ಶ್ಯಾಮಲಾ ಜಿ ಭಾವೆ
ಶ್ಯಾಮಲಾ ಜಿ. ಭಾವೆ | |
---|---|
ಜನನ | ಮಾರ್ಚ್ ೧೪. ೧೯೪೧ ಬೆಂಗಳೂರು |
ವೃತ್ತಿ | ಶಾಸ್ತ್ರೀಯ ಸಂಗೀತಗಾರರು ಮತ್ತು ಸಂಗೀತ ಗುರುಗಳು |
ವಿಷಯ | ಶಾಸ್ತ್ರೀಯ ಸಂಗೀತ |
ಶ್ಯಾಮಲಾ ಜಿ. ಭಾವೆ (ಶ್ಯಾಮಲಾ ಗೋವಿಂದ್ ವಿಠಲ್ ಭಾವೆ) (ಮಾರ್ಚ್ ೧೪, ೧೯೪೧)-(ಮೇ ೨೨, ೨೦೨೦, ಅವರು ಹಿಂದೂಸ್ಥಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಗಳ ಗಾಯಕರಾಗಿ ಪ್ರಸಿದ್ಧಿ ಪಡೆದಿದ್ದಾರೆ.
ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿ, ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತದಲ್ಲಿ ವಿಶೇಷ ಸಾಧನೆಗೈದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಸಂಗೀತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮೀಸಲಾಗಿರಿಸಿದ ಉಭಯ ಗಾನ ವಿದುಷಿ ಶ್ರೀಮತಿ ಶ್ಯಾಮಲಾ ಜಿ. ಭಾವೆ ಕರ್ನಾಟಕ ಮಹಿಳಾ ಸಂಗೀತಗಾರರಲ್ಲಿ ಅಗ್ರಗಣ್ಯರು.
ಸಂಗೀತದ ಮನೆತನ
[ಬದಲಾಯಿಸಿ]ಶ್ಯಾಮಲಾ ಭಾವೆ ಅವರು ೧೯೪೧ರ ಮಾರ್ಚ್ ೧೪ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರದು ಸಂಗೀತ ಹಾಗೂ ರಂಗಭೂಮಿ ಪರಂಪರೆಯ ಮನೆತನ. ಅವರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯ ಆದ್ಯ ಪ್ರವರ್ತಕರು. ತಂದೆ ಗೋವಿಂದ ವಿಠಲ ಭಾವೆ ಗಾಯಕ ಹಾಗೂ ಹದಿನಾಲ್ಕು ವಾದ್ಯ ನುಡಿಸಬಲ್ಲ ಪ್ರತಿಭಾನ್ವಿತರು. ಸಂಗೀತೋದ್ಧಾರಕ ಪಂ. ವಿಷ್ಣು ದಿಗಂಬರ ಪಲುಸ್ಕರ ಅವರ ಶಿಷ್ಯಂದಿರು. ತಾಯಿ ಶ್ರೀಮತಿ ಲಕ್ಷ್ಮೀ ಭಾವೆ ಜೇನು ಕಂಠದ ಗಾಯಕಿ. ಶ್ಯಾಮಲಾ ರವರು ವಿವಾಹವಾಗಲಿಲ್ಲ.
ಉಭಯಗಾನ ವಿದುಷಿ
[ಬದಲಾಯಿಸಿ]ಇಂತಹ ಸಂಗೀತ ವಾತಾವರಣದ ಮನೆತನದಲ್ಲಿ ಜನಿಸಿದ ಶ್ಯಾಮಲಾ ಅವರಿಗೆ ೩ನೇ ವಯಸ್ಸಿನಲ್ಲಿ ಸಂಗೀತ ಕಲಿಕೆಗೆ ನಾಂದಿ. ೬ನೇ ವಯಸ್ಸಿನಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ. ೧೨ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನೀಡಿಕೆ. ತಂದೆ-ತಾಯಿಯರಿಂದ ಹಿಂದೂಸ್ಥಾನಿ ಸಂಗೀತವನ್ನು, ಬಿ. ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಲ್ಲಿ ಕರ್ನಟಕ ಸಂಗೀತದ ತಾಲೀಮು ಪಡೆದು ಉಭಯಗಾನ ವಿದುಷಿ ಎಂಬ ಖ್ಯಾತಿಗಳಿಸಿದರು.
ಸರಸ್ವತಿ ಸಂಗೀತ ವಿದ್ಯಾಲಯ
[ಬದಲಾಯಿಸಿ]೧೯೩೦ರಲ್ಲಿ ಬೆಂಗಳೂರಿನಲ್ಲಿ ಶ್ಯಾಮಲಾ ಅವರ ತಂದೆ ಗೋವಿಂದ ವಿಠಲ ಭಾವೆಯವರು ಪ್ರಪ್ರಥಮ ಹಿಂದುಸ್ಥಾನಿ ಸಂಗೀತ ಶಾಲೆ ಸರಸ್ವತಿ ಸಂಗೀತ ವಿದ್ಯಾಲಯವನ್ನು ಬೆಂಗಳೂರಿನ ಮಲ್ಲೇಶ್ವರದಲ್ಲಿ ಸ್ಥಾಪಿಸಿದರು. [೧] ಪಂಡಿತ್ ವಿಷ್ಣು ದಿಗಂಬರ್ ಪಲೂಸ್ಕರ್ ಅವರು ದಕ್ಷಿಣ ಭಾರತದ ಹಿಂದೂಸ್ತಾನಿ ಸಂಗೀತ ಹೆಚ್ಚು ಪ್ರಚಲಿತವಿರಲಿಲ್ಲವಾಗಿ, ತಮ್ಮ ಆದೇಶಕೊಟ್ಟು,ಪೂರ್ಣರೂಪದಲ್ಲಿ ಪ್ರಾರಂಭಿಸಲು ಅಪ್ಪಣೆಕೊಟ್ಟ ಮೇಲೆ ಗೋವಿಂದ್ ಅವರು, ತಮ್ಮ ಸಂಗೀತ ಪಾಠಶಾಲೆಯನ್ನು ಮಲ್ಲೇಶ್ವರದಿಂದ ಶೇಶಾದ್ರಿಪುರಕ್ಕೆ ಸ್ಥಳಾಂತರಿಸಿದರು.
ಗಾಯನ ಸೇವೆ
[ಬದಲಾಯಿಸಿ]ಶ್ಯಾಮಲಾ ಅವರು ವಿವಿಧ ದೇಶಗಳಲ್ಲಿ ಸಂಗೀತ ಕಛೇರಿ ನೀಡಿ ಭಾರತೀಯ ಸಂಗೀತಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದಾರೆ. ಸುಗಮ ಸಂಗೀತ ಮತ್ತು ಸಿನಿಮಾ ಸಂಗೀತದ ಕ್ಷೇತ್ರದಲ್ಲೂ ಅವರು ಉತ್ತಮ ಸೇವೆಸಲ್ಲಿಸಿ ಪ್ರಸಿದ್ಧಿ ಪಡೆದಿದ್ದಾರೆ.
ಸಂಗೀತ ಸಂಯೋಜನೆ
[ಬದಲಾಯಿಸಿ]ಪಂ. ಜಸರಾಜ್ ಅವರ ಮಾರ್ಗದರ್ಶನದಲ್ಲಿ ಸಂಗೀತ ತಾಲೀಮು ಪಡೆದ ಅವರು ಅನೇಕ ಚಲನಚಿತ್ರ, ಸಾಕ್ಷಚಿತ್ರ, ಗ್ರಾಮಫೋನ್ ಹಾಗೂ ಕ್ಯಾಸೆಟ್‌ಗಳಲ್ಲಿ ಧ್ವನಿ ನೀಡಿ, ಸಂಗೀತ ನಿರ್ದೇಶನ ಮಾಡಿದ್ದಾರೆ. ಒಂಭತ್ತು ಭಾಷೆಗಳ ಸುಮಾರು ೧೫೦೦ಕ್ಕೂ ಹೆಚ್ಚಿನ ಗೀತೆಗಳಿಗೆ ರಾಗ ಸಂಯೋಜಿಸಿದ್ದಾರೆ.
ವಿವಿಧ ಜವಾಬ್ಧಾರಿ ನಿರ್ವಹಣೆ
[ಬದಲಾಯಿಸಿ]ಶ್ಯಾಮಲಾ ಭಾವೆ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ ಸಂಗೀತ ಕ್ಷೇತ್ರದ ಸೇವೆ ಮಾಡಿದ್ದಾರೆ.
ಸಂದ ಗೌರವ ಪ್ರಶಸ್ತಿಗಳು
[ಬದಲಾಯಿಸಿ]- ಉಭಯಗಾನ ವಿಶಾರದೆ
- ಉಭಯ ಗಾನ ವಿದುಷಿ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಗಾನ ಮಾಧುರಿ
- ಸುರಮಣಿ
- ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ
- ಅಮೇರಿಕಾದ ಹ್ಯೂಸ್ಟನ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೨೦೦೭)
- ಭಾರತ ಗೌರವ್
- ವರ್ಷದ ಮಹಿಳೆ (೧೯೯೭)
- ಗಾನ ಕೋಕಿಲ
- ಕೃಷ್ಣಗಾನ ಮಾಧುರಿ
ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ೧೯೯೭ರಲ್ಲಿ ಅವರ ಶಿಷ್ಯರು, ಅಭಿಮಾನಿಗಳು ಸ್ವರ ಸಾಧನಾ ಎಂಬ ಅಭಿನಂದನ ಗ್ರಂಥ ಅರ್ಪಿಸಿದ್ದಾರೆ.
ನಿಧನ
[ಬದಲಾಯಿಸಿ]ಸಂಗೀತ ವಿದುಷಿ. ಶ್ರೀಮತಿ ಶ್ಯಾಮಲ ಭಾವೆಯವರು, ೨೨, ಶುಕ್ರವಾರ, ಮೇ, ೨೦೨೦ ರಂದು ಬೆಂಗಳೂರಿನ ತಮ್ಮ ಶೇಶಾದ್ರಿಪುರಂನ ಸ್ವಗೃಹದಲ್ಲಿ ನಿಧನರಾದರು. ಇದಕ್ಕೆ ಮೊದಲು ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. [೨][೩] [೪]
ಉಲ್ಲೇಖಗಳು
[ಬದಲಾಯಿಸಿ]- ↑ https://www.deccanherald.com/metrolife/metrolife-your-bond-with-bengaluru/school-for-indian-classical-music-helmed-by-shyamala-bhave-turns-90-813110.html]
- ↑ Remembering Shyamala bhave, May 22, 2020, The Hindu
- ↑ Vijaya karnataka, Cinema suddi, ಶ್ಯಾಮಲಾ ಭಾವೆ ಅವರಿಗಿತ್ತು ಸಿನಿಮಾ ನಂಟು; 'ಪುಟ್ನಂಜ'ದ ಈ ಪ್ಯಾಥೋ ಹಾಡಿಗೆ ದನಿಯಾಗಿದ್ದರು, may 22, 2020
- ↑ ಉಭಯ ಗಾನ ವಿಶಾರದೆ, ಸಂಗೀತ ವಿದುಷಿ ಡಾ. ಶ್ಯಾಮಲಾ ಜಿ ಭಾವೆ ವಿಧಿವಶ. ಕನ್ನಡ ಪ್ರಭ, May 23, 2020, shilpa.D
ಮಾಹಿತಿ ಕೃಪೆ
[ಬದಲಾಯಿಸಿ]- ಸಂಗೀತ ನೃತ್ಯ ಅಕಾಡೆಮಿ ಪ್ರಕಟಣೆ.