ಸದಸ್ಯ:Rameeza fathima

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                    ಬೇಡವಾದೆನೇ ನಾ...!
ಬೇಡವಾದೆನೇ ನಾ,
ಅಮ್ಮಾ...ಬೇಡವಾದೆನೇ ನಾ...?
ನಿನ್ನ ಬಳಿ ಈಗ ತಾನೆ ಬಂದೆನಮ್ಮ
ಅಗೋ ಅಲ್ಲಿ ತರಬಾರದೇ ತೊಟ್ಟಿಲು
ಭಯವೇ? ನವಮಾಸ ದಶ ದಿನಗಳು ಅಷ್ಟೇ!
ಪೂರ್ಣರೂಪವನ್ನು ತಾಳಿಲ್ಲವಿನ್ನೂ
ನಿನ್ನ ಜೊತೆ ಗುದ್ದಾಟವಾಡಿಲ್ಲವಿನ್ನು...
ನಿದ್ದೆಯೇ ಇಲ್ಲ,ಮನದ ತುಂಬಾ ಗೊಂದಲ
ಯಾತಕೆ ಈ ಅವಸರವಮ್ಮಾ..
ನನ್ನೊಡನೆ ಕರುಣೆ ತೋರಮ್ಮ...
ಬಣ್ಣದ ಕನಸುಗಳ ಸೆರೆಹಿಡಿಯುವ ಓಟದಲಿ
ನನ್ನ ಇರುವು ಇರುಸು ಮುರಿಸು
ಅಪ್ಪನ ನಂಬಿದ ಮಾತುಗಳ ಶೂಲದೆದುರು
ಅಜ್ಜಿಯ ದರ್ಪದ ಕಿಚ್ಚಿನಲಿ
ಹೋತದ ಬಲಿಯಂತೆ ನನ್ನ
ನಿನ್ನ ಹೊಕ್ಕುಳ ಬಂಧ ಆ ಅನುಬಂಧ
ಮುರಿಯುವ ಭವದ ಕಟುಕರೆದುರು
ಕರುಳಿನ ಜೀವ ಉಳಿಸಮ್ಮಾ...
ನನ್ನೊಡನೆ ಕರುಣೆ ತೋರಮ್ಮ...
ಪ್ರೀತಿ,ವಾತ್ಸಲ್ಯದಿ ಸವರುವ ನಿನ್ನ ಕೈ ಸ್ಪರ್ಶ
ಚಿರ ಕೃಪೆಯ ಬಿಸಿಯಪ್ಪುಗೆಯ ನೆರಳಲಿ
ಕಣ್ಣು ತೂಗುತ್ತಾ ಆಸ್ವಾದಿಸಲು ಬಿಡು
ಕತ್ತಲನಿರಿಯುವ ಅಕ್ಕರೆಯ ನಿನ್ನ ನಡಿಗೆ
ದಯೆ,ಕರುಣೆಗಳ ಬಿಸಿಯುಸಿರಿನಲಿ
ಸ್ವಾಭಿಮಾನದ ಸಿಂಹ ಪೌರುಷ ಸಸಿಯ ನೆಡು
'ನಿನ್ನ ಪಾದದದಡಿಯ ಸ್ವರ್ಗ'ದ ಕರುಣಾನುಕಂಪ
ಸವಿಯುವ ಸೌಭಾಗ್ಯ ನೀಡಮ್ಮಾ...
ನನ್ನೊಡನೆ ಕರುಣೆ ತೋರಮ್ಮಾ...
ಈ ಬದುಕು ನಿನ್ನದಮ್ಮಾ
ಇದು ನಿನ್ನ ಕರುಳಿನ ಕೂಗಮ್ಮಾ...
ಹೆಣ್ಣಾದರೇನು...?ಗಂಡಾದರೇನು...?
ಕೊನೆಗೊಮ್ಮೆ ಮನಬಿಚ್ಚಿ ಆಲಂಗಿಸು
ಮುಸ್ಸಂಜೆಯ ಚೆಲುವಿನಲ್ಲಿ ನಿನ್ನ ಕೈ ತುತ್ತು
ತಿನ್ನುವಾಸೆಯಮ್ಮ...
ನೀವುಣ್ಣುವ ಬಟ್ಟಲು ಹಿಡಿಯೊಂದು ಸಾಕೆನಗೆ
ಬೆರಳ ಹಿಡಿದು,ಮುಂದೆ ನಡೆಸು ಹೆಮ್ಮೆಯಿಂದ
ನಿನ್ನ ಮಡಿಲಲಿ ಮಲಗುವೆ ನಿಶ್ಚಿಂತೆಯಿಂದ
ಬೆಳಕಾಗಲಿ,ತಂಪಾಗಲಿ ನಿನ್ನ ಬಾಳು ಬೆಳಗಲಿ!
ನನ್ನೊಡನೆ ಕರುಣೆ ತೋರಮ್ಮಾ...
ಬೇಡವಾದೆನೇ ನಾ,
ಅಮ್ಮಾ...ಬೇಡವಾದೆನೇ ನಾ...?