ವಿಷಯಕ್ಕೆ ಹೋಗು

ಷಾರ್ಲೆಟ್ ಮಾರಿಸ್ ಡ ಟ್ಯಾಲೇರಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಷಾರ್ಲೆಟ್ ಮಾರಿಸ್ ಡ ಟ್ಯಾಲೇರಾನ್ (1754-1838). ಫ್ರೆಂಚ್ ರಾಜನೀತಿಜ್ಞ, ರಾಯಭಾರ ಕುಶಲಿ, ಫ್ರೆಂಚ್ ಕ್ರಾಂತಿಯ ಕಾಲದಲ್ಲೂ ನೆಪೋಲಿಯನನ ಕೈಕೆಳಗೂ ಪುನಸ್ಸ್ಥಾಪನೆಯ ಕಾಲದಲ್ಲೂ ಲೂಯಿ ಫಿಲಿಪನ ಕಾಲದಲ್ಲೂ ಉನ್ನತ ಅಧಿಕಾರ ಹೂಂದಿದ್ದ. ಆಡಳಿತ ವ್ಯವಸ್ಥೆ ಬದಲಾದರೂ ಅಧಿಕಾರ ಕಳೆದುಕೊಳ್ಳದೆ ಉಳಿದುಕೊಳ್ಳಬಲ್ಲ ಚಾಣಾಕ್ಷತೆ ಇವನಿಗಿತ್ತು.

ಆರಂಭಿಕ ಬದುಕು[ಬದಲಾಯಿಸಿ]

ಟ್ಯಾಲೇರಾನ್ 1754ರ ಫೆಬ್ರುವರಿ 2ರಂದು ಪ್ಯಾರಿಸಿನಲ್ಲಿ ಜನಿಸಿದ. ಬಾಲ್ಯದಲ್ಲಿ ಸಂಭವಿಸಿದ ಆಕಸ್ಮಿಕವೊಂದರಿಂದ ಕುಂಟನಾದ. ಅಣ್ಣ ಐದನೆಯ ವರ್ಷದಲ್ಲಿ ತೀರಿಕೊಂಡ. ಆದ್ದರಿಂದ ಇವನು ಸೈನ್ಯ ಸೇರಬೇಕಾಗಿತ್ತು. ಆದರೆ ಇವನು ಕುಂಟನಾಗಿದ್ದುದರಿಂದ ತಂದೆತಾಯಿಯರು ಇವನಿಗೆ ಚರ್ಚ್ ಸೇವೆಗೆ ಶಿಕ್ಷಣ ಕೊಡಿಸಿದರು. ಸ್ವಭಾವತಃ ಬಂಡಾಯಪ್ರಿಯನಾದ ಟ್ಯಾಲೇರಾನ್‍ಗೆ ಅದು ರುಚಿಸಲಿಲ್ಲ ವಾಲ್ಟೇರ್. ಮಾಂಟೆಸ್ಕ್ಯೂ ಮುಂತಾದವರ ಕೃತಿಗಳನ್ನು ಓದಿದ ಟ್ಯಾಲೇರಾನ್ ಆಗಿನ ಎಲ್ಲ ಸಂಸ್ಥೆಗಳ ಬಗ್ಗೆ ಚಿಕಿತ್ಸಕ ದೃಷ್ಟಿ ತಳೆದ. ಧಾರ್ಮಿಕಶಿಕ್ಷಣ ಶಾಲೆಯಲ್ಲಿದ್ದಾಗಲೇ ಇವನು ತರುಣ ನಟಿಯೊಬ್ಬಳೊಂದಿಗೆ ಸಂಬಂಧ ಬೆಳೆಸಿದ್ದ. ಇದಕ್ಕಾಗಿ ಬಹುಶಃ ಇವನು ಅಲ್ಲಿಂದ ಹೊರದೂಡಲ್ಪಟ್ಟರೂ ದೀಕ್ಷೆ ಪಡೆದ. ಸ್ಪಲ್ಪ ಕಾಲದಲ್ಲೇ ದೊರೆಯಿಂದ ಇವನಿಗೆ ರೀಮ್ಸ್‍ನಲ್ಲಿ ಸೇಂಟ್ ಡೆನಿಸ್ ಮಠದ ಅಧಿಕಾರ ದೊರಕಿತು. ಎರಡು ವಷಗಳ ವ್ಯಾಸಂಗಾನಂತರ ಇವನು ದೇವತಾಶಾಸ್ತ್ರದಲ್ಲಿ ಪದವಿ ಪಡೆದ (1778). 1779ರಲ್ಲಿ ಇವನು ಪಾದ್ರಿಯಾಗಿ ನೇಮಕಗೊಂಡ. ರೇಮ್ಸ್‍ನ ಆರ್ಚಬಿಷಪ್ ಆಗಿದ್ದ ಇವನ ಚಿಕ್ಕಪ್ಪ ಅಲೆಕ್ಸಾಂಡರ್ ಇವನನ್ನು ಮರುದಿನವೇ ವಿಕಾರ್-ಜನರಲ್ ಆಗಿ ನಾಮಕರಣ ಮಾಡಿದ.

ಪುರೋಹಿತವರ್ಗದಲ್ಲಿದ್ದರೂ ಟ್ಯಾಲೇರಾವ್ ಪ್ರಾಪಂಚಿಕ ಸುಖಗಳಿಂದ ವಿಮುಖನಾಗಲಿಲ್ಲ. ಅನೇಕ ಚತುರರ, ಲಾವಣ್ಯವತಿಯಿಂದ ಸಖ್ಯ ಬೆಳೆಸಿದ. ಅವರಲ್ಲೊಬ್ಬಳಾದ ಅಡಿಲೇಡಳಲ್ಲಿ ಇವನಿಗೆ ಒಬ್ಬ ಮಗ ಹುಟ್ಟಿದ. ಆತ ಅನಂತರ ನೆಪೋಲಿಯನನ ಅಡಿಯಲ್ಲಿ ಜನರಲನಾದ. ತನ್ನ ಸ್ನೇಹಿತವರ್ಗದಲ್ಲಿ ಇವನು ಚರ್ಚಿಸುತ್ತಿದ್ದುದ್ದು ಆಧ್ಯಾತ್ಮಿಕ ವಿಚಾರಗಳನ್ನಲ್ಲ, ಲೌಕಿಕ ವಿಷಯಗಳನ್ನು. ಆದರೂ 1780ರಲ್ಲಿ ಇವನು ಪುರೋಹಿತ ವರ್ಗದ ಏಜೆಂಟ್-ಜನರಲ್ ಆಗಿ ನೇಮಕ ಹೊಂದಿದ. ಇದರಿಂದ ಇವನಿಗೆ ದೊರೆಯ ಮಂತ್ರಿವರ್ಗದ ಪರಿಚಯ ಬೆಳೆದು, ಆಡಳಿತ ವಿಚಾರಗಳಲ್ಲಿ ಅನುಭವ ಪ್ರಾಪ್ತಿಯಾಯಿತು. 1788ರ ನವೆಂಬರಿನಲ್ಲಿ ಈತ ಆಟನ್‍ನ ಬಿಷಪ್ ಆಗಿ ನೇಮಕ ಹೊಂದಿದ ; ಮರುವರ್ಷ ಆ ಅಧಿಕಾರಿ ವಹಿಸಿಕೊಂಡ.

ಆಗ ಟ್ಯಾಲೇರಾನನ ರಾಜಕೀಯ ಜೀವನ ಆರಂಭವಾಯಿತು.

ರಾಜಕೀಯ ಜೀವನ[ಬದಲಾಯಿಸಿ]

ಬಿಷಪ್ ಅಧಿಕಾರ ಪ್ರಯುಕ್ತ ಇವನು ಪ್ರಖ್ಯಾತವಾದ ಮತ್ತು ಕ್ರಾಂತಿಕಾರಿಯಾದ ಸ್ಟೇಟ್ಸ್ ಜನರಲ್‍ನ ಸದಸ್ಯನಾದ. ಇವನು ಇತರ ಬಿಷಪ್‍ಗಳಿಗಿಂತ ಭಿನ್ನವಾದ ಮಾರ್ಗ ಅನುಸರಿಸಿದ. ತನಗೆ ಒದಗಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡ. ಸರ್ಕಾರ ಕಷ್ಟಸ್ಥಿತಿಯಲ್ಲಿದ್ದಾಗ ಚರ್ಚಿನ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸೂಚಿಸಿದ. ಇದರಿಂದಾಗಿ ಇವನು 1791ರಲ್ಲಿ ಚರ್ಚ್‍ನಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. 1792ರಲ್ಲಿ ಇವನು ಇಂಗ್ಲೆಂಡಿನಲ್ಲಿ ರಾಯಭಾರಿಯಾದರೂ ರಾಜಪ್ರಭುತ್ವವಾದಿಗಳೊಂದಿಗೆ ಸಂಪೂರ್ಣವಾಗಿ ಸಂಬಂಧ ಕಡಿದುಕೊಳ್ಳಲಿಲ್ಲ. ಆದ್ದರಿಂದ 1794ರಲ್ಲಿ ಫ್ರಾನ್ಸನ್ನು ಪ್ರವೇಶಿಸಲು ಇವನಿಗೆ ಅನುಮತಿ ದೊರಕಲಿಲ್ಲ. ಇದರಿಂದ ಟ್ಯಾಲೇರಾನ್‍ಗೆ ಒಳ್ಳೆಯದೇ ಆಯಿತು. ಆಗಿನ ಭಯೋತ್ಪಾದಕ ಆಡಳಿತ ಸುಳಿಗೆ ಇವನು ಬಲಿಯಾಗಲಿಲ್ಲ. ಅನಂತರ ಏರ್ಪಟ್ಟ ನಿರ್ದೇಶಕ ಸರ್ಕಾರದಲ್ಲಿ ಟ್ಯಾಲೇರಾನ್ ತನ್ನ ರಾಯಭಾರಕೌಶಲವನ್ನು ಪ್ರದರ್ಶಿಸುವುದು ಸಾಧ್ಯವಾಯಿತು.

1797ರಲ್ಲಿ ಇವನು ವಿದೇಶಾಂಗ ಸಚಿವನಾದ. ಮತ್ತೆ ಸರ್ಕಾರದಲ್ಲಿ ಬದಲಾವಣೆಯಾಗುದೆಂಬುದನ್ನು ಅರಿತ ಈ ಚಾಣಾಕ್ಷಮತಿ ನೆಪೋಲಿಯನನ ಬೆನ್ನು ಹಿಡಿದ. 1807ರ ವರೆಗೂ ಟ್ಯಾಲೇರಾನ್ ಅಧಿಕಾರದಲ್ಲೇ ಉಳಿದ. ತನ್ನ ಈ ಅನುಚರ ಇಬ್ಬಗೆಯ ನೀತಿ ಅನುಸರಿಸುತ್ತಿದ್ದಾನೆಂಬ ಸಂದೇಹ ನೆಪೋಲಿಯನನಿಗೆ ಉಂಟಾಯಿತು. 1809ರಿಂದ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಬೆಳೆಯಿತು. ಆದರೂ ಟ್ಯಾಲೇರಾನ್ ಪ್ರಬಲನಾಗಿಯೇ ಇದ್ದ. ನೆಪೋಲಿಯನನ ಆಕ್ರಮಣ ನೀತಿ ವಿಪರೀತವಾಗಿ ಪರಿಣಮಿಸುತ್ತದೆಯೆಂಬುದನ್ನರಿತ ಟ್ಯಾಲೇರಾನ್ ಅನಂತರ ಬೂರ್ಬೋ ರಾಜಮನೆತನಕ್ಕೆ ಬೆಂಬಲ ನೀಡಲಾರಂಭಿಸಿದ. ಇವನು ರೇಷ್ಮೆ ಕಾಲುಚೀಲದೊಳಗಿನ ಹೊಲಸು-ಎಂಬುದು ನೆಪೋಲಿಯನನ ವರ್ಣನೆ.

18ನೆಯ ಲೂಯಿಯ ಆಳ್ವಿಕೆಯಲ್ಲಿ ಟ್ಯಾಲೇರಾನ್ ಮತ್ತೆ ವಿದೇಶಾಂಗ ಮಂತ್ರಿಯೂ ಸ್ವಲ್ಪ ಕಾಲ ಪ್ರಧಾನಿಯೂ ಆಗಿದ್ದ. ಟ್ಯಾಲೇರಾನ್ ಫ್ರಾನ್ಸಿಗೆ ದೊಡ್ಡ ಸೇವೆ ಸಲ್ಲಿಸಿದ್ದು ಆ ಸಮಯದಲ್ಲಿ. ಅವನು ಫ್ರಾನ್ಸನ್ನು ಪರಾಜಯದ ವಾತಾವರಣದಿಂದ ವಿಮೋಚನೆಗೊಳಿಸಿ. ಆಸ್ಟ್ರೀಯ ಮತ್ತು ಪರ್ಷಿಯಗಳ ದಮನ ನೀತಿಗಳ ಇದಿರಾಗಿ ಫ್ರಾನ್ಸಿಗೆ ಬ್ರಿಟನ್ನಿನ ಮೈತ್ರಿ ದೊರಕಿಸಿದ. ಬೂರ್ಬೋ ಪುನಃಸ್ಥಾಪನೆಯ ಅನಂತರದ ದಿನಗಳಲ್ಲಿ ಇವನು ಆ ಸರ್ಕಾರದ ಅಪ್ರೀತಿ ಗಳಿಸಿ ರಾಜಕೀಯದಿಂದ ದೂರವಾದ. 1830ರಲ್ಲಿ ಮತ್ತೆ ಮುಂದೆ ಬಂದು, 10ನೆಯ ಚಾಲ್ರ್ಸ್‍ನನ್ನು ಪದಚ್ಯುತಿಗೊಳಿಸಿ ಸ್ಥಾಪಿಸಲಾದ ಜುಲೈ ರಾಜತ್ವವನ್ನು ಬೆಂಬಲಿಸಿದ. ಮುಂದಿನ ನಾಲ್ಕು ವರ್ಷಗಳ ಕಾಲ ಯೂರೋಪಿನಲ್ಲಿ ಹೆಚ್ಚು ಉದಾರ ನೀತಿಗಳ ಸ್ಥಾಪನೆಗಾಗಿ ಬ್ರಿಟನ್ನಿನೊಂದಿಗೆ ಕೆಲಸ ಮಾಡಿದ.

ಖಾಸಗಿ ಬದುಕು[ಬದಲಾಯಿಸಿ]

ಟ್ಯಾಲೇರಾನನ 1802ರಲ್ಲಿ ವಿವಾಹವಾದ. ಆದರೆ 1838ರಲ್ಲಿ ವಿವಾಹವಿಚ್ಛೇದವಾಯಿತು. ಮರಣ ಹೊಂದುವುದಕ್ಕೆ ಮುಂಚೆ ಈತ ತನ್ನ ದುರ್ನಡತೆಗಾಗಿ ಪಶ್ಚಾತ್ತಾಪ ಸೂಚಿಸಿ ಚರ್ಚಿನೊಂದಿಗೆ ರಾಜಿ ಮಾಡಿಕೊಂಡ. ಟ್ಯಾಲೇರಾನ್ ತೀರಿಕೊಂಡದ್ದು 1838ರ ಮೇ 17ರಂದು, ಪ್ಯಾರಿಸಿನಲ್ಲಿ.

ಟ್ಯಾಲೇರಾನನ ದುರ್ಗುಣಗಳನ್ನೂ ದ್ರೋಹ ಭ್ರಷ್ಟಾಚಾರಗಳನ್ನೂ ಕಡೆಗಣಿಸಿ 19ನೆಯ ಶತಮಾನದ ಬೂಷ್ರ್ವಾ ಉದಾರವಾದಿಗಳು ಇವನನ್ನು ಮಹಾ ರಾಜ ನೀತಿಜ್ಞನೆಂದು ಹೊಗಳಿದರಾದರೂ, ಆ ಕಾಲದ ಘರ್ಷಣೆ ಗದ್ದಲಗಳಿಂದ ದೂರವಾದ 20ನೆಯ ಶತಮಾನದ ಇತಿಹಾಸಕಾರರ ಅಭಿಪ್ರಾಯ ಬೇರೆ. ಇವನ ಸಾಮಥ್ರ್ಯ, ಬುದ್ಧಿ ಮತ್ತೆ, ರಾಜತಾಂತ್ರಿಕ ಜಾಣ್ಮೆ ಅಸಾಧಾರಣವಾದರೂ ಇವನ ನೀತಿಭ್ರಷ್ಟತೆ ಹಾಗೂ ದುರಭಿಮಾನಗಳಿಂದಾಗಿ ಅವರು ಇವನಿಗೆಮಹತ್ತ್ವದ ಸ್ಥಾನ ನೀಡಲು ಒಪ್ಪುವುದಿಲ್ಲ.