ವಿಷಯಕ್ಕೆ ಹೋಗು

ಶ್ರೀ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ

ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ಶಕ್ತಿಪೀಠ ಉಡುಪಿಯ ನವಶಕ್ತಿಪೀಠಗಳಲ್ಲೊಂದಾಗಿದೆ.[] ಉಡುಪಿ ಕುರಿತು ಕರ್ನಾಟಕದ ಕರಾವಳಿ ತೀರದಲ್ಲಿ ನೆಲೆಸಿರುವ ಒಂದು ಪ್ರಖ್ಯಾತ ಪ್ರವಾಸಿ ತಾಣ ಉಡುಪಿ. ಉಡುಪಿಯು ಕೇವಲ ಕಡಲ ತೀರಗಳಿಂದಾಗಿ ಮಾತ್ರವಲ್ಲದೆ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲೊಂದು. ಉಡುಪಿಯು ಮೂಲತಃ ಶ್ರೀಕೃಷ್ಣ ಮಠದಿಂದಾಗೆ ದೇಶದಲ್ಲೆ ಸಾಕಷ್ಟು ಪ್ರಸಿದ್ಧಿಗಳಿಸಿದ ಧಾರ್ಮಿಕ ಕೇಂದ್ರವಾಗಿದೆ.ಉಡುಪಿಯಲ್ಲಿ ಸಾಕಷ್ಟು ಇತರೆ ದೇವಾಲಯಗಳಿದ್ದು ಎಲ್ಲವೂ ವಿಶೇಷ ಹಾಗೂ ಮಹತ್ವವುಳ್ಳ ದೇವಾಲಯಗಳೆ ಆಗಿವೆ. ಅಂತೆಯೆ ಕರ್ನಾಟಕದಲ್ಲಿ ಉಡುಪಿಯನ್ನು ದೇವಾಲಯಗಳ ಪಟ್ಟಣ ಎಂದೆ ಕರೆಯುತ್ತಾರೆ. ಅಲ್ಲದೆ ಉಡುಪಿಯು ತನ್ನದೆ ಆದ ಕೆಲವು ವಿಶೇಷ ಶಕ್ತಿಪೀಠಗಳಿಂದಾಗಿ ಪ್ರವಾಸಿಗರ ಗಮನಸೆಳೆಯುತ್ತದೆ. ಅವುಗಳಲ್ಲೊಂದಾಗಿದೆ ಇಂದ್ರಾಣಿ ಶಕ್ತಿಪೀಠ.

ನಿರ್ಮಾಣ

[ಬದಲಾಯಿಸಿ]

ಶ್ರೀ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನವು ೧೧ ನೇ ಶತಮಾನದ ದೇವಾಲಯವಾಗಿದ್ದು, ಇದು ದುರ್ಗಾ ದೇವಿಗೆ ಸಮರ್ಪಿತವಾಗಿದೆ.[] ಈ ದೇವಾಲಯವನ್ನು ೧೯೯೩ ರಲ್ಲಿ ಪುನಃ ನಿರ್ಮಾಣ ಮಾಡಲಾಗಿದೆ. ನೇಪಾಳದ ಪ್ರಖ್ಯಾತ ಪಶುಪತಿನಾಥ ದೇವಾಲಯ ಮಾಜಿ ಮುಖ್ಯ ಅರ್ಚಕರಾದ ರಾವಲ್ ಪದ್ಮನಾಭ ಶಾಸ್ತ್ರಿಯವರ ಮಾರ್ಗದರ್ಶನದಲ್ಲಿ ಈ ದೇವಾಲಯದ ನವೀನ ಮಾದರಿಯನ್ನು ನಿರ್ಮಿಸಲಾಗಿದೆ.[]

ಇತಿಹಾಸ

[ಬದಲಾಯಿಸಿ]

ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಾಲಯ ಉಡುಪಿ ನಗರ ಕೇಂದ್ರದಿಂದ ಪೂರ್ವಕ್ಕೆ ಎರಡು ಕಿ.ಮೀ ಸಾಗಿದರೆ ಕುಂಜಿಬೆಟ್ಟು ಎಂಬ ಸ್ಥಳವು ದೊರೆಯುತ್ತದೆ. ವೇದಾಚಲ ಅಂದರೆ ಇಂದಿನ ಮಣಿಪಾಲದ ಪಶ್ಚಿಮಕ್ಕೆ ಈ ಪ್ರದೇಶವಿದೆ. ಸಾಕಷ್ಟು ಐತಿಹಾಸಿಕ ಶ್ರೀಮಂತಿಕೆಯನ್ನು ಪಡೆದ ಸ್ಥಳ ಇದಾಗಿದ್ದು ಇಲ್ಲಿರುವ ಶಕ್ತಿ ದೇವಿಯ ದೇವಾಲಯವನ್ನೆ ಇಂದ್ರಾಣಿ ಶಕ್ತಿಪೀಠ ಎಂದು ಕರೆಯುತ್ತಾರೆ. ಶ್ರೀ ಇಂದ್ರಾಣಿ ಪಂಚದುರ್ಗಾ ಪರಮೇಶ್ವರಿ ದೇವಾಲಯ ಎಂದು ಕರೆಯಲಾಗುವ ಈ ದೇವಾಲಯವು ಸಾಕಷ್ಟು ಪುರಾತನವಾದ ದೇವಾಲಯಲವೆ ಆಗಿದೆ. ಸುಮಾರು ಹನ್ನೊಂದನೇಯ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯ ಇದಾಗಿದೆ ಎಂದು ಹೇಳಲಾಗುತ್ತದೆ. ಆದರೆ ಪ್ರಸ್ತುತ ದೇವಾಲಯವು ನವೀಕರಣಗೊಂಡ ರಚನೆಯಾಗಿದೆ. ಇಂದ್ರಾಣಿಯನ್ನು ವೇದ-ಪುರಾಣಗಳಲ್ಲಿ ಅವಲೋಕಿಸಿದಾಗ ಇವಳೊಬ್ಬ ಸಪ್ತ ಮಾತೃಕೆಯರಲ್ಲೊಬ್ಬಳಾದ ದೇವಿಯಾಗಿ ಕಂಡುಬರುತ್ತಾಳೆ.[] ತದನಂತರ ಮುಂದಿನ ಗ್ರಂಥಾದಿಗಳಲ್ಲಿ ಇಂದ್ರಾಣಿಯನ್ನು ಶಕ್ತಿಯ ದ್ಯೋತಕವಾಗಿ ವಿವರಿಸಲಾಗಿದೆ. ಪ್ರಬುದ್ಧ ಶಕ್ತಿ ಮಾತೆಯಾಗಿಯೂ ಕೆಲವು ಕಡೆ ದುರ್ಗಾ ದೇವಿಯ ಅವತಾರವಾಗಿಯೂ ಇಂದ್ರಾಣಿಯನ್ನು ವರ್ಣಿಸಲಾಗಿದೆ.

ಪೌರಾಣಿಕ ಹಿನ್ನೆಲೆ

[ಬದಲಾಯಿಸಿ]

ಅನಾರೋಗ್ಯದಿಂದಿದ್ದ ಚ್ಯವನ ಮಹರ್ಷಿಗಳು ತಮ್ಮ ರೋಗ ನಿವಾರಣೆಗಾಗಿ ತಪೋನಿರತರಾಗಿದ್ದಾಗ ಶ್ರೀಮನ್ನಾರಾಯಣನು ಪ್ರತ್ಯಕ್ಷನಾಗಿ ಚ್ಯವನ ಮಹರ್ಷಿಗಳನ್ನು ರೋಗಮುಕ್ತರನ್ನಾಗಿ ಅನುಗ್ರಹಿಸಿದ ಈ ಪವಿತ್ರ ಕ್ಷೇತ್ರವೇ ವೇದಾದ್ರಿ (ವೇದಾಚಲ) ಎಂಬ ಐತಿಹ್ಯವಿದೆ. ತನ್ನ ಪತಿ ಇಂದ್ರನು ಊರ್ವಶಿಯಲ್ಲಿಅನುರಕ್ತನಾಗಿರುತ್ತಾನೆಂದು ಕುಪಿತಳಾದ ಶಚೀದೇವಿ ಎಲ್ಲೆಲ್ಲೋ ಸುತ್ತುತ್ತಿದ್ದಾಗ ನಾರದ ಮಹರ್ಷಿಯು ಆಕೆಯನ್ನು ಸಾಂತ್ವನಗೊಳಿಸಿ ಚ್ಯವನ ಮಹರ್ಷಿಗಳಿದ್ದ ಈ ಕ್ಷೇತ್ರಕ್ಕೆ ಕರೆತಂದರು. ಶ್ರೀದೇವಿಯ ವರದಿಂದ ಆಕೆ ಪತಿ ಇಂದ್ರನೊಡನೆ ಸಮಾಗಮವನ್ನು ಹೊಂದಿದಳೆಂದು ಸ್ಕಂದ ಪುರಾಣ ಹೇಳುತ್ತದೆ. ಬಳಿಕ ಈ ಕ್ಷೇತ್ರವು ಶಚಿಯ ಹೆಸರಿನಿಂದ ಇಂದ್ರಾಣಿಯಾಗಿ ಪ್ರಸಿದ್ಧಿ ಪಡೆಯಿತು. ಇಂದ್ರಾಣಿ ತೀರ್ಥದಲ್ಲಿ ತೀರ್ಥ ಸ್ನಾನ, ದೇವಿ ದರ್ಶನ ಪಡೆದಲ್ಲಿ ವಿವಾಹಾಸಕ್ತ ವಧು ಶೀಘ್ರವೇ ಯೋಗ್ಯ ವರನನ್ನು ಪಡೆದು ಸುಖೀ ದಾಂಪತ್ಯ ಜೀವನ ನಡೆಸುತ್ತಾಳೆ.

ವಿಶೇಷತೆ

[ಬದಲಾಯಿಸಿ]

ಪ್ರಸ್ತುತ ಇಂದ್ರಾಣಿ ದೇವಾಲಯದಲ್ಲಿ ಐದು ಶಿವಲಿಂಗಗಳಿದ್ದು ಪಂಚದುರ್ಗೆಯರನ್ನು ಅದು ಪ್ರತಿನಿಧಿಸುತ್ತದೆ. ಅಲ್ಲದೆ ಈ ಶಿವಲಿಂಗಗಳ ಹಿಂಭಾಗದಲ್ಲಿ ವನದುರ್ಗೆಯ ವಿಗ್ರಹವಿರುವುದನ್ನು ಕಾಣಬಹುದು. ಸಾಕಷ್ಟು ವಿಶೇಷತೆಯ ದೇವಾಲಯ ಇದಾಗಿದೆ. ಇಂದ್ರಾಣಿ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭ ದೇವಿಯ ಆರಾಧನೆ ವೈಭವದಿಂದ ನಡೆಯುತ್ತದೆ. ೯ ದಿನಗಳ ಪರ್ಯಂತ ಹಾಗೂ ಕುಂಭ ಶುದ್ಧ ಸಪ್ತಮಿಯಂದು ರಥೋತ್ಸವ, ವಾರ್ಷಿಕ ಮಹೋತ್ಸವ ನಡೆಯುತ್ತದೆ. ಈ ವೇಳೆ ಅನ್ನದಾನ, ಚಂಡಿಕಾ ಯಾಗವನ್ನು ಆಯೋಜಿಸಲಾಗುತ್ತದೆ. ಹೂವಿನ ಪೂಜೆ, ದುರ್ಗಾ ನಮಸ್ಕಾರ, ಕುಂಕುಮಾರ್ಚನೆ, ಮಂಗಳಾರತಿ ವಿಶೇಷವಾಗಿ ನಡೆಯುವ ಈ ದೇಗುಲಕ್ಕೆ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ದೇವಳ ಗರ್ಭಗುಡಿಯಲ್ಲಿ ಶ್ರೀಲಕ್ಷ್ಮೇ, ನಾರಾಯಣೀ, ಮಹಾಮಾಯಿ, ಮಹಾಲಕ್ಷ್ಮೇ, ಮಹೇಶ್ವರಿ, ಮಹಾದೇವಿ ದೇವರ ವಿಗ್ರಹವಿದೆ.[] ಇಂದ್ರಾಣಿ ನದಿಯ ಉಗಮ ಸ್ಥಳದಲ್ಲಿ ಆಂಜನೇಯ ಗುಡಿ, ನಾಗಬನಗಳಿವೆ. ಕಾವೇರಿ ಸಂಕ್ರಮಣದಂದು ತಲಕಾವೇರಿಯಂತೆ ಭಕ್ತಾದಿಗಳು ಇಂದ್ರಾಣಿ ದೇವಾಲಯಕ್ಕೆ ಭೇಟಿ ನೀಡಿ ತೀರ್ಥ ಸ್ನಾನ ಮಾಡುವ ಆಚರಣೆ ತಲೆತಲಾಂತರಗಳಿಂದ ನಡೆದು ಬರುತ್ತಿದೆ.

ದೇಗುಲದ ಪೂಜೆ, ಪುನಸ್ಕಾರಗಳು

[ಬದಲಾಯಿಸಿ]

೧೯೯೨ ರಲ್ಲಿ ಜೀರ್ಣೋದ್ಧಾರಗೊಂಡಿರುವ ಈ ಕ್ಷೇತ್ರದಲ್ಲಿ ಬೆಳಗ್ಗೆ ೬ ಗಂಟೆಗೆ ಬಾಗಿಲು ತೆರೆಯಲಾಗುತ್ತದೆ. ಬೆಳಗ್ಗೆ ೭ ಗಂಟೆಗೆ ನೈರ್ಮಾಲ್ಯ ವಿಸರ್ಜನಾ ಪೂಜೆ, ೧೧.೩೦ ಕ್ಕೆ ಅಲಂಕಾರ ಸಹಿತ ಮಹಾಪೂಜೆ, ಸಂಜೆ ೭ ಗಂಟೆಗೆ ರಾತ್ರಿ ಪೂಜೆ. ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ದೇವರಿಗೆ ನಡೆಯುತ್ತದೆ.

ಮಂಗಳವಾರ ಪಾರ್ವತಿ ಸ್ವಯಂವರ

[ಬದಲಾಯಿಸಿ]

ಕೌಟುಂಬಿಕ ಕಲಹ, ದಾಂಪತ್ಯದಲ್ಲಿ ಮುನಿಸು ಕಾಣಿಸಿಕೊಳ್ಳುವ ದಂಪತಿಗಳು ಈ ಕ್ಷೇತ್ರಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿದರೆ ಸಮಸ್ಯೆ ಇತ್ಯರ್ಥಗೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಕಂಕಣ ಭಾಗ್ಯ ಒದಗಿ ಬಾರದೇ ಇರುವ ಹೆಣ್ಣುಮಕ್ಕಳು ದೇವಾಲಯದಲ್ಲಿ ಪಾರ್ವತಿ ಸ್ವಯಂವರ ಪೂಜೆ ಸಲ್ಲಿಸಿದರೆ ಮದುವೆ ಭಾಗ್ಯ ಕರುಣಿಸಿದೆ.[]

ತಲುಪುವ ಬಗೆ

[ಬದಲಾಯಿಸಿ]

ಉಡುಪಿಯು ಒಂದು ಪ್ರಮುಖ ಪ್ರವಾಸಿ ಕೆಂದ್ರವಾಗಿರುವುದರಿಂದ ಕರ್ನಾಟಕದ ಪ್ರಮುಖ ನಗರಗಳಿಂದ ಸುಲಭವಾಗಿ ತಲುಪಬಹುದು. ಬೆಂಗಳೂರು, ಮಂಗಳೂರು ಮುಂತಾದ ನಗರಗಳಿಂದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಉಡುಪಿಗೆ ತೆರಳಲು ದೊರೆಯುತ್ತವೆ. ಉಡುಪಿಯ ಬಸುನಿಲ್ದಾಣದಿಂದ ಈ ದೇವಿಯ ದೇವಾಲಯಕ್ಕೆ ತೆರಳಲು ರಿಕ್ಷಾಗಳು ಸುಲಭವಾಗಿ ದೊರೆಯುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. https://kannada.nativeplanet.com/travel-guide/sri-indrani-panchadurga-parameshwari-temple-udupi-001062.html?story=1
  2. https://www.holidify.com/places/udupi/sri-indrani-panchadurga-parameshwari-temple-sightseeing-123911.html
  3. http://tourmet.com/sri-indrani-panchadurga-parameshwari-temple/
  4. https://kannada.nativeplanet.com/travel-guide/sri-indrani-panchadurga-parameshwari-temple-udupi-001062.html?story=1
  5. https://vijaykarnataka.com/bodhi-vruksha/festivals/indrani-sri-panchadurga-parameshwari-goddess-worship-keshatra/articleshow/70897006.cms
  6. "ಆರ್ಕೈವ್ ನಕಲು". Archived from the original on 2023-09-03. Retrieved 2023-09-03.