ಸದಸ್ಯ:Meghana Shivanand/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

⚜️⭐ಇಂದಿನ ಯುವ ಪೀಳಿಗೆಯಲ್ಲಿ ಹೆಚ್ಚಾಗುತ್ತಿರುವ ವಿಚ್ಛೇದನಗಳ ಪ್ರಮಾಣ⭐⚜️

                   ಹಿಂದಿನ ಕಾಲದಲ್ಲಿ ದಂಪತಿಗಳ ನಡುವೆ ಜಗಳವಾದರೆ ಇಲ್ಲವೇ ಮನಸ್ತಾಪ ಮೂಡಿದರೆ ಅದನ್ನು ಊರಿನ ಹಿರಿಯರ ಗಮನಕ್ಕೆ ತರಲಾಗುತ್ತಿತ್ತು. ಪಂಚಾಯಿತಿ ಕಟ್ಟೆಯಲ್ಲಿ ಅಥವಾ ಗ್ರಾಮಸ್ಥರೇ ಆ ದಂಪತಿಗಳ ಮನೆಗೆ ಪ್ರವೇಶಿಸಿ ಅವರ ನಡುವಿನ ಸಮಸ್ಯೆಯನ್ನು ಪರಿಹರಿಸುತ್ತಿದ್ದರು. ತಪ್ಪು ಸತಿಯಿಂದಾದರೂ ಅಥವಾ ಪತಿಯಿಂದಾದರೂ ಅದನ್ನು ಗುರುತಿಸಿ ತಿಳುವಳಿಕೆ ನೀಡಿ, ಅವರಿಬ್ಬರ ನಡುವಿನ ಮನಸ್ತಾಪವನ್ನು ಮುರಿಯುತ್ತಿದ್ದರು. ಹೀಗೆ ಹಿರಿಯರ ಮಾರ್ಗದರ್ಶನದಂತೆ ನಡೆಯುವ ಸತಿಪತಿಗಳ ಸಂಸಾರ ಹೊಂದಾಣಿಕೆಯಿಂದ ಸರಿದೂಗುತ್ತಿತ್ತು. ಹಾಗಾಗಿ ಆ ಕಾಲದಲ್ಲಿ ವಿಚ್ಛೇದನಗಳ ಸಮಸ್ಯೆಯೇ ಕಾಣಿಸಿಕೊಳ್ಳುತ್ತಿರಲಿಲ್ಲ. ಒಂದು ವೇಳೆ ಕಾಣಿಸಿಕೊಂಡರು ಅದು ನೂರಕ್ಕೆ ಪ್ರತಿಶತ ಹತ್ತರಷ್ಟು ಮಾತ್ರ. ಇಂದಿನ ಯುವ ಪೀಳಿಗೆಯಲ್ಲಿ ಮದುವೆ ಎಂಬ ಬಾಂಧವ್ಯವು ವಿಚ್ಛೇದನವೆಂಬ ಮಾಯೆಯಿಂದ ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತಿದೆ. ವಿದ್ಯಾವಂತರೂ, ಜ್ಞಾನವುಳ್ಳವರೂ ಆಗಿರುವಂತಹ ಯುವಕ ಯುವತಿಯರು ತಮ್ಮದೇ ವೈಯಕ್ತಿಕ ನಿರ್ಧಾರಗಳಿಂದ ತಪ್ಪು ಹೆಜ್ಜೆ ಹಾಕುತ್ತಿದ್ದಾರೆ. ಈಗಂತೂ ವಿಚ್ಛೇದನ ಪ್ರಕ್ರಿಯೆ ಸುಲಭವಾಗಿ ಬಿಟ್ಟಿದೆ! ಸಂವಿಧಾನದ 498ನೇ ಅನುಚ್ಛೇದದ ಪ್ರಕಾರ ಅತ್ತೆ ಮನೆಯವರ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯದ ಆರೋಪ ಹೊರಿಸಿ ಗಂಡನಿಂದ ವಿಚ್ಛೇದನ ಪಡೆದುಕೊಳ್ಳಬಹುದು. ಇದಕ್ಕೆ ಆಕೆ ಯಾವುದೇ ಪುರಾವೆ ಕೊಡಬೇಕಾಗಿಲ್ಲ. ಆದರೆ ಈ ವ್ಯವಸ್ಥೆಯನ್ನು ಅನೇಕ ಯುವತಿಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಈ ಕಾಯ್ದೆಗೆ ಅಷ್ಟಿಷ್ಟು ತಿದ್ದುಪಡಿ ತರಲಾಗಿದೆ!!

                      ಅಮೆರಿಕ ಹಾಗೂ ಕೆನಡಾದ ಜೊತೆ ಜೊತೆಗೆ ಹಲವು ಪಶ್ಚಿಮಾತ್ಯ ದೇಶಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತವೆ. ನಮ್ಮಲ್ಲಿನ ಕೆಲವರು ಅಲ್ಲಿಯೇ ಇರುವುದರಿಂದ / ಅಲ್ಲಿದ್ದು ಇಲ್ಲಿಗೆ ಬಂದಿರುವುದರಿಂದ / ಇಲ್ಲಿ ಭಾರತದಲ್ಲಿದ್ದುಕೊಂಡೇ ಅವರ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದ ಅಲ್ಲಿನ ಜನರ ವೈವಾಹಿಕ ಜೀವನದ ಪ್ರಭಾವ ನಮ್ಮವರ ಮೇಲೂ ಉಂಟಾಗುತ್ತಿದೆ! ಆದರೆ ವಿದೇಶಿ ಯುವಕ ಅಥವಾ ಯುವತಿಯರಿಗೆ ಕುಟುಂಬದ ಬಗೆಗಾಗಲಿ, ಸಮಾಜದ ಬಗೆಗಾಗಲೀ ಯಾವುದೇ ಹೊಣೆಗಾರಿಕೆಯಿರುವುದಿಲ್ಲ. ಸಮಾಜ ಏನು ಹೇಳುತ್ತದೆ ಎಂಬ ಭಯ ಭೀತಿ ಸಹ ಇರುವುದಿಲ್ಲ. ನಮ್ಮ ಭಾರತೀಯರು ಕೂಡ ಅವರನ್ನೇ ಅನುಕರಣಿಸುತ್ತಿದ್ದಾರೆ. ಮಲ್ತಾ ಮತ್ತು ಫಿಲಿಫೈನ್ಸ್ ದೇಶಗಳಲ್ಲಿ ವಿಚ್ಛೇದನಕ್ಕೆ ಅನುಮತಿಯೇ ಇಲ್ಲ. ಹಾಗಾಗಿ ಆ ದೇಶಗಳಲ್ಲಿ ಅಂತ ಸಮಸ್ಯೆಗಳು ಉದ್ಭವಿಸುವುದಿಲ್ಲ. ಆದರೆ ಭಾರತದಲ್ಲಿ ವಿಚ್ಛೇದನಕ್ಕಂತೂ ಅನುಮತಿ ಇದೆ! ಹಾಗಾಗಿ ಆ ಸಮಸ್ಯೆಗಳು ಇಂದಿಗೂ ಕೂಡ ಏರುತ್ತಲೇ ಇವೆ. ಸ್ಫುಟವಾದ ಕಾರಣಗಳಿಗೆ ವಿಚ್ಛೇದನ ತೆಗೆದುಕೊಳ್ಳುವುದರಲ್ಲಿ ಯಾವುದೇ ಆಕ್ಷೇಪಣೆ ಇಲ್ಲ. ಗಂಡನ ಕಿರುಕುಳ, ಮಾನಸಿಕ ದೌರ್ಜನ್ಯದಿಂದ ಬೇಸತ್ತ ಯುವತಿಯರು ಇಲ್ಲವೇ ಯುವಕರು ಆ ಸಮಸ್ಯೆಯನ್ನು ನಿವಾರಿಸಲು ವಿಚ್ಛೇದನ ತೆಗೆದುಕೊಳ್ಳುವುದು ಒಳ್ಳೆಯ ವಿಚಾರವೇ. ಏಕೆಂದರೆ ನೆಮ್ಮದಿ ಇಲ್ಲದೆ, ಇಷ್ಟವಿಲ್ಲದ ಸಂಗಾತಿಯ ಜೊತೆಗೆ ಬಾಳುವುದು ಬಾರೀ ಹಿಂಸೆಯಾಗಬಹುದು. ಅಂತಹ ಸಂದರ್ಭದಲ್ಲಿ ವಿಚ್ಛೇದನ ಅವರ ವೈವಾಹಿಕ ಸಮಸ್ಯೆಗೆ ಮುಕ್ತಿಯನ್ನು ತಂದುಕೊಡುವಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

                      ಆದರೆ ಕ್ಷುಲ್ಲಕ ಕಾರಣಗಳಿಗೆ ವಿಚ್ಛೇದನದ ಮೊರೆ ಹೋಗುವಂತಹ ದಂಪತಿಗಳು ಅದೆಷ್ಟೋ ಮಂದಿ ಇದ್ದಾರೆ. ವಧು- ವರರ ಜಾತಕ ನೋಡಿ ಶಾಸ್ತ್ರಬದ್ಧವಾಗಿ ನಡೆದಂತಹ ಎಷ್ಟೋ ಮದುವೆಗಳು ಇಂದು ಮುರಿದು ಬೀಳುತ್ತಿವೆ. ದಾಂಪತ್ಯದ ನಡುವೆ ಬರುವಂತಹ ಸಣ್ಣ ಸಣ್ಣ ಸಮಸ್ಯೆಗಳನ್ನು ಎದುರಿಸಲಾಗದೆ; ಸಂಸಾರವನ್ನು ಸರಿದೂಗಿಸಿಕೊಳ್ಳಲಾಗದೆ ವಿಚ್ಛೇದನವನ್ನು ತೆಗೆದುಕೊಳ್ಳುತ್ತಿದ್ದಾರೆ. ಇನ್ನೊಂದು ಗಮನಾರ್ಹ ವಿಷಯವೆಂದರೆ: ಮುಂಬೈ ಹೈಕೋರ್ಟ್ 2021 ರಲ್ಲಿ ಒಂದು ಪ್ರಕರಣದ ಕುರಿತಂತೆ ತೀರ್ಪು ನೀಡುತ್ತಾ, ಅರೇಂಜ್ಡ್ ಮ್ಯಾರೇಜ್ ಗಳಿಗೆ ಹೋಲಿಸಿದರೆ ಪ್ರೇಮ ವಿವಾಹಗಳಲ್ಲೇ ವಿಚ್ಛೇದನದ ಪ್ರಮಾಣ ಹೆಚ್ಚೆಂದು ಹೇಳಿತ್ತು! 1980ರ ಸಾಲಿನಲ್ಲಿ ಪ್ರೇಮ ವಿವಾಹಗಳಿಗೆ ಹೆಚ್ಚಿನ ಚಾಲನೆ ಸಿಕ್ಕಿತ್ತು. ಇದರಿಂದ; 'ಪ್ರೇಮ ವಿವಾಹಗಳಿಂದಲೇ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತವೆ' ಎಂಬುದಂತೂ ಸ್ಪಷ್ಟವಾಗುತ್ತದೆ.

                   ಇಂದಿನ ಯುವಕ ಯುವತಿಯರಿಗೆ ತಮ್ಮ ಜೀವನ ಶೈಲಿಗೆ ಹೊಂದಿಕೊಳ್ಳುವಂತಹ ವಿದ್ಯಾರ್ಥಿ ಇರುವಂತಹ ಸಂಗಾತಿಯೇ ಬೇಕು. ಅವರಲ್ಲಿ ಹಣ, ಆಸ್ತಿ, ಸೌಂದರ್ಯ, ಅಂತಸ್ತಿದೆ ಎಂಬ ಕಾರಣಕ್ಕೆ ಪಟ್ಟು ಹಿಡಿದು ಅವರನ್ನೇ ಮದುವೆಯಾಗಲು ನಿರ್ಧರಿಸುತ್ತಾರೆ! ಒಂದು ವೇಳೆ ಮನೆಯವರು ಒಪ್ಪದ ಪಕ್ಷದಲ್ಲಿ, ಇಡೀ ಕುಟುಂಬವನ್ನೇ ತೊರೆದು ಗಂಡು ಹೆಣ್ಣು ಇಬ್ಬರೇ ಖುದ್ದಾಗಿ ಮದುವೆಯಾಗಿ ತಮ್ಮದೇ ಸಂಸಾರವನ್ನು ಆರಂಭಿಸುತ್ತಾರೆ. ದಿನಕಳೆದಂತೆ ದಂಪತಿಗಳ ನಡುವೆ ಹೊಂದಾಣಿಕೆಯ ಕೊರತೆ ಹೆಚ್ಚಾಗಿ ಸಣ್ಣಪುಟ್ಟ ಕಲಹಗಳು ದೊಡ್ಡದಾಗಿ ಗೋಚರಿಸುತ್ತವೆ. ಕೊನೆಗೆ ಅವರ ಆಯ್ಕೆ ತಪ್ಪಾಗಿದೆ ಎಂಬುದು ಅವರಿಗರಿವಾಗುತ್ತದೆ. ಸಮಸ್ಯೆಯನ್ನು ಅರಿತು ಮುನ್ನಡೆಯಲಾಗದೆ ಮದುವೆ ಎಂಬ ಬಂಧವನ್ನು ವಿಚ್ಛೇದನದಿಂದ ಕಳಚಿ ಹಾಕಿ ವೈವಾಹಿಕ ಜೀವನಕ್ಕೆ ವಿದಾಯ ಹೇಳುತ್ತಿದ್ದಾರೆ. ಇಲ್ಲಿ ಅವರಿಗೆ ತಮ್ಮ ಸ್ವಾರ್ಥ ಮುಖ್ಯವೇ ಹೊರತು, ತಮ್ಮ ಕುಟುಂಬದ ಘನತೆ ಗೌರವವಲ್ಲ! ಈ ವಿಚ್ಛೇದನ ಪ್ರಕರಣಗಳು ಎಂದು ಕುಸಿಯುತ್ತವೆಯೋ     ಅಂದಿನಿಂದ ಮದುವೆ ಎಂಬ ಬಾಂಧವ್ಯ; ಪ್ರೀತಿ, ತ್ಯಾಗ, ಪರಿಶ್ರಮದ ಸಂಕೇತವಾಗುತ್ತದೆ. ಪರಸ್ಪರ ಅರ್ಥ ಮಾಡಿಕೊಂಡು ಜೀವನ ಚಕ್ರವನ್ನು ಸಾಗಿಸಬೇಕಾದ ಎರಡು ಜೀವನಗಳ ಮಿಲನಕ್ಕೆ ಸಾಕ್ಷಿಯಾಗುವ 'ಮದುವೆ' ವಿಚ್ಛೇದನವೆಂಬ ಮಾರಣಾಂತಿಕ ಸ್ಥಿತಿ ತಲುಪದಿರಲಿ. ಇದಕ್ಕೆ ನಮ್ಮೆಲ್ಲರ ಪಾತ್ರವೂ ಮುಖ್ಯವಾಗಿದೆ.

@~~~ಮೇಘನಾ ಶಿವಾನಂದ್

ಭಾನ್ಕುಳಿ, ಬೇಡ್ಕಣಿ, ಸಿದ್ದಾಪುರ (ಉ.ಕ)