾರತದ ಕ್ರಿಕೆಟ್ ಅಭಿಮಾನಿಗಳೆಲ್ಲ ಒಮ್ಮೆ ಈ ಉದ್ದ ಕೂದಲಿನ ಹುಡುಗನತ್ತ ಅಚ್ಚರಿಯ ದೃಷ್ಟಿ ಬೀರಿದರು. 2005ರಲ್ಲಿ ನವೆಂಬರ್‌ನಲ್ಲಿ ಪಂದ್ಯವೊಂದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 299 ರನ್‌ಗಳ ಗುರಿ ನೀಡಿತ್ತು. ಆ ಪಂದ್ಯದಲ್ಲಿ ಧೋನಿಯೊಬ್ಬರೇ 143 ಎಸೆಗಳಲ್ಲಿ 183 ರನ್ ಬಾರಿಸಿ, ಗೆಲುವು ತಂದಿತ್ತರು. ಸಾಮಾನ್ಯವಾಗಿ ವಿಕೆಟ್ ಕೀಪರ್‌ಗಳು ಒಳ್ಳೆಯ ಬ್ಯಾಟಿಂಗ್ ಮಾಡಿದರೆ ಅದು ಬೋನಸ್. ಆದರೆ ಧೋನಿಯ ವಿಷಯದಲ್ಲಿ ಕೀಪಿಂಗೇ ಬೋನಸ್ ಎಂಬಂತಾಗಿದೆ. ಧೋನಿ ಇಷ್ಟೆಲ್ಲ ಗೆಲುವುಗಳನ್ನು ತಂದುಕೊಟ್ಟರೂ ಗೆದ್ದಾಗ ಬೀಗಲಿಲ್ಲ. ಸೋತಾಗ ಜರ್ಜರಿತರಾಗಲಿಲ್ಲ. ಸೋಲು ಗೆಲುವನ್ನು ಸಾಮನವಾಗಿ ಸ್ವೀಕರಿಸುವ ಗುಣ ಧೋನಿಯಲ್ಲಿತ್ತು. ಅವರ ಬ್ಯಾಟಿಂಗ್ ಎಷ್ಟು ಅಗ್ರೆಸ್ಸೀವ್ ಆಗಿತ್ತೋ ಅವರು ಅಷ್ಟೇ ಕೂಲ್ ಕ್ಯಾಪ್ಟನ್ ಆಗಿರುತ್ತಿದ್ದರು.ಅದಕ್ಕೇ ಅವರಿಗೆ ಕ್ಯಾಪ್ಟನ್ ಕೂಲ್ ಎಂಬ ಹೆಸರು.

ಧೋನಿ ಈಗ ಭಾರತ ತಂಡದ ನಾಯಕತ್ವ ಬಿಟ್ಟಿರಬಹುದು. ಆದರೆ ಕ್ರಿಕೆಟ್ ಅಲ್ಲ. ಅವರು ತಂಡದಲ್ಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ. ಅವರೀಗ ಅನುಭವೀ ಆಟಗಾರನ ಸ್ಥಾನ ನಿಭಾಯಿಸಬೇಕಿದೆ. ಅವರಿಂದ ಇನ್ನಷ್ಟು ಕೊನೆಯ ಓವರ್‌ಗಳ ಆಟ, ಹೆಲಿಕಾಫ್ಟರ್ ಶಾಟ್‌ಗಳನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ ಸದಾ ಅವರೇ ಬಂದು ಕೊನೆಯ ಓವರ್‌ನಲ್ಲಿ ಪಂದ್ಯ ಗೆಲ್ಲಿಸುತ್ತಾರೆಂದು ನಿರೀಕ್ಷಿಸುವುದು ತಪ್ಪಾದೀತು. ಕಾಲಕ್ಕೆ ತಕ್ಕಂತೆ ಅವರ ಆಟ, ಜವಾಬ್ದಾರಿ ಬದಲಾಗಬಹುದು. ಅವರ ಜವಾಬ್ದಾರಿಯನ್ನು ಹೊಸಬರು ನಿಭಾಯಿಸಬಲ್ಲರೇನೊ.

ಇಲ್ಲಿ ಇನ್ನೊಂದು ಪ್ರಸಂಗ ಹೇಳಲೇಬೇಕು. ಧೋನಿ ಮೈದಾನದಲ್ಲಿ ಮಾತ್ರ ಭರ್ಜರಿ ಬ್ಯಾಟ್ ಬೀಸುತ್ತಿದ್ದರು ಎಂದು ಭಾವಿಸಬೇಡಿ. ಪತ್ರಿಕಾಗೋಷ್ಠಿಗಳಲ್ಲೂ ಅವರು ಬಾರಿಸಿದ ಸಿಕ್ಸರ್‌ಗಳಿಗೆ ಕೊರತೆಯಿಲ್ಲ. ಒಮ್ಮೆ ವಿದೇಶದಲ್ಲಿ ಪತ್ರಕರ್ತನೊಬ್ಬ ಅವರಿಗೆ ಇತ್ತೀಚೆಗೆ ‘ನೀವು ಯಾವಾಗ ನಿವೃತ್ತಿಯಾಗುತ್ತೀರಾ?’ ಎಂಬ ಪ್ರಶ್ನೆ ಕೇಳಿದ್ದ. ಬಹುಶಃ ಬೇರೆಯವರಾಗಿದ್ದರೆ ಸಿಟ್ಟಿಗೇಳುತ್ತಿದ್ದರೇನೊ. ಆದರೆ ಧೋನಿ ಆ ಪತ್ರಕರ್ತನನ್ನೇ ವೇದಿಕೆಗೆ ಕರೆದು. ಅವನ ಬಳಿ ‘ಮೈದಾನದಲ್ಲಿ ನಾನು ರನ್‌ಗಾಗಿ ಓಡುವುದನ್ನು ನೋಡಿದಾಗ ನಾನು ಫಿಟ್ ಇದ್ದೇನೆಂದು ಅನ್ನಿಸುವುದಿಲ್ಲವೇ?’ ಎಂದು ಪ್ರಶ್ನಿಸಿದರು. ಆತ ‘ಖಂಡಿತ ಫಿಟ್ ಇದ್ದೀರಿ’ ಅಂದ. ‘ನನ್ನ ಫಿಟ್‌ನೆಸ್ ಮತ್ತು ರನ್‌ಗಳಿಕೆಗಳನ್ನು ನೋಡಿದರೆ ನಾನು 2019ರ ವಿಶ್ವಕಪ್ ತನಕ ಆಡಬಲ್ಲೆ ಎನಿಸುತ್ತದೆಯೇ?’ ಎಂದು ಪ್ರಶ್ನಿಸಿದರು. ಅದಕ್ಕೂ ಆ ಪತ್ರಕರ್ತರ ‘ಖಂಡಿತ ಆಡಬಲ್ಲರಿ’ ಎಂದ.

ನೀವು ಕೇಳಿದ ಪ್ರಶ್ನೆಗೆ ನೀವೇ ಉತ್ತರಿಸಿದ್ದೀರಿ ಎಂದು ಹೇಳಿ ಧೋನಿ ಪತ್ರಿಕಾಗೋಷ್ಠಿ ಮುಗಿಸಿದ್ದರು. ಕ್ರಿಕೆಟ್ ಇಷ್ಟಪಡುವವರು ಧೋನಿಯಿಂದ ಕ್ರಿಕೆಟ್ ಕಲಿಯಬಹುದು. ಆದರೆ ನಾವೆಲ್ಲರೂ ಅವರಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಜೀವನದಲ್ಲೂ ಕ್ರಿಕೆಟ್‌ನಂತೆ ಸೋಲು ಗೆಲುವುಗಳಿರುತ್ತವೆ. ಹೇಗೆ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಬೇಕು. ಸೋಲು ಬಂದಾಗ ಕುಗ್ಗದೆ, ಗೆಲುವು ಸಿಕ್ಕಾಗ ತುಂಬ ಹಿಗ್ಗದಿರುವುದನ್ನು ಧೋನಿಯಿಂದ ಕಲಿಯಬೇಕು. ನಾವು ಚಿಕ್ಕ ಚಿಕ್ಕ ವಿಷಯಕ್ಕೆ ಕೂಗಾಡುತ್ತೇವೆ. ಸಿಟ್ಟಾಗುತ್ತೇವೆ. ಎಂತಹ ಒತ್ತಡದ ಪರಿಸ್ಥಿತಿಯೇ ಇರಲಿ, ಯಾರೇ ಕ್ಯಾಚ್ ಬಿಡಲಿ, ಪಂದ್ಯ ಸೋಲಲಿ ಧೋನಿ ಕೂಗಾಡಿದ್ದು, ಕೈ ತೋರಿಸಿದ್ದು, ಮುಖದಲ್ಲಿ ಅಸಹನೆ ತೋರಿದ್ದನ್ನು ಯಾರೂ ನೋಡಿಲ್ಲ. ಧೋನಿಯ ಅಸಹನೆಯ ಮುಖವನ್ನು ಬಹುಶಃ ಯಾರೂ ನೋಡಿಯೇ ಇಲ್ಲ. ಧೋನಿಯ ಕ್ರಿಕೆಟ್‌ನಲ್ಲಿ ಜೀವನದ ಪಾಠವೂ ಇದೆ.