ಶ್ರೀ ರಾಮಾಯಣ ದರ್ಶನಂ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


Icono aviso borrar.png
ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ.
ಅಳಿಸುವಿಕೆಗೆ ಗುರುತು ಮಾಡಲು ಕಾರಣ: ವಿಕಿಶೈಲಿಯಲ್ಲಿಲ್ಲದ ಪುಟ

ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ. ಮಹಾಕಾವ್ಯಗಳ ರಚನೆಯ ಯುಗ ಮುಗಿದೇ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ. ವಾಲ್ಮೀಕಿಯ ಕಥಾ ಹಂದರದ ಮೇಲೆ ಸರ್ವೋದಯ ಸಮನ್ವಯ ತತ್ವಗಳನ್ನು ಪ್ರತಿಪಾದಿಸಿ ರಚಿತವಾದ ಈ ಕೃತಿ ’ಕುವೆಂಪು ರವರು ಸೃಜಿಸಿದ’ ಮಹಾಕೃತಿಯೂ ಹೌದು. 'ಬಹಿರ್ಘಟನೆಯಂ ಪ್ರತಿಕೃತಿಸುವ ಲೌಕಿಕ ಚರಿತ್ರೆ ಮಾತ್ರವಲ್ಲದೆ, ಅಲೌಕಿಕ ನಿತ್ಯ ಸತ್ಯಂಗಳಂ ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನ’ವೂ ಹೌದು. ಸುಮಾರು ಒಂಭತ್ತು ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ಈ ಕಾವ್ಯ ರಚಿತವಾಗಿದೆ. ಕನ್ನಡ ಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರವನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಪುರಸ್ಕಾರವನ್ನೂ ಒದಗಿಸಿಕೊಟ್ಟ ಕೃತಿರತ್ನವೂ ಇದಾಗಿದೆ. ಸರಳರಗಳೆ ಮಹಾಕಾವ್ಯದ ನಡೆಗೆ ಅನ್ವಯವಾಗುವಂತೆ ಪುನರ್ ರೂಪಿಸಿಕೊಂಡ ಮಹಾಛಂದಸ್ಸಿನಲ್ಲಿ ರಚಿತವಾಗಿದೆ. ಲಲಿತ ರಗಳೆಯ ಬಂಧ ದಲ್ಲಿ ಅಂತ್ಯ ಪ್ರಾಸವನ್ನು ತ್ಯಜಿಸಿ ಸರಳ ರಗಳೆಯಾಗಿ ಪರಿವರ್ತಿಸಿ ಮಹಾಛಂದಸ್ಸನ್ನು ಕವಿ ನಿರ್ಮಿಸಿಕೊಂಡಿದ್ದಾರೆ. ಕಾವ್ಯದ ನಡೆಗೆ ಹಲವಾರು ಮಹೋಪಮೆಗಳನ್ನೂ ಕವಿ ಬಳಸಿದ್ದಾರೆ. ಹೀಗೆ, ಪ್ರಸ್ತುತಿ, ಛಂದಸ್ಸು, ಅಲಂಕಾರ, ಯುಗ ಧರ್ಮ ಹೀಗೆ ಎಲ್ಲಾ ವಿಷಯಗಳಲ್ಲೂ ಇದೊಂದು ಆಚಾರ್ಯ ಕೃತಿಯೆನಿಸಿದೆ.
ಕೃತಿಯ ಆರಂಭದಲ್ಲೇ, ಕವಿಯು ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯನವರಿಗೆ ಕಾವ್ಯವನ್ನು ಅರ್ಪಣೆ ಮಾಡುವ ಹಾಗೂ ಆ ಮೂಲಕ ನಿತ್ಯ ಸತ್ಯವನ್ನು ಸಾರುವ ಕಾವ್ಯೋದ್ದೇಶವನ್ನು ಕೆಳಗಿನಂತೆ ಸ್ಪಷ್ಟಪಡಿಸಿದ್ದಾರೆ.
ಶ್ರೀ ವೆಂಕಣ್ಣಯ್ಯನವರಿಗೆ

ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ
ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯ ಗುರುವೆ.
ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ,
ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತ ಕೃತ್ಯನಂ
ಧನ್ಯನಂ ಮಾಡಿ. ನೀಮುದಯರವಿಗೈತಂದು
ಕೇಳಲೆಳಸಿದಿರಂದು. ಕಿರುಗವನಗಳನೋದಿ
ಮೆಚ್ಚಿಸಿದೆನನಿತರೊಳೆ ಬೈಗಾಯ್ತು. “ಮತ್ತೊಮ್ಮೆ


ಬರುವೆ. ದಿನವೆಲ್ಲಮುಂ ಕೇಳ್ವೆನೋದುವೆಯಂತೆ ;
ರಾಮಾಯಣಂ ಅದು ವಿರಾಮಾಯಣಂ ಕಣಾ !”
ಎಂದು ಮನೆಗೈದಿದಿರಿ. ಮನೆಗೈದಿದಿರಿ ದಿಟಂ ; ೧೦
ದಿಟದ ಮನೆಗೈದಿದಿರಿ !
ಇದೊ ಬಂದಿರುವೆನಿಂದು
ಮುಗಿಸಿ ತಂದಿಹೆನಾ ಮಹಾಗಾನಮಂ. ಪಿಂತೆ
ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ
ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ,
ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ
ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್, ನಿಮ್ಮ
ಕೃಪೆಯಿಂದೆ.- ಪೂರ್ವದ ಮಹಾಕವಿಗಳೆಲ್ಲರುಂ
ನೆರೆದ ಸಗ್ಗದ ಸಭೆಗೆ ಪರಿಚಯಿಸಿರೆನ್ನನುಂ :
ಸಂಘಕೆ ಮಹಾಧ್ಯಕ್ಷರಲ್ತೆ ನೀಂ ? ಕಿರಿಯನಾಂ
ಹಿರಿಯರಿಗೆ ಹಾಡುವೆನ್, ಕೇಳ್ವುದಾಶೀರ್ವಾದಂ ! ೨೦
ನುಡಿಯುತಿಹುದಾ ದಿವ್ಯ ಕವಿಸಭೆಗೆ ಗುರುವಾಣಿ, ಕೇಳ್
ಆಲಿಸಾ ಗುರುಕೃಪೆಯ ಶಿಷ್ಯ ಕೃತಿ ಸಂಕೀರ್ತಿಯಂ :
“ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ,
ಶ್ರೀ ಕುವೆಂಪುವ ಸೃಜಿಸಿದೀ ಮಹಾಛಂದಸಿನ
ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ !
ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ
ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ,
ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ ! ೩೦
ವಾಗರ್ಥ ರಥವೇರಿ, ಭಾವದಗ್ನಿಯ ಪಥಂ
ಬಿಡಿದು ಬನ್ನಿಂ, ಸಚ್ಚಿದಾನಂದ ಪೂಜೆಯಂ
ಸಹೃದಯ ಹೃದಯ ಭಕ್ತಿ ನೈವೇದ್ಯಮಂ ಕೊಂಡು
ಓದುವರ್ಗಾಲಿಪರ್ಗೊಲಿದೀಯೆ ಚಿತ್ಕಾಂತಿಯಂ !
ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು
ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ,
ಪ್ರಾಣಮಯದೊಳ್ ಚರಿಸುತನ್ನಮಯಕವತರಿಸೆ ;-
ಶ್ರೀ ರಾಮನಾ ಲೋಕದಿಂದವತರಿಸಿ ಬಂದು
ಈ ಲೋಕಸಂಭವೆಯನೆಮ್ಮ ಭೂಜಾತೆಯಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ ೪೦
ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ;-
ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ
ತನ್ನ ತಮದಿಂ ಮುಕ್ತಮಪ್ಪುದು, ದಿಟಂ, ನಿಮ್ಮ
ದೀಪ್ಯ ದೈವೀ ಪ್ರಜ್ಞೆಯಮೃತ ಗೋಪುರಕೇರ್ವವೋಲ್ !
ಓ ಬನ್ನಿಮವತರಿಸಿಮೀ ಮೃತ್ಕಲಾ ಪ್ರತಿಮೆಯೊಳ್
ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್ !”

ಅಯೋಧ್ಯಾ ಸಂಪುಟಂ, ಕಿಷ್ಕಿಂಧಾ ಸಂಪುಟಂ, ಲಂಕಾ ಸಂಪುಟಂ ಮತ್ತು ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳ ಅಡಿಯಲ್ಲಿ ವಿಸ್ತರಿಸಿರುವ ಐವತ್ತು ಸಂಚಿಕೆಗಳಲ್ಲಿ (ಒಟ್ಟು ೨೨೨೯೧ ಸಾಲುಗಳು) ಅಡಕವಾಗಿದೆ. ಅವುಗಳ ವಿಭಾಗ ಈ ರೀತಿಯಿದೆ. (ಆವರಣದಲ್ಲಿ ಆಯಾಯ ಸಂಚಿಕೆಗಳಲ್ಲಿರುವ ಸಾಲುಗಳ ಸಂಖ್ಯೆಯನ್ನು ನೀಡಿದೆ)
ಅಯೋಧ್ಯಾ ಸಂಪುಟಂ
ಸಂಚಿಕೆ
೧. ಕವಿಕ್ರತು ದರ್ಶನಂ (೭೧೪)
೨. ಶಿಲಾ ತಪಸ್ವಿನಿ (೬೮೭)
೩. ಮಮತೆಯ ಸುಳಿ ಮಂಥರೆ (೬೨೯)
೪. ಊರ್ಮಿಳಾ (೫೯೩)
೫. ಭರತಮಾತೆ (೩೦೮)
೬. ಅಗ್ನಿಯಾತ್ರೆ (೩೪೨)
೭. ಚಿತ್ರಕೂಟಕೆ (೪೪೦)
೮. ಕುಣಿದಳುರಿಯ ಊರ್ವಶಿ (೨೫೦)
೯. ಪಾದುಕಾ ಕಿರೀಟಿ (೬೪೦)
೧೦. ಅತ್ರಿಯಿಂದಗಸ್ತ್ಯಂಗೆ (೪೭೯)
೧೧. ಪಂಚವಟಿಯ ಪರ್ಣಕುಟಿ (೪೧೧)

ಕಿಷ್ಕಿಂಧಾ ಸಂಪುಟಂ
೧. ಲಂಕೇಶನೊಲಿಸಿದನು ಮಾರೀಚನಂ (೪೩೮)
೨. ಓ ಲಕ್ಷ್ಮಣಾ! (೯೦೭)
೩. ಶಬರಿಗಾದನು ಅತಿಥಿ ದಾಶರಥಿ (೩೮೫)
೪. ಅತ್ತಲಾ ಕಿಷ್ಕಿಂಧೆಯೊಳ್ (೧೮೮)
೫. ಪೂಣ್ದೆನಗ್ನಿಯೆ ಸಾಕ್ಷಿ! (೪೧೬)
೬. ನೀಂ ಸತ್ಯವ್ರತನೆ ದಿಟಂ! (೪೬೫)
೭. ಸಂಸ್ಕೃತಿ ಲಂಕಾ (೩೧೧)
೮. ನಾನಕ್ಕನೆನ್ ನಿನಗೆ, ತಂಗೆ! (೨೧೨)
೯. ಸುಗ್ರೀವಾಜ್ಞೆ (೫೮೩)
೧೦. ಇರ್ದುದು ಮಹೇಂದ್ರಾಚಲಂ (೧೦೯೮)
೧೧. ಸಾಗರೋಲ್ಲಂಘನಂ (೪೪೧)
೧೨. ದಶಶಿರ ಕನಕಲಕ್ಷ್ಮಿ (೩೪೮)

ಲಂಕಾ ಸಂಪುಟಂ
೧. ಕನಕಲಂಕಾನ್ವೇಷಣಂ (೭೫೨)
೨. ವನಮಂ ಪೊಕ್ಕನಶೋಕಮಂ (೨೯೪)
೩. ಕಂಡನಾ ಹದಿಬದೆಯರಧಿದೇವಿಯಂ (೩೫೩)
೪. ಅಶ್ರುಗಂಗೋತ್ರಿ (೭೧೭)
೫. ಕಿವಿಗೊಟ್ಟನವನಿಜಾ ರಮಣಂ (೨೯೪)
೬. ರಣವ್ರತರ್ ವಹ್ನಿರಂಹರ್ (೨೯೭)
೭. ಅತ್ತಲಾ ದೈತ್ಯ ಸಭೆಯೊಳ್ (೬೧೮)
೮. ನಿನ್ನಮಗಳಲ್ತೆನ್ನವಳ್ ಅನಲೆ! (೨೩೨)
೯. ಮರಣಮಥವಾ ಶರಧಿತರಣಂ! (೪೫೪)
೧೦. ಶುಕಂ ಸಾರಣಂವೆರಸಿ (೨೩೪)
೧೧. ಸಫಲಮಾಯ್ತಾ ರಾಯಭಾರಂ (೧೬೬)
೧೨. ಸೈನ್ಯ ಗುಪ್ತಿ (೩೦೫)
೧೩. ಸ್ವಪ್ನದೇವಿಗೆ ತಪೋಲಕ್ಷ್ಮಿ (೩೨೨)
೧೪. ಅದ್ವಿತೀಯಮಾ ದ್ವಿತೀಯಂ ದಿನಂ (೪೭೦)

ಶ್ರೀ ಸಂಪುಟಂ
೧. ಕುಂಭಕರ್ಣನನೆಬ್ಬಿಸಿಮ! (೪೩೩)
೨. ರಸಮಲ್ತೆ ರುದ್ರದೃಷ್ಟಿಗೆ ರೌದ್ರಮುಂ! (೫೨೨)
೩. ದೂರಮಿರದಿನ್ ಸುಗತಿ! (೨೬೮)
೪. ಮಡಿದನಿಂದ್ರಜಿತು ಐಂದ್ರಾಸ್ತ್ರದಿಂ (೬೬೧)
೫. ನೀಂ ಮಹಚ್ಛಿಲ್ಪಿ ದಿಟಂ! (೩೭೨)
೬. ಶ್ರೀರಾಮ ರಾವಣ ಚಿತ್‌ತಪಸ್‌ಶ್ರೀ (೪೬೧)
೭. ದಶಾನನ ಸ್ವಪ್ನಸಿದ್ಧಿ (೩೩೦)
೮. ಅರಾವಣಂ ವಾ ಅರಾಮಂ ದಿಟಂ! (೫೦೦)
೯. ಸೆರೆ ಸಿಲ್ಕಿದನೊ ವೈರಿ! (೨೬೨)
೧೦. ದೈತ್ಯನೇರ್ದನ್ ಚೈತ್ಯಮಂಚಮಂ (೩೮೫)
೧೧. ರಯ್‌ಗೆ ಕರೆದೊಯ್, ಓ ಅಗ್ನಿ! (೬೦೮)
೧೨. ತಪಸ್ಸಿದ್ಧಿ (೪೫೮)
೧೩. ಅಭಿಷೇಕ ವಿರಾಟ್ ದರ್ಶನಂ (೨೩೮)
ಮೂಲ ವಾಲ್ಮೀಕಿ ರಾಮಾಯಣದ ಪಾತ್ರ ಸನ್ನಿವೇಶಗಳಿಗೆ ಇಲ್ಲಿ ಚಿನ್ನದ ಚೌಕಟ್ಟು ನಿರ್ಮಾಣವಾಗಿದೆ. ಶ್ರೀರಾಮ ಗಿರಿವನ ಪ್ರಿಯನಾಗಿದ್ದಾನೆ. ರಾವಣ, ಕೈಕೇ, ಮಂಥರೆ, ಚಂದ್ರನಖಿ, ಕುಂಭಕರ್ಣ ಮೊದಲಾದ ಪಾತ್ರಗಳು ಹೊಸತನದಿಂದ ನಿರೂಪಿಸಲ್ಪಟ್ಟಿವೆ. ಊರ್ಮಿಳಾ ಮತ್ತು ಅಹಲ್ಯೆಯರ ಪಾತ್ರಗಳೂ ಅಷ್ಟೆ. ಇವುಗಳ ಜೊತೆಗೆ ಅನಲೆ ಎಂಬ ಪಾತ್ರವೊಂದನ್ನು ವಿಭೀಷಣನ ಮಗಳಾಗಿ ಕವಿ ಸೃಷ್ಟಿಸಿ ಪೋಷಿಸಿದ್ದಾರೆ. ಆ ಪಾತ್ರದ ಮೂಲಕವೇ ಹಲವಾರು ಸಂದರ್ಭಗಳು ಅರ್ಥವತ್ತಾಗಿ ನಿರೂಪಿತವಾಗಿವೆ. ಸೀತೆಯೊಂದಿಗೆ ರಾಮನೂ ಅಗ್ನಿಪ್ರವೇಶ ಮಾಡುತ್ತಾನೆ. ವಹ್ನಿ, ರಂಹ, ಶುಕ, ಸಾರಣ ಇಂತಹ ನೂರಾರು ಸಾಮಾನ್ಯ ಪಾತ್ರಗಳೂ ಸಹ ಊರ್ಧ್ವಮುಖಿಯಾಗಿ ವರ್ತಿಸುತ್ತವೆ. ಮಂಥರೆ, ಕೈಕೆಯರೂ ಶ್ರೀರಾಮನ ಕ್ಷೇಮಕ್ಕಾಗಿ ತಪೋರಕ್ಷೆಯನ್ನು ಕಟ್ಟುತ್ತಾರೆ. ಶೂರ್ಪನಖಿಯಾಗಿದ್ದ ರಾವಣನ ತಂಗಿ ಚಂದ್ರನಖಿಯಾಗುತ್ತಾಳೆ. ರಾವಣನಂತೂ ಸತ್ವನಿಧಿ ಯಾಗಿ ಬದಲಾಗುತ್ತಾನೆ. ಪಾಪಿಗುದ್ಧಾರಮಿಹುದು ಸೃಷ್ಟಿಯ ಮಹದ್‌ವ್ಯೂಹರಚನೆಯೊಳ್ ಎಂದು ಕವಿಯೇ ಸಾರಿ ಬಿಟ್ಟಿದ್ದಾರೆ. ಎಲ್ಲಾ ಪಾತ್ರಗಳು, ಸನ್ನಿವೇಶಗಳು ಮಹತ್ತಾದುದರ ಕಡೆಗೇ ದೃಷ್ಟಿಯನ್ನಿಟ್ಟಿರುತ್ತವೆ. ಮಹತ್ತಾದುದರ ಕಡೆಗೇ ಚಲಿಸುತ್ತವೆ ! ಹೊಸಕಾಲದ ಹೊಸ ಸಂವೇದನೆ ಗಳನ್ನು, ಮೌಲ್ಯಗಳನ್ನು ಕಾವ್ಯದುದ್ದಕ್ಕೂ ಪ್ರತಿಪಾದಿಸಲಾಗಿದೆ. ಇಂತಹ ನೂರಾರು ಸನ್ನಿವೇಶಗಳ ಸೃಷ್ಟಿಯಿಂದಾಗಿ ಶ್ರೀರಾಮಾಯಣ ದರ್ಶನಂ ನಿತ್ಯನೂತನವಾಗಿದೆ. ಶ್ರೀರಾಮಾಯಣ ದರ್ಶನಂ ಕೇವಲ ಶ್ರೀಕುವೆಂಪುವನ್ನು ಮಾತ್ರ ಸೃಜಿಸಲಿಲ್ಲ; ಆಧುನಿಕ ಕಾಲದ ಕನ್ನಡವನ್ನು, ಕನ್ನಡ ಸಾಹಿತ್ಯವನ್ನು, ಭಾಷೆಯನ್ನು, ಭಾರತೀಯ ಮೌಲ್ಯಗಳನ್ನು, ಸಹೃದಯ ಓದುಗರನ್ನು ಸೃಜಿಸಿದೆ.
ಅಸ್ವಸ್ಥನಾಗಿರುವ ರಾವಣ, ಸಹೋದರ ವಿಭೀಷಣನ ಮಗಳಾದ ಅನಲೆಯನ್ನು ಸ್ವತಃ ತನ್ನ ಮಗಳಂತೆಯೇ ಭಾವಿಸಿದ್ದವನು, ಅವಳನ್ನು ತನ್ನ ಜೊತೆಯಲ್ಲೇ ಇರಿಸಿಕೊಳ್ಳುವ ಹೆಬ್ಬಯಕೆ ಯನ್ನು ವ್ಯಕ್ತಪಡಿಸಿ ಅದರಲ್ಲಿ ಯಶಸ್ವಿಯಾಗುತ್ತಾನೆ. ನಿನ್ನ ಮಗಳಲ್ತು ಅವಳ್ ಎನ್ನ ಮಗಳ್ ಎಂದು ಹೆಮ್ಮೆಯಿಂದ ನುಡಿಯುತ್ತಾನೆ. ಆ ಮನೋಹರ ದೃಶ್ಯದ ಚಿತ್ರಣವನ್ನು ಇಲ್ಲಿ ಉದಾಹರಿಸಲಾಗಿದೆ.

ದೈತ್ಯಚಕ್ರೇಶ್ವರಂ
ನಿದ್ದೆಯೊಳಳಲ್‌ತೊಡಗಿದನ್, ಪೆಸುಳೆವೋಲಂತೆ,
ಸರ್ವಲೋಕ ಭಯಂಕರನ್ ಆ ಮಹೆಂದ್ರಾರಿ!
ಭೋಂಕನೆಯೆ ಕಣ್ ತೆರೆದನಾವೇಕ್ಷಿಸಿದನಿಲ್ಲ
ಸೋದರನ ಸಾಮೀಪ್ಯಮಂ. ಕಾಣಲನಲಾ
ಕುಮಾರಿ, ಕಿರುನಗೆಯಿಂದೆ ನಾಣ್ಗೆ ತೆರೆಮರೆಯೊಡ್ಡಿ,
ಭಾವಗೋಪನಕೆಳಸಿ ಸುರವೈರಿ ಕರೆದನ್
ಮೃದಸ್ವರದಿ : “ಅನಲಾ!” ಬಾಗಿದಳ್ ಮೊಗದೆಸೆಗೆ;
ತಳ್ಳಿದಳ್ ತೂಗಿ ಹಿಂದಕೆ, ಮುಂಬರಿದ ತನ್ನ
ನಿಡುಜಡೆಯ ಕಾಳಾಹಿಯಂ; ಓ ಕೊಂಡಳೊಂದು
ಕೋಕಿಲೆಯೆನಲ್. “ಇರ್ಪೆಯೇನಿಲ್ಲಿ?” “ದೊಡ್ಡಯ್ಯ?” ೧೦೦
ಕೇಳಿದಳ್ ಗ್ರಹಿಸಲಾರದೆ ಪ್ರಶ್ನಭಾವಮಂ.
“ಏನಿಲ್ಲ! ನೀನೆನ್ನನಗಲಿದೋಲೆನಗೊಂದು
ಕನಸಾದುದಕ್ಕ!” ನಕ್ಕನಾದೊಡಮವನ ಕಣ್,
ಪುಸಿವೋದ ದುಕ್ಕದಾನಂದಕುಕ್ಕಿದುವೆನಲ್,
ತೆಕ್ಕನೊಳ್ಕಿದುವಶ್ರು ತೀರ್ಥಮಂ. “ನಿದ್ದೆಗೆಯ್,
ದೊಡ್ಡಯ್ಯ, ನಾನೆಲ್ಲಿಗೂ ತೆರಳ್ದೆನಿಲ್ಲೀಯೆಡೆಯೆ
ಇರ್ದಪೆನ್.” “ದಿಡವೊರೆದೆ, ಅಕ್ಕ, ಆರ್ ತೊರೆದೊಡಂ
ನೀನೆನ್ನನುಳಿವಳಲ್ತು!” ಚವರಿ ಗಾಳಿಗೆ ಮರಳಿ
ಮುಚ್ಚಿದನೆವೆಯನಸುರಪತಿ. ಮಯನ ಮಗಳವನ
ಹೊದ್ದುದಂ ತಿದ್ದಿದಳ್. ನೋಡಿದಳನಲೆ ತನ್ನ ೧೧೦
ತಂದೆ ಕುಳ್ತೆಡೆಗಿಂಗಿತಾಕ್ಷಿ. ಬಿಸುಸುಯ್ಯತ್ತೆ,
ನೊಂದು, ತನ್ನೊಳಗೆ ತಾಂ ಬೆಂದನು ವಿಭೀಷಣಂ.
ಮತ್ತೆ ತೆಕ್ಕನೆ ತೆರೆಯುತೆವೆಗಳಂ, ಬಿಕ್ಕಳಿಸಿ
ಬೆಸಗೊಂಡನಕ್ಕರೆಸುಳಿಗೆ ಸಿಕ್ಕ ರಕ್ಕಸಂ :
“ಅಕ್ಕ, ನಿನ್ನಯ್ಯನೆಂಮ್ಮಂ ಬಿಡಲ್?” “ಬಿಡುವನೇನ್
ನಿನ್ನನ್? ಒಡಹುಟ್ಟಿದವನೆನ್ನ ಪಡೆದಯ್ಯನ್?”
“ನೀನೆ ನೋಡುವೆ, ಅಕ್ಕ, ತೊರೆದಪನ್!” “ದೊಡ್ಡಯ್ಯ,
ತೆಗೆ ಈ ತೊದಲ್ ನುಡಿಗಳನ್! ಬಿಡುವನೆಂದೇಕೆ
ಕೆಮ್ಮನೆಯೆ ಶಂಕಿಪ್ಪೆ? ಕಾಣ್, ನಟ್ಟು ಕುಳ್ತಿಹನ್,
ಈ ಬಳಿಯೆ, ನಿನ್ನಿಡೆಯೆ, ಇಂದು ಪೊಳ್ತರೆಯಿಂದೆ!” ೧೨೦
ಎನುತೆ ಕೈತೋರ್ದನಲೆಯಿಂ ಸಹೋದರನೆಡೆಗೆ
ದಿಟ್ಟಿಯಂ ಹೊರಳಿಸಿದಸುರರಾಜನಾನನದ
ಭಾವ ಪರಿವರ್ತನೆಗೆ ಹಮ್ಮೈಸಿದರು ಅನಲೆ ಮೇಣ್
ಮಂಡೋದರಿಯರಿರ್ವರುಂ, ನಟ್ಟು ನಿಲ್ಲುತೆ
ಮರಂಬಟ್ಟರೋಲ್!
ತನ್ನ ಮೃದುಹೃದಯದೊಂದು
ದೌರ್ಬಲ್ಯಮಂ, ಗುಪ್ತಮಂ, ಕಳ್ದಡಗಿ ಕಾಣ್ಬನಂ
ಕಾಣ್ಬ ಕಲಿಯಾತ್ಮದಮೃತಂ ಕಾಳಕೂಟಕ್ಕೆ
ತಿರುಗೊವೊಲ್ ಕ್ರೂರವಾಯ್ತಾ ಕರ್ಬುರೇಂದ್ರನ
ಭುಗಿಲ್ ಕೋಪ ಕರ್ಕೋಟಕಂ : “ಬಿಟ್ಟರಾರೆನ್ನ
ಬಳಿಗೀ ಕುಲದ್ರೋಹಿಯಂ, ಶತ್ರುಮಿತ್ರನಂ, ೧೩೦
ಗೃಹವೈರಿಯಂ, ಗರುಂಕೆ ಮುಸುಂಕಿ ಕಣ್ಗೊಳಿಪ
ವಂಚನೆಯ ಶಿಥಿಲ ಮಲಕೂಪಮಂ? . . . . ಅವುಂಧ್ಯಾರ್ಯ!”
ಕೂಗಿದನು ದಶಕಂಠನಾ ಬಿರುದ ಸಾರ್ಥಕತೆ
ಸರ್ವ ವಿಶ್ರುತಮಾಗೆ. “ಕರೆ ಅವಿಂಧ್ಯನ, ಅನಲೆ!”
ಎಂದಾರ್ದನನಿತರೊಳೆ ಬಂದಾತನಂ ಕಂಡು,
“ನೀಮೆಲ್ಲರೆನ್ನ ಕೊಲೆಗೊಳಸಂಚನೊಡ್ಡಿ ಈ
ರಾಜ ವಿದ್ರೋಹಿಯಂ ರಾಜನರಮನೆಗಿಂತು
ಪುಗಿಸಿರ್ಪಿರಲ್ತೆ!” ತೆರೆ ತೆರೆ ನಡುಗೆ ಬೆಳ್‌ನವಿರ್,
ಕೈಮುಗಿದು ಮುದಿಯನ್ “ಮಹಾ ಪ್ರಭೂ, ಬಂದವನ್
ಪೌಲಸ್ತ್ಯಜಂ, ಕೈಕಸೆಯ ಕುವರನವರಜಂ ೧೪೦
ಕುಂಭಕರ್ಣಂಗೆ; ಮೇಣ್ ದೈತ್ಯ ಚಕ್ರೇಶ್ವರಗೆ,
ನಿನಗೆ, ತಮ್ಮನ್; ತಪಂಗೈದು, ಸದ್ದರ್ಮಮಂ
ತನ್ನ ಜೀವಿತಕೊಂದು ಜೀವಾತುವೆನೆ ಪಡೆದ
ಸತ್ತ್ವ ತೇಜಂ; ಬ್ರಹ್ಮವರದಿಂ ಚಿರಂಜೀವಿ
ಅಗ್ರಜಕ್ಷೇಮ ಕಾತರನಾಗಿ ಬಂದೀತನನ್
ತಡೆವುದಶುಭಂ, ದೇವ; ಸೈಪಿನಂತಿಪ್ಪನನ್,
ಮೇಣನಲೆಯೀ ಬೊಪ್ಪನನ್.”
ಕೇಳ್ದು, ಕಣ್‌ನಟ್ಟು,
ಸುಯ್ದನಸುರಂ. ಮತ್ತೆ. ಮಂಡೋದರಿಯನೊಮ್ಮೆ.
ಬಳಿ ಬಾಗಿ ನಿಂದುಳುತ್ತಿರ್ದು ಅನಲೆಯನೊಮ್ಮೆ
ನೋಡಿದನೆರ್ದೆಯ ಮರುಕಮುಕ್ಕಲ್ಕೆ. ಬಿರುಕೊಡೆದು ೧೫೦
ಸೀಳಾಗಲಿಪ್ಪ ತನ್ನಾತ್ಮದಿಕ್ಕುಳದಲ್ಲಿ
ಸಿಲ್ಕಿ ಲಿವಿಲಿವಿಯೊದ್ದುಕೊಳುತಿರ್ದ ಕುದಿಬಗೆಯ
ರಾವಣಂ ತೆಕ್ಕನೆದ್ದನ್; ಪಿಡಿದು ಬರಸೆಳೆದು
ತಕ್ಕಯ್ಸಿ, ಸಂತೈಸಿ, ಮುದ್ದಾಡಿದನ್ ತನ್ನ ಆ
ಪ್ರೀತಿಪುತ್ಥಳಿಯನಲೆಯಂ : “ಅಳದಿರಳದಿರೌ,
ಅಕ್ಕ! ಸಾವಪ್ಪೊಡಂ ನನಗೆ. ನಿನಗೆಸಗನಾಂ
ನೋವಪ್ಪುದಂ!” ಎನಂತೆ, ತನ್ನ ಸಜ್ಜೆಗೆ ಸೆಳೆದು
ಕುಳ್ಳಿರಿಸಿ, ತಾನವಳ ಮೆಯ್ಯೊತ್ತಿನೊಳೆ ಕುಳಿತು,
ಮೌನದಿಂದೆಲ್ಲಮಂ ನೋಡುತಿರ್ದನುಜನಂ
ಕುರಿತು ಶಾಂತಧ್ವನಿಯ ದನುಜೇಶ್ವರಂ : “ಅನಲೆ ೧೬೦
ನಿನ್ನ ಮಗಳಲ್ತೆನ್ನವಳ್! ಇವಳೆನ್ನ ಕಾಪಿಡುವ
ದೇವಿ!” ಅಗ್ರಜಾತ್ಮೋದ್ಧಾರಮಂ ಭಾವಿಸುತೆ
“ಆ ಪುಣ್ಯಮೆನಗಕ್ಕೆ!” ಎಂದನು ವಿಭೀಷಣಂ.
ತಿಳಿನಗೆಯ ಸುಳಿ ಸುಳಿದುದಲ್ಲಿರ್ದರೆಲ್ಲರ
ಮೊಗಂಗಳೊಳ್; ನಗೆವೆಳಗಿಗುದ್ಭವಿಸಿದತ್ತಲ್ಲಿ
ಮೈತ್ರಿಯ ನೆಳಲ್.
“ಪುಣ್ಯಪ್ರಚೋದಿಯೆನಗಿದೊಂದೆ
ಸೌಂದರ್ಯಮನಲೆಯೀ ಮುದ್ದು ಚೆಲ್ವು!” ಎಂದಾ
ದಶಗ್ರೀವ ಚಿಂತೆ ಅಂತರ್ಮುಖತೆಯಾಂತಿರಲ್,
“ತಾಯ್ ಸುರಮೆ ಗಂಧರ್ವಕನ್ಯೆ, ತಂದೆಯುಮಂತೆ
ಸತ್ತ್ವನಿಧಿ! ಕುವರಿಯಿಂತಿರ್ಪುದೇಂ ಸೋಜಿಗಮೆ?” ೧೭೦
ಎಂದವಿಂಧ್ಯಂ, ತನ್ನೊಳಗೆ ತಾನ್ “ಮಗಳ್ ನಿನಗೆ
ಪುಟ್ಟಿರ್ದಳಿರ್ಪೊಡೆಲ್ಲಿಯದೆಮಗೆ ಮೇಣೆಮ್ಮ
ಲಂಗೆಗೀ ತೋರ್ಪ ದುರ್ಮಂಗಳಂ? ಪೆಣ್ಗಳಂ
ಪೆತ್ತು ಪಡೆಯದ ರುಜೆಗೆ ಪೊತ್ತಾದೊಡಂ ಪಡೆವ,
ಭೇಷಜಮೆ ರೋಗಕಾರಣಮಾಗಿ ನಿನ್ನತುಲ
ಪುರಷಕಾರದ ತೇಜಮಂ ತುತ್ತುಗೊಳ್ಳುತಿದೆ!”
ಎನುತಿರಲ್, ಕಂಡುದು ವಿಭೀಷಣನ ಕಣ್‌ಸನ್ನೆ :
ತೆರಳಿದನು ಮೆಲ್ಲನಲ್ಲಿಂ.
“ಮನ್ನಿಸೆನ್ನನ್,
ಮಹೇಂದ್ರಾರಿ. ನಿನ್ನೆ ನಾನಾಡಿದುದೆ ನಿನ್ನೀ
ಮನಃಸ್ಥಿತಿಗೆ ಕಾರಣಂ ತಾನಪ್ಪೊಡದು ದಿಟಂ ೧೮೦
ನಿಷ್ಕಾರಣಂ. ನಿನ್ನಭ್ಯುದಯಮಲ್ಲದೆನಗೆನ್ನ
ನಾಲಗೆಗೆ ಬೇರಿಲ್ಲ ಗುರಿ. ಸವಿಯನೊರೆಯದಿರೆ
ಶತ್ರು ಎಂಬರೆ ತಿಳಿದವರ್? ಈ ಜ್ವರಭ್ರಾಂತಿ
ತೊಲಗೆ, ಸಾವಧಾನದಿ ಮಥಿಸಿ ನನ್ನೆಂದುದಂ,
ನಿರ್ಣಯಿಸು ಮುಂಬಟ್ಟೆಯಂ, ಬಾಳ್ವ ಬಟ್ಟೆಯಂ.”
ಒಯ್ಯನೆ ಅನೈಚ್ಛಿಕವೆನಲ್ಕೆ, ಸಡಿಲ್ದುದು ತಳ್ಕೆ
ಸಹೋದರನ ಸುತೆಯ ತುನವಿಂ. ಅಂತರಂಗದೊಳುಳ್ಕೆ
ಉರಿವವೋಲಾಯ್ತಸುರನಾ. ಹುಬ್ಬುಗಂಟಿಕ್ಕಿ
ತಮ್ಮಂಗೆ : “ಸಮನಿಸಿದೆ ಸಮರಂ. ಸಮುದ್ರಮಂ
ದಾಂಟೆ ಹರುವಂ ನೆನೆಯುತಿಪ್ಪನ್ ಮಹಾವೈರಿ. ೧೯೦
ತಿಲಮಂ ತುಲಾದಂಡಕೇರಿಪ ಕಲೆಗಿದಲ್ತು
ಪೊಳ್ತು. ನೀಂ ಮಹಾಕಲಿ. ನಿನಗೆ ಬಾಣಗಳೆಲ್ಲ
ಬ್ರಹ್ಮಾಸ್ತ್ರಗಳ್. ಕುಲವನಂತೆಯೆ ದೇಶಮಂ
ಸಲಹುವುದು ಕಲಿತನಕೆ ಸಲ್ಲಕ್ಷಣಂ. ನಿನಗೆ
ಮನವಿರಲ್ ನೆರವಾಗು, ಇರದಿರಲ್, ಇರದಿರಲ್,”
ತಳುವಿದನೆರಳ್ ಚಣಂ ತರಿಸಲ್ವನಂತೆವೋಲ್,
ಮತ್ತೆ ದೃಢವಾಣಿಯಿಂ “ರಾಜಶಾಸನವಿರ್ಪೊಡಂ,
ಸೋದರನ ಕೊಲೆಗೆ ಕಾರಣಮಪ್ಪ ದುರ್ಯಶಕೆ
ಪೇಸುವೆನ್, . . . . .ಮನಮಿರಲ್ ನೆರವಾಗು. ಇರದಿರಲ್
ಲಂಕೆಯನುಳಿದು ಪೋಗು. ಅನ್ಯ ವಾದಕ್ಕಿಲ್ಲಿ ೨೦೦
ಕೇಳಿನಿತುಮನುವಿಲ್ಲ . . . . . ನನ್ನ ಮಾರ್ಗಂ ನನಗೆ;
ನಿನ್ನದು ನಿನಗೆ!” “ಕಟ್ಟಕಡೆ ನಿರ್ಣಯವೊ?” “ಕೊಟ್ಟ
ಕೊನೆ ನಿರ್ಣಯಂ!” “ನಿನಗೊಳ್ಳಿತಕ್ಕೆ! ಸದ್ಬುದ್ಧಿ
ಬರ್ಕೆ! ತಂದೆಯ ತಪದ ಮೈಮೆಯಿಂದಪ್ಪೊಡಂ
ನಿನ್ನಾತ್ಮಕುದ್ಧಾರಮಿರ್ಕೆ! ಪೋಪೆನಿಲ್ಲಿಂದೆ,
ಬೀಳ್ಕೊಡಿಮ್?” “ಎತ್ತಣ್ಗೆ?” “ಅನಿಶ್ಚಿತಂ.” “ಕಡಲಾಚೆ
ದಡದೆಡೆಗೊ?” “ಏನರ್ಥಮದಕೆ?” “ಅರಿದಿದೆ ನಿನಗೆ;
ನೀಂ ಪೇಳಲಕ್ಕುಮಯ್!” “ನೀನಿನಿತು ಕೀಳ್‌ಮನನ್
ಎಂದರಿದೆನಿಲ್ಲಿನ್ನೆಗಂ!” “ಪರಸ್ಪರಮಲ್ತೆ ಪೇಳ್
ಆ ಅರಿವು!” “ನಮಸ್ಕಾರ!” ಎಂದೆದ್ದು ನಡೆದಿರೆ ೨೧೦
ವಿಭೀಷಣಂ, ಮೇಲೆಳ್ದಳನಲೆ. ಕಂಡಾಕೆಯಂ
ತೆಕ್ಕನೆಳ್ಚತ್ತನೊಲ್ ರಾವಣಂ : “ಆಜ್ಞೆಯಿಂ
ಸಾಧ್ಯಮಪ್ಪೊಡಮಿದನ್ ಬೇಡುವೆನ್. ಅನಲೆಯಂ
ಕೊಂಡೊಯ್ದು, ಸುಕುಮಾರಿಯಂ ಕಠಿನಕೊಡ್ಡದಿರ್.”
“ಮನ್ನಿಸೆನ್ನನ್; ತಂದೆಯೊಡವೋಗಿ, ಧರ್ಮಮನ್
ಸೇವಿಪೆನ್.” ಎಂದನಲೆಗೆಂದನ್ ದಶಾನನಂ,
“ಇಲ್ಲಿರ್ದ್ದೆ ಧರ್ಮಕ್ಕೆ ಸೇವೆಗೆಯ್!” “ಧರ್ಮಮಂ
ಪೊರಗಟ್ಟೆ ಸೇವಿಪುದೆಂತು?” ಪರಿಹಾಸ್ಯಕೆನೆ,
ಅಸುರನಾಕೆಯ ಕಯ್ಯನಾಂತು : “ನನ್ನನ್ನರಂ
ನಿನ್ನನ್ನರುಳಿಯೆ, ಧರ್ಮಮುದ್ಧಾರಮಾದಪುದೆ? ೨೨೦
ನಿನ್ನಯ್ಯಗಿಂ ಮಿಗಿಲ್ ನೀನ್ ವೇಳ್ಕುಮೆನಗಲ್ತೆ?”
“ಬೊಪ್ಪನಪ್ಪಣೆಯೆನಗೆ ಬಟ್ಟೆ.” ಎನುತ್ತಾ ತರಳೆ
ನಿಂತಿರಲ್ ಪಿತೃಚರಣಮೂಲಮಂ ನಿಟ್ಟಿಸಿ.
ವಿಭೀಷಣಂ : ಪರಿಯಯ್ಯನೆಂಬುದೆ ದಿಟಂ, ಮಗಳೆ,
ನೀನಿರಲ್ ವೇಳ್ಕುಮದೆ ನೀತಿ.” “ತೊರೆವೆನೆ ನಿನ್ನ
ಸಾನ್ನಿಧ್ಯಮಂ?” “ನಿನಗೆ ತಡೆಯುಂಟೆ, ಪೇಳಕ್ಕ?
ನಿನ್ನಯ್ಯನೆಲ್ಲಿರ್ದೊಡಲ್ಲಿಗೆ, ಏಗಳಾದೊಡಂ,
ಪೋಗಿ ಬರಲನುಮತಿಯನಂತೆಯೆ ವಿಮಾನಮನ್
ಪುಷ್ಪಕವನೀವೆನ್!” ಎನುತ್ತವಳ ಬಳಿ ನಿಂದ
ದಶಶಿರನ ಆ ದೈನ್ಯದೊಳ್ ದನುಜನುದ್ಧಾರಕರ ೨೩೦
ಭಾವಬೀಜವ ಕಂಡು ಹರ್ಷಿಸಿ ವಿಭೀಷಣಂ
ಬೀಳ್ಕೊಟ್ಟನಣ್ಣನರಮನೆಯ ಪೆರ್ಬಾಗಿಲಂ!

ಹೊರಗಿನ ಕೊಂಡಿಗಳು[ಬದಲಾಯಿಸಿ]