ಸದಸ್ಯರ ಚರ್ಚೆಪುಟ:Mohd sufaid/sandbox
ಮನೆಮಗ
ಜಗತ್ತಿನ ಹಲವು ಕಾದಂಬರಿಗಳಲ್ಲಿ ಹೊಸ ಶಿಕ್ಷಣ ಪಡೆದ ನಾಯಕನೊಬ್ಬ ನಗರದಿಂದ ಹಳ್ಳಿಗೆ ಮರಳಿ ತನ್ನ ಪರಿಸರವನ್ನು ಸುಧಾರಿಸಲೆತ್ನಿಸುತ್ತಾನೆ. ಹಲಬಗೆಯ ಶಕ್ತಿಗಳೊಂದಿಗೆ ಹೋರಾಡುತ್ತಾನೆ. ಹೊಸ ಆದರ್ಶಗಳನ್ನು ರೂಪಿಸಲೆತ್ನಿಸುತ್ತಾನೆ. ನೂರು ವರ್ಷಗಳ ಕೆಳಗೆ, 1915ರ ಜನವರಿ ಒಂಬತ್ತನೆಯ ತಾರೀಕು ದಕ್ಷಿಣ ಆಫ್ರಿಕಾದಿಂದ ‘ಅರೇಬಿಯಾ’ ಎಂಬ ಹಡಗಿನಲ್ಲಿ ಮುಂಬೈಗೆ ಬಂದಿಳಿದ ಮೋಹನದಾಸ್ ಕರಮಚಂದ ಗಾಂಧಿ ಮರಳಿ ಭಾರತವನ್ನು ಹುಡುಕಿಕೊಂಡ ಮನೆಮಗ ನಂತೆ ಇವತ್ತು ಚರಿತ್ರೆಯ ಹಿನ್ನೋಟದಲ್ಲಿ ಕಾಣತೊಡಗುತ್ತಾರೆ. ಇದಾದ ಎರಡೂವರೆ ವರ್ಷಗಳ, ನಂತರ ಮತ್ತೊಬ್ಬ ಮನೆಮಗ ಅಂಬೇಡ್ಕರ್ ಕೂಡ ಇಂಗ್ಲೆಂಡಿನಿಂದ ಮುಂಬೈಗೆ ಬಂದಿಳಿದರು. ಗಾಂಧೀಜಿಯವರ ಜಾತಿಯಲ್ಲಿ ಸಮುದ್ರ ದಾಟಿ ವಿದೇಶಕ್ಕೆ ಹೋಗುವುದು ನಿಷಿದ್ಧವಾಗಿತ್ತು; ಅಂಬೇಡ್ಕರ್ ಅವರಿಗೆ ಆ ಸಾಧ್ಯತೆ ತೀರ ದೂರದಲ್ಲಿತ್ತು. ಇವೆಲ್ಲ ಕಷ್ಟಗಳನ್ನು ದಾಟಿ ಸಮುದ್ರ ಪ್ರಯಾಣ ಮಾಡಿ ಮರಳಿ ಮನೆಗೆ ಬಂದ ಇಬ್ಬರು ನಾಯಕರು ಭಾರತದ ಚರಿತ್ರೆಯ ಚಕ್ರದ ದಿಕ್ಕನ್ನು ಬೇರೊಂದು ದಿಕ್ಕಿಗೆ ತಿರುಗಿಸಿದ ಕತೆ ಎಲ್ಲರಿಗೂ ಗೊತ್ತು. ಇಂಡಿಯಾಕ್ಕೆ ಹೊರಟು ಹಡಗಿನಲ್ಲಿ ಕೂತ ಗಾಂಧೀಜಿಯವರ ‘ಯುದ್ಧಭೂಮಿ ಸಿದ್ಧ ವಾಗಿತ್ತು; ಪ್ರಯಾಣದ ಆನಂದ ಹಾಗೂ ಮಹತ್ತರ ಕೆಲಸವೊಂದರಲ್ಲಿ ತೊಡಗಲಿರು ವವನ ಆತಂಕಗಳೆರಡೂ ಅವರಲ್ಲಿ ತುಂಬಿದ್ದವು’ ಎಂದು ‘ಮೋಹನದಾಸ್: ಎ ಟ್ರೂ ಸ್ಟೋರಿ ಆಫ್ ಎ ಮ್ಯಾನ್, ಹಿಸ್ ಪೀಪಲ್ ಅಂಡ್ ಆ್ಯನ್ ಎಂಪೈರ್’ ಜೀವನ ಚರಿತ್ರೆಯಲ್ಲಿ ರಾಜಮೋಹನ ಗಾಂಧಿ ಬರೆಯುತ್ತಾರೆ. ಆಗ ಗಾಂಧೀಜಿ ಬರೆದ ಪತ್ರದಲ್ಲಿ ಅವರ ತಳಮಳ ದಾಖಲಾಗಿದೆ: “ಇಂಡಿಯಾಕ್ಕೆ ಹೊರಡುವುದು ಅದೆಷ್ಟು ಸಲ ತಪ್ಪಿ ಹೋಗಿದೆಯೆಂದರೆ, ನಾನು ಇವತ್ತು ಇಂಡಿಯಾಕ್ಕೆ ಹೊರಟಿರುವ ಹಡಗಿನಲ್ಲಿ ಕೂತಿರುವುದು ನಿಜವೆಂದು ನನಗೆ ನಂಬಲು ಆಗುತ್ತಲೇ ಇಲ್ಲ. ಇಂಡಿಯಾ ತಲುಪಿದ ಮೇಲೆ ನಾನೇನು ಮಾಡಬಹುದು? ಅದೇನೇ ಇರಲಿ, ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು’ ಎಂಬ ಭಾವವಷ್ಟೇ ನನಗೀಗ ನೆಮ್ಮದಿ ಕೊಡುತ್ತಿರುವುದು”. ಈ ಪಯಣ, ಮರುಪಯಣಗಳ ನಡುವೆ ಮೋಹನದಾಸ್ ವಸಾಹತುಕಾರ ದೇಶವಾದ ಇಂಗ್ಲೆಂಡಿಗೆ ಹೋಗಿ ಕಾನೂನು ಶಿಕ್ಷಣ ಪಡೆದದ್ದು ಹಾಗೂ ವಸಾಹತೀಕರಣದಿಂದ ನೊಂದ ದಕ್ಷಿಣ ಆಫ್ರಿಕಾದಲ್ಲಿ ಅನುಭವಿಸಿದ್ದು, ಚಿಂತಿಸಿದ್ದು, ಹೋರಾಡಿದ್ದು, ಹಿಂಜರಿಕೆಯ ತರುಣನೊಬ್ಬ ನಿರ್ಭೀತ ನಾಯಕನಾದದ್ದು ಎಲ್ಲವೂ ಸೇರಿವೆ. ಈ ಮರುಪಯಣದ ಹೊತ್ತಿಗೆ ಅವರೊಳಗೆ ಆಧುನಿಕ ನಾಗರಿಕತೆ ಕುರಿತ ಒರಿಜಿನಲ್ ಫಿಲಾಸಫಿಯೂ ಇಂಡಿಯಾದ ಬಿಡುಗಡೆಗಾಗಿ ಹೊಸ ಕಾರ್ಯಯೋಜನೆಯೂ ಬೆಳೆಯತೊಡಗಿತ್ತು. ಇಂಡಿಯಾಕ್ಕೆ ಬರುವ ಐದು ವರ್ಷಗಳ ಕೆಳಗೆ, ಗಾಂಧೀಜಿ ಇಂಗ್ಲೆಂಡಿ ನಿಂದ ದಕ್ಷಿಣ ಆಫ್ರಿಕಾಕ್ಕೆ ಮರಳಿ ಬರುತ್ತಿರುವಾಗ ಹಡಗಿನಲ್ಲಿ ಒಂಬತ್ತು ದಿನಗಳ ಕಾಲ ತಮ್ಮ ಜೀವನದರ್ಶನವನ್ನು ಮಂಡಿಸುವ ‘ಹಿಂದ್ ಸ್ವರಾಜ್’ ಬರೆದಿದ್ದರು. ಬಲಗೈ ಸೋತಾಗ ಎಡಗೈಯಲ್ಲಿ ಬರೆಯುತ್ತಿದ್ದರು! ಎಡಗೈಯಲ್ಲಿ ಬರೆಯುವ ಈ ಹೊಸ ಕಲೆಯನ್ನು ಕೊನೆತನಕ ಉಳಿಸಿಕೊಂಡರು! ರಾಜಮೋಹನ್ ಗಾಂಧಿ ವಿವರಿಸುವಂತೆ ‘ಸ್ವರಾಜ್ ಎಂದರೆ ಪ್ರತಿ ವ್ಯಕ್ತಿಯೂ ತನ್ನನ್ನು ತಾನು ಆಳಿಕೊಳ್ಳುವುದು; ರಾಜಕೀಯ ದೃಷ್ಟಿಯಲ್ಲಿ ಸ್ವರಾಜ್ ಎಂದರೆ ಹೋಂರೂಲ್ ಅಥವಾ ನಮ್ಮನ್ನು ನಾವೇ ಆಳಿಕೊಳ್ಳುವ ಸರ್ಕಾರದ ಸ್ಥಾಪನೆ ಎಂದರ್ಥ. ಆದರೆ ನಿಜವಾದ ಅರ್ಥದಲ್ಲಿ ಸ್ವಯಮಾಡಳಿತವೆನ್ನು ವುದು ನಾಯಕರು ಮತ್ತು ನಾಗರಿಕರು ತಮ್ಮನ್ನು ತಾವು ಎಷ್ಟರಮಟ್ಟಿಗೆ ನಿಯಂತ್ರಿಸಿಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ’. ‘ಇನ್ನು ಮುಂದೆ ನನ್ನ ಬದುಕು ಸ್ವರಾಜ್ಯದ ಸಾಧನೆಗೆ ಮುಡಿಪಾ ಗಿದೆ ಎಂದು ನನ್ನ ಮನಸ್ಸಾಕ್ಷಿ ಹೇಳುತ್ತಿದೆ’ ಎಂದು ಗಾಂಧೀಜಿ ಆ ಘಟ್ಟದಲ್ಲಿ ಬರೆದರು.
Start a discussion about ಸದಸ್ಯ:Mohd sufaid/sandbox
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಸದಸ್ಯ:Mohd sufaid/sandbox.