ವಿಷಯಕ್ಕೆ ಹೋಗು

ಶ್ರೀಲ ಭಕ್ತಿವೇದಂತ ಸ್ವಾಮಿ ಪ್ರಭುಪಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮದ್ ಅಭಯ ಚರಣ್, 'ಭಕ್ತಿವೇದಾಂತ ಸ್ವಾಮಿ ಪ್ರಭುಪಾದ' (ಶ್ರೀಲ ಪ್ರಭುಪಾದ) ರು, ಶ್ರೀ ಚೈತನ್ಯ ಮಹಾಪ್ರಭುಗಳ ತತ್ವಗಳನ್ನು ಜಗತ್ತಿಗೆ ಪ್ರಚಾರಮಾಡಲು ತಮ್ಮ ಇಳಿಯವಯಸ್ಸಿನಲ್ಲೂ ಜಗತ್ತಿನಲ್ಲೆಲ್ಲಾ ಪ್ರಸಾರ ಮಾಡಿ ತಮ್ಮ ಜೀವನದ ಉದ್ದಿಶ್ಯವನ್ನು ಸಾಧಿಸಿದರು. ವೈದಿಕ ಸಾಹಿತ್ಯಗಳಲ್ಲಿ ಹೇಳಿರುವಂತೆ ಭಗವಾನ್ ಶ್ರೀಕೃಷ್ಣನು ಸುಮಾರು ೫೦೦ ವರ್ಷಗಳ ಹಿಂದೆಯಷ್ಟೇ ಶ್ರೀ ಚೈತನ್ಯ ಮಹಾಪ್ರಭುಗಳಾಗಿ ಪಶ್ಚಿಮ ಬಂಗಾಲದ ಮಾಯಾಪುರದಲ್ಲಿ ಅವತರಿಸಿದನು. ಇದೊಂದು ಸುವರ್ಣ ಅವತಾರ. 'ಶ್ರೀ ಚೈತನ್ಯ ಮಹಾಪ್ರಭು'ಗಳು ಭಗವಂತನ ಪವಿತ್ರ ನಾಮ ಸ್ಮರಣೆಯಾದ “ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ”, ಈ ಹರೇ ಕೃಷ್ಣ ಮಹಾಮಂತ್ರವು ಭಾರತದ ಸಮುದ್ರ ತಟವನ್ನು ದಾಟಿ ಪ್ರಪಂಚದಾದ್ಯಂತ ಪ್ರತಿಯೊಂದು ನಗರ ಮತ್ತು ಗ್ರಾಮಗಳಲ್ಲಿ ಹರಡುತ್ತದೆಯೆಂಬ ಭವಿಷ್ಯವಾಣಿಯನ್ನು ನುಡಿದಿದ್ದರು. ಅವರ ಭವಿಷ್ಯ ವಾಣಿಯು ದೈವಿಕ ಅನುಗ್ರಹದ ಶ್ರೀ ಶ್ರೀಮದ್ ಅಭಯ ಚರಣಾರವಿಂದ, 'ಭಕ್ತಿವೇದಾಂತ ಸ್ವಾಮಿ ಪ್ರಭುಪಾದ' (ಶ್ರೀಲ ಪ್ರಭುಪಾದ) ರಿಂದ ಸತ್ಯವಾಯಿತು.[]

ಜನನ, ಬಾಲ್ಯ ಹಾಗೂ ವೇದಾಂತ

[ಬದಲಾಯಿಸಿ]

ಶ್ರೀಲ ಪ್ರಭುಪಾದ ರೆಂದು [] ವಿಶ್ವಪ್ರಸಿದ್ಧರಾದ ಯತಿಯಾಗಿ ಇಸ್ಕಾನ್ ಭಕ್ತಿಪಂಥ ಸ್ಥಾಪಕರ ಬಾಲ್ಯದ ಹೆಸರು, 'ಅಭಯ್ ಡೆ' ಎಂದು. ಅವರು, ಸೆಪ್ಟೆಂಬರ್ ೧, ೧೮೯೬ (ಶ್ರೀಕೃಷ್ಣ ಜನ್ಮಾಷ್ಟಮಿಯ ಮಾರನೆಯದಿನ) ರಲ್ಲಿ ಕಲ್ಕತ್ತಾದ ಟಾಲಿಗುಂಜ್ ಉಪನಗರದಲ್ಲಿ ಜನಿಸಿದರು. ತಂದೆಯವರ ಹೆಸರು, ಗೌರ ಮೋಹನ ಡೆ, ತಾಯಿ, ರಜನಿ. ಈ ತಂದೆತಾಯಿಯರ ಪ್ರೀತಿಯ ಮಗ,ಅಭಯ್. ಜ್ಯೋತಿಷಿಗಳು ಮಗುವಿನ ಜಾತಕವನ್ನು ನೋಡಿ,“ಈ ಮಗು ತನ್ನ ೭೦ ನೇ ವಯಸ್ಸಿನಲ್ಲಿ ಭಾರತದ ಸಮುದ್ರವನ್ನು ದಾಟಿ ಇಡೀ ಪ್ರಪಂಚಾದ್ಯಂದ ಕೃಷ್ಣಭಕ್ತಿಯ ಪ್ರಚಾರ ಮಾಡಿ ಜಗತ್ತಿನಲ್ಲಿ ೧೦೮ ಶ್ರೀಕೃಷ್ಣದೇವಸ್ಥಾನಗಳನ್ನು ಸ್ಥಾಪಿಸುತ್ತಾನೆ” ಎಂದು ಎಂದು ಭವಿಷ್ಯ ನುಡಿದರು. 'ಶ್ರೀಮಾನ್ ಗೌರ ಮೋಹನ'ರು ಭಗವಾನ್ ಶ್ರೀಕೃಷ್ಣನ ಪರಮ ಭಕ್ತರಾಗಿದ್ದರು. ದಿನನಿತ್ಯವೂ ಕೃಷ್ಣಾರ್ಚನೆ, ನ್ಯವೇದ್ಯೆ, ಕೀರ್ತನೆ ಇತ್ಯಾದಿ ಸೇವೆಗಳನ್ನು ತಪ್ಪದೇ ಸಲ್ಲಿಸುತ್ತಿದ್ದರು. ತಂದೆ, ಶ್ರೀಕೃಷ್ಣನ ಭಕ್ತಿಸೇವೆಯಲ್ಲಿ ತೊಡಗಿರುವುದನ್ನು ಗಮನಿಸಿದ ಪುಟ್ಟ ಬಾಲಕ ಅಭಯ್ ಸಹಿತ ಕಂಡ ತಾನೂ ಭಗವಂತನನ್ನು ಅರಿಯುವ ಮತ್ತು ಸೇವೆ ಮಾಡುವ ಹಂಬಲವಾಯಿತು. ಅಭಯನ ಕೋರಿಕೆಯ ಮೇರೆಗೆ ತನ್ನ ಮಗನನ್ನು ಒಬ್ಬ ಉತ್ತಮ ವೈಶ್ಣವನನ್ನಾಗಿ ಮಾಡಬೇಕೆನ್ನುವ ಮಹಾದಾಶೆಯನ್ನು ಹೊಂದಿದ ಗೌರ ಮೋಹನರು ಅಭಯನಿಗೆ ರಾಧಾಕೃಷ್ಣರ ಚಿಕ್ಕಮೂರ್ತಿಗಳನ್ನು ತಂದು ಕೊಟ್ಟರು. ಅಂದಿನಿಂದ ಅಭಯನು ತನ್ನ ತಂದೆಯನ್ನು ಅನುಕರಿಸುತ್ತಾ ಪ್ರತಿ ದಿನವೂ 'ರಾಧಾಕೃಷ್ಣ'ರಿಗೆ ಪೂಜೆ ಮಾಡತೊಡಗಿದನು. ಅವನು ತನ್ನ ಪ್ರೀತಿಯ 'ರಾಧಾಕೃಷ್ಣ'ರಿಗೆ ಅರ್ಪಿಸಿದ ನ್ಯವೇದ್ಯವನ್ನು ಮಾತ್ರ ಸ್ವೀಕರಿಸುತ್ತಿದ್ದನು.

ಶ್ರೀ ಜಗನ್ನಾಥ ರಥಯಾತ್ರೆ

[ಬದಲಾಯಿಸಿ]

ಓರಿಸ್ಸಾದ ಶ್ರೀ ಜಗನ್ನಾಥ ಪುರಿಯಲ್ಲಿ ಸಾವಿರಾರು ವರ್ಷಗಳಿಂದ ಆಚರಿಸುವ 'ಶ್ರೀ ಜಗನ್ನಾಥ ರಥಯಾತ್ರೆ' ಬಾಲಕನಾದ ಅಭಯ್ ನ ಮೇಲೆ ಬಹಳ ಪರಿಣಾಮ ಮಾಡಿತು. ಅಭಯನಿಗೆ ತಾನೂ ಕೂಡ ತನ್ನದೇ ಆದ ಶ್ರೀ ಜಗನ್ನಾಥ ರಥಯಾತ್ರೆಯನ್ನು ಆಚರಿಸಬೇಕೆಂಬ ಮನಸ್ಸಾಯಿತು. ಇದನ್ನು ತಂದೆಯವರಿಗೆ ತಿಳಿಸಿದಾಗ ಅವರು, ಸಂತೋಷದಿಂದ ಅಭಯನಿಗೆ ಎಲ್ಲ ವಿಧದ ಸಹಾಯ ಮಾಡಿದರು. ತನ್ನ ಪುಟ್ಟ ಮಿತ್ರರೊಂದಿಗೆ ಬಾಲಕ ಅಭಯ ನಿರಂತರವಾಗಿ ೭ ದಿನಗಳವರೆಗೆ ಕಲ್ಕತ್ತಾದ ತನ್ನ ಮನೆಯ ಬೀದಿಯಲ್ಲಿ ವಿಜ್ರಂಭಣೆಯಿಂದ ಶ್ರೀ ಜಗನ್ನಾಥ ರಥಯಾತ್ರೆಯನ್ನು ಆಚರಿಸಿದನು.ಗೌರ ಮೋಹನರು ತಮ್ಮ ಮನೆಗೆ ಸಾಧು ಸಂತರನ್ನು ಕರೆತಂದು,ಅವರನ್ನು ಸತ್ಕರಿಸಿ ತಮ್ಮ ಮಗ ಅಭಯ ಶ್ರೀಮತಿ ರಾಧಾರಾಣಿಯ ಉತ್ತಮ ಸೇವಕನಾಗುವಂತೆ ಆಶೀರ್ವದಿಸಲು ಬೇಡಿಕೊಳ್ಳುತ್ತಿದ್ದರು.ತಂದೆತಾಯಿಯರ ಅಕ್ಕರೆಯ ಮಗನಾದ ಶ್ರೀಲ ಪ್ರಭುಪಾದರು ಕೃಷ್ಣಪ್ರಜ್ಹೆಯ ಪರಿಸರದಲ್ಲಿ ಬೆಳೆದ ಬಗೆ ಅನನ್ಯ. ನಂತರ 'ಶ್ರೀಲ ಪ್ರಭುಪಾದ'ರು ಉನ್ನತ ವ್ಯಾಸಂಗಕ್ಕೆ 'ಕಲ್ಕತ್ತಾದ ಪ್ರತಿಷ್ಠಿತ ಕಾಲೇಜ'ನ್ನು ಸೇರಿದರು.

ಭಕ್ತಿ ಸಿದ್ಧಾಂತ ಸರಸ್ವತಿ ಠಾಕೂರರ ಭೇಟಿ

[ಬದಲಾಯಿಸಿ]

೧೯೨೨ ರಲ್ಲಿ ಒಬ್ಬ ಗೆಳೆಯನ ಸಲಹೆಯಂತೆ, ಆಗಿನ ಸಮಯದಲ್ಲಿ 'ಮಹಾನ್ ವೈಷ್ಣವ ಹಾಗೂ ವಿದ್ವಾಂಸರಲ್ಲಿ ಒಬ್ಬರಾದ ಗೌಡೀಯ ಮಠದ ಸಂಸ್ಥಾಪನಾಚಾರ್ಯ ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರ'ರನ್ನು ಭೇಟಿಮಾಡಿದರು. ತಮ್ಮ ಮೊದಲ ಭೇಟಿಯಲ್ಲೇ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರರು ಶ್ರೀಲ ಪ್ರಭುಪಾದರಿಗೆ ಭಗವದ್ಗೀತೆ ಮತ್ತು ಶ್ರೀಮದ್ ಭಾಗವತದ ದಿವ್ಯ ಸಂದೇಶವನ್ನು ಆಂಗ್ಲಭಾಷೆಯಲ್ಲಿ ಪ್ರಚಾರ ಮಾಡುವಂತೆ ಆದೇಶಿಸಿದರು. ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರರ ತೇಜಸ್ಸು ಮತ್ತು ಅಪಾರ ಪಾಂಡಿತ್ಯದಿಂದ ಪ್ರಭಾವಿತರಾದ ಶ್ರೀಲ ಪ್ರಭುಪಾದರು ಅವರನ್ನು ತಮ್ಮ ಆಧ್ಯಾತ್ಮಿಕ ಗುರುಗಳನ್ನಾಗಿ ಸ್ವೀಕರಿಸಿ ಅವರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡಲು ನಿರ್ಧರಿಸಿದರು. ೧೧ ವರ್ಷಗಳ ಬಳಿಕ ನವಂಬರ್ ೨೧, ೧೯೩೨ ರಲ್ಲಿ ಶ್ರೀಲ ಪ್ರಭುಪಾದರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರರಿಂದ ದೀಕ್ಷೆ ಪಡೆದು ಅವರ ಶಿಶ್ಯರಾದರು. ಶ್ರೀಲ ಪ್ರಭುಪಾದರ ದಿಕ್ಷೆ ಪಡೆದ ಬಳಿಕ ಕರೆಯಲ್ಪಟ್ಟ ಹೆಸರು,ಅಭಯ ಚರಣ ದಾಸ.

ಗುರುಗಳ ದೇಹತ್ಯಾಗದ ಬಳಿಕ

[ಬದಲಾಯಿಸಿ]

ಶ್ರೀಲ ಪ್ರಭುಪಾದರು ತಮಗೆ ಸಾಧ್ಯವಾದ ಮಟ್ಟಿಗೆ ಗೌಡೀಯ ಮಠದ ಬೆಳವಣಿಗೆಗೆ ಸಹಾಯ ಮಾಡುತ್ತಿದ್ದರು. ಜನವರಿ ೧ ,೧೯೩೭ ರಲ್ಲಿ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕೂರರು ದೇಹತ್ಯಾಗ ಮಾಡಿದರು. ಸಹಜವಾಗಿಯೇ ಅವರ ನಂತರ ಯಾರು ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರವಿರಲಿಲ್ಲ. ಆದರೆ ಶ್ರೀಲ ಪ್ರಭುಪಾದರು ವಿಚಲಿತವಾಗದೇ ತಮ್ಮ ಗುರುಗಳ ಆದೇಶವನ್ನು ನೆರವೇರಿಸುವ ಧೃಢಸಂಕಲ್ಪದಿಂದ ತಮ್ಮ ಭಕ್ತಿಸೇವೆಯನ್ನು ಮುಂದುವರಿಸಿದರು.

ಇಂಗ್ಲೀಷ್ ಭಾಷೆಯಲ್ಲಿ ಅಧ್ಯಾತ್ಮ ಜ್ಞಾನಪ್ರಸಾರ

[ಬದಲಾಯಿಸಿ]

ಸನ್, ೧೯೪೪ ರಲ್ಲಿ ಶ್ರೀಲ ಪ್ರಭುಪಾದರು “ಬ್ಯಾಕ್ ಟು ಗಾಡ್ ಹೆಡ್" (Back to Godhead) ಹೆಸರಿನ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಪತ್ರಿಕೆಯಲ್ಲಿ ಆಧ್ಯಾತ್ಮಿಕ ಜ್ಞಾನವನ್ನು ಪ್ರಚಾರ ಮಾಡಲು ಬಳಸಿದ ಭಾಷೆ ಇಂಗ್ಲಿಷ್. ಭಾರತದಲ್ಲಿ ತಮ್ಮ ಆಧ್ಯಾತ್ಮಿಕ ಸಂಸ್ಥೆಯನ್ನು ಪ್ರಾರಂಭಿಸಲು ಹಲವಾರು ಪ್ರಯತ್ನ ಮಾಡಿದರು. ೧೯೫೩ ರಲ್ಲಿ ಜಾನ್ಸಿಯಲ್ಲಿ “ಲೀಗ್ ಆಫ್ ಡಿವೋಟೀಸ್ (League of Devotees)” ಎಂಬ ಭಕ್ತಸಮೂಹವನ್ನು ಪ್ರಾರಂಭಿಸಿದರು. 'ಬ್ಯಾಕ್ ಟು ಗಾಡಹೆಡ್ ಪತ್ರಿಕೆ'ಯನ್ನು ದೇಶವಿದೇಶಗಳಿಗೆ ಹಂಚಿದರು. ಗುರುಗಳು ಆಜ್ಞಾಪಿಸಿದಂತೆ, ಪ್ರಭುಪಾದರು, ಸನ್, ೧೯೫೪ ರಲ್ಲಿ ಸಂಸಾರವನ್ನು ತ್ಯಜಿಸಿ, 'ವಾನಪ್ರಸ್ಥಾಶ್ರಮ'ವನ್ನು ಸ್ವಿಕರಿಸಿದರು. ಮುಂದೆ ಸೆಪ್ಟೆಂಬರ್ ೧, ೧೯೫೯ ರಂದು, 'ಮಥುರಾದಲ್ಲಿ ಸಂನ್ಯಾಸ ದೀಕ್ಷೆ' ಸ್ವೀಕರಿಸಿ, 'ತ್ರಿದಂಡಿ ಭಿಕ್ಷು ಅಭಯ ಚರಣಾರವಿಂದ', ಭಕ್ತಿವೇದಾಂತ ಸ್ವಾಮಿಯಾದರು.

ಭಾಗವತ ಪುಸ್ತಕಗಳ ಅನುವಾದದ ರಚನೆ

[ಬದಲಾಯಿಸಿ]

ಕೇವಲ ಪತ್ರಿಕೆಯ ಮೂಲಕ ಬ್ರಹ್ಮ-ಮಧ್ವ-ಗೌಡೀಯ ವೈಶ್ಣವ ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಿದ್ದ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಒಬ್ಬ ಸೇನಾಧಿಕಾರಿಯ ಸಲಹೆಯ ಮೇರೆಗೆ ಪುಸ್ತಕಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ಮೊತ್ತಮೊದಲ ಪುಸ್ತಕ “ಈಸಿ ಜರ್ನಿ ಟು ಅದರ್ ಪ್ಲಾನೆಟ್ಸ್” (Easy journey to other planets (ಇತರ ಲೋಕಗಳಿಗೆ ಸುಗಮ ಪ್ರಯಾಣ) ೧೯೬೦ ರಲ್ಲಿ ಪ್ರಕಟವಾಯಿತು. ನಂತರ ಶ್ರೀಲ ಪ್ರಭುಪಾದರು ತಮ್ಮ ಜೀವನದ ಅತ್ಯುತ್ತಮ ಉಡುಗೊರೆಯಾದ ಶ್ರೀಮದ್ ಭಾಗವತದ ಇಂಗ್ಲಿಷ್ ಅನುವಾದವನ್ನು ಪ್ರಾರಂಭಿಸಿದರು.ತಮ್ಮ ಜೀವಿತದ ಮುಂದಿನ ೧೭ ವರ್ಷಗಳಲ್ಲಿ ಶ್ರೀಲ ಪ್ರಭುಪಾದರು ಭಗವದ್ಗೀತೆ, ಈಶೊಪನಿಷತ್, ಚೈತನ್ಯ ಚರಿತಾಮೃತ, ಭಕ್ತಿರಸಾಮೃತ ಸಿಂಧು, ಉಪದೇಶಾಮೃತ ಸಿಂಧು ಸೇರಿದಂತೆ ಎಂಭತ್ತಕ್ಕೂ ಹಚ್ಚು ಪುಸ್ತಕಗಳನ್ನುರಚಿಸಿದರು.

ಇಸ್ಕಾನ್(ISKCON) ಸ್ಥಾಪನೆ

[ಬದಲಾಯಿಸಿ]

ಸನಾತನ ಧರ್ಮದ ದಿವ್ಯ ಸಂದೇಶವನ್ನು ವಿಶ್ವದಾದ್ಯಂತ ಪ್ರಚಾರ ಮಾಡಬೇಕೆಂಬ ಶ್ರೀಲ ಭಕ್ತಿಸಿದ್ಧಾಂತರ ಆದೇಶವನ್ನು ಈಡೇರಿಸಲು 'ಶ್ರೀಲ ಪ್ರಭುಪಾದ'ರು ೧೯೬೫ ರಲ್ಲಿ 'ಸುಮತಿ ಮೊರಾರ್ಜಿ'ಯವರ, 'ಜಲದೂತ'ವೆಂಬ ಹಡಗಿನಲ್ಲಿ ಸಮುದ್ರಮಾರ್ಗವಾಗಿ 'ಅಮೇರಿಕ'ಕ್ಕೆ ಹೋದರು. ಒಂದು ವರ್ಷದ ನಂತರ ೧೯೬೬ ರಲ್ಲಿ ನ್ಯೂಯಾರ್ಕಿನಲ್ಲಿ 'ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆ'(ಇಸ್ಕಾನ್) ಯನ್ನು ಸ್ಥಾಪಿಸಿದರು.

ವಿಶ್ವದಾದ್ಯಂತ ಪರ್ಯಟನೆ

[ಬದಲಾಯಿಸಿ]

ಪ್ರಭುಪಾದರು, [] ೧೯೬೬ ರಿಂದ, ೧೯೭೭ ರ ವರೆಗೆ ವಿಶ್ವದಾದ್ಯಂತ ಹನ್ನೆರಡು ಬಾರಿ ಸಂಚರಿಸಿ ಅವರು ಸ್ಥಾಪಿಸಿದ ದೇವಾಲಯಗಳ ಸಂಖ್ಯೆ ಒಟ್ಟು ೧೦೮. ವಿರಚಿಸಿದ ಪುಸ್ತಕಗಳು, ಒಟ್ಟು,೮೦ ಕ್ಕೂ ಮಿಗಿಲು. ತಮ್ಮ ಸಂದೆಶವನ್ನು ಪಾಲಿಸಿ ಕಾರ್ಯಗತ ಮಾಡಲು ಸಹಕರಿಸಿದ ಒಟ್ಟು ೪ ಸಾವಿರ ಶಿಷ್ಯರನ್ನು ಆಶಿರ್ವದಿಸಿ, ಅವರಿಗೆ ಆಧ್ಯಾತ್ಮಿಕ ಜೀವನದಲ್ಲಿ ಪ್ರಗತಿಪರ ಕಾರ್ಯ ಮಾಡಲು ಮಾರ್ಗದರ್ಶನ ನೀಡಿದರು.

ಪ್ರಭುಪಾದರ ಜೀವನದ ಪ್ರಮುಖ ಘಟ್ಟಗಳು

[ಬದಲಾಯಿಸಿ]
ಸೆ. ೧, ೧೮೯೬- ಕೋಲ್ಕತಾದ ಹೊರವಲಯದ ಟಾಲಿಗಂಜ್‌ನಲ್ಲಿ ಜನನ.
೧೯೧೮ -  ರಾಧಾರಾಣಿದತ್ತರ ಜೊತೆ ವಿವಾಹ
೧೯೨೨ - 	ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಅವರೊಂದಿಗೆ ಪ್ರಥಮ ಭೇಟಿ
೧೯೩೫	-	ರಾಧಾ ಕುಂಡದಲ್ಲಿ ಗುರುಗಳ ಜತೆ ಮಹತ್ವದ ಭೇಟಿ
ಡಿ. ೧೩, ೧೯೩೬	-ಚೈತನ್ಯರ ಉಪದೇಶಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿ ಪ್ರಚುರಪಡಿಸುವಂತೆ ಸೂಚಿಸಿ ಗುರು ಭಕ್ತಿ ಸಿದ್ಧಾಂತರಿಂದ ಪತ್ರ ಮತ್ತು
		ಗುರುಗಳ ಇಹಲೋಕ ತ್ಯಾಗ
೧೯೩೯	-	ಗೌಡೀಯ ಪಂಥದ ‘ದೈವ ಸೋದರ’ ರಿಂದ 	‘ಭಕ್ತಿವೇದಾಂತ’ ಬಿರುದು ಸಮರ್ಪಣೆ.
ಫೆ. ೧೯೪೪	-ಕೋಲ್ಕತದಲ್ಲಿ ‘ಬ್ಯಾಕ್ ಟು ಗಾಡ್‌ಹೆಡ್’ ಪ್ರಕಟಣೆ ಆರಂಭ
೧೯೪೭	-	ಗಾಂಜಿಗೆ ಪತ್ರ
೧೯೫೩	-	ಝಾನ್ಸಿಯಲ್ಲಿ ಪ್ರಥಮ ಶಿಷ್ಯ ಆಚಾರ್‍ಯ ಪ್ರಭಾಕರರಿಗೆ ದೀಕ್ಷೆ
೧೯೫೪	-	ಸಂಸಾರ ಬಂಧನ ತೊರೆದು ಸಂನ್ಯಾಸ ಸ್ವೀಕಾರ
೧೯೬೦	-	‘ಈಸಿ ಜರ್ನಿ ಟು ಅದರ್ ಪ್ಲಾನೆಟ್ಸ್’- ಪ್ರಥಮ ಪುಸ್ತಕ ಪ್ರಕಟಣೆ
೧೯೬೨	-	ದಿಲ್ಲಿಯಲ್ಲಿ ಶ್ರೀಮದ್ ಭಾಗವತದ ಮೊದಲ ಸಂಪುಟ ಬಿಡುಗಡೆ
ಜೂ. ೧೯೬೪	-ಲಾಲ್‌ಬಹದ್ದೂರ್ ಶಾಸ್ತ್ರಿ ಭೇಟಿ. ಶ್ರೀಮದ್ ಭಾಗವತಮ್ ಅರ್ಪಣೆ.
ಮೇ. ೧೯೬೫	-ಭಾರತ ಸರ್ಕಾರದಿಂದ ವಿದೇಶ ಪ್ರವಾಸಕ್ಕೆ ಹಸಿರು ನಿಶಾನೆ
೧೯೬೫	-	 ಅಮೆರಿಕ ಪ್ರಯಾಣಕ್ಕೆ ನೆರವು ನೀಡಲು ಸುಮತಿ ಮೊರಾರ್ಜಿ ಸಮ್ಮತಿ
ಜು.೨೮, ೧೯೬೫	-ವೀಸಾ ತಲುಪಿದ ದಿನ
ಆ. ೧೩, ೧೯೬೫	-ಕೋಲ್ಕತಾದಿಂದ ಅಮೆರಿಕದತ್ತ  ಜಲದೂತ ಹಡಗಿನಲ್ಲಿ ಪ್ರಯಾಣ
ಸೆ. ೧೯, ೧೯೬೫	-ನ್ಯೂಯಾರ್ಕ್ ಬಂದರಿಗೆ ಜಲದೂತ ಹಡಗಿನ ಪ್ರವೇಶ
ಜೂ. ೧೯೬೬	-೨೬ ಸೆಕೆಂಡ್ ಅವೆನ್ಯೂ ಲೊಯರ್ ಈಸ್ಟ್‌ಸ್ವಿಡ್‌ನಲ್ಲಿ ಅಂಗಡಿ ಮಳಿಗೆಯನ್ನು ಪಡೆದು, ವಾರಕ್ಕೆ ೩ ದಿನ ಪ್ರವಚನಗಳಾರಂಭ.
ಜು.೧೧, ೧೯೬೬	-ಇಸ್ಕಾನ್ ಸಂಸ್ಥೆಯ ಸ್ಥಾಪನೆ.
ಸೆ. ೧೦, ೧೯೬೬	-ಮೊದಲ ಜನ್ಮಾಷ್ಠಮಿ ಆಚರಣೆ ಮತ್ತು ಅಮೆರಿಕಾದ ಶಿಷ್ಯರಿಗೆ	ಮೊದಲ ದೀಕ್ಷೆ
ಅ. ೧೦, ೧೯೬೬	-ಟಾಂಪಕಿನ್ಸ್ ಪಾರ್ಕ್‌ನಲ್ಲಿ ಕೀರ್ತನೆ ಮತ್ತು ಬೃಹತ್ ಪತ್ರಿಕಾ ಪ್ರಚಾರ
ಮಾ. ೧೯೬೭	-ಮೊದಲ ಗೌರಪೂರ್ಣಿಮ ಉತ್ಸವದ ಆಚರಣೆ
ಜೂ. ೧೯೬೭	-ಆನಾರೋಗ್ಯದಿಂದ ಆಸ್ಪತ್ರೆಗೆ ದಾಖಲೆ
ಜು.೨೪, ೧೯೬೭	-ಆರೋಗ್ಯ ಸುದಾರಿಸಿಕೊಳ್ಳಲು ಭಾರತಕ್ಕೆ ವಾಪಸ್
ಜ. ೧೯೬೮	-ಪ್ರತಿಷ್ಠಿತ ಲೈಫ್ ಪತ್ರಿಕೆಯಲ್ಲಿ ಸಂದರ್ಶನ
ಜೂ-ಆ ೧೯೬೮	-ಕೆನಡಾದ ಮಾಂಟ್ರಿಯಲ್‌ನಲ್ಲಿ ದೇವಾಲಯ ಸ್ಥಾಪನೆ.ಲಂಡನ್‌ನಲ್ಲಿ ಪ್ರಚಾರಕ್ಕೆ ೬ ಶಿಷ್ಯರ ನಿಯೋಜನೆ
ಜು. ೨೬, ೧೯೬೯	-ಸ್ಯಾನ್ ಫ್ರಾನ್ಸಿಸ್ಕೋ ಇಸ್ಕಾನ್‌ನ ಮೊದಲ ರಥಯಾತ್ರೆ
ಡಿ. ೧೯೬೯	-ಕೃಷ್ಣ ಪುಸ್ತಕ ಪ್ರಕಾಶನಕ್ಕೆ ಜಾರ್ಜ್ ಹ್ಯಾರಿಸನ್‌ರವರಿಂದ ದೇಣಿಗೆ
ಡಿ. ೧೪, ೧೯೬೯	-ಲಂಡನ್ ದೇಗುಲದ ಉದ್ಘಾಟನೆ. 
ಜು.೫, ೧೯೭೦	-“ಕೃಷ್ಣ" ಪುಸ್ತಕ ಬಿಡುಗಡೆ, ಸ್ಯಾನ್‌ಫ್ರಾನ್ಸಿಸ್ಕೋ ವಾರ್ಷಿಕ ರಥಯಾತ್ರೆ
ಜು.೨೯, ೧೯೭೦	-ಭಕ್ತಿವೇದಾಂತ ಬುಕ್ ಟ್ರಸ್ಟ್ (ಬಿಬಿಟಿ) ಹಾಗೂ ಗೌರ್ನಿಂಗ್ ಬಾಡಿ ಕಮಿಷನ್ (ಜಿಬಿಸಿ)-ಆಡಳಿತ ಮಂಡಳಿಯ ಸ್ಥಾಪನೆ.
ಆ. ೨೯, ೧೯೭೦	-ಕೋಲ್ಕತದಲ್ಲಿ ಇಸ್ಕಾನ್ ಆಜೀವ ಸದಸ್ಯತ್ವ ಕಾರ್‍ಯಕ್ರಮ ಆರಂಭ
ಆ. ೧೯೭೦	-ಹವಾಯ್, ಟೋಕಿಯೋ ಭೇಟಿ
ಮೆ.೧೩, ೧೯೭೧	-ನಕ್ಸಲೀಯರಿಂದ ಜೀವ ಬೆದರಿಕೆ, ಕೋಲ್ಕತಾದಲ್ಲಿ ೪೦ ಸಾವಿರ ಭಕ್ತರ ಬೃಹತ್ ಸಮೂಹಕ್ಕೆ ಉಪನ್ಯಾಸ.
ಜೂ.೨೬, ೧೯೭೧	-ಆಮೆರಿಕಾ ಪ್ರವಾಸ ಆರಂಭ, ನೂರಾರು ಶಿಷ್ಯರಿಗೆ ದೀಕ್ಷೆ
ಜೂ. ೧೯೭೧	-ಮಾಸ್ಕೋ ಪ್ರವಾಸ, ಪ್ಯಾರಿಸ್ ಭೇಟಿ
ಆ. ೧೯೭೧	-ತೀವ್ರ ಅನಾರೋಗ್ಯ, ಲಂಡನ್ ಪ್ರವಾಸ
ಸೆ. ೧೯೭೧	-ನೈರೋಬಿ ಪ್ರವಾಸ
ಜ-ಫೆ. ೧೯೭೨	-ಜೈಪುರ, ವಿಶಾಖಪಟ್ಟಣ, ಚೆನ್ನೈ ಉಪನ್ಯಾಸ ಪ್ರಚಾರ ಕಾರ್ಯ
ಫೆ.೨೯, ೧೯೭೨	-ಮಾಯಾಪುರ ದೇವಸ್ಥಾನದ ಶಂಕುಸ್ಥಾಪನೆ.(ಗೌರಪೂರ್ಣಿಮೆ ದಿನದಂದು)
ಏ. ೧೯೭೨	-ಅಸ್ಟ್ರೇಲಿಯಾ ಖಂಡ ಪ್ರವಾಸ. ಮೆಲ್ಬರ್‍ನ್, ಸಿಡ್ನಿ, ಆಕ್ಲೆಂಡ್, ಬ್ರಿಸ್‌ಬೆನ್ ದೇವಾಲಯಗಳ ಉದ್ಘಾಟನೆ. ಮಾಸಾಂತ್ಯದಲ್ಲಿ ಟೋಕಿಯೋ ಪ್ರವಾಸ
ಮೆ. ೧೯೭೨	-ಮತ್ತೆ ಅಮೆರಿಕಾ ಪ್ರವಾಸ. ಲಾಸ್ ಏಂಜಲೀಸ್‌ನಲ್ಲಿ ೪ ಶಿಷ್ಯರಿಗೆ ಸಂನ್ಯಾಸ ದೀಕ್ಷೆ. ಮಾಸಾಂತ್ಯದಲ್ಲಿ ಮೆಕ್ಸಿಕೋ ಪ್ರವಾಸ
ಜೂ. ೧೯೭೨	-ಯೂರೋಪ್ ಪ್ರವಾಸ. ಪೂರ್ಟ್‌ಲ್ಯಾಂಡ್-ಪ್ಯಾರಿಸ್ ನಗರಗಳ ಭೇಟಿ. ಮಾಸಾಂತ್ಯದಲ್ಲಿ ಮತ್ತೆ ಅಮೆರಿಕಾ ಪ್ರವಾಸ.
ಆ. ೧೯೭೨	-ಪಶ್ಚಿಮ ವರ್ಜೀನಿಯಾದ ನವ ವೃಂದಾವನದಲ್ಲಿ 	ಜನ್ಮಾಷ್ಟಮಿ ಆಚರಣೆ
ಸೆ. ೯, ೧೯೭೨	-ಡಲ್ಲಾಸ್‌ನಲ್ಲಿ ಮೊದಲ ಗುರುಕುಲದ ಸ್ಥಾಪನೆ
ನ-ಡಿ. ೧೯೭೨	-ಮುಂಬಯಿನ ಜುಹುವಿನಲ್ಲಿ ತಾತ್ಕಾಲಿಕ ದೇವಸ್ಥಾನದ ನಿರ್ಮಾಣ
ಜು. ೭, ೧೯೭೩	-ಲಂಡನ್‌ನಲ್ಲಿ ಮೊದಲ ರಥಯಾತ್ರೆಯಲ್ಲಿ ಕೀರ್ತನೆ.ಡಾ|| ಟಾಯ್ನಬಿಯು ಸೇರಿ ಅನೇಕ ಗಣ್ಯರ ಭೇಟಿ
ಸೆ. ೧೫, ೧೯೭೩	-ಹಲವು ವರ್ಷಗಳ ಹೋರಾಟದ ನಂತರ ಮುಂಬಯಿ ಜಮೀನು ಹಸ್ತಾಂತರ ಇತ್ಯರ್ಥ.
ಏ. ೧೬, ೧೯೭೫	-ವೃಂದಾವನದಲ್ಲಿ  ಬೃಹತ್ ದೇವಸ್ಥಾನ ಉದ್ಘಾಟನೆ
ಆ. ೨೧, ೧೯೭೫	-ಚೈತನ್ಯ ಚರಿತಾಮೃತ ಸಂಪೂರ್ಣ ಆವೃತ್ತಿಗಳ ಮುದ್ರಣ
ಆ. ೨೨, ೧೯೭೫	-ಭಾರತದ ಪ್ರಧಾನಿ-ಇಂದಿರಾಗಾಂಯವರ ಭೇಟಿ (ದೆಹಲಿಯಲ್ಲಿ)
ಜು. ೧೯೭೬	-ನ್ಯೂಯಾರ್ಕ್‌ನ ಮ್ಯಾನ್ ಹಾಟನ್‌ನಲ್ಲಿ ೧೨ ಮಹಡಿಯ ಬೃಹತ್ ದೇವಾಲಯದ ಭೇಟಿ ಮತ್ತು ರಥಯಾತ್ರೆ ಉದ್ಘಾಟನೆ.
ಜ. ೧೨, ೧೯೭೭	-ಅಲಹಾಬಾದ್ ಕುಂಭಮೇಳದ ಭೇಟಿ.
ಜ. ೧೯೭೭	-ಭುವನೇಶ್ವರ ಪುರಿ ದೇವಾಲಯಗಳ ಭೇಟಿ.
ಮಾ.೧೮, ೧೯೭೭	-ಅಮೆರಿಕದಲ್ಲಿ ಇಸ್ಕಾನ್, ಬೋಧನೆಗಳ ಪ್ರಸಾರ ಬಹಿಷ್ಕರಿಸಿ ಎಂದು ಹೂಡಲಾಗಿದ್ದ ದಾವೆಯನ್ನು ನ್ಯೂಯಾರ್ಕ್‌ನ ಉಚ್ಚ ನ್ಯಾಯಾಲಯ 	ರದ್ದುಗೊಳಿಸಿ, ಹರೇಕೃಷ್ಣ ಪಂಥ ಒಂದು ಸತ್ ಧರ್ಮ,                  ಮತ್ತು ಅದು ಅತೀ ಪ್ರಾಚೀನವಾದುದು ಎಂಬ ತೀರ್ಪು ಕೇಳಿ “ನನ್ನ ಪ್ರಚಾರ ಸಫಲವಾಗಿದೆ" ಎಂದರು.
ನ. ೪, ೧೯೭೭	-ಶ್ರೀಲ ಪ್ರಭುಪಾದರು ಕೃಷ್ಣ ಕೀರ್ತನೆಯನ್ನು ಕೇಳುತ್ತ ಇಹಲೋಕ ತ್ಯಜಿಸಿದರು.

ದೈವಾಧೀನರಾದರು

[ಬದಲಾಯಿಸಿ]

'ಶ್ರೀಲ ಪ್ರಭುಪಾದ'ರು ಈ ಭೌತಿಕ ಜಗತ್ತಿನಲ್ಲಿನ ತಮ್ಮ ಪ್ರಕಟ ಲೀಲೆಗಳನ್ನು ಅಂತ್ಯಗೊಳಿಸಿ , ಸನ್, ೧೯೭೭ ರ ನವೆಂಬರ್, ೧೪, ರಂದು, 'ವೃಂದಾವನ'ದಲ್ಲಿ ದೈವಾಧೀನರಾದರು. ಮಹಾನ್ ವೈಷ್ಣವರೆಂದು ಗುರವಿಸಿ ಪೂಜಿಸಲ್ಪಡುತ್ತಿರುವ ಶ್ರೀಲ ಪ್ರಭುಪಾದರ ದಿವ್ಯ ಚರಿತ್ರೆ ಎಲ್ಲಾ ವರ್ಗದ ಶ್ರದ್ಧಾಳುಗಳಿಗೂ ಮಾರ್ಗದರ್ಶನಮಾಡುತ್ತವೆ. ಅವರ ಪುಸ್ತಕಗಳಲ್ಲಿರುವ ಅಪಾರ ಜ್ಞಾನಭಂಡಾರದ ಅಧ್ಯಯನ ಹಾಗೂ ಬೋಧನೆಗಳು ನಮ್ಮ ಜೀವನವನ್ನು ಬೆಳಗಿ ಭಗವಂತನ ಸಾನ್ನಿಧ್ಯವನ್ನು ಸೇರುವಲ್ಲಿ ಸಹಾಯಮಾಡುತ್ತವೆ.

'ಶ್ರೀಲ ಪ್ರಭುಪಾದರು, ರಚಿಸಿದ ಪುಸ್ತಕಗಳು

[ಬದಲಾಯಿಸಿ]

ಕನ್ನಡಕ್ಕೆ ಅನುವಾದವಾಗಿರುವ ಶ್ರೀ ಶ್ರೀಮದ್ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಗ್ರಂಥಗಳು

  1. ಶ್ರೀ ಮದ್ಭಾಗವತಮ್ (೧೮ ಸಂಪುಟಗಳು)
  2. ಭಗವದ್ಗೀತಾ ಯಥಾರೂಪ
  3. ಜನನ ಮರಣಗಳಾಚೆ
  4. ಕೃಷ್ಣಪ್ರಜ್ಞೆ ಅನುಪಮ ಕೊಡುಗೆ
  5. ಶ್ರೀ ಈಶೋಪನಿಷದ್
  6. ರಾಜವಿದ್ಯಾ
  7. ಪರಿಪೂರ್ಣ ಪ್ರಶ್ನೆ;ಪರಿಪೂರ್ಣ ಉತ್ತರ
  8. ಕೃಷ್ಣನನ್ನು ಅರಸುತ್ತಾ...
  9. ಕೃಷ್ಣಪ್ರಜ್ಞೆಗೆ ಆರೋಹಣ
  10. ಭಗವತ್ ಸಂದೇಶ
  11. ಉಪದೇಶಾಮೃತ
  12. ಕೃಷ್ಣಪ್ರಜ್ಞೆ : ಶ್ರೇಷ್ಠತಮ ಯೋಗ ಪದ್ಧತಿ
  13. ಇತರ ಲೋಕಗಳಿಗೆ ಸುಗಮ ಪ್ರಯಾಣ
  14. ಆತ್ಮಸಾಕ್ಷಾತ್ಕಾರ ವಿಜ್ಞಾನ
  15. ಯೋಗದ ಪರಿಪೂರ್ಣತೆ
  16. ಕೃಷ್ಣ ಆನಂದದ ಆಗರ
  17. ಪ್ರಹ್ಲಾದ ಮಹಾರಾಜನ ಪಾರಮಾರ್ಥಿಕ ಬೋಧನೆಗಳು
  18. ಶ್ರೀ ಚೈತನ್ಯ ಮಹಾಪ್ರಭುಗಳು ಯಾರು ?
  19. ಕಾವನಾರು ಕೃಷ್ಣನಲ್ಲದೆ
  20. ಸನಾತನ ಧರ್ಮ ಏಕೆ ? ಏನು?
  21. ವೇದಾಂತ ದರ್ಶನ
  22. ಆತ್ಮಾನ್ವೇಷಣೆಯ ಪಯಣ
  23. ಸಾಂಖ್ಯಯೋಗ
  24. ನೈಸರ್ಗಿಕ ನಿಯಮಗಳು
  25. ಗೀತಾ ಸಾರ
  26. ಜೀವದ ಮೂಲ, ಜೀವ
  27. ಧರ್ಮ ಏಕೆ ? ಏನು?

ಉಲ್ಲೇಖಗಳು

[ಬದಲಾಯಿಸಿ]
  1. "Founder Acharya". Archived from the original on 2018-10-24. Retrieved 2018-11-19.
  2. His Divine grace A. C. Bhakti vedanta swami prabhupada
  3. "A.C. Bhakti vedanta swami prabhupada". Archived from the original on 2018-10-02. Retrieved 2018-11-19.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  1. Library thing, A. C. Bhaktivedanta Swami Prabhupada (1896–1977)