ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು

ವಿಕಿಪೀಡಿಯ ಇಂದ
Jump to navigation Jump to search

ಶ್ರೀ ಖಾಸ್ಗತೇಶ್ವರ ಮಹಾಸ್ವಾಮಿಜಿಗಳು ವಿಜಯಪುರ ಜಿಲ್ಲೆಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆಯ ಭಾಗದ ಭಕ್ತರ ಪಾಲಿಗೆ ನಡೆದಾಡುವ ದೇವರು. ಗುರುವಿಲ್ಲದೆ ಅರಿವಿನ ಆಗರವಾದ ಅಪರೂಪದ ಶಿವಯೋಗಿ ಶ್ರೀ ಖಾಸ್ಗತೇಶ್ವರ ಸ್ವಾಮಿಗಳು.

ಚರಿತ್ರೆ[ಬದಲಾಯಿಸಿ]

ವಿಜಯಪುರ ಜಿಲ್ಲೆಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಶಿವಯೋಗಿಗಳು ಈ ಭಾಗದ ಭಕ್ತರ ಪಾಲಿಗೆ ನಡೆದಾಡುವ ದೇವರು. ಖಾಸ್ಗತ ಎಂಬ ಪದದ ಅರ್ಥವೇ ಗುರುವಿಲ್ಲದೆ ತನ್ನನ್ನು ತಾನು ಅರಿತವನು, ಆತ್ಮಸಾಕ್ಷಾತ್ಕಾರ ಮಾಡಿಕೊಂಡವನು ಎಂದು. ಸ್ವತಃ (ಖಾಸ), ಸದ್ಗತಿ (ಗತಿ) ಪಡೆದವನು ಎಂದರ್ಥ. ಐದು ಶತಮಾನಗಳ ಇತಿಹಾಸ ಹೊಂದಿರುವ ತಾಳಿಕೋಟೆ ವಿರಕ್ತಮಠವು ಇಲ್ಲಿಯವರೆಗೆ 14 ಪೀಠಾಧಿಪತಿಗಳನ್ನು ಕಂಡಿದೆ. ಇಂತಹ ಸುದೀರ್ಘ ಪರಂಪರೆಯಲ್ಲಿ 13ನೆಯ ಪೀಠಾಧಿಪತಿ ಶ್ರೀ ಖಾಸ್ಗತೇಶ್ವರ ಸ್ವಾಮಿಗಳು.

ಜನನ ಮತ್ತು ಬಾಲ್ಯ[ಬದಲಾಯಿಸಿ]

ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ತಾಲ್ಲೂಕಿನ ಶಿರೂರ ಗ್ರಾಮದ ಸಂಗಯ್ಯ ಮತ್ತು ನೀಲಮ್ಮ ದಂಪತಿಯ ಪುಣ್ಯಸಂಜಾತರಾಗಿ 1863ರಲ್ಲಿ ಜನಿಸಿದ ಖಾಸ್ಗತೇಶ್ವರ ಸ್ವಾಮಿಗಳಿಗೆ ಕೇವಲ 13ನೇ ವಯಸ್ಸಿನಲ್ಲಿಯೇ ಪಟ್ಟಾಧಿಕಾರವಾಯಿತು. ನಂತರ ಶ್ರೀಮಠದ ಭಿಕ್ಷಪ್ಪಯ್ಯನ ಗದ್ದುಗೆಯಲ್ಲಿ (ತಪಸ್ಸಿನ ಗದ್ದುಗೆ) ಆರು ತಿಂಗಳು ಅನುಷ್ಠಾನವನ್ನುಗೈದು ಆಧ್ಯಾತ್ಮಿಕಶಕ್ತಿ ಸಂಪಾದಿಸಿದರು. ಖಾಸ್ಗತೇಶ್ವರರ ಮೊದಲ ಹೆಸರು ವಿರಕ್ತಪ್ಪ.

ಲೋಕಸಂಚಾರ[ಬದಲಾಯಿಸಿ]

ಲೋಕಸಂಚಾರ ಮಾಡುತ್ತ ಹುಬ್ಬಳ್ಳಿಗೆ ಬಂದಾಗ ಆರೂಢ ಪರಂಪರೆಯ ಗುರು ಶ್ರೀ ಸಿದ್ಧಾರೂಢರ ದರ್ಶನವಾಯಿತು. ಶಿವಯೋಗಿಗಳನ್ನು ಕಂಡ ಸಿದ್ಧಾರೂಢರು; ‘ಕಾಮ, ಕ್ರೋಧಾದಿ ಅರಿಷಡ್ವರ್ಗಗಳನ್ನು ಗೆದ್ದಿರುವ ನೀನು ಸ್ವಯಂ ಸದ್ಗತಿ ಹೊಂದುವೆ’ ಎಂದು ಹೇಳಿ ಖಾಸ್ಗತ ಎಂಬ ಬಿರುದನ್ನು ನೀಡಿದರು. ಆ ನಂತರ ಶ್ರೀಗಳು ಖಾಸ್ಗತೇಶ್ವರ ಶಿವಯೋಗಿ ಎಂದೇ ಪ್ರಸಿದ್ಧರಾದರು.

ಅಧ್ಯಾತ್ಮ[ಬದಲಾಯಿಸಿ]

ಬಾಲ್ಯದಿಂದಲೂ ಅಧ್ಯಾತ್ಮದ ಒಲವು ಹೊಂದಿದ್ದ ಶ್ರೀಗಳು ಧಾರ್ವಿುಕ ಸಾಧನೆಯ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಆಸಕ್ತಿ ಹೊಂದಿದ್ದರು. ಸ್ವತಃ ಮುಕ್ತಿ ಫೌಜ್ ಎಂಬ ಸಾಮಾಜಿಕ ನಾಟಕವೊಂದನ್ನು ಬರೆದು ಅಭಿನಯಿಸಿದ್ದರು. ಸಾಮಾಜಿಕ ಅರಿವು ಮೂಡಿಸುವ ಹಲವು ಕಾರ್ಯಗಳನ್ನೂ ಖಾಸ್ಗತೇಶ್ವರರು ಮಾಡಿದ್ದಾರೆ. ಕಾಲರಾ, ಪ್ಲೇಗ್​ನಂತಹ ಸಾಂಕ್ರಾಮಿಕ ರೋಗಗಳು ತಲೆದೋರಿದಾಗ ಸ್ವತಃ ಮುಂದೆ ನಿಂತು ಗ್ರಾಮಸ್ಥರಿಗೆ ಆರೈಕೆ ಮಾಡಿ, ಮೃತರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು. ಜತೆಗೆ ಮುಸ್ಲಿಂ ಬಾಂಧವರ ಮಸೀದಿಯಲ್ಲಿ ಆಚರಿಸುತ್ತಿದ್ದ ಎಲ್ಲ ಹಬ್ಬಗಳಲ್ಲೂ ಪಾಲ್ಗೊಂಡು ಪ್ರಾರ್ಥಿಸುತ್ತಿದ್ದರು. ಖಾಸ್ಗತೇಶ್ವರರನ್ನು ಸರ್ವ ಜನಾಂಗದವರೂ ಭಕ್ತಿಯಿಂದ ಆರಾಧಿಸುತ್ತಾರೆ. ಇಂದಿಗೂ ತಾಳಿಕೋಟೆಯಲ್ಲಿ ಖಾಸ್ಗತೇಶ್ವರ ಮಠ ಮತ್ತು ಮಸೀದಿ ಒಂದೇ ಗೋಡೆಯ ಅಕ್ಕಪಕ್ಕದಲ್ಲಿದೆ. ಇಲ್ಲಿ ಯಾವುದೇ ಧರ್ಮ ಸಂಘರ್ಷವಿಲ್ಲದೆ ಉಭಯ ಕೋಮಿನವರು ಸಮನ್ವಯದಿಂದ ಹಬ್ಬ, ಜಾತ್ರೆಗಳನ್ನು ಆಚರಿಸುತ್ತಾರೆ.

ಲಿಂಗೈಕ್ಯ[ಬದಲಾಯಿಸಿ]

ಭೌತಿಕವಾಗಿ ಕೇವಲ 33 ವರ್ಷ ಜೀವಿಸಿದ್ದ ಖಾಸ್ಗತೇಶ್ವರರು 1896ರಲ್ಲಿ ಲಿಂಗೈಕ್ಯರಾದರು. ಅವರ ನಂತರ 14ನೇ ಪೀಠಾಧಿಪತಿಗಳಾದ ವಿರಕ್ತ ಮಹಾಸ್ವಾಮಿಗಳು ಈ ಪರಂಪರೆಯನ್ನು ಮುಂದುವರಿಸಿದ್ದು, ಸದ್ಯ ಪೀಠಕ್ಕೆ ಶ್ರೀ ಸಿದ್ಧಲಿಂಗ ದೇವರನ್ನು ಉತ್ತರಾಧಿಕಾರಿಗಳಾಗಿ ನೇಮಿಸಲಾಗಿದೆ.

ಗೋಪಾಲ ಕಾವಲಿ ಉತ್ಸವ[ಬದಲಾಯಿಸಿ]

ಶ್ರೀ ಖಾಸ್ಗತೇಶ್ವರ ಸ್ವಾಮಿಗಳು ಕಾಶಿ, ಶ್ರೀಶೈಲ, ಗೋಕರ್ಣ ಹೀಗೆ ಲೋಕಸಂಚಾರ ಗೈಯುತ್ತ ಪಂಡರಪುರಕ್ಕೆ ಬಂದರು. ಅಲ್ಲಿನ ಗೋಪಾಲ ಕಾವಲಿ ಉತ್ಸವವನ್ನು ನೋಡಿ ಶ್ರೀಮಠದ ಜಾತ್ರೆಯ ವೇಳೆ ಗೋಪಾಲ ಕಾವಲ ಉತ್ಸವ ಆರಂಭಿಸಿದರು. ಕರ್ನಾಟಕದ ಮಟ್ಟಿಗೆ ಇದು ಅಪರೂಪದ ಉತ್ಸವ. ಗೋಪಾಲ ಕಾವಲಿ ಉತ್ಸವ ಎಂದರೆ ಹಸುವಿನ ಹಾಲು-ಮೊಸರು ಬೆರೆಸಿದ ಪಂಚಾಮೃತವನ್ನು ಮಡಕೆಯಲ್ಲಿ ಕಟ್ಟಿ ತೂಗು ಹಾಕಿರುತ್ತಾರೆ. ಜಾತ್ರೆಯ ದಿನ ಬೆಳಗಿನ ಜಾವ ಈ ಮಡಕೆಯನ್ನು ಒಡೆಯಲಾಗುತ್ತದೆ. ಆಗ ಅದರಲ್ಲಿದ್ದ ಪಂಚಾಮೃತ ಇಡೀ ಮಠದ ಪ್ರಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತರ ಮೇಲೆ ಸಿಡಿಯುತ್ತದೆ. ಹೀಗೆ ಪಂಚಾಮೃತ ಮೈಮೇಲೆ ಬಿದ್ದರೆ ಅವರ ಎಲ್ಲ ಪಾಪಗಳು ನಾಶವಾಗಿ ಜೀವನದಲ್ಲಿ ಇಷ್ಟಾರ್ಥ ಈಡೇರುತ್ತವೆ ಎಂಬ ನಂಬಿಕೆ ಇದೆ. ಈ ಕ್ಷಣಕ್ಕಾಗಿ ಇಡೀ ರಾತ್ರಿ ಭಕ್ತರು ಕಾಯುತ್ತಾರೆ. ಪ್ರತಿವರ್ಷ ಆಷಾಢಮಾಸದ ದ್ವಾದಶಿಯಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಈ ಉತ್ಸವ ಜರುಗತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]