ಸದಸ್ಯ:Avaneeth1998/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶುಕ್ರ[ಬದಲಾಯಿಸಿ]

ಶುಕ್ರ - ಇದು ಸೂರ್ಯನಿಗೆ ಎರಡನೇ ಅತಿ ಸಮೀಪದ ಗ್ರಹ. ಸೂರ್ಯನನ್ನು ೨೨೪.೭ ಭೂಮಿ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. −4.6 ಗೋಚರ ಪ್ರಮಾಣವಿರುವ ಶುಕ್ರವು, ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯ. ೪೭.೮° ಗರಿಷ್ಠ ನೀಳತೆಯನ್ನು ಹೊಂದಿರುವ ಶುಕ್ರಗ್ರಹವು ಮುಂಜಾನೆ/ಮುಸ್ಸಂಜೆಗಳಲ್ಲಿ ಚೆನ್ನಾಗಿ ಕಾಣುತ್ತದೆ. ಇದನ್ನು "ಹಗಲು ನಕ್ಷತ್ರ" ಮತ್ತು "ಸಂಜೆ ನಕ್ಷತ್ರ" ಎಂದೂ ಕರೆಯಲಾಗುತ್ತದೆ.

ಗಾತ್ರದಲ್ಲಿ ಸುಮಾರು ಭೂಮಿಯಷ್ಟೇ ಇದೆ.ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿಧಾನವಾಗಿ ಸುತ್ತುವ ಇದರ ೧ ದಿನ ಭೂಮಿಯ ೨೪೩ ದಿನಕ್ಕೆ ಸಮಾನ.ಇದು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ.ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿರುವುದರಿಂದ ಈ ಗ್ರಹದಲ್ಲಿ ಜೀವಿಗಳು ಇಲ್ಲ.ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ.

ಘನರೂಪಿಯಾದ ಶುಕ್ರವು ಭೂಮಿಯ ಗಾತ್ರ ಮತ್ತು ರಚನೆಯನ್ನು ಹೋಲುವುದರಿಂದ ಇದನ್ನು ಭೂಮಿಯ "ಸಹೋದರ ಗ್ರಹ"ವೆಂದೂ ಕರೆಯಲಾಗುತ್ತದೆ. ಶುಕ್ರವು ಚೆನ್ನಾಗಿ ಬೆಳಕನ್ನು ಪ್ರತಿಫಲಿಸುವ ಮೋಡಗಳಿಂದ ಆವೃತವಾಗಿದ್ದು, ಅದರ ಮೇಲ್ಮೈ ಸೂರ್ಯನ ಬೆಳಕಿರುವಾಗ ಕಾಣುವುದಿಲ್ಲ. ೨೦ನೇ ಶತಮಾನದಲ್ಲಿ ಗ್ರಹ ವಿಜ್ಞಾನವು ಶುಕ್ರದ ಕೆಲವು ರಹಸ್ಯಗಳನ್ನು ಬಯಲುಮಾಡುವ ಮುನ್ನ ಅದರ ಬಗ್ಗೆ ಹಲವಾರು ವದಂತಿಗಳು, ಅನುಮಾನಗಳು ಹುಟ್ಟಿಕೊಂಡಿದ್ದವು. ಮುಖ್ಯವಾಗಿ ಇಂಗಾಲದ ಡೈ-ಆಕ್ಸೈಡನ್ನು ಒಳಗೊಂಡ ಶುಕ್ರದ ವಾಯುಮಂಡಲವು ಘನರೂಪಿ ಗ್ರಹಗಳಲ್ಲೇ ಅತಿ ದಟ್ಟವಾಗಿದೆ. ಶುಕ್ರದ ಮೇಲ್ಮೈಯಲ್ಲಿ ವಾಯು ಒತ್ತಡವು ಭೂಮಿಯ ಮೇಲಿನ ಒತ್ತಡಕ್ಕಿಂತ 90 ಪಟ್ಟು ಅಧಿಕ.

ಶುಕ್ರದ ಮೇಲ್ಮೈನ ವಿವರವಾದ ನಕ್ಷೆಯನ್ನು ಕಳೆದ 20 ವರ್ಷಗಳಾಲ್ಲಿ ಮಾತ್ರ ತಯಾರಿಸಲಾಗಿದೆ. ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಈ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು.

ಶುಕ್ರ ಗ್ರಹದ ವ್ಯಾಸ ೧೨,೪೦೦ ಕಿ.ಮೀ ಅಂದರೆ ೭,೭೦೦ ಮೈಲಿಗಳು.ಸೂರ್ಯನ ಸುತ್ತ ಒಂದು ಬಾರಿ ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಕಾಲ ೨೨೪.೭ ದಿನಗಳು.ಸೂರ್ಯನಿಂದ ಸುಮಾರು ೧೦೮,೦೦೦,೦೦೦ ಕಿ.ಮೀ. ಅಂದರೆ ೬೭,೦೦೦,೦೦೦ ಮೈಲಿಗಳ ದೂರದಲ್ಲಿದೆ.

ಶುಕ್ರಗ್ರಹ ಸುಮಾರು ಶೇ80%ರಷ್ಟು ಮೇಲ್ಮೈ ವಿಸ್ತೀರ್ಣವು ನುಣುಪಾದ ಜ್ವಾಲಾಮುಖಿ ಸಮತಳಗಳಿಂದ ಕೂಡಿದೆ. ಎರಡು ಎತ್ತರಿಸಿದ 'ಖಂಡಗಳು' ಇನ್ನುಳಿದ ವಿಸ್ತೀರ್ಣವನ್ನು ವ್ಯಾಪಿಸುತ್ತವೆ. ಇವುಗಳಲ್ಲಿ ಒಂದು ಖಂಡವು ಗ್ರಹದ ಉತ್ತರಾರ್ಧ ಗೋಳದಲ್ಲಿ ಮತ್ತು ಇನ್ನೊಂದು ಸಮಭಾಜಕದ ಸ್ವಲ್ಪವೇ ದಕ್ಷಿಣದಲ್ಲಿ ಸ್ಥಿತವಾಗಿವೆ. ಸುಮಾರು ಆಸ್ಟ್ರೇಲಿಯಾದಷ್ಟೇ ದೊಡ್ಡದಾಗಿರುವ ಉತ್ತರದ ಖಂಡಕ್ಕೆ ಬ್ಯಾಬಿಲೋನ್ ದೇವತೆಯಾದ ಇಶ್ತಾರ್ ಳನ್ನು ಆಧರಿಸಿ ಇಶ್ತಾರ್ ಭೂಮಿ ಎಂದು ಹೆಸರಿಡಲಾಗಿದೆ. ಶುಕ್ರದ ಮೇಲೆ ಅತಿ ಎತ್ತರವಾದ ಮ್ಯಾಕ್ಸ್‌ವೆಲ್ ಪರ್ವತವು ಇಶ್ತಾರ್ ಭೂಮಿಯಲ್ಲಿ ಸ್ಥಿತವಾಗಿದೆ. ಈ ಪರ್ವತದ ಶಿಖರವು ಶುಕ್ರದ ಸರಾಸರಿ ಮೇಲ್ಮೈ ಎತ್ತರಕ್ಕಿಂತ 11 ಕಿ.ಮೀ. ಎತ್ತರದಲ್ಲಿದೆ. ಹೋಲಿಕೆಯಲ್ಲಿ, ಭೂಮಿಯಮೇಲೆ ಅತಿ ಎತ್ತರವಾದ ಮೌಂಟ್ ಎವರೆಸ್ಟ್ ಶಿಖರವು ಸಾಗರದ ಮಟ್ಟದಿಂದ 9ಕಿ.ಮೀ. ಗಿಂತ ಕಡಿಮೆ ಎತ್ತರದಲ್ಲಿದೆ. ಸುಮಾರು ದಕ್ಷಿಣ ಅಮೆರಿಕಾದಷ್ಟು ವಿಸ್ತೀರ್ಣವುಳ್ಳ ದಕ್ಷಿಣದ ಖಂಡಕ್ಕೆ, ಗ್ರೀಕ್ ದೇವತೆಯಾದ ಆಫ್ರೋಡೈಟ್ ಳನ್ನು ಆಧರಿಸಿ ಆಫ್ರೋಡೈಟ್ ಭೂಮಿಯೆಂದು ಹೆಸರಿಡಲಾಗಿದೆ. ಈ ಖಂಡದ ಬಹಳಷ್ಟು ಭಾಗಗಳು ಆಳವಾದ ಬಿರುಕುಗಳಿಂದ ಕೂಡಿವೆ.

ಘನರೂಪಿ ಗ್ರಹಗಳ ಮೇಲೆ ಸಾಮಾನ್ಯವಾಗಿ ಕಂಡುಬರುವ ಅಪ್ಪಳಿಕೆ ಕುಳಿಗಳು, ಪರ್ವತಗಳು, ಮತ್ತು ಕಣಿವೆಗಳಲ್ಲದೆ, ಶುಕ್ರಕ್ಕೆ ತನ್ನದೇ ಆದ ಕೆಲವು ವೈಶಿಷ್ಟ್ಯಗಳೂ ಇವೆ. ಇವುಗಳಲ್ಲಿ ಈ ಕೆಳಗಿನವು ಸೇರಿವೆ: ಚಪ್ಪಟೆ ಮೇಲ್ಭಾಗವುಳ್ಳ, ಜ್ವಾಲಮುಖಿಯಿಂದ ನಿರ್ಮಿತವಾದ, farra ಎಂದು ಕರೆಯಲಾಗುವ ವೈಶಿಷ್ಟ್ಯಗಳು (ಇವು ದಪ್ಪನಾದ ದೋಸೆಯಾಕಾರದಲ್ಲಿದ್ದು, ವ್ಯಾಸದಲ್ಲಿ 20-50ಕಿ.ಮೀ. ಮತ್ತು ಎತ್ತರದಲ್ಲಿ 100-1000ಮೀ. ಇರುತ್ತವೆ); novae ಎಂದು ಕರೆಯಲಾಗುವ ನಕ್ಷತ್ರಾಕಾರದ ಬಿರುಕು ವ್ಯವಸ್ಥೆಗಳು; ನಕ್ಷತ್ರಾಕಾರದ ಮತ್ತು ಏಕೆಕೇಂದ್ರೀಯ ಬಿರುಕುಗಳನ್ನು ಹೊಂದು (ಜೇಡನ ಬಲೆಯಂತೆ ಕಾಣುವ) arachnoids ಎಂದು ಕರೆಯಲ್ಪಡುವ ವೈಶಿಷ್ಟ್ಯಗಳು; ಕೆಲವೊಮ್ಮೆ ತಗ್ಗು ಪ್ರದೇಶಗಳಿಂದ ಆವೃತವಾದ ಉಂಗುರಾಕಾರದ ಬಿರುಕುಗಳು (ಇವನ್ನು coronae ಎಂದು ಕರೆಯಲಾಗುತ್ತದೆ). ಈ ಎಲ್ಲಾ ವೈಶಿಷ್ಟ್ಯಗಳೂ ಜ್ವಾಲಾಮುಖಿ ಚಟುವಟಿಕೆಗಳಿಂದ ಉದ್ಭವಿಸಿವೆ.