ಶೋಭ ವೆಂಕಟೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಕ್ಕಳ ರಂಗ ಭೂಮಿಯಲ್ಲಿ ಅನೇಕ ವರ್ಷಗಳಿಂದ ನಿರಂತರವಾಗಿ ತೊಡಗಿಸಿಕೊಂಡಿರುವ ಶ್ರೀಮತಿ ಶೋಭ ವೆಂಕಟೇಶ್ ಅವರು ವಿಜಯನಗರ ಬಿಂಬ ಶನಿವಾರದ ರಂಗ ಶಾಲೆಯ ಅಧ್ಯಕ್ಷರು.


ಜನನ, ವಿದ್ಯಾಭಾಸ, ಕುಟುಂಬ[ಬದಲಾಯಿಸಿ]

ಶೋಭ ಅವರು ಹುಟ್ಟಿದ್ದು ೧೯೫೨, ಅಕ್ಟೋಬರ್ ೯ ರಂದು ಪ್ರಖ್ಯಾತ ರಂಗಕರ್ಮಿ ಎ.ಎಸ್.ಮೂರ್ತಿ ಮತ್ತು ಕಮಲಮೂರ್ತಿಯವರ ಮೊದಲನೇ ಮಗಳಾಗಿ. ಬೆಳೆದದ್ದು ರಂಗಭೂಮಿ ಮತ್ತು ಸಾಂಸ್ಕೃತಿಕ ಲೋಕದ ವಾತಾವರಣದಲ್ಲಿ. ತಂದೆ ಮತ್ತು ತಾಯಿ ರಂಗದ ಮೇಲೆ ನಾಟಕವಾಡುತ್ತಿದ್ದರೆ ಶಿಶುವಾಗಿ ಸೈಡ್ ವಿಂಗ್ಸ್ ನಲ್ಲಿ ಆಡುತ್ತಿದರು. ಕರ್ನಾಟಕದ ಮೊಟ್ಟ ಮೊದಲ ಕಲಾಶಾಲೆ ಕಲಾಮಂದಿರದ ಸಂಸ್ಥಾಪಕ ಅ.ನ.ಸುಬ್ಬರಾವ್‌ರವರ ಮೊಮ್ಮಗಳಾಗಿದ್ದುದ್ದರಿಂದ, ಅವರು ಆಯೋಜಿಸುತ್ತಿದ್ದ ಕಾರ್ಯಕ್ರಮಗಳನ್ನು ಹತ್ತಿರದಿಂದ ನೋಡುತ್ತಿದ್ದವರು. ಶೋಭ ಅವರು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ. ಅಭಿನಯಿಸಿದ ಮೊದಲ ನಾಟಕ ಕುರ್ತುಕೋಟಿಯವರ "ಆ ಮನಿ" ಎಂಬ ಮಕ್ಕಳ ನಾಟಕ. ನಂತರ ಎ.ಎಸ್.ಮೂರ್ತಿಯವರ ಚಿತ್ರಾ ನಾಟಕ ತಂಡದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯ. ಬಾಲ್ಯದಲ್ಲಿಯೇ ತಿ.ತಾ.ಶರ್ಮಾ, ಅ.ನ.ಕೃ, ನವರತ್ನರಾಮ್, ದಾಶರತಿ ದೀಕ್ಷಿತ್, ಪಿ.ಶ್ರಿನಿವಾಸ ರಾವ್, ಎಚ್.ಎಸ್.ದೊರೆಸ್ವಾಮಿ, ಕೆ.ಎಸ್.ನಿಸ್ಸಾರ್ ಅಹಮದ್, ಕಿ.ರಂ.ನಾಗರಾಜ್, ಪಿ.ಲಂಕೇಶ್, ಚಂದ್ರಶೇಖರ ಕಂಬಾರ್,ಸುಮತೀಂದ್ರ ನಾಡಿಗ್, ಕೆ.ಎಮ್.ಶಂಕರಪ್ಪ, ಎಚ್.ಜಿ. ಸೊಮಶೇಖರರಾವ್ ಮುಂತಾದ ಸಾಂಸ್ಕೃತಿಕ ದಿಗ್ಗಜರ ಒಡನಾಟ. ಪತಿ, ಶ್ರೀ ಎಸ್. ಆರ್ ವೆಂಕಟೇಶ್ ಅವರು ಸಹ ರಂಗಕರ್ಮಿ. ಮಕ್ಕಳಾದ ಡಾ. ಕಶ್ಯಪ್ ಮತ್ತು ಮಗಳು ಸುಷ್ಮಾ ಸಹ ಕನ್ನಡ ರಂಗಭೂಮಿಯ ಅಪರೂಪದ ಪ್ರತಿಭೆಗಳು. ಮಕ್ಕಳ ರಂಗಭೂಮಿಗೆ ಶೋಭ ಅವರ ಇಡೀ ಕುಟುಂಬವೇ ತನ್ನನ್ನು ಸಮರ್ಪಿಸಿಕೊಂಡಿದೆ.

ರಂಗಕರ್ಮಿಯಾಗಿ ಶೋಭ ವೆಂಕಟೇಶ್[ಬದಲಾಯಿಸಿ]

ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದೂ ಶೋಭ ವೆಂಕಟೇಶ್ ಅವರು ಮಕ್ಕಳ ರಂಗಭೂಮಿಗಾಗಿ ಶ್ರಮಿಸುತ್ತಿರುವುದು ಅಪಾರ. ಬೀದಿನಾಟಕ ಪ್ರಾಕಾರ ಮೊದಲು ಶುರುವಾದಾಗ ಹಲವಾರು ಬೀದಿ ನಾಟಕಗಳಲ್ಲಿ ಅಭಿನಯಿಸಿದ ಶೋಭ ಅವರು (ಕುವೆಂಪು ಅವರ ಮನೆ ಮುಂದೆ , ಅವರ ಸಮಕ್ಷಮದಲ್ಲೆ ಅವರ ಕರಿ ಸಿದ್ದ ನಾಟಕ ಪ್ರದರ್ಶನ).ಮಕ್ಕಳ ಮನೋವಿಕಾಸಕ್ಕಾಗಿ ವಿಜಯನಗರಬಿಂಬ ಸಂಸ್ಥೆ ಪ್ರಾರಂಭಿಸಲು ಕಾರಣರಾದವರು.

  • ರಂಗತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿದವರು.
  • ಮಕ್ಕಳಿಗಾಗಿ ವಿಜಯನಗರ ಬಿಂಬ ಶನಿವಾರದ ರಂಗ ಶಾಲೆಯನ್ನು ಪ್ರಾರಂಭಿಸಿದವರು.
  • ಪ್ರತಿ ವರ್ಷವೂ ಹೊಚ್ಚಹೊಸ ಮಕ್ಕಳ ರಂಗಪ್ರಯೋಗಗಳನ್ನ ರಂಗಕ್ಕೆ ತಂದು ಪ್ರಸ್ತುತ ಸಮಸ್ಯೆಗಳ ಬಗ್ಗೆ ವಿಚಾರವಂತಿಕೆಯನ್ನು ಮೂಡಿಸುತ್ತಿದ್ದಾರೆ.
  • ಮಕ್ಕಳ ಕವಿಮೇಳ, ಕಿರಿಯರ ಕಟಕಟೆ, ಸಂವಾದ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಿಗೆ ನಮ್ಮ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸುವವರು.
  • ಈಗ ಇವರ ರಂಗ ಶಾಲೆಗೆ ೧೫ ವರ್ಷ.
  • ರಂಗ ಭೂಮಿಯ ಹೆಸರಾಂತ ನಿರ್ದೇಶಕರು, ನುರಿತ ತಂತ್ರಜ್ಞರನ್ನು ಮಕ್ಕಳರಂಗ ಭೂಮಿಗೆ ಕರೆತಂದ ಹೆಗ್ಗಳಿಕೆ ಇವರದು. ಹಾಗೆಯೆ ಮಕ್ಕಳ ರಂಗ ಭೂಮಿಯಲ್ಲಿ ಹೊಸ ಹೊಸ ಪ್ರತಿಭೆಗಳಿಗೆ ಇವರ ರಂಗಶಾಲೆ ವೇದಿಕೆ ಕಲ್ಪಿಸುತ್ತದೆ.
  • ಇವರ ಶಾಲೆಯಿಂದ ೧೫ ಹೊಚ್ಚ ಹೊಸ ಮಕ್ಕಳ ನಾಟಕಗಳನ್ನು , ೭ ನೃತ್ಯ ರೂಪಕಗಳನ್ನೂ ನಿರ್ಮಿಸಲಾಗಿದೆ.
  • ಸುಮಾರು ೫೦೦೦ ಕ್ಕೂ ಹೆಚ್ಚು ಮಕ್ಕಳಿಗೆ ರಂಗ ತರಬೇತಿ ನೀಡಲು ಕಾರಣರಾಗಿದ್ದಾರೆ.
  • ಅನಾಥ ಮಕ್ಕಳ ಸಂಸ್ಥೆ ಸೇವಾ ಸದನ , ಮಲ್ಲೇಶ್ವರಂ ನಲ್ಲಿ ಕಳೆದ ೩ ವರ್ಷಗಳಿಂದ ಉಚಿತವಾಗಿ ರಂಗ ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತಾ ಬಂದಿದ್ದಾರೆ.
  • ರಂಗ ಭೂಮಿಗೆ ಸಂಬಂಧ ಪಟ್ಟ ಹಾಗೆ ಮತ್ತು ಮಕ್ಕಳಿಗೆ ಸಂಬಂಧ ಪಟ್ಟ ಹಾಗೆ ಹಲವಾರು ವಿಷಯಗಳ ಮೇಲೆ ವಿಚಾರ ಸಂಕಿರಣ ಏರ್ಪಡಿಸಿದ್ದಾರೆ.
  • ಕಾರ್ಯಕ್ರಮ ಆಯೋಜನೆಯ ಹೊಣೆ ಹೊರುವುದಲ್ಲದೆ, ಮಕ್ಕಳ ನಾಟಕಗಳಿಗೆ ವಸ್ತ್ರವಿನ್ಯಾಸವನ್ನೂ ಮಾಡುತ್ತಾ ನೇಪಥ್ಯದಲ್ಲಿ ದುಡಿಯುತ್ತಾ ಮಕ್ಕಳರಂಗ ಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಬೊಂಬೆಯಾಟ[ಬದಲಾಯಿಸಿ]

ಎ.ಎಸ್.ಮೂರ್ತಿ,ಕಮಲಾಮೂರ್ತಿ, ಡಾ. ವಿಜಯ, ಸುರೇಖ, ಗೌರಿದತ್ತು ಮತ್ತು ಇಂದಿರ ಸುಂದರ್ ಅವರೊಡನೆ ಸೇರಿ, ಎನ್.ಎಸ್.ಡಿ ಪದವಿಧರ ಶ್ರೀನಿವಾಸಮೂರ್ತಿ (ದೊಡ್ಡಪ್ಪ) ಅವರ ಮಾರ್ಗದರ್ಶನದಲ್ಲಿ - ಪಪ್ಪೆಟ್ ಲ್ಯಾಂಡ್ ಎಂಬ ಬೊಂಬೆಯಾಟದ ರೆಪರ್ಟ್ರಿ ಹುಟ್ಟಲು ಕಾರಣರಾದವರು. ಹಾಸ್ಯ ಪ್ರಧಾನ ಆಟಗಳಲ್ಲದೆ ಗಿರೀಶ್ ಕಾರ್ನಾಡರ ಮಾನಿಶಾದ, ಚಂಪಾರವರ ಟಿಂಗರ ಬುಡ್ಡಣ್ಣ, ಗಿರಡ್ಡಿ ಗೋವಿಂದರಾಜು ಅವರ ಕನಸು ಮುಂತಾದ ಗಂಭೀರ ನಾಟಕಗಳನ್ನು ಮತ್ತು ಅಸಂಗತ ನಾಟಕಗಳನ್ನು ಬೊಂಬೆಯಾಟಕ್ಕೆ ಅಳವಡಿಸಿದಾಗ ಬೊಂಬೆಯಾಡಿಸಿದವರು. ರಾಜ್ಯದಾದ್ಯಂತ ಬೊಂಬೆಯಾಟಗಳನ್ನು ನೀಡಿದವರು. ಕನ್ನಡದ ಮೊಟ್ಟ ಮೊದಲ ಬೊಂಬೆಯಾಟದ ಕಿರುತೆರೆ ಧಾರಾವಾಹಿ ಜಿಗಿ ಜಿಗಿ ಬೊಂಬೆಯಾಟ ದಲ್ಲಿ ಬೊಂಬೆಯಾಡಿಸಿದವರು.

ಸಂಘಟನೆ[ಬದಲಾಯಿಸಿ]

ಕರ್ನಾಟಕದಲಿ ಮೊಟ್ಟಮೊದಲ ಬಾರಿಗೆ ಅರಂಭವಾದ ಕನ್ನಡ ಲೇಖಕಿಯರ ಸಂಘ ಕಥಾಪಲ್ಲವ ಎಂಬ ಸಣ್ಣ ಕಥೆಗಳ ಸಂಕಲನವನ್ನು ಹೊರ ತಂದಾಗ ಆ ಸಂಘಕ್ಕೆ ನಿರ್ದೇಶಕರಾಗಿದ್ದವರು. ಆ ಸಂಘದಿಂದಲೆ ಹತ್ತು ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲು ನೆರವಾದವರು.

ದಿಲ್ಲಿಯಲ್ಲಿ ಕನ್ನಡ ಚೇತನ[ಬದಲಾಯಿಸಿ]

ನೌಕರಿಯ ಮೇಲೆ ದಿಲ್ಲಿಗೆ ಹೋದಾಗ ಅಲ್ಲಿ ಕನ್ನಡ ಚೇತನ ವೆಂಬ ಕನ್ನಡ ಸಂಘ ಕಟ್ಟಿ ಕರೋಲ್ಬಾಗ್ , ರಾಜೇಂದ್ರನಗರ್ ಬಡಾವಣೆಯ ಕನ್ನಡಿಗರನ್ನು ಸಂಘಟಿಸಿದವರು. ಈ ಕೆಲಸಕ್ಕೆ ಅವರ ಜೊತೆಗಿದ್ದವರು ಪತಿ ಎಸ್.ಆರ್.ವೆಂಕಟೇಶ್ ಮತ್ತು ಸಮಾನಮನಸ್ಕರಾದ ಉಮಾ ನಾಗರಾಜರಾವ್, ನಾಗರಾಜ್, ರಾಘವೇಂದ್ರ ಮತ್ತು ಲೋಕೇಶ್. ಕನ್ನಡ ಚೇತನ ದಿಂದ ಅಮ್ಮಾವ್ರ ಗಂಡ ಮುಂತಾದ ನಾಟಕಗಳು, ಚಿತ್ರಪ್ರದರ್ಶನಗಳು, ಕೋಲಾಟದ ಕಾರ್ಯಕ್ರಮಗಳು, ಹಬ್ಬ ಹರಿದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನೆರವಾದವರು.

ಪ್ರಶಸ್ತಿ[ಬದಲಾಯಿಸಿ]

ಮಕ್ಕಳ ರಂಗಭೂಮಿಗೆ ಇವರ ಸೇವೆಯನ್ನು ಗಮನಿಸಿ ಕರ್ನಾಟಕ ನಾಟಕ ಅಕಾಡೆಮಿಯು ೨೦೧೦ ಸಾಲಿನ ಜೀವಮಾನ ರಂಗ ಸಾಧನೆ ಪ್ರಶಸ್ತಿ ಗೌರವ ನೀಡಿ ಗೌರವಿಸಿದೆ.