ಸದಸ್ಯರ ಚರ್ಚೆಪುಟ:Rachanasis12/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋವಿಂದ ಪೈ ಎಂ. ಗೋವಿಂದ ಪೈ ( ಮಾರ್ಚ್ ೨೩, ೧೮೮೩ – ಸೆಪ್ಟೆಂಬರ್ ೬, ೧೯೬೩) ಕನ್ನಡದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ ಪ್ರಸಿದ್ಧರಾಗಿದ್ದಾರೆ. ಮಂಜೇಶ್ವರಕ್ಕೆ ಭಾರತದ ಸಾಂಸ್ಕೃತಿಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ ಅವರು. ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ ಕಾಸರಗೊಡು ಕೇರಳದ ಪಾಲಾಯಿತು. ಆಗ ಅವರು ಬಹಳ ಹಳಹಳಿಸಿದರು. ಗೋವಿಂದ ಪೈಗಳು ಕೊನೆಯ ತನಕ ತಮ್ಮ ಹೆಸರಿನೊಂದಿಗೆ ಮಂಜೇಶ್ವರ ವನ್ನು ಜೊತೆಗೂಡಿಸಿಕೊಂಡಿದ್ದರು. ಅವರ ಪಾಲಿಗೆ ಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗವಾಗಿತ್ತು. ಗೋವಿಂದ ಪೈಗಳು ಮೂಲತಃ ಮಂಗಳೂರಿನವರು. ತಂದೆ ಮಂಗಳೂರು ತಿಮ್ಮಪೈಗಳು ಮತ್ತು ತಾಯಿ ದೇವಕಿಯಮ್ಮ. ತಾಯಿಯ ತೌರುಮನೆ ಮಂಜೇಶ್ವರ. ಅವರು ಕಾಸರಗೋಡು ತಾಲೂಕಿನ ಮಂಜೇಶ್ವರದ ಅಜ್ಜನ ಮನೆಯಲ್ಲಿ ಮಾರ್ಚ್ ೨೩, ೧೮೮೩ ರಂದು ಜನಿಸಿ ದರು. ಅವರ ತಂದೆ ತುಂಬ ಸ್ಥಿತಿವಂತರು. ಆಗಿನ ಕಾಲಕ್ಕೆ ಸಾವಿರಾರು ರೂಪಾಯಿ ವಾರ್ಷಿಕ ಕಂದಾಯ ಕಟ್ಟುತಿದ್ದವರು. ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಆಯಿತು. ಅವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಇಂಟರ್‍ಮೀಡಿಯೆಟ್ಟಿನವರೆಗೆ ಶಿಕ್ಷಣ ಪಡೆದರು. ಖ್ಯಾತ ನವೋದಯ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದ ಪಂಜೆ ಮಂಗೇಶರಾಯರು ಇವರಿಗೆ ಕನ್ನಡದ ಅಧ್ಯಾಪಕರಾಗಿದ್ದರು. ಹೆಚ್ಚಿನ ವ್ಯಾಸಂಗಕ್ಕಾಗಿ ಮದರಾಸಿಗೆ ( ಈಗಿನ ಚೆನ್ನೈಗೆ) ತೆರಳಿದರು. ನಂತರ ಪೈಯವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು. ಬಿ.ಎ ತರಗತಿ ಕೊನೇ ವರ್ಷದ ಪರೀಕ್ಷೆ ನಡೆದಾಗಲೇ ತಂದೆಯ ಅನಾರೋಗ್ಯದ ಸುದ್ದಿ ತಿಳಿದು,ವ್ಯಾಸಂಗವನ್ನು ಬಿಟ್ಟು ಬಂದರು. ಅವರ ತಂದೆಯ ಮರಣದ ನಂತರ ಪದವಿ ಪಡೆಯುವ ಗೋಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮಸ್ಥಾನ ಪಡೆದು ಬಂಗಾರದ ಪದಕ ಪಡೆದರು. ಆದರೂ ಕೂತಿದ್ದ ಪ್ರಥಮ ಭಾಗ ಇಂಗ್ಲಿಷಿನಲ್ಲಿ ವಿಶ್ವವಿದ್ಯಾನಿಲಯದ ಸುವರ್ಣ ಪದಕ ಅವರಿಗೆ ದೊರೆಯಿತು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು. ತಂದೆಯವರ ಮರಣದ ನಂತರ ಹಿರಿಯ ಮಗನಾದ ಇವರ ಮೇಲೆ ಮನೆತನದ ಎಲ್ಲ ಜವಾಬ್ದಾರಿ ಬಿತ್ತು. ಬಿ.ಎ ಪದವಿ ಪೂರ್ಣಗೊಳಿಸಲಿಲ್ಲ. ಮನೆಯಲ್ಲಿಯೇ ಅಮೂಲ್ಯ ಗ್ರಂಥಗಳನ್ನು ತರಿಸಿ ಓದಿದರು. ಕಾಲೇಜಿನಲ್ಲಿದ್ದಾಗ ಲ್ಯಾಟಿನ್ , ಫ್ರೆಂಚ್, ಸಂಸ್ಕ್ಕತ, ಪಾಲಿ, ಬಂಗಾಲಿ, ಭಾಷೆಗಳ ನ್ನು ಅಭ್ಯಸಿಸಿದ್ದರು. ಮನೆಯಲ್ಲಿ ಇನ್ನೂ ಹಲವು ಭಾಷೆಗಳನ್ನು ಅಭ್ಯಸಿಸಿ ಬಹುಭಾಷಾ ಪ್ರವೀಣರಾಗಿದ್ದರು. ಇವರ ಗ್ರಂಥಾಲಯದಲ್ಲಿ ೪೩ ಭಾಷೆಗಳ ಸಾವಿರಾರು ಗ್ರಂಥ ಸಂಗ್ರಹವಿತ್ತು. ಇವರ ಮಾತೃಭಾಷೆ ಕೊಂಕಣಿ, ಪರಿಸರದ ಭಾಷೆ ತುಳು, ರಕ್ತಗತವಾದ ಭಾಷೆ ಕನ್ನಡ. ಕಲಿತದ್ದು ಇಂಗ್ಲೀಷಿನಲ್ಲಿ. ಮಲೆಯಾಳಿ ಮತ್ತು ತಮಿಳು ಆಜು ಬಾಜು ಭಾಷೆಗಳಾಗಿದ್ದವು. ಮರಾಠಿ ಗುಜರಾತಿ ಜರ್ಮನ್ ಗ್ರೀಕ್ ಮೊದಲಾದವು ಆಸಕ್ತ ಭಾಷೆಗಳಾಗಿದ್ದವು. ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು ಒಟ್ಟು ೨೫ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಕೊಂಡಿದ್ದರು. ಗೋವಿಂದ ಪೈಯವರು ನಂತರ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರು ಗಳಿಸಿದರು. ಗೋವಿಂದ ಪೈಗಳು 'ಗಿಳಿವಿಂಡು', 'ನಂದಾದೀಪ' ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ ‘ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ. 'ತಾಯಿ‘, 'ಕಾಯಾಯ್ ಕೊಮಾಜಿ' ಎಂಬ ಸಾಮಾಜಿಕ ನಾಟಕಗಳನ್ನು ಬರೆದದ್ದಲ್ಲದೆ, ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಬರೆದ ಹಲವು ವ್ಯಕ್ತಿ ಚಿತ್ರಗಳು, ಆತ್ಮಕಥನಗಳು ಮತ್ತು ಭಾಷಣಗಳು ಅಡಕವಾಗಿವೆ. ಪ್ರಬಂಧರೂಪದಲ್ಲಿ ಅವರ 'ಆತ್ಮಕಥನ' ಮೂಡಿಬಂದಿದೆ. ಲೇಖಕನ ಕಷ್ಟನಿಷ್ಟುರಗಳನ್ನು ವರ್ಣಿಸುವ ‘ಬರಹಗಾರನ ಹಣೆಬರಹ’. ಕನ್ನಡದ ಪ್ರಥಮ ರಾಷ್ಟ್ರಕವಿ ಅವರಾಗಿದ್ದರು ೧೯೪೯ರಲ್ಲಿ ಮದರಾಸು ಸರಕಾರವು (೧೯೫೬ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ ಅಂದರೆ ಈಗಿನ ತಮಿಳುನಾಡಿನಲ್ಲಿದ್ದಿತು.) ಗೋವಿಂದ ಪೈಗಳಿಗೆ ರಾಷ್ಟ್ರ ಕವಿ ಎಂದು ಸನ್ಮಾನ ನೀಡಿ ಗೌರವಿಸಿತು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- ೧೯೫೦ರಲ್ಲಿ ಮುಂಬಯಿಯಲ್ಲಿ ಜರುಗಿದ ೩೪ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು.