ಸತ್ಯಕಾಮ ಜಾಬಾಲ
ಸತ್ಯಕಾಮ ಜಾಬಾಲನು ಛಾಂದೋಗ್ಯ ಉಪನಿಷತ್‍ನ ನಾಲ್ಕನೇ ಅಧ್ಯಾಯದಲ್ಲಿ ಕಾಣಿಸಿಕೊಳ್ಳುತ್ತಾನೆ. ಆತ್ಮ ಸಾಕ್ಷಾತ್ಕಾರದ ಮಾರ್ಗದಲ್ಲಿ ಮಾರ್ಗದರ್ಶನ ನೀಡಬಲ್ಲ ಗುರುವಿನ ಹುಡುಕಾಟದಲ್ಲಿ ಹೊರಗೆ ಹೋಗಬೇಕೆಂದಿದ್ದ ಅವನು ತನ್ನ ತಾಯಿಯಿಂದ ತನ್ನ ಗೋತ್ರವನ್ನು ವಿಚಾರಿಸಿದನು. ಅವನ ತಂದೆ ಯಾರೆಂದು ಗೊತ್ತಿರದಿದ್ದ ಅವನ ತಾಯಿ ಜಾಬಾಲಾ ಅವನಿಗೆ ತನ್ನ ಗುರುವಿಗೆ ತನ್ನ ಪಿತೃತ್ವದ ಬಗ್ಗೆ ಸತ್ಯವಂತನಾಗಿರಲು ಹೇಳಿದಳು.
ವೃತ್ತಾಂತ
[ಬದಲಾಯಿಸಿ]ಛಾಂದೋಗ್ಯೋಪನಿಷತ್ತಿನ 4ನೆಯ ಅಧ್ಯಾಯದ 4ರಿಂದ 9ನೆಯ ಖಂಡಗಳಲ್ಲಿ ಜಾಬಾಲಸತ್ಯಕಾಮನ ಜೀವನ ಪರಿಚಯವನ್ನು ಒಳಗೊಂಡ ವಿಷಯಗಳಿವೆ.[೧] ಪ್ರಶ್ನೋಪನಿಷತ್ತಿನಲ್ಲಿ ಕಾಣುವ ಶಿಬಿಕುಲದ ಸತ್ಯಕಾಮನಿಂದ ಇವನು ಭಿನ್ನವೆಂದು ಭಾವಿಸಲಾಗಿದೆ. ಜಾಬಾಲ ಸತ್ಯಕಾಮ ತನ್ನ ಬಾಲ್ಯದಲ್ಲಿಯೇ ಬ್ರಹ್ಮಚರ್ಯವ್ರತ ಕೈಕೊಂಡು, ಗುರುಕುಲವಾಸ ಮಾಡಬೇಕೆಂದು ಅಪೇಕ್ಷಿಸಿದ. ನನ್ನ ಗೋತ್ರ ಯಾವುದು ಹೇಳು, ಎಂದು ತಾಯಿಯನ್ನು ಕೇಳಿದನು. ಆಗ ಜಾಬಾಲೆಯು `ಮಗು, ನಿನ್ನ ಗೋತ್ರ ಯಾವುದೆಂಬುದನ್ನು ನಾನರಿಯೆ. ಏಕೆಂದರೆ, ನನ್ನ ತಾರುಣ್ಯದಲ್ಲಿ ನಾನು ಹಲವಾರು ಎಡೆಗಳಲ್ಲಿ ತೊಳ್ತುಗೆಲಸವನ್ನು ಮಾಡುತ್ತ ಅಲೆಯುತ್ತಿದ್ದೆನು. ಆಗಲೆ ನಿನ್ನನ್ನು ಪಡೆದೆನು. ಆದುದರಿಂದ, ನಿನ್ನ ಗೋತ್ರ ಯಾವುದೆಂಬುದು ನನಗೆ ತಿಳಿಯದು. ನನ್ನ ಹೆಸರು ಜಾಬಾಲಾ, ನಿನ್ನ ಹೆಸರು ಸತ್ಯಕಾಮ. ನೀನೀಗ ಜಾಬಾಲ ಸತ್ಯಕಾಮ-ಎಂಬುದಾಗಿ ನಿನ್ನ ಹೆಸರನ್ನು ಹೇಳು ಎಂದು ಮಗನಿಗೆ ಹೇಳಿದಳು. ಅನಂತರ ಜಾಬಾಲ ಸತ್ಯಕಾಮ ಹಾರೀದ್ರುಮತಗೌತಮರ ಬಳಿಗೆ ಹೋಗಿ `ಪೂಜ್ಯರೆ, ನಾನು ಬ್ರಹ್ಮಚರ್ಯವನ್ನು ಹೊಂದಿ ತಮ್ಮಲ್ಲಿ ಶಿಷ್ಯನಾಗಿರಲು ಬಂದಿದ್ದೇನೆ? ಎಂದು ನಮ್ರಭಾವದಿಂದ ನುಡಿದನು. ನಿನ್ನ ಗೋತ್ರವಾವುದು ಎಂದು ಗೌತಮರು ಕೇಳಲು, ತನಗೆ ತಾಯಿ ಹೇಳಿದ ವಿಷಯವನ್ನೇ ಅವರಿಗೂ ಹೇಳಿದ. ಕೂಡಲೆ ಗೌತಮರೆಂದರು `ಮಗು, ಬ್ರಾಹ್ಮಣನಲ್ಲದವನು, ನಿನ್ನ ಹಾಗೆ ಈ ಬಗೆಯ ಸತ್ಯವನ್ನು ಉಗ್ಗಡಿಸಲಾರನು. ನೀನು ಸಮಿಧೆಗಳನ್ನು ತೆಗೆದುಕೊಂಡು ಬಾ ನಾನೇ ನಿನ್ನ ಉಪನಯನ ಮಾಡುತ್ತೇನೆ. ಏಕೆಂದರೆ ನೀನು ಸತ್ಯಚ್ಯುತನಾಗಲಿಲ್ಲ ಎಂದು ಹೇಳಿದರು[೨][೩]. ಬಲಗುಂದಿದ ಮತ್ತು ಬಡಕಲಾದ ನಾಲ್ಕುನೂರು ಹಸುಗಳ ರಕ್ಷಣೆಯ ಭಾರವನ್ನು ಗೌತಮರು ಸತ್ಯಕಾಮನಿಗೆ ವಹಿಸಿದರು. ಅದರಂತೆ ಸತ್ಯಕಾಮನು ಹಸುಗಳನ್ನು ಕಾಡಿಗೆ ಅಟ್ಟಿಕೊಂಡು ಹೋಗುವಾಗ ಈ ಹಸುಗಳ ಸಂಖ್ಯೆ ಒಂದು ಸಾವಿರವಾಗುವವರೆಗೂ ನಾನು ಮರಳಿ ಬರುವುದಿಲ್ಲ ಎಂದು ಸಂಕಲ್ಪ ಮಾಡಿದನು ಅದಾಗಿ ಅನೇಕ ವರ್ಷಗಳ ವರೆಗೆ ಅವನು ಕಾಡಿನಲ್ಲಿಯೆ ಇದ್ದ. ಹಸುಗಳ ಸಂಖ್ಯೆ ಒಂದು ಸಾವಿರವಾಯಿತು. ಅವುಗಳಲ್ಲಿ ಒಂದು ಹಸು ನಮ್ಮ ಹಿಂಡಿನಲ್ಲಿರುವ ಹಸುಗಳ ಸಂಖ್ಯೆ ಈಗ ಸಾವಿರವಾಗಿದೆ. ನಮ್ಮನ್ನೀಗಲೆ ಆಚಾರ್ಯರ ಬೀಡಿಗೆ ಕರೆದೊಯ್ಯಬೇಕು ಎಂದು ಹೇಳಿ, ತಾನರಿತ ಬ್ರಹ್ಮನ ಚತುಷ್ಕಲಪಾದವನ್ನು ಕುರಿತು ಹೀಗೆ ವಿವರಿಸಿತು: ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ - ಈ ನಾಲ್ಕು ದಿಕ್ಕುಗಳೆಂಬುವು ಬ್ರಹ್ಮಪಾದದ ನಾಲ್ಕು ತಲೆಗಳು. ಈ ಚತುಷ್ಕಲ ಪಾದಕ್ಕೆ ಪ್ರಕಾಶವಾನ್, ಎಂಬ ಹೆಸರಿದೆ. ಇದನ್ನು ಯಾವನು ಉಪಾಸಿಸುವನೋ ಅವನು ಪ್ರಕಾಶಮಯ ಲೋಕಗಳನ್ನು ಹೊಂದುವನು. ಬ್ರಹ್ಮನ ಚತುಷ್ಕಲಪಾದವನ್ನು ಕುರಿತು ಅಗ್ನಿಯೂ ನಿನಗೆ ಹೇಳುವನು? ಮರುದಿನ ಸತ್ಯಕಾಮನು ತರುಮಂದೆಯನ್ನು ಮುಂದೆ ಸಾಗಿಸಿದನು. ಸಂಧ್ಯಾಸಮಯದಲ್ಲಿ ಅವನು ತರುಗಳನ್ನೆಲ್ಲ ಒಂದೆಡೆ ತರುಬಿ, ಅಗ್ನಿಯನ್ನು ಹೊತ್ತಿಸಿ, ಸಮಿತ್ತುಗಳನ್ನರ್ಪಿಸಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವನು. ಪ್ರಸನ್ನನಾದ ಅಗ್ನಿಯ ಮುಖದಿಂದ ಅವನು ಪೃಥ್ವಿ, ಅಂತರಿಕ್ಷ, ಭೂಲೋಕ, ಸಮುದ್ರ - ಈ ನಾಲ್ಕು ತಲೆಗಳಿಂದ ಕೂಡಿದ ಅನಂತವಾನ್ ಎಂಬ ಬ್ರಹ್ಮಪಾದರಹಸ್ಯವನ್ನು ಅರಿತುಕೊಳ್ಳುವನು. ಮತ್ತೆ ಮರುದಿನ ಸತ್ಯಕಾಮನು ಹಸುಗಳನ್ನು ಮುಂದುವರೆಸಿ, ಸಂಧ್ಯಾ ಕಾಲದಲ್ಲಿ ಮಂದೆಯನ್ನು ಒಂದೆಡೆ ನಿಲ್ಲಿಸಿದನು; ಅಗ್ನಿಯನ್ನು ನಿರ್ಮಿಸಿ ಸಮಿತ್ತುಗಳನ್ನು ಅರ್ಪಿಸಿ ಪೂರ್ವಾಭಿಮುಖನಾಗಿ ಕುಳಿತನು. ಆಗ ಹಂಸನು ಪ್ರತ್ಯಕ್ಷನಾಗಿ ಅಗ್ನಿ, ಸೂರ್ಯ, ಚಂದ್ರ, ವಿದ್ವತ್ತು - ಈ ಚತುಷ್ಕಲಗಳಿಂದ ಕೂಡಿದ ಜ್ಯೋತಿಷ್ಮಾನ್-ಎಂಬ ಬ್ರಹ್ಮಪಾದದ ವಿಷಯವನ್ನು ತಿಳುಹುವನು. ಹೀಗೆ ಮರುದಿನ ತರುಮಂದೆಯನ್ನು ಮುಂದೆ ಸಾಗಿಸಿ, ಸಂಧ್ಯಾಕಾಲದಲ್ಲಿ ಒಂದೆಡೆ ತಡೆದು, ಅಗ್ನ್ಯುಪಾಸನೆಯ ತರುವಾಯ ಸತ್ಯಕಾಮನು ಮದ್ಗು ಎಂಬ ಪಕ್ಷಿಯ ಮುಖದಿಂದ ಚಕ್ಷು, ಶ್ರೋತ್ರ, ಪ್ರಾಣ, ಮನ ಎಂಬ ಚತುಷ್ಕಲೆಗಳಿಂದ ಕೂಡಿದ ಆಯತನವಾನ್ ಎಂಬ ಬ್ರಹ್ಮಪಾದದ ನೆಲೆಯನ್ನು ಕೇಳಿ ತಿಳಿದುಕೊಳ್ಳುವನು. ಹಸುಗಳ ಹಿಂಡಿನೊಂದಿಗೆ ಸತ್ಯಕಾಮ ಗೌತಮರನ್ನು ಸಂಧಿಸಿದ. ಆಗ ಅವರು ಸತ್ಯಕಾಮನ ತೇಜ:ಪೂರ್ಣ ಮುಖವನ್ನು ನೋಡಿ ನಿನಗೆ ಬ್ರಹ್ಮಜ್ಞಾನವಾಗಿರುವಂತೆ ತೋರುತ್ತದೆ. ನಿನಗೆ ಯಾರಿಂದ ಉಪದೇಶ ದೊರೆಯಿತು? ಎಂದು ಕೇಳಿದಾಗ ಸತ್ಯಾಕಾಮ ಭಗವನ್ ಮಾನವೇತರ ರಿಂದ ನನಗೆ ಬ್ರಹ್ಮಜ್ಞಾನೋಪದೇಶ ದೊರೆತಿದೆ. ತಮ್ಮಂತಹ ಆಚಾರ್ಯ ರಿಂದ ಪಡೆದ ಜ್ಞಾನೋಪದೇಶವೇ ಪರಮಕಲ್ಯಾಣಕಾರಿ ಎಂದು ನಾನು ಕೇಳಿ ತಿಳಿದಿರುವೆನು ಎಂದ. ಆತನ ಮಾತುಗಳಿಂದ ಸಂಪ್ರೀತರಾದ ಗೌತಮರು ಸತ್ಯಕಾಮನಿಗೆ ಅದೇ ವಿದ್ಯೆಯನ್ನು-ಯಾವ ನ್ಯೂನತೆಯೂ ಇಲ್ಲದಂತೆ-ಉಪದೇಶಿಸಿದರು. ಅನಂತರ ಸತ್ಯಕಾಮ ಆಚಾರ್ಯನಾಗಿ ಕುಲಪತಿ ಪದವಿಯನ್ನು ಪಡೆದು ಅನೇಕ ಶಿಷ್ಯರಿಗೆ ವಿದ್ಯೆಯನ್ನು ಉಪದೇಶಿಸಿದ.
ಪ್ರಸ್ತುತತೆ
[ಬದಲಾಯಿಸಿ]ಜಾಬಾಲ ಸತ್ಯಕಾಮನ ಕಥೆಯಿಂದ, ಪ್ರಾಚೀನಭಾರತದಲ್ಲಿ ಕೆಲವು ವಿಶಿಷ್ಟ ಸಾಮಾಜಿಕ ಆಚಾರ-ವಿಚಾರಗಳನ್ನು ಅರಿತುಕೊಳ್ಳಬಹುದಾಗಿದೆ. ವ್ಯಕ್ತಿಯನ್ನು ಕೇವಲ ತಂದೆಯ ಹೆಸರಿನಿಂದ ಅಥವಾ ವಂಶಾವಳಿಯಿಂದ ಗುರುತಿಸುವಂಥ ಪಿತೃಪ್ರಧಾನ ವ್ಯವಸ್ಥೆಗೆ ಜಾಬಾಲ ಸತ್ಯಕಾಮನ ಉದಾಹರಣೆ ಒಂದು ಸವಾಲಾಗಿದ್ದು, ತಾಯಿಯ ಮೂಲಕ ತನ್ನನ್ನು ಗುರುತಿಸಿಕೊಳ್ಳುವುದು ಎಷ್ಟು ಮುಖ್ಯ ಎನ್ನುವುದನ್ನು ತೋರಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]
- ↑ Robert Hume, Chandogya Upanishad 4.4 - 4.9, The Thirteen Principal Upanishads, Oxford University Press, pages 218-221
- ↑ Chandogya Upanishad with Shankara Bhashya Ganganath Jha (Translator), pages 189-198
- ↑ Max Muller, Chandogya Upanishad 4.4 - 4.9, The Upanishads, Part I, Oxford University Press, pages 60-64 with footnotes