ಶ್ರೀ ಯೋಗಿನಾರೇಯಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಲಜ್ಞಾನ-ಭವಿಷ್ಯವಾಣಿ[ಬದಲಾಯಿಸಿ]

ಯೋಗಿನಾರೇಯಣ ಯತೀಂದ್ರರು ಯೋಗ ಸಾಧನೆಯಿಂದ ತಪಸ್ಸಿದ್ಧಿಯನ್ನು ಪಡೆದ ಸಿದ್ಧಿಪುರುಷರು. ಕೈವಾರ ಕ್ಷೇತ್ರಕ್ಕೆ ಕೃತಯುಗದಿಂದಲೂ ಪುರಾಣೇತಿಹಾಸಿಕ ಸಂಗತಿಗಳು ಹಾಗೂ ದೃಷ್ಟಾಂತಗಳಿವೆ. ಕೈವಾರ ಯೋಗಿನಾರೇಯಣರ ಜನ್ಮಸ್ಥಳವಾಗಿದ್ದು, ಅವರು ಕೈವಾರ ತಾತಯ್ಶ ಶ್ರೀ ಯೋಗಿನಾರೇಯಣರೆಂದೇ ವಿಶ್ವಿವಿಖ್ಯಾತರಾದವರು. ಅವರು ಬರೆದಿರುವ ಕಾಲಜ್ಞಾನ ಇಡೀ ವಿಶ್ವದ ಕುತೂಹಲಕ್ಕೆ ಕಾರಣವಾಗಿದ್ದು, ಅದರಲ್ಲಿ ಹೇಳಿರುವ ಘಟನಾವಳಿಗಳು ಕಾಲಕ್ರಮೇಣ ಪ್ರಸ್ತುತವೆನಿಸುತ್ತಿರುವುದು ಅಚ್ಚರಿಯ ಸಂಗತಿಗಳೇ ಆಗಿವೆ. ಸಮಾಜದ ಆಗುಹೋಗುಗಳನ್ನು, ಮಾನವೀಯ ಚಿಂತನೆಯಲ್ಲಿ, ಜನಮಾನಸದ ಹೃದಯಗಳೊಡನೆ ಸ್ಪಂದಿಸುತ್ತ ಅವರು ನುಡಿದಿರುವ ಕಾಲಜ್ಞಾನವು, ಭವಿಷ್ಯದಲ್ಲಿ ಸಮಕಾಲೀನ ಜೀವನ ಮೌಲ್ಯಗಳ ಬಗ್ಗೆ ಜನರು ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ.

  1. ದ್ವೇಷ ಅಸೂಯೆ, ನೀಚಸ್ವಾರ್ಥ, ಕ್ರಾರ್ಯ ಹಿಂಸೆ, ಶೋಷಣೆ ಅಕ್ರಮ, ಅವ್ಯವಹಾರಗಳು ಪ್ರಕೃತಿ ಪರಿಸರ ನಾಶ, ಅನಾಚಾರ, ಅತ್ಯಾಚಾರ ಹಾಗೂ ಭೂಮಿಯೇ ಸಿಡಿದೊಡೆಯುವ ವಿಪತ್ತಿನ ಭಯೋತ್ಪಾದನೆಗಳು, ಹೀಗೆ ಒಂದೇ ಎರಡೇ ಆಧುನಿಕತೆಯ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಮಾನವನಿಗೆ ಇಡೀ ಮಾನವ ಲೋಕಕ್ಕೆ ಮುಂದೆ ಸಂಭವಿಸಬಹುದಾದ ವಿಪತ್ತಿನ ಭೀತಿಯೇ ಆವರಿಸಿ ಜನತೆ ತತ್ತರಿಸುತ್ತಿರುವಾಗ, ಸಹೃದಯತೆ, ಶಾಂತಿ ಸಹಬಾಳ್ವೆಗೆ ಎಲ್ಲರೂ ಶ್ರಮಿಸಬೇಕೆಂದು ಎಚ್ಚರಿಸುತ್ತದೆ; ತಾತಯ್ಯನವರ ಕಾಲಜ್ಞಾನ-ಭವಿಷ್ಯವಾಣಿ- ಮೂಲ ಕೃತಿಗೆ “ಕೈಪು” ನರಸಿಂಹ ಶಾಸ್ತ್ರಿಗಳು ವ್ಯಾಖ್ಯಾನಮಾಡಿದ್ದಾರೆ. ಅದರ ಸಾರಾಂಶ ಕೆಳಗೆ ಕೊಡಲಾಗಿದೆ.-ದೈವವಾಣಿಯಾಗಿ ಪ್ರೇರಣೆಯಿಂದ ಮೂಡಿಬಂದಿರುವ ಕಾಲಜ್ಞಾನ-ಭವಿಷ್ಯವಾಣಿಯು ಶ್ರೀ ಯೋಗಿನಾರೇಯಣ ಯತೀಂದ್ರರು ಭೀಮಲಿಂಗೇಶ್ವರನಿಗೆ ಸಲ್ಲಿಸಿರುವ ಪ್ರಾರ್ಥನೆ-
  2. ಮುಂಬರುವ ದೀರ್ಘ ಭವಿಷ್ಯತ್ ಕಾಲದಲ್ಲಿ ವೇಶ್ಯಾವೃತ್ತಿ ಪ್ರಬಲಿಸುವುದು. ಅವರ ದಲ್ಲಾಳಿಗಳು ಶ್ರೀಮಂತರಾಗುವರು. ವೇಶ್ಯಾಪುತ್ರರು ದೇಶವನ್ನು ಆಳುವರು. ಸ್ತ್ರೀಯರು ತಮ್ಮ ವೇಷಭೂಷಣ ಹಾವಭಾವಗಳಿಂದ ಪುರುಷರನ್ನು ನಿಯಂತ್ರಿಸುವರು. ಡಂಭಾಚಾರ ಹೆಚ್ಚುವುದು, ಜನರು ದೈವವನ್ನು ಮರೆಯುವರು.
  3. ಅನರ್ಹರು ಅಧಿಕಾರವನ್ನು ಪರೋಕ್ಷವಾಗಿ ಸಾಧಿಸುವರು. ಆಳುವ ಪ್ರಭುಗಳು ತಮ್ಮ ಆಳುಗಳ ಮಾತಿನಂತೆ ವರ್ತಿಸುವರು.
  4. ಸರ್ಕಾರವು ಅನಿರೀಕ್ಷಿತ ಹೊಸ ತೆರಿಗೆಗಳನ್ನು ವಿಧಿಸುವುದು. ಕುವೃತ್ತಿಯ ಕುಖ್ಯಾತ ಸ್ತ್ರೀಯರೂ ಗುತ್ತಿಗೆಗೆ ಒಳಪಡುವರು. ಭಿಕ್ಷುಕರು ಮತ್ತು ಹರಿದಾಸರೂ ಗುತ್ತಗೆಗಳ ವ್ಯಪ್ತಿಗೆ ಬರುವರು. ಗುತ್ತಿಗೆಗಳ ಭರಾಟೆ ಹೆಚ್ಚುವುದು.
  5. ವೈಷ್ಣವ ಶೈವ ಮತಗಳ ಆಚಾರ ವಿಚಾರಗಳು ಬಹಿರಂಗವಾಗಿ ಮಹಮ್ಮದೀಯರ ಆಚಾರ ವಿಚಾರಗಳು ಗೌಪ್ಯವಾಗುವುವು. ಪತಿವ್ರತೆಯರ ಸಂಖ್ಯೆ ಇಳಿಮುಖವಾಗುವುದು. ಯೋಗಿಯ ಸಿದ್ಧಿಗಳು ಗುಟ್ಟನ್ನು ಅರಿಯುವವರೇ ಇಲ್ಲವಾಗುವರು.
  6. ವಿವಾಹ ಬಂಧದ ಕಟ್ಟಳೆಗಳನ್ನು ದಿಕ್ಕರಿಸಿ ವರ್ತಿಸುವ ಅಪ್ರಾಮಾಣಿಕ ಸ್ತ್ರೀಯರು ಹೆಚ್ಚುವರು. ಗೃಹಲಕ್ಷ್ಮಿಯ ಹಾಗೆ ಇರುವ ಸಾಧ್ವಿಶಿರೋಮಣಿಯರು ಲಕ್ಷಕ್ಕೆ ಒಬ್ಬರಾಗುವರು. ಸಮಾಜದಲ್ಲಿ ಜಾರತ್ವವು ಪ್ರಾಬಲ್ಯವಾಗುವುದು.
  7. ಪರಮಾತ್ಮನು ಸಂಚಿಕೆ-ಗಂಟುಗಳನ್ನು ಎತ್ತಿಕೊಟ್ಟು ಕಾಲಜ್ಞಾನ ಬರೆಸಿದನು. ಬರೆದ ದಿನದಿಂದ ನೂರುವರ್ಷಗಳು ಕೊನೆ ಮುಟ್ಟುತ್ತಿರುವ ದಿನಗಳಲ್ಲಿ ಇದರಲ್ಲಿನ ಭವಿಷ್ಯಕಥನಗಳು ನಿಜವಾಗುವುವು. ಇದಕ್ಕೆ ಪೂರ್ವಸೂಚನೆಯಾಗಿ ವಿಶ್ವದಲ್ಲಿ ಅಲ್ಪವೃಷ್ಟಿ, ಕ್ಷಾಮ, ಬರಗಾಲವು ಕಾಣಿಸಿಕೊಳ್ಳುವುವು. ಜನರು ವಲಸೆ ಹೋಗುತ್ತ ಬಂದಂತೆ ಗಾವುದವೊಂದಕ್ಕೆ ಹಳ್ಳಿ ಉಳಿದುಕೊಳ್ಳುವುದು.
  8. ಕಾಲಜ್ಞಾನವಾಣಿಗಳು ಫಲಿಸುವುದನ್ನು ಸಮರ್ಥಿಸುವ ಎರಡನೆಯ ಸಾಕ್ಷ್ಯವಾಗಿ ಆಕಾಶಮಂಡಲದಲ್ಲಿ ಆಶ್ಚರ್ಯಕರವಾದ ಎಳೆಗೂಸಿನೋಪಾದಿ ಧೂಮಕೇತು ಕಾಣಿಸಿಕೊಳ್ಳುವುದು. ಚಂದ್ರನ ಉತ್ತರ ಪಾರ್ಶ್ವದಲ್ಲಿ ಕಾಣಿಸುವ ಈ ಚುಕ್ಕಿಯನ್ನು ಕಂಡು ಕಾಲಜ್ಞಾನವಾಣಿಗಳು ನಿಜವಾಗಲಿರುವುದನ್ನು ಖಚಿತ ಪಡಿಸಿಕೊಳ್ಳಬಹುದು.
  9. ಮುಂಬರುವ ಉತ್ಪಾತದ ಅವಲಕ್ಷಣಗಳನ್ನು ಸೂಚಿಸುವುದಕ್ಕಾಗಿ ಗೂಬೆಗಳು ಗುಂಪುಗಳಾಗಿ ಊರೂರುಗಳಲ್ಲಿ ನಡುರಾತ್ರಿ ವಿಕಾರ ಧ್ವನಿಯಲ್ಲಿ ಕೂಗುತ್ತ ಸಂಚರಿಸುವುವು. ದನಕರುಗಳು ನೆಲಕ್ಕುರುಳುವುವು. ಕುಟುಂಬಗಳಲ್ಲಿ ಅಣ್ಣ-ತಮ್ಮಂದಿರು, ತಂದೆತಾಯಿಗಳು ಮತ್ತು ಮಕ್ಕಳು ದ್ವೇಷಿಗಳಾಗಿ ಅನುಕ್ಷಣವೂ ಕಲಹ ನಿರತರಾಗುವರು. ಅವರುಗಳು ತಿಂದ ಅನ್ನವು ಕೂಡಲೇ ಕರಗಿಹೋಗಿ ಧಗೆ ಏರ್ಪಡುವುದು.
  10. ಇದ್ದಕ್ಕಿದ್ದಂತೆ ಒಂದು ದಿನ ಹನ್ನೆರಡು ಸಿಡಿಲುಗಳು ಬಡಿದಂತೇ ಸ್ಫೋಟಗೊಳ್ಳುವ ಧ್ವನಿ ಕೇಳುವುದು. ಭೂಪರ್ವತಾದಿಗಳು ಕಂಪಿಸುವುವು. ಪ್ರಾಣ ಭಯದಿಂದ ಜನರು ದಿಕ್ಕಾಪಾಲಾಗಿ ಮಕ್ಕಳನ್ನೆತ್ತಿಕೊಂಡು ಬೀದಿಬೀದಿಗಳಲ್ಲಿ ಓಡುವರು. ಶತ್ರು ರಾಜರು ದಾಳಿಗೆ ಹೆದರಿ ಜನ ತಮ್ಮ ಧನಕನಕಾದಿಗಳನ್ನು ಮುಚ್ಚಿಡಲು ತೊಡಗುವರು.
  11. ಉತ್ಪಾತದ ಪ್ರಭಾವ ಮೂರುಗಂಟೆಗಳ ಒಂದು ಜಾವದಷ್ಟು ಮುಂದುವರೆಯುವುದು. ಈ ಅವಧಿಯಲ್ಲಿ ಅರಣ್ಯದ ಕ್ರೂರಮೃಗಗಳಾದಿಯಾಗಿ ಪ್ರಾಣಿಗಳೆಲ್ಲ ಭಯಭೀತಿಯಿಂದ ನಿಂತಲ್ಲೇ ನಿಂತುಬಿಡುವುವು. ನದಿ ಸಾಗರಗಳಲಿ ನೀರು ಎಂಟನೇ ಒಂದು ಭಾಗ ಇಂಗಿಹೋಗುವುದು. ಸೈನ್ಯಗಳಲ್ಲಿ ಸೈನಿಕರು ಆನೆಕುದುರೆಗಳು ದಿಕ್ಕೆಟ್ಟು ಓಡುವುವು.
  12. ಆನಂತರದ ಬಹಳ ವರ್ಷಗಳೇ ಕಳೆಯುತ್ತಿದ್ದಂತೆ, ಲೋಕದಲ್ಲಿ ಸುಭಿಕ್ಷಕಾಲ ಬರುವುದು. ಧನಪತಿ ದೇಶದಲ್ಲಿನ ಒಬ್ಬ ಮಹಾಪುರುಷನು ವಿಶ್ವಪ್ರಭುವಾಗಿ ಆಳುವನು. ಆ ಧರ್ಮಾತ್ಮನ ಕಾಲದಲ್ಲಿ ಮಳೆ-ಬೆಳೆಗಳು ಸಮೃದ್ಧಿಯಾಗುತ್ತ ಪ್ರಜೆಗಳಿಗೆ ಕ್ಷೇಮವಾಗುವುದು.
  13. ಈತನ ಆಳ್ವಿಕೆಯಲ್ಲಿ ಬದಲಾಗುವುವು. ಶುದ್ದ ಬಂಗಾರದ ಬೆಳ್ಳಿ ನಾಣ್ಯಗಳು ಬರುವುವು ವಿಶ್ವದ ಎಲ್ಲೆಡೆ ಅಡ್ಡಿ ಇಲ್ಲದೆ ಚಲಾವಣೆ ಅಗುವುವು.
  14. ವಾಣಿಜ್ಯ ವ್ಯಾಪಾರಗಳಲ್ಲಿ ಧರ್ಮ ಸಮ್ಮತ ಬಡ್ಡಿ ಏರ್ಪ ಡುವುದು. ಧಾನ್ಯ ಬೆಲೆಯು ಅಗ್ಗವಾಗುವುದು ಬಿಕ್ಷುಕ ಮನೆಯಲ್ಲೂ ಪದಾರ್ಥ ಸಾಮಗ್ರಿಗಳು ಅಕ್ಷಯವಾಗಿ ಇರುವುವು. ಜೀವನೋಪಾಯಕ್ಕೆ ಪೌರೋತ್ಯವನ್ನು ಮಾಡುವುದಿಲ್ಲ ಜನರೆಲ್ಲ ಧರ್ಮನಿರತರಾಗುವರು ಕೋರ್ಟು ಕಚೇರಿಗೆ ಹೋಗುವ ಪ್ರಕರಣಗಳು ವಿವಾದಗಳು ಇರುವುದಿಲ್ಲ ಕಳ್ಳ ಕಾಕರ ಬಯ ಇರುವುದಿಲ್ಲ ಲಂಚ ಕೊರತನ ಮಾಯವಾಗುವುದು ದಿನ ನಿತ್ಯದ ಸ್ಥಿತಿಗತಿ ಗಳನ್ನು ಪ್ರಭುವಿಗೆ ವರದಿ ಮಾಡಲು ಆಪ್ತ ಮಂತ್ರಿಗಳು ಇರುತ್ತಾರೆ.
  15. ಕೋಸಲ-ಕೊಂಕಣ-ದ್ರಾವಿಡ ದೇಶಭಾಗಗಳು ಕರ್ನಾಟಕಕ್ಕೆ ಕೊಡುಗೆ ಅಗುವುವು ಸಮುದ್ರ ಸಂಬಂಧವುಳ್ಳ ರಾಜರು ಕರ್ನಾಟಕ ಪ್ರಭುಗಳಿಗೆ ಅರ್ಯ ರಾಜ್ಯರ ಅಧಿಕಾರ ನೀಡುವರು. ವಿಶ್ವ ಪ್ರಭುವಿಗೆ ಕರ್ನಾಟಕದ ಪ್ರಭುಗಳು ಮೆಚ್ಚುಗೆ ಅಗುವರು. ಕಾಶಿ ರಾಜ್ಯದ ವರಮಾನವೆಲ್ಲ ಕಾಶೀಶ್ವರನ ಸೇವೆಗೆ ಮೀಸಲಾಗುವುದು ದಾನ ದರ್ಮಗಳಿಗೆ ಸರ್ಕಾರ ಅಪಾರ ಹಣ ಕರ್ಚು ಮಾಡುವುದು.
  16. ದನ ಕರುಗಳ ಮೇವಿಗೆಂದೆ ವ್ಯವಸಾಯ ಭೂಮಿಯ ನಾಲ್ಕನೆಯ ಒಂದು ಭಾಗವನ್ನು ಮಾಸಲಿಡಲಾಗುವುದು. ಅದರಲ್ಲಿ ಬೆಳೆ ಇಡುವುದಿಲ್ಲ. ಸಾಕಷ್ಟು ಅನ್ನ ಚತ್ರಗಳು ಏರ್ಪಡುವುವು. ಸಿಪಾಯಿಗಳಿಗೂ ಕಲಾವಿದರಿಗೂ ಮತ್ತು ಕವಿಗಳಿಗೂ ಪ್ರಭುತ್ವದಿಂದ ಸನ್ಮಾನ – ಸಂಭಾವನೆಗಳು ಕೊಡಲ್ಪಡುವುವು. ಭೂತಚಿಕಿತ್ಸೆ ಮತ್ತು ಮಾರಿಮದ್ದುಗಳ ರೋಗಗಳಿರುವುದಿಲ್ಲ. ಜನರು ಆರೋಗ್ಯವಂತರಾಗಿರುವರು.
  17. ಮಾರಾಟ ತೆರಿಗೆಗಳು ಬಹಳ ಕಡಿಮೆ ದರದಲ್ಲಿರುತ್ತದೆ. ಜವಳಿ, ಅಡಿಕೆ, ವೀಳೆಯದೆಲೆ – ಇತ್ಯಾದಿಗಳಿಗೆ ಬಹಳ ಕಡಿಮೆ ತೆರಿಗೆ ಇರುತ್ತದೆ. ನಗದು ರೂಪದ ತೆರಿಗೆಯನ್ನು ಅಧಿಕಾರಿಗಳೂ, ಹಾಗೂ ವಸ್ತು – ಪದಾರ್ಥ ರೂಪದ ತೆರಿಗೆಯನ್ನು ಅಧಿಕಾರಿಗಳೂ, ಹಾಗೂ ವಸ್ತು – ಪದಾರ್ಥ ರೂಪದ ತೆರಿಗೆಯನ್ನು ವ್ಯಾಪಾರಿಗಳು ವಸೂಲಿ ಮಾಡಿ ಸರ್ಕಾರಕ್ಕೆ ಜಮಾ ಕಟ್ಟುವರು.
  18. ಪ್ರಭುವಿನ ಪ್ರತಾಪವನ್ನು ಅನುಸರಿಸಿ ಭಾರಿ ಸೇನಾಬಲವಿರುತ್ತದೆ. ಅದರಲ್ಲಿ ಬಿಲ್ಲು ಬಾಣದ ಸೈನ್ಯ, ಫಿರಂಗಿ ಸೈನ್ಯಗಳಿರುವುದಲ್ಲದೆ ಭಾಂಕಾಮೃದಂಗಾದೆ ರಣವಾದ್ಯಗಳ ಬಳಕೆಯೂ ಇರುತ್ತದೆ. ನೆರೆ ಹೊರೆಯ ಸಾಮಾನ್ಯರಾದ ಅರಸರು ಈ ಪ್ರಭುವಿಗೆ ಹೆದರುವವರಾಗಿರುತ್ತಾರೆ.
  19. ಅರಸನು ಸಾಮ್ರಾಜ್ಯದಲ್ಲಿ ಸದಾ ಸಂಚಾರ ಮಾಡುತ್ತಿದ್ದು ಯೋಗಕ್ಷೇಮಗಳನ್ನು ಖುದ್ದಾಗಿ ಪರಿಶೀಲಿಸುತ್ತಿರುತ್ತಾನೆ. ಸಂಚಾರ ಕಾಲದಲ್ಲೂ ಆತನ ರಾಜಮರ್ಯಾದೆಯ ವೈಭವಗಳಲ್ಲಿ ಕೊರತೆಯಿರುವುದಿಲ್ಲ. ಆತನ ಗೂಡಾರಕ್ಕೆ ಚಿನ್ನದ ಕಲಶಗಳು, ಕೋಟೆ-ಕೊತ್ತಳ, ವಾದ್ಯ ವೈಭವ, ಪಹರೆ – ಎಲ್ಲಾ ಇರುತ್ತವೆ.
  20. ಪ್ರಭುವು ಧಾರಕನು. ವರ್ಷಕ್ಕೊಮ್ಮೆಸಾಮೂಹಿಕ ಉಪನಯನ, ಸಾಮೂಹಿಕ ವಿವಾಹ ಏರ್ಪಡಿಸುತ್ತಾನೆ. ದೀನದಲಿತರನ್ನು ಉದ್ದರಿಸುತ್ತಾನೆ. ದೇವಾಲಯಗಳ ಜೀರ್ಣೋದ್ಧಾರ ಮಾಡುತ್ತಾನೆ, ಮಸೀದಿಗಳಿಗೂ ತಸ್ತೀಕು ಕೊಡುತ್ತಾನೆ. ಈ ಹಣ ಕೋಟಿಗಟ್ಟಲೆ ಆಗಿರುತ್ತದೆ.
  21. ಸೈನ್ಯದಲ್ಲಿ ಸ್ತ್ರೀಯರು ಇರುವುದಿಲ್ಲ. ಜಾತಿ ಪಂಥಗಳ ಭೇದವನ್ನು ಬಿಟ್ಟು ಪ್ರಜೆಗಳು ಭ್ರಾತ್ರಭಾವನೆಯಿಂದ ಜೀವನ ಸಾಗಿಸುತ್ತಾರೆ. ಗೋವುಗಳು ಅಭಿವ್ರದ್ಧಿಯಾಗುತ್ತವೆ. ಹಾಲು – ಮೊಸರಿನ ಕೊರತೆ ಇರುವುದಿಲ್ಲ. ಅಂಗಡಿಗಳಲ್ಲಿ ಕಲ್ಲು – ಮಣ್ಣುಗಳಿಲ್ಲದ ಅಕ್ಕಿ ಬೇಳೆಗಳನ್ನೇ ಮಾರಬೇಕಾಗುತ್ತದೆ.
  22. ಪ್ರಭುವಾದ ಈ ಮಹಾಪುರುಷನು ಯೋಗಿಯಾಗಿರುತ್ತಾನೆ. ಈತನು ಆತ್ಮಯೋಗಾನಂದ ಮಗ್ನನಾದ ಬ್ರಹ್ಮಜಾನೆಯಾಗಿರುತ್ತಾನೆ.
  23. ದಿನದ ಎಂಟು ಜಾವಗಳಲ್ಲೂ ಅರಸನಿಗೆ ದಿನಚರಿ ನಿರ್ಧಾರವಾಗಿರುತ್ತದೆ. ರಾಜ್ಯಾಡಳಿತ, ಆತ್ಮಪೂಜೆ, ಯೋಗ ಸಾಧನೆ, ವಿಶ್ರಾಂತೆ, ದರ್ಬಾರು, ಕವಿಪಾಠಕರ ಸನ್ಮಾನ, ಮಂತ್ರಿವರದಿ, ಗೃಹಸ್ಥಧರ್ಮದಂತೆ ಅಂತಃಪರುವಿಚಾರಣೆ – ಇವು ದಿನಚರಿಯಾಗಿರುತ್ತವೆ.
  24. ಅರಸನು ಅಂದ – ಚೆಂದಗಳುಳ್ಳ ತೇಜಸ್ವಿಯಾಗಿರುತ್ತಾನೆ. ಅಜಾನು ಬಾಹುವಾಗಿದ್ದು, ಹುಟ್ಟಿದಾಗಲೆ ಹಣೆಯಲ್ಲಿ ವೈಷ್ಣವ ಚಿಹ್ನೆಯ ರೇಖೆಗಳುಳ್ಳವನಾಗಿರುತ್ತಾನೆ. ಈತನಿಗೆ ಪರಕಾಯ ಪ್ರವೇಶವಿದ್ಯೆ ತಿಳಿದಿರುತ್ತದೆ.
  25. ಮೂವತ್ತಾರು ಸಂವತ್ಸರಗಳ ಈತನ ಆಳ್ವಿಕೆಯಲ್ಲಿ ವಿಶ್ವಸಾಮ್ರಾಜ್ಯದಲ್ಲಿ ಶಾಂತಿ ಧರ್ಮಗಳು ನೆಲೆಸುತ್ತದೆ. ಅರಸನಿಗೆ ಸತಿಸುತರ ಸೌಖ್ಯ ಮತ್ತು ಅಧಿಕಾರ ವೈಭವಗಳ ಬಗ್ಗೆ ವೈರಾಗ್ಯವುಂಟಾಗುತ್ತದೆ. ಯೋಗವಿಧಾನದಿಂದ ಆತನು ದೇಹತ್ಯಾಗ ಮಾಡುತ್ತಾನೆ. ಇಚ್ಚಾಮರಣವನ್ನು ಕೈಕೊಂಡ ಈತನ ಯೋಗಿಜೀವಕ್ಕಾಗಿ ಗರುಡಪಕ್ಷಿ ಆಗಮಿಸುತ್ತದೆ. ಪರಕಾಯ ಪ್ರವೇಶ ವಿದ್ಯೆಯಿಂದ ಆತನು ಗರುಡ ಪಕ್ಷಿಯೊಳಕ್ಕೆ ಪ್ರವೇಶಿಸಿ ವ್ಯೆಕುಂಠಕ್ಕೆ ಹಾರಿಹೋಗುತ್ತಾನೆ.
  26. ಶ್ರೀ ಯೋಗಿನಾರೇಯಣ ಯತೀಂದ್ರ ತಾತಯ್ಯವನರು ಯೋಗಸಿದ್ಧರಿಗೂ, ವರಕವಿಗಳಿಗೂ, ಅಧ್ಯಾತ್ಮ ಚಿಂತನ ಮಾಡುವವರಿಗೂ ವಂದಿಸುತ್ತ ಗ್ರಂಥ ಸಮಾಪ್ತಿಯ ಮಂಗಳ ವಾಕ್ಯವನ್ನು ನುಡಿದಿದ್ದಾರೆ. ಹಾಗೂ ಶ್ರೀ ಭೀಮಲಿಂಗೇಶ್ವರ ಸ್ವಾಮಿಯ ಅಂಕಿತದೊಡನೆ ಕಾಲಜಾನ ಗ್ರಂಥವನ್ನು ಲೋಕಕ್ಕೇ ನೀಡಿದ್ದಾರೆ.

ಆಕರ ಗ್ರಂಥ: ಕಾಲಜ್ಞಾನ-ಭವಿಷ್ಯವಾಣಿ - "ಕೈಪು" ಲಕ್ಷ್ಮಿನರಸಿಂಹ ಶಾಸ್ತ್ರಿ (ಶ್ರೀ ಯೋಗಿನಾರೇಯಣ ಯತೀಂದ್ರ ಆಶ್ರಮ ಟ್ರಸ್ಟ್ , ಕೈವಾರ-ಪ್ರಕಟಣೆ)