ಕನ್ನಡದಲ್ಲಿ ಸಣ್ಣ ಕಥೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾದಂಬರಿಯ ತರುವಾಯ ಸಣ್ಣ ಕಥೆಯೇ ಅತ್ಯಂತ ಜನಪ್ರಿಯವಾದ ಪ್ರಕಾರ. ಕನ್ನಡದಲ್ಲಿ ಸಣ್ಣಕಥೆ ಒಂದು ವಿಶಿಷ್ಟ ರೂಪವಾಗಿ ಜನ್ಮ ತಾಳಿದುದು ಸುಮಾರು ನೂರು ವರ್ಷಗಳ ಹಿಂದೆ. ಹೊಸಗನ್ನಡದಲ್ಲಿ ಈವರೆಗೆ ಬಂದಿರುವ ಕಥೆಗಾರರ ಸಣ್ಣ ಕಥೆಗಳ ಸಂಖ್ಯೆಯನ್ನು ಪಟ್ಟಿ ಮಾಡುವುದು ಪ್ರಯಾಸದ ಕೆಲಸ. ವಾರಪತ್ರಿಕೆ, ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಹೊಸ ಹೊಸ ಕಥೆಗಳು ಪ್ರಕಟವಾಗುತ್ತಲೇ ಇವೆ. ಇದರ ತಂತ್ರ, ವ್ಯಾಪ್ತಿ, ಬರೆವಣಿಗೆಯ ರೀತಿ, ಒಟ್ಟಂದದ ಪರಿಣಾಮ, ರೂಪಗಳನ್ನು ಮಾತ್ರ ಇಲ್ಲಿ ಸ್ಥೂಲವಾಗಿ ಗಮನಿಸಿದೆ.

ಇತಿಹಾಸ[ಬದಲಾಯಿಸಿ]

  • ಕನ್ನಡದಲ್ಲಿ ಸಣ್ಣಕಥೆಗೆ ವಿಶಿಷ್ಟ ರೂಪ ಕೊಟ್ಟವರು, ಚಾರಿತ್ರಿಕವಾಗಿ ಮೊಟ್ಟ ಮೊದಲು ಕಥೆಗಳನ್ನು ಬರೆದವರು ಪಂಜೆ ಮಂಗೇಶರಾಯರು. ನಂತರ ಕೆರೂರ ವಾಸುದೇವಾಚಾರ್ಯರು, ಎಂ.ಎನ್.ಕಾಮತರು ಇವರೆಲ್ಲ ಆರಂಭದಲ್ಲಿ ಸಣ್ಣ ಕಥೆಗಳನ್ನು ಬರೆದವರು. ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾದ ಪಂಜೆ ಮಂಗೇಶರಾಯರ ನನ್ನ ಚಿಕ್ಕತಾಯಿ (1900) ಕನ್ನಡದ ಮೊದಲ ಸಣ್ಣ ಕಥೆ ಎಂದು ಭಾವಿಸಲಾಗಿದೆ.
  • ಅನಂತರದಲ್ಲಿ ಅವರು ನನ್ನ ಚಿಕ್ಕ ತಂದೆ (1902), ಭಾರತ ಶ್ರವಣ (1902), ಕಮಲಪುರದ ಹೋಟ್ಲಿನಲ್ಲಿ (1902) ಮೊದಲಾದ ಉತ್ತಮ ಕಥೆಗಳನ್ನು ಪ್ರಕಟಿಸಿದರು. ಆದರೆ ಇವರಾರೂ ಅದೊಂದು ಸಾಹಿತ್ಯ ಪ್ರಕಾರವೆಂಬ ಪ್ರಜ್ಞೆಯನ್ನು ಮೂಡಿಸಿರಲಿಲ್ಲ. ಆ ಪ್ರಜ್ಞೆ ಯನ್ನು ಮೂಡಿಸಿ ಅದನ್ನೇ ಮಾಧ್ಯಮವನ್ನಾಗಿ ಬಳಸಿದವರಲ್ಲಿ ಶ್ರೀನಿವಾಸರು (ಮಾಸ್ತಿ) ಮೊದಲಿಗರು. ಇವರು ಸಣ್ಣಕಥೆಯ ಜನಕರೆಂಬ ಹೆಸರಿಗೆ ಪಾತ್ರರಾದವರು.
  • ಇವರ ವಸ್ತುವಿನ ಆಯ್ಕೆ, ದೃಷ್ಟಿ, ತಿಳಿಹಾಸ್ಯ, ಸರಳಶೈಲಿ - ಇವು ಕನ್ನಡ ಕಥಾಲೋಕಕ್ಕೆ ಮಾರ್ಗದರ್ಶಕವಾಗಿವೆ. ಇವರ ಕಥೆಗಳು ಅನೇಕ ಸಂಪುಟಗಳಲ್ಲಿವೆ. ರಂಗಪ್ಪನ ದೀಪಾವಳಿಯಿಂದ ಹಿಡಿದು ಇವರ ಎಲ್ಲ ಕಥೆಗಳಲ್ಲಿ ಕಾಣುವುದು ಸಾಮಾನ್ಯ ಘಟನೆಗಳನ್ನು ಉತ್ಪ್ರೇಕ್ಷೆಯಿಲ್ಲದೆ ಹೇಳುವ ಕಲೆ. ಇವರ ಕಥೆಗಳಲ್ಲಿ ಆವೇಶವಿಲ್ಲ, ಚಮತ್ಕಾರವಿಲ್ಲ, ವಿಸ್ಮಯವಿಲ್ಲ; ಉದಾತ್ತಗುಣಗಳಿಂದ ತುಂಬಿದ ಆತ್ಮದ ಒಂದು ಚೇತನವನ್ನು ಕಾಣುತ್ತೇವೆ.
  • ಇವರ ಇಂದಿರೆಯೋ ಅಲ್ಲವೋ? ಬೀದಿಯಲ್ಲಿ ಹೋಗುವ ನಾರಿ, ನಮ್ಮ ಮೇಷ್ಟ್ರು, ರಂಗಸ್ವಾಮಿಯ ಅವಿವೇಕ, ಇವುಗಳಲ್ಲಿ ಸಣ್ಣಕಥೆಯ ಎಲ್ಲ ಸಲ್ಲಕ್ಷಣಗಳನ್ನೂ ಕಾಣಬಹುದು. ಇವರಲ್ಲಿ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಎಲ್ಲ ಬಗೆಯ ಕಥೆಗಳೂ ಇವೆ. ಸಾಮಾಜಿಕ ಕಥೆಗಳಲ್ಲಿ ಜೀವನಶ್ರದ್ಧೆ ಕಂಡರೆ ಐತಿಹಾಸಿಕ, ಪೌರಾಣಿಕ ಕಥೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಸಂಸ್ಕೃತಿ ಪ್ರವಾಹವನ್ನು ಕಾಣಬಹುದು.
  • ಬಾದಷಹನ ದಂಡನೆ, ಪಂಡಿತನ ಮರಣಶಾಸನ ಇವುಗಳಲ್ಲಿ ರಾಜಕೀಯ ಜೀವನ ಕಂಡರೆ ನಿಜಗಲ್ಲಿನ ರಾಣಿ, ಗೊಂಡೆಯ ಕೃಷ್ಣಮೂರ್ತಿ ಕಥೆಗಳಲ್ಲಿ ನಾಡಿನ ಹೆಣ್ಣುಮಕ್ಕಳ ದೀರೋದಾತ್ತ ಚಿತ್ರಗಳನ್ನು ಕಾಣಬಹುದು. ಆಚಾರ್ಯರ ಪತ್ನಿ, ಹೇಮಕೂಟದಿಂದ ಬಂದಮೇಲೆ, ಮಸುಮತಿ, ಗೌತಮಿ ಹೇಳಿದ ಕಥೆ ಇವುಗಳಲ್ಲಿ ವಸ್ತುವಿನ ಆಯ್ಕೆಯ ಅನನ್ಯತೆಯನ್ನು ಕಾಣಬಹುದು.

ಪ್ರಮುಖ ಕಥೆಗಾರರು ಕೃತಿಗಳು[ಬದಲಾಯಿಸಿ]

  • ಶ್ರೀನಿವಾಸರ ಮಾರ್ಗದಲ್ಲಿ ಬೆಳೆದು ಬಂದ ಕೆಲವು ಕಥೆಗಾರರಲ್ಲಿ ಮುಖ್ಯರೆಂದರೆ ಆನಂದರು (ಎ.ಸೀತಾರಾಂ). 'ಭವತಿ ಭಿಕ್ಷಾಂ ದೇಹಿ' ಇವರ ಮೊದಲ ಕಥೆ. ವಾರದ ಹುಡುಗನ ದುಃಖಮಯ ಜೀವನ ಇಲ್ಲಿ ಚಿತ್ರಿತವಾಗಿದೆ. ಆನಂದರು ಕಥೆಗಾರರೆಂದು ಹೆಸರಾದುದು ಶೃಂಗಾರ ಹಾಗೂ ಪ್ರಣಯ ಕಥೆಗಳಿಂದ. ಹೆಂಡತಿಯ ಕಾಗದ, ಪದ್ಮಪಾಕ, ರಾಧೆಯ ಕ್ಷಮೆ, ನಾವು ಹಾಗೆಯೇ - ಇವು ಪ್ರಣಯ ಜೀವನದ ನಯನಾಜೂಕುಗಳನ್ನು ಚಿತ್ರಿಸುತ್ತವೆ.
  • ಗಂಡಹೆಂಡತಿಯರ ಸಂಭಾಷಣೆಯನ್ನು ಅತ್ಯಂತ ನವುರಾಗಿ ಮಾರ್ಮಿಕವಾಗಿ, ಯಥಾವತ್ತಾಗಿ ಇವರ ಕಥೆಗಳಲ್ಲಿ ಕಾಣಬಹುದು. ನಾನು ಕೊಂದ ಹುಡುಗಿ ಇವರ ಅತ್ಯುತ್ತಮ ಕೃತಿ. ಒಂದು ಸುಂದರ ಜಗತ್ತನ್ನೇ ಕಥೆಯ ಪ್ರಾರಂಭದಲ್ಲಿ ಸೃಷ್ಟಿಸಿಬಿಡುತ್ತಾರೆ. ಕಥೆಯ ಕೊನೆಯೂ ಅತಿ ರಮ್ಯವಾದುದು. ಇಲ್ಲಿ ಯಾವ ಭಾವಾತಿರೇಕಕ್ಕೂ ಎಡೆಗೊಟ್ಟಿಲ್ಲ. ಹೆಂಡತಿಯ ಕಾಗದ ಇವರ ಕಥಾರಚನಾ ಕೌಶಲ್ಯಕ್ಕೆ ಮತ್ತೊಂದು ಸಾಕ್ಷಿ. ಇವರ ಕಥೆಗಳು ಶೈಲಿಯ ದೃಷ್ಟಿಯಿಂದಲೂ ಕನ್ನಡ ಗದ್ಯ ಸಾಹಿತ್ಯಕ್ಕೆ ಮಹತ್ತ್ವದ ಕೊಡುಗೆಗಳಾಗಿವೆ.
  • ಶ್ರೀಸ್ವಾಮಿ ಹಾಗೂ ಕೆ.ಗೋಪಾಲಕೃಷ್ಣರಾಯರನ್ನೂ ಇದೇ ಗುಂಪಿಗೆ ಸೇರಿಸಬಹುದು. ಗೋಪಾಲಕೃಷ್ಣರಾಯರು ತಮ್ಮ ಕಥೆಗಳಲ್ಲಿ ವ್ಯಕ್ತಿಯ ಬಳಿನ ರೀತಿ-ನೀತಿ, ಗುರಿಗಳತ್ತ ತಮ್ಮ ದೃಷ್ಟಿಹಾಯಿಸಿದ್ದಾರೆ. ಇವರ ಜಟಕಾ ಸಾಹೇಬು, ಮಾಗಡಿ ರಂಗ ಇವು ಮಾನವ ಸ್ವಭಾವದ ಸುಪ್ತ ಹಿರಿಮೆಯ ದ್ಯೋತಕಗಳಾಗಿವೆ. ಸುಶೀಲಾ ಸಂಕೇತ್ ಸೊಗಸಾದ ಕಥೆ; ಹೆಣೆದಿರುವ ರೀತಿ ಮನೋಹರವಾದುದು.
  • ಶ್ರೀಸ್ವಾಮಿಯವರು ಸುಂದರ ಕಥೆಗಳನ್ನು ಬರೆಯಬಲ್ಲರು. ಪುಷ್ಪಮಾಲೆ, ನಂಜಮ್ಮ, ಗೋಧೂಳೀ ಲಗ್ನ ಕಥೆಗಳಲ್ಲಿ ಭಾವನೆಗಳಲ್ಲದೆ ಪಾತ್ರಸೃಷ್ಟಿಯೂ ಹಿತವಾಗಿದೆ. ಪತಿಪರಾಯಣೆ, ಬೀಬಿ ನಾಚ್ಚಿಯಾರ್ ಅಂಥ ಕಥೆಗಳನ್ನು ಆಸಕ್ತಿಯಿಂದ ಓದಬಹುದು.

ಎ.ಆರ್.ಕೃಷ್ಣಶಾಸ್ತ್ರಿಗಳ ‘ಕಥೆಗಳು’ ಸೊಗಸಾದ ಕಥಾಸಂಕಲನ. ಇವರ ಕಥೆಗಳಲ್ಲಿ ಜೀವನದ ಒಂದು ದರ್ಶನ, ಮೌಲ್ಯಗಳ ಸೂಚನೆ ಅಂತರ್ಗತವಾಗಿ ಬರುತ್ತದೆ.

  • ಇತರರು ಹತ್ತು ಮಾತಿನಲ್ಲಿ ಹೇಳುವುದನ್ನು ಶಾಸ್ತ್ರಿಗಳು ಒಂದೇ ಮಾತಿನಲ್ಲಿ ಖಚಿತವಾಗಿ ಮರೆಯದಂತೆ ಹೇಳಬಲ್ಲರು. ಊಟದಲ್ಲಿ ಉಪಚಾರ, ಅಗ್ಗದ ಮನೆ ಇವುಗಳಲ್ಲಿ ಹಾಸ್ಯವಿದ್ದರೆ ಶ್ಯಾನುಭೋಗನ ಪುಣ್ಯದಲ್ಲಿ ಹಳ್ಳಿಯ ಕಲಕಿದ ರಾಜಕೀಯವಿದೆ. ಇವರ ಎಲ್ಲ ಕಥೆಗಳಲ್ಲೂ ಕನ್ನಡತನ ಎದ್ದು ಕಾಣುತ್ತದೆ.
  • ಎಸ್.ಜಿ.ಶಾಸ್ತ್ರಿಗಳ ಕಥೆಗಳನ್ನು (ಇದ್ದರೂ ಇರಬಹುದು) ಬೇರೊಂದು ಗುಂಪಿಗೆ ಸೇರಿಸಬಹುದು. ಮಧ್ಯಮ ವರ್ಗದವರ ಜೀವನದ ಹೊಳಪು ಇವರ ಕಥೆಗಳಲ್ಲಿ ಎದ್ದು ಕಾಣುತ್ತದೆ. ಕಥೆಗಳ ಸೊಗಸು, ಭಾವಗಳು ಚೆನ್ನಾಗಿ ಪ್ರಖರವಾಗಿವೆ. ಪರಪುರುಷದಲ್ಲಿ ರಚನಾವೈವಿಧ್ಯವನ್ನು ಕಾಣಬಹುದು. ತುಂಟಮರಿಯಲ್ಲಿ ಮನಕರಗಿಸುವ ಚಿತ್ರವಿದೆ, ನೈಸರ್ಗಿಕ ಕಲಾವಂತಿಕೆಯಿದೆ.
  • ನವರತ್ನ ರಾಮರಾಯರ ಕಥೆಗಳಲ್ಲಿ ಕುತೂಹಲಕ್ಕೆ ವಿಪುಲ ಆದ್ಯತೆಯಿದೆ. ಲಕ್ಷ್ಮಣರಾಯರ ಭಾಗ್ಯದಲ್ಲಿ ಲಕ್ಷ್ಮಣರಾಯ ದೇವಿಯ ಮಂದಿರಕ್ಕೆ ಸೇರಿ ಮಂಗಮಾರಿ ಸಾಹೇಬರನ್ನು ಕಂಡು ಬಹುಮಾನ ಪಡೆಯುವವರೆಗೆ ಪತ್ತೇದಾರಿ ಕಾದಂಬರಿಯಂತೆ ಕುತೂಹಲ ಕೆರಳುತ್ತಿರುತ್ತದೆ. ಹೆಣ್ಣು ಹೃದಯ ಉತ್ತಮ ಕಥೆ. ಮಾತಿನ ಧೋರಣೆಯಲ್ಲಿ ಸನ್ನಿವೇಶ ರಚನೆಯಲ್ಲಿ ಕಾಣುವ ಕಥೆಯ ವಾತಾವರಣ ಇವರ ಕೃತಿಗಳಿಗೆ ವಿಶಿಷ್ಟ ಸೊಗಸು ತಂದಿದೆ.

ಉತ್ತರ ಕರ್ನಾಟಕದ ಭಾಗದಿಂದಲೂ ಸಣ್ಣಕಥಾ ಸಾಹಿತ್ಯ[ಬದಲಾಯಿಸಿ]

  • ಉತ್ತರ ಕರ್ನಾಟಕದ ಭಾಗದಿಂದಲೂ ಸಣ್ಣಕಥಾ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಆನಂದಕಂದರ ಕಥೆಗಳು ಇಂದಿಗೂ ತನ್ನ ವೈಶಿಷ್ಟ್ಯವನ್ನು ಕಾಯ್ದುಕೊಂಡಿವೆ. ಅಲ್ಲಿನ ಹಳ್ಳಿಗಳಲ್ಲಿಯ ಜೀವನವೇ ಇವರ ಕಥಾವಸ್ತು. ಇವರ ಕಥೆಗಳಲ್ಲಿ ¨ಭಾವನಾಪರವಶತೆ ಮಾಯವಾಗಿ ವಾಸ್ತವ ದೃಷ್ಟಿ ಹರಿದಿದೆ. ಇಬ್ಬಣದ ದಿಬ್ಬಣದಲ್ಲಿ ಶುದ್ಧ ವಾಸ್ತವತೆಯನ್ನು ಕಾಣಬಹುದು. ಭಾಷೆಯ ಬಳಕೆಯಲ್ಲೂ ಆನಂದಕಂದರ ಕೈ ಮಿಗಿಲಾದುದು.
  • ಸೀಮೆಯ ಕಲ್ಲಿನ ಶಾಸನದ ಭಾಷೆ, ಜೋಗತಿಕಲ್ಲಿನಲ್ಲಿ ಧರಮಣ್ಣನ ಕೆಚ್ಚು ತುಂಬಿದ ಕನ್ನಡ, ಕಂಕಣದ ಕೈಯ ಐತಿಹಾಸಿಕತೆ ಹೊರಸೂಸುವ ಭಾಷೆ ಇವರ ಭಾಷಾಪ್ರಭುತ್ವವನ್ನು ಸಾರುತ್ತವೆ. ಇನ್ನೊಬ್ಬ ಪ್ರಮುಖ ಕಥೆಗಾರರೆಂದರೆ ಕೃಷ್ಣಕುಮಾರ ಕಲ್ಲೂರ. ಇವರ ಮೊದಲ ಸಂಗ್ರಹವಾದ ಬಿಸಿಲುಗುದುರೆಯಲ್ಲಿ ಭಾಷೆ ಕಾವ್ಯಮಯವಾಗಿದ್ದರೂ ಅನುಭವದ ದೃಷ್ಟಿಯಿಂದ ಇನ್ನೂ ಮಾಗಬೇಕಾದ ಕಥೆಗಳೆನಿಸಿದರೂ ಇವರ ಎರಡನೆಯ ಸಂಕಲನ ಜೀವನ ಎಂಬುದರಲ್ಲಿ ಉತ್ತಮ ಕಥೆಗಳಿವೆ.
  • ಇವರ ಕಥೆಗಳಲ್ಲಿ ಗೆಳೆತನ ಹಾಗೂ ಆದರ್ಶಪ್ರಿಯತೆಗಳು ವೈಚಾರಿಕವಾಗಿ ಬಂದಿವೆ. ಜೀವನ ಎಂಬ ಕಥೆಯಲ್ಲಿನ ರಮಾಬಾಯಿಯ ಪಾತ್ರಸೃಷ್ಟಿ ಅದ್ಭುತವಾದುದು. ಇದು ಇವರ ಕಲಾವಂತಿಕೆಗೆ ಸಾಕ್ಷಿಯಾಗಿದೆ. ಇವರ ಕೆಲವು ಕಥೆಗಳನ್ನು ನೋಡಿದಾಗ ಕಥಾವಸ್ತುವಿನ ಆಯ್ಕೆಯಿಂದ ಹಿಡಿದು ಅದರ ನಿರ್ವಹಣೆಯವರೆಗೆ ಕಂಡು ಬರುವ ಕಲೆಗಾರಿಕೆ ಮೆಚ್ಚುವಂಥದು.
  • ಗಂಗೆಯ ಗುತ್ತಿಗೆಯನ್ನು ಬರೆದು ಪ್ರಸಿದ್ಧರಾದ ಟೇಂಗ್ಸೆ ಗೋವಿಂದರಾಯರ ಕೈಯಲ್ಲಿ ಸಣ್ಣಕಥೆ ಹೊಸ ರೂಪು ತಳೆಯಿತು. ಟೇಂಗ್ಸೆಯವರ ಗಂಗೆಯ ಗುತ್ತಿಗೆ ಹಾಗೂ ಪರಸಪ್ಪರಬಂಧ ಪ್ರತಿಭೆಯ ಎರಡು ಮುಖಗಳು. ಮೊದಲನೆಯದರಲ್ಲಿ ವಿನೋದದ ಆವರಣವಿದ್ದರೆ ಎರಡನೆಯದರಲ್ಲಿ ಬಡತನದ ವಿಷಮತೆಯಿದೆ. ಪರಿಣಾಮದ ದೃಷ್ಟಿಯಿಂದ ಬಸಪ್ಪರ ಬಂಧ ಯಶಸ್ವೀ ಕಥೆ.
  • ರಂ.ಶ್ರೀ.ಮುಗಳಿಯವರ ಕನಸಿನ ಕೆಳದಿ ಸಂಕಲನದಲ್ಲಿ ಉತ್ತಮ ವಾದ ಕಥೆಗಳಿವೆ. ಸುಸಂಬದ್ಧವಾದ ಕಥಾರಚನೆ, ಗುರಿ ತಪ್ಪದ ಪರಿಣಾಮ ಇವರ ಕಥೆಗಳ ವೈಶಿಷ್ಟ್ಯ - ಮಧ್ಯಮವರ್ಗದ ಜನರ ಅನೇಕ ತೊಂದರೆ ತೊಡಕುಗಳು ಹೃದಯಂಗಮವಾಗಿ ಚಿತ್ರಿತವಾಗಿವೆ. ವಿತಂತು ವೇಶ್ಯೆಯಲ್ಲಿ ಉತ್ತಮ ಕಥೆಯ ಎಲ್ಲ ಗುಣಗಳೂ ಇವೆ. ದುರ್ದೈವಿ ಹೆಣ್ಣೊಬ್ಬಳ ಹೃದಯವಿದ್ರಾವಕ ಚಿತ್ರಣ ಈ ಕಥೆಯ ವಸ್ತು. ಇದರ ಶೈಲಿ ನಿರರ್ಗಳವಾಗಿ ಹರಿಯುತ್ತದೆ.
  • ಗೊರೂರು ರಾಮಸ್ವಾಮಿ ಅಯ್ಯಂಗಾರ್ ಹಾಗೂ ಪಡುಕೋಣೆ ರಮಾನಂದರಾಯರ ಕಥೆಗಳನ್ನು ಪ್ರತ್ಯೇಕವಾಗಿಯೇ ನೋಡಬೇಕು. ಇಬ್ಬರೂ ಹೆಸರಾದ ನಗೆಗಾರರು. ಇವರ ಹಾಸ್ಯ, ವ್ಯಕ್ತಿಗಳ ವಿಕ್ಷಿಪ್ತತೆ ಹಾಗೂ ಘಟನೆಗಳ ಚಮತ್ಕಾರಗಳಿಂದಾಗಿ ಕಳೆಗೂಡಿ ನಿಲ್ಲುತ್ತದೆ. ತಾಂತ್ರಿಕವಾಗಿ ಇವರ ಬರೆಹಗಳಲ್ಲಿ ಸಣ್ಣಕಥೆಯ ಅಂಶಗಳು ಕಡಿಮೆಯಿದ್ದರೂ ಕಥನ ರೀತಿ ದೃಢವಾದುದು.
  • ರಮಾನಂದರಾಯರ ಹುಚ್ಚು ಬೆಳುದಿಂಗಳಿನ ಹೂಬಾಣಗಳು ಎಂಬ ಆಧಾರಿತ ಸಂಗ್ರಹದಲ್ಲಿ ಸಣ್ಣಕಥೆಗಳೆನಿಸುವ ಕೃತಿಗಳಿದ್ದರೂ ಅವು ಚೆಲ್ಲುವ ಹಾಸ್ಯದಿಂದಾಗಿ ನಗೆಬರೆಹಗಳು ಎಂದೇ ಪ್ರಸಿದ್ಧವಾಗಿವೆ. ಗೊರೂರರ ಎಲ್ಲ ಬರೆಹಗಳಿಂದಲೂ ಕೆಲವು ಕಥೆಗಳನ್ನು ಆರಿಸಬಹುದು. ವೈಯಾರಿ, ಗರುಡಗಂಬದ ದಾಸಯ್ಯ, ಬೆಸ್ತರ ಕರಿಯ, ಶಿವರಾತ್ರಿ ಈ ಸಂಗ್ರಹಗಳಲ್ಲಿ ಹಲವು ಉತ್ತಮ ಕಥೆಗಳಿವೆ. ಆದರೆ ಗೊರೂರರ ಹಾಸ್ಯ ಪ್ರತಿಭೆಯಲ್ಲಿ ಕಥಾಂಶ ಮಸುಕಾಗುತ್ತದೆ.
  • ಹಾಸ್ಯರಸ ಹೊನಲಾದಾಗ ಇವರ ಕಥೆಗಳು ಉಪಕಥೆಗಳ ಗೊಂಚಲಾಗುತ್ತವೆ. ಹಾರುವಯ್ಯ ಹಜಾಮನಾದದ್ದು, ಆಚಾರ ಕೆಟ್ಟರೂ ಆಕಾರ ಕೆಡಬಾರದು, ಬೂತಯ್ಯನ ಮಗ ಅಯ್ಯು, ಡೊಂಕು ಬಾಲ - ಇಂಥ ಉಜ್ಜ್ವಲ ಕಥೆಗಳೂ ಈ ಸಂಕಲನ ಗಳಲ್ಲಿವೆ. ಗೊರೂರರ ಕಥೆಗಳು ಹೆಚ್ಚು ಚಿತ್ರಮಯವೂ ಆ ಚಿತ್ರಗಳು ಹಾಸ್ಯಮಯವೂ ಆಗಿವೆಯೆನ್ನಬಹುದು. ವಾಸ್ತವತೆಯ ಒಂದು ಕಾರ್ಯವಾದ ಜೀವನ ಚಿತ್ರಣದಲ್ಲಿ ಗೊರೂರರು ಯಶಸ್ವಿಯಾಗಿದ್ದಾರೆ ಎನ್ನಬಹುದು.
  • ಸಣ್ಣಕಥೆಗಳಲ್ಲಿ ಹೆಸರಿಸಬೇಕಾದ ಇನ್ನೊಂದು ಹೆಸರು ದೇವುಡು. ಪಾತ್ರಗಳ ಕ್ರಮಬದ್ಧ ವಿಕಾಸ, ಕಥೆ ಪಡೆಯುವ ಏರಿಳಿತಗಳು, ಸನ್ನಿವೇಶಗಳ ಯಥಾರ್ಥತೆಗಳಿಂದಾಗಿ ದೇವುಡು ಅವರ ಕಥೆಗಳು ಮಹತ್ತ್ವದ್ದಾಗಿವೆ. ಕವಿಗಳಾದ ಬೇಂದ್ರೆ, ಕುವೆಂಪು, ಪುತಿನ ಇವರು ಕಥೆಗಳನ್ನು ಬರೆದಿದ್ದಾರೆ. ಸಣ್ಣಕಥೆ ತನ್ನ ಸ್ವಭಾವದಲ್ಲಿ ಭಾವಗೀತೆಗೆ ಸಮೀಪವಾಗಿರುವುದರಿಂದ ಇವರು ಬರೆದ ಕಥೆಗಳು ಪ್ರಮಾಣದಲ್ಲಿ ಅಲ್ಪವಾದರೂ ಹಿರಿಮೆಯಲ್ಲಿ ಮಹತ್ತ್ವಪುರ್ಣವಾಗಿವೆ.
  • ಬೇಂದ್ರೆಯವರ ಪಾಲಾ ಪು, ಹಿರಿದ ಕತ್ತಿ, ಏಕಾಕಿನಿ ಉತ್ತಮವಾದ ಕಥೆಗಳಾಗಿವೆ. ಇವರ ಶೈಲಿ ಈ ಕೃತಿಗಳಲ್ಲಿ ಸಂಗೀತದ ನಾದಲೋಲುಪತೆಯನ್ನು ಪಡೆದಿದೆ. ಆದರ್ಶವಾದ ಸಮಾಜವನ್ನು ತಿದ್ದುವ ಬಕೆ ಕುವೆಂಪು ಅವರಲ್ಲಿದ್ದರೂ ನಿಸರ್ಗಪ್ರಿಯರಾದ ಇವರ ಕಥೆಗಳಲ್ಲಿ ಸುಧಾರಣಾಮನೋಭಾವ ಹಿನ್ನೆಲೆಯಲ್ಲಿ ಉಳಿದಿದೆ.
  • ನನ್ನ ದೇವರು, ಸನ್ಯಾಸಿ ಮುಂತಾದ ಕಥೆಗಳಲ್ಲಿ ಆದರ್ಶತ್ವವನ್ನು ಕಂಡರೆ, ಧನ್ವಂತರಿಯ ಚಿಕಿತ್ಸೆ ಎಂಬ ಕಥೆಯಲ್ಲಿ ಸಾಮಾಜಿಕ ಕ್ರಾಂತಿಯ ಒಲವನ್ನು ಕಾಣಬಹುದು. ಮೀನಾಕ್ಷಿಯ ಮನೆ ಮೇಷ್ಟ್ರು ಕಥೆಯಲ್ಲಿ ಕಥೆಗಾರರನ್ನು ಆಕರ್ಷಿಸುವ ವಸ್ತುವಿನ ವಿಶಿಷ್ಟ ನಿರೂಪಣೆಯನ್ನು ಕಾಣಬಹುದು. ಇಲ್ಲಿನ ವಸ್ತು ಚಿರಪರಿಚಿತ ಭಗ್ನ ಪ್ರಣಯ, ಸುಂದರವಾಗಿ ನಿರೂಪಿತವಾಗಿದೆ. ಯಾರೂ ಅರಿಯದ ವೀರ ಎಂಬ ಕಥೆಯಲ್ಲಿ ಉತ್ತಮ ಕಥೆಗಾರಿಕೆಯ ಮಟ್ಟವನ್ನು ಗುರುತಿಸಬಹುದು.
  • ಇವರ ಶೈಲಿ ಭಾವಗೀತೆಯಂತಿದ್ದರೂ ಮಹಾಕಾವ್ಯದ ಸನ್ನಿವೇಶಮೊಂದರ ಪ್ರಭಾವವನ್ನು ಬೀರುತ್ತದೆ. ಪುತಿನ ಅವರ ಧ್ವಜರಕ್ಷಣೆಯಲ್ಲಿ ಕೆಲವು ಸತ್ತ್ವಪುರ್ಣ ಕಥೆಗಳಿವೆ. ಧ್ವಜರಕ್ಷಣೆಯ ವಸ್ತು ರಾಜಕೀಯಕ್ಕೆ ಸಂಬಂದಿsಸಿದ್ದರೂ ಆದರ್ಶಪ್ರಿಯ ಯುವಕನ ಅಂತರಂಗದ ತುಮುಲವನ್ನೂ ಚಿತ್ರಿಸುತ್ತದೆ. ಇವರುಗಳಲ್ಲದೆ ಮೊದಲ ತಲೆಮಾರಿನ ಇನ್ನೂ ಅನೇಕರು ಕಥೆಗಳನ್ನು ಬರೆದರು.
  • ಭಾರತೀಪ್ರಿಯರ ವೀಣೆ ಹಾಗೂ ಒಂದು ಹಳೆಯ ಕಥೆ ಕನ್ನಡದ ಜನ ಎಂದೂ ಮರೆಯಲಾರದಂಥ ಕೃತಿಗಳು. ಇವರ ಕಥೆಗಳಲ್ಲಿ ಸನ್ನಿವೇಶವನ್ನು ಮನಸ್ಸಿನಲ್ಲಿ ಕೆತ್ತಿ ನಿಲ್ಲಿಸುವಂತೆ ಮಾಡುವ ಮೋಡಿಯಿದೆ. ರಾಹೂ, ನಾದನಾಮಕ್ರಿಯಾ, ಸಾಧನೆ ಮೊದಲಾದ ಕಥೆಗಳಲ್ಲಿ ಹೊಳಪಿನ ಶೈಲಿಯನ್ನು ಕಂಡರೆ ಮೋಚಿಯಲ್ಲಿ ನಿರಾಡಂಬರವಾದ ಶೈಲಿಯಿದೆ. ಮೋಚಿ ಇವರ ಪ್ರಾತಿನಿದಿಕ ಕಥೆಯಲ್ಲದಿದ್ದರೂ ಒಂದು ಉತ್ತಮ ಕಥೆ.
  • ವೈನಾಡಿನ ಸ್ಥಾನಿಕ ಸೌಂದರ್ಯವನ್ನಲ್ಲದೆ ಅಲ್ಲಿಯ ಜನರ ವಿಚಿತ್ರ ನಡೆವಳಿಕೆಗಳನ್ನೂ ಇವರ ಕಥೆಗಳಲ್ಲಿ ಕಾಣಬಹುದು. ಕ್ಷೀರಸಾಗರರ ನಮ್ಮೂರಿನ ಪಶ್ಚಿಮಕ್ಕೆ, ಭಾವಪುರ್ಣತೆ ಹಾಗೂ ರಸೋತ್ಕರ್ಷಗಳಿಗೆ ಮಾದರಿಯಾದ ಕಥೆ. ಎಂ.ವಿ.ಸೀತಾರಾಮಯ್ಯನವರ ಹುಟ್ಟಿನ ಹಂಬಲು ಹೃದಯವೇದಕ ವಾದ ಕಥೆ. ಹೀಗೆಯೇ ಶಂಕರಭಟ್ಟರ ಅದ್ದಿಟ್ಟು, ಜಡಭರತರ ಡೂಗಜ್ಜನ ಬಹಿಷ್ಕಾರ ಮೊದಲಾದ ಕಥೆಗಳೂ ಉತ್ತಮ ಕಥೆಗಳಾಗಿವೆ.
  • ಸೇಡಿಯಾಪು ಕೃಷ್ಣಭಟ್ಟರ ಕಥೆಗಳ ಸ್ವರೂಪ ವಡ್ಡಾರಾಧನೆಯ ಕಥೆಗಳನ್ನು ಕಸಿ ಮಾಡಿದಂತಿದೆ. ನಾಗರಬೆತ್ತ ಇವರ ಉತ್ತಮ ಕಥೆಗಳಲ್ಲೊಂದು. ಮೇವುಂಡಿ ಯವರೂ ಅಚ್ಚಗನ್ನಡದ ಬಿಗುವು ತೊಟ್ಟು ಹಲವು ಕಥೆಗಳನ್ನು ನೀಡಿದರು. ಕಾದಂಬರಿ ಕ್ಷೇತ್ರದಲ್ಲಿ ಹಸನಾದ ಕೆಲಸ ಮಾಡಿರುವ ಶಿವರಾಮ ಕಾರಂತರು ತಮ್ಮ ಹಸಿವು ಮತ್ತು ಹಾವು ಎಂಬ ಎರಡು ಸಂಕಲನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಡತನದ ಬಾಳನ್ನು ಮನ ಕರಗುವಂತೆ ಚಿತ್ರಿಸಿದ್ದಾರೆ.
  • ಹಳ್ಳಿಯ ಹತ್ತು ಸಮಸ್ತರು ಒಂದು ರೀತಿಯ ಕಥಾಸಂಕಲನವೇ ಆಗಿದೆ. ಎಕ್ಕುಂಡಿಯವರು ತಮ್ಮ ಕಥೆಗಳಲ್ಲಿ ಪೌರಾಣಿಕ ಸನ್ನಿವೇಶಗಳನ್ನು ಉಜ್ವಲವಾಗಿ ಹಿಡಿದಿಟ್ಟಿದ್ದಾರೆ. 1920-42ರ ಅವದಿಯ ಸಣ್ಣಕಥೆಯ ಮಜಲನ್ನು ಇಲ್ಲಿ ನೋಡಿದ್ದಾಯಿತು. ಆದರೂ ಸಣ್ಣಕಥಾಸಾಹಿತ್ಯ ನಿರೀಕ್ಷಿಸಿದಷ್ಟು ಬೆಳೆಯಲಿಲ್ಲ. ಹೊಸಗನ್ನಡದ ಓದುಗರು ಕಾದಂಬರಿಗೆ ಮನತೆತ್ತರು. ಕಥೆಗಳಿಗಾಗಿಯೇ ಮೀಸಲಾದ ಪತ್ರಿಕೆಗಳು ಕ್ರಮೇಣ ನಿಂತುಹೋದುವು.
  • ಮೊದಲಿಗೆ ಮಿಂಚಿನಬಳ್ಳಿ ಪ್ರಕಾಶನ ಸಂಸ್ಥೆ ಕನ್ನಡದಲ್ಲಿ ಸತ್ತ್ವಶಾಲಿಯಾದ ಕಥೆಗಳು ಹೊರಬರಲು ಕಾರಣವಾಯಿತು. ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದಿಂದ ಆಗ ಹೊರಡುತ್ತಿದ್ದ ಪ್ರಬುದ್ಧ ಕರ್ಣಾಟಕ ತ್ರೈಮಾಸಿಕ ಸಣ್ಣಕಥೆಯ ಸಾಹಿತ್ಯ ಪ್ರಕಾರವನ್ನು ಕನ್ನಡಿಗರಿಗೆ ಕೊಡಲು ತುಂಬ ಆಸ್ಥೆ ವಹಿಸಿತು. ಅ.ನ.ಕೃಷ್ಣರಾಯರು ಹೊರಡಿಸುತ್ತಿದ್ದ ಕಥಾಂಜಲಿ ಅನೇಕ ತರುಣ ಕಥೆಗಾರರನ್ನೂ ಬೆಳಕಿಗೆ ತಂದಿತು. ಧಾರವಾಡದ ಜಯಂತಿ, ಜಯಕರ್ನಾಟಕ ವಿಪುಲವಾಗಿ ಸಣ್ಣಕಥೆಗಳನ್ನು ಪ್ರಕಟಿಸಿದುವು.
  • ಉತ್ತರ ಕರ್ನಾಟಕದ ಜಮಖಂಡಿ ಸುತ್ತಿನ ಗ್ರಾಮೀಣ ಭಾಷೆಯನ್ನು ದಟ್ಟವಾಗಿ ತಮ್ಮ ಕತೆಗಳಲ್ಲಿ ಬಳಸಿಕೊಂಡು ಬರೆಯುತ್ತಿರುವ ಡಾ. ಪ್ರಕಾಶ ಗ. ಖಾಡೆ ಅವರ 'ಚೆಲುವಿ ಚಂದ್ರಿ'ಕಥಾ ಸಂಕಲನವು ೨೦೨೧ ರಲ್ಲಿ ಪ್ರಕಟವಾಗಿದೆ. ೧೦ ಕಥೆಗಳಿವೆ. ಪ್ರಕಾಶ ಖಾಡೆ ಅವರ ಕತೆಗಳು ಸುಧಾ, ಮಯೂರ, ಸಮಾಜಮುಖಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಪ್ರಜಾವಾಣಿಗಳಲ್ಲಿ ಪ್ರಕಟವಾಗಿ ಜನಪ್ರಿಯವಾಗಿವೆ.
  • ವಿಜಯಪುರ ಜಿಲ್ಲೆಯ ಕಥೆಗಾರರಲ್ಲಿ ಚನ್ನಪ್ಪ ಕಟ್ಟಿ ಶಂಕರ ಬೈಚಬಾಳ ಪ್ರಮುಖರು.ಶಂಕರ ಬೈಚಬಾಳ ಅವರ ನಿರ್ನೆರ, ಕೆಂಪು ಹುಡಗಿ ಕಪ್ಪು ಕಾಲ್ಮರಿ,ಈ ಎರಡು ಕಥಾ ಸಂಕಲನಗಳು ಪ್ರಕಟವಾಗಿವೆ.

ಆಧುನಿಕ ಕನ್ನಡ ಸಾಹಿತ್ಯ[ಬದಲಾಯಿಸಿ]

  • ಆಧುನಿಕ ಕನ್ನಡ ಸಾಹಿತ್ಯ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಹೀಗೆ ಅವಸ್ಥಾಂತರಗಳನ್ನು ಕಂಡಂತೆ ಕನ್ನಡ ಸಣ್ಣ ಕಥಾಪ್ರಪಂಚ ಇದಕ್ಕೆ ಹೊಂದಿಕೊಂಡಂತೆ ವಿಸ್ತರಿಸುತ್ತಾ ಹೋಯಿತು. ಆಯಾ ಕಾಲದ ಸ್ಪಂದನಕ್ಕೆ ಜೀವಂತವಾಗಿ ಉಳಿಯಿತು. ಕನ್ನಡ ಸಾಹಿತ್ಯದಲ್ಲಿ ಪ್ರಗತಿಶೀಲತೆಯ ಚಳವಳಿ ಸಣ್ಣಕಥೆಯಿಂದಲೇ ಆರಂಭವಾಯಿತು ಎನ್ನಬೇಕು.
  • 1936-42ರವರೆಗೆ ನಡೆದ ರಾಜಕೀಯ ಆಂದೋಲನಗಳು, ಪತ್ರಿಕೆಗಳಲ್ಲಿ ನಡೆಯುತ್ತಿದ್ದ ಪ್ರಗತಿಶೀಲತೆಯ ಪ್ರಚಾರ, ರಷ್ಯದ ಹಾಗೂ ಹಿಂದಿ ಕಥೆಗಳ ಅನುವಾದ ಇವೆಲ್ಲ ಪ್ರಭಾವಗಳಿಂದ ಕನ್ನಡ ಸಾಹಿತ್ಯದಲ್ಲಿ ಹಲವು ಬದಲಾವಣೆಗಳುಂಟಾಗಿ ಬರೆಹಗಾರರು ಎಲ್ಲ ವಿಧದಲ್ಲೂ ಸತ್ತ್ವಯುತ ಸಾಹಿತ್ಯರಚನೆ ಮಾಡಿದರೆನ್ನುವ ಮಾತನ್ನು ಮರೆಯಲಾಗದು.
  • ಅ.ನ.ಕೃ. ಅವರ ನೇತೃತ್ವದಲ್ಲಿ ತ.ರಾ.ಸು., ನಿರಂಜನ, ಬಸವರಾಜ ಕಟ್ಟೀಮನಿ, ಚದುರಂಗ ಮುಂತಾದ ಲೇಖಕರು ಸಣ್ಣಕಥೆಯಲ್ಲಿ ವಿಶೇಷವಾಗಿ ಪ್ರಗತಿಶೀಲತೆಯನ್ನು ತಂದರು. ದಲಿತವರ್ಗಗಳ ಬಗ್ಗೆ ಸಹಾನುಭೂತಿ, ಶೋಷಣೆಯ ವಿರುದ್ಧ ಆಕ್ರೋಶ, ಸಾಮಾಜಿಕ ವೈಷಮ್ಯಗಳ ಬಗ್ಗೆ ಅಸಮಾಧಾನ ಇವರ ಪ್ರಮುಖ ದೃಷ್ಟಿಕೋನಗಳಾದುವು. ನವೋದಯದ ಲೇಖಕರನ್ನು ಪ್ರತಿಗಾಮಿಗಳೆಂದು ಕರೆದು, ಸಮಾಜದ ಡಂಭಾಚಾರವನ್ನು ಎತ್ತಿ ತೋರಿಸಿದರು.
  • ವಾಸ್ತವತಾವಾದ ಇವರ ಕೈಯಲ್ಲಿ ಅತೀರೇಕಕ್ಕೆ ಹೋಯಿತು. ಸಾಮ್ಯವಾದ ಈ ದೇಶಕ್ಕೆ ಅಕಾಲಿಕವಾಗಿದ್ದುದರಿಂದಲೋ ಅಥವಾ ವೈಚಾರಿಕತೆ ಪ್ರಗತಿಶೀಲರ ಮನೋಧರ್ಮದಲ್ಲೇ ಸರಿಯಾಗಿ ಆಗಿರಲಿಲ್ಲವೆಂದೋ ಈ ಪ್ರಗತಿಶೀಲ ಬಿರುಗಾಳಿ ಕ್ರಮೇಣ ಸ್ತಬ್ಧವಾಯಿತು. ಪರಸ್ಪರ ಕೊಳುಕೊಡುಗೆಗಳು ಹೆಚ್ಚಿದುದರಿಂದ ಪ್ರಗತಿಶೀಲರಿಗೂ ನಮೋದಯ ಲೇಖಕರಿಗೂ ವಿಶೇಷ ಅಂತರವೇನೂ ಕಾಣಬರುವುದಿಲ್ಲ.

ಪ್ರಗತಿಶೀಲತೆ[ಬದಲಾಯಿಸಿ]

  • ಪ್ರಗತಿಶೀಲತೆಯಿಂದ ಕನ್ನಡ ಸಣ್ಣಕಥೆಯಲ್ಲಿ ಕೆಲವು ಬದಲಾವಣೆಗಳಾದವು. ವಸ್ತು ಸಮಾಜಸಮ್ಮುಖವಾಗಿ ವೈಯಕ್ತಿಕ ತೀವ್ರತೆಯನ್ನು ಕಳೆದುಕೊಂಡಿತು. ವಸ್ತುವಿನ ಆಯ್ಕೆ ಸೀಮಿತವಾಯಿತು. ಆದರೆ ಬರೆವಣಿಗೆಗೆ ಹೆಚ್ಚು ವೇಗ, ಮೊನಚು ಬಂತು. ಒಂದು ಬಗೆಯ ಅತೃಪ್ತ ವಾತಾವರಣ ಹುಟ್ಟಿಕೊಂಡಿತು. ಸಂಭಾಷಣೆಗಳಲ್ಲಿ ಆಡುಮಾತಿನ ಬಳಕೆ ಹೆಚ್ಚಾಯಿತು. ಈ ಪ್ರಕಾರದಲ್ಲಿ ಅ.ನ.ಕೃ. ಸಿದ್ಧಹಸ್ತರು.
  • ಅವರಿಗೆ ಕಥೆ ಹೇಳುವ ಕಲೆ ಅದ್ಭುತವಾಗಿ ಸಾದಿsಸಿದೆ. ಅವರ ಶೈಲಿ ತುಂಬಿ ಹರಿಯುವ ತೊರೆಯಂತೆ. ಕಥೆಗಳಲ್ಲಿ ಕಲಾವಂತಿಕೆ ಹಿಂದೆ ಬಿದ್ದರೂ ಶೈಲಿಯಿಂದ ಎಂಥ ಕಳಪೆಯ ವಿಷಯವನ್ನಾದರೂ ರಸಭರಿತವಾಗಿ ಮಾಡುವ ಮೋಡಿಯಿದೆ. ಮಣ್ಣಿನ ಮಗ ಒಂದು ಉತ್ತಮ ಕೃತಿ. ಅನ್ನವಿತ್ತ ನೆಲವನ್ನು ನಿರ್ಲಕ್ಷಿಸಿದವನಿಗೆ ಮೋಕ್ಷವಿಲ್ಲ ಎಂಬ ಆಶಯವನ್ನು ಹೊತ್ತ ನಾಯಕನ ಪ್ರತಿಬಿಂಬ ಆ ಕೃತಿ. ಇವರ ಅಗ್ನಿಕನ್ಯೆ ಸಂಕಲನದಲ್ಲಿ ಹಲವು ಪ್ರಗತಿಶೀಲ ಕಥೆಗಳಿವೆ.
  • ಇವರ ಕೆಲವು ಕಥೆಗಳಲ್ಲಿ ಲೈಂಗಿಕ ಜೀವನದ ವಿಶ್ಲೇಷಣೆಯನ್ನೂ ಕಾಣಬಹುದು. ಅ.ನ.ಕೃ. ಅವರ ಪ್ರಗತಿಶೀಲತೆಯ ವಾದ ಉಳಿದವರ ಮೇಲೆ ಹೆಚ್ಚು ಪರಿಣಾಮವನ್ನು ಉಂಟುಮಾಡಿತು. ಇವರ ಪ್ರಭಾವ ಎರಡು ಮೂರು ಪೀಳಿಗೆಗಳ ಲೇಖಕರ ಮೇಲೆ ಬಿದ್ದಿದೆ. ತ.ರಾ.ಸು., ನಿರಂಜನ, ಚದುರಂಗ, ಬಸವರಾಜ ಕಟ್ಟೀಮನಿ, ಅರ್ಚಕ ವೆಂಕಟೇಶ, ವೆಂಕಟರಾಜ ಪಾನಸೆ ಮೊದಲಾದವರು ಸಾಹಿತ್ಯವನ್ನು ಸಮಾಜದ ಕನ್ನಡಿಯಲ್ಲಿ ನೋಡಲು ಯತ್ನಿಸಿದರು.
  • ತ.ರಾ.ಸು. ಅವರು ಕಾದಂಬರಿಗಳ ಜೊತೆಗೆ ಕೆಲವು ಅತ್ಯುತ್ತಮ ಸಣ್ಣಕಥೆಗಳನ್ನೂ ನೀಡಿದ್ದಾರೆ. 0-0-9 ಎಕ್ಸ್‌, ಇನ್ನೊಂದು ಮುಖ - ಇವು ತಂತ್ರದ ದೃಷ್ಟಿಯಿಂದ ಯಶಸ್ವಿಯಾದ ಕಥೆಗಳು. ಇವರ ಜೊತೆಯಲ್ಲಿಯೇ ನೆನೆಯಬೇಕಾದ ಇನ್ನೊಂದು ಹೆಸರೆಂದರೆ ನಿರಂಜನರದು. ನಿರಂಜನರು ಪರಿಣಾಮ ಕಾರಿಯಾಗಿ ಕಥೆ ಹೇಳುವಕಲೆ ಸಾದಿsಸಿ ಕೊಂಡಿದ್ದಾರೆ. ಜೀವನಾನುಭವದ ಆಳದಲ್ಲಿ ಮುಳುಗಿ ಅಲ್ಲಿಯ ನೋವು ನಲಿವುಗಳನ್ನು ಖಂಡತುಂಡವಾಗಿ ಇವರು ಚಿತ್ರಿಸಬಲ್ಲರು.
  • ಇವರದು ಹರಿತವಾದ ಶೈಲಿ. ಕೊನೆಯ ಗಿರಾಕಿ ಇವರ ಅತ್ಯುತ್ತಮ ಪ್ರಾತಿನಿದಿಕ ಕಥೆ. ಹೆಣ್ಣನ್ನು ಭೋಗದ ವಸ್ತುವಾಗಿ ಅಸಹ್ಯವಾಗಿ, ಕ್ರೂರವಾಗಿ ಬಳಸಲೆತ್ನಿಸುವ ಜಗತ್ತಿನ ರೌದ್ರ ವಾಸ್ತವಿಕತೆ ಕಥೆಯ ಪರಿಣಾಮಕ್ಕೆ ತೀವ್ರತೆಯನ್ನು ತಂದಿದೆ.

ಕನ್ನಡ ಕಥಾಪ್ರಪಂಚದಲ್ಲಿ ಮರೆಯಲಾಗದ ಇನ್ನೊಂದು ಹೆಸರು ಬಸವರಾಜ ಕಟ್ಟೀಮನಿ. ಇವರು ಕೊಳೆ ಇರುವ ಕಡೆ ಬೆಂಕಿಯನ್ನು ಉಗುಳುವ ಕನ್ನಡದ ಜೀವಂತ ಜ್ವಾಲಾಮುಖಿ.

  • ಅನ್ಯಾಯಗಳ ವಿರುದ್ಧ ನಿಲ್ಲುವುದೇ ಇವರ ಸ್ವಭಾವ. ಮೊದಮೊದಲು ಇವರ ಕಥೆಗಳಲ್ಲಿ ರಾಜಕೀಯತನ ತುಂಬಿದ್ದರೂ ಅನಂತರದ ಕಥೆಗಳಲ್ಲಿ ಸಾಮಾಜಿಕತೆಯೇ ಹೆಚ್ಚು. ಗಿರಿಜಾ ಕಂಡ ಸಿನಿಮಾ, ಬೂಟ್ ಪಾಲಿಷ್, ರಕ್ತಧ್ವಜ, ನೀಲಗಂಗಾ, ನಾಗಪಂಚಮಿಗೆ ಬಂದದ್ದು, ಜೀವನ ಕಲೆ - ಇವು ಇವರ ಉತ್ತಮ ಕಥೆಗಳಲ್ಲಿ ಕೆಲವು. ಕಟ್ಟೀಮನಿಯವರಲ್ಲಿ ಕಥೆಗಾರನಿಗಿರಬೇಕಾದ ಎಲ್ಲ ನೈಜಗುಣಗಳೂ ಇವೆ. ಭಾಷೆಯನ್ನೂ ಸಜೀವವಾಗಿ ಇವರು ಉಪಯೋಗಿಸಬಲ್ಲರು.
  • ಕೋ. ಚೆನ್ನಬಸಪ್ಪನವರು ಕಟ್ಟೀಮನಿಯವರಂತೆ ಹಳ್ಳಿಯ ಜೀವನವನ್ನು ಚೆನ್ನಾಗಿ ಅರಿತವರು. ಇವರದು ಶಕ್ತಿಪುರ್ಣ ಶೈಲಿ. ನಮ್ಮೂರಿನ ದೀಪ, ಉಂಗುರದ ಉರುಲು ಇವರ ಉತ್ತಮ ಕಥೆಗಳು. ಒಕ್ಕಲಿಗನ ಬಾಳಿನ ಪ್ರತಿ ಎಳೆಯನ್ನು ಬಿಡಿಸಿ ತೋರಿಸುವ ಆಸಕ್ತಿ ಇವರ ಕಥೆಗಳಲ್ಲಿ ಕಂಡುಬರುತ್ತದೆ. ಸಂಪ್ರದಾಯ, ಪ್ರಗತಿಶೀಲ ಮನೋಭಾವಗಳ ಮಧ್ಯವರ್ತಿಯ ವಿಧಾನವನ್ನು ತುಳಿದ ಕಥೆಗಾರರ ಪಂಗಡವೊಂದುಂಟು. ಜೀವನದ ವೈವಿಧ್ಯವೇ ಇವರ ಪ್ರಥಮ ಆಕರ್ಷಣೆ.

ಸಮಾಜ ಸುಧಾರಣೆಯ ಕಥೆಗಾರರು[ಬದಲಾಯಿಸಿ]

ಇವರಿಗೆ ಸಮಾಜ ಸುಧಾರಣೆಯ ಬಯಕೆಯುಂಟು. ಈ ಮಾರ್ಗದಲ್ಲಿ ನಡೆದ ಎಂ.ವಿ.ಸೀತಾರಾಮಯ್ಯ, ಅಶ್ವತ್ಥ, ಎಸ್.ಅನಂತನಾರಾಯಣ, ನರೇಂದ್ರಬಾಬು, ಎಚ್.ಪಿ. ಜೋಶಿ, ದ.ಬಾ.ಕುಲಕರ್ಣಿ, ರಾಮಚಂದ್ರ ಕೊಟ್ಟಲಗಿ, ವರದರಾಜ ಹುಯಿಲ ಗೋಳ, ಎಲ್.ಎಸ್. ಶೇಷಗಿರಿ ರಾವ್, ಹಿರೇಮಲ್ಲೂರ ಈಶ್ವರನ್, ವರಗಿರಿ, ಶ್ರೀಕಂಠ ಪುತ್ತೂರು, ಮಿರ್ಜಿ ಅಣ್ಣಾರಾಯ, ವಿ.ಜಿ.ಭಟ್ಟ, ರಾ.ವೆಂ.ಶ್ರೀನಿವಾಸ, ಕೊ.ಸು. ಸೀತಾರಾಮ್, ಜೀ.ಶಂ. ಪರಮ ಶಿವಯ್ಯ, ಸುಧಾಕರ, ನಂಜ ರಾಜೇ ಅರಸು, ಉಮಾಶಂಕರ, ಚಿದಂಬರಾ ನಂದ, ಬೆಸಗರಹಳ್ಳಿ ರಾಮಣ್ಣ, ಶೇಷನಾರಾಯಣ, ಜನಾರ್ದನ ಗುರ್ಕಾರ, ಶ್ರೀನಿವಾಸ ಉಡುಪ, ಶ್ರೀಕಾಂತ, ಕ.ವೆಂ. ರಾಜಗೋಪಾಲ್, ಶಾಂತರಸ, ನಾರಾಯಣ ಬಲ್ಲಾಳ, ಸೇವ ನಮಿರಾಜಮಲ್ಲ, ಆರ್.ಬಸವರಾಜ, ವೆಂ.ಮು.ಜೋಶಿ, ವೀರಭದ್ರ, ಎನ್.ಎಸ್.ಚಿದಂಬರರಾವ್, ಪ.ಸು.ಭಟ್ಟ, ಟಿ.ಕೆ.ರಾಮರಾವ್, ದಯಾನಂದ ತೊರ್ಕೆ,ಪ್ರಕಾಶ ಗ ಖಾಡೆ (ಚೆಲುವಿ ಚಂದ್ರಿ'),ಶಾಂತಾರಾಮ ಸೋಮಯಾಜಿ ಮುಂತಾದವರು ಉತ್ತಮ ಕಥೆಗಳನ್ನು ಸೃಷ್ಟಿಸಿದ್ದಾರೆ. ಸುಧಾಕರ (ಕಣ್ಣಿ ಕಿತ್ತ ಹಸು, ಗರಿಕೆ ಬೇರು), ಬೆಸಗರಹಳ್ಳಿ ರಾಮಣ್ಣ (ನೆಲದ ಒಡಲು, ಗರ್ಜನೆ), ಜೀಶಂಪ (ಕಾವಲುಗಾರ ಮತ್ತು ಇತರ ಕಥೆಗಳು, ಮಬ್ಬು ಜಾರಿದ ಕಣಿವೆಯಲ್ಲಿ) - ಇವರ ಕಥೆಗಳು ಹಳ್ಳಿಯ ಜೀವನವನ್ನು ದಟ್ಟವಾಗಿ ಮೈಗೂಡಿಸಿಕೊಂಡು, ಆಡುಭಾಷೆಯ ಒರಟುತನ, ನಯನಾಜೂಕು, ಸೊಗಡನ್ನು ಭಾಷೆಯ ಬಳಕೆಯಲ್ಲಿ ಹದಗೊಳಿಸಿ, ಅನುಭವದ ತೀವ್ರತೆಯಿಂದ ಬರೆದಂಥವು. ಗ್ರಾಮಜೀವನದ ವಿವಿಧ ಮುಖಗಳ ಚಿತ್ರಣ ಇವರ ಕಥೆಗಳಲ್ಲಿ ಜೀವಂತವಾಗಿ ಮೂಡಿಬಂದಿದೆ.

ಮಹಿಳಾ ಕಥಾಗಾರ್ತಿಯರು[ಬದಲಾಯಿಸಿ]

  • ಕೊಡಗಿನ ಗೌರಮ್ಮನವರ ಹೆಸರು ಸಣ್ಣಕಥೆಯೊಂದಿಗೆ ನಿಕಟಸಂಬಂಧವನ್ನು ಬೆಸೆದುಕೊಂಡಿದೆ. ಹೆಣ್ಣಿನ ಬಾಳಿನ ನೋವುನಲಿವುಗಳನ್ನು ತಮ್ಮ ಕಥೆಗಳ ಮೂಲಕ (ಕಂಬನಿ) ಇವರು ಚಿತ್ರಿಸಿದ್ದಾರೆ. ಮರದ ಬೊಂಬೆ ಕಥೆಯಲ್ಲಿ ಕಾಣುವ ಹೆಣ್ಣು ಜೀವನದ ದೃಷ್ಟಿಕೋನ ಇವರು ಒಳ್ಳೆಯ ಕಥೆಗಾರ್ತಿ ಎಂಬುದಕ್ಕೆ ಸಾಕ್ಷಿಯಾಗಿದೆ.
  • ಇವರ ಜೊತೆಗೇ ಹೇಳಬೇಕಾದ ಇನ್ನೊಂದು ಹೆಸರೆಂದರೆ ಶ್ಯಾಮಲಾದೇವಿಯವರದು. ಇವರ ಹೂಬಿಸಿಲು, ಹೊಂಬಿಸಿಲು ಎಂಬ ಎರಡು ಕಥಾಸಂಗ್ರಹಗಳಲ್ಲೂ ಮಧ್ಯಮ ವರ್ಗದ ಕೌಟುಂಬಿಕ ಜೀವನ ಚಿತ್ರಿತವಾಗಿದೆ. ಹೀಗೆಯೇ ಸರಸ್ವತಿಬಾಯಿ ರಾಜವಾಡೆ (ಗಿರಿಬಾಲೆ) ಅವರ ಕಥನ ಪ್ರಪಂಚ ಸ್ತ್ರೀ ಕೇಂದ್ರಿತ ವಾದಂಥದ್ದು. ಇವರ ಕಥೆಗಳಲ್ಲಿ ಕೌಟುಂಬಿಕ ನೆಲೆ ಪ್ರಧಾನವಾಗಿದೆ.
  • ಮಹಿಳೆಯರು ಒಳಗಿನಿಂದ ಕಾಣಬಹುದಾದ ಕೌಟುಂಬಿಕ ಸೂಕ್ಷ್ಮಗಳು, ವಿವರಗಳು, ವೈಪರೀತ್ಯಗಳು, ಸುಖದುಃಖಗಳು ಸಹಜವಾಗಿ ಇವರ ಕಥೆಗಳಲ್ಲಿ ಪಡಿಮೂಡಿವೆ. ಅನೇಕ ಲೇಖಕಿಯರು ಉತ್ತಮ ಕಥೆಗಳನ್ನು ರಚಿಸಿದ್ದಾರೆ. ತ್ರಿವೇಣಿ, ವಾಣಿ, ಅನುಪಮಾ ನಿರಂಜನ, ಆರ್ಯಾಂಬ ಪಟ್ಟಾಬಿs, ಗೀತಾ ಕುಲಕರ್ಣಿ, ವೀಣಾ ಶಾಂತೇಶ್ವರ, ಈಚನೂರು ಶಾಂತ, ಎಚ್.ವಿ.ಸಾವಿತ್ರಮ್ಮ, ಜಯಲಕ್ಷ್ಮಿ ಶ್ರೀನಿವಾಸನ್, ಎಂ.ಕೆ.ಜಯಲಕ್ಷ್ಮಿ, ಶಾಂತಾದೇವಿ ಕಣವಿ, ಆನಂದಿ ಸದಾಶಿವರಾವ್, ಎಚ್.ಎಸ್.ಕಾತ್ಯಾಯಿನಿ, ರಾಜಲಕ್ಷ್ಮಿ ಎನ್.ರಾವ್, ಶಾಂತಾದೇವಿ ಮಾಳವಾಡ, ಚಂಪಾ ಮಹಿಷಿ, ಸುಶೀಲಾ ಕೊಪ್ಪರ, ಎಚ್.ಎಸ್.ಪಾರ್ವತಿ, ಚಿತ್ರಲೇಖ, ನಿರುಪಮಾ, ಮಲ್ಲಿಕಾ, ಎಚ್.ಆರ್.ಲೀಲಾವತಿ, ಲಲಿತಾಂಬ ಚಂದ್ರಶೇಖರ್, ಕುಸುಮಾ ಎಸ್. ಕುಲಗಾಣ, ವಿಶಾಲಾಕ್ಷಿ ಲಕ್ಷ್ಮಣಗೌಡ, ನೀಳಾದೇವಿ, ಪ್ರೇಮಾಭಟ್, ಎ.ಪಿ.ಮಾಲತಿ, ವೈದೇಹಿ, ಎಂ.ಎಸ್.ವೇದಾ, ಸಾರಾ ಅಬೂಬಕರ್, ಗೀತಾ ನಾಗಭೂಷಣ, ಬಾನು ಮುಷ್ತಾಕ್, ಭಾಗೀರಥಿ ಹೆಗಡೆ, ಹೇಮಾ ಪಟ್ಟಣಶೆಟ್ಟಿ, ಗಂಗಾ ಪಾದೇಕಲ್ ಮುಂತಾದವರು ಸೊಗಸಾದ ಕಥೆಗಳನ್ನು ರಚಿಸಿದ್ದಾರೆ.

ಕನ್ನಡದಲ್ಲಿ ನವ್ಯ ಪಂಥ[ಬದಲಾಯಿಸಿ]

  • ಸ್ವಾತಂತ್ರ್ಯ ಬಂದ ಕೆಲವೇ ವರ್ಷಗಳಲ್ಲಿ ಕನ್ನಡದಲ್ಲಿ ನವ್ಯ ಪಂಥಮೊಂದು ಉದಯವಾಯಿತು. ನವೋದಯ ಹಾಗೂ ಅನಂತರ ಬಂದ ಪ್ರಗತಿಶೀಲ ಪಂಥಕ್ಕೆ ಇವರು ಸ್ವಲ್ಪ ಬಿsನ್ನರಾದರು. ಮನಸ್ಸಿನ ಬೆನ್ನು ಹತ್ತಿ ಅದರ ಸಂಕೀರ್ಣತೆಗಳನ್ನು ಬಿಚ್ಚಿ ತೋರಿಸುವ ಸಾಹಸ ಮಾಡಿದರು. ಇದರಿಂದಾಗಿ ಹಲವು ಮನೋವೈಜ್ಞಾಕ ಕಥೆಗಳು ಹುಟ್ಟಿಬಂದುವು. ಕಥಾ ಪ್ರಪಂಚದಲ್ಲೂ ನವ್ಯತೆ ಮೂಡಿತು.
  • ಈ ದಿಶೆಯಲ್ಲಿ ರಾಮಚಂದ್ರ ಶರ್ಮರು ಸಂಗಮ, ಏಳನೆಯ ಜೀವ, ಸೆರಿಗಿನ ಕೆಂಡ ಇಂಥ ಕೆಲವು ಮಾದರಿಯ ನವ್ಯಕಥೆಗಳನ್ನು ಬರೆದರು. ಯು.ಆರ್.ಅನಂತಮೂರ್ತಿಯವರ ಎಂದೆಂದೂ ಮುಗಿಯದ ಕಥೆ ನವ್ಯ ಕಥೆಗಳ ಪ್ರಾತಿನಿದಿಕ ಸಂಗ್ರಹ. ಅನಂತರ ಪ್ರಶ್ನೆ, ಮೌನಿ ಸಂಕಲನಗಳು ಪ್ರಕಟಗೊಂಡಿವೆ.
  • ಶಾಂತಿನಾಥ ದೇಸಾಯಿ (ಮಂಜುಗಡ್ಡೆ, ಕ್ಷಿತಿಜ, ದಂಡೆ), ಯಶವಂತ ಚಿತ್ತಾಲ (ಸಂದರ್ಶನ, ಆಬೋಲಿನ, ಆಟ, ಕತೆಯಾದಳು ಹುಡುಗಿ), ಪಿ.ಲಂಕೇಶ್, (ನಾನಲ್ಲ, ಕೆರೆಯ ನೀರನು ಕೆರೆಗೆ ಚೆಲ್ಲಿ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ), ಕೆ.ಸದಾಶಿವ (ತುಣುಕುಗಳು, ನಲ್ಲಿಯಲ್ಲಿ ನೀರು ಬಂತು), ಟಿ.ಜಿ.ರಾಘವ (ಜ್ವಾಲೆ ಆರಿತು), ಕಾಮರೂಪಿ (ಒಂದು ತೊಲ ಪುನುಗು ಮತ್ತು ಇತರ ಕಥೆಗಳು), ಗಿರಡ್ಡಿ ಗೋವಿಂದರಾಜ (ಆ ಮುಖಾ ಈ ಮುಖಾ), ಪೂರ್ಣಚಂದ್ರ ತೇಜಸ್ವಿ (ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್‌ ಆಫೀಸು) ಮುಂತಾದವರು ಹಲವಾರು ಉತ್ತಮ ನವ್ಯಕಥೆಗಳನ್ನು ನೀಡಿದ್ದಾರೆ.

80ರ ದಶಕ[ಬದಲಾಯಿಸಿ]

  • ಕನ್ನಡ ಕಥಾದಿಗಂತ ವಿಸ್ತರಿಸಿದ ಕಾಲವಾಗಿದ್ದು ಕನ್ನಡದ ಸಣ್ಣಕಥೆಗಳ ಸುಗ್ಗಿಯನ್ನೇ ಕಾಣಬಹುದಾಗಿದೆ. ಈ ಅವದಿಯಲ್ಲಿ ಅನೇಕ ಉತ್ತಮ ಕಥೆಗಾರರು ಸೃಷ್ಟಿಯಾದರು. ನವ್ಯಕಥೆಯ ಮುಂದುವರಿದ ಕೊಂಡಿಯಾಗಿ, ಅದಕ್ಕಿಂತ ಬಿನ್ನವಾಗಿ ಸಣ್ಣಕಥೆ ರೂಪತಾಳತೊಡಗಿತು. ಶ್ರೀಕೃಷ್ಣ ಆಲನಹಳ್ಳಿ, (ತಪ್ತ, ಫಿನೀಕ್ಸ್‌), ಬರಗೂರು ರಾಮಚಂದ್ರಪ್ಪ (ಸುಂಟರಗಾಳಿ), ಟಿ.ಎಂ.ಸುಬ್ಬರಾಯ, ಹಿ.ಮ.ಬಸವಯ್ಯ, (ಗಂಟು), ಎಂ.ಜಿ.ಈಶ್ವರ್, ಲಕ್ಷ್ಮಣ ಕೊಡಸೆ, ರಾಮದಾಸ್ (ಸೇಡು), ಈಶ್ವರ ಚಂದ್ರ, ಜಯಂತ ಕಾಯ್ಕಿಣಿ, ಬಿ.ವಿ.ವೈಕುಂಠರಾಜು, ರಾಮಚಂದ್ರದೇವ (ದಂಗೆಯ ಪ್ರಕರಣ), ಜಿ.ಎಸ್.ಸದಾಶಿವ (ಮೀಸೆಯವರು) ಮೊದಲಾದವರು ಉತ್ತಮ ಕಥೆಗಳನ್ನು ನೀಡಿದರು.
  • ನವ್ಯತೆ ಕನ್ನಡ ಸಣ್ಣಕಥೆಯ ವಸ್ತು, ಶೈಲಿಯಲ್ಲಿ ಬದಲಾವಣೆ ತಂದಿತು. ತಂತ್ರದಲ್ಲೂ ಅನೇಕ ಬದಲಾವಣೆಗಳನ್ನು ಮೂಡಿಸಿತು. ಭಾಷೆಯ ಬಳಕೆಯ ದೃಷ್ಟಿಯಿಂದ ಈ ಕಥೆಗಾರರು ಅಗಾಧವಾದ ಕೆಲಸ ಮಾಡಿದ್ದಾರೆ. ಇವರ ಕೃತಿಗಳಲ್ಲಿ ತಂತ್ರ, ಅಬಿವ್ಯಕ್ತಿ ಅನಿವಾರ್ಯವಾಗಿವೆ. ಅನುಭವ ವನ್ನು ಅರಗಿಸಿಕೊಂಡು ಅದರಿಂದ ದೂರ ನಿಂತು ತಾದಾತ್ಮ್ಯವನ್ನು ಸಾದಿಸಿ ವಿಮರ್ಶಕ ಪ್ರಜ್ಞೆಯನ್ನು ಇಟ್ಟುಕೊಂಡು ಕೃತಿರಚನೆಗೆ ತೊಡಗಿದರು.
  • ವೀರ್ಯವತ್ತಾದ ಶೈಲಿ ಇವರದು. ನವೋದಯ ಹಾಗೂ ಪ್ರಗತಿ ಶೀಲ ಕಥೆಗಾರರಿಗಿದ್ದಂತೆ ವಿರೋದಿಸಲಿಕ್ಕೆ ನಿಶ್ಚಿತ ಮೌಲ್ಯಗಳಿರಲಿಲ್ಲ. ಜೀವನದಲ್ಲಿ ಮಾರ್ಗದರ್ಶಕವಾಗುವ ಸಾಮಾನ್ಯ ಮೌಲ್ಯಗಳು ಉಂಟೆ ಎಂಬುದೇ ಇವರ ಪ್ರಶ್ನೆ. ಆದ್ದರಿಂದ ಇಡಿಯ ಸಮಾಜದ ಸಮಸ್ಯೆಗಳಿಗಿಂತ ವೈಯಕ್ತಿಕ ಸಮಸ್ಯೆಗಳಿಗೇ ಇವರ ಕಥೆಗಳಲ್ಲಿ ಹೆಚ್ಚು ಒತ್ತು ಬಿತ್ತು. ಇಂಥ ವೈಯಕ್ತಿಕ ಆಲೋಚನೆಗಳು, ಅನುಭವದ ಉತ್ಕಟತೆಯ ಮೂಲಕ ಸಾರ್ವತ್ರಿಕವಾಗ ಬಲ್ಲುದೆಂಬುದು ಇವರ ಆಶಯವಾಗಿತ್ತು.
  • ಸಾಮಾಜಿಕ ಬದಲಾವಣೆಗಳನ್ನು ಇವರು ವ್ಯಕ್ತಿಯ ಸಂವೇದನೆಯ ಮೇಲಾಗುವ ಪರಿಣಾಮಗಳಲ್ಲಿ ಗ್ರಹಿಸಿದರು. ವ್ಯಕ್ತಿಯ ಮನಸ್ಸಿನ ಹೊಯ್ದಾಟ ತುಯ್ದಾಟಗಳ ರಹಸ್ಯಗಳನ್ನು ಸಂಕೋಚವಿಲ್ಲದೆ ಚಿತ್ರಿಸಿದರು. ಪ್ರಜ್ಞೆಯ ಬೆಲೆಯುಳ್ಳ ಸ್ಥಿತಿಗಳನ್ನು ಹಿಡಿದಿಡುವುದು ಇವರ ಉದ್ದೇಶ. ಇಂಥ ಸೂಕ್ಷ್ಮ ಹಾಗೂ ಸಂಕೀರ್ಣ ಉದ್ದೇಶಗಳಿಗೆ ತೆತ್ತುಕೊಂಡ ಇವರ ಬರೆವಣಿಗೆಯೂ ಒಮ್ಮೊಮ್ಮೆ ಜಟಿಲತೆಯನ್ನು ಪಡೆದುಕೊಂಡಿತು.
  • ಕುತೂಹಲ ಕೆರಳಿಸುವ ನಿರೂಪಣಾಕ್ರಮವನ್ನು ಬಿಟ್ಟು ಕೊಟ್ಟು ಘಟನೆಗಳ ಹಿಂದಿನ ಧ್ವನಿಯ ಮೇಲೆ, ಅನುಭವದ ಅರ್ಥವಿಶ್ಲೇಷಣೆಯ ಮೇಲೆ ಈ ಕಥೆಗಾರರು ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಈ ಪ್ರಯತ್ನದಲ್ಲಿ ಘಟನೆಗಳ ತಾರ್ಕಿಕ ಹೊಂದಾಣಿಕೆಯನ್ನು ಉದ್ದೇಶಪುರ್ವಕವಾಗಿ ನಿರಾಕರಿಸಿದ್ದರು. ಪ್ರಜ್ಞಾನ ಪ್ರವಾಹ ತಂತ್ರದ ಮೂಲಕ ಘಟನೆ ಹಾಗೂ ಪರಿಸರದ ವಿವರಗಳನ್ನೆಲ್ಲ, ಸಾಂಕೇತಿಕವಾಗಿ ಬಳಸಿಕೊಂಡು ಅನುಭವ, ಅರ್ಥದ ಪದರುಗಳನ್ನು ವಿಸ್ತರಿಸಿದರು.
  • ಹೀಗಾಗಿ ಸಣ್ಣಕಥೆ ಕವಿತೆಗೆ ತೀರಾ ಹತ್ತಿರವಾಯಿತು. ಭಾಷೆಯನ್ನು ಅತ್ಯಂತ ಕಾಳಜಿಯಿಂದ ಬಳಸತೊಡಗಿದರು. ಅನುಭವದ ದೃಷ್ಟಿಯಿಂದಲೂ ಸರಳಗೊಳಿಸದೆ ಅದರ ಪರ ವಿರೋಧಗಳನ್ನು ಕಥೆಯ ಹಾಸಿನಲ್ಲೇ ನಿರೀಕ್ಷಿಸಿ ವಿವೇಚಿಸಿದ್ದರು. ವಾಸ್ತವವಾದದ ನಿರ್ಬಂಧವನ್ನು ಮುರಿದು ಮಾನವಶಾಸ್ತ್ರ ಹಾಗೂ ಅಸ್ತಿತ್ವವಾದಗಳ ಪ್ರಭಾವವನ್ನು ಕಥೆಗಳಲ್ಲಿ ಮೂಡಿಸಿದರು.
  • ನವ್ಯ ಕಥೆಗಾರರು ತಮ್ಮ ಅನುಭವ ಕ್ಷೇತ್ರಗಳನ್ನು ಸಂಕುಚಿತಗೊಳಿಸುತ್ತಿದ್ದಾರೆಂದೂ ಕಾಮಕ್ಕೆ ಅವಾಸ್ತವ ಮಹತ್ತ್ವ ಕೊಟ್ಟು ಅಶ್ಲೀಲವಾಗಿ ಬರೆಯುತ್ತಾರೆಂದೂ ಸಾಮಾನ್ಯ ಓದುಗರಿಗೆ ಇವರ ಕಥೆಗಳು ಅರ್ಥವಾಗುವುದಿಲ್ಲವೆಂದೂ ಟೀಕೆಗಳು ಬಂದವು. ಆದರೂ ನವ್ಯ ಕಥೆಗಳ ಬರೆವಣಿಗೆ ವಿಪುಲವಾಗಿ ಸಾಗಿಬಂತು. ಕನ್ನಡ ಗದ್ಯ ಅನನ್ಯತೆಯನ್ನು ಪಡೆದ ಸಂದರ್ಭವಿದು. ಗದ್ಯವೂ ಕಾವ್ಯಮಯವಾಗಬಲ್ಲದೆಂಬ ಸಂಗತಿಯನ್ನು ನವ್ಯಕಥೆಗಾರರು ತೋರಿಸಿಕೊಟ್ಟರು.

ದಲಿತ ಸಂವೇದನೆಗಳ ಹೊಸ ದನಿ[ಬದಲಾಯಿಸಿ]

  • ದೇವನೂರು ಮಹಾದೇವ ಅವರ ದ್ಯಾವನೂರು ಕಥಾ ಸಂಕಲನದ ಪ್ರಕಟಣೆಯ ಅನಂತರ ದಲಿತ ಸಂವೇದನೆಗಳ ಹೊಸ ದನಿಯೊಂದು ಕನ್ನಡ ಸಣ್ಣಕಥಾವಾಹಿನಿಯನ್ನು ಸೇರಿಕೊಂಡಿತು. ಕನ್ನಡ ಸಾಹಿತ್ಯದಲ್ಲಿ ದಲಿತ ಪ್ರಜ್ಞೆಯ, ತುಳಿತಕ್ಕೊಳಗಾದವರ, ಅದುವರೆಗೂ ಅನಾವರಣವಾಗದಿದ್ದ ಬದುಕು, ಆ ಬದುಕಿನ ಸಂಕೀರ್ಣಗಳು ಕಥೆಯಲ್ಲಿ ಮೈಪಡೆಯ ತೊಡಗಿದವು.
  • ಹೊಸ ಸಂವೇದನೆಗಳು, ಹೊಸ ಅನುಭವಗಳು, ವಿಶಿಷ್ಟವಾದ ದೇಸಿಯ ಅಬಿವ್ಯಕ್ತಿ, ಆಡುಭಾಷೆಯ ಬಳಕೆಯಿಂದಾಗಿ ಸಣ್ಣಕಥೆ ಹೊಸ ಆಯಾಮವನ್ನು ಪಡೆದು ಕೊಂಡಿತು. ಕುಂ.ವೀರಭದ್ರಪ್ಪ, ಮೊಗಳ್ಳಿಗಣೇಶ್, ಅಮರೇಶ ನುಗಡೋಣಿ ಮೊದಲಾದವರು ಉತ್ತಮ ಕಥೆಗಳನ್ನು ನೀಡಿದರು. ದಲಿತಸಂವೇದನೆಯ ಇನ್ನೊಂದು ಮುಖವೇ ಆದ ಬಂಡಾಯ ಸಂವೇದನೆಯ ಕಥೆಗಳೂ ಅನಂತರದಲ್ಲಿ ಕನ್ನಡದಲ್ಲಿ ಪ್ರಕಟಗೊಂಡವು.
  • ಕನ್ನಡದ ಸಂದರ್ಭದಲ್ಲಿ ಮುಸ್ಲಿಂ ಸಂವೇದನೆಯ ಅನೇಕ ಕಥೆಗಾರರೂ ಕನ್ನಡ ಸಣ್ಣಕಥೆಯ ಕ್ಷಿತಿಜವನ್ನು ಹಿಗ್ಗಿಸುವಲ್ಲಿ ತಮ್ಮ ಪಾಲಿನ ಕಾಣಿಕೆಯನ್ನು ಸಲ್ಲಿಸಿದರು. ಹೀಗೆ ಕನ್ನಡ ಸಣ್ಣಕಥಾ ಪ್ರಪಂಚ ಹೊಸ ಸಂವೇದನೆಗಳನ್ನು ಆಯಾ ಕಾಲ ಸಂದರ್ಭದ ಯುಗಧರ್ಮವನ್ನು ಒಳಗೊಳ್ಳುತ್ತ ಶ್ರೀಮಂತವಾಗುತ್ತ ಸಾಗಿದೆ.

ಸೃಜನಶೀಲ ಕಥೆಗಾರರು[ಬದಲಾಯಿಸಿ]

ಸಣ್ಣಕಥೆಯ ಕ್ಷೇತ್ರದಲ್ಲಿ ಅನೇಕ ಕಥೆಗಾರರು ತಮ್ಮ ಸೃಜನಶೀಲತೆಯಿಂದ ಗಮನ ಸೆಳೆದಿದ್ದಾರೆ. ಅಂಥವರ ಹೆಸರುಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು: ಕಾಳೇಗೌಡ ನಾಗವಾರ, ರಾಜಶೇಖರ ನೀರಮಾನ್ವಿ, ಎಂ.ಎಸ್.ಕೆ.ಪ್ರಭು, ರಾಘವೇಂದ್ರ ಖಾಸನೀಸ, ಎಸ್.ದಿವಾಕರ, ಶಾಂತರಸ, ವೀರಭದ್ರ, ಕರೀಗೌಡ ಬೀಚನಹಳ್ಳಿ, ಕೆ.ಸತ್ಯನಾರಾಯಣ, ರಾಘವೇಂದ್ರ ಪಾಟೀಲ, ವಿವೇಕ ಶಾನಭಾಗ, ಕೆ.ವಿ.ತಿರುಮಲೇಶ್, ನಾ.ಡಿಸೋಜ, ಬಿ.ಶಾಮಸುಂದರ, ರಮೇಶ ಹುಲ್ಲುಕೆರೆ, ಕ್ಯಾತನಹಳ್ಳಿ ರಾಮಣ್ಣ, ಜವರನಹಳ್ಳಿ ಸಿದ್ದಪ್ಪ, ಕಾ.ತ.ಚಿಕ್ಕಣ್ಣ, ಬೊಳವಾರು ಮಹಮದ್ ಕುಂಞ, ಫಕೀರ್ ಮಹಮ್ಮದ್ ಕಟ್ಪಾಡಿ, ಅಬ್ದುಲ್ ರಶೀದ್, ಬಿ.ಎಂ.ಬಷೀರ್, ರಪಿsಕ್ಉಪ್ಪಿನಂಗಡಿ, ಕುಕ್ಕರಹಳ್ಳಿ ಬಸವರಾಜು,ಪ್ರಕಾಶ ಗ ಖಾಡೆ, ಕೇಶವರೆಡ್ಡಿ ಹಂದ್ರಾಳ,ಜಯಂತ್ ಕಾಯ್ಕಿಣಿ, ವಸುಧೇಂಧ್ರ, ಗುರುಪ್ರಸಾದ್ ಕಾಗಿನೆಲೆ, ಪ್ರಸನ್ನ ಸಂತೇಕಡೂರು ಮೊದಲಾದವರು.

ಕನ್ನಡ ಸಣ್ಣಕಥೆ ಸಾಹಿತ್ಯದ ಶ್ರೀಮಂತಿಕೆ[ಬದಲಾಯಿಸಿ]

  • ಪಂಜೆಯವರು, ಶ್ರೀನಿವಾಸರಿಂದ ಹಿಡಿದು ಇಂದಿನವರೆಗೆ ಸುಮಾರು ನೂರು ವರುಷಗಳ ಕಥೆಗಾರರ ಕೃತಿಗಳು ಕನ್ನಡ ಸಣ್ಣಕಥೆ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಹಾಗೆಂದ ಮಾತ್ರಕ್ಕೆ ಸಣ್ಣಕಥಾ ಪ್ರಪಂಚ ಪರಿಪುರ್ಣವಾಗಿದೆ ಎಂದಲ್ಲ. ಇತ್ತೀಚೆಗೆ ಇತರ ಭಾಷೆಗಳಿಂದ ಅನೇಕ ಕಥೆಗಳು ಅನುವಾದವಾಗಿ ಬರುತ್ತಿರುವುದು ಒಂದು ಸಂತೋಷದಾಯಕ ಸಂಗತಿ.
  • ನವಕರ್ನಾಟಕ ಪ್ರಕಾಶನ ನಿರಂಜನರ ಸಂಪಾದಕತ್ವದಲ್ಲಿ ವಿಶ್ವಕಥಾಕೋಶ ಮಾಲಿಕೆಯಲ್ಲಿ ಅನುವಾದಿತ ಕಥೆಗಳ 25 ಸಂಪುಟಗಳನ್ನು ಪ್ರಕಟಿಸಿರುವುದು ಭಾರತೀಯ ಭಾಷೆಗಳಲ್ಲಿಯೇ ಒಂದು ದಾಖಲೆ. ಹಾಗೆಯೇ ಕನ್ನಡದ ಅನೇಕ ಉತ್ತಮ ಕಥೆಗಳು ಭಾರತೀಯ ಹಾಗೂ ಹೊರ ದೇಶಗಳ ಭಾಷೆಗೆ ಅನುವಾದವಾಗಿರುವುದು ಗಮನಿಸಬೇಕಾದ ಅಂಶ. ಇದೆಲ್ಲವನ್ನೂ ಗಮನಿಸಿದಾಗ ಕನ್ನಡ ಸಣ್ಣಕಥೆಗಳಿಗೆ ಉಜ್ವಲ ಭವಿಷ್ಯವಿದೆ ಎನ್ನಬಹುದು.
  • ಕನ್ನಡದಲ್ಲಿ ಸಣ್ಣಕಥೆಗಳು ಕೇವಲ ಪತ್ರಿಕೆಗಳಲ್ಲಿ ಕಾಣುತ್ತಿದ್ದ ಕಾಲವೊಂದಿತ್ತು. ಈಗ ಅವು ಹಲವಾರು ರೂಪದ ಸಂಗ್ರಹದಲ್ಲಿ ಕಾಣುತ್ತಿವೆ. ಲೇಖಕರು ಹೊರತರುವ ಸಂಗ್ರಹಗಳಲ್ಲದೆ ಪ್ರಸಿದ್ಧ ಲೇಖಕರ ಪ್ರಾತಿನಿದಿsಕ ಕಥೆಗಳ ಸಂಗ್ರಹಗಳೇ ಹೊರ ಬರುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತು ಉತ್ತಮ ಕಥೆಗಳನ್ನು ಆಯ್ದು ಪ್ರಕಟಿಸಿದೆ. ನ್ಯಾಷನಲ್ ಬುಕ್ ಟ್ರಸ್ಟ್‌, ಕೇಂದ್ರ ಸಾಹಿತ್ಯ ಅಕಾಡೆಮಿ ಉತ್ತಮ ಸಣ್ಣಕಥೆಗಳ ಸಂಗ್ರಹಗಳನ್ನು ತಂದಿವೆ.
  • ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಶತಮಾನದ ಸಣ್ಣಕಥೆಗಳು ಎಂಬ ಸಂಕಲನ ಗ್ರಂಥವನ್ನು ಪ್ರಕಟಿಸಿದೆ (2001). ಸಾಲದ್ದಕ್ಕೆ ಒಬ್ಬನೇ ಲೇಖಕನ ಆಯ್ದ ಕಥೆಗಳ ಸಂಕಲನಗಳೂ ಬರುತ್ತಿವೆ. ವಿವಿಧ ಲೇಖಕರ ಕಥೆಗಳನ್ನೊಳಗೊಂಡ ಬೃಹತ್ ಕಥಾಸಂಕಲನಗಳೂ ಈಚೆಗೆ ಬೆಳಕು ಕಂಡಿವೆ. ಇದಲ್ಲದೆ ಕನ್ನಡ ನಾಡಿನ ವಿವಿಧ ಲೇಖಕಿಯರ ಕಥೆಗಳ ಸಂಕಲನಗಳೂ ಹೊರಬಂದಿವೆ.[೧]
  • ಪತ್ರಿಕೆಗಳ ಪ್ರೋತ್ಸಾಹವೂ ಮುಂದುವರಿದಿದೆ. ಇಂದು ಯಾವ ಪತ್ರಿಕೆಯೂ ಕಥೆಗಳನ್ನು ಪ್ರಕಟಿಸದೆ ಇಲ್ಲ. ಎಲ್ಲ ಪತ್ರಿಕೆಗಳಲ್ಲೂ ಸಣ್ಣ ಕಥಾ ವಿಭಾಗ ಇದ್ದೇ ಇದೆ. ಒಂದು ದೃಷ್ಟಿಯಿಂದ ಸಣ್ಣಕಥೆಗಳು ಇಷ್ಟೊಂದು ಸಂಖ್ಯೆಗಳಲ್ಲಿ ಹೊರಬರಲು ನಾಡಿನ ಪತ್ರಿಕೆಗಳು ಮಹತ್ತ್ವಪುರ್ಣಪಾತ್ರ ವಹಿಸಿವೆ.
  • ಕೆಲವು ಪತ್ರಿಕೆಗಳು ವಿಶೇಷ ಸಂದರ್ಭಗಳಲ್ಲಿ (ದೀಪಾವಳಿ ವಿಶೇಷಾಂಕ, ಯುಗಾದಿ ವಿಶೇಷಾಂಕ ಇತ್ಯಾದಿ) ಆಕರ್ಷಕ ಮೊತ್ತದ ಬಹುಮಾನಗಳನ್ನಿಟ್ಟು ಉತ್ತಮ ಸಣ್ಣಕಥೆಗಳನ್ನು ಆಹ್ವಾನಿಸುತ್ತಿವೆ. ಅಲ್ಲದೆ ಹಲವಾರು ಸಾಹಿತ್ಯಕ ಸಂಘಸಂಸ್ಥೆಗಳು ಆಗಾಗ್ಗೆ ಸ್ಪರ್ಧೆಯನ್ನು ಏರ್ಪಡಿಸಿ ಸಣ್ಣಕಥೆಗಳನ್ನು ಆಹ್ವಾನಿಸುತ್ತಿವೆ. ಈ ಎಲ್ಲ ಕಾರಣಗಳಿಂದ ಸಣ್ಣ ಕಥಾಪ್ರಪಂಚ ಸಮೃದ್ಧವಾಗುತ್ತ ಸಾಗಿದೆ.
  • ಇತ್ತೀಚೆಗೆ ಅಮೇರಿಕಾದ ನೆಲದಲ್ಲಿ ನಿಂತು ಕನ್ನಡ ಕಥಾ ಸಾಹಿತ್ಯವನ್ನ ಶ್ರೀಮಂತಗೊಳಿಸಿದವರಲ್ಲಿ ಗುರುಪ್ರಸಾದ್ ಕಾಗಿನೆಲೆ, ಮೈ. ಶ್ರೀ. ನಟರಾಜ್, ಪ್ರಕಾಶ್ ನಾಯಕ್ ಮತ್ತು ಪ್ರಸನ್ನ ಸಂತೇಕಡೂರು ಮುಂಚೂಣಿಯಲ್ಲಿದ್ದಾರೆ.[೨]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]