ವಿಷಯಕ್ಕೆ ಹೋಗು

ಶ್ರೀ ರಾಘವೇಂದ್ರ ಸ್ವಾಮಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ರಾಯರು (೧೫೯೫-೧೬೭೧),ಜನನ ೨೫-೦೨-೧೫೯೫ ಹುಟ್ಟಿದ ಊರು ಭುವನಗಿರಿ,ತಮಿಳುನಾಡು ಆಗಿನ ಕುಂಭಕೋಣ ಸಂಸ್ಥಾನ. ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸಂನ್ಯಾಸಿಗಳಲ್ಲಿ ಪ್ರಮುಖರು. ಅವರು ಮಧ್ವಾಚಾರ್ಯರ ಅನುಯಾಯಿಯಾಗಿ ಮಧ್ವ ಮತದ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ. ಶ್ರೀ ಪ್ರಹ್ಲಾದ ರಾಯರ ಮೂರನೇ ಅವತಾರವೇ ಶ್ರೀ ವ್ಯಾಸರಾಯರು ಎರಡನೆಯ ಅವತಾರವು ಭಾಹ್ಲಿಕರಾಜರು ನಾಲ್ಕನೇ ಅವತಾರ ಶ್ರೀ ಗುರು ರಾಘವೇಂದ್ರ ತೀರ್ಥರು. ಗುರು ರಾಘವೇಂದ್ರ ಸ್ವಾಮಿಗಳನ್ನು ಭಕ್ತರು ರಾಯರು, ಗುರುರಾಯರು, ಗುರುರಾಜರು ಎಂದು ಭಕ್ತಿಯಿಂದ ಕರೆಯುತ್ತಾರೆ.

ಇವರ ಮೂಲ ಬೃಂದಾವನವು (ಸಶರೀರ) ಈಗಿನ ಆಂಧ್ರ ಪ್ರದೇಶದ ತುಂಗಭದ್ರಾ ನದಿ ತಟದಲ್ಲಿರುವ ಮಂತ್ರಾಲಯದಲ್ಲಿದೆ. ಕರ್ನಾಟಕದ ರಾಯಚೂರಿನಿಂದ ಸುಮಾರು ೧ ಘಂಟೆ ಪ್ರಯಾಣ. ಇಲ್ಲಿಗೆ ನಿತ್ಯವು ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಪ್ರತಿ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೆ ಭವ್ಯ ಆರಾಧನೆ ನಡೆಯುತ್ತದೆ. ಅವರೆ ತಿಳಿಸಿದ ಹಾಗೇ 7೦೦ ವರ್ಷದ ವರೆಗೆ ಅವರ ಸನ್ನಿದಾನ ಇರುತ್ತದೆ.

ಪೂರ್ವಾಶ್ರಮ[ಬದಲಾಯಿಸಿ]

ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥರು. (ವೆಂಕಣ್ಣಭಟ್ಟ, ವೆಂಕಟಾಚಾರ್ಯ ಎಂದೂ ಕರೆಯುವರು) ಇವರ ತಂದೆಯ ಹೆಸರು ತಿಮ್ಮಣ್ಣ ಭಟ್ಟರು. ತಾಯಿಯ ಹೆಸರು ಗೋಪಿಕಾಂಬೆ. ತಿಮ್ಮಣ್ಣ ಭಟ್ಟರ ತಾತನವರ ಹೆಸರು ಕೃಷ್ಣ ಭಟ್ಟರು. ಕೃಷ್ಣ ಭಟ್ಟರು ವೀಣೆಯಲ್ಲಿ ಪಂಡಿತರು. ವಿಜಯನಗರದ ರಾಜರಾದ ಶ್ರೀಕೃಷ್ಣದೇವರಾಯರಿಗೆ ವೀಣೆ ಕಲಿಸಿದ ಗುರುಗಳು. ತಿಮ್ಮಣ್ಣ ಭಟ್ಟರಿಗೆ ವೆಂಕಟನಾಥರನ್ನು ಬಿಟ್ಟು ಇನ್ನೂ ಇಬ್ಬರು ಮಕ್ಕಳು. ಗುರುರಾಜ ಮತ್ತು ವೆಂಕಟಾಂಬೆ ಅವರ ಹೆಸರುಗಳು. ವೆಂಕಟನಾಥರು ೧೫೯೫ ರಲ್ಲಿ ಈಗಿನ ತಮಿಳುನಾಡಿನ ಭುವನಗಿರಿ ಎಂಬಲ್ಲಿ ಜನಿಸಿದರು.

ವೆಂಕಟನಾಥರು ಬಾಲ್ಯದಲ್ಲಿಯೇ ತುಂಬ ಬುದ್ಧಿವಂತರಾಗಿದ್ದರು. ಇವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ವಿಧಿವಶರಾಗಿದ್ದುದರಿಂದ ಸಂಸಾರದ ಜವಾಬ್ದಾರಿ ಅಣ್ಣ ಗುರುರಾಜರ ಮೇಲೆ ಇತ್ತು. ಇವರ ಪ್ರಾರಂಭಿಕ ವಿದ್ಯಾಭ್ಯಾಸ ಇವರ ಭಾವನವರಾದ, ವೇಂಕಟಾಂಬೆಯ ಪತಿ ಮಧುರೈ ಲಕ್ಷ್ಮಿ ನರಸಿಂಹಾಚಾರ್ಯರಲ್ಲಿ ಆಯಿತು. ಮಧುರೈನಿಂದ ಹಿಂತಿರುಗಿದ ಮೇಲೆ ಇವರ ವಿವಾಹವು ಸರಸ್ವತಿ ಎಂಬ ಕನ್ಯೆಯೊಡನೆ ಆಯಿತು. ವಿವಾಹಾನಂತರ ಇವರು ಕುಂಭಕೋಣಕ್ಕೆ ಬಂದು ಶ್ರೀಸುಧೀಂದ್ರ ತೀರ್ಥರಲ್ಲಿ ದ್ವೈತ ಸಿದ್ಧಾಂತದಲ್ಲಿ ಉನ್ನತವ್ಯಾಸಂಗ ಮಾಡತೊಡಗಿದರು.ಅಲ್ಲಿಯೇ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು. ಯಾರಿಂದಲೂ ಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತ್ತಿದ್ದರು.ಅವರ ಆರ್ಥಿಕ ಸ್ಥಿತಿ ಆಗ ಚೆನ್ನಾಗಿರಲಿಲ್ಲ. ಎಷ್ಟೋ ಸಲ ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಬೇಕಾದ ಪರಿಸ್ಥಿತಿಯಲ್ಲಿಯೂ ಸಹ ದೇವರಲ್ಲಿ ನಂಬಿಕೆ ಕಳೆದುಕೊಳ್ಳಲಿಲ್ಲ ಹಾಗೂ ದೇವರ ನಾಮಸ್ಮರಣೆ ಬಿಡಲಿಲ್ಲ. ಒಮ್ಮೆ ವೆಂಕಟನಾಥರಿಗೆ ಪತ್ನಿ ಮತ್ತು ಮಗನ ಸಮೇತ ಒಂದು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನವಿತ್ತು. ಆದರೆ ಆಹ್ವಾನವಿತ್ತವರು ಇವರಿಗೆ ಸರಿಯಾದ ಗೌರವ ನೀಡದೆ ಗಂಧ ತೇಯುವ ಕೆಲಸ ನೀಡಿದರು. ವೆಂಕಟನಾಥರು ಆದರೂ ಬೇಸರಿಸದೆ ಕೊಟ್ಟ ಗಂಧದ ಕೊರಡನ್ನು ತೇಯುವಾಗ ಭಗವಂತನ ಸಂಕಲ್ಪದಿಂದಾಗಿ ಅಗ್ನಿ ಸೂಕ್ತ ಪಠಿಸುತ್ತ ತೇಯ್ದರು. ತೇಯ್ದ ಗಂಧವನ್ನು ಲೇಪಿಸಿಗೊಂಡ ವಿಪ್ರರಿಗೆ ಮೈಯೆಲ್ಲಾ ವಿಪರೀತ ಉರಿ ಶುರುವಾಯಿತು. ಹೀಗಾಗಲು ಕಾರಣ ಹುಡುಕಿ ಹೊರಟ ಮುಖ್ಯಸ್ಥರು ವೆಂಕಟನಾಥನನ್ನು ಕಾರಣ ಕೇಳಿದರು. ವೆಂಕಟನಾಥರು ತಾವು ಅಗ್ನಿ ಸೂಕ್ತ ಉಚ್ಛರಿಸುತ್ತ ಗಂಧ ತೇಯ್ದಿರುವುದರಿಂದ ಹೀಗಾಗಿರಬಹುದೆಂದು ಹೇಳಿದರು. ನಂತರ ಆ ಗೃಹಸ್ಥರು ತಮ್ಮಿಂದಾದ ಅಪರಾಧವನ್ನು ಕ್ಷಮಿಸಿರೆಂದು ಬೇಡಿಕೊಂಡಾಗ ಸ್ವಲ್ಪವೂ ಕೋಪ/ಬೇಸರ ಮಾಡಿಕೊಳ್ಳದೇ ಪುನಃ ಶ್ರೀಹರಿಯನ್ನು ಪ್ರಾರ್ಥಿಸಿಕೊಂಡು ವರುಣ ಸೂಕ್ತವನ್ನು ಪಠಿಸಿದಾಗ ಸರ್ವರ ಉರಿಯು ಶಮನವಾಯಿತು. ಇದು ವೆಂಕಟನಾಥರ ಮಂತ್ರಸಿದ್ಧಿ ಹಾಗೂ ಸಹಾನುಭೂತಿಯ ಬಗ್ಗೆ ಒಂದು ಉದಾಹರಣೆ.

ಸಂನ್ಯಾಸಾಶ್ರಮ[ಬದಲಾಯಿಸಿ]

ಶ್ರೀ ಸುಧೀಂದ್ರ ತೀರ್ಥರು ವೇದಾಂತ ಸಾಮ್ರಾಜ್ಯಕ್ಕೆ ತಕ್ಕಂತಹ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಅವರ ಕನಸಿನಲ್ಲಿ ಶ್ರೀಮೂಲರಾಮದೇವರೇ ಬಂದು ವೆಂಕಟನಾಥರನ್ನು ಶಿಷ್ಯರಾಗಿ ಸ್ವೀಕರಿಸುವಂತೆ ಸೂಚಿಸಿದರು. ಈ ವಿಷಯವನ್ನು ಶ್ರೀ ಸುಧೀಂದ್ರ ತೀರ್ಥರು ವೆಂಕಟನಾಥರಿಗೆ ತಿಳಿಸಿದಾಗ, ವೆಂಕಟನಾಥರು, ಪತ್ನಿ ಮತ್ತು ಮಗನನ್ನು ನೆನಸಿ ನಕಾರಾತ್ಮಕ ಉತ್ತರ ಕೊಟ್ಟರು. ಅದರೆ ಮನೆಯಲ್ಲಿ, ಸಾಕ್ಷಾತ್ ಸರಸ್ವತೀ ದೇವಿಯೇ ಸಾಕ್ಷಾತ್ತಾಗಿ ಬಂದು ಸಂನ್ಯಾಸಾಶ್ರಮವನ್ನು ಸ್ವೀಕರಿಸುವಂತೆ ಆಜ್ಞೆಯಿತ್ತಳು. ಇದರಿಂದ ಮನಸ್ಸನ್ನು ಬದಲಿಸಿದ ವೆಂಕಟನಾಥರು ಶ್ರೀಸುಧೀಂದ್ರರಿಗೆ ಬಿನ್ನವಿಸಿದಾಗ, ಅದರಂತೆಯೇ ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ರಘುನಾಥಭೂಪಾಲನ ಹಾಗೂ ಆಗಿನ ಶ್ರೇಷ್ಠರಾದ ಅನೇಕ ಜನ ವಿದ್ವಾಂಸರು, ಆಚಾರ್ಯರ ಸಮ್ಮುಖದಲ್ಲಿ ಶ್ರೀ ಸುಧೀಂದ್ರ ತೀರ್ಥರು ಸಂನ್ಯಾಸಾಶ್ರಮವನ್ನು ನೀಡಿ, ಶ್ರೀ ರಾಘವೇಂದ್ರ ತೀರ್ಥರೆಂಬ ಅದ್ಭುತವಾದ ಹೆಸರಿನಿಂದ ನಾಮಕರಣವನ್ನು ಮಾಡಿ, ಪ್ರಣವಮಂತ್ರೋಪದೇಶಪೂರ್ವಕವಾಗಿ ವೇದಾಂತಸಾಮ್ರಾಜ್ಯದಲ್ಲಿ ಪಟ್ಟಾಭಿಷೇಕವನ್ನು ನೆರವೇರಿಸಿದರು.

ಇತ್ತ ತಮ್ಮ ಪತಿಯ ಸಂನ್ಯಾಸಾಶ್ರಮದ ಸುದ್ದಿ ತಿಳಿಯುತ್ತಲೇ ಮನನೊಂದ ಪತ್ನಿ ಸರಸ್ವತಿಬಾಯಿಯು ಭಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಪಿಶಾಚಿ ಜನ್ಮ ತಾಳಿ ಶ್ರೀರಾಘವೇಂದ್ರ ಸ್ವಾಮಿಗಳಿದ್ದಲ್ಲಿಗೆ ಬಂದರು. ಆಕೆಯ ದುರವಸ್ಥೆಯನ್ನು ನೋಡಿ ಶ್ರೀರಾಘವೇಂದ್ರತೀರ್ಥರು ಕರುಣೆಯಿಂದ ಆಕೆಯ ಮೇಲೆ ತೀರ್ಥವನ್ನು ಸಂಪ್ರೋಕ್ಷಿಸಿ ಆಕೆಗೆ ಪಿಶಾಚಿ ಜನ್ಮದಿಂದ ಮೋಕ್ಷ ದೊರೆಯುವಂತೆ ಮಾಡಿಕೊಟ್ಟರು.

ಶ್ರೀ ರಾಘವೇಂದ್ರ ಸ್ವಾಮಿಗಳ ಪವಾಡಗಳು[ಬದಲಾಯಿಸಿ]

ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಅವರಲ್ಲೊಬ್ಬ ಬಡ ವಿದ್ದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು. ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನಾದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು. ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೆ ವಿದ್ದ್ಯಾರ್ಥಿಯು ಮಹಾ ಪ್ರಸಾದ ವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು. ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲೀಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲೀಕನ ಹೆಂಡತಿ ಗರ್ಭಿಣಿಯಾಗಿದ್ದಳು. ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು. ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು. ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು. ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು.

ಶ್ರೀ ರಾಘವೇಂದ್ರ ಸ್ವಾಮಿಗಳ ಕೃತಿರತ್ನಗಳು[ಬದಲಾಯಿಸಿ]

ಶ್ರುತಿ ಪ್ರಸ್ಥಾನ

೧. ಋಗ್ವೇದವಿವೃತಿಃ * ೨. ಯಜುರ್ವೇದವಿವೃತಿಃ * ೩. ಸಾಮವೇದವಿವೃತಿಃ * ೪. ಮಂತ್ರಾರ್ಥಮಂಜರೀ ೫. ಪುರುಷಸೂಕ್ತಮಂತ್ರಾರ್ಥಃ ೬. ಶ್ರೀಸೂಕ್ತಮಂತ್ರಾರ್ಥಃ * ೭. ಮನ್ಯುಸೂಕ್ತಮಂತ್ರಾರ್ಥಃ * ೮. ಅಂಭೃಣೀಸೂಕ್ತಮಂತ್ರಾರ್ಥಃ * ೯. ಬಳಿತ್ಥಾಸೂಕ್ತಮಂತ್ರಾರ್ಥಃ * ೧೦. ಹಿರಣ್ಯಗರ್ಭಸೂಕ್ತ ವ್ಯಾಖ್ಯಾನಮ್

ಉಪನಿಷತ್ ಪ್ರಸ್ಥಾನ

೧೧. ಈಶಾವಾಸ್ಯೋಪನಿಷತ್ ಖಂಡಾರ್ಥಃ ೧೨. ತಲವಕಾರೋಪನಿಷತ್ ಖಂಡಾರ್ಥಃ ೧೩. ಕಾಠಕೋಪನಿಷತ್ ಖಂಡಾರ್ಥಃ ೧೪. ಷಟ್ಪ್ರಶ್ನೋಪನಿಷತ್ ಖಂಡಾರ್ಥಃ ೧೫. ತೈತ್ತಿರಿಯೋಪನಿಷತ್ ಖಂಡಾರ್ಥಃ ೧೬. ಆಥರ್ವಣೋಪನಿಷತ್ ಖಂಡಾರ್ಥಃ ೧೭. ಮಾಂಡೋಕ್ಯೋಪನಿಷತ್ ಖಂಡಾರ್ಥಃ ೧೮. ಶ್ರೀಮನ್ ಐತರೇಯ ಉಪನಿಷತ್ ಮಂತ್ರಾರ್ಥಃ * ೧೯. ಛಾಂದೋಗ್ಯೋಪನಿಷತ್ ಖಂಡಾರ್ಥಃ ೨೦. ಬೃಹದಾರಣ್ಯಕೋಪನಿಷತ್ ಖಂಡಾರ್ಥಃ

ಸೂತ್ರಪ್ರಸ್ಥಾನ

೨೧. ಶ್ರೀಮನ್ನ್ಯಾಯಸುಧಾಪರಿಮಳಃ ೨೨. ಅಣುಭಾಷ್ಯ ವಾಖ್ಯಾನ ತತ್ವಮಂಜರೀ ೨೩. ತತ್ತ್ವಪ್ರಕಾಶಿಕಾ ಭಾವದೀಪಃ ೨೪. ತಾತ್ಪರ್ಯಚಂದ್ರಿಕಾಪ್ರಕಾಶಃ ೨೫. ತಂತ್ರದೀಪಿಕಾ ೨೬. ನ್ಯಾಯಮುಕ್ತಾವಳಿಃ

ಮೀಮಾಂಸಾಶಾಸ್ತ್ರ ಗ್ರಂಥ ೨೭. ಭಾಟ್ಟಸಂಗ್ರಹಃ

ಪುರಾಣಪ್ರಸ್ಥಾನ ೨೮. ಶ್ರೀಕೃಷ್ಣಚಾರಿತ್ರ್ಯ ಮಂಜರೀ

ಗೀತಾ ಪ್ರಸ್ಥಾನ

೨೯. ಶ್ರೀಮದ್ಭಗವದ್ಗೀತಾಭಾಷ್ಯ ಪ್ರಮೇಯದೀಪಿಕಾ ಭಾವದೀಪಃ ೩೦. ಗೀತಾತಾತ್ಪರ್ಯನ್ಯಾಯದೀಪಿಕಾ ಭಾವದೀಪಃ ೩೧. ಗೀತಾರ್ಥಸಂಗ್ರಹಃ (ಗೀತಾವಿವೃತಿಃ)

ಪ್ರಕರಣ ಗ್ರಂಥಗಳು

೩೨. ಮಾಯಾವಾದ ಖಂಡನ ಟೀಕಾಟಿಪ್ಪಣೀ * ೩೩. ಮಿಥ್ಯಾತ್ವಾನುಮಾನ ಖಂಡನ ಟೀಕಾಟಿಪ್ಪಣೀ * ೩೪. ಉಪಾಧಿಖಂಡನ ಟೀಕಾ ಟಿಪ್ಪಣೀ * ೩೫. ಶ್ರೀವಿಷ್ಣುತತ್ತ್ವವಿನಿರ್ಣಯ ಟೀಕಾ ಭಾವದೀಪಃ ೩೬. ತತ್ವೋದ್ಯೋತ ಟೀಕಾಟಿಪ್ಪಣೀ * ೩೭. ತತ್ತ್ವಸಂಖ್ಯಾನಂ ಟೀಕಾ ಭಾವದೀಪಃ * ೩೮. ತತ್ತ್ವವಿವೇಕ ಟೀಕಾ ಭಾವದೀಪಃ ೩೯. ಕಥಾಲಕ್ಷಣ ಟೀಕಾ ಭಾವದೀಪಃ ೪೦. ಕರ್ಮನಿರ್ಣಯ ಟೀಕಾ ಭಾವದೀಪಃ ೪೧. ಪ್ರಮಾಣಲಕ್ಷಣ ಟೀಕಾ ಭಾವದೀಪಃ

ಇತರ ಗ್ರಂಥಗಳ ಟಿಪ್ಪಣಿಗಳು

೪೨. ಪ್ರಮಾಣ ಪದ್ಧತಿ ಟಿಪ್ಪಣಿ ಭಾವದೀಪಃ ೪೩. ತರ್ಕತಾಂಡವ ಟೀಕಾ ನ್ಯಾಯದೀಪಃ ೪೪. ವಾದಾವಳೀ ಟಿಪ್ಪಣೀ ೪೫. ಪ್ರಮೇಯ ಸಂಗ್ರಹಃ

ಇತಿಹಾಸ ಪ್ರಸ್ಥಾನ ೪೬. ಶ್ರೀರಾಮಚಾರಿತ್ರ್ಯ ಮಂಜರೀ ೪೭. ಶ್ರೀಮನ್ಮಹಾಭಾರತತಾತ್ಪರ್ಯ ನಿರ್ಣಯ ಭಾವಸಂಗ್ರಹಃ ೪೮. ಪ್ರಮೇಯನವಮಾಲಿಕೆಯ ಗೂಢಭಾವಪ್ರಕಾಶಿಕಾ (ಅಣುಮಧ್ವವಿಜಯಃ)

ಸದಾಚಾರ ಪ್ರಸ್ಥಾನ

೪೯. ಪ್ರಾತಃ ಸಂಕಲ್ಪಗದ್ಯಮ್ ೫೦. ಸರ್ವಸಮರ್ಪಣಗದ್ಯಮ್ ೫೧. ಭಗವದ್ಧ್ಯಾನಮ್ ೫೨. ತಿಥಿನಿರ್ಣಯಃ ೫೩. ತಂತ್ರಸಾರ ಮಂತ್ರೋದ್ಧಾರಃ

ಸ್ತೋತ್ರ ಪ್ರಸ್ಥಾನ

೫೪. ರಾಜಗೋಪಾಲಸ್ತುತಿಃ ೫೫. ನದೀತಾರತಮ್ಯ ಸ್ತೋತ್ರಮ್ ೫೬. ದಶಾವತಾರಸ್ತುತಿಃ


ಸುಳಾದಿ ಮತ್ತು ಗೀತೆಗಳು

೫೭. ಇಂದು ಎನಗೆ ಗೋವಿಂದ ೫೮. ಮರುತ ನಿನ್ನಯ ಮಹಿಮೆ - ಸುಳಾದಿ

  • ಈ ಗುರುತು ಇರುವ ಕೃತಿಗಳು ಸಧ್ಯಕ್ಕೆ ಉಪಲಬ್ಧವಿಲ್ಲ


ಮೇಲ್ಕಂಡ ಕೃತಿಗಳ ಅಧ್ಯಯನಕ್ಕೆ ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠದಲ್ಲಿ ಅವಕಾಶವಿದೆ.


ಸಂಪರ್ಕ ವಿಳಾಸ ಇಂತಿದೆ:

ಶ್ರೀಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ [/br] ಶ್ರೀರಾಘವೇಂದ್ರಸ್ವಾಮಿಗಳ ಮಠ [/br] ಮಂತ್ರಾಲಯ-೫೧೮ ೩೪೫ [/br] ಕರ್ನೂಲು ಜಿಲ್ಲೆ, ಆಂಧ್ರಪ್ರದೇಶ [/br] ದೂರವಾಣಿ: ೦೮೫೧೨-೨೭೯೪೯೬ [/br] Email: sgsvp@srsmutt.org