ಸದಸ್ಯ:Greeshma B H/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ[ಬದಲಾಯಿಸಿ]

ಪೂಕರೆ ಕರಾವಳಿ ಕರ್ನಾಟಕವನ್ನು ಹೊಂದಿಕೊಂಡಿರುವ ತುಳು ನಾಡಿನಲ್ಲಿ ಪ್ರಧಾನವಾಗಿ ಭತ್ತವನ್ನು ಬೆಳೆಯುವ ಜನವರ್ಗ ಹಲವು ಆರಾಧನಾ ಸಂಪ್ರದಾಯಗಳನ್ನು ಹೊಂದಿದ್ದಾರೆ. ಕೆಡ್ದಸ, ಬಿಸು, ಹೊಸತೋತ ಮುಂತಾದ ಆಚರಣೆಗಳು ಪ್ರಚಲಿತದಲ್ಲಿವೆ. ಈ ಆಚರಣೆಗಳಲ್ಲಿ ಪೂಕರೆ ಹಾಕುವ ಆಚರಣೆ ಒಂದು.

ಅವಧಿ[ಬದಲಾಯಿಸಿ]

ಪೂಕರೆ ಹಾಕುವ ಆಚರಣೆಗಳು ಸುಗ್ಗಿ ಬೆಳೆ ಬೆಳೆಯುವ ಅಕ್ಟೋಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳ ಮಧ್ಯೆ ಜರಗುತ್ತದೆ. ಪೂಕರೆ ಗದ್ದೆಗಳು ವಿಸ್ತಾರವಾಗಿ ಸುಮಾರು ಏಳುವರೆ ಎಕರೆಯಷ್ಟು ವಿಸ್ತೀರ್ಣದಲ್ಲಿರುತ್ತದೆ ಮತ್ತು ವಿಸ್ತರವಾದ ಪೂಕರೆ ಗದ್ದೆಗಳನ್ನು ದೈವೊದಕಂಡೊ ಕಂಬುಲ ಕಂಡೊ ಎನ್ನುವ ರೊಢಿಯಿದೆ. ಈ ಗದ್ದೆ ಊರ ದೈವದ ಹೆಸರಿನಲಿದ್ದು ಇದರಿಂದ ಬರುವ ಆದಾಯ ಆ ದೈವದ ಆರಾಧನೆಗೆ ಸಲ್ಲುತ್ತದೆ.

ಆಕಾರ ಮತ್ತು ರಚನೆ[ಬದಲಾಯಿಸಿ]

ಪೂಕರೆಯ[೧] ಆಕಾರ ಮತ್ತು ರಚನೆಯಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿರುವುದು ಕಂಡುಬರುತ್ತದೆ. ಜೋಡಣೆ ಮತ್ತು ಅಲಂಕರಿಸುವ ಕ್ರಮದಿಂದಾಗಿಯೂ ಸ್ಪಷ್ಟವಾದ ವ್ಯತ್ಯಾಸವೂ ಇದೆ. ಇದು ಕಲ್ಲಿನ ನಾಲ್ಕು ಚಕ್ರಗಳಿಂದ ಕೊದಿದ್ದು, ಆರು ಅಡಿ ಅಗಲ, ನಾಲ್ಕು ಅಡಿಯಷ್ಟು ಎತ್ತರದ ಬಂಡಿಯಾಗಿರುತ್ತದೆ. ಹಲಗೆ ಮತ್ತು ಆಧಾರಕ್ಕೆ ಮರದ ಕಂಬಗಳಿಂದ ಹೊಂದಿಸಲಾಗುತ್ತದೆ. ಮರದ ಜೋಡಣೆಯಿಂದಾಗುವ ಪೂಕರೆಯನ್ನು ಕಲ್ಲಿನ ಚಕ್ರಗಳು ಕೆಸರಿನಿಂದ ಕೆಡದಂತೆ ಆಧರಿಸುತ್ತವೆ. ಬಂಡಿಯ ನಾಲ್ಕಡಿ ಎತ್ತರದ ಪೀಠ ಭಾಗದ ಮಧ್ಯದಲ್ಲಿ ಏಳು ಕೋಲಿನಷ್ಟು ಎತ್ತರದ ಕಂಬವನ್ನು ಹೊಂದಿಸಲಾಗುತ್ತದೆ. ಕೊಡಿ ಮರದಂತಿರುವ ಈ ಲಂಬಾಕಾರದ ಕಂಬವನ್ನು ಕೊರೆದು ಬಿದಿರಿನ ಅಥವಾ ಮರದ ಸಲಾಕೆಗಳಿಂದ ತ್ರಿಕೋನಾಕಾರದಲ್ಲಿ ನಿರ್ದಿಷ್ಟ ಅಂತರಗಳಲ್ಲಿ ಅಂಕಣಗಳನ್ನು ರಚಿಸಲಾಗುತ್ತದೆ. ಕಂಬದ ತುದಿಯನ್ನು ಹತ್ತಿ ಅಥವಾ ಹೊಂಗಾರೆ ಮರದಿಂದ ಮಾದುವ ಮುಗುಳಿಯಿಂದ ಜೋಡಿಸುತ್ತಾರೆ. ಈ ಮುಗುಳಿಯನ್ನು ಬಿಳಿ ಬಟ್ಟೆಯಿಂದ ಮುಚ್ಚಿ ಕಟ್ಟುತ್ತಾರೆ. ಊರ ಆಚಾರಿ ಪೊಕರೆಯನ್ನು ರಚಿಸುವುದು ಸಂಪ್ರದಾಯ. ಪೂಕರೆಯ ಅಂಕಣವನ್ನು ಹಲವು ಬಣ್ಣದ ಹೂವುಗಳಿಂದ ಅಲಂಕರಿಸುತ್ತಾರೆ.

ಆಚರಣೆ[ಬದಲಾಯಿಸಿ]

ಪೊಕರೆಯ [೨]ಹಿಂದಿನ ರಾತ್ರಿ ನಾಗನಿಗೆ ತಂಬಿಲ ಕೊಡುವ ಕ್ರಮ ಸರ್ವೆಸಾಮಾನ್ಯವಾಗಿ ಎಲ್ಲಾ ಕಡೆಯು ಕಂಡುಬರುತ್ತದೆ. ಗದ್ದೆಯ ಉಳುಮೆಯ ನಂತರ ಪೂಕರೆ ನೆಡುವ ಮೊದಲು ದೈವಗಳಿಗೆ ಕೋಲ ನಡೆಯುತ್ತದೆ. ಈ ಸಂದರ್ಭದಲ್ಲಿ ಆರಾಧನೆಗೊಳ್ಳುವ ದೈವಗಳು ಬೇರೆ ಬೇರಯಾಗಿದ್ದು ಪ್ರಾದೇಶಿಕ ವ್ಯತ್ಯಾಸವಿರುವುದು ಕಂಡುಬರುತ್ತದೆ.ಪೂಕರೆಯ ಸಂದರ್ಭದಲ್ಲಿ ವಿಶೇಷವಾಗಿ ಕಂಡುಬರುವ ಕೋಲ ಬಂಗಾರ್ದ ಅಜ್ಜಿಯ ಕೋಲ. ಈ ಕೋಲದಲ್ಲಿ ಕುದುರೆಯ ಮೇಲೆ ಪೊಕರೆ,ಬಂಗಾರದ ಪೆಟ್ಟಿಗೆ ಇತ್ಯಾದಿಗಳನ್ನು ತರುವ ರೀತಿಯ ಅನುಕರಣೆಯನ್ನು ಅಭಿನಯಿಸಲಾಗುತ್ತದೆ.ಸರಿಸುಮಾರು ಮಧ್ಯಾಹ್ನದ ಹೊತ್ತಿಗೆ ಗದ್ದೆಯ ಉಳುಮೆ ಕಾರ್ಯ ಮುಕ್ತಾಯವಾಗುತ್ತದೆ. ಇನ್ನೊಂದು ಕಡೆ ಈ ಹೊತ್ತಿಗೆ ಪೂಕರೆಯ ಸಿದ್ಧತೆಯು ನಡೆದಿರುತ್ತದೆ.ಉಳುಮೆಗೆ ಬಂದಿರುವ ಕೋಣಗಳನ್ನು, ಎತ್ತುಗಳನ್ನು ಕೂಡ ಓಡಿಸುತ್ತಾರೆ. ಇದಾದ ಬಳಿಕ ದೈವಾರಾಧನೆಗಳು ನಡೆಯುತ್ತವೆ. ಬಂಡಿ ಸಹಿತ ಪೂಕರೆಯಾದರೆ ಕಟ್ಟಿದ ಹಗ್ಗದ ಸಹಾಯದಿಂದ ಗದ್ದೆಗೆ ಎಳೆದು ಇಳಿಸುತ್ತಾರೆ ಮತ್ತೂ ಗದ್ದೆಯ ಮಧ್ಯ ಭಾಗಕ್ಕೆ ಎಳೆದು ತರುತ್ತಾರೆ[೩] . ಪೂಕರೆ[೪]ಯನ್ನು ಮಧ್ಯಕ್ಕೆ ಸಾಗಿಸುವಾಗ ಮುಂಭಾಗದಲ್ಲಿ ಊರ ಮಡಿವಾಳ ಬಿಡಿನ'ಗೊಟ್ಟು'ದಿಂದ ಹಾಲೆರೆದುಕೊಂಡು ಹೋಗುತ್ತಾನೆ. ಈ ದೃಶ್ಯ ದಿಬ್ಬಣ ಮೆರವಣಿಗೆಯ ಸಂದರ್ಭವನ್ನು ನೆನಪಿಗೆ ತರುತ್ತದೆ. ಪೂಕರೆಯನ್ನು ಗದ್ದೆಯ ಮಧ್ಯದಲ್ಲಿ ನೆಟ್ಟು ಅದರ ತುದಿ ಭಾಗ ಯಾವಕಡೆವಾಲಿಕೊಂಡಿದೆಯೆನ್ನುವುದನ್ನು ನೋಡುತ್ತಾರೆ ಮತ್ತು ಈ ಸಲ ಅದು ವಾಲಿದ ದಿಕ್ಕಿನಲ್ಲಿ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆಯೆಂದು ಮಾತಾಡಿಕೊಳ್ಳುತ್ತಾರೆ. ಗದ್ದೆಯಿಂದ ಹಿಂತಿರುಗಿ ಬರುವಾಗ ಓಡಿಕೊಂಡು ಬರುತ್ತಾರೆ. ಪೂಕರೆ ಹಾಕುವ ಎಲ್ಲಾ ವಿಧಗಳು ಮುಗಿಯುವಾಗ ಸುಮಾರು ಅಪರಾಹ್ನ ಮೂರರ ಸಮಯವಾಗುತ್ತದೆ. ಪೂಕರೆ ಹಾಕಿದ ನಂತರ ಆ ದಿನ ಗದ್ದೆಯಲ್ಲಿ ಯಾವ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಬೀಜ ಬಿತ್ತುವ ಅಥವಾ ನೇಜಿ ನೆಡುವ ಕಾರ್ಯ ಮರುದಿನ ನಡೆಯುತ್ತದೆ. ಪೂಕರೆ ದಿನ ಗದ್ದೆಯ ಯಜಮಾನನ ಮನೆಯಲ್ಲಿ ಸೇರಿದ ಸಮಸ್ತರಿಗು ಭೋಜನದ ವ್ಯವಸ್ಥೆ ಇರುತ್ತದೆ. ಈ ಪೂಕರೆ ನೆಡುವ ಆಚರಣೆಯಲ್ಲಿ ಭೂಮಿಗೆ ಮದುವೆ ಮಾಡುವ ಸಂಪ್ರದಾಯದ ಗುರುತುಗಳಿವೆ. ಆದ್ದರಿಂದ ಇದು''ಫಲವಂತಿಕೆ'ಯ ಆಶಯವನ್ನು ಹೊಂದಿದೆ ಎನ್ನಬಹುದು.[೫]

ಉಲ್ಲೇಖಗಳು[ಬದಲಾಯಿಸಿ]

  1. http://shodhganga.inflibnet.ac.in/handle/10603/131824
  2. https://vijaykarnataka.indiatimes.com/district/dakshinakannada/%E0%B3%8A%E0%B2%A1-%E0%B2%B0:-%E0%B2%82%E0%B2%B0%E0%B2%BE-%E0%B2%B0/articleshow/27435406.cms
  3. ಮುಗೇರರು-ಜನಾಂಗ ಜಾನಪದ ಅಧ್ಯಯನ,ತುಳು ಸಾಹಿತ್ಯ ಅಕಾಡೆಮಿ,ಮಂಗಳೂರು;ಡಾ.ಅಭಯ್ ಕುಮಾರ್
  4. https://www.karnataka.gov.in/Gazetteer/Publications/District%20Gazetteers/Dakshina%20Kannada%20District/2011/Biblography.pdf
  5. ಪುಸ್ತಕದ ಹೆಸರು- ಪೂಕರೆ ಮತ್ತು ಇತರ ಜನಪದ ಲೇಖನಗಳು,ಪುಟ ಸಂ.೪೦-೪೬, ಲೇಖಕರು-ಪೂವಪ್ಪ ಕಣಿಯೂರು;ರಾಜ್ ಪ್ರಕಾಶನ,ಮೈಸೂರು