ಸಂತೇಬೆನ್ನೂರು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಸಂತೇಬೆನ್ನೂರು.- ಹಿಂದೆ ಶಿವಮೊಗ್ಗ ಜಿಲ್ಲೆಗೆ ಸೇರಿದ್ದ ಇದು ಐತಿಹಾಸಿಕವಾಗಿ ಪ್ರಸಿದ್ದಿಯಾಗಿರುವ ಸ್ಥಳ. ಇದು ಜಿಲ್ಲಾ ಕೇಂದ್ರವಾದ ದಾವಣಗೆರೆಯಿಂದ ೩೮ ಕಿಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರ ಸ್ಥಳವಾದ ಚನ್ನಗಿರಿಯಿಂದ ೨೦ ಕಿಮೀ ದೂರದಲ್ಲಿದೆ.

ಹಿಂದೆ ಇದೊಂದು ಪ್ರಸಿದ್ಧ ವ್ಯಾಪಾರಸ್ಠಳವಾಗಿತ್ತು. ಸಂತೇಬೇನ್ನೂರು ಎನ್ನುವ ಹೆಸರು ಬರಲು ಇಲ್ಲಿ ಪ್ರತಿವಾರ ನಡೆಯುವ ದೊಡ್ಡ ಪ್ರಮಾಣದ ಸಂತೆ ಕಾರಣವಾಗಿರಬಹುದು. ಅಥವಾ ಇನ್ನಿತರೆ ಬೆನ್ನೂರುಗಳಿಂದ ಭಿನ್ನವಾಗಿಡಲು ಇರಬಹುದು (ಉದಾ. ರಾಣೀಬೆನ್ನೂರು, ಮಲೇಬೆನ್ನೂರು, ಇತ್ಯಾದಿ). ೧೬ನೇ ಶತಮಾನದಲ್ಲಿ ಬಸವಾಪಟ್ಟಣದ ಮನೆತನದವರು ಈ ಸ್ಥಳದಲ್ಲಿ ವರ್ತಕರು ಮತ್ತು ಬೇರೆ ಬೇರೆ ಎಲ್ಲ ತರಹದ ವ್ಯಾಪಾರಿಗಳು ನೆಲಸಲು ಪ್ರೋತ್ಸಾಹಿಸಿದರು. ಕ್ರಮೇಣ ಇಲ್ಲಿ ದೊಡ್ಡ ಮಾರುಕಟ್ಟೆ ನಡೆಯಲು ಪ್ರಾರಂಭವಾಯಿತು. ಪಾಳೆಗಾರರ ವಂಶಕ್ಕೆ ಸೇರಿದ ಕೆಂಗಪ್ಪನಾಯಕನ ಮಗ ಹಿರಿಯ ಹನುಮಪ್ಪ ನಾಯಕ ಇಲ್ಲಿ ಒಂದು ಸುಂದರ ಅರಮನೆ ಮತ್ತು ಪುಷ್ಕರಣಿ ಕಟ್ಟಿಸಿದ. ಕೊಳ ಸು.೧೦೦ ಗಜ ಉದ್ದ ಅಗಲವಾಗಿದ್ದು ಸುಂದರವಾಗಿದೆ. ಕೊಳದ ನಾಲ್ಕು ಕಡೆಗಳಲ್ಲೂ ಗ್ರಾನೈಟ್ ಶಿಲೆಯಿಂದ ನಿರ್ಮಿಸಿದ ಮೆಟ್ಟಲುಗಳಿವೆ. ಅಲ್ಲದೆ ಕೊಳದ ಸುತ್ತ ಮೊದಲಿಗೆ ಎಂಟು ದಿಕ್ಕಿನಲ್ಲಿ ಎಂಟು ಸುಂದರ ಮಂಟಪಗಳಿದ್ದವು. ಈಗ ಆರು ಮಾತ್ರ ಉಳಿದಿವೆ. ವಸಂತಮಂಟಪವೆಂದು ಕರೆಯಲಾಗುವ ಕೊಳದ ಮಧ್ಯದಲ್ಲಿರುವ ಮಂಟಪ ಒಂದು ಸುಂದರ ಕಲಾಕೃತಿ. ಈ ಮಂಟಪ ಎರಡು ಅಂತಸ್ತುಗಳನ್ನು ಹೊಂದಿದ್ದು ಮೊದಲನೆಯ ಮತ್ತು ಎರಡನೆಯ ಅಂತಸ್ತುಗಳೆರಡೂ ಕಲ್ಲಿನಲ್ಲಿ ನಿರ್ಮಿತವಾಗಿದ್ದು, ಮಂಟಪದ ಗೋಪುರ ಮಣ್ಣು ಮತ್ತು ಇಟ್ಟಿಗೆಯಿಂದ ನಿರ್ಮಾಣಗೊಂಡಿದೆ. ಹಿರೇಕೋಗಿಲು, ಕಲ್ಲೇಶ್ವರ, ಮಲ್ಲೇಶ್ವರ-ಇವು ಇಲ್ಲಿನ ಕೆಲವು ಪಾಳು ಗುಡಿಗಳು. ಇಲ್ಲಿರುವ ಮುಸಾಫಿರ್‌ಖಾನಾ ಗ್ರಾನೈಟ್ ಶಿಲೆಯಲ್ಲಿ ನಿರ್ಮಾಣಗೊಂಡ ವಿಶಾಲ ಕಟ್ಟಡ. ಇದರಲ್ಲಿ ಅನೇಕ ಹಿಂದು ಶಿಲ್ಪಗಳಿವೆ. ಇದನ್ನು ಮಸೀದಿಯಾಗಿ ಬಳಸುತ್ತಿಲ್ಲ. ಮುಸಾಫಿರ್‌ಖಾನದ ಸಮೀಪದಲ್ಲೇ ಪಶ್ಚಿಮಕ್ಕೆ ಕಲ್ಲಿನಿಂದ ಕಟ್ಟಿದ ಹೊಸ ರಾಮಚಂದ್ರ ದೇವಾಲಯವಿದೆ.

೧೬೩೯ರಲ್ಲಿ ರಣದುಲ್ಲಾಖಾನ್ ಈ ಊರನ್ನು ವಶಪಡಿಸಿಕೊಂಡು ಇಲ್ಲೊಂದು ಠಾಣ್ಯವನ್ನು ಸ್ಥಾಪಿಸಿದ್ದ. ಬಿದನೂರು ಅರಸರು ಇಲ್ಲಿನ ಕೋಟೆಕೊತ್ತಲಗಳನ್ನು ದುರಸ್ತುಪಡಿಸಿದ್ದರು.

ಈಗ ಇದೊಂದು ಉತ್ತಮ ವ್ಯಾಪಾರ ಸ್ಥಳ ಹಾಗೂ ಕೈಗಾರಿಕಾ ಕೇಂದ್ರ. ಪ್ರತಿ ಗುರುವಾರ ಇಲ್ಲಿ ದೊಡ್ಡ ಸಂತೆ ನಡೆಯುತ್ತದೆ.

ಹಲವರ ಪ್ರಕಾರ ಹಿಂದೆ ಸಂತೇಬೆನ್ನೂರಿಗೆ ರಂಗಪುರವೆಂದು ಹೆಸರಿದ್ದು, ಕ್ರಮೇಣ ಇಲ್ಲಿ ದೊಡ್ಡ ಸಂತೆ ನಡೆಯತೊಡಗಿ ಊರಿಗೆ ಸಂತೇಬೆನ್ನೂರು ಎಂದು ಹೆಸರು ಬಂದಿದೆ.